ದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ರೂಬಿ ಮಾಯರ್ಸ್ ಹೆಸರು ಕೇಳಿದ್ದೀರಾ? ಇಲ್ಲವಾದರೆ ಸುಲೋಚನಾ ಹೆಸರಂತೂ ನೀವು ಕೇಳಿರಬಹುದು. ಕಳೆದ ಕೆಲವು ದಿನ ಗಳಿಂದ ಬರೀ ಗಲಾಟೆ, ಗದ್ದಲ, ಗೊಂದಲ. ಒಂದೆಡೆ ಕರೋನಾದ ಆತಂಕವಾದರೆ ಇನ್ನೊಂದೆಡೆ ಚೀನಾ ಗಡಿಯಲ್ಲಿ ಕಿರಿಕಿರಿ. ಒಂದೆಡೆ ಸಂಸತ್ತಿನಲ್ಲಿ ಗದ್ದಲ, ಇನ್ನೊಂದೆಡೆ ರೈತರ ಚಳುವಳಿ.
ಒಂದೆಡೆ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಗೊಂದಲವಾದರೆ ಇನ್ನೊಂದೆಡೆ ಮಾದಕ ವಸ್ತುಗಳ ಗಲಾಟೆ. ಯಾವ ನ್ಯೂಸ್ ಚಾನೆಲ್ ನೋಡಿದರೂ ಕರ್ಣ ಪಟಲ ಹರಿದು ಹೋಗುವಷ್ಟು ಜೋರಾಗಿ ಕಿರುಚುವ, ನೇರ ಮೆದುಳಿಗೇ ಕೈ ಹಾಕಿ ಗಿವುಚುವ ನಿರೂಪಕರ ಹಾವಳಿ. ಎಲ್ಲವನ್ನೂ ಬಿಟ್ಟು ಸಿನಿಮಾ ನೋಡೋಣವೆಂದು ಕುಳಿತರೆ, ಹೊಸ ಸಿನಿಮಾಗಳ ಪಾಡೂ ಅಷ್ಟೇ. ಕೊಲೆ, ಸುಲಿಗೆ, ಅತ್ಯಾಚಾರ, ಬಾಂಬ್, ಹೊಡೆದಾಟ, ಬಡಿದಾಟ, ರಕ್ತ ಪಾತ. ಎರಡೂವರೆ ತಾಸಿನ ಚಿತ್ರದಲ್ಲಿ ಎರಡು ಕಾಲು ತಾಸು
ಬೇಡವಾದದ್ದನ್ನೇ ತೋರಿಸಿ, ಕೊನೆಯ ಹದಿನೈದು ನಿಮಿಷದಲ್ಲಿ ಮುಂಚೆ ತೋರಿಸಿದ್ದನ್ನು ಮಾಡಿದರೆ ಶಿಕ್ಷೆಯಾಗುತ್ತದೆ ಎಂಬ ಸಂದೇಶ.
ಇತ್ತೀಚೆಗಂತೂ ತೆರೆಯ ಮೇಲೆ ಯಾವ ಕಲಾವಿದ ಕಂಡರೂ ನಿಜ ಜೀವನದಲ್ಲಿ ಇವರೂ ಡ್ರಗ್ಸ್ ಸೇವಿಸಿದವರಾ, ಕಾಸ್ಟಿಂಗ್ ಕೌಚ್ಗೆೆ ಒಪ್ಪಿದವರಾ, ಲೈಂಗಿಕ ಕಿರುಕುಳಕ್ಕೆ ಒಳಪಟ್ಟವರಾ ಎಂಬ ಅನುಮಾನ ಬೇರೆ. ತೆರೆಯ ಮೇಲೆ ಸೊಬಗರಾಗಿ ನಿಜ ಜೀವನದಲ್ಲಿ ತದ್ವಿರುದ್ಧವಾಗಿರುವ ನಾಯಕ ನಾಯಕಿಯರನ್ನು ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ. ಇಂತವರ ಚಿತ್ರಗಳನ್ನು ನೋಡಲು ನಾವು ಇಷ್ಟೊಂದು ಹಣ ಸುರಿದೆವಾ!? ಅದ್ಯಾಕೋ ಹಳೆಯ ಚಲನಚಿತ್ರಗಳೇ ಒಳಿತು ಅನಿಸಿತು. ಏನಿಲ್ಲವೆಂದರೂ ನಾಲ್ಕು ಒಳ್ಳೆಯ ಹಾಡುಗಳು, ಅಬ್ಬರವಿಲ್ಲದ ಸುಮಧುರ ಹಿನ್ನೆಲೆ ಸಂಗೀತ, ಮಿತವಾದ ಸಂಭಾಷಣೆ, ಮನಸ್ಸಿಗೆ ಆಹ್ಲಾದಕರ. ನಾಯಕನ ಬೆಲ್
ಬಾಟಮ್ ಪ್ಯಾಂಟ್ (ಇನ್ನೂ ಹಿಂದೆ ಹೋದರೆ ಮೂಲಂಗಿ ಪ್ಯಾಂಟ್) ಮೂರು ಇಂಚು ಅಗಲದ ಬೆಲ್ಟ್, ಅದಕ್ಕೆೆ ತಕ್ಕಂತೆ ದೊಡ್ಡ ಬಿಲ್ಲೆಯ ಬಕಲ್, ಹಿಪ್ಪಿ ಕಟ್, ನಾಯಕಿಯ ಕಿವಿಯಲ್ಲಿನ ಜುಮಕಿ, ಕೈ ತುಂಬ ಬಳೆ, ಕಾಲಲ್ಲಿ ಗೆಜ್ಜೆ ಇವನ್ನೆಲ್ಲ ನೋಡುವುದು ಏನೋ ಒಂದು ರೀತಿಯ ಖುಷಿ. ಇನ್ನೂ ಹಿಂದಕ್ಕೆ ಹೋದರೆ ಮೂಕ ಚಿತ್ರಗಳ ಕಾಲ. ಆ ಪ್ರಪಂಚವೇ ಬೇರೆ. ಮೂಕ ಚಿತ್ರವೆಂದರೆ ನಮ್ಮ ನೆನಪಿಗೆ ಬರುವುದು ಕಮಲ್ ಹಾಸನ್‌ನ ‘ಪುಷ್ಪಕ ವಿಮಾನ’ ತಾನೆ? ಅದಕ್ಕೂ ಹಿಂದೆ ಹೋಗಿ, ಕಪ್ಪು ಬಿಳುಪಿನ ಮೂಕ ಚಿತ್ರಗಳನ್ನು ನೋಡಿ, ಮಜವಾಗಿರುತ್ತೆ.
ಸಂಭಾಷಣೆಯೊಂದಿಗೆ ಸಂವಹನ ಸುಲಭ, ಸಂಭಾಷಣೆ ಇಲ್ಲದೆಯೇ ಪ್ರೇಕ್ಷಕನಿಗೆ ಸಂದೇಶ ತಲುಪಿಸುವ ಕಲಸ ತುಂಬಾ ಕಷ್ಟ.
ಅಂಥದ್ದರಲ್ಲಿ ಚಾರ್ಲಿ ಚಾಪ್ಲಿನ್ ನಮ್ಮನೆಲ್ಲ ನಗಿಸುತ್ತಿದ್ದರು ಎಂಬುದನ್ನು ಮರೆಯುವಂತಿಲ್ಲ. ಭಾರತದ ಚಿತ್ರರಂಗದಲ್ಲೂ
ಸಂಚಲನ ಮೂಡಿಸಿದ ರಾಜಾ ಹರಿಶ್ಚಂದ್ರ, ಲಂಕಾ ದಹನ, ಕೃಷ್ಣ ಜನ್ಮ, ಮೋಹಿನಿ ಭಸ್ಮಾಸುರ, ಜಮಾಯಿ ಬಾಬು
ಚಿತ್ರಗಳು ಇಂದಿಗೂ ಜೀವಂತವಾಗಿವೆ. ಅಂತೆಯೇ ಆ ಕಾಲದ ಕಲಾವಿದರ ನೆನಪೂ ಕೂಡ. ಆ ಕಲಾವಿದರ ಪೈಕಿ ಚಿರಸ್ಥಾಯಿ ಯಾಗಿ ಉಳಿಯುವ ಹೆಸರುಗಳಲ್ಲಿ ರೂಬಿ ಮಾಯರ್ಸ್ ಸಹ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ.
ಹದಿನೆಂಟನೆಯ ಶತಮಾನದಲ್ಲಿ ಇರಾಕ್‌ನ ಬಾಗ್ದಾದ್ ಪ್ರದೇಶದಿಂದ ಭಾರತಕ್ಕೆ ವ್ಯಾಪಾರಕ್ಕೆಂದು ಬರುವವರ ಒಂದು
ದಂಡೇ ಇತ್ತು. ಅವರು ಹೆಚ್ಚಾಗಿ ಆ ಭಾಗದ ಸಾಮಗ್ರಿಗಳನ್ನು ಭಾರತದ ಮುಂಬೈ, ದಿಲ್ಲಿ ಮತ್ತು ಕಲ್ಕತ್ತಾದಂಥ ನಗರಗಳಲ್ಲಿ
ಮಾರಾಟ ಮಾಡುತ್ತಿದ್ದರು. ಹಾಗೆ ಬಂದವರಲ್ಲಿ ಕೆಲವರು ಅಲ್ಲಿಯ ಟರ್ಕಿ ಮುಸ್ಲಿಂ ಆಡಳಿತಗಾರರ ಕಿರುಕುಳದಿಂದ
ಪಾರಾಗಲು ಭಾರತದಲ್ಲಿಯೇ ಉಳಿಯುತ್ತಿದ್ದರು. ಅಂತಹ ಪರಿವಾರಗಳಲ್ಲಿ, ಪೂನಾದಲ್ಲಿ ಬೀಡುಬಿಟ್ಟ ಯಹೂದಿ ಪರಿವಾರವೂ ಒಂದಾಗಿತ್ತು. ಆ ಪರಿವಾರದಲ್ಲಿ 1907ರಲ್ಲಿ ಜನಿಸಿದವಳು ದುಂಡು ಮುಖದ ರೂಬಿ ಮಾಯರ್ಸ್.
ರೂಬಿ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಜೀವನೋಪಾಯಕ್ಕೆಂದು ಪೂಣಾದಲ್ಲಿಯೇ ಟೆಲಿಫೋನ್ ಬೂತ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಕೊಹಿನೂ ಫಿಲ್ಮ್ ಕಂಪನಿಯ ಮೋಹನ್ ಭವನಾನಿ ಈ ಸುಂದರ ಯುವತಿಯನ್ನು ತನ್ನ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಾಗ, ಅವಕಾಶ ಸಿಕ್ಕಿದ್ದಕ್ಕಾಗಿ ಒಳಗೊಳಗೇ ಸಂತೋಷಗೊಂಡರೂ, ಏನೋ ಒಂದು ರೀತಿಯ ದುಗುಡ.
ಹೆಣ್ಣು ಮಕ್ಕಳು ಚಿತ್ರರಂಗಕ್ಕೆ ಬರಲು ಅಂಜುತ್ತಿದ್ದ, ಗಂಡಸರೇ ಹೆಣ್ಣಿನ ಪಾತ್ರದಲ್ಲಿ ನಟಿಸುತ್ತಿದ್ದ ಕಾಲ ಅದು. ನಿಮಗೆ
ತಿಳಿದಿರಬಹುದು, ಭಾರತದ ಮೊದಲ ಚಿತ್ರ ರಾಜಾ ಹರಿಶ್ಚಂದ್ರದಲ್ಲಿ ನಾಯಕಿ, ರಾಣಿ ತಾರಾಮತಿಯಾಗಿ ನಟಿಸಿದ್ದು ಒಬ್ಬ ಗಂಡು. ಲಂಕಾ ದಹನ ಚಿತ್ರದಲ್ಲಿ ನಾಯಕ – ನಾಯಕಿಯರಾದ ರಾಮ ಮತ್ತು ಸೀತೆಯಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡವರೂ ಗಂಡು. ಅವರೇ ಅಂದಿನ ಕಾಲದ ಅತ್ಯುತ್ತಮ ನಾಯಕಿ ಎಂದು ಹೆಸರು ಗಳಿಸಿದ್ದ ಅಣ್ಣಾ ಸಾಳುಂಕೆ. ಹಾಗಿರುವಾಗ ಅಭಿನಯದ ಅ-ಆ ಕೂಡ ಗೊತ್ತಿಲ್ಲದವಳು ನಟಿಸುವುದು ಎಂದರೆ ಹೇಗೆ? ಅದರಲ್ಲೂ ಇಡೀ ದೇಶದ ಜನ ತನ್ನ ಅಭಿನಯವನ್ನು ನೋಡುತ್ತಾರೆ
ಎಂಬ ಅಳುಕು. ಯೋಚಿಸಲು ಸಮಯಾವಕಾಶ ಪಡೆದು, ಬಹಳ ಯೋಚಿಸಿ, ಅಂತೂ ಒಪ್ಪಿಗೆ ಸೂಚಿಸಿದ್ದಳು ರೂಬಿ.
ಅಂತೆಯೇ, ತೆರೆಯ ಮೇಲೆ ಸುಲೋಚನಾ ಎಂಬ ಬದಲಾದ ಹೆಸರಿನಲ್ಲಿ ಮೆರೆದಳು. ಈಕೆ ಅಭಿನಯಿಸಿದಷ್ಟು ಸ್ತ್ರೀ ಪ್ರಧಾನ
ಚಿತ್ರಗಳಲ್ಲಿ ಬೇರೆ ಯಾರೂ ಅಭಿನಯಿಸಿದ ಉದಾಹರಣೆ ಹಿಂದಿ ಚಿತ್ರರಂಗದಲ್ಲಿ ಇರಲಿಕ್ಕಿಲ್ಲ. ತನ್ನ 18ನೆಯ ವಯಸ್ಸಿನಲ್ಲಿ ಆ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅನುಭವ ಅಥವಾ ಕಾರ್ಯಜ್ಞಾನವೂ ಇಲ್ಲದೇ ಚಿತ್ರರಂಗ ಪ್ರವೇಶಿಸಿದ ಸುಲೋಚನಾಳ ಮೊದಲ ಚಿತ್ರ ವೀರ ಬಾಲಾ. ವರ್ಷಕ್ಕೆೆ ಒಂದು ಅಥವಾ ಎರಡು ಚಿತ್ರಗಳಲ್ಲಷ್ಟೇ ನಟಿಸುತ್ತಿದ್ದ ಈಕೆ 1926 ರಲ್ಲಿ ನಟಿಸಿದ ಟೈಪಿಸ್‌ಟ್ ಗರ್ಲ್ ಮತ್ತು ಸಿನಿಮಾ ಕ್ವೀನ್, 1927ರಲ್ಲಿ ನಟಿಸಿದ Wild cat of Bombay ಬಾಂಬೆ (ಬಾಂಬೆ ಕಿ ಬಿಲ್ಲಿ) ಮತ್ತು ಬಲಿದಾನ್ ಆ ಕಾಲದ ಸೂಪರ್ ಹಿಟ್ ಚಿತ್ರಗಳಾದವು.
Wild cat of Bombay ಯಲ್ಲಿ ಪೊಲೀಸ್, ಜೇಬು ಕಳ್ಳ, ದೇಶೀಯ ಸಂಭಾವಿತ ಮನುಷ್ಯ, ವಿದೇಶಿ ಮಹಿಳೆ, ಹಣ್ಣು ಮಾರುವವಳು, ದಾರಿ ಬದಿಗಿನ ಬಾಲ ಭಿಕ್ಷುಕ, ತೋಟದ ಮಾಲಿ, ಹೀಗೆ ಒಟ್ಟೂ ಎಂಟು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದು ಒಂದು ದಾಖಲೆಯಷ್ಟೇ ಅಲ್ಲ, ಅವಳ ಪ್ರತಿಭೆಗೆ ಪುರಾವೆಯೂ ಹೌದು. ಅದಾಗಿ ಮೂರೂವರೆ ದಶಕದ ನಂತರ ಶಿವಾಜಿ ಗಣೇಶನ್ ಒಂಬತ್ತು ಪಾತ್ರಗಳಲ್ಲಿ, ಅದರ ನಾಲ್ಕೂವರೆ ದಶಕದ ನಂತರ ಕಮಲ್ ಹಾಸನ್ ದಶಾವತಾರ ಚಿತ್ರದಲ್ಲಿ ಹತ್ತು ಪಾತ್ರಗಳಲ್ಲಿ ಅಭಿನಯಿಸಿ ದಾಖಲೆ ಬರೆದರೂ, ಅತಿ ಹೆಚ್ಚು ಪಾತ್ರಗಳಲ್ಲಿ ನಟಿಸಿದ ಮಹಿಳೆಯ ದಾಖಲೆ ಈಗಲೂ ಸುಲೋಚನಾ
ಹೆಸರಿನಲ್ಲಿಯೇ ಇದೆ.
ನಂತರ ಎರಡು ವರ್ಷ ಆರ್.ಎಸ್.ಚೌಧರಿ ನಿರ್ದೇಶಿಸಿದ ಮಾಧುರಿ, ಅನಾರ್ಕಲಿ ಮತ್ತು ಇಂದಿರಾ ಆ. ಅ., ಎಲ್ಲವೂ ಸೂಪರ್ ಹಿಟ್ ಚಿತ್ರಗಳೇ. ಆಕೆ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದು, ಭಾರತದ ಶ್ರೇಷ್ಠ ಚಿತ್ರ ನಿರ್ಮಾಣ ಸಂಸ್ಥೆ ಎಂದು ಹೆಸರು ಗಳಿಸಿದ್ದ ಇಂಪೇರಿಯಲ್ ಫಿಲ್ಮ್ ಕಂಪನಿಯೊಂದಿಗೆ ಕೈ ಜೋಡಿಸಿ, ಚಿತ್ರರಂಗವನ್ನು ಅಕ್ಷರಶಃ ಆಳಿದ ಕಾಲ ಅದು ಎಂದರೆ ತಪ್ಪಾಗಲಾರದು. ಆ ದಿನಗಳಲ್ಲಿ ಅವಳ ಖ್ಯಾತಿ ಎಷ್ಟು ವ್ಯಾಪಕವಾಗಿತ್ತೆಂದರೆ, ಮಹಾತ್ಮಾ ಗಾಂಧಿಯವರ ಖಾದಿ ಪ್ರದರ್ಶನದ
ಉದ್ಘಾಟನೆಯ ಕಿರು ಚಿತ್ರವೊಂದರ ಜೊತೆಗೆ ಸುಲೋಚನಾ ಅಭಿನಯಿಸಿದ ಮಾಧುರಿ ಚಿತ್ರದ ಒಂದು ಜನಪ್ರಿಯ ನೃತ್ಯವನ್ನು ಸೇರಿಸಲಾಗಿತ್ತು ಎಂಬ ಮಾತಿದೆ.
ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಆಕೆ ಗಾಬರಿಗೊಳಗಾಗುವ ಸಂದರ್ಭವೊಂದು ಬಂದೊದಗಿತ್ತು. 1931ರ ವೇಳೆಗೆ ಭಾರತದ ಚಿತ್ರರಂಗ ಹೊಸ ಸೂರ್ಯೋದಯವನ್ನು ಕಂಡಿತು. ಚಿತ್ರೋದ್ಯಮ ಮೂಕಿ ಚಿತ್ರದಿಂದ ಟಾಕಿ (ವಾಕ್ಚಿತ್ರ) ಚಿತ್ರದೆಡೆಗೆ ದಾಪುಗಾಲು ಹಾಕಿತ್ತು. ಹಿಂದಿ ಸ್ಪಷ್ಟವಾಗಿ ಮಾತನಾಡಲು ಬರದ ಯಹೂದಿ ಮಹಿಳೆ ಸುಲೋಚನಾ ಸ್ವಲ್ಪ ತಬ್ಬಿಬ್ಬಾಗಿದ್ದ ಕಾಲ ಅದು. ಆದರೂ ಧೃತಿಗೆಡದೆ, ಒಂದು ವರ್ಷ ಉದ್ಯಮದಿಂದ ದೂರ ಉಳಿದು, ಹಿಂದಿ ಭಾಷೆಯ ಸತ್ವ ಸಂಗ್ರಹಿಸಿ ಮೊದಲಿ ಗಿಂತಲೂ ಶಕ್ತಿಯುತವಾಗಿ ಎದ್ದು ನಿಂತಳು. 1932 ರಲ್ಲಿ ಮೊದಲು ತನ್ನದೇ ಚಿತ್ರವಾದ ಮಾಧುರಿ, ನಂತರ ನಾಲ್ಕು ವರ್ಷಗಳಲ್ಲಿ ಅನಾರ್ಕಲಿ, Wild cat of Bombay ಮತ್ತು ಇಂದಿರಾ ಆ. ಅ. (ಇಂದಿರಾ . ಅ. ಎಂದು ಹೆಸರು ಬದಲಾಯಿಸಿ) ಚಿತ್ರಗಳನ್ನು
ಸಂಭಾಷಣೆಯೊಂದಿಗೆ ಪುನಃ ತೆರೆಗೆ ತಂದಳು. 1933ರಿಂದ 1939ರವರೆಗೆ ತನ್ನ ಪ್ರಿಯಕರ, ಅಂದಿನ ಜನಪ್ರಿಯ ನಾಯಕ
ಡಿನ್ಶಾ ಬಿಲ್ಲಿಮೋರಿಯಾನೊಂದಿಗೆ ಮಾತ್ರ ಅಭಿನಯಿಸಿದಳು.
ಆರು ವರ್ಷಗಳ ಅವಧಿಯಲ್ಲಿ ಅವರಿಬ್ಬರೂ ಅಭಿನಯಿಸಿದ ಒಟ್ಟೂ ಚಿತ್ರಗಳ ಸಂಖ್ಯೆೆ ಏಳು. ಅವೆಲ್ಲವೂ ಯಶಸ್ವೀ ಚಿತ್ರಗಳೆಂದು ಬೇರೆ ಹೇಳಬೇಕಿಲ್ಲವಲ್ಲ. 1935ರ ವೇಳೆಗೆ ತನ್ನದೇ ಸಂಸ್ಥೆೆ ‘ರೂಬಿ ಸ್ಟುಡಿಯೋ’ ಸ್ಥಾಪಿಸಿ ಭಾರತದಲ್ಲಿ ಚಲನಚಿತ್ರ ನಿರ್ಮಾಣಕ್ಕಿಳಿದ ಮಹಿಳೆಯರ ಪಟ್ಟಿಗೆ ಸೇರಿಕೊಂಡಳು. ‘”Sexy symbol of silent movies’ (ಮಾದಕ ನಟಿ, ಮಾದಕ ದ್ರವ್ಯದ ನಟಿ ಅಲ್ಲ!) ಎಂದು ಪ್ರಸಿದ್ಧಿ ಪಡೆದಿದ್ದ ಸುಲೋಚನಾ ಕೇವಲ ಚಲನಚಿತ್ರಗಳಲ್ಲಷ್ಟೇ ಅಲ್ಲದೆ ಅನೇಕ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಳು. ಆ ದಿನಗಳಲ್ಲಿ ಕಲಾವಿದರಿಗೆ ತಿಂಗಳ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತಿತ್ತು. ಇಂದಿಗೆ ಸುಮಾರು 90 ವರ್ಷಗಳ ಹಿಂದೆ ಸುಲೋಚನಾ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಬರೊಬ್ಬರಿ ಐದು ಸಾವಿರ ರುಪಾಯಿಗಳು! ಇದು
ಅಂದಿನ ದಿನಗಳಲ್ಲಿ ಮಹಾರಾಷ್ಟ್ರದ ಗವರ್ನರ್ ಪಡೆಯುತ್ತಿದ್ದ ಸಂಬಳಕ್ಕಿಂತ ಹೆಚ್ಚಾಗಿತ್ತು ಎಂದರೆ ಆಶ್ಚರ್ಯ ಪಡಬೇಡಿ.
ಈ ವೇತನ ಊಟೋಪಚಾರ, ವಸತಿ, ಇತರೆ ಖರ್ಚು ಹೊರತಾಗಿ ಎಂದು ಬೇರೆ ಹೇಳಬೇಕಿಲ್ಲವಲ್ಲ. ಆ ಕಾಲದಲ್ಲಿ ನಾಯಕ
ನಟರಿಗೆ ಸಿಗುತ್ತಿದ್ದ ಗರಿಷ್ಟ ವೇತನ 2500 ರುಪಾಯಿಗಳು! ಕೆಲವು ನಾಯಕ ನಟರೇ ಬೈಸಿಕಲ್ ತುಳಿದು ಚಿತ್ರೀಕರಣಕ್ಕೆ
ಬರುತ್ತಿದ್ದ ಆ ಕಾಲದಲ್ಲಿ ಸುಲೋಚನಾ ಶೆವರ್ಲೆ ಕಾರಿನಲ್ಲಿ ಬರುತ್ತಿದ್ದಳು ಎಂದರೆ ಊಹಿಸಿ. ಅಂದ ಹಾಗೆ ಆ ದಿನಗಳಲ್ಲಿ
ಒಂದು ಚಲನಚಿತ್ರ ನಿರ್ಮಾಣಕ್ಕೆ ತಗುಲುತ್ತಿದ್ದ ಒಟ್ಟೂ ವೆಚ್ಚ 40 ರಿಂದ 50 ಸಾವಿರ ರುಪಾಯಿಗಳು. ಅದರಲ್ಲಿ ಒಂದು
ದೊಡ್ಡ ಪಾಲು ಈ ಕಲಾವಿದೆಯ ವೇತನ. ತಿಂಗಳಿಗೆ 150 ರುಪಾಯಿಯಿಂದ ಆರಂಭಿಸಿ ನಾಲ್ಕರಿಂದ ಐದು ವರ್ಷಗಳ ಅವಧಿ ಯಲ್ಲಿ ಐದು ಸಾವಿರ ರುಪಾಯಿಗಳ ವರೆಗೆ ತಲುಪುವುದೆಂದರೆ ಸಾಮಾನ್ಯದ ಮಾತಲ್ಲ. ಆ ಹೆಸರಿಗೆ ಅಷ್ಟು ಬೇಡಿಕೆ ಇತ್ತು, ಜನರು ಆಕೆಯನ್ನು ಆ ಮಟ್ಟದಲ್ಲಿ ಇಷ್ಟಪಡುತ್ತಿದ್ದರು ಎನ್ನುವುದಕ್ಕೆೆ ಸಾಕ್ಷಿ ಅದು.
‘ಕ್ವೀನ್ ಆಫ್ ರೋಮಾನ್ಸ್’ ಎಂದೇ ಖ್ಯಾತಳಾಗಿದ್ದ ಸುಲೋಚನಾ ಮತ್ತು ಭಾರತದ ಜಾನ್ ಬೆರಿರ್ಮೋ ಎಂದು ಹೆಸರು ಮಾಡಿದ್ದ ಬಿಲ್ಲಿಮೋರಿಯಾ ಜೋಡಿ ಆ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಅದ್ಯಾಕೋ ಅವಳಿಗೆ ಕಂಕಣ ಭಾಗ್ಯ ಮಾತ್ರ ಕೂಡಿ ಬರಲಿಲ್ಲ. 1939ರಲ್ಲಿ ಬಿಲ್ಲಿಮೋರಿಯಾ ನಿಂದ ದೂರವಾದ ಈಕೆ ತನ್ನ ಜೀವನದ ಕೊನೆ ತನಕ ಕುಮಾರಿಯಾಗೇ ಉಳಿದಳು ಎನ್ನುವುದು ಬೇರೆಯ ಮಾತು. ಆದರೆ ಇವರಿಬ್ಬರೂ ಒಬ್ಬರಿಂದೊಬ್ಬರು ದೂರಾದ ದಿನದಿಂದ ಇಬ್ಬರ ವೃತ್ತಿ ಜೀವನದಲ್ಲಿ ಯಶಸ್ಸೂ ನಿಧಾನವಾಗಿ ದೂರ ಸರಿಯಲಾರಂಭಿಸಿತ್ತು. ಅದಾಗಿ ಒಂದೆರಡು ವರ್ಷದಲ್ಲೇ ಬಿಲ್ಲಿಮೋರಿಯಾ ಚಿತ್ರರಂಗದಿಂದಷ್ಟೇ ಅಲ್ಲ, ಲೋಕದಿಂದಲೇ ಮರೆಯಾದ. ಸುಲೋಚನಾ ಮಾತ್ರ ತನ್ನ ಪಯಣ ಮುಂದುವರಿಸಿದ್ದಳು.
ನಂತರದ ವರ್ಷಗಳಲ್ಲಿ, ದೋಸ್ತಾನಾ, ಆಮ್ರಪಾಲಿ, ಜೂಲಿ, ಖಟ್ಟಾ ಮೀಠಾ ಮೊದಲಾದವು ಈಕೆಯ ಸಫಲ ಚಿತ್ರಗಳು. ಈ ನಡುವೆ 1947ರಲ್ಲಿ ದಿಲೀಪ್ ಕುಮಾರ್ ಜತೆ ಜುಗ್ನು ಚಿತ್ರದಲ್ಲಿ ನಟಿಸಿದಳು. ನೈತಿಕತೆಗೆ ವಿರುದ್ಧವಾದ ಕಥಾ ಸಾರಾಂಶ ಹೊಂದಿದ ಚಿತ್ರವೆಂದು ಅಂದಿನ ಮಹಾರಾಷ್ಟ್ರದ ಗೃಹ ಸಚಿವ ಮೊರಾರ್ಜಿ ದೇಸಾಯಿ ಆ ಚಿತ್ರಕ್ಕೆ ನಿರ್ಬಂಧ ಹೇರಿದ್ದರು. ನಂತರದ ದಿನಗಳಲ್ಲಿ ಅದು ಪ್ರದರ್ಶನಗೊಂಡಿತು, ಆ ಮಾತು ಬೇರೆ. ಆದರೆ ವೃದ್ಧಿಸುತ್ತಿದ್ದ ವಯಸ್ಸಿನ ಪ್ರಭಾವ ಮತ್ತು ಹೊಸ
ನಾಯಕಿಯರ ಪ್ರವೇಶದಿಂದ ಈಕೆಯ ಜನಪ್ರಿಯತೆ ಇಳಿಮುಖವಾಗತೊಡಗಿತ್ತು. 1953ರಲ್ಲಿ ಬೀನಾ ರಾಯ್ ಮತ್ತು ಪ್ರದೀಪ್ ಕುಮಾರ್ ನಟಿಸಿದ ಅನಾರ್ಕಲಿ ಚಿತ್ರದ ಬಗ್ಗೆ ನೀವು ಕೇಳಿರಬಹುದು. ‘ಯೇ ಜಿಂದಗೀ ಉಸೀಕಿ ಹೈ, ಜೋ ಕಿಸೀಕಾ ಹೋಗಯಾ’, ‘ಮೊಹಬ್ಬತ್ ಐಸಿ ಧಡಕನ್ ಹೈ’, ‘ಜಿಂದಗಿ ಪ್ಯಾರಕಿ ದೊ ಚಾರ್ ಘಡಿ’, ‘ಆಜಾ ಅಬ್ ತೊ ಆಜಾ’ ಮೊದಲಾದ ಹನ್ನೊಂದು ಹಿಟ್ ಹಾಡುಗಳಿದ್ದ ಸಿನಿಮಾ ಅದು.
ಕುಸಿಯುತ್ತಿದ್ದ ತನ್ನ ಅಸ್ತಿತ್ವವನ್ನು ಹಿಡಿದು ನಿಲ್ಲಿಸಲು ಆ ಚಿತ್ರದಲ್ಲಿ ನಾಯಕ ಸಲೀಂನ ತಾಯಿಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಮೂರನೆಯ ಅನಾರ್ಕಲಿ ಚಿತ್ರದಲ್ಲಿ ಕಾಣಿಸಿಕೊಂಡು ದಾಖಲೆ ಬರೆದಳು. ಸುಮಾರು ಐದು ದಶಕಗಳ ಕಾಲ ಭಾರತೀಯ ಚಿತ್ರಪ್ರೇಮಿಗಳನ್ನು ರಂಜಿಸಿದ ಆ ನಟಿಯ ಅಂತ್ಯ ಮಾತ್ರ ದುರಂತ. 1983ರಲ್ಲಿ ಆಕೆ ಮುಂಬೈನ ಸಣ್ಣ ಫ್ಲ್ಯಾಟ್‌ನಲ್ಲಿ ಅನಾಥಳಾಗಿ ಕೊನೆಯುಸುರೆಳೆದಳು. 76ರ ವಯೋವೃದ್ಧೆ ಕೊನೆಯುಸುರೆಳೆಯುವಾಗ ಆಕೆಯ ಬಳಿ ಹಣವಿರ ಲಿಲ್ಲ, ಯಾವ ಆಸ್ತಿಯೂ ಇರಲಿಲ್ಲ, ಸುತ್ತ ಮುತ್ತ ತನ್ನವರೆಂದು ಯಾರೂ ಇರಲಿಲ್ಲ. ಕೊನೆ ಘಳಿಗೆಯಲ್ಲಿ ಇದ್ದದ್ದು ಬ್ಯಾಂಕ್ ನಿಂದ ಪಡೆದ ಸಾಲ ಮಾತ್ರ. ಚಿತ್ರರಂಗದಲ್ಲಿ ಸೋಲರಿಯದೇ ಮೆರೆದ ತಾರೆ ಜೀವನದ ಕೊನೆಯ ಘಟ್ಟದಲ್ಲಿ ದಿಕ್ಕೆಟ್ಟು
ಹೋದದ್ದು ಮಾತ್ರ ವಿಪರ್ಯಾಸ.
ನಾನು ತಿಳಿದಂತೆ, ಭಾರತದ ಚಿತ್ರರಂಗದ ಒಳಗಿದ್ದು ಅನೇಕ ಪ್ರಥಮಗಳಿಗೆ ಸಾಕ್ಷಿಯಾದ ಏಕೈಕ ಕಲಾವಿದೆ ಸುಲೋಚನಾ. ಮೂಕಚಿತ್ರಗಳಿಂದ ಆರಂಭಿಸಿ, ಮಾತನಾಡುವ, ವರ್ಣರಂಜಿತ ಚಿತ್ರಗಳನ್ನು ಕಂಡವಳು ಈಕೆ. ಅಷ್ಟೇ ಅಲ್ಲದೆ, ಮೊದಲ ಹಾಡು, ಚುಂಬನದ ದೃಶ್ಯ, ಕನಸಿನ ದೃಶ್ಯ ವಿದೇಶದಲ್ಲಿ ಚಿತ್ರೀಕರಣ, ಕೃತಕ ಬೆಳಕಿನ ಅಳವಡಿಕೆ, ಅ ಸರ್ಟಿಫಿಕೇಟ್ ಪಡೆದ ಚಿತ್ರ ಎಲ್ಲವನ್ನೂ ಕಂಡವಳು ಈಕೆ. ಚಲನಚಿತ್ರ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗೆ ಒಬ್ಬ ವ್ಯಕ್ತಿಗೆ ನೀಡಬಹುದಾದ ಅತ್ಯುನ್ನತ ಗೌರವ, ದಾದಾ ಸಾಹೇಬ ಫಾಲ್ಕೆೆ ಪ್ರಶಸ್ತಿಯನ್ನು 1973ರಲ್ಲಿ ಪಡೆದ ಏಕೈಕ ವಿದೇಶಿ ಕಲಾವಿದೆ. 2013ರಲ್ಲಿ ಭಾರತೀಯ
ಚಿತ್ರರಂಗದ 100ನೇ ವರ್ಷಾಚರಣೆ ಯ ಸಂದರ್ಭದಲ್ಲಿ ಅನಾವರಣಗೊಂಡ ಅಂಚೆ ಚೀಟಿಯಲ್ಲಿ ಸುಲೋಚನಾಳ ಚಿತ್ರವನ್ನು ಮುದ್ರಿಸಲಾಗಿದೆ.
ಭಾರತೀಯ ಸಾಂಸ್ಕೃತಿಕ ಮತ್ತು ಮನರಂಜನಾ ಉದ್ಯಮಕ್ಕೆ ಯಹೂದಿಗಳು ನೀಡಿದ ಕೊಡುಗೆಯನ್ನು ಪ್ರದರ್ಶಿಸಲು 2017ರಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರ ‘ಶಲೋಮ್ ಬಾಲಿವುಡ್’ನಲ್ಲಿ ಈಕೆಯ ವಿಶಿಷ್ಟತೆಯನ್ನು ಬಣ್ಣಿಸಲಾಗಿದೆ. ಭಾರತೀಯ ಚಿತ್ರರಂಗದಲ್ಲಿ
ರಮೋಲಾ, ಪ್ರಮಿಳಾ, ನಾದಿರಾ, ಡೇವಿಡ್ ಮೊದಲಾದ ಅನೇಕ ಯಹೂದಿಗಳು ನಟಿಸಿ ಹೆಸರು ಮಾಡಿದ್ದರೂ, ಸುಲೋಚನಾ ಅವರೆಲ್ಲರಿಗಿಂತಲೂ ಹೆಚ್ಚು ಖ್ಯಾತಿ ಗಳಿಸಿದ್ದಳು. ಇಂತಹ ಅನೇಕ ಪ್ರತಿಭೆಗಳು ನಮ್ಮಲ್ಲಿ ಆಗಿ ಹೋಗಿದ್ದಾರೆ. ಇಂದಿನ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅಸಾಮಾನ್ಯ ಪ್ರತಿಭೆಗಳ ಚಿತ್ರಗಳನ್ನು ಈಗ ಮತ್ತೊಮ್ಮೆ ನೋಡಿ, ಅಲ್ಪ ಸ್ವಲ್ಪವಾದರೂ ಅವರ
ವಿಷಯ ತಿಳಿದುಕೊಂಡರೆ ಅದೇ ಅವರಿಗೆ ಸಲ್ಲಿಸುವ ಗೌರವವೂ ಆದೀತು.