ಆಲೂರು ಸಿರಿ
ಡಾ.ಅಶೋಕ್ ಆಲೂರು
ಹುಲ್ಲೂ ಹುಟ್ಟದಂಥ ತೀವ್ರ ಬರಗಾಲದಲ್ಲೂ ಹೊಟ್ಟೆ ತುಂಬಿಸಬಲ್ಲ ಧಾನ್ಯವಿದ್ದರೆ ಅದು ಸಜ್ಜೆ. ಎಲ್ಲಿ ಪರಿಸ್ಥಿತಿಗಳು ತುಂಬಾ ಶುಷ್ಕವಾಗಿರುತ್ತವೋ, ಇತರ ಯಾವ ಧಾನ್ಯಗಳೂ ಬೆಳೆಯಲಾಗದ ಸನ್ನಿವೇಶವಿರುತ್ತದೋ ಅಲ್ಲಿ ಲಕ್ಷಾಂತರ ಜನರಿಗೆ ಹಸಿದ ಹೊಟ್ಟೆ ಗಳನ್ನು ತುಂಬಿಸಲು ಒದಗುತ್ತದೆ ಸಜ್ಜೆ. ಇದನ್ನು ಮುಖ್ಯವಾಗಿ ಮಾನವನ ಆಹಾರ ಬೆಳೆಯಾಗಿ ಬಳಸದಿದ್ದರೂ ಜಾನುವಾರುಗಳ ಮೇವಿಗೆ ಇದು ಅತ್ಯಂತ ಸಮರ್ಥ ಬೆಳೆ.
ಹೆಚ್ಚುವರಿಯಾಗಿ, ಹುಲ್ಲಿಗಾಗಿ, ಸೈಲೇಜ್, ಕಟ್ಟಡ ಸಾಮಗ್ರಿಯಾಗಿ ಮತ್ತು ಇಂಧನ ಮೂಲವಾಗಿ ಬಳಸಲಾಗುತ್ತದೆ. ಹಾಗೆಂದು ಖನಿಜಾಂಶಗಳ ದೃಷ್ಟಿ ಯಿಂದ ಇದರಲ್ಲಿ ಬಡತನವೇನೂ ಇಲ್ಲ. ಅದರಲ್ಲೂ ಪ್ರಮುಖವಾಗಿ ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶವು ಅಧಿಕವಾಗಿದೆ. ಯಾವುದೇ ಟ್ಯಾನಿನ್‌ಗಳನ್ನು ಹೊಂದಿಲ್ಲದ ಧಾನ್ಯ ಇದು. ಕರ್ನಾಟಕದಲ್ಲಿ ಪ್ರಮುಖವಾಗಿ ಕಲ್ಯಾಣ ಕರ್ನಾಟಕದ ಬರಪೀಡಿತ ಜಿಲ್ಲೆಗಳೆಂದೇ ಕುಖ್ಯಾತ ಕೊಪ್ಪಳ, ರಾಯ ಚೂರು ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ಇದನ್ನು ಸಾಲು ಬೆಳೆಯಾಗಿ ಬೆಳೆಯುತ್ತಾರೆ.
ರಾಜ್ಯದಲ್ಲಿ ೨೦೧೭-೧೮ ರಲ್ಲಿ ೨.೩೧ ಲಕ್ಷ ಹೆಕ್ಟೇರ್‌ಗಳಲ್ಲಿ ಸಜ್ಜೆ ಬೆಳೆಯಲಾಗಿದ್ದು, ಉತ್ಪಾದನೆಯು ಇದೆ ಅವಧಿ ಯಲ್ಲಿ ೨.೫೫ ಲಕ್ಷ ಟನ್ (೨೦೧೬-೧೭) ನಿಂದ ೩.೬೭ ಲಕ್ಷ ಟನ್‌ಗೆ ಏರಿಕೆ ಆಗಿತ್ತು. ಎಕೆರೆಗೆ ಸರಾಸರಿ ೧೬೭೦ ಕಿ.ಗ್ರಾಂ ಉತ್ಪಾದಕತೆಯನ್ನು ಇದು ಹೊಂದಿದೆ. ಸಜ್ಜೆಯನ್ನು ಹಲವು ಮಣ್ಣನಲ್ಲಿ ಬೆಳೆಯಬಹುದು. ಜಲಾವೃತ ಪರಿಸ್ಥಿತಿ ಗಳಿಗೆ ಒಳಗಾಗುವ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುವುದಿಲ್ಲ. ನೆಲವನ್ನು ಒಂದು ಅಥವಾ ಎರಡು ಬಾರಿ ಉಳುಮೆ ಮಾಡಿ ನಂತರ ಹರಗಿ ಹದಪಡಿಸಿದ ಭೂಮಿಯಲ್ಲಿ ಸಜ್ಜೆ ಹುಲುಸಾಗುತ್ತದೆ. ತಳಿ ವೈವಿಧ್ಯದ ದೃಷ್ಟಿಯಿಂದಲೂ ಸಜ್ಜೆ ಶ್ರೀಮಂತವಾಗಿದ್ದು, ಇತ್ತೀಚೆಗೆ ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ತಳಿಗಳೂ ಪರಿಚಯಗೊಂಡಿವೆ.
ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಹೈಬ್ರಿಡ್ ಸಜ್ಜೆಯನ್ನು ಬೆಳೆಯಲಾಗುತ್ತದೆ. ಬರಪೀಡಿತ ಭೂಮಿಯೇ ಹೆಚ್ಚಿರುವುದರಿಂದ ಇಂಥ ತಳಿಗಳಿಗೆ ಆದ್ಯತೆ ನೀಡಲಾ ಗುತ್ತದೆ. ಅದರಲ್ಲೂ ಮುಖ್ಯವಾಗಿ ಇಂಡೋ–೮ ಇಂಡೋ–೯, ಎಚ್‌ಆರ್-೯೧೧, ಜೆಪಿಯು-೨೮, ಜೆಪಿಯು-೬೬ಗಳು ಬಳಕೆಯಲ್ಲಿವೆ. ಇನ್ನು ಮುಂಗಾರು ಋತುವಿನಲ್ಲಿ ಹೈಬ್ರಿಡ್ ತಳಿಗಳಾದ ಕಾವೇರಿ ಸುಪರ್ ಬಾಸ್, ಪ್ರತಾಪ, ಶೈನ್, ಎಂಪಿ-೭೭೯೨, ೮೬ಎಂ೮೬, ಪಿಎಸಿ-೯೦೯, ೮೬ಎಂ೬೪, ೮೬ಎಂ೫೩ ಗಳನ್ನು ಬಿತ್ತಲಾಗುತ್ತದೆ. ಕೆಲವೆಡೆ ಪಿಸಿ ೬೧೨, ಸಮೃದ್ಧಿ, ಐಸಿಎಂವಿ ೨೨೧, ರಾಜ್ ೧೭೧, ಐಸಿಎಂವಿ ೧೫೫ ತಳಿಗಳೂ ಇವೆ.
ಬಿತ್ತನೆ ವಿಧಾನ: ಸಾಮಾನ್ಯವಾಗಿ ಸಜ್ಜೆಯಲ್ಲಿ ಮೂರು ಬಿತ್ತನೆ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಸಮತಟ್ಟಾದ ಮೇಲೈಯಲ್ಲಿ ಅಥವಾ ರಿಡ್ಜ ಮತ್ತು -ರೋ ವಿಧಾನ ಅಥವಾ ಬ್ರಾಡ್ ಬೆಡ್ ಮತ್ತು -ರೋ ವಿಧಾನ. ಬೀಜವನ್ನು ೨.೫ – ೩.೦ ಸೆಂ.ಮೀ. ಆಳದಲ್ಲಿ ಬಿತ್ತುವುದು ಇದರ ವಿಶೇಷ.
ಮುಂಗಾರು ಮಳೆಯ ಆರಂಭದೊಂದಿಗೆ ಅಂದರೆ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಬಿತ್ತನೆ ಮಾಡುವುದು ಸೂಕ್ತ.
ಸಸಿಗಳು ಮೊಳೆತ ಬಳಿಕ ಸಸಿಗಳ ಪ್ರಮಾಣ ಕಡಿಮೆ ಎಂದೆನೆಸಿದರೆ ಮತ್ತೆ ಬೀಜಗಳನ್ನು ಹಾಕಿ ೨-೩ ವಾರಗಳಲ್ಲಿ ಖಾಲಿ ಇರುವ ಜಾಗಗಳನ್ನು ಭರ್ತಿ ಮಾಡಬೇಕು. ಇದಲ್ಲದೇ ಬೇಸಿಗೆಯಲ್ಲಿ ಜನವರಿ ಕೊನೆವಾರದಿಂದ ಫೆಬ್ರವರಿ ಮೊದಲನೇ ವಾರದವರೆಗೂ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆಗೂ ಮೊದಲು ಬೀಜೋಪಚಾರ ಬಹಳ ಮುಖ್ಯ. ಸಜ್ಜೆಯ ಬೀಜವನ್ನು ಜೈವಿಕ ಕೀಟನಾಶಗಳಿಂದ (ಟ್ರೈಕೋಡರ್ಮಾ ಹರ್ಜಿಯಾನಮ್ ೪ ಗ್ರಾಂ ಪ್ರತಿ ಕಿ.ಗ್ರಾಂ ಬೀಜ) ಅಥವಾ ಥೈರಾಮ್ ಶೇ.೭೫ ಪುಡಿಯೊಂದಿಗೆ ಬೆರೆಸಿ ಬಿತ್ತುವುದರಿಂದ ಮಣ್ಣಿನಿಂದ ಹರಡುವ ರೋಗಗಳನ್ನು ತಡೆಗಟ್ಟಬಹುದು.
ಸ್ಮಟ್‌ರೋಗದ ಬಾಧೆ ತಡೆಗಟ್ಟಲು ಬೀಜವನ್ನು ೩೦೦ ಮೆಶ್ ರಂಜಕದ ಪುಡಿ (೪ ಗ್ರಾಂ ಪ್ರತಿ ಕಿ.ಗ್ರಾಂ ಬೀಜ) ಬೀಜೋಪಚಾರ ಮಾಡಬೇಕು. ಎರ್ಗಾಟ್ ಬಾಧಿತ ಬೀಜಗಳನ್ನು ತೆಗೆದುಹಾಕಲು, ಅವುಗಳನ್ನು ಶೇ.೧೦ರಷ್ಟು ಉಪ್ಪಿನ ದ್ರಾವಣದಲ್ಲಿ ನೆನೆಸಲಾಗುತ್ತದೆ. ಅದೆ ರೀತಿ ಮೆಟಾಲಾಕ್ಸಿಲ್ (೬ಗ್ರಾಂ ಪ್ರತಿ
ಕೆಜಿಗೆ ೬ ಗ್ರಾಮ್‌ನಂತೆ)ನಿಂದ ಡೌನಿ ಮಿಲ್ಡೋವನ್ನು ನಿಯಂತ್ರಿಸಲಾಗುತ್ತದೆ. ಸಾರಜನಕ ಮತ್ತು ರಂಜಕದ ಲಭ್ಯತೆಯನ್ನು ಹೆಚ್ಚಿಸಲು ಬೀಜವನ್ನು ಅಜೋಸ್ಪೈರಿಲಮ್ (೬೦೦ ಗ್ರಾಂ.) ಮತ್ತು -ಸ್ಪೋಬ್ಯಾಕ್ಟೀರಿಯಾನೊಂದಿಗೆ ಬೇರೆಸಲಾಗುತ್ತದೆ.
ಇವೆಲ್ಲದರ ಬಳಿಕ ಪ್ರತಿ ಹೆಕ್ಟೇರ್‌ಗೆ ೩ ಕಿ.ಗ್ರಾಂ. ಬೀಜವನ್ನು ೬೦ ಸೆಂ.ಮೀ ಸಾಲುಗಳಲ್ಲಿ ಬಿತ್ತಬೇಕು. ಇದರಿಂದ ಪ್ರತಿ ಹೆಕ್ಟೇರ್‌ಗೆ ೧ ರಿಂದ ೧.೨೫ ಲಕ್ಷ ಸಸಿಗಳು ಬರುತ್ತವೆ. ಅದೆ ರೀತಿ ೪೫೦ ಮಿ.ಮೀ. ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಸಿಗಳ ಸಂಖ್ಯೆಯನ್ನು ೧.೭೫ ರಿಂದ ೨.೦ ಲಕ್ಷ ಪ್ರತಿ ಹೆಕ್ಟೇರ್‌ಗೆ
ಮೀರದಂತೆ ೪೫ ಸೆಂ.ಮೀ ಅಂತರದ ಸಾಲುಗಳಲ್ಲಿ ೧೦-೧೫ ಸೆಂ.ಮೀ ಅಂತರದಲ್ಲಿ ನೆಡುವುದು ಸೂಕ್ತ. ಸಾಮಾನ್ಯ ಪರಿಸ್ಥಿತಿಯಲ್ಲಿ ಪ್ರತಿ ಹೆಕ್ಟೇರ್‌ಗೆ ೧,೮೦,೦೦೦ ಸಸಿಗಳನ್ನು (ಎಕರೆಗೆ ೭೨ ಸಾವಿರ) ಶಿಫಾರಸು ಮಾಡಲಾಗುತ್ತದೆ.
ನೀರಾವರಿ ಅಥವಾ ಒಳ್ಳೆಯ ಮಣ್ಣಿನ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ ೨,೨೫,೦೦೦ ಸಸಿಗಳ (೧ಲಕ್ಷ ಸಸಿಗಳು ಪ್ರತಿ ಎಕರೆಗೆ) ಪ್ರಮಾಣವನ್ನು ಶಿಫಾರಸು ಮಾಡಲಾಗುತ್ತದೆ. ಅದೇ ರೀತಿ ಮರಳು ಮತ್ತು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ ೯೦,೦೦೦ ಸಸಿಗಳು (೪೦,೦೦೦ ಸಸಿಗಳು ಪ್ರತಿ
ಎಕರೆಗೆ) ಸೂಕ್ತವಾಗಿದೆ. ಇನ್ನು ಪೋಷಕಾಂಶಗಳ ನಿರ್ವಹಣೆಯ ವಿಚಾರಕ್ಕೆ ಬಂದರೆ ಶುಷ್ಕ ಪ್ರದೇಶಗಳಿಗೆ ಪ್ರತಿ ಹೆಕ್ಟೇರ್‌ಗೆ ೪೦ ಕಿ.ಗ್ರಾಂ. ಸಾರಜನಕದ
ಜತೆಗೆ ೨೦ ಕಿ.ಗ್ರಾಂ ರಂಜಕವನ್ನು ಶಿಪಾರಸು ಮಾಡಲಾಗುತ್ತದೆ. ಅರೆ ಶುಷ್ಕ ಪ್ರದೇಶಗಳಲ್ಲಾದರೆ ಪ್ರತಿ ಹೆಕ್ಟೇರ್‌ಗೆ ೬೦ ಕಿ.ಗ್ರಾಂ. ಸಾರಜನಕದ ಜತೆಗೆ ೩೦ ಕಿ.ಗ್ರಾಂ ರಂಜಕವನ್ನು ಅಂತರ ಬೆಳೆಗೆ ಬಳಸಬೇಕು. ಹಗುರವಾದ ಮಣ್ಣಿನಲ್ಲಿ (oZbqs ಟZಞo) ಅತಿಯಾದ ಮಳೆಯಿಂದಾಗಿ ಸಾರಜನಕ(ಛಿZeಜ್ಞಿಜ)ವು
ಸೋರಿಕೆಯಾಗಿರುತ್ತದೆ. ಆದ್ದರಿಂದ, ಶಿಫಾರಸು ಮಾಡಲಾದ ಸಾರಜನಕ ಪ್ರಮಾಣದ ಅರ್ಧದಷ್ಟು ಮಾತ್ರವನ್ನು ಮಣ್ಣಿನಲ್ಲಿ ಬೆರೆಸಿ ಬೀಜವನ್ನು ಬಿತ್ತಬೇಕಾಗುತ್ತದೆ. ಉಳಿದ ಅರ್ಧದಷ್ಟು ಸಾರಜನಕವನ್ನು ಬಿತ್ತನೆಯಾದ ೨೫ ದಿನಗಳ ನಂತರ ಮೇಲು ಗೊಬ್ಬರವಾಗಿ ನೀಡಲಾಗುತ್ತದೆ.
ಅದೇ ರೀತಿ ಕಪ್ಪು ಮಣ್ಣಿನ ಪ್ರದೇಶದಲ್ಲಿ ಏರುಮಡಿ ತಯಾರಿಕೆ ಸಮಯದಲ್ಲಿ ಪೂರ್ತಿ ಸಾರಜನಕವನ್ನು ನೀಡಲಾಗುತ್ತದೆ. ಸಜ್ಜೆಯ ಬೀಜಗಳು ಸೂಕ್ಷ್ಮವಾಗಿರುವುದರಿಂದ ರಸಗೂಬ್ಬರಗಳನ್ನು ಬೀಜದ ಜತೆಗೆ ಮಿಶ್ರಣ ಮಾಡದೇ ಬಿತ್ತನೆಯ ನಂತರ ಸಾಲಿನಲ್ಲಿರುವ ಬೀಜಗಳ ಮಗ್ಗುಲಲ್ಲಿ ಹಾಕಬೇಕು. ಶಿಫಾರಸು ಮಾಡಿದ ಜೈವಿಕ ಗೊಬ್ಬರಗಳಾದ ಅಜೋಸ್ಪೈರಿಲಮ್ (೫೦೦ ಗ್ರಾಂ/ಹೆ) ಮತ್ತು ರಂಜಕ ಕರಗಿಸುವ ಬ್ಯಾಕ್ಟೀರಿಯಾ (೩೭೫ ಗ್ರಾಂ./ಹೆ) ದಿಂದ
ಬೀಜೋಪಚಾರ ಮಾಡುವುದರಿಂದ ಶೇ.೨೫ರಷ್ಟು ಸಾರಜನಕ ಮತ್ತು ರಂಜಕದ ಬಳಕೆಯನ್ನು ಉಳಿತಾಯ ಮಾಡಬಹುದು.
ಸತುವಿನ ಕೊರತೆಯುಳ್ಳ ಪ್ರದೇಶಗಳಲ್ಲಿ ಪ್ರತಿ ಹೆಕ್ಟೇರ್‌ಗೆ ೧೦ ಕಿ.ಗ್ರಾಂ. ಸತುವಿನ ಸಲೇಟನ್ನು ಶಿಫಾರಸು ಮಾಡಲಾಗುತ್ತದೆ. ಸತುವಿನ ಕೊರತೆಯನ್ನು ಸರಿಪಡಿಸಲು ಶೇ.೦.೨ ಸತುವಿನ ಸಲೇಟನ್ನು ಹೂ ಬಿಡುವ ಹಂತಕ್ಕೆ ಮೂದಲು ಸಿಂಪಡಿಸಬೇಕು. ದೀರ್ಘಾವಧಿಯ ಶುಷ್ಕ ಪರಿಸ್ಥಿತಿಗಳಲ್ಲಿ ಸಾರಜನಕದ ಮೇಲು ಗೊಬ್ಬರದ ಬದಲು ಶೇ. ೦.೨ ಯೂರಿಯಾ ಸಿಂಪಡಿಸಬೇಕು. ಅದೇ ರೀತಿ ಅತಿಯಾದ ಮಳೆಗಾಲದಲ್ಲಿ ಸಸಿಗಳಿಗೆ ಶೇ. ೨೦ ಕಿ.ಗ್ರಾಂ ಸಾರಜನಕ ಪ್ರತಿ ಹೆಕ್ಟೇರ್‌ಗೆ ನೀಡುವುದರಿಂದ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಬಹುದು.
ಅತಿ ಕಡಿಮೆ ನೀರಿನಲ್ಲೂ ಸಜ್ಜೆ ಬೆಳೆಯುತ್ತದ್ದರಿಂದ ಹವಾಗುಣಕ್ಕನುಸಾರವಾಗಿ ಮರಳು ಭೂಮಿಯಲ್ಲಿ ೧೦ ದಿವಸಗಳಿಗೊಮ್ಮೆ, ಕಪ್ಪು ಭೂಮಿ ಯಾದಲ್ಲಿ ೨೦ ದಿವಸಗಳಿಗೊಮ್ಮೆ ನೀರನ್ನು ಹಾಯಿಸಿದರೆ ಉತ್ತಮ. ಮುಖ್ಯವಾಗಿ ಕವಲು ಒಡೆಯುವ ಸಮಯ, ತೆನೆ ಬಿಡುವ ಸಮಯ ಮತ್ತು ಕಾಳುಕಟ್ಟುವ ಸಮಯಗಳಲ್ಲಿ ನೀರನ್ನು ಒದಗಿಸಬೇಕು. ಬಿತ್ತನೆ ಯಾದ ೪ ವಾರಗಳ ನಂತರ ಅಂತರ ಬೇಸಾಯ ಮಾಡಿ ಮೇಲು ಗೊಬ್ಬರವನ್ನು ಕೊಟ್ಟು ಮಣ್ಣು ಏರು ಹಾಕಬೇಕು.
ಬೇಸಿಗೆಯಲ್ಲಿ ಕಪ್ಪು ಭೂಮಿಯಲ್ಲಿ ಒಟ್ಟು ೭ ಬಾರಿ ಅಂದರೆ, ಬಿತ್ತನೆ ಮಾಡುವ ಸಮಯ, ಬಿತ್ತನೆ ಮಾಡಿದ ೨೦ ದಿವಸಗಳು, ಅನಂತರ ಪ್ರತಿ ೧೦ ದಿನಗಳಿ ಗೊಮ್ಮೆ ನೀರು ಹಾಯಿಸಬೇಕಾಗುತ್ತದೆ. ಮುಂಗಾರಿನಲ್ಲಿ ಸಜ್ಜೆ ಆಧಾರಿತ ಬೆಳೆ ಪದ್ಧತಿ ಸ್ವಲ್ಪ ವಿಭಿನ್ನ. ಡೌನಿಮಿಲ್ಡೋ ರೋಗದ ಸಮಸ್ಯೆಯನ್ನು ತಪ್ಪಿಸಲು ತಳಿಗಳ ಬದಲಾವಣೆಗೆ ಒತ್ತು ನೀಡಬೇಕು. ಸಜ್ಜೆಯ ಹೈಬ್ರಿಡ್ ತಳಿಗಳು ಮತ್ತು ತೆರೆದ ಪರಾಗಸ್ಪರ್ಶದ ತಳಿಗಳನ್ನು ಪರ್ಯಾಯ ವರ್ಷಗಳು ಅಥವಾ ಋತುಗಳಲ್ಲಿ ಬಳಸಬೇಕು.
ಒಂದೇ ಭೂಮಿಯಲ್ಲಿ ಸತತವಾಗಿ ಒಂದೇ ಹೈಬ್ರಿಡ್ ಅಥವಾ ತೆರೆದ ಪರಾಗಸ್ಪರ್ಶದ ತಳಿಗಳನ್ನು ನಿರಂತರ ಬೆಳೆಯದಂತೆ ಸೂಚಿಸಲಾಗಿದೆ. ಸಜ್ಜೆಯ ಜತೆಗೆ ಅಂತರಬೆಳೆಯಾಗಿ ತೊಗರಿ/ ಹೆಸರುಕಾಳು/ಸೂರ್ಯಕಾಂತಿ/ಸೋಯಾ ಅವರೆ ಬೆಳೆಗಳನ್ನು ಬೆಳೆಯುವುದರಿಂದ ತುಂಬಾ ಪ್ರಯೋಜನಕಾರಿ ಯಾಗಲಿದೆ. ಕಳೆಗಳ ಹತೋಟಿಗಾಗಿ ಬಿತ್ತನೆ ಮಾಡಿದ ದಿನ ಅಥವಾ ಮರುದಿನ ಹೆಕ್ಟೇರ್‌ಗೆ ೧.೩ ಗ್ರಾಂ. ಅಟ್ರಾಜಿನ್ ಶೇ.೫೦ರ ನೀರಿನಲ್ಲಿ ಕರಗುವ ಪುಡಿ ಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಮಣ್ಣಿನ ಮೇಲೆ ಸಿಂಪಡಿಸಬೇಕು. ಪ್ರತಿ ಹೆಕ್ಟೇರ್‌ಗೆ ೭೫೦ ಲೀ. ದ್ರಾವಣ ಬಳಸಬೇಕಾಗುತ್ತದೆ. ಈ ರೀತಿ ಸಿಂಪರಣೆ ಮಾಡುವಾಗ ಮಣ್ಣು ಹುಡಿ ಹುಡಿಯಾಗಿರಬೇಕಾಗುತ್ತದೆ.
ಹಾಗೆ ನೋಡಿದರೆ ಸಜ್ಜೆ ಬೆಳೆಯುವ ಹೆಚ್ಚಿನ ಪ್ರದೇಶಗಳಲ್ಲಿ ಕೀಟಗಳ ಪೀಡೆ ತುಲನಾತ್ಮಕವಾಗಿ ಕಡಿಮೆ. ಅತ್ಯಂತ ಪ್ರಮುಖ ಕೀಟಗಳೆಂದರೆ ಬೊಬ್ಬೆ ದುಂಬಿ ಮತ್ತು ರಸ ಹೀರುವ ತಿಗಣ, ಇವುಗಳ ಹಾವಳಿಯಿಂದ ಕಾಳು ಜೊಳ್ಳಾಗಿ ಕಪ್ಪಾಗಿ ಕಾಣುವವು. ರೋಗಗಳ ವಿಚಾರಕ್ಕೆ ಬಂದರೆ, ಡೌನಿಮಿಲ್ಡೋ, ಕೇದಿಗೆ ರೋಗ (ಹಸಿರು ತೆನೆ ರೋಗ) ಮತ್ತು ಎಲೆ ತುಕ್ಕು ರೋಗ ಸಜ್ಜೆಯನ್ನು ಹೆಚ್ಚಾಗಿ ಬಾಧಿಸುವುದು. ಈ ರೋಗಗಳು ಧಾನ್ಯ ರಚನೆಯ ಮೇಲೆ ಪರಿಣಾಮ ಬೀರುವ ಮೂಲಕ ಧಾನ್ಯದ ಇಳುವರಿಯನ್ನು ನೇರವಾಗಿ ಕಡಿಮೆ ಮಾಡುತ್ತದೆ.
ಇದಲ್ಲದೆ ತೆನೆ ಜಿಗಿರೋಗ (ಎರ್ಗಾಟ್) ಧಾನ್ಯದ ಗುಣಮಟ್ಟ ಮತ್ತು ತೆನೆಗಳಲ್ಲಿ ಕಾಳಿನ ಸಂಖ್ಯೆ ಕಡಿಮೆಮಾಡುತ್ತದೆ. ಪ್ರತಿರೋಧಕ ತಳಿಗಳ ಬಳಕೆಯಿಂದ ಸಜ್ಜೆಯಲ್ಲಿ ಈ ರೋಗಗಳನ್ನು ನಿಯಂತ್ರಣ ಮಾಡಬಹುದಾಗಿದೆ. ಜೊಯ್ಲಿನ ವಿಭಾಗಕ್ಕೆ ಬಂದರೆ, ಸಜ್ಜೆಯಲ್ಲಿ ಕೊಯ್ಲು ಮಾಡಲು ಉತ್ತಮ ಹಂತ ವೆಂದರೆ ಕಾಳುಗಳ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪು ಚುಕ್ಕಿ. ತೆನೆಗಳು ಪಕ್ವವಾದಾಗ, ಕಾಳುಗಳು ಗಟ್ಟಿಯಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಬಹುತೇಕ ಒಣಗಿದ ನೋಟವನ್ನು ಪ್ರಸ್ತುತಪಡಿಸುತ್ತವೆ. ಮೊದಲು ತೆನೆಗಳನ್ನು ಕತ್ತರಿಸಿ ನಂತರ ಹುಲ್ಲನ್ನು ಕತ್ತರಿಸುವುದು ಸಾಮಾನ್ಯ ಕ್ರಮ. ಶೇ.೧೪ ತೇವಾಂಶ ಅಥವಾ ಅದಕ್ಕಿಂತ ಕಡಿಮೆ ಇರುವ ಧಾನ್ಯವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ದೀರ್ಘಕಾಲದವರೆಗೆ ಸಂಗ್ರಹಿಸಬೇಕೆಂ ದರೆ (೬ ತಿಂಗಳಿಗಿಂತ ಹೆಚ್ಚು) ಧಾನ್ಯದ ತೇವಾಂಶವು ಶೇ.೧ ಕ್ಕಿಂತ ಕಡಿಮೆ ಇರಬೇಕಾಗುತ್ತದೆ.
ಮೊದಲು ಸಜ್ಜೆಯ ತೆನೆಗಳನ್ನು ಚೆನ್ನಾಗಿ ಒಣಗಿಸಿದ ನಂತರ ಅವುಗಳನ್ನು ಯಾಂತ್ರಿಕ ಥ್ರೆಷರ್‌ನಲ್ಲಿ ಹಾಕಲಾಗುತ್ತದೆ. ಕಾಳುಗಳನ್ನು ಶೇ.೧೦ ತೇವಾಂಶ ಕ್ಕಿಂತ ಕಡಿಮೆ ಒಣಗಿಸಿ ಮತ್ತು ಪ್ರತಿ ೧೦೦ ಕಿ.ಗ್ರಾಂ. ಕಾಳುಗಳಲ್ಲಿ ೧ ಕಿ.ಗ್ರಾಂ. ಕಯೋಲಿನ್ ನೊಂದಿಗೆ ಮಿಶ್ರಣ ಮಾಡುವುದರಿಂದ ರೈಸ್ ವಿವಿಲ್ ಮತ್ತು ಪತಂಗದ ಹಾನಿಯಿಂದ ಸಂರರಕ್ಷಿಸಬಹುದು. ಧಾನ್ಯದ ಉದ್ದೇಶಕ್ಕಾಗಿ ಬಳಸುವುದಾದರೆ ಶೇ.೧೦ ತೇವಾಂಶಕ್ಕಿಂತ ಕಡಿಮೆ ಇರುವ ಹಾಗೆ ಕಾಳುಗಳನ್ನು ಒಣಗಿಸಿ ಗೋಣಿ ಚೀಲದಲ್ಲಿ ಸಂಗ್ರಹಿಸಿಡಬೇಕು