Monday, 16th September 2024

ಆಂತರಿಕ ವಿಚಾರಗಳ ಬಗ್ಗೆ ವಿದೇಶಿ ನಾಯಕರಿಗೇನು ಅಧಿಕಾರ ?

ಅವಲೋಕನ 

ಗಣೇಶ್‌ ಭಟ್, ವಾರಣಾಸಿ

ಭಾರತ ದೇಶವು ಸಾರ್ವಭೌಮ ರಾಷ್ಟ್ರವಾಗಿದೆ. ಭಾರತವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರತಿ ಐದು ವರ್ಷ ಗಳಿಗೊಮ್ಮೆ ಭಾರತದ 90 ಕೋಟಿಯಷ್ಟು ಮತದಾರರು ತಮ್ಮ ಸರಕಾರವನ್ನು ಮತದಾನದ ಮೂಲಕ ಆರಿಸುತ್ತಾರೆ.

ಹಳೆಯ ಕಾನೂನುಗಳ ಸುಧಾರಣೆ ಅಥವಾ ಹೊಸ ಕಾನೂನುಗಳ ರೂಪೀಕರಣವು ಸಂಸತ್ತಿನ ಮೂಲಕವೇ ಆಗುತ್ತದೆ. ಕಾನೂನು ಸುಧಾರಣೆ ಹಾಗೂ ರೂಪೀಕರಣದ ವಿಷಯವಾಗಿ ತಜ್ಞರು ನೀಡಿದ ಸಲಹೆಗಳು ಸರಕಾರದ ಸಂಪುಟ ಸಭೆಯಲ್ಲಿ  ಅನುಮೋದನೆ ಗೊಳಲ್ಪಟ್ಟು ನಂತರ ಲೋಕಸಭೆಯ ಮುಂದಿರಿಸಲ್ಪಡುತ್ತದೆ. ಲೊಕಸಭೆಯಲ್ಲಿ ವಿಸ್ತೃತ ಚರ್ಚೆಗಳು ನಡೆದು ಸರಕಾರದ ಎಂಪಿ ಗಳು ಹಾಗೂ ವಿರೋಧ ಪಕ್ಷದ ಎಂಪಿಗಳ ಸಲಹೆ ಸೂಚನೆಗಳನ್ನು ಸೇರಿಸಿಕೊಂಡು, ಕೆಲವು ಬಾರಿ ಎಲ್ಲಾ ಸದಸ್ಯರ ಸಂಪೂರ್ಣ ಸಮ್ಮತಿಯೊಂದಿಗೆ ಹಾಗೂ ಕೆಲವು ಬಾರಿ ಮತದಾನ ನಡೆದು ಬಹುಮತದೊಂದಿಗೆ ವಿಧೇಯಕಗಳು ಅಂಗೀಕರಿಸಲ್ಪಡುತ್ತವೆ.

ನಂತರ ಈ ಕಾಯಿದೆಯ ಬಗ್ಗೆೆ ರಾಜ್ಯ ಸಭೆಯಲ್ಲೂ ಚರ್ಚೆ ನಡೆದು ಸರ್ವಾನುಮತ ಅಥವಾ ಬಹುಮತಗಳೊಂದಿಗೆ ಅಂಗೀಕರಿ
ಸಲ್ಪಡುತ್ತವೆ. ಹೀಗೆ ಲೊಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅನುಮೋದಿಸಲ್ಪಡುವ ವಿಧೇಯಕವು ರಾಷ್ಟ್ರಪತಿಯವರ ಅಂಗೀ ಕಾರಕ್ಕೆ ಕಳುಹಿಸಲ್ಪಡುತ್ತದೆ. ರಾಷ್ಟ್ರಪತಿಗಳಿಗೆ ವಿಧೇಯಕವು ತೃಪ್ತಿ ನೀಡದಿದ್ದರೆ ಪುನರ್ ವಿಮರ್ಶೆ ನಡೆಸಲು ಹಿಂದಕ್ಕೆೆ ಕಳುಹಿಸಿದ ಉದಾಹರಣೆಗಳೂ ಇವೆ.

ರಾಷ್ಟ್ರಪತಿಯವರಿಗೂ ಸಮ್ಮತವಾಗಿ ಅವರ ಮುದ್ರೆ ಸಿಕ್ಕಿದ ನಂತರವಷ್ಟೇ ವಿಧೇಯಕವು ಅಧಿಕೃತ ಕಾನೂನಾಗಿ ಜಾರಿಯಾಗು ತ್ತದೆ. ಒಂದು ವೇಳೆ ಸುಗ್ರೀವಾಜ್ಞೆಯ ಮೂಲಕ ಕಾನೂನನ್ನು ಜಾರಿಗೆ ತಂದರೂ ಅದನ್ನು ನಿರ್ದಿಷ್ಟ ಅವಧಿಯೊಳಗೆ ಸಂಸತ್ತಿ ನಲ್ಲಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಹೀಗಾಗಿ ಭಾರತದಲ್ಲಿ ಯಾವುದೇ ಕಾಯಿದೆಗಳು ರೂಪುಗೊಂಡು ಜಾರಿಯಾಗುವು ದಿದ್ದರೂ ಅದು ಭಾರತೀಯ ಸಂವಿಧಾನದ ಚೌಕಟ್ಟಿನ ಒಳಗೆಯೇ ಆಗುತ್ತದೆ. ಇದನ್ನು ಪ್ರಶ್ನಿಸುವ ಹಕ್ಕು ವಿದೇಶಗಳಿಗೆ ಇಲ್ಲ ಹಾಗೂ ವಿದೇಶಿ ನಾಯಕರುಗಳಿಗೂ ಇಲ್ಲ.

ಭಾರತದಲ್ಲಿ ಇತ್ತೀಚೆಗೆ ಜಾರಿಗೆ ಬಂದಿರುವ ಹೊಸ ಕೃಷಿ ವಿಧೇಯಕದ ಬಗ್ಗೆ ರೈತರು ಅದರಲ್ಲೂ ಪಂಜಾಬ್‌ನ ಒಂದಿಷ್ಟು ರೈತರ
ಆಕ್ಷೇಪವಿದೆ. ಪಂಜಾಬ್‌ನ ರೈತರು ದೆಹಲಿಯಲ್ಲಿ ಪ್ರತಿಭಟನೆಯನ್ನೂ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರೈತರು ಭಾರತ್ ಬಂದ್ ಅನ್ನೂ ಆಚರಿಸಿದ್ದಾರೆ. ಕಾಂಗ್ರೆಸ್, ಅಕಾಲಿದಳ, ಕಮ್ಯುನಿಸ್ಟ್‌ ಪಕ್ಷಗಳು ಹಾಗೂ ಕೆಲವು ಪ್ರಾದೇಶಿಕ ಪಕ್ಷಗಳು ಬಂದ್‌ಗೆ ಕೈಜೋಡಿ ಸಿವೆ.

ಹೊಸ ಕೃಷಿ ವಿಧೇಯಕವನ್ನು ಒಪ್ಪುವುದು ಅಥವಾ ವಿರೋಧಿಸಲು ಭಾರತದ ರಾಜಕೀಯ ಪಕ್ಷಗಳೂ, ರೈತರೂ ಸೇರಿದಂತೆ ಎಲ್ಲರಿಗೂ ಅವಕಾಶವಿದೆ. ಬದಲಾವಣೆಗೆ ಒತ್ತಾಯವನ್ನು ಹೇರುವ ಎಲ್ಲ ಅವಕಾಶಗಳು ಭಾರತದ ಸಾಮಾನ್ಯ ಪ್ರಜೆಗಳಿಗೆ ಇದೆ. ಹಾಗೆಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡುವಿಗೆ ಭಾರತದ ಕಾನೂನು ವ್ಯವಸ್ಥಯ ಬಗ್ಗೆ ಮೂಗು ತೂರಿಸುವ ಅವಕಾಶವನ್ನು ಕೊಟ್ಟವರು ಯಾರು? ಭಾರತದ ಹೊಸ ಕೃಷಿ ಕಾಯಿದೆಯ ವಿರುದ್ಧವಾಗಿ ರೈತರು ಪ್ರತಿಭಟಿಸುತ್ತಿರುವ ವಿಷಯವಾಗಿ ಡಿಸೆಂಬರ್ 1ರಂದು ಹೇಳಿಕೆ ಕೊಟ್ಟಿರುವ ಜಸ್ಟಿನ್ ಟ್ರುಡು ಭಾರತದ ರೈತರ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ಹೇಳಿಕೆ ನೀಡಿದ್ದರು.

ಕೆನಡಾ ಸರಕಾರವು ಶಾಂತಿಯುತ ಪ್ರತಿಭಟನಕಾರರನ್ನು ಯಾವತ್ತೂ ಬೆಂಬಲಿಸಲಿದೆ ಎಂದೂ ಹೇಳಿದ್ದರು. ಭಾರತದ ರೈತರ ಪ್ರತಿಭಟನೆಯ ವಿಚಾರವಾಗಿ ತಾನು ನೀಡಿದ್ದ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ ಟ್ರುಡು. ಕೆನಡಾದ ಪ್ರಧಾನಿಯ ಹೇಳಿಕೆಗೆ ಪ್ರತಿಕಿಯಿಸಿದ ಭಾರತದ ವಿದೇಶಾಂಗ ವಕ್ತಾರರು ಕೆನಡಾದ ಪ್ರಧಾನಿಯ ಹೇಳಿಕೆಯು ತೀರಾ ಅನಪೇಕ್ಷಿತವಾದುದು ಹಾಗೂ ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಜಸ್ಟಿನ್ ಟ್ರುಡು ಅವರ ಹೇಳಿಕೆಯಿಂದ ಕೆನಡಾದಲ್ಲಿ ನೆಲೆಸಿರುವ ಖಾಲಿಸ್ತಾನ್ ತೀವ್ರವಾದಿಗಳು ಕೆನಡಾದ ಭಾರತೀಯ ದೂತಾವಾಸದ ಎದುರು ಪ್ರತಿಭಟನೆಯನ್ನು ನಡೆಯಿಸಲು ಹೆಚ್ಚು ಉತ್ತೇಜನವನ್ನು ನೀಡಿದಂತಾಗಿದೆ ಎಂದೂ ಭಾರತೀಯ ವಿದೇಶಾಂಗ ಇಲಾಖೆ ದೂರಿದೆ. ಕೆನಡಾದ ಈ ವರ್ತನೆಯಿಂದ ಅಸಮಧಾನಗೊಂಡಿರುವ ಭಾರತ ಸರಕಾರದ ವಿದೇಶಾಂಗ ಸಚಿವರಾದ ಸುಬ್ರಮಣ್ಯಂ ಜೈಶಂಕರ್ ಅವರು ಕೆನಡಾ ಸರಕಾರವು ಕೋವಿಡ್ – 19 ತಡೆಗಟ್ಟುವ ವಿಚಾರವಾಗಿ ನಡೆಸಿದ
ವೀಡಿಯೋ ಕಾನ್ಫರೆನ್ಸ್‌‌ಗೆ ಗೈರುಹಾಜರಾಗಿದ್ದಾರೆ.

ಜತೆಗೆ ಭಾರತದಲ್ಲಿರುವ ಕೆನಡಾ ದೂತಾವಾಸದ ರಾಯಭಾರಿಯನ್ನು ಕರೆಯಿಸಿ ಎಚ್ಚರಿಕೆಯನ್ನೂ ಕೊಡಲಾಗಿದೆ. ಜಸ್ಟಿನ್ ಟ್ರುಡು ಅವರ ನಿಲುವಿನಿಂದಾಗಿ ಉತ್ತೇಜನವನ್ನು ಪಡೆದ ಕೆನಡಾದಲ್ಲಿ ನೆಲೆಸಿರುವ ಸಿಖ್ಖರು ಕೆನಡಾದ ವಿವಿಧೆಡೆಗಳಲ್ಲಿ ಭಾರತದ ನೂತನ ಕೃಷಿ ಕಾಯಿದೆಯ ವಿರುದ್ಧವಾಗಿ ಪ್ರತಿಭಟನೆಗಳನ್ನು ನಡೆಯಿಸುತ್ತಿದ್ದಾರೆ. ಕೆನಡಾದಲ್ಲಿ ಸುಮಾರು 5 ಲಕ್ಷಗಳಷ್ಟು ಸಿಖ್ಖರು ನೆಲೆಸಿದ್ದಾರೆ.

ಕೆನಡಾದಲ್ಲಿ ಇರುವ ಸಿಖ್ಖರ ಪ್ರಮಾಣ ಅಲ್ಲಿನ ಒಟ್ಟು ಜನಸಂಖ್ಯೆಯ ಶೇ.1.4ದಷ್ಟು. ಇವರಲ್ಲಿ ಬಹಳಷ್ಟು ಮಂದಿ ಖಾಲಿಸ್ತಾನ್ ಬೆಂಬಲಿಗರು ಇದ್ದಾರೆ. ಟ್ರುಡು ಸರಕಾರವು 2015ರಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ಮಂದಿ ಸಿಖ್ಖ್‌ ಸಮುದಾಯದ ವ್ಯಕ್ತಿಗಳನ್ನು ತನ್ನ ಸರಕಾರದ ಕ್ಯಾಬಿನೆಟ್ ಗೆ ಸೇರಿಸಿಕೊಂಡಿದೆ. ಟ್ರುಡುವಿನ ಕ್ಯಾಬಿನೆಟ್‌ನ ಮಂತ್ರಿಗಳು ಖಾಲಿಸ್ತಾನದ ಪ್ರತಿಪಾದಕರ ಜತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.

ಖಾಲಿಸ್ತಾನಿ ಬೆಂಬಲಿಗರು ಟೊರೆಂಟೋದಲ್ಲಿ ನಡೆಸಿದ ಖಾಲ್ಸಾ ದಿನಾಚರಣೆಯಲ್ಲಿ ಜಸ್ಟಿನ್ ಟ್ರುಡು ಖುದ್ದಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಖಾಲಿಸ್ತಾನಿ ಉಗ್ರವಾದಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೇನ ಪ್ರತಿಮೆಯನ್ನೂ ಇರಿಸಲಾಗಿತ್ತು ಹಾಗೂ ಖಾಲಿಸ್ತಾನ್ ಧ್ವಜವನ್ನು ಹಾರಿಸಲಾಗಿತ್ತು. ಕೆನಡಾದಲ್ಲಿ ನೆಲೆಸಿರುವ ಸಿಖ್ಖರ ವೋಟ್‌ಗೆ ಬೇಕಾಗಿ ಟ್ರುಡು ಸರಕಾರವು ಸಿಖ್ ತೀವ್ರವಾದಿಗಳನ್ನು ಅದರಲ್ಲೂ ಖಾಲಿಸ್ತಾನ್ ವಾದಿಗಳನ್ನು ಬೆಂಬಲಿಸುತ್ತಿದೆ. ಭಾರತದಲ್ಲಿ ಪಂಜಾಬಿಗಳು ನಡೆಸುತ್ತಿರುವ ರೈತರ ಹೋರಾಟಕ್ಕೂ ಟ್ರುಡು ಬೆಂಬಲ ನೀಡಿರುವುದು ಕೆನಡದ ಸಿಖ್ಖರ ತುಷ್ಟೀಕರಣದ ಭಾಗವೇ!

ಟ್ರುಡು ಸರಕಾರದ ಖಾಲಿಸ್ತಾನ್ ಬೆಂಬಲ ನೀತಿಯ ಬಗ್ಗೆ ಈ ಹಿಂದೆಯೇ ಭಾರತ ಸರಕಾರವು ತನ್ನ ಅಸಮಾಧಾನವನ್ನು ವ್ಯಕ್ತ ಪಡಿಸಿತ್ತು. 2018ರಲ್ಲಿ ಜಸ್ಟಿನ್ ಟ್ರುಡು ಕುಟುಂಬಸಮೇತರಾಗಿ ಖಾಸಗಿ ಭೇಟಿಗಾಗಿ ಭಾರತಕ್ಕೆ ಬಂದಿದ್ದಾಗ ಅವರಿಗೆ ಭಾರತ ಸರಕಾರವು ಉದ್ದೇಶ ಪೂರ್ವಕವಾಗಿಯೇ ರಾಜ ಮರ್ಯಾದೆಯ ಸ್ವಾಗತವನ್ನು ಕೋರಿರಲಿಲ್ಲ. ಟ್ರುಡು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿಯವರಾಗಲೀ, ಅಂದಿನ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರಾಗಲೀ, ವಿದೇಶಾಂಗ ರಾಜ್ಯ ಸಚಿವರಾಗಿದ್ದ ಜನರಲ್ ವಿ.ಕೆ.ಸಿಂಗರಾಗಲೀ ತೆರಳದೆ ಅವರ ಸ್ವಾಗತಕ್ಕೆ ಕೃಷಿಕರ ಕಲ್ಯಾಣ ರಾಜ್ಯ ಸಚಿವರಾದ ಗಜೇಂದ್ರ ಶೇಖಾವತ್ ಅವರನ್ನು ಕಳುಹಿಸಲಾಗಿತ್ತು.

ಟ್ರುಡು ತಾಜ್ ಮಹಲ್ ನೊಡಲು ಆಗ್ರಾಗೆ ತೆರಳಿದ್ದಾಗಲೂ ಅವರನ್ನು ಸ್ವಾಗತಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥರು ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. 2017ರಲ್ಲಿ ಕೆನಡಾದ ರಕ್ಷಣಾ ಮಂತ್ರಿಗಳಾಗಿರುವ ಸಿಖ್ಖ್‌ ಸಮುದಾಯದ ಹರ್ಜಿತ್ ಸಿಂಗ್
ಸಜ್ಜನ್ ಅವರು ಅಮೃತಸರಕ್ಕೆ ಬಂದಿದ್ದಾಗ ಅವರನ್ನು ಭೇಟಿಯಾಗಲು ಪಂಜಾಬ್‌ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ನಿರಾಕರಿಸಿದ್ದರು.

ಹರ್ಜಿತ್ ಸಿಂಗ್ ಸಜ್ಜನ್ ಖಾಲಿಸ್ತಾನ್ ಸಮರ್ಥಕರಾಗಿರುವುದು ಅಮರಿಂದರ್ ಸಿಂಗರ ಸಿಟ್ಟಿಗೆ ಕಾರಣವಾಗಿತ್ತು. ತನ್ನ ರಾಜಕೀಯ ಲಾಭಕ್ಕೋಸ್ಕರ ಕೆನಡಾದ ಲಿಬರಲ್ ಪಕ್ಷದ ಜಸ್ಟಿನ್ ಟ್ರುಡು ಭಾರತದೊಂದಿಗಿನ ಸಂಬಂಧವನ್ನು ಹಾಳುಮಾಡಿಕೊಳ್ಳುವುದಕ್ಕೂ
ಹಿಂಜರಿದಿಲ್ಲ. ಇಂದು ಭಾರತದ ರೈತರ ಹೋರಾಟವನ್ನು ಬೆಂಬಲಿಸುತ್ತಿರುವುದಾಗಿ ಹೇಳಿರುವ ಜಸ್ಟಿನ್ ಟ್ರುಡುವಿನ ಸರಕಾರ 2 ವರ್ಷಗಳ ಹಿಂದೆ ಭಾರತ ಸರಕಾರವು ಕೃಷಿ ಸಹಾಯಧನ ಕೊಡುವುದರ ವಿರುದ್ಧ ಹಾಗೂ ಭಾರತದಲ್ಲಿ ಆಹಾರ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿರುವುದರ ವಿರುದ್ಧವಾಗಿ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಿತ್ತು!

ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಇನ್ನೋರ್ವ ವಿದೇಶೀ ನಾಯಕ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್
ಎರ್ಡೋಗಾನ್. ಎರ್ಡೋಗಾನ್ ನವ ಒಟ್ಟೊಮನ್ ಸಾಮ್ರಾಜ್ಯದ ಮರುಸ್ಥಾಪನೆಯ ಪ್ರತಿಪಾದಕ. ಜಾಗತಿಕ ಇಸ್ಲಾಮಿಕ್ ದೇಶಗಳ
ನಾಯಕತ್ವವನ್ನು ವಹಿಸುವ ಕನಸನ್ನು ಕಾಣುತ್ತಿರುವ ವ್ಯಕ್ತಿ. ಇಸ್ಲಾಮಿಕ್ ಉಗ್ರವಾದಿಗಳ ಬೆಂಬಲಿಗ. ಇಂಥ ವ್ಯಕ್ತಿ  ಸಹಜವಾ ಗಿಯೇ ಕಾಶ್ಮೀರ ಕುರಿತಾದ ಪಾಕಿಸ್ತಾನದ ನಿಲುವನ್ನು ಸಮರ್ಥಿಸುತ್ತಿದ್ದಾನೆ. ಈ ವರ್ಷದ ವಿಶ್ವ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎರ್ಡೋಗಾನ್ ಕಾಶ್ಮೀರ ಸಮಸ್ಯೆಯು ಜ್ವಲಂತ ಸಮಸ್ಯೆಯಾಗಿದೆ ಎಂದು ಹೇಳಿದ್ದಾನೆ.

ಕಾಶ್ಮೀರದ ಸಮಸ್ಯೆಯು ದಕ್ಷಿಣ ಏಷ್ಯಾದ ಶಾಂತಿ ಹಾಗೂ ಸ್ಥಿರತೆಯನ್ನು ಕದಡುತ್ತಿದೆ ಎಂದೂ ಹೇಳಿದ್ದಾನೆ. ಕಳೆದ ವರ್ಷ ಭಾರತ ಸರಕಾರವು ಕಾಶ್ಮೀರದ ಆರ್ಟಿಕಲ್ 370 ನ್ನು ರದ್ದು ಮಾಡಿದ ಸಂದರ್ಭದಲ್ಲೂ ವಿಶ್ವಸಂಸ್ಥೆೆಯ 74 ನೇ ಸಾಮಾನ್ಯ ಸಭೆಯ
ಭಾಷಣದಲ್ಲಿ ಎರ್ಡೋಗಾನ್ ಭಾರತದ ನಡೆಯನ್ನು ಟೀಕಿಸಿದ್ದ. ಎರ್ಡೋಗಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ವಿಶ್ವಸಂಸ್ಥೆೆ ಯಲ್ಲಿರುವ ಭಾರತದ ಖಾಯಂ ಪ್ರತಿನಿಧಿಯು ಕಾಶ್ಮೀರವು ಭಾರತದ ಭಾಗವಾಗಿದ್ದು ಎರ್ಡೋಗಾನ್ ಹೇಳಿಕೆಯು ಭಾರತದ ಆಂತರಿಕ ವಿಷಯದ ಮೇಲೆ ಮಾಡಿದ ಹಸ್ತಕ್ಷೇಪವಾಗಿದೆ, ಎರ್ಡೋಗಾನ್ ಹೇಳಿಕೆಯು ಸ್ವೀಕಾರಾರ್ಹವಲ್ಲ ಹಾಗೂ ಭಾರತದ ಸಾರ್ವಭೌಮತ್ವವನ್ನು ಗೌರವಿಸಲು ಟರ್ಕಿಯು ಕಲಿತುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ್ದ ಎರ್ಡೋಗಾನ್ ಭಾರತದಲ್ಲಿ ಮುಸಲ್ಮಾನರ ಹತ್ಯಾ ಕಾಂಡವು ನಡೆಯುತ್ತಿದೆ ಎಂದು ಹೇಳಿದ್ದಾನೆ. ಭಾರತವು ಟರ್ಕಿಯ ಈ ಎಲ್ಲಾ ನಡೆಗಳಿಂದ ತೀವ್ರವಾಗಿ ಅಸಮಾಧಾನ ಗೊಂಡಿದ್ದು ಅದರ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಿದೆ. ಭಾರತವು ಟರ್ಕಿಗೆ ರಕ್ಷಣಾ ವಸ್ತುಗಳ ಪೂರೈಕೆಯನ್ನು ನಿಲ್ಲಿಸಿದೆ ಹಾಗೂ ಟರ್ಕಿಯಿಂದ ಸ್ಟೀಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವುದರ ವಿರುದ್ಧ ನಿರ್ಬಂಧಗಳನ್ನು ಹೇರಿದೆ.

ಭಾರತೀಯರು ಟರ್ಕಿಗೆ ಪ್ರವಾಸಕ್ಕೆ ಹೋಗುವುದರ ಮೇಲೂ ಭಾರತವು ಪ್ರಯಾಣ ನಿರ್ಬಂಧವನ್ನು ಹೇರಿದೆ. ಈ ನಡುವೆ ಟರ್ಕಿಯು ಪಾಕಿಸ್ತಾನಕ್ಕೆ ನೆರವಾಗುವ ಉದ್ದೇಶದಿಂದ ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಯಿಸಲು ತಲಾ 2000 ಡಾಲರ್‌ಗಳನ್ನು ಕೊಟ್ಟು ಬಾಡಿಗೆ ಸೈನಿಕರನ್ನು ಕಳುಹಿಸುತ್ತಿದೆ ಎನ್ನುವ ವರದಿಗಳೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಟರ್ಕಿ ಹಾಗೂ ಅದರ ಅಧ್ಯಕ್ಷ ಎರ್ಡೋಗಾನ್ ಭಾರತ ವಿರೋಧಿ ಕೃತ್ಯವನ್ನು ಎಸಗುತ್ತಿರುವಾಗ, ಬಾಲಿವುಡ್ ನಟ ಅಮೀರ್ ಖಾನ್ ಎರ್ಡೋಗಾನ್ನ ಪತ್ನಿ ಹಾಗೂ ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೋಗಾನ್ ಅನ್ನು ಭೇಟಿಯಾಗಿದ್ದು ಭಾರತೀ ಯರಿಗೆ ಅಷ್ಟು ಹಿತವಾಗಿಲ್ಲ. ಕಾಶ್ಮೀರದ ವಿಚಾರವಾಗಿ ಭಾರತದ ತಂಟೆಗೆ ಬಂದು ನಂತರ ತನಗಾಗಿರುವ ಗಾಯವನ್ನು ನೆಕ್ಕಿ ಕೊಳ್ಳುತ್ತಿರುವ ಇನ್ನಂದು ದೇಶ ಮಲೇಷ್ಯಾ.

2019ರಲ್ಲಿ ವಿಶ್ವ ಸಂಸ್ಥೆಯ ಅಧಿವೇಶನದಲ್ಲಿ ಮಾತನಾಡಿದ್ದ ಮಲೇಷ್ಯಾ ಪ್ರಧಾನಿಯಾಗಿದ್ದ ಮೊಹಾರ್ತೀ ಮೊಹಮ್ಮದ್ ಭಾರತವು ಜಮ್ಮು ಕಾಶ್ಮೀರದಲ್ಲಿ ಅತಿಕ್ರಮಣ ನಡೆಸಿದೆ ಎಂದು ಆರೋಪಿಸಿದ್ದರು. ಇದರಿಂದಾಗಿ ಭಾರತ ಹಾಗೂ ಮಲೇಷ್ಯಾದ ಸಂಬಂಧವು ಹದಗೆಟ್ಟು ಭಾರತವು ಮಲೇಷ್ಯಾದಿಂದ ಬರುವ ತಾಳೆಎಣ್ಣೆಯ ಆಮದನ್ನು ತಡೆಹಿಡಿದಿದೆ. ಮಲೇಷ್ಯಾದ ತಾಳೆ ಎಣ್ಣೆಯ ಬಹುದೊಡ್ಡ ಗ್ರಾಹಕ ದೇಶವಾಗಿದ್ದ ಭಾರತದ ಎಲ್ಲಾ ಆಮದುದಾರ ಸಂಸ್ಥೆಗಳು ಮಲೇಷ್ಯಾದ ತಾಳೆ ಎಣ್ಣೆಯ ಆಯಾತವನ್ನು ಬಹಿಷ್ಕರಿಸಿದುದರಿಂದ ಮಲೇಷ್ಯಾ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.

ಅಲ್ಲಿಂದ ಪೆಟ್ರೋಲಿಯಂ, ಅಲ್ಯುಮಿನಿಯಂ ಮೊದಲಾದ ವಸ್ತುಗಳನ್ನೂ ಈಗ ಭಾರತಕ್ಕೆ ತರಲಾಗುತ್ತಿಲ್ಲ. ಇದಕ್ಕೆ ಕಾರಣೀಭೂತ ರಾದ ಮೊಹಾರ್ತೀ ಮಲೇಷ್ಯಾದಲ್ಲಿಯೂ ಭಾರೀ ಟೀಕೆಗೂ ಒಳಗಾದರು. 2020ರಲ್ಲಿ ಮಲೇಷ್ಯಾದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರದಲ್ಲಿ ಮೊಹಾರ್ತೀ ಮೊಹಮ್ಮದ್ ತನ್ನ ಅಧಿಕಾರವನ್ನು ಕಳೆದುಕೊಂಡು ಪ್ರಧಾನಮಂತ್ರಿ ಪದವಿಯನ್ನು ಕಳೆದು ಕೊಂಡಿದ್ದಾರೆ. ಇತ್ತೀಚೆಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಮೊಹಾರ್ತಿ ತಾನು ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ್ದು ಭಾರತ ಹಾಗೂ ಮಲೇಷ್ಯಾದ ಸಂಬಂಧಗಳಲ್ಲಿ ಬಿರುಕು ಬಿಡಲು ಕಾರಣವಾಯಿತು ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಭಾರತವನ್ನು ಎದುರು ಹಾಕಿಕೊಂಡರೆ ಏನಾಗಬಹುದು ಎಂಬುದನ್ನು ಪ್ರತ್ಯಕ್ಷವಾಗಿ ಮಲೇಷ್ಯಾ ಅನುಭವಿಸಿದೆ. ಚೀನಾವಂತೂ ಮೊದಲಿನಿಂದಲೂ ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಪರವಾಗಿಯೇ ನಿಲ್ಲುತ್ತಿದೆ. ಗಾಲ್ವಾನ್ ಸಂಘರ್ಷದ
ಹಿನ್ನೆಲೆಯಲ್ಲಿ ಭಾರತವು ಭದ್ರತಾ ದೃಷ್ಟಿಯಿಂದ ಚೀನಾದ ಟಿಕ್ ಟಾಕ್, ಪಬ್ ಜಿ ಸೇರಿದಂತೆ 224 ಆ್ಯಪ್‌ಗಳನ್ನು ನಿಷೇಧಿಸಿದೆ.

ಚೀನಾದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡುವುದರ ಮೇಲೆ ನಿರ್ಬಂಧವನ್ನು ಹೇರಲಾಗಿದೆ. ಚೀನಾ ವಸ್ತುಗಳ ಆಯಾತದ ಮೇಲೆ ಕಡಿವಾಣವನ್ನು ಹಾಕಲಾಗಿದೆ. ಗಾಲ್ವಾನ್ ಸಂಘರ್ಷದಲ್ಲಿ ಚೀನಾ ಸೇನೆಯನ್ನು ಭಾರತೀಯ ಸೇನೆ ಬಡಿ ದೋಡಿಸಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜತಾಂತ್ರಿಕವಾಗಿಯೂ ಚೀನಾವನ್ನು ಭಾರತವು ಹಿಮ್ಮೆಟ್ಟಿಸುತ್ತಿದೆ. ಭಾರತವು ಚೀನಾದ ಮೇಲೆ ಈ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಚೀನಾವು ಕೇವಲ ಕಾಗದದ ಹುಲಿ ಎಂಬು ದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಇವೆಲ್ಲವುಗಳ ಪರಿಣಾಮವಾಗಿ ಚೀನಾ ಅಧ್ಯಕ್ಷ ಜಿನ್ ಪಿಂಗ್ ಚೀನಾದಲ್ಲಿ ತಮ್ಮ ಜನಪ್ರಿಯತೆ ಯನ್ನು ಕಳೆದುಕೊಳ್ಳುತ್ತಿದ್ದಾರೆ.

ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನಾದಲ್ಲಿ ಜಿನ್ ಪಿಂಗ್ ಆಂತರಿಕ ಭಿನ್ನಮತವನ್ನೂ ಎದುರಿಸುತ್ತಿದ್ದಾರೆ. ಸ್ವಾಭಿಮಾನಿ ಭಾರತ ವಿಂದು ತನ್ನ ಆಂತರಿಕ ವಿಷಯಗಳಲ್ಲಿ ವಿದೇಶೀ ಹಸ್ತಕ್ಷೇಪವನ್ನು ಒಂದಿಷ್ಟೂ ಸಹಿಸುತ್ತಿಲ್ಲ. ರಾಜತಾಂತ್ರಿಕ ಪ್ರತೀಕಾರಕ್ಕೂ
ಭಾರತ ಹಿಂಜರಿಯುತ್ತಿಲ್ಲ.

Leave a Reply

Your email address will not be published. Required fields are marked *