ಶಶಾಂಕಣ
shashidhara.halady@gmail.com
ಕಾಡಿನಲ್ಲಿ ಬೆಳೆದು ಸುಗಂಧ ಬೀರುವ ಹೂವುಗಳ ವಿಚಾರ ಬಂದಾಗ ಮೊದಲು ನೆನಪಾಗುವುದು ಸುರಗಿ ಹೂವು. ಈಗಿನ ಬಹಳಷ್ಟು ಜನ ಈ ಹೂವನ್ನು ನೋಡಿಲ್ಲವಾದರೂ ಹೆಸರನ್ನು ಕೇಳಿದ್ದಾರೆ. ಒಣಗಿದ ನಂತರವೂ ನಾಲ್ಕೆಂಟು ತಿಂಗಳು ಪರಿಮಳ ಬೀರುತ್ತಾ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ ಸುರಗಿ ಹೂವು.
ಬಿರುಬೇಸಗೆಯಿಂದಾಗಿ ನಾಡಿಗೆ ನಾಡೇ ತಾಪಮಾನದಲ್ಲಿ ಬೆಂದುಹೋಗುತ್ತಿದೆ. ಬೆಂಗಳೂರಿನಂಥ ಎತ್ತರವಾದ ಪ್ರದೇಶದಲ್ಲಿರುವ ಜಾಗದಲ್ಲೂ ೩೮ ಡಿಗ್ರಿ ಸೆಲ್ಷಿಯಸ್ ಎಂದು ಹೇಳುತ್ತಿದ್ದಾರೆ. ಪ್ರಕೃತಿಯ ಎಂದಿನ ಬದಲಾವಣೆಯಂತೆ ತನ್ನ ಪಾಡಿಗೆ ತಾನು ಬರು ತ್ತಿರುವ ವಸಂತ ಋತುವು ಈ ವರ್ಷವಂತೂ ಅತಿಯಾದ ಬಿಸಿಯಿಂದಾಗಿ ಜನರಿಗೆ ಸುಸ್ತು ಹೊಡೆಸಿರುವುದಂತೂ ನಿಜ.
ವಿಶೇಷವೆಂದರೆ, ಇಂಥ ಬೇಸಗೆಯಲ್ಲಿ, ಬೇಸಗೆಗೆ ತುಸು ಮೊದಲು ನಾನಾ ರೀತಿಯ ಹೂವುಗಳು ಅರಳುವುದು ಈ ನಿಸರ್ಗದ
ವಿದ್ಯಮಾನಗಳಲ್ಲೊಂದು. ಹಲವು ತೆರನ ಕಾಡು ಹೂವುಗಳು, ಹಣ್ಣುಗಳು ಬೇಸಗೆಯ ಬಿಸಿಯನ್ನು ತಂಪು ಮಾಡಲೋ ಎಂಬಂತೆ, ಭೂರಮೆ ಮೇಲ್ಮೈಯಲ್ಲಿ ನಳನಳಿಸುತ್ತವೆ, ನೋಡುವವರ ಕಣ್ಣಿಗೆ ಹಬ್ಬವನ್ನೇ ನೀಡುತ್ತವೆ.
ನಮ್ಮ ಹಳ್ಳಿಯಲ್ಲಿ, ಹಿಂದೆ ಮನೆಯ ಸುತ್ತಲೂ ಕುರುಚಲು ಕಾಡು, ಗುಡ್ಡ, ಹಕ್ಕಲು ಇದ್ದು, ಅಲ್ಲಿ ಪ್ರಕೃತಿ ಸಹಜ ಎನಿಸುವ ಗಿಡ, ಮರ, ಬಳ್ಳಿ, ಪೊದೆ, ಹಳುಗಳು ಇದ್ದಾಗ, ಬೇಸಗೆಯಲ್ಲಂತೂ ನಾನಾ ರೀತಿಯ ಹೂವು ಹಣ್ಣುಗಳ ಮೆರವಣಿಗೆ. ಕಾಡು ಮಾವು,
ಹೆಬ್ಬಲಸು, ಕಾರಿ, ಚಾರ್, ಚೀಂಪಿ, ಮುರಿನ, ಪನ್ನೇರಲ, ಕಾಕಿ, ಬೆಳಮಾರು, ಬುಕ್ಕಿ ಮೊದಲಾದ ಹಣ್ಣುಗಳಾಗುವುದು ಇದೇ ಬೇಸಗೆಯಲ್ಲಿ. ಇದಕ್ಕೆ ಸರಿಸಮನಾಗಿ ಸ್ಪರ್ಧೆ ನೀಡುವಂತೆ ನಾನಾ ರೀತಿಯ ಹೂವುಗಳು ಸಹ ಬೇಸಗೆಯಲ್ಲಿ ಅರಳುತ್ತಿದ್ದವು!
(ಈಗಲೂ ಅರಳುತ್ತವೆ, ಅಂಥ ಮರಗಳನ್ನು ಉಳಿಸಿಕೊಂಡಿದ್ದರೆ ಮಾತ್ರ. ಆದರೆ, ನಮ್ಮ ಹಳ್ಳಿಯ ಸುತ್ತಲೂ ಸಹಜವಾಗಿ ಬೆಳೆದ ಕಾಡು ನಿರ್ನಾಮವಾಗುತ್ತಿದೆ. ಅಕೇಶಿಯಾ ಮಾತ್ರ ಎಲ್ಲೆಡೆ ಹರಡುತ್ತಿದೆ). ಕಾಡಿನ ನಡುವೆ ಬೆಳೆದು, ಸುಗಂಧ ಬೀರುವ ಹೂವುಗಳ ವಿಚಾರ ಬಂದಾಗ, ಮೊದಲು ನೆನಪಾಗುವುದು ಸುರಗಿ ಹೂವಿನದು. ಈಗಿನ ಆಧುನಿಕ ಯುಗದಲ್ಲಿ ಬಹಳಷ್ಟು ಜನ ಈ
ಹೂವನ್ನು ನೋಡಿಲ್ಲವಾದರೂ, ಇದರ ಹೆಸರನ್ನು ಕೇಳಿದ್ದಾರೆ.
ಯು.ಆರ್.ಅನಂತಮೂರ್ತಿ ಮತ್ತು ಕೆ. ರಾಮಚಂದ್ರ ಅವರು ತಮ್ಮ ತಮ್ಮ ಆತ್ಮಕಥೆಗಳಿಗೆ ಸುರಗಿ ಎಂಬ ಹೆಸರಿಟ್ಟು, ಆ ಕಾಡು ಕುಸುಮವನ್ನು ಅಜರಾಮರವಾಗಿಸಿಬಿಟ್ಟಿದ್ದಾರೆ. ಸುರಗಿ ಹೂವು ಸಹ ಅಷ್ಟೆ! ಏಪ್ರಿಲ್ ಸಮಯದಲ್ಲಿ ಅರಳುವ ಇವು, ಆಗ ಸುವಾಸನೆ ಬೀರಿದ್ದು ಸಾಲದೆಂಬಂತೆ, ಒಣಗಿದ ನಂತರವೂ ನಾಲ್ಕೆಂಟು ತಿಂಗಳ ತನಕ ಪರಿಮಳ ಬೀರುತ್ತಾ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ನಮ್ಮ ಹಳ್ಳಿ ಮನೆಯ ಎದುರಿನ ಪುಟ್ಟ ದರೆಯನ್ನು ಏರಿ ಗರಡಿ ಜಡ್ಡಿನ ಹತ್ತಿರ ಹಾಯ್ದರೆ, ಸಣ್ಣ ಹಕ್ಕಲು.
ಅಲ್ಲಿನ ಹತ್ತಾರು ಕಾಡು ಗಿಡಗಳ ನಡುವೆ ಒಂದು ಸುರಗಿ ಮರವಿತ್ತು. ದಪ್ಪ ಎಲೆಯ ದಟ್ಟ ಪರ್ಣಛತ್ರಿಯ ಮರ; ಪ್ರತಿ ಬೇಸಗೆಯ ಸಮಯದಲ್ಲಿ ಸುರಗಿ ಮರದಲ್ಲಿ ಹೂವು ಬಿಟ್ಟಾಗ, ಪುಟ್ಟ ಪುಟ್ಟ ಕಾಂಡದ ತುಂಬಾ ಮೊಗ್ಗುಗಳ ರಾಶಿ. ಸುರಗಿ ಕುಸುಮ ಸಂಗ್ರಹಿ ಸಲು ನಸುಕಿನಲ್ಲೇ ಸಾಗಬೇಕು. ಏಕೆಂದರೆ, ಸೂರ್ಯರಶ್ಮಿಯ ಪ್ರಖರತೆ ಏರಿದಂತೆಲ್ಲಾ, ಸುರಗಿ ಮೊಗ್ಗುಗಳು ಬಿರಿದು ಹೂವಾಗಿ ಬಿಡುತ್ತವೆ. ಹೂವಾದ ನಂತರ, ಅವುಗಳನ್ನು ಪೋಣಿಸುವುದು ಕಷ್ಟ. ಆದ್ದರಿಂದ ಮೊಗ್ಗನ್ನೇ ಕೀಳಬೇಕು. ಬೆಳಗಿನ ಆರು ಗಂಟೆಗೇ ಎದ್ದು, ಕಣ್ಣುಜ್ಜುತ್ತಾ ನಾವು ಗದ್ದೆ ಬಯಲಿನ ಅಂಚಿನಲ್ಲಿ ನಡೆಯುತ್ತಾ ಸುರಗಿ ಮರದ ಬಳಿ ಹೋಗುತ್ತಿದ್ದೆವು.
ಅದೊಂದು ಸಣ್ಣ ಮರ; ಹತ್ತಲು ಸುಲಭ. ಅದರ ಟೊಂಗೆ ಏರಿ, ಮೊಗ್ಗುಗಳನ್ನು ಕೀಳುವುದು ನನ್ನ ಕೆಲಸ. ನಾಲ್ಕೆಂಟು ಬೊಗಸೆ
ಮೊಗ್ಗುಗಳನ್ನು ಕಿತ್ತು ಮನೆಗೆ ತಂದ ನಂತರ, ಮೊಗ್ಗಿನ ಕಿವಿಗಳನ್ನು ಬಿಡಿಸಿ, ಮಾಲೆ ಮಾಡುವುದು ನನ್ನ ತಂಗಿಯರ ಕೆಲಸ. ಸೂಜಿ ಮತ್ತು ಬಾಳೆನಾರಿನ ದಾರದಿಂದ ಒಂದು ಮೊಳದುದ್ದದ ಮಾಲೆ ಮಾಡುವಷ್ಟರಲ್ಲಿ, ಮೊಗ್ಗುಗಳೆಲ್ಲಾ ಅರಳಿ ಮನೆತುಂಬಾ ಸುರಗಿಯ ಗಂಧ ತುಂಬಿಕೊಳ್ಳುತ್ತದೆ. ಆ ಮಾಲೆಯನ್ನು ಬೇಸಗೆಯ ಬಿಸಿಲಿನಲ್ಲಿ ಒಣಗಿಸಿಟ್ಟರೆ, ಮಳೆಗಾಲ ಬಂದರೂ, ಸುರಗಿ
ಮಾಲೆಯ ಸುಗಂಧಕ್ಕೆ ಕುಂದಿಲ್ಲ.
ನಮಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಓದಿಕೊಳ್ಳಲು ಒಂದು ತಿಂಗಳು ರಜಾ ಕೊಡುತ್ತಿದ್ದರು. ಅದರಲ್ಲಿ ೧೫ ದಿನ ಮುಂಜಾನೆ ಬೇಗನೆದ್ದು ನಾನು ಮಾಡಿದ್ದು ಇದೇ ಕೆಲಸ. ಈ ರೀತಿ ಒಂದೆರಡು ವಾರ, ಪ್ರತಿದಿನ ಮೊಗ್ಗು ತಂದು ಮಾಲೆ ಮಾಡಿ, ಒಣಗಿಸಿಟ್ಟು ಕೊಂಡು, ಮಳೆಗಾಲದಲ್ಲೂ ತಲೆಗೆ ಮುಡಿಯುತ್ತಿದ್ದರು ಅಂದಿನ ಹೆಂಗೆಳೆಯರು. ನಮ್ಮೂರಿನ ಕುಡುಬಿ ಗಂಡಸರು ತಮ್ಮ ಹೋಳಿ
ಹಬ್ಬದ ಕುಣಿತದ ಅಲಂಕಾರಕ್ಕೂ ಈ ರೀತಿ ಒಣಗಿಸಿದ ಮಾಲೆಯನ್ನು ಪೇಟದ ಸುತ್ತಲೂ ಹೆಮ್ಮೆಯಿಂದ ಸುತ್ತಿಕೊಳ್ಳುತ್ತಿದ್ದರು.
ಬೇಸಗೆಯಲ್ಲೂ ಇತರ ಕಾಲದಲ್ಲೂ, ಕಾಡಂಚಿನ ಕೊಳದ ಬಳಿಯೋ, ತೋಡಿನ ಬಳಿಯೋ ಹೂವುಗಳನ್ನು ಬಿಟ್ಟುಕೊಂಡು, ಘಂ ಎಂದು ಸುವಾಸನೆ ಬೀರುವ ಗಿಡವೊಂದಿದೆ. ಅದರ ಸುವಾಸನೆ ಬಹಳ ಪ್ರಖರ; ಅದೇ ಕೇದಗೆ. ಅದೆಂಥ ಗಿಡ ಎಂದು ಕೇಳಿಯಾರು ಈಗಿನ ತಲೆಮಾರಿನ ಹುಡುಗರು. ನಮ್ಮ ಹಳ್ಳಿಯ ದೇವಸ್ಥಾನದ ಗುಡ್ಡದ ಹತ್ತಿರದ ಪುರಾತನ ಕೆರೆಯ ದಡದಲ್ಲಿ ಕೆಲವು ಕೇದಗೆ
ಗಿಡಗಳಿವೆ. ಕೇವಲ ಗಿಡ ಎಂದಲ್ಲ, ಆ ಗಿಡಗಳನ್ನು ಸವರದೇ ಹಾಗೆಯೇ ಬಿಟ್ಟರೆ ಹತ್ತಾರು ಅಡಿ ಎತ್ತರದ ಮರದ ರೀತಿ ಬೆಳೆಯುವ ಸಸ್ಯ ಅದು.
ಮೈತುಂಬಾ ಮುಳ್ಳುಗಳನ್ನು ತುಂಬಿಕೊಂಡ ಉದ್ದನೆಯ ಎಲೆಗಳು; ಜೊಂಪೆ ಜೊಂಪೆಯಾಗಿ ಬೆಳೆಯುವ ಎಲೆಗಳ ತುದಿಯಲ್ಲಿ ಕೇದಗೆ ಹೂವಿನ ಗುಚ್ಛ ಅರಳುತ್ತದೆ. ಹೂವೆಂದರೆ ಒಂದು ಹೂವಲ್ಲ, ಆ ಗುಚ್ಛದಲ್ಲಿ ಹತ್ತೆಂಟು ಹಳದಿ ಎಸಳುಗಳು. ಹಸಿರು ಎಲೆಗಳ ರಾಶಿಯ ನಡುವೆ, ಕಿರೀಟದ ರೀತಿ ಸುತ್ತಲೂ ಎದ್ದು ನಿಲ್ಲುವ ಕೇದಗೆ ಹೂವುಗಳ ಸೌಂದರ್ಯ ಅಪರೂಪದ್ದು. ಈ ಅಚ್ಚ ಹಳದಿ ಬಣ್ಣದ ಹೂವುಗಳೆಂದರೆ, ನಮ್ಮೂರಿನ ಅಂದಿನ ಮಹಿಳೆಯರಿಗೆ ಬಹಳ ಇಷ್ಟ. ಅರ್ಧದಿಂದ ಮುಕ್ಕಾಲು ಅಡಿ ಇರುವ ಕೇದಗೆ ಹೂವಿನ ಎಸಳನ್ನು ಅರ್ಧಕ್ಕೆ ಮಡಚಿ, ತುರುಬಿಗೆ ಸಿಕ್ಕಿಸಿಕೊಂಡರೆ, ತಲೆಯ ಮೇಲೊಂದು ಪುಟಾಣಿ ಹಳದಿ ಕಿರೀಟ ವೊಂದು ವಿರಾಜಮಾನಗೊಂಡಂತೆ ಕಾಣುತ್ತದೆ!
ಮಹಿಳೆಯ ಮುಖಕ್ಕೆ ಗಾಂಭೀರ್ಯದ ಮೆರುಗನ್ನು ನೀಡುವ ಕೇದಗೆ ಹೂವು ನಮ್ಮೂರಿನ ಮಹಿಳೆಯರಿಗೆ ಇನ್ನಷ್ಟು ಪ್ರಿಯ ವಾಗಲು ಮತ್ತೊಂದು ಕಾರಣ ಅದರ ಸುವಾಸನೆ. ತುಸು ಘಾಟು, ತುಸು ತೀಕ್ಷ್ಣ ಎನಿಸುವ ಆ ಸುಗಂಧವು ಬಹು ದೂರದ ತನಕ ಪಸರಿಸುತ್ತದೆ! ಹಿಂದಿನ ಕಾಲದಲ್ಲಿ ಮದುವೆ ಮೊದಲಾದ ಸಮಾರಂಭದಲ್ಲಿ ಸೇರುವ ಮಹಿಳೆಯರು ಕೇದಗೆಯ ಹೂವನ್ನು
ತುರುಬಿಗೆ ಸಿಕ್ಕಿಸಿಕೊಳ್ಳುತ್ತಿದ್ದರು. ಒಂದು ಗೊಂಚಲಿನಲ್ಲಿ ಹತ್ತಾರು ಎಸಳುಗಳು ಇರುವುದರಿಂದ, ಹಲವು ಮಂದಿಗೆ ಒಂದೊಂದು ಹಳದಿ ಎಸಳನ್ನು ಹಂಚಲು ಸುಲಭ. ಕೇದಗೆಯ ಹೂಗೊಂಚಲಿನಲ್ಲಿ ಪೌಡರ್ ರೀತಿಯ ಪುಡಿ ಸಹ ಇರುತ್ತದೆ!
ಆದರೆ, ಅದನ್ನು ಮುಖಕ್ಕೆ ಹಚ್ಚಿಕೊಂಡವರನ್ನು ನಾನಂತೂ ಕಂಡಿಲ್ಲ. ತೀಕ್ಷ್ಣ ಸುಗಂಧ ಬೀರುವ ಕೇದಗೆ ಹೂವಿಗೆ ಒಂದು
ಸಣ್ಣ ಮಟ್ಟದ ಕುಖ್ಯಾತಿಯೂ ಉಂಟು. ಅದರ ತೀಕ್ಷ್ಣ ಸುವಾಸನೆಯಿಂದ ಆಕರ್ಷಿತವಾಗುವ ನಾಗರಹಾವುಗಳು, ಕೇದಗೆ ಪೊದೆಗಳ ನಡುವೆ ಅಡಗಿರುತ್ತವೆ ಎಂಬ ನಂಬಿಕೆ ಇದೆ. ನಮ್ಮೂರಿನ ಕಾಡು ಕುಸುಮಗಳ ಪೈಕಿ, ನಮ್ಮ ಭಾವಕೋಶವನ್ನು ಆಳವಾಗಿ ಪ್ರವೇಶಿ ಸುವ ಹೂವುಗಳಲ್ಲಿ, ಬಾಗಾಳು ಹೂವಿನದು ಅಗ್ರ ಸ್ಥಾನ (ರಂಜದ ಹೂ, ಬಕುಳ). ಬೇಸಗೆಯ ಸಮಯ, ಇನ್ನೇನು ಯುಗಾದಿ ಮಳೆ ಬೀಳಬಹುದು ಎಂಬ ದಿನಗಳಲ್ಲಿ, ಮುಸ್ಸಂಜೆ ಹೊತ್ತಿನಲ್ಲಿ, ಆಗಸದಿಂದ ನಿಧಾನವಾಗಿ ತೇಲುತ್ತಾ ಕೆಳಗಿಳಿಯುವ, ಚಕ್ರದಂತೆ ತಿರುಗುತ್ತಾ ಧರೆಗೆ ಇಳಿಯುವ ಬಕುಳದ ಹೂವುಗಳ ನೋಟ ನೀಡುವ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡಲು ತುಸು ಕಷ್ಟವೇ ಸರಿ.
ದಟ್ಟ ಕಾಡಿನ ನಡುವೆ ಅಲ್ಲಲ್ಲಿ ಬಕುಳದ ಮರಗಳು ಬೃಹದಾಕಾರವಾಗಿ ಬೆಳೆದುಕೊಂಡಿರುತ್ತವೆ. ಆ ಮರದ ಅಗಣಿತ ರೆಂಬೆ ಕೊಂಬೆಗಳಲ್ಲಿ ಅಡಗಿ ಕುಳಿತಿರುವ ಸಾವಿರಾರು ಹೂವುಗಳು, ಅಂಬರದಿಂದ ತೇಲುತ್ತಾ ಕೆಳಗಿಳಿಯಲು ಮುಸ್ಸಂಜೆ ಅಥವಾ ಮುಂಜಾನೆಯೇ ಪ್ರಶಸ್ತ ಸಮಯ. ಅತ್ತ ಸೂರ್ಯ ತನ್ನ ದಿನದ ಪಯಣ ಮುಗಿಸಿ, ಪಡುವಣದ ಕಡಲನ್ನು ಸೇರುತ್ತಿದ್ದಂತೆ, ಇತ್ತ
ಬಕುಳದ ಹೂವುಗಳು ಒಂದೊಂದಾಗಿ ತೊಟ್ಟಿನಿಂದ ಬಿಡಿಸಿಕೊಂಡು, ತಮ್ಮ ಮೂಲ ಮನೆಯನ್ನು ತೊರೆದು, ಭೂಮಿಯತ್ತ ಪಯಣ ಹೊರಡುತ್ತವೆ.
ಬೇಸಗೆಯಲ್ಲಿ ಹೇರಳವಾಗಿ ದೊರೆಯುವ ಬಕುಳದ ಹೂವುಗಳು, ಇತರ ಕಾಲದಲ್ಲೂ ಅಲ್ಲಲ್ಲಿ, ಸ್ವಲ್ಪ ಮಟ್ಟಿಗೆ ಕಾಣಿಸುವು ದುಂಟು. ದೊಡ್ಡ ರಂಜದ ಮರದ ಅಡಿ ನಿಂತು , ತಲೆ ಎತ್ತಿ ಕಂಡರೆ, ಹತ್ತಾರು ಹೂವುಗಳು ಒಂದೊಂದಾಗಿ ನಿಧಾನವಾಗಿ ಬೀಳುವ ಅಪೂರ್ವ ನೋಟ. ಒಂದೆರಡು ಸೆಂಟಿಮೀಟರ್ ಗಾತ್ರದ ಈ ಪುಟ್ಟ ಬಿಳಿ ಹೂವುಗಳ ಅಂಚಿನಲ್ಲಿ ಚಕ್ರದಂಥ ವಿನ್ಯಾಸ. ಅವು ಬೀಳುವಾಗ ಶ್ವೇತ ಚಕ್ರವೊಂದು ತಿರುಗುತ್ತಾ ಕೆಳಗಿಳಿಯುತ್ತಿದೆಯೇನೋ ಎಂದು ಭಾಸವಾಗುವ ಅಪೂರ್ವ ನೋಟ. ಮುಸ್ಸಂಜೆ ಹೊತ್ತಿನಲ್ಲಿ ರಂಜದ ಮರದ ಅಡಿ ನಿಂತರೆ, ನೆಲದ ತುಂಬಾ ಅಕ್ಷರಶಃ ಸಾವಿರಾರು ಹೂವುಗಳ ಚಿತ್ತಾರ!
ನಮ್ಮ ಹಳ್ಳಿಮನೆಯ ಎದುರಿದ್ದ ದನದ ಕೊಟ್ಟಿಗೆಯಿಂದಾಚೆ ಒಂದು ಬೃಹದಾಕಾರದ ಬಕುಳದ ಮರವಿತ್ತು. ಸಂಜೆಯ ಹೊತ್ತಿ ನಲ್ಲಿ ಅದರ ಅಡಿ ಕಲೆತು, ಬಿಳೀ ಗಿರಗಿಟ್ಲೆ ರೀತಿ ಅಂಬರದಿಂದ ಕೆಳಗಿಳಿದು ಬರುವ ಬಕುಳದ ಹೂವುಗಳನ್ನು ಆರಿಸಿ, ಪುಟ್ಟ ಬುಟ್ಟಿಯಲ್ಲಿ ತುಂಬಿ ತರುವುದೆಂದರೆ ಮಕ್ಕಳಿಗೆ ಬಹು ಇಷ್ಟದ ಚಟುವಟಿಕೆ. ಬುಟ್ಟಿ ತುಂಬಾ ಹೂವುಗಳನ್ನು ತಂದು, ನೀರಿನಲ್ಲಿ ಮುಳುಗಿಸಿ ತೊಳೆದು, ಮಾಲೆ ಕಟ್ಟುವ ಸಡಗರವೆಂದರೆ ಅದೊಂದು ಅಪರೂಪದ ಅನುಭೂತಿ. ಬೆಳಗ್ಗೆ ಸಹ ಈ ರೀತಿ ಹೂವುಗಳ ರಾಶಿಯೇ ದೊರಕುತ್ತಿತ್ತು.
ಬಕುಳದ ಹೂವುಗಳನ್ನು ಬಾಳೆ ದಿಂಡಿನ ದಾರದಲ್ಲಿ ಪೋಣಿಸಿದರೆ, ಸುಂದರವಾದ ಶ್ವೇತವರ್ಣದ ಹಾರ ಸಿದ್ಧ. ಬಕುಳದ ಮಾಲೆ ಯನ್ನು ಸಹ ನಮ್ಮೂರಿನ ಹೆಂಗಸರು ತಲೆಗೆ ಮುಡಿಯುತ್ತಿದ್ದರು. ಮದುವೆಯ ದಿನ ವಧೂವರರು ಬಕುಳದ ಮಾಲೆಯನ್ನು
ಪರಸ್ಪರ ಬದಲಾಯಿಸಿಕೊಳ್ಳುವ ಪದ್ಧತಿಯೂ ಇದೆ. ಇದನ್ನು ಸಹ ಒಣಗಿಸಿ ಇಟ್ಟರೆ ಬಹು ದಿನದ ತನಕ ಸಣ್ಣದಾದ ಸುವಾಸನೆ ಬೀರುತ್ತದೆ. ಆದ್ದರಿಂದ ಬಹುಕಾಲ ಉಪಯೋಗಿಸಬಹುದಾದ ಹೂಮಾಲೆ ಇದು. ಸುರಗಿ ಮತ್ತು ಬಕುಳದ ಹೂವುಗಳು ನಮ್ಮ
ಕಾಡಿನ ವಿಸ್ಮಯ.
ಕಾಡು ಕುಸುಮಗಳಲ್ಲೇ ಅನನ್ಯ ಎಂದರೆ ಗೌರಿ ಹೂ ಅಥವಾ ಅಕ್ಕತಂಗಿಯರ ಹೂ (ಗ್ಲೋರಿಯೋಸಾ ಸುಪರ್ಬಾ). ನಮ್ಮ ಮನೆ ಯಲ್ಲಿ ನಾಲ್ಕೆಂಟು ಗಂಟಿ (ಜಾನುವಾರು) ಇದ್ದವು. ಅವುಗಳನ್ನು ಕೊಟ್ಟಿಗೆಯ ಹಿಂದಿನ ಓಣಿಯಲ್ಲಿ ಓಡಿಸುತ್ತಾ, ಸೇಡಿ ದರೆಯನ್ನು ಏರಿಸಿ, ಗುಡ್ಡೆಗೆ ಎಬ್ಬಿ, ಗಂಟಿ ಮೇಯಿಸುವುದಕ್ಕೆ ಹೋಗಿದ್ದಾಗ, ನಾನು ಈ ಅಪರೂಪದ ಹೂವುಗಳನ್ನು ಕಂಡದ್ದು. ಆ ಹೂವಿನ ನೋಟವಾದರೂ ಎಂಥದ್ದು! ಬೆಂಕಿ, ಬೆಂಕಿ! ಗುಡ್ಡದ ಅಂಚಿನ ಬಳ್ಳಿಯೊಂದರಲ್ಲಿ ಕೆಂಪು ಬಣ್ಣದ ಜ್ವಾಲೆಯನ್ನು ಬೆಳಗುವ ನಾಲ್ಕು ಇಂಚು ಉದ್ದದ ದೀಪಗಳನ್ನು ಹಚ್ಚಿಟ್ಟರೆ ಹೇಗೋ ಅಂಥ ನೋಟ ಅದು. ಕೆಂಪು ಹಳದಿಯ ಆರು ಜ್ವಾಲೆಗಳು, ಪ್ರತಿ ಜ್ವಾಲೆಯ ಬುಡದಲ್ಲಿ ಬೆಂಕಿಯುಗುಳುವ ಕಡ್ಡಿಯ ಸ್ವರೂಪ, ಆ ಕಡ್ಡಿಯ ತುದಿಯಲ್ಲಿ ಹಳದಿ ಬಣ್ಣದ ಬೆಂಕಿ ಕಿಡಿಯನ್ನು ಹೋಲುವ ಪರಾಗ ಕೋಶ!
ಬೇಸಗೆ ಮಾತ್ರವಲ್ಲ ಮಳೆಗಾಲದಲ್ಲೂ ಅರಳುವ ಈ ಹೂವುಗಳು, ಕೈಗೆಟಕುವ ಎತ್ತರದಲ್ಲಿರುವುದರಿಂದ, ಮಕ್ಕಳ ಪ್ರೀತಿಯ
ಪುಷ್ಪಗಳು. ಸಾಮಾನ್ಯವಾಗಿ ಎರಡು ಅಥವಾ ಹೆಚ್ಚು ಹೂವುಗಳು ಒಂದೇ ಬಳ್ಳಿಯಲ್ಲಿ ಅರಳುವುದರಿಂದಾಗಿ ಅಕ್ಕತಂಗಿಯರ ಹೂ ಎಂಬ ಹೆಸರು. ಬೆಂಕಿಯುಂಡೆಯಂಥ ಹೂ ಬಿಡುವ ಸಸ್ಯದ ತುಂಬಾ ವಿಷ ತುಂಬಿದೆಯಂತೆ! ಇದರ ಗಡ್ಡೆಯನ್ನು ಆಕಸ್ಮಿಕವಾಗಿ ತಿನ್ನುವ ಆಫ್ರಿಕಾದ ಜನರು ಸಾಯುವ ಸಂಭವವೂ ಇದೆಯಂತೆ. ಆಫ್ರಿಕಾದ ಜಿಂಬಾಬ್ವೆ ದೇಶದ ರಾಷ್ಟ್ರಪುಷ್ಪ ಇದು. ಕಾಡಿನ ಹೂವುಗಳ ನಡುವೆ ಸೌಂದರ್ಯ ಸ್ಪರ್ಧೆ ಏರ್ಪಡಿಸಿದರೆ, ಅಕ್ಕತಂಗಿಯರ ಹೂ ಅಥವಾ ಗೌರಿ ಹೂವಿನ ಚೆಲುವಿಗೆ, ವರ್ಣ ವಿನ್ಯಾ ಸಕ್ಕೆ ಒಂದು ಬಹುಮಾನ ಖಚಿತ.