ಶಶಾಂಕಣ
shashidhara.halady@gmail.com
ಮರುಭೂಮಿಯೊಂದನ್ನು ನಿರ್ಮಿಸಲು ಸಾಧ್ಯವೆ? ಅದೂ ಕೇವಲ ೫೦ ವರ್ಷಗಳಲ್ಲಿ? ಅಂತಹದೊಂದು ದುರಂತ ಕಳೆದ ಶತಮಾನದಲ್ಲಿ ನಡೆದಿದೆ. ಆ ಮರುಭೂಮಿಯನ್ನು ನಿರ್ಮಿಸಿ, ಸಾವಿರಾರು ಜನರ ಬದುಕನ್ನು ದುರ್ಭರಗೊಳಿಸಿಯಾಗಿದೆ. ಈ ದುರಂತದಿಂದ ನಾವು ಪಾಠ ಕಲಿತಿದ್ದೇವೆಯೆ? ಇಲ್ಲ.. ಖಂಡಿತವಾಗಿಯೂ ಇಲ್ಲ. ನಮ್ಮ ರಾಜ್ಯದಲ್ಲೂ ನದಿಯನ್ನು ಅವೈಜ್ಞಾನಿಕವಾಗಿ ತಿರುಗಿಸಿ, ‘ಎತ್ತಿನ ಹೊಳೆ ಯೋಜನೆ’ಯನ್ನು ಜಾರಿಗೆ ತರುವ ಕೆಲಸ ಪ್ರಗತಿಯಲ್ಲಿದೆ, ಭವಿಷ್ಯದ ಮರುಭೂಮಿಗೆ ಗುದ್ದಲಿಪೂಜೆಯನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗಿದೆ.
ಕಳೆದ ತಿಂಗಳು ಇನ್ನೊಂದು ಮರುಭೂಮಿಗೆ ಗುದ್ದಲಿ ಪೂಜೆ ಮಾಡುವ ಪ್ರಯತ್ನ ನಡೆದಿದೆ – ಸಂಡೂರಿನ ದೇವ ದಾರಿ ಬೆಟ್ಟ ಶ್ರೇಣಿಯಲ್ಲಿ, ಸುಮಾರು ೯೯,೦೦೦ ಮರಗಳನ್ನು ಕಡಿದು, ಗಣಿಗಾರಿಕೆ ಮಾಡಬಹುದು ಎಂದು ಪ್ರಭುತ್ವ ಅನುಮತಿ ನೀಡಿದೆ! ಮರಗಳನ್ನು ಉಳಿಸಿ ಎಂದು ಒಂದು ಕಡೆ ಹೇಳು ತ್ತಲೇ, ೯೯೨ ಎಕರೆಯಲ್ಲಿ ಬೆಳೆದಿರುವ ೯೯,೦೦೦ ಮರಗಳನ್ನು ಕಡಿಯಲು ಅನುಮತಿ ನೀಡುವುದು ಎಂತಹ ಕ್ರಮ? ಅನುಮತಿ ಪಡೆದ ೯೯,೦೦೦ ಮರಗಳ ಜತೆಯಲ್ಲೇ, ಇನ್ನೆಷ್ಟೋ ಸಾವಿರ ಮರಗಳು ರಸ್ತೆಗೆ, ವಾಹನ ಚಾಲನೆಗೆ, ಉರುವಲಿಗಾಗಿ, ಗಣಿಗಾರಿಕೆಯ ಇತರ ಕೆಲಸಗಳಿಗಾಗಿ ಸಾಯುವುದಂತೂ ನಿಶ್ಚಿತ.
ಬಳ್ಳಾರಿ ಜಿಲ್ಲೆಯ ಈ ಹಸುರಿನ ತಾಣವನ್ನು ಮರುಭೂಮಿ ಮಾಡಲು ಇದು ಗುದ್ದಲಿಪೂಜೆ ಅಲ್ಲವೆ? ಗಣಿಗಾರಿಕೆ ಮಾಡಬೇಕು, ಅದರಿಂದ ಹಣ ಗಳಿಸಬೇಕು ನಿಜ, ಆದರೆ ಅದಕ್ಕೆ ತಗಲುವ ವೆಚ್ಚ? ಅಠಿ ಡಿeZಠಿ ಟoಠಿ? ಇಪ್ಪತ್ತನೆಯ ಶತಮಾನದಲ್ಲಿ ಮನುಷ್ಯನೇ ನಿರ್ಮಿಸಿದ ಒಂದು ಮರುಭೂಮಿಯ ಕಥೆಯನ್ನು, ದುರಂತವನ್ನು ಇಲ್ಲಿ ನೆನಪಿಸಿಕೊಂಡು, ನಾವೆಲ್ಲರೂ ಸಂಡೂರಿನ ಕಾಡನ್ನು ರಕ್ಷಿಸಲು ಪ್ರಯತ್ನ ನಡೆಸಬೇಕು, ಆ ಕುರಿತು ಜನಾಭಿಪ್ರಾಯ ಮೂಡಿಸಬೇಕು, ಹಕ್ಕೊತ್ತಾಯ ಮಂಡಿಸಬೇಕು.
ನಮ್ಮ ರಾಜ್ಯದಲ್ಲಿ ಜೀವ ಹಿಡಿದುಕೊಂಡಿರುವ ಕೆಲವೇ ಕಾಡು ಪ್ರದೇಶದಲ್ಲಿ ದೇವದಾರಿ ಕಾಡು ಸಹ ಒಂದಾಗಿರುವುದರಿಂದ, ಇಂತಹದೊಂದು ಪ್ರಯತ್ನ
ನಡೆಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ರಷ್ಯಾ ಮತ್ತು ಅದರ ನೆರೆಯ ದೇಶದಲ್ಲಿ, ಅಲ್ಲಿನವರು ‘ಅಭಿವೃದ್ಧಿ’ಯ ಹೆಸರಿನಲ್ಲಿ ನಿರ್ಮಿಸಿದ ಮರು ಭೂಮಿಯ ಉದಾಹರಣೆಯು ನಮ್ಮೆಲ್ಲರಿಗೆ ಪಾಠ ಎನಿಸಬೇಕು. ೧೯೬೦ರ ದಶಕ. ರಷ್ಯಾದಲ್ಲಿ ‘ಅರಾಲ್ ಸಮುದ್ರ’ ಎಂಬ ವಿಶಾಲವಾದ ಸರೋವರವಿತ್ತು. ಸಿಹಿನೀರಿನಿಂದ ತುಂಬಿದ್ದ, ಲಕ್ಷಾಂತರ ಜನರಿಗೆ, ಜೀವಿಗಳಿಗೆ ಆಶ್ರಯ ನೀಡಿದ್ದ, ಎರಡು ಪ್ರಮುಖ ಬಂದರುಗಳನ್ನೂ ಹೊಂದಿದ್ದ ಈ ‘ಸಮುದ್ರ’, ಈಗ ಬರಡುಭೂಮಿಯಾಗಿ ಪರಿವರ್ತನೆಗೊಂಡಿದ್ದು, ತನ್ನ ಹೆಸರನ್ನು ಸಹ ಬದಲಿಸಿಕೊಂಡಿದೆ.
ಆ ವಿಶಾಲ ಸರೋವರ ಇದ್ದ ಜಾಗವನ್ನು ಇಂದು ಅರಾಕುಮ್ ಮರುಭೂಮಿನ್ನ ಹೆಸರನ್ನು ಸಹ ಬದಲಿಸಿಕೊಂಡಿರುವುದು, ಆಧುನಿಕ ಮಾನವನ
ಚಟುವಟಿಕೆಗಳಿಗೆ ಬರೆದ ವ್ಯಂಗ್ಯಭರಿತ ಒಂದು ಭಾಷ್ಯ ಎಂದೆನ್ನಬಹುದು. ೧೯೬೦ರಲ್ಲಿ ಅರಾಲ್ ಸಮುದ್ರವು ಸುಮಾರು ೪೩೫ ಕಿಮೀ ಉದ್ದವಿತ್ತು, ೨೯೦ ಕಿಮೀ ಅಗಲವಿತ್ತು. ಕಜಕಿಸ್ತಾನ ಮತ್ತು ಉಜ್‌ಬೆಕಿಸ್ತಾನ ಪ್ರಾಂತ್ಯಗಳ ನಡುವೆ ಸುಮಾರು ೬೮,೦೦೦ ಚದರ ಕಿ.ಮೀ. ವಿಸ್ತಾರಕ್ಕೆ ವ್ಯಾಪಿಸಿಕೊಂಡಿತ್ತು. ೧೯೭೦ರ ದಶಕದ ತನಕವೂ ಅದು ಜಗತ್ತಿನ ನಾಲ್ಕನೆಯ ಅತಿ ದೊಡ್ಡ ಸರೋವರ! ಅಮು ದರ್ಯಾ ಮತ್ತು ಸಿರ್ ದರ್ಯಾ ಎಂಬ ಎರಡು ನದಿಗಳು ಅರಾಲ್ ಸರೋವರಕ್ಕೆ ನೀರುಣಿಸುತ್ತಿದ್ದವು. ಆ ಸರೋವರದ ಸುತ್ತಲೂ ಹಳ್ಳಿಗಳಿದ್ದವು, ಊರುಗಳಿದ್ದವು, ಬಂದರುಗಳಿದ್ದವು, ಪುರಾತನ ಕಾಲದ ಒಂದು ಸಂಸ್ಕೃತಿ ಇತ್ತು.
ಸರೋವರವನ್ನು ಆಶ್ರಯಿಸಿ ವಿವಿಧ ಪ್ರಾಣಿ ಪಕ್ಷಿಗಳಿದ್ದವು, ೨೨ ಪ್ರಭೇದದ ಮೀನುಗಳಿದ್ದವು. ಅವುಗಳಲ್ಲಿ ನಾಲ್ಕು ಪ್ರಭೇದದ ಮೀನುಗಳು, ಕೇವಲ ಅರಾಲ್ ಸರೋವರದಲ್ಲಿ ಮಾತ್ರ ಕಾಣಸಿಗುತ್ತಿದ್ದವು. ಆ ವಿಶಾಲ ಸರೋವರವು ಇಂದು ತನ್ನ ಹೆಸರನ್ನೇ ಬದಲಾಯಿಸಿಕೊಂಡು ‘ಅರಾಕುಂ ಮರು ಭೂಮಿ’ ಯಾಗಿ ಪರಿವರ್ತನೆಗೊಂಡ ನಂತರ, ವಿಶಿಷ್ಟ ಎನಿಸಿದ್ದ ಆ ನಾಲ್ಕು ಪ್ರಭೇದದ ಮೀನುಗಳು ಈ ಭೂಮಿಯಿಂದಲೇ ಕಣ್ಮರೆಯಾಗಿವೆ. ಸರೋವರವೊಂದು ಮರುಭೂಮಿಯಾಗಿ ಪರಿವರ್ತನೆಗೊಂಡ ಈ ದುರಂತವನ್ನು, ಮನುಷ್ಯ ನಿರ್ಮಿಸಿದ ಅತಿ ದೊಡ್ಡ ಪ್ರಾಕೃತಿಕ ದುರಂತ ಎಂದು ಗುರುತಿಸಲಾಗಿದೆ.
ಈ ಒಂದು ಮಾನವ ನಿರ್ಮಿತ ಪ್ರಾಕೃತಿಕ ದುರಂತಕ್ಕೆ ಮುಖ್ಯ ಕಾರಣವೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಂಡ ವಿವೇಚನಾ ರಹಿತ ನೀರಾವರಿ
ಯೋಜನೆಗಳು! ಸೋವಿಯತ್ ಸರಕಾರವು ಅಮು ದರ್ಯಾ ಮತ್ತು ಸಿರ್ ದರ್ಯಾ ನದಿಗಳಿಗೆ ಸಾಲು ಸಾಲು ಅಣೆಕಟ್ಟುಗಳನ್ನು ಕಟ್ಟಿಸಿತು. ಸರೋವರಕ್ಕೆ
ನೀರು ತರುತ್ತಿದ್ದ ಆ ನದಿಗಳಿಗೆ ೩೦ಕ್ಕೂ ಹೆಚ್ಚು ಅಣೆಕಟ್ಟುಗಳನ್ನು, ಒಡ್ಡುಗಳನ್ನು ಕಟ್ಟಲಾಯಿತು. ಅಮು ದರ್ಯಾ ನದಿಯನ್ನು ‘ನದಿ ತಿರುವು’
ಯೋಜನೆಗೆ ಯಶಸ್ವಿಯಾಗಿ ಒಳಪಡಿಸಲಾಯಿತು.
ಇದಕ್ಕೆ ಮುಖ್ಯ ಕಾರಣ ಹತ್ತಿ ಬೆಳೆಯುವ ವ್ಯಾಮೋಹ. ‘ಬಿಳಿ ಚಿನ್ನ’ ಎಂದು ಕರೆಯಲ್ಪಟ್ಟ ಹತ್ತಿಯನ್ನು ಬೆಳೆದು, ರಫ್ತು ಮಾಡಿ ಅಪಾರ ಹಣ ಗಳಿಸುವ ಯೋಜನೆಗೆ ಕೈಹಾಕಿತು. ಇದಕ್ಕಾಗಿ ಕಜಕಿಸ್ತಾನ ಮತ್ತು ಉಜಬೆಕಿಸ್ತಾನದ ವಿಶಾಲ ಬಯಲುಗಳ ಮೇಲೆ ಸೋವಿಯತ್ ಸರಕಾರದ ಕಣ್ಣುಬಿತ್ತು. ೧೯೯೧ರ ತನಕ ಅವು ಸೋವಿಯತ್ ರಷ್ಯಾದ ಭಾಗವಾಗಿದ್ದವಷ್ಟೆ. ಸರಕಾರದ ಜಮೀನು, ಸರಕಾರ ಹೇಳಿದಂತೆ ಕೆಲಸ ಮಾಡುವ ಕೃಷಿ ಕಾರ್ಮಿಕರು, ಕಣ್ಣು ಹಾಯಿಸಿದಷ್ಟು ದೂರ ಹತ್ತಿ ಹೊಲಗಳು! ವೈಟ್ ಗೋಲ್ಡ್ ಅಥವಾ ಬಿಳಿ ಚಿನ್ನವು ರಫ್ತಾಗಿ, ದೇಶಕ್ಕೆ ಸಾಕಷ್ಟು ಸಂಪತ್ತನ್ನು ಗಳಿಸಿತು. ೧೯೮೮ರಲ್ಲಿ
ಉಜಬೆಕಿಸ್ತಾನ್ ಜಗತ್ತಿನಲ್ಲೇ ಅತಿ ಹೆಚ್ಚು ಹತ್ತಿ ರಫ್ತು ಮಾಡುವ ಪ್ರಾಂತ್ಯ ಎಂಬ ಹೆಸರು ಗಳಿಸಿತು.
ವಿಚಿತ್ರ ಮತ್ತು ಆಘಾತಕಾರಿ ವಿಚಾರವೆಂದರೆ, ಅರಾಲ್ ಸಮುದ್ರಕ್ಕೆ ನೀರನ್ನು ಒದಗಿಸುತ್ತಿದ್ದ ಆ ಎರಡು ನದಿಗಳ ನೀರನ್ನು ಈ ರೀತಿ ಹತ್ತಿ ಬೆಳೆಯಲು
ಉಪಯೋಗಿಸಿದರೆ, ಅರಾಲ್ ಸಮುದ್ರವು ಕ್ರಮೇಣ ಒಣಗಿಹೋಗುತ್ತದೆ ಎಂಬ ವಿಚಾರವು ಅಲ್ಲಿನ ಸರಕಾರದ ಇಲಾಖೆಗಳಿಗೆ ಗೊತ್ತಿತ್ತು. ಇದರಿಂದಾಗಿ
ಅರಾಲ್ ಸಮುದ್ರ ಬರಡಾಗುತ್ತದೆ ಎಂಬ ವಿಚಾರವನ್ನು ಸರಕಾರದ ಇಲಾಖೆಗಳು ಚರ್ಚಿಸಿಯೂ ಇದ್ದವು! ಆದರೆ, ಅರಾಲ್ ಸಮುದ್ರದ ಉಳಿವಿಗಿಂತಲೂ, ಹಣದ ಬೆಳೆ ಎನಿಸಿದ ಹತ್ತಿ ತರುತ್ತಿದ್ದ ಆದಾಯಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು.
ಇದರಿಂದಾದ ದುರಂತ ಬಹುದೊಡ್ಡದು. ೧೯೯೦ರ ಸಮಯಕ್ಕೆ, ಅರಾಲ್ ಸರೋವರದ ಶೇ.೪೦ ಭಾಗ ಒಣಗಿಹೋಗಿತ್ತು. ಅಲ್ಲಿದ್ದ ಬಂದರುಗಳಲ್ಲಿ ನಿಂತಿದ್ದ ಮಧ್ಯಮ ಗಾತ್ರದ ಹಡಗುಗಳು, ಅಲ್ಲೇ ಮರಳಿನ ಮೇಲೆ ಬಂಧಿಯಾದವು. ಜತೆಗೆ, ಪ್ರತಿವರ್ಷ ನೀರಿನ ಮಟ್ಟ ಒಂದೇ ಸಮನೆ ಕಡಿಮೆಯಾಗು ತ್ತಲೇ ಹೋಗುತ್ತಿತ್ತು! ೨೦೧೦ರ ವೇಳೆಗೆ ಅರಾಲ್ ಸಮುದ್ರವು ಶೇ.೯೦ ರಷ್ಟು ಒಣಗಿಹೋಗಿತ್ತು. ಸರೋವರವು ಇಬ್ಭಾಗವಾಗಿ, ಉತ್ತರ ಅರಾಲ್ ಮತ್ತು ದಕ್ಷಿಣ ಅರಾಲ್ ಎಂಬ ಎರಡು ಪುಟ್ಟ ಸರೋವರಗಳು ರೂಪುಗೊಂಡವು! ಜಗತ್ತಿನ ನಾಲ್ಕನೆಯ ಅತಿದೊಡ್ಡ ಸರೋವರ ಎಂಬ ಪಟ್ಟವು ಮರುಭೂಮಿ ಯಲ್ಲಿ ಹುದುಗಿಹೋಯಿತು.
ಆ ಹೊಸ ಮರುಭೂಮಿಯಾದರೂ ಅದೆಷ್ಟು ಕ್ರೂರ! ಮೈಲಿ ಮೈಲಿಗಳ ತನ ಮರಳು ಮತ್ತು ಕ್ಷಾರ ಭೂಮಿ. ಈ ಮರಳುಗಾಡಿನಲ್ಲಿ ಸಂಚರಿಸಿದರೆ,
ಅಲ್ಲಲ್ಲಿ ಧುತ್ತೆಂದು ಹತ್ತಾರು ತುಕ್ಕು ಹಿಡಿದ ಹಡಗುಗಳು ಎದುರಾಗುತ್ತವೆ! ಅಲ್ಲಿದ್ದ ಅರಾಲ್ ಮತ್ತು ಮೊಯ್‌ನಾಕ್ ಎಂಬ ಎರಡು ದೊಡ್ಡ ಬಂದರು ಗಳಲ್ಲಿ ಲಂಗರು ಹಾಕಿ ನಿಂತಿದ್ದ ದೋಣಿಗಳನ್ನು ಹೊರ ಸಾಗಿಸಲು ಸಾಧ್ಯವಾಗಿಲ್ಲ. ಅಲ್ಲಿದ್ದ ನಾಲ್ಕು ಪ್ರಭೇದದ ಮೀನುಗಳು ಈ ಭೂಮಿಯಿಂದಲೇ ಅಳಿಸಿಹೋದವು. ಮರುಭೂಮಿಯಿಂದ ಹಾರಿ ಬಂದ ದೂಳು, ಹಲವು ಪಟ್ಟಣಗಳಿಗೆ ನುಗ್ಗಿ, ಅಲ್ಲಿನ ಜನರಿಗೆ ಶ್ವಾಸಕೋಶದ ಕಾಯಿಲೆಗಳನ್ನು ತಂದವು.
೨೦೦೦ರ ನಂತರ ಈ ಸರೋವರವನ್ನು ಪುನರುಜ್ಜೀವನಗೊಳಿಸುವ ಕುರಿತು ಸ್ವಲ್ಪ ಕೆಲಸ ನಡೆಯಿತು. ಜಗತ್ತಿನ ಅತಿ ಘೋರ ಪ್ರಾಕೃತಿಕ ದುರಂತಗಳಲ್ಲಿ ಅರಾಲ್ ಸಮುದ್ರವೂ ಒಂದು ಎಂಬ ಪ್ರಚಾರ ದೊರಕಿತು. ಕಜಕಿಸ್ತಾನ ಮತ್ತು ಉಜ್ ಬೆಕಿಸ್ತಾನ ಮತ್ತು ಸುತ್ತಲಿನ ಇತರ ಮೂರು ದೇಶಗಳು ಸೂಕ್ತ ಕ್ರಮ ಕೈಗೊಂಡು, ಅರಾಲ್ ಸಮುದ್ರಕ್ಕೆ ಮತ್ತೆ ಜೀವ ತುಂಬಬೇಕು ಎಂಬ ಒತ್ತಡಕ್ಕೆ ಸಿಲುಕಿ, ಒಪ್ಪಂದಕ್ಕೆ ಬಂದವು. ೨೦೦೦ರಲ್ಲಿ ಯುನೆಸ್ಕೋ, ೨೦೦೪ರಲ್ಲಿ ವಿಶ್ವಬ್ಯಾಂಕ್ ಈ ಜಲಮೂಲವನ್ನು ಪುನರುಜ್ಜೀವನ ಗೊಳಿಸಲು ಕಾರ್ಯಸೂಚಿಗಳನ್ನು ಹಾಕಿಕೊಂಡು, ಸ್ವಲ್ಪ ಕೆಲಸವೂ ನಡೆದಿದೆ. ಆದರೆ ಈಗಲೂ ವಿಶಾಲ ಪ್ರದೇಶದಲ್ಲಿ ಹತ್ತಿ ಬೆಳೆದು ರಫ್ತು ಮಾಡುತ್ತಿರುವ ಉಜಬೆಕಿಸ್ತಾನವು ಹೆಚ್ಚು ಇದರಲ್ಲಿ ಆಸಕ್ತಿ ತೋರಿಸುತ್ತಿಲ್ಲ.
‘ದೂರದ ಉಜ್‌ಬೆಕಿಸ್ತಾನದ ಅಂಚಿನಲ್ಲಿರುವ ಅರಾಲ್ ಸಮುದ್ರದ ಈ ದುರಂತವನ್ನು ಇಷ್ಟು ವಿವರವಾಗಿ ಬರೆಯುತ್ತಿರುವಿರಲ್ಲಾ, ಇದರಿಂದ ನಮಗೇನು ಪ್ರಯೋಜನ?’ ಎಂದು ನೀವು ನನ್ನನ್ನು ಪ್ರಶ್ನಿಸಬಹುದು. ಅರಾಲ್ ಸಮುದ್ರವು ಮರುಭೂಮಿಯಾಗಿ ಪರಿವರ್ತನೆಗೊಂಡ ವಿಚಾರವು, ನಮ್ಮ ರಾಜ್ಯ ದವರಿಗೆ, ನಮ್ಮ ದೇಶದವರಿಗೆ ಪಾಠವಾಗಬೇಕು, ಈಗ ಉಳಿದಿರುವ ಪರಿಸರ ಸಂಪತ್ತನ್ನು, ಹಸುರು ಹೊದ್ದ ಜಾಗಗಳನ್ನು ಉಳಿಸಿಕೊಳ್ಳಲು ನಮಗೆ ಸ್ಪೂರ್ತಿ ಎನಿಸಬೇಕು. ಜತೆಗೆ, ಅದು ಒಂದು ಎಚ್ಚರಿಕೆಯ ಗಂಟೆಯನ್ನೂ ಮೊಳಗಿಸಬೇಕು. ನಮ್ಮ ರಾಜ್ಯದಲ್ಲಿ ಈಚಿನ ಒಂದು ದಶಕದಲ್ಲಿ ಎತ್ತಿನ ಹೊಳೆ
ನದಿ ತಿರುವು ಯೋಜನೆಗಾಗಿ ಸಾವಿರಾರು ಎಕರೆ ಅರಣ್ಯವನ್ನು ನಾಶಮಾಡಲಾಗಿದೆ, ಇನ್ನೂ ಮಾಡಲಾಗುತ್ತಿದೆ.
ಸಹ್ಯಾದ್ರಿಯ ಬೆಟ್ಟಗಳನ್ನು ಅವೈಜ್ಞಾನಿಕವಾಗಿ, ಬುಲ್‌ಡೋಜರ್ ಸಹಾಯದಿಂದ ತರಿದು ಹಾಕಿ, ಅಲ್ಲೆಲ್ಲಾ ಕಾಲುವೆಗಳನ್ನು, ರಸ್ತೆಗಳನ್ನು ನಿರ್ಮಿಸ ಲಾಗುತ್ತಿದೆ, ಅಲ್ಲಿನ ಮರಗಳನ್ನು ಕಡಿಯಲಾಗುತ್ತಿದೆ, ಶೋಲಾ ಕಾಡನ್ನು ನಾಶಮಾಡಲಾಗುತ್ತಿದೆ, ಅಲ್ಲಿನ ಜಲಮೂಲಗಳನ್ನು ಬತ್ತಿಸಲಾಗುತ್ತಿದೆ.
‘ವ್ಯರ್ಥವಾಗಿ ಪಶ್ಚಿಮದತ್ತ ಹರಿದು ಹೋಗಿ, ಸಮುದ್ರ ಸೇರುತ್ತಿರುವ ನೀರನ್ನು ಪೂರ್ವಕ್ಕೆ ತಿರುಗಿಸಿ, ದೂರದ ತುಮಕೂರು, ಕೋಲಾರ ಮತ್ತು ಇತರ
ಪ್ರದೇಶಗಳಿಗೆ ನೀರನ್ನುಒದಗಿಸುವುದು’ – ಎಂಬ ಉದ್ದೇಶವನ್ನು ಎತ್ತಿನಹೊಳೆ ನದಿ ತಿರುವು ಯೋಜನೆ ಹೊಂದಿದೆ. ಆದರೆ, ‘ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರು’ ಎಂಬ ಪರಿಕಲ್ಪನೆಯೇ ಸರಿಯಲ್ಲ ಎಂದು ಪರಿಸರ ತಜ್ಞರು ಆಧಾರ ಸಹಿತ ಹೇಳಿದ್ದಾರೆ.
ಜತೆಗೆ, ಪಶ್ಚಿಮದತ್ತ ಹರಿದು ಹೋಗುವ ನದಿಗಳನ್ನು ಆಶ್ರಯಿಸಿದ ಊರುಗಳಿಗೆ ಮುಂದೆ ನೀರು ದೊರಕದೇ ಇರುವ ಅಪಾಯವೂ ಈ ಯೋಜನೆಯಿಂದ ಇದೆ. ಆದರೆ, ಎತ್ತಿನಹೊಳೆ ಯೋಜನೆಗಾಗಿ ಇಂದಿಗೂ ಪರಿಸರ ನಾಶ ನಡೆಯುತ್ತಲೇ ಇದೆ, ಸೂಕ್ಷ್ಮ ಪರಿಸರ ಹೊಂದಿರುವ ಸಹ್ಯಾದ್ರಿಯ ಕಾಡುಗಳನ್ನು ನಾಶ ಮಾಡಿ, ಕಾಲುವೆ ನಿರ್ಮಾಣ, ರಸ್ತೆ ನಿರ್ಮಾಣ ಮೊದಲಾದ ಕೆಲಸಗಳು ನಡೆಯುತ್ತಲೇ ಇವೆ. ಈ ಯೋಜನೆಯು ಉಂಟುಮಾಡುತ್ತಿರುವ ಪರಿಸರ ನಾಶದ ದೂರಗಾಮಿ ಪರಿಣಾಮಗಳು ಬಹಿರಂಗಗೊಳ್ಳಲು ಇನ್ನೂ ಒಂದೆರಡು ದಶಕಗಳ ಕಾಲ ಬೇಕಾದೀತು. ನಮ್ಮ ಕಣ್ಣೆದುರೇ, ಗೊತ್ತಿದ್ದು ಗೊತ್ತಿದ್ದೇ
ನಡೆಯುತ್ತಿರುವ ಪರಿಸರ ದುರಂತ ಇದು.
ಇದೇ ರೀತಿಯ ಇನ್ನೊಂದು ಪರಿಸರ ದುರಂತಕ್ಕೆ ಈಗ ನಾಂದಿ ಹಾಡಲಾಗುತ್ತಿದೆ – ಅದೇ ಸಂಡೂರಿನ ದೇವದಾರಿಯಲ್ಲಿ ನಡೆಸಬೇಕೆಂದು ಉದ್ದೇಶಿಸಿರುವ
ಗಣಿಗಾರಿಕೆ. ಹಸುರಿನಿಂದ ತುಂಬಿರುವ ದೇವದಾರಿ ಪ್ರದೇಶದಲ್ಲಿ ೯೯,೦೦೦ ಮರಗಳನ್ನು ಕಡಿದು, ಗಣಿಗಾರಿಕೆ ನಡೆಸಿದರೆ, ಮುಂದಿನ ದಿನಗಳಲ್ಲಿ ಆ
ಸುತ್ತಲಿನ ಪ್ರದೇಶದಲ್ಲಿ ಸಕಾಲಕ್ಕೆ ಮಳೆಯಾದೀತೆ? ಈಗಾಗಲೇ ಮಳೆ ಮತ್ತು ನೀರಿನ ಕೊರತೆ ಎದುರಿಸುತ್ತಿರುವ ಆ ಪ್ರದೇಶವು ಇನ್ನಷ್ಟು ಬರಡಾಗುವ ಸಾಧ್ಯತೆ ಇಲ್ಲವೆ? ಕುದುರೆಮುಖ ಪರ್ವತ ಶ್ರೇಣಿಯಲ್ಲಿ, ಅಪಾರ ಪ್ರಮಾಣದ ಪರಿಸರವನ್ನು ನಾಶಮಾಡಿದ ಸಂಸ್ಥೆಯೊಂದು ಈಗ ಪುನಃ, ಸಂಡೂರಿನ
ಬೆಟ್ಟಶ್ರೇಣಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದಿದೆ ಎಂಬ ವಿಚಾರವೇ ಕಳವಳಕಾರಿ. ಈ ಕುರಿತು ನಾನಾ ರೀತಿಯ ಅಂಕಿ ಸಂಕಿಗಳನ್ನು ಕೋಟ್
ಮಾಡಬಹುದು, ಆ ಅಂಕಿಸಂಕಿಗಳ ಆಧಾರದಿಂದ ಇಲ್ಲೊಂದು ಪರಸರ ದುರಂತ ನಡೆಯಬಹುದು ಎಂದು ಋಜುವಾತು ಮಾಡಬಹುದು.
ಆದರೆ, ಸರಳ ಸತ್ಯ ಒಂದಿದೆಯಲ್ಲಾ – ಮರ ಇದ್ದರೆ ಮಳೆ – ಈ ಸಾರ್ವಕಾಲಿಕ ಸತ್ಯವನ್ನೇ ಬುಡಮೇಲು ಮಾಡುವಂತೆ, ಸಾವಿರಾರು ಮರಗಳನ್ನು ಕಡಿಯಲು ಪ್ರಭುತ್ವವು ಹೇಗೆ ತಾನೆ ಅನುಮತಿ ಕೊಡಬಲ್ಲದು? ಪತ್ರಕರ್ತ ಪಿ.ಲಂಕೇಶ್ ಒಮ್ಮೆ ಬರೆದಿದ್ದರು – ದೂರದ ದೆಹಲಿಯಲ್ಲಿ ಪ್ರಭುತ್ವದ ಪ್ರತಿನಿಧಿಯು ಹಾಕುವ ಒಂದು ಸಹಿಯು, ನಮ್ಮೂರಿನ ಸಾವಿರಾರು ಮರಗಳನ್ನು ಉರುಳಿಸಬಲ್ಲದು ಎಂದು. ಅಂತಹ ಸಾಧ್ಯತೆಯೊಂದು ನಮ್ಮ ರಾಜ್ಯದಲ್ಲಿ, ದೇವದಾರಿ ಕಾಡಿನ ಮರಗಳ ನಾಶದ ಪ್ರಸ್ತಾಪದೊಂದಿಗೆ, ಈಗ ಧುತ್ತೆಂದು ಎದುರಾಗಿದೆ. ಇದು ನೋವಿನ ಸಂಗತಿ.