Wednesday, 11th December 2024

ಕಾಡುಶುಂಠಿಯ ರಸ ಕುಡಿದ ಹಸು !

ಶಶಾಂಕಣ

shashidhara.halady@gmail.com

ನಮ್ಮ ಹಳ್ಳಿಮನೆಯ ಅಂಗಳದಿಂದಾಚೆಗೆ ಕಾಲಿಟ್ಟರೆ, ನಾನಾ ರೀತಿಯ ಗಿಡ, ಬಳ್ಳಿ, ಪೊದೆ, ಮರಗಳ ಮೆರವಣಿಗೆ! ಮನೆ ಎದುರಿನ ಹಟ್ಟಿ ಕೊಟ್ಟಿಗೆಯನ್ನು ಹಾದು, ಹಕ್ಕಲಿನತ್ತ ಸಾಗುವ ದಾರಿಯನ್ನು ಹಿಡಿದರೆ, ಮೊದಲಿಗೆ ಚಿಕ್ಕದೊಂದು ತೋಡು ಅಡ್ಡಹಾಯುತ್ತದೆ. ಆ ತೋಡಿನುದ್ದಕ್ಕೂ ಪೊದೆಗಳ ರೀತಿ ಬೆಳೆದ ಹಲವಾರು ಗಿಡಗಳು; ಅವುಗಳ ನಡುವೆ ಶುಂಠಿಯನ್ನು ಹೋಲುವ ಗಿಡಗಳ ಪೊದೆಗಳು ದಂಡಿಯಾಗಿ ಬೆಳೆದಿರುತ್ತವೆ.

ಮಳೆ ಬಂದ ನಂತರವಂತೂ, ಅವುಗಳ ದಟ್ಟಣೆಗೆ ಎಣೆಯೇ ಇಲ್ಲ. ಇದೇ ಕಾಡುಶುಂಠಿ. ಇದರ ಗಡ್ಡೆಯನ್ನು, ಎಲೆಯನ್ನು ಔಷಧವಾಗಿ ಬಳಸುವುದುಂಟು ಎಂದು ನಮ್ಮ ಅಮ್ಮಮ್ಮ ಆಗಾಗ ಹೇಳುತ್ತಿದ್ದರಾದರೂ, ಅದರ ಪ್ರಯೋಗ ಹೇಗೆ ಎಂಬುದನ್ನು ಕಣ್ಣಾರೆ ಕಾಣಲು ಸಾಕಷ್ಟು ಸಮಯ ಕಾಯಬೇಕಾ ಯಿತು. ಆ ವಿಚಾರ ಹೇಳುವ ಮೊದಲು, ಕಾಡುಶುಂಠಿ ಗಿಡಗಳ ಸಣ್ಣ ವಿವರ ನೀಡುವುದು ಅಗತ್ಯ ಎನಿಸುತ್ತದೆ. ಈಗಿನ ನಗರದ ಜನರು ಶುಂಠಿಯನ್ನು ಕಂಡಿದ್ದರೂ, ಶುಂಠಿ ಗಿಡವನ್ನು ನೋಡಿರುವ ಸಾಧ್ಯತೆ ಕಡಿಮೆ. ನೆಗಡಿ, ಗಂಟಲುನೋವು, ಜ್ವರ, ಅಜೀರ್ಣ, ಉರಿಯೂತ (ಇನ್ ಫ್ಲಮೇಷನ್) ಕಡಿಮೆ ಮಾಡಲು ಶುಂಠಿಯ ಬಳಕೆ ಇರುವು ದರಿಂದ ಮತ್ತು ಕೆಲವು ಅಡುಗೆಗಳಿಗೆ ಶುಂಠಿಯನ್ನು ದಂಡಿಯಾಗಿ ಬಳಸುವುದರಿಂದಾಗಿ, ಶುಂಠಿ ಕೃಷಿ ಇಂದು ಉತ್ಕರ್ಷವನ್ನು ಪಡೆದಿದೆ ಎನ್ನಬಹುದು.

ಕುರುಚಲು ಕಾಡನ್ನು, ಕೆಲವೆಡೆ ಕಾಡು ಪ್ರದೇಶವನ್ನು ಸವರಿ, ನೆಲವನ್ನು ಬುಲ್‌ಡೋಜರ್ ನಿಂದ ಹದಗೊಳಿಸಿ, ಅಪಾರ ಪ್ರಮಾಣದ ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಸಿ ಶುಂಠಿ ಬೆಳೆಸುವ ಪದ್ಧತಿಯನ್ನು ನಮ್ಮ ಕೆಲವು ಕೃಷಿಕರು ರೂಢಿಸಿಕೊಂಡಿರುವುದರಿಂದ, ಈಗಿನ ಶುಂಠಿ ಕೃಷಿಯು ಕೆಲವೊಮ್ಮೆ, ಪರಿಸರ ವಿರೋಧಿಯೂ ಹೌದು. ಆ ವಿಚಾರ ಅಲ್ಲಿರಲಿ; ನಮ್ಮೂರಲ್ಲಿ ಹಿಂದೆ ಬತ್ತದ ಗದ್ದೆಗಳ ಒಂದು ಮೂಲೆಯಲ್ಲಿ ಶುಂಠಿ ಬೆಳೆಸುವ ಪರಿಪಾಠ ಇತ್ತು. ಆದ್ದರಿಂದ ಹದವಾದ ಹಸಿರಿನ ತೆಳು ಎಲೆಯ ಶುಂಠಿ ಗಿಡಗಳು ನಮಗೆಲ್ಲಾ ಮೊದಲಿನಿಂದಲೂ ಪರಿಚಿತ. ಪಾತಿ ಮಾಡಿ ಶುಂಠಿ
ನೆಡುವ ಕೃಷಿಕರು, ಅದನ್ನು ಒಂದು ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದ್ದರು.

ಜತೆಗೆ, ಮನೆ ಹತ್ತಿರದ ತೆಂಗಿನ ಕಟ್ಟೆಯಲ್ಲಿ ನಾಲ್ಕಾರು ಶುಂಠಿ ಹಲ್ಲೆಯನ್ನು ನೆಟ್ಟು, ಗಿಡ ಬೆಳೆಸುವ ಪರಿಪಾಠ. ಯಾರಿಗಾದರೂ ಅಜೀರ್ಣವಾದಾಗ, ಗಂಟಲು ನೋವು ಬಂದಾಗ, ಶುಂಠಿ ತಂಬುಳಿ ಅಥವಾ ಕಷಾಯ ಮಾಡಲು, ಮನೆ ಎದುರಿನ ತೆಂಗಿನ ಕಟ್ಟೆಯಲ್ಲಿದ್ದ ಗಿಡವನ್ನು ಕಿತ್ತು, ಬೇರಿನ ಸ್ವರೂಪದ ಹಲ್ಲೆಯನ್ನು ಜಜ್ಜಿ, ಉಪಯೋಗಿಸುವ ಪದ್ಧತಿ ತೀರಾ ಸಾಮಾನ್ಯ. ಆದ್ದರಿಂದ ನಮ್ಮ ಹಳ್ಳಿಯಲ್ಲಿ ದೊರಕುತ್ತಿದ್ದ ಅಂದಿನ ಶುಂಠಿಯು, ಪೂರ್ಣ ಸಾವಯವ, ರಾಸಾಯನಿಕ ಮುಕ್ತ ಎಂದು ಧೈರ್ಯವಾಗಿ ಹೇಳಬಹುದಿತ್ತು.

ತೆಳುಹಸಿರು ಬಣ್ಣದ ತೆಳ್ಳನೆಯ ಎಲೆಯ ಶುಂಠಿಗಿಡದ ಮತ್ತೊಂದು ರೂಪವೇ ಕಾಡುಶುಂಠಿ ಎನ್ನಬಹುದು. ತುಸು ಅಗಲವಾದ, ದಟ್ಟ ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದ ಈ ಕಾಡುಶುಂಠಿಯು ಇನ್ನೂ ಎತ್ತರ ಬೆಳೆಯುತ್ತದೆ. ಶುಂಠಿಗಿಡವು ಒಂದೆರಡು ಅಡಿ ಎತ್ತರವಾಗಿದ್ದರೆ, ಕಾಡುಶುಂಠಿಯು ನಾಲ್ಕು ಅಡಿ ಎತ್ತರ ಬೆಳೆಯಬಲ್ಲದು. ಸಾಮಾನ್ಯವಾಗಿ ನೀರು ಹರಿಯುವ ಪುಟ್ಟ ತೋಡುಗಳ ಪಕ್ಕದಲ್ಲಿ, ಹೆಚ್ಚು ನೆರಳಿರುವ ಕಡೆ ಕಾಡುಶುಂಠಿಯ ಪೊದೆಗಳನ್ನು ಕಾಣಬಹುದು. ಅದರ ಔಷಧಿಯ ಗುಣಗಳ ಬಗ್ಗೆ ಕೇಳಿದ್ದರೂ, ಒಮ್ಮೆ ಅದನ್ನು ನೋಡುವ ಅವಕಾಶ ದೊರಕಿತು. ನಮ್ಮ ಮನೆ ಎದುರಿನ ಹಟ್ಟಿಕೊಟ್ಟಿಗೆ ಯಲ್ಲಿ ನಾಲ್ಕಾರು ‘ಬಾಲ್’ ಗಂಟಿ ಇದ್ದವು. ಅವೆಲ್ಲವೂ ಮಲೆನಾಡು ಗಿಡ್ಡ ತಳಿಯವು; ಅವುಗಳ ಪಕ್ಕದಲ್ಲೇ ಒಂದು ಜೊತೆ ಕೋಣಗಳೂ ಇದ್ದವು!

ಮಲೆನಾಡು ಗಿಡ್ಡ ನಿಮಗೆ ಗೊತ್ತಲ್ಲ- ಚಿಕ್ಕ ಗಾತ್ರದ, ಸಾಕಷ್ಟು ಗಟ್ಟಿಮುಟ್ಟಾದ ಜಾನುವಾರು. ಅವುಗಳ ಪೈಕಿ ಒಂದು ಹಸು ಎಷ್ಟು ಗಿಡ್ಡಕ್ಕಿತ್ತೆಂದರೆ, ಅದನ್ನು ಕರು ಎಂದರೂ ಹೌದು ಎನ್ನುವಷ್ಟು ಪುಟ್ಟ ಹಸು. ಎರಡು ವರ್ಷಗಳಿಗೊಮ್ಮೆ ಅದು ಕರು ಹಾಕುತ್ತಿತ್ತು; ಆದರೆ ಅದರಿಂದ ಕರೆಯುವ ಹಾಲು ಅರ್ಧ ಲೀಟರ್‌ಗಿಂತ ಕಡಿಮೆ! ‘ಒಂದು ಲೋಟ ಮಾತ್ರ ಹಾಲು ಕೊಡುವ ಹಸು ಇದು!’ ಎಂದು ನಮ್ಮ ಮನೆಯವರು ಅದನ್ನು ತಮಾಷೆ ಮಾಡುತ್ತಿದ್ದು ದುಂಟು. ಮಳೆ ಇರಲಿ, ಚಳಿ ಇರಲಿ, ಬೇಸಗೆಯೇ ಆಗಲಿ, ನಮ್ಮ ಮನೆಯ ಎಲ್ಲಾ ಗಂಟಿಗಳು, ಕೊಟ್ಟಿಗೆ ಹಿಂದಿನ ಓಣಿಯಲ್ಲಿ ಸಾಗಿ, ದರೆ ಹತ್ತಿ, ಹಕ್ಕಲಿನ ಮೂಲಕ ಸಾಗುವ ದಾರಿಯಲ್ಲಿ ಒಂದೆರಡು ಕಿ.ಮೀ. ನಡೆದು, ಗುಡ್ಡದ ಮೂಲೆ ಮೂಲೆಗಳಲ್ಲಿ ಅಲೆದಾಡಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು.

ಅವುಗಳನ್ನು ಮೇಯಿಸುವುದು ಮನೆಯ ಒಬ್ಬರು ಸದಸ್ಯರ ಕೆಲಸ; ಆ ಕೆಲಸವನ್ನು ‘ಗಂಟಿ ಮೇಯಿಸುವುದು’ ಎಂದು ಕೆಲವು ಬಾರಿ ಹಾಸ್ಯದಿಂದ, ಇನ್ನು ಕೆಲವು ಬಾರಿ ಉಪೇಕ್ಷೆಯಿಂದ ಕರೆಯುತ್ತಿದ್ದುದುಂಟು. ‘ಗಂಟಿ ಮೇಯಿಸುವ ಗಂಡು’ ಎಂದರೆ ತೀರಾ ಸಸಾರದ ಹುಡುಗ ಅಥವಾ ವ್ಯಕ್ತಿ ಎಂದೇ ಅರ್ಥ! ರಜಾ ದಿನಗಳಲ್ಲಿ ನಾನೂ ‘ಗಂಟಿ ಮೇಯಿಸುವ’ ಕೆಲಸ ಮಾಡಿದ್ದುಂಟು!

ಬಿಸಿಲು, ಮಳೆ ಎನ್ನದೇ ಪ್ರತಿದಿನ ಹಾಡಿ ಗುಡ್ಡಗಳಲ್ಲಿ ಮೇವು ಅರಸುವ ನಮ್ಮ ಹಳ್ಳಿಯ ಜಾನುವಾರುಗಳಿಗೆ, ಕಾಯಿಲೆ ಕಡಿಮೆ. ನಿರಂತರ ನಡಿಗೆ ಯಿಂದಲೋ, ಕಾಡಿನ ಮೂಲೆ ಮೂಲೆಗಳಲ್ಲಿ ಬೆಳೆದ ಹಸಿರು ಎಲೆ, ಬಳ್ಳಿ ಮೊದಲಾದವುಗಳನ್ನು ತಿಂದಿದ್ದುದರಿಂದಲೋ, ಹುಟ್ಟುಗುಣ ದಿಂದಲೋ ಏನೋ, ಮಲೆನಾಡು ಗಿಡ್ಡ ತಳಿಗೆ ರೋಗ ಬರುವುದೇ ಅಪರೂಪ. ಇಡೀ ದಿನ ಮಳೆ ಸುರಿದಾಗಲೂ, ಗುಡ್ಡದ ಮೂಲೆಯಲ್ಲಿ ಮೆಂದು ವಾಪಸು ಬಂದು ಹಟ್ಟಿಯನ್ನು ಸೇರಿದವೆಂದರೆ, ಕೆಲವೇ ನಿಮಿಷದಲ್ಲಿ ಸಹಜ ಸ್ಥಿತಿಗೆ ಬಂದು, ಮೆಲುಕು ಹಾಕುತ್ತಾ ನೆಮ್ಮದಿಯಿಂದ ಕಾಲ ಕಳೆಯುವ ಅಪರೂಪದ ತಳಿ ಅದು.

ಆದರೂ, ಒಮ್ಮೊಮ್ಮೆ ಅವಕ್ಕೆ ಬೇಧಿ ಮೊದಲಾದ ಕಾಯಿಲೆ ಬರುತ್ತಿತ್ತು. ಏನಾದರೂ ಸೋಂಕುಂಟಾಗಿ, ಬೇಧಿ ಮಾಡತೊಡಗಿದವೆಂದರೆ, ಮನೆಯ ವರಿಗೂ ತುಸು ಚಿಂತೆ. ನಮ್ಮ ಮನೆಯ ಸುತ್ತಮುತ್ತಲಿನ ಹತ್ತೆಂಟು ಕಿ.ಮೀ. ಫಸಲೆಯಲ್ಲಿ ಜಾನುವಾರುಗಳ ಆಸ್ಪತ್ರೆ ಎಂಬುದಿರಲಿಲ್ಲ! ಜಾನುವಾರುಗಳಿಗೆ ಹೋಗಲಿ, ಮನುಷ್ಯರಿಗೆ ರೋಗ ಬಂದರೂ, ಹತ್ತಿರದಲ್ಲಿ ಕ್ಲಿನಿಕ್ ಇಲ್ಲದ ದಿನಗಳು ಅವು! ಸರಕಾರ ನಡೆಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ೮ ಕಿ.ಮೀ. ದೂರದಲ್ಲಿತ್ತು! ಇನ್ನು ಹಸುಗಳಿಗೆ ಕಾಯಿಲೆಯಾದರೆ ಆಸ್ಪತ್ರೆ ಎಲ್ಲಿಂದ ಬರಬೇಕು? ಯಾವುದೇ ಕೋಣ ಅಥವಾ ಹಸುವಿಗೆ ಕಾಯಿಲೆಯಾದರೆ, ನಮ್ಮ ಹಳ್ಳಿಯಲ್ಲೇ ಇದ್ದ ಪಾಯ್ಕ ನಾಯ್ಕ ಎಂಬುವವನಿಗೆ ಬುಲಾವ್ ಹೋಗುತ್ತಿತ್ತು. ನಮ್ಮ ಮನೆಯಿಂದ ೧ ಕಿ.ಮೀ. ದೂರದಲ್ಲಿ, ಒಂದೆರಡು ಗುಡ್ಡಗಳಿಂದಾಚೆ ಆತನ ಮನೆಯಿತ್ತು. ನಮ್ಮ ಮನೆಯ ಒಂದು ಕರೆಯುವ ಹಸುವಿಗೆ ಒಮ್ಮೆ ಬೇಧಿ ವಕ್ಕರಿಸಿತು.

ಅವನಿಗೆ ಹೇಳಿ ಕಳಿಸಲಾಯಿತು; ಮರುದಿನ ಬೆಳಗ್ಗೆ ಬೇಗನೆ ಪಾಯ್ಕ ನಾಯ್ಕ ಬಂದ. ‘ದೆನಿಗೆ ಎಂತ ಆಯ್ತ್? ಬೇಧಿಯಾ? ಈಗಲೇ ಔಷಧ ಕೊಡ್ತೆ, ನೀವು
ಮಂಡೆಬಿಸಿ ಮಾಡಬೇಡಿ’ ಎಂದು ಸಕಾರಾತ್ಮಕ ಮಾತುಗಳ ಮೂಲಕ, ಮನೆಯವರಿಗೆ ಧೈರ್ಯ ತುಂಬುವಂಥ ಚಟುವಟಿಕೆಯ ವ್ಯಕ್ತಿ ಆತ. ‘ಹ್ವಾಯ್, ಕಾಡುಶುಂಠಿ ಗಿಡ ಎಲ್ಲಿತ್ತೆ?’ ಎಂದು ವಿಚಾರಿಸಿ, ತೋಟದ ಒಂದು ಮೂಲೆಯಲ್ಲಿ ಬೆಳೆದ ಕಾಡುಶುಂಠಿಯ ಪೊದೆಗಳತ್ತ ಸಾಗುತ್ತಿದ್ದ. ಒಂದು ಕಬ್ಬಿಣದ ಸೈಂಗೊಲ್ ಬಳಸಿ, ಆ ಪೊದೆಯ ಬುಡವನ್ನು ನಿಧಾನವಾಗಿ ಬಿಡಿಸಿ, ಕಾಡುಶುಂಠಿಯ ನಾಲ್ಕೆಂಟು ಹಲ್ಲೆಗಳನ್ನು ಸಂಗ್ರಹಿಸಿ, ಅವನೇ ನೀರಿನಲ್ಲಿ ಚೆನ್ನಾಗಿ ತೊಳೆಯುತ್ತಿದ್ದ.

ಕಾಡುಶುಂಠಿಯ ಗಡ್ಡೆಗಳನ್ನು ಚೆನ್ನಾಗಿ ಜಜ್ಜಿ, ಅದಕ್ಕೊಂದಿಷ್ಟು ಕಾಡು ಜೀರಿಗೆಯನ್ನೋ ಮತ್ತೇನನ್ನೋ ಸೇರಿಸಿ, ಒಂದೆರಡು ಲೀಟರ್ ದ್ರಾವಣ ಮಾಡುತ್ತಿದ್ದ. ಹಸಿರು ಬಣ್ಣದ ಆ ದ್ರಾವಣವೇ ಅಂದಿನ ದಿವ್ಯೌಷಧ. ‘ಹ್ವಾಯ್ ಒಂದು ಬಾಟಲಿ ಇತ್ತಾ?’ ಎಂದು ಮುಂಗೈ ತೋರಿಸಿ ಕೇಳುತ್ತಿದ್ದ. ತಕ್ಷಣ ಮನೆಯವರು ಒಂದು ಖಾಲಿ ಬಿಯರ್ ಬಾಟಲಿಯನ್ನು ಕೊಡುತ್ತಿದ್ದರು. ಇಂಥ ಸಂದರ್ಭಗಳಿಗೆಂದೇ ಒಂದು ಬಾಟಲಿ ಮನೆಯಲ್ಲಿರುತ್ತಿತ್ತು!

ಕಾಡುಶುಂಠಿಯನ್ನು ಜಜ್ಜಿದ ದ್ರಾವಣವನ್ನು ಸೋಸಿ, ಅದನ್ನು ಬಾಟಲಿಗೆ ತುಂಬಿ, ಬಿದಿರಿನ ಅಂಗೈ ಉದ್ದದ ಪರಿಕರದ ಮೂಲಕ, ಒಂದು ಬಾಟಲಿ ದ್ರಾವಣವನ್ನು ಹಸುವಿಗೆ ಕುಡಿಸುತ್ತಿದ್ದ. ಸಾಮಾನ್ಯವಾಗಿ ಪಾಯ್ಕ ನಾಯ್ಕ ಔಷಧ ಕುಡಿಸಿದ ಎಂದರೆ, ಒಂದೆರಡು ದಿನಗಳಲ್ಲಿ ಹಸು ಹುಷಾರಾಗುತ್ತಿತ್ತು.
ಕಾಡುಶುಂಠಿ, ಕಾಡು ಜೀರಿಗೆ, ಮೆಣಸಿನ ಕಾಳು ಮೊದಲಾದವುಗಳೇ ಆತನ ಬತ್ತಳಿಕೆಯಲ್ಲಿದ್ದ ಅಸ್ತ್ರಗಳು. ಜಾನುವಾರುಗಳಿಗೆ ಥಂಡಿ ಉಂಟಾದರೆ, ಒಮ್ಮೊಮ್ಮೆ ಒಂದು ಲೋಟದಷ್ಟು ಮಿಡಿ ಉಪ್ಪಿನ ಕಾಯಿ ರಸವನ್ನು ಕುಡಿಸುತ್ತಿದ್ದುದೂ ಉಂಟು!

ಆ ರೀತಿಯ ಉತ್ತಮ ಮಿಡಿ ಉಪ್ಪಿನಕಾಯಿ ರಸವನ್ನು ಒದಗಿಸುವುದು ಜಾನುವಾರು ಇದ್ದ ಮನೆಯವರ ಕೆಲಸ. ಪಾಯ್ಕ ನಾಯ್ಕನ ಪಾರಂಪರಿಕ ಜ್ಞಾನದಲ್ಲಿ ಇನ್ನೂ ಕೆಲವು ಎಲೆಗಳ ಔಷಧಗಳಿದ್ದರೂ ಇರಬಹುದೇನೋ, ಆದರೆ ಅದರ ಮಾಹಿತಿ ತಿಳಿಯುವ ಅವಕಾಶ ನನಗೆ ದೊರಕಿಲ್ಲ. ಜಾನುವಾರುಗಳಿಗೆ ಎಲೆಗಳ ರಸವನ್ನು, ಕಾಡುಶುಂಠಿ ಮೊದಲಾದ ಬೇರುಗಳ ರಸವನ್ನು ತಯಾರಿಸಿ ಕುಡಿಸಿ, ಅವುಗಳ ಕಾಯಿಲೆ ಗುಣ ಮಾಡುತ್ತಿದ್ದ ಪಾಯ್ಕ ನಾಯ್ಕ, ಅದಕ್ಕಾಗಿ ಪಡೆಯುತ್ತಿದ್ದ ಗೌರವಧನ ಅತ್ಯಲ್ಪಎಂದರೆ ಅತ್ಯಲ್ಪ. ಪಾಯ್ಕ ನಾಯ್ಕನಂಥವರು, ತಮ್ಮ ಸೇವೆಯನ್ನು ಹಣದ ರೂಪದಲ್ಲಿ ಅಳೆಯುವುದನ್ನು ಇಷ್ಟಪಡುತ್ತಿರಲಿಲ್ಲ, ಬಯಸುತ್ತಲೂ ಇರಲಿಲ್ಲ. ಜಾನುವಾರುಗಳಿಗೆ ತನ್ನ ಕೈಲಾದಷ್ಟು ಔಷಧ ಕೊಡುವುದು ತನ್ನ ಕರ್ತವ್ಯ ಎಂದು ತಿಳಿದಿದ್ದ ಪರಂಪರೆಗೆ ಸೇರಿದ ವ್ಯಕ್ತಿ ಆತ.

ಪಾಯ್ಕ ನಾಯ್ಕನಂಥವರ ಪಾರಂಪರಿಕ ಜ್ಞಾನವು ಕ್ರಮೇಣ ಹಿನ್ನೆಲೆಗೆ ಸರಿಯುವಂಥ ಒಂದು ಬೆಳವಣಿಗೆ ನಮ್ಮ ಹಳ್ಳಿಯಲ್ಲಿ ೧೯೮೦ರ ದಶಕದಲ್ಲಿ
ಆಯಿತು. ಅದೇ, ಸರಕಾರ ಪ್ರಾಯೋಜಿತ ‘ಕೃತಕ ಗರ್ಭಧಾರಣೆ ಕೇಂದ್ರ’ಗಳ ಆರಂಭ. ನಿಧಾನವಾಗಿ ನಮ್ಮೂರಿನ ಸುತ್ತಮುತ್ತ ಅಲ್ಲಲ್ಲಿ ಪಶುವೈದ್ಯಕೀಯ
ಆಸ್ಪತ್ರೆಗಳು ಮತ್ತು ಕೃತಕ ಗರ್ಭಧಾರಣೆ ಕೇಂದ್ರಗಳು ಆರಂಭಗೊಂಡವು; ವೈದ್ಯರು ಮತ್ತು ಸಹಾಯಕರು ಹಳ್ಳಿಮೂಲೆಯ ಮನೆಗಳಿಗೆ ಬಂದು, ನಾಟಿ ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡತೊಡಗಿದರು ಮತ್ತು ಜತೆಯಲ್ಲೇ, ಜಾನುವಾರುಗಳಿಗೆ ಅನಾರೋಗ್ಯ ಉಂಟಾದಾಗ, ಔಷಧವನ್ನೂ ಕೊಡಲು ಆರಂಭಿಸಿದರು.

ಪಾರಂಪರಿಕ ಜ್ಞಾನದಿಂದ, ಕಾಡುಶುಂಠಿ ಮತ್ತು ಇತರ ಗಿಡಗಳ ರಸವನ್ನು ಬಳಸಿ ಜಾನುವಾರುಗಳಿಗೆ ಔಷಧ ನೀಡುತ್ತಿದ್ದ ಪಾಯ್ಕ ನಾಯ್ಕನಂಥವರ ಕೌಶಲ ಪ್ರಯೋಗದ ಅವಕಾಶ ಕಡಿಮೆಯಾಗುತ್ತಾ ಬಂತು. ನಾಲ್ಕೆಂಟು ವರ್ಷಗಳಲ್ಲಿ, ನಮ್ಮೂರಲ್ಲಿ ಮಲೆನಾಡು ಗಿಡ್ಡ ತಳಿಯ ಹಸು, ಎತ್ತುಗಳು ಕಣ್ಮರೆ
ಯಾಗುವ ಸನ್ನಿವೇಶ ಎದುರಾಯಿತು. ವಿದೇಶ ತಳಿಗಳಾದ ಜರ್ಸಿ ಮೊದಲಾದವುಗಳು ದಿನಕ್ಕೆ ೧೦-೨೦ ಲೀಟರ್ ಹಾಲು ಕೊಡುತ್ತವೆಂದು ಗೊತ್ತಾದಾಗ, ಜನರು ಸಾಲ ಮಾಡಿ ಹಸು ಖರೀದಿಸಲು ಆರಂಭಿಸಿದರು. ದೊಡ್ಡ ದೊಡ್ಡ ಹಸುಗಳನ್ನು ಖರೀದಿಸಲು ಬ್ಯಾಂಕ್‌ಗಳಲ್ಲೂ ಸಾಲ ಸಿಗುವಂತಾಯಿತು ಮತ್ತು ಅದು ಬ್ಯಾಂಕಿನವರಿಗೆ ಆದ್ಯತೆ ಯ ವಿಷಯವಾಯಿತು.

ದೊಡ್ಡ ಹಸುಗಳನ್ನು ಕಟ್ಟಲು ತುಸು ಆಧುನಿಕ ಕೊಟ್ಟಿಗೆಗಳನ್ನು ನಿರ್ಮಿಸಲಾಯಿತು; ಅದಕ್ಕೂ ಬ್ಯಾಂಕುಗಳು ಸಾಲ ನೀಡಿದವು. ಜನರು ಪ್ರತಿದಿನ ಡೈರಿಗೆ ಹಾಲು ಮಾರಲು ಆರಂಭಿಸಿದರು. ಕಾಡು ಗುಡ್ಡಗಳಿಂದ ತುಂಬಿರುವ ನಮ್ಮೂರಿನಲ್ಲಿ, ಹೈನುಗಾರಿಕೆಯು ಕೃಷಿಕರಿಗೆ ಆರ್ಥಿಕ ಚಟುವಟಿಕೆಯ ಭಾಗವಾಗಿ ಬೆಳೆಯತೊಡಗಿತು. ಮಲೆನಾಡು ಗಿಡ್ಡ ತಳಿಗಳಿಗೂ ಕೃತಕ ಗರ್ಭಧಾರಣೆ ಮಾಡಿಸಿದಾಗ, ವಿದೇಶಿ ತಳಿಯ ಸಂಕರದ ದೊಡ್ಡ ಗಾತ್ರದ ಕರುಗಳನ್ನು ಪಡೆದರು. ಹೆಣ್ಣು ಕರುಗಳಿಗೆ ಮಾತ್ರ ಬೆಲೆ, ಗಂಡು ಕರುಗಳಿಗೆ ನಿರ್ಲಕ್ಷ್ಯ! ಕ್ರಮೇಣ ಮಲೆನಾಡು ಗಿಡ್ಡ ತಳಿಯ ಕರುಗಳೇ ಕಡಿಮೆಯಾದವು. ಕಾಡುಶುಂಠಿಯ ರಸ ಕುಡಿದು ಕಾಯಿಲೆ ವಾಸಿ ಮಾಡಿಕೊಳ್ಳಬಲ್ಲ ತಳಿಯ ಹಸುಗಳು ಈಗ ನಮ್ಮೂರಲ್ಲಿ ಇಲ್ಲ. ಈಗ ಜಾನುವಾರುಗಳಿಗೆ ಕಾಯಿಲೆ ಯಾದರೆ, ಅಂಗಡಿಯಿಂದ ತರುವ ಮಾತ್ರೆ, ಇಂಜೆಕ್ಷನ್ ಬೇಕೇಬೇಕು.