Thursday, 12th December 2024

ಗೊಂಡಾರಣ್ಯ ಬೆಳೆಸುವ ಹುಚ್ಚು ಸಾಹಸ !

ಶಶಾಂಕಣ

shashidhara.halady@gmail.com

ಇದನ್ನು ಒಂದು ಸುಂದರ ಕನಸು ಎನ್ನದೇ ಇನ್ನೇನನ್ನಬಹುದು ಎಂದು ನನಗಂತೂ ತಿಳಿಯುತ್ತಿಲ್ಲ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಅದೊಂದು ಹುಚ್ಚು ಕನಸು, ಹುಚ್ಚು ಸಾಹಸ. ಇಲ್ಲವಾದರೆ, ೬೨ ವರ್ಷ ಪ್ರಾಯದ ಮಹಿಳಾವಾದಿ ಸಾಹಿತಿಯೊಬ್ಬಳು, ಅದೆಲ್ಲೋ ಕಾಡಿನ ಮಧ್ಯೆ ಇರುವ ಪಾಳುಭೂಮಿಯನ್ನು ಕಂಡು, ತನ್ನ ಜೀವಮಾನದ ಸಂಪಾದನೆಯನ್ನೆಲ್ಲಾ ಸುರಿದು ಖರೀದಿಸಿ, ಸುತ್ತಲೂ ಬೇಲಿ ಹಾಕಿ, ಅಲ್ಲಿ ಗೊಂಡಾರಣ್ಯ ಬೆಳೆಯುತ್ತದೆ ಎಂದು ಒಂದು ದಶಕ ಕಾಯುವುದನ್ನು ಹುಚ್ಚು ಸಾಹಸ ಎನ್ನದೇ ಇನ್ನೇನೆನ್ನಬೇಕು? ತಾನು ಹುಟ್ಟಿದ ಆಸ್ಟ್ರೇಲಿಯಾ ನಾಡಿನ ಬಿಳಿಜನರು, ಅಲ್ಲಿದ್ದ ಆದಿಮ ಜನರನ್ನು ಕಡಿದು, ಹತ್ತಿಕ್ಕಿ, ಸಾಯಿಸಿ, ಅಲ್ಲಿನ ಗೊಂಡಾರಣ್ಯದಲ್ಲಿದ್ದ ದೊಡ್ಡ ದೊಡ್ಡ ಮರಗಳನ್ನೆಲ್ಲಾ ಕತ್ತರಿಸಿ ದೂರದ ಊರಿಗೆ ಸಾಗಿಸಿ, ಅದೇ ಜಾಗದಲ್ಲಿ ಅದೆಷ್ಟೋ ಟನ್ನು ವಿಷಕಾರಿ ರಾಸಾಯನಿಕವನ್ನು ಸುರಿದು ಬಾಳೆ ಬೆಳೆದು, ದನ ಸಾಕಿ, ಅಲ್ಲಿನ ಭೂಮಿಯನ್ನೇ ನಂಜುಗಟ್ಟಿಸಿ, ಇನ್ನೇನೂ ಆಗುವುದಿಲ್ಲ ಎಂದು ಪಾಳು ಬಿಟ್ಟಿದ್ದ ಜಾಗವದು.

ಅಂಥ ಅದೆಷ್ಟೋ ಜಾಗಗಳು ಆಕೆ ಹುಟ್ಟಿದ ದೇಶದಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದು, ಅದರ ತುಂಬಾ ಲಂಟಾನ ಮೊದಲಾದ ಪೊದೆಗಳು ಬೆಳೆದು ಭಯ ಹುಟ್ಟಿಸುವಂತೆ ಹಸಿರು ಮರುಭೂಮಿ ಗಳಾಗಿದ್ದನ್ನೂ ಆಕೆ ಕಂಡಿದ್ದಳು. ಕೇವಲ ನೂರಿನ್ನೂರು ವರ್ಷಗಳ ಹಿಂದೆ ದಟ್ಟವಾಗಿದ್ದ ಅಲ್ಲಿನ ಕಾಡು, ಮರ ಕಡಿದು ಸಾಗಿಸುವವರ ಮತ್ತು ಅತಿ ಬೇಗನೆ ಬೆಳೆ ಬೆಳೆಯುವವರ ದುರಾಸೆ ಯಿಂದಾಗಿ ಪೂರ್ತಿ ಬರಡುಭೂಮಿಗಳಾಗಿ ಪರಿವರ್ತನೆಗೊಂಡದ್ದನ್ನು ಕಂಡು, ಆ ರೀತಿ ಪರಿವರ್ತನೆ ಗೊಳ್ಳುವ ಪ್ರಕ್ರಿಯೆಯಲ್ಲಿ, ಅದೆಷ್ಟೋ ಸಾವಿರ ಆದಿಮ ಜನಾಂಗವನ್ನು ತಮ್ಮ ಬಂದೂಕಿನಿಂದ ಬಿಳಿಜನರು ಸುಟ್ಟುಹಾಕಿ ನಿರ್ನಾಮ ಮಾಡಿದ್ದನ್ನು ತಿಳಿದು ಮರುಗಿದ ಮನ ಆಕೆಯದು.

ತನ್ನ ಇಳಿ ವಯಸ್ಸಿನಲ್ಲಿ, ತನ್ನ ಜನಾಂಗದವರು ಮಾಡಿದ ಈ ಪಾಪಕ್ಕೆ ಪ್ರತಿಯಾಗಿ, ಅಳಿಲುಸೇವೆಯ ರೂಪದ ಪ್ರಾಯಶ್ಚಿತ್ತವನ್ನು ಕೈಗೊಳ್ಳಲೋ ಎಂಬಂತೆ ೬೦ ಹೆಕ್ಟೇರ್ ಭೂಮಿ ಖರೀದಿಸಿ, ಅಲ್ಲಿ ಗೊಂಡಾರಣ್ಯ ಪುನಃ ಬೆಳೆಯುವಂತೆ ಮಾಡಿದ ಆಕೆಯ ಪ್ರಯತ್ನ ಅಪೂರ್ವ. ತನ್ನ ಪ್ರಯತ್ನದ ವಿವರಗಳನ್ನು ‘ವೈಟ್ ಬೀಚ್, ದ ರೈನ್ ಫಾರೆಸ್ಟ್ ಇಯರ್ಸ್’ ಎಂಬ ಪುಸ್ತ ಕರೂಪದಲ್ಲಿ ಹೊರತಂದು, ಪರಿಸರ ಸಂರಕ್ಷಣೆಯ ಹೊಸಬಗೆಯನ್ನು ಜಗತ್ತಿಗೆ ಹೇಳಿಕೊಟ್ಟಿದ್ದಾಳೆ.

ಜರ್ಮೇನ್ ಗ್ರಿಯರ್ ಎಂಬ ಮಹಿಳೆ ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿ. ಆಕೆ ಸೀವಾದಿ ಲೇಖಕಿ ಮತ್ತು ಹೋರಾಟಗಾರ್ತಿ ಎಂದೇ ಪ್ರಸಿದ್ಧಿ ಪಡೆದವಳು.
ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ೧೯೬೭ರಲ್ಲಿ ಪಿ.ಎಚ್‌ಡಿ. ಮಾಡಿದ ನಂತರ, ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಮತ್ತು ತೌಲನಿಕ
ಅಧ್ಯಯನದಲ್ಲಿ ಅಧ್ಯಾಪನ ವೃತ್ತಿ ಮಾಡಿದಳು. ೧೯೭೦ರ ದಶಕದಲ್ಲಿ ಆಕೆ ಪ್ರಕಟಿಸಿದ ‘ಫಿಮೇಲ್ ಎನುಚ್’ ಎಂಬ, ತುಸು ವಿವಾದಾತ್ಮಕ ಪುಸ್ತಕದಿಂ
ದಾಗಿ ಹೆಸರುವಾಸಿಯಾದಾಕೆ. ನಂತರ ಕೆಲವು ಸೀ- ಕೇಂದ್ರಿತ ಕೃತಿಗಳನ್ನು ಸಹ ಆಕೆ ಪ್ರಕಟಿಸಿದ್ದುಂಟು.

೨೦೦೪ರಲ್ಲಿ ‘ಷೇಕ್ಸ್ ಪಿಯರ‍್ಸ್ ವೈ-’ ಎಂಬ ವಿನೂತನ ಗ್ರಂಥದಲ್ಲಿ ಆ ಉದ್ದಾಮ ನಾಟಕಕಾರನ ಪತ್ನಿಯ ದಿನಚರಿ ಹೇಗಿರಬಹುದು ಎಂಬ ಸಂಶೋ
ಧನಾತ್ಮಕ ಚಿಂತನೆಯನ್ನು ತೋಡಿಕೊಂಡಿದ್ದು ವಿಮರ್ಶಾ ವಲಯದ ಗಮನಸೆಳೆದಿತ್ತು. ಜತೆಗೆ, ಅಲ್ಲಿ ಆಕೆ ಪ್ರತಿಪಾದಿಸಿದ ವಿಚಾರಗಳು ಕೆಲವು ವಿಮ
ರ್ಶಕರ ಟೀಕೆಗೂ ಗುರಿಯಾಗಿದ್ದವು. ಈ ರೀತಿ, ಚಿಂತಕರ, ಬರಹಗಾರರ ವಲಯದಲ್ಲಿ ಪ್ರಸಿದ್ಧಿ ಪಡೆದು, ಇಂಟಲೆಕ್ಚುವಲ್ ಜಗತ್ತಿನಲ್ಲಿ ತನ್ನದೇ ಅಸ್ತಿತ್ವ
ವನ್ನು ರೂಪಿಸಿಕೊಂಡಿದ್ದ ಈ ದಿಟ್ಟಲೇಖಕಿ ತನ್ನ ಬೇರುಗಳನ್ನು ಹುಡುಕಿಕೊಂಡು ವಾಪಸು ಹೊರಟದ್ದೇ ಒಂದು ವಿಸ್ಮಯ.

ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವಲ್ಲಿ ಈಕೆಗೆ ಇರುವ ಆಸಕ್ತಿ, ತುಡಿತ ಅದೆಷ್ಟೆಂದರೆ, ಅದು ಕೆಲವು ಬಾರಿ ಅತಿರೇಕಕ್ಕೆ ಹೋಗಿ, ಅರೆನಗ್ನ ಚಿತ್ರಗಳನ್ನೂ ಈಕೆ ಪ್ರದರ್ಶಿಸಿದ್ದುಂಟು! ಈಕೆಯು ಯಶಸ್ವಿ ಲೇಖಕಿ. ತಾನು ಗಳಿಸಿದ ಹಣವನ್ನೆಲ್ಲಾ ಒಂದೆಡೆ ಕೂಡಿಹಾಕಿ, ತನ್ನ ೬೨ನೆಯ
ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಪ್ರದೇಶದ ಮಳೆಕಾಡಿನ ನಡುವೆ ಪಾಳುಬಿದ್ದಿದ್ದ ೬೦ ಹೆಕ್ಟೇರ್ ಜಮೀನನ್ನು ಕೊಂಡು, ಆ ಜಾಗವು ಪುನಃ ತನ್ನ ಮೂಲ ಸ್ವರೂಪವಾದ ಮಳೆಕಾಡಿನ ಸ್ವರೂಪ ವನ್ನು ಪಡೆದುಕೊಳ್ಳಲಿ ಎಂದು ಪ್ರಾಮಾಣಿಕ ಪ್ರಯತ್ನ ನಡೆಸಿದಳು. ತನ್ನ ಜೀವಿತಾವಽಯ ಸಂಪಾದನೆಯನ್ನು ಪೂರ್ತಿಯಾಗಿ ಅಲ್ಲಿ ಸುರಿದು, ಲಂಟಾನಾ ಮತ್ತಿತರ ಕಳೆಗಳು ದಂಡಿಯಾಗಿ ಬೆಳೆದು ಕೊಂಡಿದ್ದ ಆ ಜಾಗವು ತನ್ನ ಮೂಲರೂಪವಾದ ಮಳೆಕಾಡು ಅಥವಾ ಪುರಾತನ ಗೊಂಡ್ವಾನಾ ರೂಪ ವನ್ನು ತಳೆಯಲಿ ಎಂದು ಆಶಿಸಿದ ಆಕೆಯ ಕನಸು ನಿಜಕ್ಕೂ ಆದರ್ಶ ಸ್ವರೂಪದ್ದು.

ಆದರೆ, ತುಸು ಅತಿರೇಕ ಎನಿಸಬಹುದಾದ ಈ ಸಾಹಸವನ್ನು ಕಂಡು ಆಕೆಯ ಕೆಲವು ಹಿತೈಷಿಗಳು ಕನಿಕರಿಸಿದ್ದೂ ಉಂಟು. ಇನ್ನು ಕೆಲವರು ಪ್ರೋತ್ಸಾಹ ರೂಪದಲ್ಲಿ ಬೆನ್ನು ತಟ್ಟಿದ್ದೂ ಉಂಟು. ಇದೊಂದು ದುಸ್ಸಾಹಸ, ಈ ವಿಪರೀತ ಆಶಯದಿಂದಾಗಿ ಆಕೆ ತನ್ನೆಲ್ಲಾ ಹಣವನ್ನು ಕಳೆದುಕೊಳ್ಳು ವಂತಾಗಬಹುದು ಎಂದು ಬೆದರಿಸಿದವರೂ ಇದ್ದರು. ಹಿಂದೊಮ್ಮೆ ಮಳೆಕಾಡಾಗಿದ್ದ ಆ ಜಾಗವು, ಹಲವು ದಶಕಗಳ ನಿರಂತರ ಬಳಕೆಯಿಂದಾಗಿ ಬರಡಾಗಿತ್ತು; ಭಯಾನಕ ವಿಷವನ್ನು ಸುರಿದು, ಅಲ್ಲಿ ಬಾಳೆ ಮೊದಲಾದ ಬೆಳೆಗಳನ್ನುಬೆಳೆದು, ಕೆಲವು ವರ್ಷಗಳ ನಂತರ ಅಲ್ಲಿ ಇನ್ನೇನೂ ಬೆಳೆಯಲಾಗದು ಎಂದು ಅರಿತ ನಂತರ, ಬಿಟ್ಟು ಹೋಗಿದ್ದರು.

ಅಲ್ಲಿ ಬೆಳೆದಿದ್ದ ಕಳೆಗಳನ್ನು ಸವರಿ, ಕೆಲವು ಸಸ್ಯಶಾಸಜ್ಞರ ಸಲಹೆಯ ಮೇರೆಗೆ ಸ್ಥಳೀಯ ಎಂದು ಗುರುತಿಸಿಕೊಂಡ ಗಿಡ ಮರಗಳನ್ನು ತಂದು ನೆಟ್ಟು ಬೆಳೆಸಲು ಯತ್ನಿಸಿದಳು. ಅಂಥ ಪ್ರದೇಶವನ್ನು ಅದರಷ್ಟಕ್ಕೇ ಬಿಟ್ಟುಬಿಟ್ಟರೆ, ಪುನಃ ಕಾಡು ತನ್ನ ಮೂಲರೂಪವನ್ನು ಕಂಡುಕೊಳ್ಳುತ್ತದೆ ಎಂದು ಯಾರೋ ನೀಡಿದ ಸಲಹೆಯನ್ನು ಕೇಳಿ ಅಂಥ ಪ್ರಯತ್ನವನ್ನು ಕೂಡ ಮಾಡಿದಳು. ಈ ಮಧ್ಯೆ, ತನ್ನ ಜನ್ಮಸ್ಥಳವಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಓಡಾಡಿಕೊಳ್ಳುತ್ತಾ, ಕೃತಿರಚನೆ ಮತ್ತು ಭಾಷಣ ನೀಡುವ ಕಾಯಕವನ್ನು ಮುಂದುವರಿಸಿದಳು.

ಒಂದು ದಶಕದ ನಂತರ, ಆಕೆಯ ಪ್ರಯತ್ನ ತುಸು ಫಲ ನೀಡುವಂತೆ ಕಾಣಿಸತೊಡಗಿತು. ಮಳೆಕಾಡಿನಲ್ಲಿ ಕಂಡುಬರುವ ಹಲವು ಸಸ್ಯಗಳು
ಪುನರ್ಜನ್ಮ ಪಡೆದುಕೊಂಡವರಂತೆ ಹುಟ್ಟಿಕೊಳ್ಳತೊಡಗಿದವು. ಆಕೆಯ ಸಹೋದರಿಯು ಸಸ್ಯಶಾಸ್ತ್ರಯಾಗಿದ್ದುದು ಸಹಾಯಕ್ಕೆ ಬಂತು; ಸ್ಥಳೀಯ
ಸಸ್ಯಗಳ ಮತ್ತು ಅವಕ್ಕೆ ಸಂಬಂಽಸಿದ ಇತಿಹಾಸವನ್ನು ತಿಳಿಯಲು ಅನುಕೂಲವಾಯಿತು. ಸುತ್ತಮುತ್ತಲೂ ಹರಡಿದ್ದ ಮಳೆಕಾಡಿನಲ್ಲಿ ಮೊದಲಿನಿಂದಲೂ ವಾಸಿಸಿದ್ದ, ಆದರೆ ಕೃಷಿಕರಿಂದ ತೊಂದರೆಗೊಳಗಾದ ಪ್ರಾಣಿ-ಪಕ್ಷಿಗಳು ಈ ‘ಸುರಕ್ಷಿತ’ ಪ್ರದೇಶಕ್ಕೆ ಬಂದು ನೆಲೆಕಂಡುಕೊಳ್ಳಲು ಆರಂಭಿಸಿದವು. ಹೆಬ್ಬಾವು, ಕಾಡುನಾಯಿ, ದೊಡ್ಡ ಜಾತಿಯ ಉಡ, ವಿವಿಧ ಹಕ್ಕಿ, ಕೀಟ, ಮರಕಪ್ಪೆ ಇಂಥ ಹಲವು ಜೀವಿಗಳು ಇವರ ಮಳೆಕಾಡಿನಲ್ಲಿ ತಮ್ಮ ಚಟುವಟಿಕೆಗಳನ್ನು ಆರಂಭಿಸಿದವು.

ವಾಸ್ತವವೆಂದರೆ, ಈ ೬೦ ಹೆಕ್ಟೇರಿನ ಸುತ್ತಮುತ್ತಲೂ ಹರಡಿಕೊಂಡಿರುವುದು ಸಹಾ ಆಸ್ಟ್ರೇಲಿಯಾದ ಮಳೆಕಾಡುಗಳ ಪ್ರದೇಶವೇ. ಆದರೆ, ಆ ಸುತ್ತಮುತ್ತಲಿನ ಸಾವಿರಾರು ಹೆಕ್ಟೇರ್ ಪ್ರದೇಶ ವನ್ನು ಆಧುನಿಕ ಮಾನವನು ‘ಅಭಿವೃದ್ಧಿ’ಪಡಿಸಲು ಯತ್ನಿಸಿದ್ದರಿಂದಾಗಿ, ಅಲ್ಲೆಲ್ಲಾ ಪರಿಸರ ನಾಶವನ್ನೇ ಹೆಚ್ಚಾಗಿ ಕಾಣಬಹುದಾಗಿತ್ತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೆಸಾರ್ಟ್‌ಗಳನ್ನು ನಡೆಸುವವರು ಆರ್ಥಿಕ ಚಟುವಟಿಕೆಗೆ ಮತ್ತು ಬೇಗನೆ ಲಾಭವನ್ನು ತರಲು ಪೂರಕವಾದ ಕ್ರಮಗಳನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದರು. ಹಿಂದೆ, ಅಲ್ಲಿದ್ದ ದಟ್ಟವಾದ ಕಾಡನ್ನು ಸವರಿ, ಬಾಳೆ ಮೊದಲಾದ ಆರ್ಥಿಕ ಬೆಳೆಗಳನ್ನು ಬೆಳೆಯಲು ಹರಸಾಹಸ ಮಾಡಿದ್ದರು. ಆರ್ಥಿಕ ಲಾಭ ಮತ್ತು ತ್ವರಿತ ಬೆಳೆ ಬರಲು ಅಲ್ಲಿನ ನೆಲಕ್ಕೆ ನಾನಾ ರೀತಿಯ ವಿಷವಸ್ತುಗಳನ್ನು ಮತ್ತು ಕಳೆನಾಶಕ ಗಳನ್ನು ಸುರಿದಿದ್ದರು. ಕಳೆ ಅಥವಾ ಇತರ ಸಸ್ಯಗಳನ್ನು ನಾಶಪಡಿಸಲು, ವಿಯೆಟ್ನಾಂನಲ್ಲಿ ಯುದ್ಧದ
ಸಮಯದಲ್ಲಿ ಅಮೆರಿಕದ ಸೈನ್ಯವು ಅಲ್ಲಿನ ದಟ್ಟಕಾಡುಗಳ ಮೇಲೆ ಸುರಿದಿದ್ದ ಘನಘೋರ ವಿಷವನ್ನು ಸಹಾ ಸುರಿದು ನೆಲವನ್ನು ಹಾಳುಗೆಡವಿದ್ದರು.
ಜತೆಗೆ, ಆ ಸುತ್ತಲಿನ ಪ್ರದೇಶವನ್ನು ಸವರಿ, ದೊಡ್ಡ ಗಾತ್ರದಲ್ಲಿ ಡೈರಿ ಫಾರ್ಮಿಂಗ್ ಮಾಡಿ, ಹಾಲು ಮತ್ತು ಇತರ ಉತ್ಪನ್ನಗಳನ್ನು ತಯಾರಿಸುವ ಭರ
ದಲ್ಲಿ, ಪರಿಸರಕ್ಕೆ ಸಾಕಷ್ಟು ಧಕ್ಕೆ ತಂದಿದ್ದರು. ಇವೆಲ್ಲವೂ, ಆಸ್ಟ್ರೇಲಿಯಾದ ಬಿಳಿ ಜನರು ಅಥವಾ ಲೇಖಕಿಯ ಜನಾಂಗದವರು ತಮ್ಮ ವಸಾಹತು ಶಾಹಿ ಧೋರಣೆಯಿಂದ ನಡೆಸಿದ ಅಚಾತುರ್ಯ ಅಥವಾ ಕುಕೃತ್ಯಗಳು!

ಕುಕೃತ್ಯ ಎಂಬ ಶಬ್ದ ಏಕೆಂದರೆ, ಅಲ್ಲಿ ಮೂಲ ನಿವಾಸಿಗಳಿದ್ದರು; ಅವರ ವಾಸಸ್ಥಳವನ್ನು ಕಿತ್ತು ಕೊಂಡ ಬಿಳಿ ಜನರು ಇಂಥ ಕೃತ್ಯ ಮಾಡಿ, ಕಾಡಿನ
ನಾಶಕ್ಕೆ ದಾರಿ ಹಾಡಿದ್ದರು. ತನ್ನ ಕುಲದವರು, ಅಂದರೆ ಬಿಳಿಜನರು, ಸ್ಥಳೀಯ ಆದಿಮ ಜನಾಂಗ ದವರ ಮೇಲೆ ನಡೆಸಿದ ದಬ್ಬಾಳಿಕೆ ಮತ್ತು ದೌರ್ಜ
ನ್ಯದ ಕುರಿತು ಲೇಖಕಿ ಜರ್ಮೇನ್ ಗ್ರಿಯರ್‌ಗೆ ಸಾಕಷ್ಟು ಪಶ್ಚಾತ್ತಾಪವಿದೆ. ತಾನು ಖರೀದಿಸಿದ ೬೦ ಹೆಕ್ಟೇರ್ ಪ್ರದೇಶದಲ್ಲಿ ಗೊಂಡ್ವಾನಾ ಮಳೆಕಾಡನ್ನು ಬೆಳೆಸಲು ಪಟ್ಟ ಹರಸಾಹಸದಂಥ ಅನುಭವದ ವಿವರಗಳನ್ನುಳ್ಳ ಆಕೆಯ ಪುಸ್ತಕ ‘ವೈಟ್ ಬೀಚ್’.

ಈ ಪುಸ್ತಕದ ಹಲವು ಅಧ್ಯಾಯಗಳಲ್ಲಿ ಆಸ್ಟ್ರೇಲಿಯಾದ ಆದಿಮ ಜನಾಂಗದ ಕುರಿತು ವಿವರಗಳಿವೆ. ೧೯ ಮತ್ತು ೨೦ನೆಯ ಶತಮಾನದ ಉದ್ದಕ್ಕೂ, ಸ್ಥಳೀಯ ಜನರನ್ನು ಬಿಳಿಜನರು ಹತ್ತಿಕ್ಕಿದ, ಹಿಂಸೆಗೆ ಒಳಪಡಿಸಿದ, ಸಾಯಿಸಿದ ಘನಘೋರ ಇತಿಹಾಸದ ತುಣುಕುಗಳನ್ನು ಲೇಖಕಿಯು ತನ್ನ ಪುಸ್ತಕದುದ್ದಕ್ಕೂ ಅಲ್ಲಲ್ಲಿ ನೀಡುತ್ತಾಳೆ. ಬಿಳಿಜನರು ನಡೆಸುತ್ತಿದ್ದ ಡೈರಿ ಫಾರಂನ ಹೊರಭಾಗದಲ್ಲಿ ದೊರೆಯುತ್ತಿದ್ದ ಹಾಲಿನ ಕೆನೆಯನ್ನು ಕದ್ದು ನೆಕ್ಕಲು ರಾತ್ರಿ ಹೊತ್ತು ಬರುತ್ತಿದ್ದ ಹಸಿದಿದ್ದ ಅನಕ್ಷರಸ್ಥ ಸ್ಥಳೀಯರನ್ನು ಅದು ಹೇಗೆ ವಿಷಭರಿತ ಕೆನೆಯನ್ನು ಬಳಸಿ ಕೊಂದರು ಎಂಬ ವಿವರವಾಗಲೀ, ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸ್ಥಳೀಯ ಜನರನ್ನು ಗುಂಡಿಟ್ಟು ಕೊಂದ ವಿಚಾರ ವಾಗಲೀ ಪುಸ್ತಕದುದ್ದಕ್ಕೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ;
ಮತ್ತು ಆಸ್ಟ್ರೇಲಿಯಾದಲ್ಲಿ ಯುರೋಪಿನ ಜನರು ನಡೆಸಿದ ರಕ್ತಸಿಕ್ತ ಅಭಿಯಾನದ ಕಿರು ಪರಿಚಯ ವನ್ನೂ ಈ ಪುಸ್ತಕ ಮಾಡುತ್ತದೆ.

ಇದೇಕೆ ರಕ್ತಸಿಕ್ತ ಇತಿಹಾಸ ಎಂದರೆ, ಆಸ್ಟ್ರೇಲಿಯಾದ ಅನಕ್ಷರಸ್ಥ ಸ್ಥಳೀಯರು ಬಳಸುತ್ತಿದ್ದುದು ಬಿಲ್ಲು, ಬಾಣ, ಈಟಿ ಮೊದಲಾದ ಆಯುಧಗಳನ್ನು;
ಬಿಳಿಜನರು ಮದ್ದು ಗುಂಡುಗಳ ಸಹಾಯದಿಂದ, ತಮಗೆ ಅನುಕೂಲವೆನಿಸುವ ಅದ್ಯಾವುದೋ ಕಾನೂನನ್ನು ಮಾಡಿಕೊಂಡು ಸ್ಥಳೀಯ ಆದಿಮ
ಜನರನ್ನು ೨ ಶತಮಾನಗಳ ಕಾಲ ಬೇಟೆಯಾಡಿದರು. ಹೆಚ್ಚು ಸಂಘಟಿತರಲ್ಲದ ಅದೆಷ್ಟೋ ಪಂಗಡದ ಆದಿಮ ಜನರನ್ನು ಆಸ್ಟ್ರೇಲಿಯಾ ಖಂಡದ ಉದ್ದಕ್ಕೂ ನಿರ್ನಾಮ ಮಾಡಿದ ಪಾತಕ ಅಲ್ಲಿನ ಬಿಳಿಜನರ ಪ್ರಗತಿಗೆ ಅಂಟಿಕೊಂಡಿದೆ. ಆಸ್ಟ್ರೇಲಿಯಾದ ಆದಿಮ ಜನರನ್ನು ‘ಅಬಾರಿಜಿನಲ್’ ಎನ್ನಲಾಗುತ್ತಿದ್ದು, ತಮ್ಮ ಪಾಡಿಗೆ ಅಲ್ಲಿನ ಪ್ರಾಣಿಗಳೊಂದಿಗೆ ಬದುಕಿಕೊಂಡಿದ್ದ ಅವರನ್ನು ನಾಮಾವಶೇಷ ಮಾಡಿ, ಬಿಳಿಜನರು ಅಲ್ಲಿ ನೆಲೆಯೂರಿದ ಇತಿಹಾಸದ ಕುರಿತು ಲೇಖಕಿಗೆ ಆಳವಾದ ಜ್ಞಾನವಿದ್ದು, ‘ವೈಟ್ ಬೀಚ್’ ಕೃತಿಯುದ್ದಕ್ಕೂ ಅದನ್ನು ಪ್ರಸ್ತಾಪಿಸಿರುವುದು ಕುತೂಹಲಕಾರಿ.

ಆಸ್ಟ್ರೇಲಿಯಾದ ನಿಸರ್ಗವನ್ನು, ಅಲ್ಲಿನ ಕಾಡನ್ನು ಕಡಿಯುವುದರ ಜತೆ, ವಿಷಯುಕ್ತ ಕೀಟನಾಶಕ ಗಳನ್ನು ಸುರಿದು ಭೂಮಿಯನ್ನು ನಂಜುಯುಕ್ತ
ಮಾಡಿದ್ದಕ್ಕೂ, ಅದೇ ಸಮಯದಲ್ಲಿ ಅಲ್ಲಿನ ಆದಿಮ ಜನಾಂಗದ ಸಹಸ್ರಾರು ಜನರನ್ನು ಬಂದೂಕು ಬಳಸಿ ಸಾಯಿಸಿದ್ದಕ್ಕೂ ದಟ್ಟವಾದ ಹೋಲಿಕೆ ಇರುವುದನ್ನು ಲೇಖಕಿಯ ಬರಹವು ಸೂಚಿಸುತ್ತದೆ. ಅಂಥ ರಕ್ತಸಿಕ್ತ ಇತಿಹಾಸವನ್ನು ತನ್ನ ನೆಲದಲ್ಲಿ ಹೂತಿಟ್ಟುಕೊಂಡಿರುವ ಜಾಗವೊಂದನ್ನು ಖರೀದಿಸಿ, ಅಲ್ಲಿ ಪುನಃ ಗೊಂಡಾರಣ್ಯವನ್ನು ಬೆಳೆಸುವ ಪ್ರಯತ್ನ ಮಾಡಿರುವ ಲೇಖಕಿಯು, ‘ಅಲ್ಲಿನ ಮೂಲನಿವಾಸಿಯು ಬಂದು ಈ ಜಾಗ ನಮ್ಮ ಕುಲಕ್ಕೆ ಸೇರಿದ್ದು, ನಮಗೆ ಬಿಟ್ಟುಕೊಡಿ’ ಎಂದು ಹಕ್ಕೊತ್ತಾಯ ಮಾಡಿದರೆ, ಆ ಜಾಗವನ್ನು ಅವರಿಗೆ ಬಿಟ್ಟುಕೊಡಲು ತಾನು ತಯಾರಿದ್ದೇನೆ
ಎಂದು ಒಂದೆಡೆ ಹೇಳಿಕೊಳ್ಳುತ್ತಾಳೆ.

೨೦೦೧ರಲ್ಲಿ ಲೇಖಕಿಯು ಖರೀದಿಸಿದ ೬೦ ಹೆಕ್ಟೇರ್ ಬರಡು ಭೂಮಿಯು ಮರಳಿ ತನ್ನ ಮೂಲ ರೂಪವಾದ ಮಳೆಕಾಡಿನ ಸ್ವರೂಪವನ್ನು ಪಡೆಯುವ
ಪರಿಯನ್ನು ೨೦೧೩ರಲ್ಲಿ ಪ್ರಕಟಗೊಂಡ ‘ವೈಟ್ ಬೀಚ್’ ಪುಸ್ತಕದಲ್ಲಿ ಲೇಖಕಿ ಜರ್ಮೇನ್ ಗ್ರಿಯರ್ ಬರೆದುಕೊಂಡಿದ್ದಾಳೆ. ಆ ಜಾಗವನ್ನು ಲೇಖಕಿಯು
ಹಣಕೊಟ್ಟು ಖರೀದಿಸಿದ್ದರೂ, ಅದರ ಒಡೆತನವನ್ನು ಆಕೆ ಇಟ್ಟುಕೊಳ್ಳಲು ಬಯಸುವುದಿಲ್ಲ. ಗೊಂಡ್ವಾನಾ ರೈನ್ ಫಾರೆಸ್ಟ್ ಎಂಬ ಹೆಸರಿನ ಟ್ರಸ್ಟ್ ಒಂದನ್ನು ರಚಿಸಿ, ಅದನ್ನು ಆಸ್ಟ್ರೇಲಿಯಾದ ಒಂದು ಲಾಭರಹಿತ ಟ್ರಸ್ಟ್ ಆಗಿ ನಡೆಸಲು ಅವಶ್ಯವಿರುವ ಕಟ್ಟಲೆಗಳನ್ನು ನಿರೂಪಿಸಿ, ಆ ಮಳೆಕಾಡನ್ನು ಆ ಟ್ರಸ್ಟ್‌ಗೆ ವಹಿಸಿ ಕೊಟ್ಟಿದ್ದಾಳೆ.

ತನ್ನ ೭೪ನೆಯ ವಯಸ್ಸಿನಲ್ಲಿ, ಇದಕ್ಕಿಂತ ಇನ್ನೇನು ತನಗೆ ಬೇಕು ಎಂದು ಉದ್ಗರಿಸುವ ಜರ್ಮೇನ್ ಗ್ರಿಯರ್ ನುಡಿಗಳು, ಜೀವನದಲ್ಲಿ ಎಲ್ಲವನ್ನೂ ಕಂಡು ಅನುಭವಿಸಿ, ನಂತರ ನಿರ್ವಾಣವನ್ನು ಬಯಸುವ ಜೀವಿಯೊಂದರ ಮಾನಸಿಕ ಪಕ್ವತೆಯನ್ನು ತನ್ನಲ್ಲಿ ಹುದುಗಿಸಿಕೊಂಡಂತೆ ಅನಿಸುತ್ತದೆ.
ವಿದೇಶದಲ್ಲಿದ್ದ ಈಕೆ, ೨೦೨೧ರಲ್ಲಿ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ, ತನ್ನ ಮನೆಯನ್ನು ಮಾರಿ, ಹಿರಿಯರಿಗೆಂದೇ ಇರುವ ಆಶ್ರಮದಲ್ಲಿ ವಾಸಿಸುತ್ತಿದ್ದು,
ಅಲ್ಲಿರುವ ಹಿರಿಯ ಮಹಿಳೆಯರ ನೋವುಗಳಿಗೆ ದನಿಯಾಗಿದ್ದಾಳೆ.