Thursday, 12th December 2024

ಕಾಡು ಉಳಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಲಿ

ತನ್ನಿಮಿತ್ತ

ಟಿ.ಹೀರಾಲಾಲ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವೃತ್ತ

ನಮ್ಮ ಸುತ್ತಮುತ್ತಲಿನ ವಾತವರಣವೇ ನಮ್ಮ ಪರಿಸರ. ಗಾಳಿ, ಬೆಳಕು, ಉಷ್ಣತೆ, ಸಸ್ಯ-ಪ್ರಾಣಿ ವರ್ಗಗಳು, ಈ ಪರಿಸರದ ಮುಖ್ಯ ಭಾಗಗಳು. ನಮ್ಮ ಸುತ್ತಮುತ್ತಲು ಕಾಣುವ ಕಾಡು, ಗುಡ್ಡ ಬೆಟ್ಟಗಳು, ಭೂಮಿ, ಆಕಾಶ.

ಮಾನವ ಸೇರಿ ಉಳಿದ ಎಲ್ಲಾ ಜೀವಿಗಳು ಇಡೀ ಪರಿಸರದ ಒಂದು ಭಾಗ. ಆದರೆ, ಮಾನವ ಬೇರೆಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿದ್ದಾನೆ. ಮಾನವನ ಅತಿಯಾದ ಬುದ್ಧಿವಂತಿಕೆ ಈಗೀಗ ಪರಿಸರಕ್ಕೆ ಮಾರಕವಾಗಿದೆ. ಮಾಲಿನ್ಯ ಎಂದರೆ ಅಪಾಯಕಾರಿ ಹಾಗೂ ವಿಷಕರವಾದ ವಸ್ತುಗಳನ್ನು ಪರಿಸರಕ್ಕೆ ಸೇರಿಸುವುದು. ಈ ವಸ್ತುಗಳು ಭೂಮಿಯ ಮೇಲಿನ ಎಲ್ಲಾ ಜೀವಿ ಗಳ ಮೇಲೂ ಪರಿಣಾಮ ಉಂಟು ಮಾಡುತ್ತದೆ ಹಾಗೂ ನೈಸರ್ಗಿಕವಾಗಿ ನಡೆಯುವ ಜೈವಿಕ ಚಕ್ರದ ಮೇಲೂ ಪರಿಣಾಮ ಉಂಟು ಮಾಡುತ್ತದೆ.

ನಾವು ಈಗಲೂ ಎಚ್ಚೆತ್ತುಕೊಳ್ಳದೇ ಹೋದರೆ ಭಾರಿ ಅನಾಹುತವೇ ಸಂಭವಿಸಬಹುದು. ಆದ್ದರಿಂದ ನಾವು ಈಗಲಾದರೂ ನಮ್ಮ ಸ್ವಾರ್ಥ ಬಿಟ್ಟು ಪರಿಸರದ ಕಡೆಗೆ ಗಮನಹರಿಸಬೇಕಾಗಿದೆ. ಕೆಲವಾರು ವರ್ಷಗಳ ಹಿಂದೆ ಎಲ್ಲರಿಗೂ ತಿಳಿದಿರುವಂತೆ, ಪ್ರತಿ ಯೊಂದು ಗ್ರಾಮಗಳಲ್ಲಿ ಕನಿಷ್ಠ ಪಕ್ಷ ಒಂದೊಂದು ಕೆರೆ ಹಾಗೂ ಹಿರಿದಾದ ಅರಳಿ ಮರದ ಕಟ್ಟೆ ಇದ್ದಿದ್ದು ವಾಡಿಕೆ. ಈ ಕೆರೆಗಳು ಗ್ರಾಮದ ಜಲಮೂಲಗಳನ್ನು ಶುದ್ಧೀಕರಿಸುವ ಕಿಡ್ನಿಗಳಾಗಿ ಹಾಗೂ ಅರಳಿ, ಅಶ್ವತ್ಥ ಮರಗಳು ಆಮ್ಲಜನಕ ಉತ್ಪಾ ದಿಸುವ, ಶುದ್ಧೀಕರಿಸುವ ಶ್ವಾಸಕೋಶಗಳಾಗಿ ಕಾರ್ಯ ನಿರ್ವಹಿಸುತಿದ್ದಿದ್ದರಿಂದ, ಆಗಿನ ಜನರ ಆರೋಗ್ಯ ಸ್ಥಿತಿಗತಿಗಳು ಗುಣಮಟ್ಟದ್ದಾಗಿ ದ್ದವು.

ಆದರೀಗ, ಕ್ರಮೇಣವಾಗಿ ಆ ಕೆರೆಗಳು ಹಾಗೂ ಅರಳಿಕಟ್ಟೆಗಳು ಮಾಯವಾಗಿ ಶುದ್ಧ ಗಾಳಿ, ಶುದ್ಧ ಜಲ ಮೂಲಗಳಿಲ್ಲದೇ ಅನಾರೋಗ್ಯಗಳು ಉದ್ಭವಿಸುತ್ತಿವೆ. ಆಮ್ಲಜನಕದ ಗಣಿ ಹಾಗೂ ಇಂಗಾಲದ ಡೈ ಆಕ್ಸೈಡ್ ನಂತಹ ಅನಿಲಗಳ ಸಾಂದ್ರತೆ ಕಡಿಮೆಗೊಳಿಸುವ ಸಾಮರ್ಥ್ಯವುಳ್ಳ ಅರಣ್ಯವನ್ನು, ಅರಣ್ಯದಲ್ಲಿರುವ ವನ ಸಂಪತ್ತನ್ನು ನಾಶ ಮಾಡುತ್ತ ಕ್ಷುಲ್ಲಕ ಕಾರಣಕ್ಕೆ ಕಾಡಿಗೆ ಬೆಂಕಿ ನೀಡಿ, ಈ ಸಮೃದ್ಧ ಸಂಪತ್ತನ್ನು ನಾಶ ಮಾಡುತ್ತಿದ್ದು, ಇದರಿಂದ ನೇರ ಹಾಗೂ ಪರೋಕ್ಷವಾದ ಅಡ್ಡ ಪರಿಣಾಮ ಗಳು ಸುತ್ತಮುತ್ತಲಿನ ಪರಿಸರದ ಮೇಲೆ ನಂತರ ಮಾನವ ಕುಲದ ಮೇಲೆರಗುತ್ತಿವೆ.

ಸಂಪದ್ಭರಿತ ಕಾಡು ಹಾಗೂ ವನ್ಯಜೀವಿಗಳು ನಮಗಿಂತ ಲಕ್ಷಾಂತರ ವರ್ಷಗಳ ಮೊದಲೇ ಈ ಭೂಮಿಗೆ ಬಂದ ಜೀವಿಗಳು, ನಮ್ಮಷ್ಟೇ ಇಲ್ಲಿ ಉಳಿಯುವ ಹಕ್ಕು ಈ ಜೀವಿಗಳಿಗೂ ಇದೆ. ಅವುಗಳ ನೆಲೆನಾಶ ಮಾಡುವ ಹಕ್ಕು ನಮಗೆ ಇಲ್ಲ ಅವುಗಳನ್ನು
ಸಂರಕ್ಷಿಸಿ ಉಳಿಸಿ ಬೆಳಸಿ ನಮಗೂ, ನಮ್ಮ ಮುಂದಿನ ತಲೆಮಾರಿಗೂ ಕೊಂಡೊಯ್ಯುವುದು ನಮ್ಮ ಆದ್ಯ ಕರ್ತವ್ಯ. ಇದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಪರಿಸರ ದಿನವನ್ನು 5ನೇ ಜೂನ್ 1974 ರಿಂದ ಪ್ರಾರಂಭಿಸಲಾಯಿತು.

ಈ ವರ್ಷ ಎಂದರೆ, 2021 ರಿಂದ 2030 ರವರೆಗೆ ಯುನೈಟೆಡ್ ನೇಷನ್ಸ್ ರವರ ವತಿಯಿಂದ ಪರಿಸರ ಪುನರ್ ಸ್ಥಾಪನೆ ಅಭಿಯಾನ ವನ್ನು ಪ್ರಾರಂಭಿಸಿದ್ದು, ಈ ನಿಟ್ಟಿನಲ್ಲಿ ಈ ಎಲ್ಲಾ ಜೀವಿಗಳ ನಡುವಿನ ಸರಪಳಿಯನ್ನು ಕಾಪಾಡುವುದು ಅಗತ್ಯವಾಗಿದೆ. ಈ ಭೂಮಿ ಮೇಲೆ ಜೀವಿಸುತ್ತಿರುವಂತಹ ಎಲ್ಲಾ ಜೀವಿಗಳು ಒಂದರಿಂದ ಒಂದು ಅವಲಂಬಿತವಾಗಿರುತ್ತವೆ. ಆದ್ದರಿಂದ, ಯಾವುದೇ ಒಂದು ಜೀವಿ ನಾಶವಾದರೆ, ಇಡೀ ಪ್ರಾಣಿ ಸಂಕುಲ ನಾಶವಾಗುವ ಸಂಭವವಿರುವುದರಿಂದ ಸರಪಳಿಯ ಸಮತೋಲನವನ್ನು ಕಾಪಾಡುವುದು ಅವಶ್ಯಕ ಹಾಗೂ ಅನಿವಾರ್ಯವಾಗಿದೆ.

ಈ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಪರಿಸರ ಸಮತೋಲನ ಕಾಪಾಡಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ, ಪರಿಸರ ಸಮತೋಲನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಹಾಗೂ ಅರಣ್ಯ ಇಲಾಖೆಯ ವತಿಯಿಂದ ಹಲವಾರು ಅರಣ್ಯೀಕರಣ ಯೋಜನೆಗಳನ್ನು ಹಮ್ಮಿಕೊಂಡು ಮುಂಗಾರಿನ ಸಮಯದಲ್ಲಿ ಕ್ಷೀಣಿತ ಅರಣ್ಯ ಪ್ರದೇಶದಲ್ಲಿ ಅರಣ್ಯೀಕರಣ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅರಣ್ಯೇತರ ಪ್ರದೇಶದಲ್ಲಿ, ರಸ್ತೆ ಬದಿಗಳಲ್ಲಿ ಬಹು ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಖಾಲಿ ಪ್ರದೇಶಗಳಲ್ಲಿ ವಿಭಿನ್ನವಾದ
ಮರ ಗಿಡಗಳನ್ನು ಬೆಳೆಸಿ, ಉತ್ತಮ ಪರಿಸರ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ. ಅದರಂತೆ, ಮೈಸೂರು ಅರಣ್ಯ ವೃತ್ತವು ಮೈಸೂರು ಅರಣ್ಯ ವಿಭಾಗ, ಮೈಸೂರು, ಹುಣಸೂರು ಮತ್ತು ಮಂಡ್ಯ ವಿಭಾಗಗಳನ್ನು ಹೊಂದಿದ್ದು ಈ ವಿಭಾಗಗಳು ಸಮಯಕ್ಕನು ಗುಣವಾಗಿ ಅರಣ್ಯೀಕರಣ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ.

ಮೈಸೂರು ಮತ್ತು ಮಂಡ್ಯ ಸಾಮಾಜಿಕ ಅರಣ್ಯ ವಿಭಾಗಗಳೊಂದಿಗೆ ಪ್ರಾದೇಶಿಕ ವಿಭಾಗಗಳೂ ಸಹ ಕೈ ಜೋಡಿಸಿ, ರೈತರ ಹೊಲ ಗಳಲ್ಲಿ ಅತಿ ಹೆಚ್ಚಿನ ಗಿಡ ಮರಗಳನ್ನು ನೆಟ್ಟು ಪರಿಸರ ಸಮೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಮೈಸೂರು ವೃತ್ತವು, ಬಂಡೀಪುರ
ಎಂಬ ಪ್ರಖ್ಯಾತಿ ಪಡೆದ ಹುಲಿ ಸಂರಕ್ಷಿತ ಪ್ರದೇಶವನ್ನು ಒಳಗೊಂಡಿದೆ. ಪ್ರತೀ ವರ್ಷವು ಅಭಯಾರಣ್ಯಗಳಲ್ಲಿ ಪ್ರಾಣಿ, ಹಾಗೂ ಪಕ್ಷಿಗಳ ಉಳಿವಿಗಾಗಿ ಹಲವಾರು ರಕ್ಷಣಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ನಗರ ಹಸಿರೀಕರಣಕ್ಕೆಂದೇ ಮೈಸೂರು ವಿಭಾಗದಲ್ಲಿ ನಗರಹಸಿರೀಕರಣ ವಲಯವಿದ್ದು, ನಗರದ ಪ್ರಮುಖ ರಸ್ತೆಗಳು ಹಾಗೂ ಬಹುತೇಕ ಬಡಾವಣೆಗಳಲ್ಲಿ ಮಾಹಗನಿ, ಬೇವು, ಸಂಪಿಗೆ ಮತ್ತು ಇತರೆ ಮರಗಳು ಬೆಳೆಸಲಾಗುತ್ತಿದೆ. ಮತ್ತು ಟ್ರೀ ಪಾರ್ಕ್‌ಗಳಲ್ಲಿ ಹೂವು ಮತ್ತು ಫಲಗಳನ್ನು ನೀಡುವ ಮರಗಳನ್ನು ಬೆಳೆಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದದ್ದು, ನೆಲ್ಲಿ, ಆಲ, ಅರಳಿ, ಹಲಸು ಇತ್ಯಾದಿ. ವಿಶ್ವ ವಿಖ್ಯಾತ ಚಾಮುಂಡಿ ಬೆಟ್ಟದಲ್ಲಿ ಲಕ್ಷ-ವೃಕ್ಷ ಅಭಿಯಾನವನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಚಾಮುಂಡಿ ಬೆಟ್ಟವು ಹಚ್ಚ ಹಸಿರಾಗಿ ಕಾಣುವುದರಲ್ಲಿ ಸಂಶಯವಿಲ್ಲ.

ಮೈಸೂರಿನಲ್ಲಿ ರಂಗನತಿಟ್ಟು ಪಕ್ಷಿಧಾಮಗಳಲ್ಲಿ ಸುಮಾರು 221 ಪಕ್ಷಿಗಳು ದಾಖಲಾಗಿದ್ದು, bird life international ರವರು ಈ ಪಕ್ಷಿಧಾಮವನ್ನು important bird & bio-diversity ಎಂದು ಘೋಷಿಸಿದ್ದಾರೆ. ಹಾಗೂ ವಿಶ್ವವಿಖ್ಯಾತವಾದ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯ ಇವುಗಳನ್ನು ಕೂಡ ಒಳಗೊಂಡಿದ್ದು, ಜೀವಸಂಕುಲ ಉತ್ತಮ ವಾಸಸ್ಥಾನವಾಗಿರುವುದರ ಜತೆಗೆ ನಗರ ವಾಸಿಗಳನ್ನು ಶುದ್ಧ ಗಾಳಿ, ಪರಿಸರವನ್ನು ಒದಗಿಸುತ್ತಲಿದೆ. ಮೈಸೂರು ಪರಿಸರ ಮಾಲಿನ್ಯದಿಂದ ಬಹುತೇಕ ಸಂರಕ್ಷಿತ ವಾಗಿದೆ.

ಒಟ್ಟಾರೆಯಾಗಿ, ಮೈಸೂರು ವೃತ್ತವು ಶ್ರೀಗಂಧ ತೇಗ, ಬೀಟೆಯಂತಹ ಅನೇಕ ಬೆಲೆಬಾಳುವ ಮರಗಳನ್ನು ಮತ್ತು ಮರ ಮುಟ್ಟು ಗಳನ್ನು ಒಳಗೊಂಡಿದ್ದು, ವಿಶ್ವದಲ್ಲೇ ಮೊದಲ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಹೊಂದಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ ವೈಖರಿಯ ಜತೆಗೆ ನಾಗರಿಕರ ಸಹಕಾರದಿಂದ ಮೈಸೂರು ನಗರ ಕೆಲದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ನಗರವಾಗಿ ಪರಿವರ್ತನೆಯಾಗುವ ಅವಕಾಶಗಳಿವೆ.

ಜೀವ ಸಂಕುಲ ಸರಪಳಿ ಭದ್ರವಾದಷ್ಟು ಕಾಡು/ ನಾಡು ನಮಗೂ ಮತ್ತು ನಮ್ಮ ಮುಂದಿನ ತಲೆಮಾರಿಗೂ ವರ್ಗಾವಣೆಗೊಳ್ಳಲು ಇಲಾಖೆಯಷ್ಟೆ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೇವಲ ವಿಶ್ವ ಪರಿಸರ ದಿನದಂದು
ಮಾತ್ರ ಪರಿಸರ ರಕ್ಷಣೆಗೆ ಒತ್ತು ನೀಡದೆ, ವರ್ಷದ ಪ್ರತಿಯೊಂದು ದಿನವೂ ಸಹ ಪರಿಸರ ಸಂರಕ್ಷಣೆಗೆ ಒತ್ತು ನೀಡುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಾಗಿದೆ.