ಶಿಶಿರ ಕಾಲ
shishirh@gmail.com
೨೦೦೬ ರ ಫುಟ್ಬಾಲ್ ವರ್ಲ್ಡ್ ಕಪ್‌ನ ಫೈನಲ್ ಮ್ಯಾಚ್. ಫ್ಯಾನ್ಸ್ ವರ್ಸಸ್ ಇಟಲಿ. ಇವೆರಡು ತಂಡ ಫುಟ್ಬಾಲ್ ಮಟ್ಟಿಗೆ ಭಾರತ ಪಾಕಿಸ್ತಾನದಂತೆ. ಈ
ತಂಡಗಳ ವೈರತ್ವಕ್ಕೆ ಒಂದು ಶತಮಾನದ ಇತಿಹಾಸ. ಇವೆರಡು ಆಟದಲ್ಲಿ ಸೆಣೆಸುತ್ತವೆ ಎಂದರೆ ಇಡೀ ಫುಟ್ಬಾಲ್ ಜಗತ್ತೇ ಟಿವಿಯೆದುರು ಕೂತು ಬಿಡುತ್ತದೆ. ಇಂದಿಗೂ ಕೂಡ. ಅಂತಹ ಎರಡು ಬದ್ಧ ವೈರಿಗಳು ಫುಟ್ಬಾಲ್ ವರ್ಡ್ ಕಪ್ ಫೈನಲ್ ಮ್ಯಾಚಿನಲ್ಲಿ ಸೆಣೆಸುತ್ತವೆ ಎಂದರೆ ಕೇಳಬೇಕೆ? ಬರ್ಲಿನ್‌ನಲ್ಲಿ ನಡೆಯುತ್ತಿದ್ದ ಮ್ಯಾಚನ್ನು ಸುಮಾರು 70 ಸಾವಿರ ಮಂದಿ ಸ್ಟೇಡಿಯಂನಲ್ಲಿ ಕೂತು ನೋಡುತ್ತಿದ್ದರೆ, ಇನ್ನು 70 ಕೋಟಿ ಮಂದಿ ಜಗತ್ತಿ ನಲ್ಲೆಲ್ಲ ಲೈವ್ ನೋಡುತ್ತಿದ್ದರು.
ಈ ಪಂದ್ಯಾವಳಿ ಶುರುವಾಗುವುದಕ್ಕಿಂತ ಮೊದಲು ಫ್ರಾನ್ಸ್ ತಂಡ ಫುಟ್ಬಾಲ್ ವರ್ಲ್ಡ್ ಕಪ್‌ಗೆ ಅರ್ಹತೆ ಪಡೆಯು ವುದೂ ಕಷ್ಟವಿದ್ದಂತಹ ಸ್ಥಿತಿ. ಏಕೆಂದರೆ ಪಂದ್ಯಾವಳಿಗಿಂತ ಸ್ವಲ್ಪ ಮುಂಚೆ ಫ್ರಾನ್ಸ್ ನ ಆರು ಆಟಗಾರರು ರಿಟೈರ್ಮೆಂಟ್ ಘೋಷಿಸಿದ್ದರು. ಅದರಲ್ಲೊಬ್ಬ ತಂಡದ ಕ್ಯಾಪ್ಟನ್ ಜಿನಡೀನ್ ಜೆಡಾನ್. ಅಂತೂ ಕೋಚ್‌ನ ಒತ್ತಾಯಕ್ಕೆ ಮಣಿದು ಜೆಡಾನ್ ಮತ್ತೆ ತಂಡಕ್ಕೆ ಮರಳಿದ್ದ. ಆತ ಪಂದ್ಯಾವಳಿ ಮುಗಿದಾಕ್ಷಣ ನಿವೃತ್ತಿಯಾಗು ವವನಿದ್ದ. ಹೀಗೆ ರಿಟೈರ್ಮೆಂಟ್ ಘೋಷಿಸಿ, ಬಿಟ್ಟು ಪುನಹ ತಂಡಕ್ಕೆ ಹಿಂತಿರುಗಿದ್ದ ಜೇಡಾನ್ ಇಡೀ ಪಂದ್ಯಾವಳಿ ಯಲ್ಲಿ ಫ್ರಾನ್ಸ್ ಅನ್ನು ಮುಂದೆ ನಿಂತು ನಡೆಸಿಕೊಂಡು ಬಂದಿದ್ದ.
ಆತನಿಲ್ಲದಿದ್ದರೆ ಫ್ರಾನ್ಸ್ ಯಾವತ್ತೋ ಮನೆಗೆ ಹೋಗಿರುತ್ತಿತ್ತು. ಫೈನಲ್ ಮ್ಯಾಚ್ ಪ್ರಾರಂಭವಾಯ್ತು. ಶುರುವಾಗಿ ಏಳೇ ನಿಮಿಷಕ್ಕೆ ಫ್ರಾನ್ಸ್ ನ ಕಪ್ತಾನ ಜಿನಡೀನ್ ಜೆಡಾನ್ ಒಂದು ಗೋಲ್ ಬಾರಿಸಿಬಿಟ್ಟ. ತಗಳಿ, ಫ್ರಾನ್ಸ್ ಅನ್ನು ಬೆಂಬಲಿಸುತ್ತಿದ್ದವರದ್ದೆಲ್ಲರ ಹರ್ಷೋದ್ಗಾರ. ಇಡೀ ಸ್ಟೇಡಿಯಂ ಜಿನಡೀನ್ ಹೆಸರನ್ನು ಕೂಗುತ್ತಿತ್ತು. ಇದಾಗಿ ಹತ್ತು ಹನ್ನೆರಡು ನಿಮಿಷ ಕಳೆದಿರಬೇಕು. ಇಟಲಿಯ ಆಟಗಾರ ಮಾಟೆರ್ರಾಜಿ ಒಂದು ಗೋಲ್ ಬಾರಿಸಿದ. ಅಲ್ಲಿಗೆ ಮ್ಯಾಚ್ ಸಮ ಬಲ. ಹೀಗೆ ಫೈನಲ್ ಮ್ಯಾಚ್ ಸಮಸಮವಾದಾಗ ಆಟಗಾರರು ಮಾತಿನ ಮೂಲಕ ಸ್ಲೆಡ್ಜ್ ಮಾಡುವುದು ಜಾಸ್ತಿ. ಅಂತೆಯೇ ಮಾಟೆರ್ರಾಜಿ ಮತ್ತು ಜಿನಡೀನ್ ನಡುವೆಯೂ ಅಲ್ಲಿಂದ ಮುಂದೆ ಆಗಾಗ, ಸಂಧಿಸಿದಾಗಲೆಲ್ಲ ಬಯ್ದಾಡುವ, ಹಂಗಿಸುವ ಮಾತುಗಳು ಅದಲಿ ಬದಲಿಯಾದವು.
ಮೈದಾನ, ಸ್ಟೇಡಿಯಂ ಬಿಸಿಯೇರಿ ಕಾದಿತ್ತು. ಹೀಗೆ ಸಮಬಲದ ಹೋರಾಟ ಪಂದ್ಯದ ಕೊನೆಯ ಹಂತದವರೆಗೂ ಮುಂದುವರಿಯಿತು. ಇನ್ನೇನು ಆಟ
ಮುಗಿಯುವ ಸಮಯ. ಆಗ ಫ್ರಾನ್ಸ್ ನ ಜಿನಡೀನ್ ಮತ್ತು ಇಟಲಿಯ ಮಾಟೆರ್ರಾಜಿ ನಡುವೆ ಒಂದು ಚಿಕ್ಕ ಮಾತುಕತೆಯಾಗಿದ್ದು ಟಿವಿಯಲ್ಲಿ ಕಾಣಿಸಿತು. ಮರು ಕ್ಷಣವೇ ಜಿನಡೀನ್ ತನ್ನ ಬೋಳು ತಲೆಯನ್ನು ಬಾಗಿ ಮಾಟೆರ್ರಾಜಿಯ ಎದೆಗೆ ಗುದ್ದಿಬಿಟ್ಟ! ಈ ಸೀನಿಗೆ ಇಡೀ ಸ್ಟೇಡಿಯಂ ಒಂದು ಕ್ಷಣ ಸ್ತಬ್ಧವಾಗಿ ಬಿಟ್ಟಿತು. ರೆಫರಿ ಜಿನಡೀನ್ ಜೆಡಾನ್ ಅನ್ನು ಕರೆದು ರೆಡ್ ಕಾರ್ಡ್ ತೋರಿಸಿ ಆಟದಿಂದ ಹೊರಹಾಕಿಬಿಟ್ಟ. ಅದು ಜಿನಡೀನ್‌ನ ಜೀವನದ ಕೊನೆಯ, ಅತ್ಯಂತ ಮಹತ್ವದ, ಪ್ರತಿಷ್ಠಿತ ವರ್ಲ್ಡ್ ಕಪ್ ಪಂದ್ಯ, ಅದೂ ಫೈನಲ್.
ಇನ್ನೇನು ಫ್ರಾನ್ಸ್ ಗೆದ್ದುಬಿಡುವಷ್ಟು ತುರಿಸಿನಲ್ಲಿದ್ದ ಸಮಯವದು. ಅಂತಹ ಸಮಯದಲ್ಲಿ ಇದೆಲ್ಲ ನಡೆದು, ಆತ ಹೊರ ಹಾಕಲ್ಪಟ್ಟಿದ್ದ. ಆತನ ತಂಡ ಪೆನಾಲ್ಟಿ ಹಂತದಲ್ಲಿ ಸೋತು ಇಟಲಿ ೨೦೦೬ ರ ವರ್ಲ್ಡ್ ಕಪ್ ಗೆದ್ದುಬಿಟ್ಟಿತು. ಅಲ್ಲಿ ನಡೆದ್ದಾದರೂ ಏನು? ಏಕೆ, ಹೇಗೆ ಜಿನಡೀನ್ ಅಷ್ಟು ಮಹತ್ವದ -ನಲ್ ಪಂದ್ಯದಲ್ಲಿ ಹೀಗೆ ಮನಸ್ಸಿನ ಹಿಡಿತವನ್ನು ಕಳೆದುಕೊಂಡ? ಆತ ಅದೆಷ್ಟೋ ಇಂತಹ ಒತ್ತಡದ ಸಮಯವನ್ನು ಹಿಂದೆ ಎದುರಿಸಿದವನೇ. ಹೀಗೆ ಸಿಟ್ಟಿಗೆ ಬಿದ್ದು ಪಂದ್ಯ, ವರ್ಲ್ಡ್ ಕಪ್ ಕಳೆದುಕೊಂಡದ್ದು ಏಕೆ? ಎನ್ನುವುದೇ ಇಟಲಿ ಗೆದ್ದಿದ್ದಕ್ಕಿಂತ ದೊಡ್ಡ ಪ್ರಶ್ನೆಯಾಗಿ ಫುಟ್ಬಾಲ್ ಜಗತ್ತನ್ನು ಆವರಿಸಿತ್ತು.
ಅಂತಾರಾಷ್ಟ್ರೀಯ ಮಾಧ್ಯಮಗಳು ಮಾಟೆರ್ರಾಜಿ ಅಂಥದ್ದೇನು ಹೇಳಿರಬೇಕೆಂದು ವಿಶ್ಲೇಷಿಸಲು ತುಟಿಯ ಚಲನೆಯನ್ನು ನೋಡಿ ಹೇಳುವವರನ್ನೆಲ್ಲ ಕರೆಸಿತು. ಅವರೆಲ್ಲರ ಪ್ರಕಾರ ಮಾಟೆರ್ರಾಜಿ, ಜಿನಡೀನ್ ನ ತಾಯಿಯ ಬಗ್ಗೆ ಏನೋ ಬೈಗುಳ ಮಾತನಾಡಿದ್ದಾನೆ, ಜಿನಡೀನ್‌ಗೆ ಕೋಪ ನೆತ್ತಿಗೇರಿದೆ. ಆಮೇಲೆ ಫ್ರಾನ್ಸ್ ನ ಅಧ್ಯಕ್ಷರು ಕೂಡ ‘ನಾವು ವರ್ಡ್ ಕಪ್ ಸೋತದ್ದಕ್ಕೆ ಬೇಸರವಿಲ್ಲ. ಜಿನಡೀನ್ ಜೆಡಾನ್ ಮಾಡಿದ್ದು ಸರಿಯಿದೆ. ಅವನ ಜಾಗದಲ್ಲಿ ನಾನಿದ್ದರೂ ಅದನ್ನೇ ಮಾಡುತ್ತಿದ್ದೆ’ ಎಂದರು. ಆದರೆ ಅವರಿಬ್ಬರ ನಡುವೆ ಅದೇನು ಮಾತುಕತೆ ನಡೆಯಿತು ಎನ್ನುವುದು ಸುಮಾರು ವರ್ಷ ಹೊರಗೆ ಬರಲೇ ಇಲ್ಲ.
ಅಲ್ಲಿ ಆದದ್ದು ಇಷ್ಟು. ಇಟಲಿಯ ಮಾಟೆರ್ರಾಜಿ ಜಿನಡೀನ್‌ನ ಅಂಗಿ ಎಳೆದಿದ್ದಾನೆ. ಅದಕ್ಕೆ ಜಿನಡೀನ್ ನಿನಗೆ ನನ್ನ ಅಂಗಿ ಬೇಕೆಂದರೆ ಆಮೇಲೆ ಕೊಡು ತ್ತೇನೆ ಎಂದಿದ್ದಾನೆ. ಅದಕ್ಕೆ ಪ್ರತಿಯಾಗಿ ನಿನ್ನ ಅಂಗಿ ಬೇಡ, ಬದಲಿಗೆ ನಿನ್ನ ತಂಗಿಯ ಅಂಗಿ ಆದೀತು ಎಂದು ವೇಶ್ಯೆ ಶಬ್ದದ ಜೊತೆ ಮಾಟೆರ್ರಾಜಿ ಹೇಳಿದ್ದಾನೆ. ಅಷ್ಟಕ್ಕೇ ಜಿನಡೀನ್‌ನ -ಸ್ ಹಾರಿದೆ. ಇದೆಲ್ಲ ನಡೆದಿದೆ. ನಮ್ಮ ಕಡೆ ಕೆಟ್ಟ ಶಬ್ದಗಳ ಬಳಕೆ ತೀರಾ ಕಡಿಮೆ. ನಮ್ಮೂರಿಂದ ನನ್ನ ಜೊತೆ ಕಲಿಯಲು ಹುಬ್ಬಳ್ಳಿಗೆ ಬಂದ ಸ್ನೇಹಿತ ಮೊದಲನೇ ದಿನವೇ ಒಬ್ಬ ಸ್ಥಳೀಯ ಹುಡುಗನಿಗೆ ಕ್ಲಾಸಿನಲ್ಲಿ ಮುಖಕ್ಕೆ ರಕ್ತ ಬರುವಂತೆ ಹೊಡೆದಿದ್ದ.
ಅಲ್ಲಿ ಆ ಹುಡುಗ ಅವಾಚ್ಯ ಶಬ್ದವೊಂದನ್ನು ನನ್ನ ಸ್ನೇಹಿತನಿಗೆ ಬಳಸಿದ್ದ. ಹುಬ್ಬಳ್ಳಿ, ಉತ್ತರ ಕರ್ನಾಟಕದ ಕಡೆ ಬೈಗುಳ ಸಹಜ ಎನ್ನುವುದು ನಿಮಗೆಲ್ಲ ತಿಳಿದೇ ಇದೆ. ಆದರೆ ನನ್ನ ಸ್ನೇಹಿತನಿಗೆ, ಆತ ಬೆಳೆದುಬಂದ ವಾತಾವರಣದಲ್ಲಿ ಬೈಗುಳ ಶಬ್ದವೆಂದರೆ, ಅದರಲ್ಲಿಯೂ ಕುಟುಂಬದವರ ಮೇಲೆ ಬಳಸುವ ಶಬ್ದವೆಂದರೆ ಅದರ ಮುಂದಿನ ಹಂತ ಹೊಡೆದಾಟವೇ. ಏಕೆಂದರೆ ನಮ್ಮ ಕಡೆ ಬೈಗುಳ ಶಬ್ದವನ್ನು ಬಳಸುವುದೆಂದರೆ ಅದು ಸಂಸ್ಕಾರ ವಿಹೀನವತೆಯ ಲಕ್ಷಣ. ಬೈಗುಳವೆಂದರೆ ಅದನ್ನು ಡಿಫೆಂಡ್ ಮಾಡಲೇಬೇಕಾದ ಒಂದು ಸಾಮಾಜಿಕ ಅನಿವಾರ್ಯತೆ ನಮ್ಮಲ್ಲಿದೆ.
ಒಮ್ಮೆ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಕೂತಿದ್ದಾಗ ಎದುರಿನ ಎರಡು ಟೇಬಲ್ಲಿನಲ್ಲಿದ್ದ ವ್ಯಕ್ತಿಗಳು. ಒಬ್ಬ ಇನ್ನೊಬ್ಬನನ್ನು ಒಂದೆರಡು ಬಾರಿ ನೋಡಿದ. ಆ ಇನ್ನೊಬ್ಬ ಸ್ವಲ್ಪ ಸಮಯದ ನಂತರ ಏಕೋ ನನ್ನನ್ನೇ ಗುರಾಯಿಸ್ತೀಯ ಎಂದು ಕೇಳಿದ. ಇಬ್ಬರ ಸುತ್ತಲೂ ಅವರವರ ಸ್ನೇಹ ಬಳಗವಿತ್ತು. ಅಲ್ಲಿಂದ ಮುಂದೆ ಹೊಡೆದಾಟವೇ ನಡೆದು ಹೋಯ್ತು. ಅವರಿಬ್ಬರು ಅಂದು ಹೊಡೆದಾಡಿದ್ದೇಕೆ? ಇದೆಲ್ಲದರ ಹಿಂದಿನ ಕಾರಣಗಳೇನು? ಇದನ್ನೇ ಒಟ್ಟಾರೆಯಾಗಿ ಮರ್ಯಾದಾ ಸಂಸ್ಕೃತಿ ಎನ್ನುವುದು. ಇದು ಸಮಾಜದಲ್ಲಿ ಕಣ್ಣೆದುರಿಗೇ ಅಡಗಿ ಕುಳಿತಿರುತ್ತದೆ.
ಇವು ವ್ಯಕ್ತಿಯೊಬ್ಬ ಸಾಮಾಜಿಕ ಕಾರಣದಿಂದ ಬೆಳೆಸಿಕೊಳ್ಳುವ ಒಂದಿಷ್ಟು ಕಟ್ಟಳೆಗಳು. ವ್ಯಕ್ತಿಯು ಈ ಕಟ್ಟಳೆಯಿಂದಾಗಿ ಎಂತಹ ಅತಾರ್ಕಿಕ ಕೆಲಸಕ್ಕೂ ಹಿಂಜರಿಯದಂತೆ ಮಾಡುವ ಒಂದು ವಾತಾವರಣ. ಇಲ್ಲಿ ಖ್ಯಾತಿ, ಗೌರವ, ಸಾಮಾಜಿಕ ಸ್ಥಾನಮಾನ ಇವೆಲ್ಲ ಪಡೆಯಬೇಕೆಂದರೆ ತನ್ನ ಮರ್ಯಾದಾ ಸಂಸ್ಕಾರದ ಉಳಿವಿಗೆ ಮುಷ್ಟಿಕಟ್ಟಿ ನಿಲ್ಲಲೇಬೇಕು. ಇದು ವ್ಯಕ್ತಿಯ ಗುರುತಿನ ಉಳಿವಿನ ಪ್ರಶ್ನೆ. ಜಿನಡೀನ್‌ಗೆ ತನ್ನ ತಂಗಿಯ ಮರ್ಯಾದೆ ಯಾವ ವರ್ಲ್ಡ್ ಕಪ್‌ಗಿಂತ ದೊಡ್ಡದಾಗಿ ಕಾಣಿಸಿದ್ದು ಈ ಕಾರಣಕ್ಕೆ. ನನ್ನ ಗೆಳೆಯ ಸಹಪಾಠಿಗೆ ಹೊಡೆಯುವುದಕ್ಕೆ ಕಾರಣವೂ ಇದುವೇ. ಬೆಂಗಳೂರಿನ ಹೋಟೆಲ್ಲಿನಲ್ಲಿ ಕೂಟ ಆ ವ್ಯಕ್ತಿಗೆ ಕಣ್ನೋಟವೇ ಸ್ನೇಹಿತರೆದುರು ಅವಮಾನವೆನ್ನಿಸಿತು. ಇವರೆಲ್ಲರನ್ನೂ ನೀವು ಅದೇಕೆ ಹೀಗೆ ಮಾಡಿದೆ ಎಂದು ಕೇಳಿದರೆ ಅದು ಅವರ ಆ ಕ್ಷಣದ ಅನಿವಾರ್ಯ. ಜಿನಡೀನ್ ಈಗಿತ್ತಲಾಗೆ ಒಂದು ಇಂಟರ್ ವ್ಯೂನಲ್ಲಿ ಮಾತನಾಡುತ್ತಿದ್ದ.
ದಶಕದ ಹಿಂದೆ ನೀನು ಹಾಗೆ ಮಾಡಿದ್ದರ ಬಗ್ಗೆ ಪಶ್ಚಾತ್ತಾಪವಿದೆಯೇ ಎಂದು ಕೇಳಿದರು. ಅದಕ್ಕೆ ಜಿನಡೀನ್ ನನಗೆ ಆ ವಿಚಾರವಾಗಿ ಯಾವುದೇ
ಬೇಸರವಿಲ್ಲ, ನಾನು ಅಂದು ಹಾಗೆ ಮಾಡಿದ್ದೇ ಸರಿ ಎಂದ. ಇಲ್ಲಿ ಅಸಲಿಗೆ ಆ ಸಮಯದಲ್ಲಿ ಜಿನಡೀನ್‌ಗೆ ಒಬ್ಬ ತಂಗಿಯಿದ್ದಾಳೆ ಎನ್ನುವುದೇ ಮಾಟೆರ್ರಾ ಜಿಗೆ ಗೊತ್ತಿರಲಿಲ್ಲವಂತೆ. ಅಂದು ಸ್ಪೇನ್‌ನ ಅಂದಿನ ಅಧ್ಯಕ್ಷರು ಮತ್ತು ಇಡೀ ಸ್ಪೇನ್ ದೇಶ ಜಿನಡೀನ್‌ನ ಬೆನ್ನಿಗೆ ನಿಂತರಲ್ಲ! ಅದು ಅಂತಹ ಒಂದು ಡಿ-ಂಡ್ ಮಾಡುವ ಸಂಸ್ಕಾರ ಸ್ಪೇನ್ ನಲ್ಲಿ ಸರ್ವವ್ಯಾಪಿಯೆಂದೇ ಆಯಿತು. ಏನು ಗೊತ್ತಾ, ಈ ಮರ್ಯಾದೆ ಸಂಸ್ಕಾರ ಎನ್ನುವುದು ಕೆಲವೇ ಕಡೆಯ ವಿಚಾರ ವಲ್ಲ. ಇದು ಎಲ್ಲೆಡೆಯಿದೆ. ಆದರೆ ಮಧ್ಯಪ್ರಾಚ್ಯ, ಆಫ್ರಿಕಾ, ದಕ್ಷಿಣ ಅಮೆರಿಕಾ, ಭಾರತ ಇಲ್ಲೆಲ್ಲಾ ತುಸು ಜಾಸ್ತಿ. ಈ ಮರ್ಯಾದಾ ಸಂಸ್ಕಾರವೇ ಹತ್ತು ಹಲವು ರೂಪವನ್ನು ಪಡೆದು ಸಮಾಜವನ್ನು ಒಡೆಯುತ್ತಿರುತ್ತದೆ.
ಸಾಮಾನ್ಯವಾಗಿ ಅರ್ಧಕ್ಕಿಂತ ಜಾಸ್ತಿ ಕ್ರೈಮ್, ಕ್ರೌರ್ಯದ ಮೂಲಕ್ಕೆ ಹೋದರೆ ಅಲ್ಲಿ ಸಿಗುವುದೂ ಇದೇ ಮರ್ಯಾದಾ ಸಂಸ್ಕಾರ. ನೀನು ಗಂಡಸಲ್ಲವೇ? ಅವನನ್ನು ಸುಮ್ಮನೆ ಬಿಟ್ಟು ಬಂದಿದೀಯಾ, ನಾಚಿಕೆಯಾಗೊಲ್ವೆ? ಎಂಬ ಪ್ರಶ್ನೆಯ ಹಿನ್ನೆಲೆಯೂ ಇದುವೇ. ಆ ಗಂಡು ಇಂತಹ ಮಾತನ್ನು ಒಮ್ಮೆ ಕೇಳಿದರೆ ಇನ್ನೊಮ್ಮೆ ಅಂತಹ ಸ್ಥಿತಿಯಲ್ಲಿ ಹೋರಾಡಬೇಕಾದ ಅನಿವಾರ್ಯತೆ. ಪಾಕಿಸ್ತಾನದಲ್ಲಿ, ಕೆಲ ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣೊಬ್ಬಳು ಮದುವೆಗೆ ಮುಂಚೆ ಅಥವಾ ಇನ್ನೊಬ್ಬನ ಜೊತೆ ಸಂಬಂಧ ಬೆಳೆಸಿದಲ್ಲಿ, ಸಾರ್ವಜನಿಕವಾಗಿ ಕಲ್ಲು ಹೊಡೆದು ಮನೆಯವರೇ ಕೊಲ್ಲುವ ಪದ್ಧತಿಯ ಬಗ್ಗೆ ನೀವು ಕೇಳಿರುತ್ತೀರಿ. ಇದನ್ನು ಧರ್ಮಾಂಧತೆ, ಮೌಢ್ಯ ಎಂಬಿತ್ಯಾದಿ ಶಬ್ದಗಳಿಂದ ಕರೆಯಬಹುದು.
ಆದರೆ ಇದು ಕುಟುಂಬಕ್ಕೆ ಬೇಕೋ, ಬೇಡವೋ, ಒಪ್ಪಿಗೆಯಿದೆಯೋ ಇಲ್ಲವೋ, ಅನಿವಾರ್ಯ. ಅಲ್ಲಿ ವ್ಯಕ್ತಿ ಅಥವಾ ಕುಟುಂಬ ತನ್ನ ರಕ್ತಸಂಬಂಧ, ಮುದ್ದಿಸಿ ಬೆಳೆಸಿದ ಮಗಳನ್ನೇ ಇಷ್ಟು ಕ್ರೂರವಾಗಿ ಕಲ್ಲುಹೊಡೆದು ಕೊಲ್ಲುವಂತೆ ಒತ್ತಾಯಿಸುವ ಸಾಮಾಜಿಕ ಕಟ್ಟುಪಾಡು, ಅದು ಕೂಡ ಮರ್ಯಾದಾ ಸಂಸ್ಕೃತಿಯ ಭಾಗ. ಅಲ್ಲಿ ಮನೆಯ ಮರ್ಯಾದೆ ಯನ್ನು ಹೀಗೆ ಶಿಕ್ಷಿಸಿ ಕಾಪಾಡಿಕೊಳ್ಳುವ ಸಾಮಾಜಿಕ ಒತ್ತಡ. ಅದಕ್ಕೆ ವಿರುದ್ಧ ಹೋಗುವ ಮಾತೇ ಇಲ್ಲ.
ಹೋದರೆ ಸಮಾಜದಲ್ಲಿ ಬದುಕಲು ಅಸಾಧ್ಯದ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಅನಿವಾರ್ಯ. ಅಕ್ಕ ಪಕ್ಕದ ಮನೆಗಳಲ್ಲಿ ಜಗಳ ಕೆಲವೊಮ್ಮೆ ಹೊಡೆದಾಟಕ್ಕೆ ತಲುಪುವುದಿದೆ. ನಾನು ಬಲ್ಲ ಮನೆಗಳೆರಡರ ದ್ವೇಷ ಇಂದಿಗೂ ಹೀಗಿದೆ.
ಅಲ್ಲಿ ಗಲಾಟೆ, ಜಗಳ ನಡೆದದ್ದು ಸುಮಾರು ಮೂರು ತಲೆಮಾರಿನ ಹಿಂದೆ. ಈಗಿರುವವರು ಮರಿಮಕ್ಕಳ ಮಕ್ಕಳು. ಅಂದೆಂದೋ ನಡೆದುಹೋದ ಘಟನೆಯಿಂದ ನಾಲ್ಕು ಐದು ತಲೆಮಾರಿನವರಿಗೆ ಈ ದ್ವೇಷ ಹರಿದುಬಂದಿದೆ. ಈಗಂತೂ ಈ ದ್ವೇಷಕ್ಕೆ ಕಾರಣವೇನೆಂದು ಯಾರಿಗೂ ನೆನಪುಳಿದಿಲ್ಲ. ಒಟ್ಟಾರೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗದು. ಇಂಥದ್ದನ್ನು ಸಮಾಜವೂ ಹಾಗೆಯೇ ಪೋಷಿಸುತ್ತದೆ. ಜನರು ಅವರ ಮನೆಯ ಆಗದ ಸುದ್ದಿಯನ್ನು ಇನ್ನೊಂದು ಮನೆಯಲ್ಲಿ ಕುಳಿತು ಹೇಳಿ, ಆ ದ್ವೇಷವನ್ನು ಮುಂದುವರಿಯುವಂತೆ ನೋಡಿಕೊಳ್ಳುತ್ತಾರೆ ಕೂಡ. ಒಂದೊಮ್ಮೆ ಅಂತಹ ಆಗದ ಕುಟುಂಬದವರಿಬ್ಬರು ಒಂದೇ ಬೈಕಿನಲ್ಲಿ ಕುಳಿತು ಬಂದರೆ ಊರಿನಲ್ಲೆಲ್ಲಾ ಅದೇ ಸುದ್ದಿ, ಒಂದಿಷ್ಟು ಮಂದಿಯಾದರೂ ಏನೋ ವಿಷಯ? ಎಂದು ಪ್ರಶ್ನಿಸಿಯಾರು.
ಹೀಗೆ ವಿನಾಕಾರಣ ದ್ವೇಷ ತಲಗಳಿ ದಾಟಿಬರುವುದು, ದ್ವೇಷ ಕುಟುಂಬದಲ್ಲಿ ಅಂತರ್ಗತವಾದ, ಕುಟುಂಬದ ಐಡೆಂಟಿಟಿಯಾಗಿ ಮುಂದುವರಿಯುವುದು, ಅದನ್ನು ಸಮಾಜವೂ ಹಾಗೆಯೇ ಒಪ್ಪುವುದು, ನಿರೀಕ್ಷಿಸುವುದೇ ಮರ್ಯಾದಾ ಸಂಸ್ಕೃತಿ. ಈ ಮರ್ಯಾದಾ ಸಂಸ್ಕೃತಿಗೆ ಸಾಮಾನ್ಯವಾಗಿ ಬಲಿಪಶುವಾಗುವುದು ಮಕ್ಕಳು ಮತ್ತು ಹೆಂಗಸರು. ಇದನ್ನು ನಿಭಾಯಿಸುವ ಹೊಣೆ ಗಂಡುಮಕ್ಕಳಿಗೆ, ಗಂಡಸರಿಗೆ. ಲಿಂಗಭೇದ ಇಂದಿನ ಸಮಾಜದ ದೊಡ್ಡ ರೋಗವೆಂದೇ ಬಿಂಬಿತವಾಗುತ್ತದೆ. ಇಂದಿಗೂ ಹೆಣ್ಣಿಗೆ ಸ್ವಾತಂತ್ರ್ಯ ನಿಷಿದ್ಧವೆನ್ನುವ ಹಲವಾರು ಮುಸ್ಲಿಂ ರಾಷ್ಟ್ರಗಳಿವೆ. ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ನೀಡದೆ ಇರುವುದು, ಹೆಣ್ಣು ಡ್ರೈವಿಂಗ್ ಮಾಡಬಾರದು, ಒಬ್ಬಳೇ ಹೋಗಬಾರದು ಇವೆಲ್ಲ ಮೇಲ್ನೋಟಕ್ಕೆ ಧಾರ್ಮಿಕ ಕಾರಣವೆನ್ನಿಸಿದರೂ, ಅಲ್ಲಿ ಒಳಗಿರುವುದು ಬಿಡಲಾಗದ ಮರ್ಯಾದಾ ಸಂಸ್ಕೃತಿ.
ತಾಲಿಬಾನ್ ಯಾವಾಗ ಅಫ್ಗಾನಿಸ್ತಾನವನ್ನು ಪುನಃ ಕೈಗೆ ತೆಗೆದುಕೊಂಡಿತೋ, ಆಗ ಮಾಡಿದ ಮೊದಲ ಕೆಲಸ ಯಾವುದು ಗೊತ್ತಾ? ಹೆಣ್ಣುಮಕ್ಕಳು
ಶಾಲೆಗೆ ಹೋಗುವುದನ್ನು, ಕಲಿಯುವುದನ್ನು ಮಾರನೆಯ ದಿನವೇ ನಿಷೇಽಸಿದ್ದು. ಇದು ತಾಲಿಬಾನಿಗಳ ಮಟ್ಟಿಗೆ ಮರ್ಯಾದಾ ಕಾರಣದಿಂದ ಅನಿವಾರ್ಯ. ಹೆಣ್ಣಿಗೆ ಸ್ವಾತಂತ್ರ್ಯವಿಲ್ಲದಂತೆ ಮಾಡುವುದು ಮತ್ತು ಅಮೆರಿಕಾವನ್ನು ದ್ವೇಷಿಸುವುದು ತಾಲಿಬಾನಿನ ಐಡೆಂಟಿಟಿ. ಅದನ್ನು ಬಿಟ್ಟರೆ
ತಾಲಿಬಾನ್‌ಗೆ ಅವರ ನೆಲದಲ್ಲಿಯೇ ಬೆಲೆಯಿಲ್ಲ. ಭಾರತದಲ್ಲಿಯೂ ಮರ್ಯಾದಾ ಕಾರಣಕ್ಕೆ ನಡೆಯುವ ಹತ್ಯೆ, ಕೊಲೆ ಕಡಿಮೆಯೇನಿಲ್ಲ. ಪಾಕಿಸ್ತಾನ,
ಅ-ನಿಸ್ತಾನದಷ್ಟು ಪ್ರಮಾಣದಲ್ಲಿಲ್ಲ, ಆದರೆ ಇದೆ. ನಮ್ಮ ದೇಶದಲ್ಲಿ ಹೆಣ್ಣನ್ನು ಕೊಲ್ಲುವ ಹಂತಕ್ಕೆ ಗಂಡಸು, ಸ್ವಂತ ತಂದೆ ತಾಯಿ ಇಳಿಯುವುದಕ್ಕೆ ಮೂಲದಲ್ಲಿ ಕಾರಣವೇನು? ಇದೇ ಮರ್ಯಾದಾ ಸಂಸ್ಕೃತಿ ಅಲ್ಲಿ ಸೃಷ್ಟಿಸುವ ಸಾಮಾಜಿಕ ಅನಿವಾರ್ಯತೆಯ ಭ್ರಮೆ.
ಇಂತಹ ಘಟನೆ ನಮ್ಮ ಸುತ್ತ ನಡೆದಾಗ ನಾವು ಪ್ರಶ್ನಿಸುವುದಿದೆ. ಆ ಮನುಷ್ಯನಿಗೆ ಜೈಲುಪಾಲಾಗಿ ತನ್ನ ಜೀವನದ ಜೊತೆ ಕುಟುಂಬದ ಬದುಕೂ
ವಿಪರೀತ ತಲುಪಬಹುದು ಎನ್ನುವ ಕಿಂಚಿತ್ ಬುದ್ಧಿಯೂ ಇಲ್ಲವೇ? ಎಂದು. ಇಂತಹ ಕೃತ್ಯಕ್ಕೆ ಇಳಿಯುವವನಿಗೆ ಆ ಅರಿವು ನಿಜವಾಗಿಯೂ ಇದ್ದೇ ಇರುತ್ತದೆ. ಆದರೆ ಅದನ್ನು ಮೀರಿ ಮರ್ಯಾದಾ ಸಂಸ್ಕೃತಿ ಅಂಥವರನ್ನು ಆವರಿಸಿರುತ್ತದೆ. ಆ ಕಾರಣಕ್ಕೇ ಇಂತಹ ಕೆಲಸ ಮಾಡಿದವರು ಕೋರ್ಟಿನಲ್ಲಿ
ಜಡ್ಜ್ ಮುಂದೆಯೂ ಪಶ್ಚಾತ್ತಾಪಿಸುವುದಿಲ್ಲ. ಇದು ಹಲವು ಬಾರಿ ಶಿಕ್ಷೆಯ ಪ್ರಮಾಣ ಹೆಚ್ಚುವಂತೆ ಮಾಡುತ್ತದೆ, ಆ ಅರಿವೂ ಆತನಿಗಿರುತ್ತದೆ. ಅದು ತಿಳಿದಿದ್ದರೂ ಇದು ಮರ್ಯಾದೆಯ ವಿಷಯ. ಇಂತಹ ವಿಷಯದಲ್ಲಿ ಪಶ್ಚಾತ್ತಾಪಕ್ಕೂ ಅವಕಾಶವಿಲ್ಲ.
ಪಶ್ಚಾತ್ತಾಪವೆಂದರೆ ಅದು ಜೀವ ಬಿಟ್ಟಂತೆ. ಸಾಮಾನ್ಯವಾಗಿ ಚಿಕ್ಕ ಸಮುದಾಯ ಅಥವಾ ಊರುಗಳಲ್ಲಿ ಈ ಮರ್ಯಾದಾ ಸಂಸ್ಕೃತಿಯ ಒತ್ತಡದ ಪ್ರಮಾಣ ಜಾಸ್ತಿ. ಅಂತರ್ಜಾತಿಯ ವಿವಾಹ ಕೆಲ ಕಾಲದ ನಂತರ ಕುಟುಂಬ ಒಪ್ಪಿದರೂ ಬಹಿರಂಗವಾಗಿ ಒಪ್ಪಲು ಈ ಮರ್ಯಾದಾ ಸಂಸ್ಕೃತಿ ಅಡ್ಡ ಬರುತ್ತದೆ. ಆದರೆ ಇದರ ಪ್ರಮಾಣ ಪೇಟೆಯಲ್ಲಿ ಕಡಿಮೆ. ಪೇಟೆಯಲ್ಲಿ ವ್ಯಕ್ತಿಯ ಐಡೆಂಟಿಟಿ ಕ್ಷೀಣಿಸಿರುತ್ತದೆ. ಇಲ್ಲಿ ಎದುರು ಮನೆಯವರದ್ದೇ ಪರಿಚಯ ವಿರುವುದಿಲ್ಲ. ಆ ಕಾರಣಕ್ಕೆ ಜಾಸ್ತಿ ಸಂಬಂಧಿಕರಿಲ್ಲದ ಕುಟುಂಬಗಳಲ್ಲಿ ಈ ಮರ್ಯಾದಾ ಸಂಸ್ಕಾರ ಕ್ರಮೇಣ ನಶಿಸಿಹೋಗುತ್ತದೆ. ಇಲ್ಲಿ ಅಂತರ್ಜಾತಿಯ ವಿವಾಹ ಮೊದಲಾದವುಗಳನ್ನು ಪ್ರಶ್ನಿಸದಂತೆ ಬದುಕಲು ಸಾಧ್ಯವಾಗುವುದು ಈ ಕಾರಣಕ್ಕೆ.
ಮರ್ಯಾದಾ ಹತ್ಯೆ, ತಲಗಳಿ ದ್ವೇಷ, ಒತ್ತಾಯದ ಮದುವೆ, ಮರ್ಯಾದೆ ವಿಚಾರವಾಗಿ ಕ್ರೌರ್ಯ, ಕೊಲೆ, ಗಂಡು ಹೆಣ್ಣು ಎನ್ನುವ ಭೇದ ಇವೆಲ್ಲ ದೊಡ್ಡ ದೊಡ್ಡ ವಿಚಾರಗಳಾದವು. ಅದು ಬಿಟ್ಟು ನೀವು ವೈಯಕ್ತಿಕ ಹಂತದಲ್ಲಿ ಸೂಕ್ಷ್ಮವಾಗಿ ನೋಡಿದರೆ ನಮ್ಮ ಬಹುತೇಕ ಕೃತ್ಯಗಳು ಈ ಮರ್ಯಾದಾ ಸಂಸ್ಕಾರದ ಸುತ್ತಲೇ ಗಿರಕಿ ಹೊಡೆಯುವುದು ಗ್ರಹಿಕೆಗೆ ಬರುತ್ತದೆ. ಅದನ್ನು ಮೀರಿ ನಡೆದವರು, ನಡೆದು ದಕ್ಕಿಸಿಕೊಂಡವರು ಪ್ರವರ್ತಕರಂತೆ ಒಂದು ಸ್ವಾಸ್ಥ್ಯ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ.
ಮನುಷ್ಯನ ಹಲವು ಸೆನ್ಸ್ ಲೆಸ್, ಅರ್ಥಹೀನ ಕೆಲಸಗಳೆಲ್ಲದರ ಹಿಂದೆ, ಲೊಜಿಕಲ್ ತರ್ಕಕ್ಕೆ ನಿಲುಕದ ಅದೆಷ್ಟೋ ಕೃತ್ಯಗಳ ಹಿಂದೆ, ಮಾತು, ಕೃತಿ, ವಿಚಾರ ಗಳ ಹಿಂದೆ ಆ ವ್ಯಕ್ತಿ ಕಾಪಾಡಿಕೊಂಡ ಮರ್ಯಾದಾ ಸಂಸ್ಕಾರವಿರುತ್ತದೆ. ಅತ್ತೆ ಸೊಸೆಯ ಗಲಾಟೆಗಳಿಗೆ ಕಾರಣವೇನು, ಹೀಗೆ ಹೇಳಿದ್ದಕ್ಕೆ ಅವನು ಇವನಿಗೆ ಹೊಡೆದದ್ದೇಕೆ, ಅವರ ಮನೆಯಲ್ಲಿ ಹೆಣ್ಣುಮಕ್ಕಳನ್ನು ಕೂಡಿ ಹಾಕಿದಂತೆ ಬೆಳೆಸುವುದು ಏಕೆ? ಈ ತಲೆಮಾರಿನ ದ್ವೇಷ ಅಸೂಯೆಗಳು ಯಾವ ಪುರುಷಾ ರ್ಥಕ್ಕೆ? ಅದೇಕೆ ಅಪರಿಚಿತರಿಬ್ಬರು ರಸ್ತೆ ಮಧ್ಯೆ ನಿಂತು ಹೊಡೆದಾಡಿದ್ದು? ಹೀಗೆ ಅದೆಷ್ಟೋ ಪ್ರಶ್ನೆಗಳ ಮೂಲದಲ್ಲಿ ಮರ್ಯಾದೆ ಸಂಸ್ಕೃತಿ ಅಡಗಿ ಕೂತಿರುತ್ತದೆ. ಗಂಡಸು ಅಳುವಂತಿಲ್ಲ, ಗಂಡಿಗೆ ಸ್ವಾಭಿಮಾನವೇ ಸರ್ವಸ್ವ, ಕುಟುಂಬದ ಮರ್ಯಾದೆಯ ರಕ್ಷಣೆ, ಮೌಲ್ಯ ಜೀವಕ್ಕಿಂತ ಜಾಸ್ತಿ ಇವೆಲ್ಲವೂ ಅದುವೇ. ಇದು ಪ್ರತೀ ವ್ಯಕ್ತಿಯಲ್ಲೂ ನಾನಾ ಬಣ್ಣದಲ್ಲಿ ಇರುತ್ತದೆ. ಈ ಅರಿವು ನಮ್ಮಲ್ಲಿದ್ದರೆ ಒಳ್ಳೆಯದು. ಆಗ ಮಾತ್ರ ಇನ್ನೊಬ್ಬ ವ್ಯಕ್ತಿ ಯನ್ನು ಆ ವ್ಯಕ್ತಿ ಇರುವಂತೆ, ಯಥಾವತ್ ಸ್ವೀಕರಿಸಲಿಕ್ಕೆ ಸಾಧ್ಯ.