Thursday, 12th December 2024

ರಾಷ್ಟ್ರ ನಿರ್ಮಾಣ ಮತ್ತು ಯುವಜನತೆ

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಆದರೆ ವಿವೇಕಾನಂದರಿಂದ
ಸೂರ್ತಿ ಪಡೆದು ಯುವ ಜನತೆಯು ಮುಂದೆ ಸಾಗುವುದು ಆವಶ್ಯವೂ ಅಗತ್ಯವೂ ಆಗಿದೆ. ಯಾವುದೇ ಕಾರಣಕ್ಕೂ ಅಂಜದಿರು; ಅದ್ಭುತ ಕಾರ್ಯವನ್ನೆಸಗುವೆ.

ಆಸೆ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಿರ್ಭೀತಿಯು ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿ ಕೊಡಬಲ್ಲುದು. ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು ಎಂಬ ವಿವೇಕಾನಂದರ ಮಾತು ಯುವಜನತೆಯನ್ನು ಬಡಿದೆಬ್ಬಿಸಬೇಕಾಗಿದೆ.

೧. ಪ್ರೀತಿಯ ಮರ್ಮ: ಅದೆಷ್ಟೋ ಸಲ ವಿವೇಕಾನಂದರ ಮಾತುಗಳನ್ನು ಭಾವುಕವಾಗಿ ಹೇಳಲಾಗುತ್ತದೆ. ವೀರ ಸನ್ಯಾಸಿ
ಎಂದು ಕರೆಯಲ್ಪಟ್ಟ ವಿವೇಕಾನಂದರ ಮಾತುಗಳು ಸಹಜವಾಗಿ ಯೌವನದಲ್ಲಿರುವವರನ್ನು ಹುರಿದುಂಬಿಸುತ್ತವೆ. ಆದರೆ ಆ
ಮಾತುಗಳಿಗೆ ಪ್ರೀತಿಯ ತತ್ವದ ಬುನಾದಿ ಇಲ್ಲದಿದ್ದರೆ ಅವು ಕೇವಲ ಒಣ ಮಾತುಗಳಾಗುತ್ತವೆ. ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ. ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವ ಬಂಧುಗಳನ್ನು ನೀವು ಪ್ರೀತಿಸುತ್ತೀರೇನು? ಎನ್ನುವುದು ವಿವೇಕಾನಂದರು ಪ್ರತಿಪಾದಿಸಿದ ಪ್ರೀತಿಯ ತತ್ವವಾಗಿದೆ.

೨. ಪ್ರೀತಿ ಮತ್ತು ಕರ್ತೃತ್ವ: ಯಾವುದೇ ನಿರ್ಮಾಣಕ್ಕೆ ಒಂದು ಧ್ಯೇಯ ಮತ್ತು ಆ ಧ್ಯೇಯವನ್ನು ಸಾಧಿಸುವ ಕತೃತ್ವ ಶಕ್ತಿಗಳು
ಮೂಲಭೂತ ಆವಶ್ಯಕತೆಗಳಾಗಿವೆ. ಇವೆರಡನ್ನೂ ಒದಗಿಸುವುದು ಪ್ರೀತಿಯ ತತ್ವ. ತನ್ನ ಬದುಕನ್ನು, ಸಹಜೀವಿ ಮನುಷ್ಯ
ರನ್ನು, ಜೀವಸಂಕುಲವನ್ನು ಪ್ರೀತಿಸಬಲ್ಲವನಿಗೆ ಮಾತ್ರ ತಾನು ಏನನ್ನಾದರೂ ಮಾಡಬೇಕೆಂಬ ಮನೋಭಾವ ಬರುತ್ತದೆ. ಆ
ಮನೋಭಾವನೆಯು ಒಂದು ಧ್ಯೇಯವನ್ನು ರೂಪಿಸಿಕೊಳ್ಳುವಂತೆ ಮಾಡುತ್ತದೆ. ಆ ಧ್ಯೇಯವನ್ನು ಸಾಧಿಸಲು ಕ್ರಿಯಾಶೀಲ
ನಾಗುವಂತೆ ಪ್ರಬಲ ಪ್ರೇರಣೆಯನ್ನು ಒದಗಿಸುತ್ತದೆ.

೩. ಸಂಯಮ ಮತ್ತು ವಿವೇಕ: ಭಾರತ ಒಂದು ಯುವರಾಷ್ಟ್ರ. ಯುವಜನತೆಯ ಸಂಖ್ಯೆ ಇಲ್ಲಿ ಬಹಳ ದೊಡ್ಡದು. ಯುವ ಜನತೆ ಯಲ್ಲಿ ಉತ್ಸಾಹವಿದ್ದರಷ್ಟೆ ಸಾಲದು. ಸಂಯಮ ಮತ್ತು ವಿವೇಕವೂ ಇರಬೇಕಾಗುತ್ತದೆ. ಭಗವದ್ಗೀತೆಯಲ್ಲಿ ಒಂದು ಶ್ಲೋಕ ಹೀಗಿದೆ: ಧ್ಯಾಯತೋ ವಿಷಯಾನ್ ಪುಂಸಃ
ಸಂಗಸ್ತೇಷೂಪಜಾಯತೇ| ಸಂಗಾತ್ ಸಂಜಾಯತೇ ಕಾಮಃ
ಕಾಮಾತ್ ಕ್ರೋಧೋಭಿಜಾಯತೇ|| ಕ್ರೋಧಾದ್ ಭವತಿ
ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ| ಸ್ಮೃತಿಭ್ರಂಶಾದ್
ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ||- ಆಸೆಯಿಂದ
ಕ್ರೋಧವು ಜನಿಸುತ್ತದೆ. ಕ್ರೋಧದಿಂದ ಸಮ್ಮೋಹವು ಜನಿಸುತ್ತದೆ. ಸಮ್ಮೋಹದಿಂದ ಸ್ಮೃತಿಯು ಹೊರಟು ಹೋಗುತ್ತದೆ. ಸ್ಮತಿಯು
ಹೊರಟು ಹೋದಾಗ ಬುದ್ಧಿಯು ನಾಶವಾಗುತ್ತದೆ. ಬುದ್ಧಿಯು ನಾಶವಾದರೆ ಎಲ್ಲವೂ ಹೊರಟು ಹೋದಂತೆ. ಆದ್ದರಿಂದ ಬುದ್ಧಿ
ಯನ್ನು ದುರ್ಬಲವಾಗಲು ಬಿಡಬಾರದು.

೪. ಯುವಜನತೆಯ ದೃಷ್ಟಿಕೋನ: ಯುವಜನತೆಯಲ್ಲಿ ರಾಷ್ಟ್ರೀಯ ದೃಷ್ಟಿಕೋನವಿದೆ. ಆದರೆ ಅದನ್ನು ಅನುಷ್ಠಾನಕ್ಕೆ
ತರುವಲ್ಲಿ ಕ್ರಿಯಾಶೀಲತೆ ಮತ್ತು ಸೃಷ್ಟಿಶೀಲತೆ ಬೇಕಾಗಿದೆ. ಸ್ವಾವಲಂಬನೆ ಅಗತ್ಯವಿದೆ. ಯಾರೋ ಬಂದು ನಮ್ಮನ್ನು ಉದ್ಧರಿಸಿ ಬಿಡುತ್ತಾನೆ ಎನ್ನುವ ನಂಬಿಕೆ ಮತ್ತು ಚಿಂತನೆ ಭಾರತದಂಥ ರಾಷ್ಟ್ರಕ್ಕೆ ಹಿತವಲ್ಲ. ನಾವು ಆರಿಸಿಕೊಂಡ ನಾಯಕನಲ್ಲಿ ಬಲವನ್ನು ತುಂಬುವಾಗಲೂ ನಮ್ಮ ಅವಶ್ಯಕತೆಗಳನ್ನು, ನಿರೀಕ್ಷೆಗಳನ್ನು ಸಂಪೂರ್ಣವಾಗಿ ಅವನು ನೀಗಿಸಿ ಬಿಡುತ್ತಾನೆಂದು ಅತೀಯಾಗಿ ಭಾವಿಸಿ ಬಿಡುವುದು ಹತಾಶೆಗೆ ನಮ್ಮನ್ನು ಒಡ್ಡಿಬಿಡುತ್ತದೆ. ನಾಯಕ ಸೋತರೆ ನಾವೂ ಸೋತಂತೆ.

ಉದ್ಧರೇತಾನ್ಮಾತನಾತ್ಮಾನಂ ನಾತ್ಮಾನಮವಸಾದ ಯೇತ್|
ಆತ್ಮೆ ವ ಹ್ಯಾತ್ಮನೋ ಬಂಧುರಾತ್ಮೆ ವ ರಿಪುರಾತ್ಮನಃ-..ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಲು ಬೇಕಾಗಿ ಪ್ರಭುತ್ವವು
ನಮ್ಮೊಂದಿಗೆ ಇರುವಂತೆ ಯುವಜನತೆ ಪ್ರಭುತ್ವವನ್ನು ದಕ್ಕಿಸಿಕೊಳ್ಳುವಂತೆ ಶ್ರಮಿಸಬೇಕು.

೫. ಸ್ವ ಅರಿವು: ರಾಷ್ಟ್ರ ನಿರ್ಮಾಣವೆಂಬ ದೊಡ್ಡ ಕಾರ್ಯದಲ್ಲಿ ಸ್ವ ಅರಿವು ಯಾವತ್ತೂ ಪ್ರಧಾನವಾಗಿರುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯೇ ಪ್ರಮುಖವಾದ ಅಸ್ತ್ರವಾಗಿದೆ. ವರ್ತಮಾನದ ಸಂದರ್ಭದಲ್ಲಿ ಜನತೆಯಲ್ಲಿ ಸ್ವ ಅರಿವು
ಬಹುಮುಖ್ಯವಾದ ಅಗತ್ಯವಾಗಿದೆ. ಇವು ಹಲವು ಹಂತಗಳಲ್ಲಿ ಒಳಗೊಂಡಿರುತ್ತದೆ.

ಆಲೋಚನೆಯ ಕ್ರಮ: ವ್ಯಕ್ತಿಯ ಎಲ್ಲ ಕ್ರಿಯೆಗಳೂ ಆಲೋಚನೆಗಳಿಂದ ನಿಯಂತ್ರಿಸಲ್ಪಟ್ಟು ನಿರ್ವಹಣೆಯಾಗುತ್ತದೆ.
ಆದ್ದರಿಂದ ಹೇಗೆ ಯಾವ ನೆಲೆಯಲ್ಲಿ ಆಲೋಚನೆ ಮಾಡುತ್ತೇವೆಂಬುದು ಬಹುಮುಖ್ಯ ಸಂಗತಿಯಾಗಿದೆ. ಯುವ ಜನತೆ
ಸ್ವಾಭಾವಿಕವಾಗಿಯೇ ಜೀವನಕ್ಕೆ ತೆರೆದು ಕೊಳ್ಳುವ ಹಂತದಲ್ಲಿರುವುದರಿಂದ ಬಾಹ್ಯ ಪರಿಸರದ ಘಟನೆಗಳು, ಸಂಗತಿಗಳು ಹೆಚ್ಚು
ಪ್ರಭಾವವನ್ನು ಬೀರುತ್ತವೆ. ಅದಕ್ಕೆ ಪ್ರತಿಕ್ರಿಯಾತ್ಮಕವಾಗಿ ಚಿಂತನೆಯನ್ನು ರೂಪಿಸಿ ಕೊಳ್ಳುತ್ತಾರೆ. ಈ ಆಲೋಚನೆಯು ವಿಕಾಸಾತ್ಮಕವಾಗಿಯೂ ಇರುತ್ತದೆ. ವಿನಾಶಾತ್ಮವಾಗಿಯೂ ಇರುತ್ತದೆ. ಭಾವುಕವಾಗಿ ಆಲೋಚಿಸುವುದು ರಾಷ್ಟ್ರನಿರ್ಮಾಣದಲ್ಲಿ ಉಚಿತವಲ್ಲ. ಅದು ವಿನಾಶರೂಪವನ್ನು ತಂದೊಡ್ಡುವ ಸಾಧ್ಯತೆಯೇ ಹೆಚ್ಚು. ವೈಚಾರಿಕವಾಗಿ ಚಿಂತಿಸುವುದು ವಿಕಾಸಾತ್ಮಕ ವಾದ ಬೆಳವಣಿಗೆಯನ್ನು ಉಂಟು ಮಾಡುತ್ತದೆ. ಯುವಜನತೆ ಯಾವಾಗಲೂ ವಿಕಾಸಕ್ಕೆ ಪ್ರೇರಣೆಯಾದ ವೈಚಾರಿಕ ಚಿಂತನೆಯ ಕ್ರಮವನ್ನು ಬೆಳೆಯಿಸಿಕೊಳ್ಳಬೇಕು.

ದೃಷ್ಟಿಕೋನ: ಈ ವಿಮರ್ಶಾತ್ಮಕ ವಿಕಾಸಾತ್ಮಕ ಚಿಂತನೆಯಿದ್ದರೆ ಬದುಕನ್ನು ನೋಡುವ ಚಿಂತನೆ ಬದಲಾಗುತ್ತದೆ.
ವರ್ತಮಾನದಲ್ಲಿ ದೃಷ್ಟಿಕೋನ ಬದಲಾಗುವ ಅಗತ್ಯವಿದೆ. ರಾಷ್ಟ್ರ ನಿರ್ಮಾಣದಲ್ಲಿ ಕೇವಲ ಯುವಜನತೆಯ ಪಾತ್ರವಷ್ಟೇ ಅಲ್ಲದೆ ಎಲ್ಲರ ಪಾತ್ರವೂ ಇದೆ. ಆದರೆ ಪ್ರತಿಯೊಬ್ಬರೂ ವೈಯಕ್ತಿಕ ಹಿತವನ್ನು ರಕ್ಷಣೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿರು ತ್ತಾರೆ. ಅಂದರೆ ಅದು ಮತ್ತೊಬ್ಬನ ಹಿತಕ್ಕೆ ಧಕ್ಕೆ ತರುವಂತದ್ದಲ್ಲದ ದೃಷ್ಟಿಕೋನ ಆಗಿರಬೇಕು. ಅಂದಾಗ ಮಾತ್ರ ಅಂಥ ದೃಷ್ಟಿಕೋನಗಳಿಗೆ ಮಾನ್ಯತೆ ಮತ್ತು ಬೆಂಬಲ ಸಿಗುತ್ತದೆ. ರಾಷ್ಟ್ರದ ಹಿತವನ್ನು ಕಾಪಾಡುತ್ತದೆ ಎಂದಾದರೆ ಅಂಥ ದೃಷ್ಟಿಕೋನಗಳಿಗೆ ಎಲ್ಲರೂ ತಲೆಬಾಗುತ್ತಾರೆ. ಹಿರಿಯರ ಅನುಭವವನ್ನು ಬಳಸಿಕೊಂಡು ಯುವಜನತೆ ರಾಷ್ಟ್ರನಿರ್ಮಾಣದಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲು ಸಾಧ್ಯವಿದೆ.

೬. ವ್ಯಕ್ತಿತ್ವ ನಿರ್ಮಾಣ: ರಾಷ್ಟ್ರನಿರ್ಮಾಣ ಎನ್ನುವುದು ವೈಯಕ್ತಿಕ ಪರಿಕಲ್ಪನೆಯೂ ಹೌದು, ಸಾಮೂಹಿಕ ಪರಿಕಲ್ಪನೆಯೂ ಹೌದು. ಈ ಎರಡೂ ನೆಲೆಯಲ್ಲಿ ಕಾರ್ಯವಾಗಬೇಕಾದರೆ ಯುವಜನತೆ ತನ್ನದೇ ಆದ ವರ್ಚಸ್ಸನ್ನು ಗಳಿಸಿಕೊಳ್ಳಲು ರೂಪಿಸಿ ಕೊಳ್ಳಬೇಕು. ವ್ಯಕ್ತಿತ್ವ ನಿರ್ಮಾಣದ ಮೂಲಕ ಆ ರೀತಿಯ ವರ್ಚಸ್ಸನ್ನು ಗಳಿಸಿಕೊಳ್ಳಲು ಸಾಧ್ಯ ವಾಗುತ್ತದೆ. ಈ ನಿಟ್ಟಿನಲ್ಲಿ ಯುವಜನತೆಯ ಆವಶ್ಯಕತೆಗಳೆಂದರೆ; ಏನನ್ನು ಮಾಡುವುದಿದ್ದರೂ ಯೋಚನೆ ಮಾಡಿ ಮುಂದುವರಿಯುವುದು.

ಯಾಕೆ ಇದನ್ನು ಮಾಡಬೇಕು. ಈ ಕಾರ್ಯವನ್ನು ಮಾಡುವುದು ಸರಿಯೇ ಅಂದರೆ ಈ ಕಾರ್ಯದ ಗುರಿ ಮತ್ತು ಉದ್ದೇಶದಲ್ಲಿ
ಸ್ಪಷ್ಟತೆಯಿರಬೇಕು. ವ್ಯಕ್ತಿತ್ವವೊಂದು ಸಶಕ್ತವಾಗುವುದು ವ್ಯಕ್ತಿತ್ವಕ್ಕೆ ಇರುವ ನೈತಿಕ ಶಕ್ತಿಯ ಮುಖಾಂತರವೇ ಆಗಿರುವುದರಿಂದ
ಯುವಜನತೆ ತಮ್ಮ ವ್ಯಕ್ತಿತ್ವದಲ್ಲಿ ನೈತಿಕತೆಯನ್ನು ಬೆಳೆಸಿಕೊಳ್ಳಲು ಸಾಧ್ಯ ವಾಗಬೇಕು.

ದೂಷಣೆ, ಟೀಕೆ, ಆರೋಪ, ಆಕ್ಷೇಪ, ನಿಂದನೆಗಳೆ ನೈತಿಕತೆಯಾಗುವುದಿಲ್ಲ, ಅದು ದೌರ್ಬಲ್ಯವನ್ನು ಸೂಚಿಸುತ್ತದೆ. ಇದಕ್ಕೆ ಮಹತ್ವವಿರುವುದಿಲ್ಲ. ಗಾಂಧಿಯವರ ಹಿಂದ್ ಸ್ವರಾಜ್‌ದಲ್ಲಿ ಸ್ವರಾಜ್ ಎಂದರೆ ನನ್ನ ಕೆಲಸವನ್ನು ನಾನು ಮಾಡುತ್ತೇನೆ ಎಂದೇ ಅರ್ಥ. ಅಂದರೆ ಇನ್ನೊಬ್ಬರನ್ನು ಆಕ್ಷೇಪಿಸುವುದಕ್ಕಿಂತ ತಾನು ಏನು ಮಾಡಬೇಕೆಂದು ವಿವೇಕ ಶೀಲವಾಗಿ ನಿರ್ಧರಿಸಿ ಅದರಂತೆ ನಡೆದು ಕೊಳ್ಳುವುದು. ಪ್ರತಿ ತಲೆಮಾರಿಗೂ ತನ್ನ ಹಿಂದಿನ ತಲೆಮಾರು ಮಾಡಿದ್ದು ಸರಿಯಿಲ್ಲವೆಂದೇ ಅನಿಸುವುದು. ಆದರೆ, ಅವರು ಅವರ ಕಾಲಮಾನಕ್ಕೆ ಅನುಗುಣವಾಗಿ ಮಾಡಿರುತ್ತಾರೆ.

ಹಿರಿಯರನ್ನು ಬ್ಲೇಮ್ ಮಾಡುವುದು ಸರಿಯಲ್ಲ. ಅವರು ಮಾಡಿದ್ದು ಸರಿಯಿಲ್ಲದೆ ಇದ್ದಾಗಲೂ ಈಗಲೂ ಏನೂ ಮಾಡಲಿಕ್ಕಾಗು ವುದಿಲ್ಲ. ಆದರೆ ಇಂದಿನ ಬದುಕು ಯುವಜನತೆಯದ್ದು. ತಾವು ಏನು ಮಾಡಬೇಕೆಂದು ಅವರೇ ನಿರ್ಧರಿಸಬೇಕು. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಯುವ ಜನತೆಯಲ್ಲಿ ಬೇಕು. ದಾರಿತಪ್ಪಿದ ಅನುಸರಣೆ, ಅನುಕರಣೆ ರಾಷ್ಟ್ರನಿರ್ಮಾಣಕ್ಕೆ ಪೂರಕವಾಗದು. ಯುವಜನತೆ ಸಚ್ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು.

ಸಚ್ಚಾರಿತ್ರ್ಯವು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಸಚ್ಚಾರಿತ್ರ್ಯವಂತನ ಮಾತುಗಳು ಸಮಾಜದ ಮೇಲೆ ಉತ್ತಮ ಪರಿಣಾಮವನ್ನು ಬೀರುವ ಶಕ್ತಿಯನ್ನು ಹೊಂದಿರುತ್ತದೆ. ಅಂಥವರು ಮಾತ್ರ ಧ್ಯೇಯವನ್ನು ರೂಪಿಸಿ ಸಮುದಾಯವನ್ನು ಆ ಧ್ಯೇಯದ ಕಡೆಗೆ ಚಲಿಸುವಂತೆ ಮಾಡಬಲ್ಲರು. ಸಚ್ಚಾರಿತ್ರ್ಯಕ್ಕೆ ಧಕ್ಕೆ ತರುವ ಮಾತುಗಳು, ಮಾದಕ ದ್ರವ್ಯ ವ್ಯಸನ, ಅನೈತಿಕ ಲೈಂಗಿಕ ಆಲೋಚನೆ ಗಳು ಮತ್ತು ಅಭಿವ್ಯಕ್ತಿ ಮುಂತಾದವುಗಳಿಗೆ ಯುವ ಜನತೆ ಬಲಿಯಾಗಬಾರದು.

ಯುವ ಜನತೆ ಆರೋಗ್ಯಕರ ದೇಹ ಮತ್ತು ಮನಸ್ಸನ್ನು ರೂಪಿಸಿಕೊಳ್ಳಬೇಕು. ಯುವಜನತೆ ಸ್ವಾಧ್ಯಾಯಿಗಳಾಗಬೇಕು. ನಿತ್ಯವೂ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಸಾಹಿತ್ಯ, ಸಂಗೀತ, ಕ್ರೀಡೆ, ಸಾಂಸ್ಕೃತಿಕ ವಿಷಯಗಳಲ್ಲಿ ಆಸಕ್ತಿ ಮತ್ತು ಅಭಿರುಚಿ ಯನ್ನು ಹೆಚ್ಚಿಸಿಕೊಳ್ಳಬೇಕು. ವೇದ, ಪುರಾಣ, ಉಪನಿಷತ್ತು, ಇತಿಹಾಸ, ರಾಜಕೀಯ, ವಿಜ್ಞಾನ, ಜಾಗತಿಕ ವಿದ್ಯಮಾನ… ಇತ್ಯಾದಿಗಳ ಅರಿವು ಯುವಜನತೆಯಲ್ಲಿ ಬೇಕು.

೭. ಕ್ರಿಯಾಶೀಲತೆ: ಯುವಜನತೆ ಮಾನಸಿಕವಾಗಿ ಇಷ್ಟು ಸನ್ನದ್ಧತೆಯನ್ನು ಮಾಡಿಕೊಂಡ ಅನಂತರ ಒಂದು ರಾಷ್ಟ್ರೀಯ
ಪರಿಕಲ್ಪನೆಯನ್ನು ಇಟ್ಟುಕೊಂಡು ಕ್ರಿಯೆಗೆ ತೊಡಗಬೇಕು.

ಈ ನಿಟ್ಟಿನಲ್ಲಿ ಮಾಡಬಹುದಾದದ್ದು: ಪ್ರತಿಯೊಂದು ಕಾರ್ಯವೂ ಸಶಕ್ತವಾಗಿ ಒಂದು ಚಿಂತನೆಯ ಪರಿಣಾಮವಾಗಿ ಆಗಬೇಕು. ಯುವಜನತೆಯಲ್ಲಿ ಆವಿಷ್ಕಾರದ ಪ್ರವೃತ್ತಿ ಇರಬೇಕು. ಉದ್ಯೋಗವು ಯುವಜನತೆಯ ಮೂಲಭೂತ ಅಗತ್ಯವಾಗಿದೆ.
ಆದರೆ ತನ್ನ ಉದ್ಯೋಗವನ್ನು ಬೇರೆಯವರೇ ಕೊಡಬೇಕು ಎಂದು ಭಾವಿಸಬಾರದು. ತಮಗಿರುವ ವ್ಯಾಪ್ತಿಯಲ್ಲಿ ತಮ್ಮ
ಉದ್ಯೋಗವನ್ನು ತಾವೇ ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಶೀಲರಾಗಬೇಕು. ನಮ್ಮ ಸಮಾಜದಲ್ಲಿ ಸಮಸ್ಯೆಗಳಿವೆ. ಇದು
ಕೇವಲ ನಮ್ಮ ಸಮಾಜಕ್ಕಷ್ಟೇ ಸೀಮಿತವಾದ ಸಂಗತಿಯಲ್ಲ. ಎಲ್ಲ ಕಾಲದಲ್ಲೂ ಎಲ್ಲ ಸಮಾಜದಲ್ಲೂ ಸಮಸ್ಯೆಗಳಿದ್ದವು; ಇರುತ್ತವೆ ಕೂಡ. ಆ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನಗಳು ನಿರಂತರವಾಗಿ ಇರಬೇಕು. ನಮ್ಮ ಕಾಲಮಾನದ ಸಮಸ್ಯೆ ಗಳೇನು, ಅವುಗಳಲ್ಲಿ ಯಾವುದನ್ನು ಬಿಡಬೇಕು, ಯಾವುದನ್ನು ಹೇಗೆ ನಿರ್ವಹಿಸಬೇಕು ಎಂಬ ಸ್ಪಷ್ಟ ಕಲ್ಪನೆ ಇರಿಸಿಕೊಂಡು ಕಾರ್ಯ ಪ್ರವೃತ್ತರಾಗಬೇಕು.

ರಾಷ್ಟ್ರೀಯ ಅಗತ್ಯಗಳನ್ನು ಯುವಜನತೆ ಅರ್ಥ ಮಾಡಿಕೊಳ್ಳಬೇಕು. ಒಂದು ಸುಖೀ ಕುಟುಂಬವನ್ನು ರೂಪಿಸಿಕೊಳ್ಳುವುದು ಕೂಡ ರಾಷ್ಟ್ರೀಯ ಅಗತ್ಯವೇ. ಆ ಮಟ್ಟಿಗೆ ಕೆಟ್ಟುಹೋದ ಕುಟುಂಬದಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಪ್ರತಿಯೊಬ್ಬರೂ ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಂಡರೆ ಸಾಮಾಜಿಕ ಗೊಂದಲಗಳು ನಿವಾರಣೆ ಯಾಗುತ್ತವೆ. ಆಡಳಿತದ ಒತ್ತಡ ಕಡಿಮೆಯಾಗುತ್ತದೆ. ಜನರನ್ನು ದುರ್ಬಳಕೆ ಮಾಡಿಕೊಳ್ಳುವುದು ಕಡಿಮೆಯಾಗುತ್ತದೆ.

ಶಿಸ್ತುಬದ್ಧ ಜೀವನವು ಮೂಲಭೂತವಾದ ರಾಷ್ಟ್ರೀಯ ಅಗತ್ಯವೇ ಆಗಿದೆ. ವ್ಯಕ್ತಿ, ಕುಟುಂಬ, ಹಳ್ಳಿ, ನಗರ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ರಾಷ್ಟ್ರ ನಿರ್ಮಾಣದ ಪ್ರತಿಹಂತವೂ ಪ್ರಧಾನವಾದ ಜವಾಬ್ದಾರಿಯನ್ನು ಹೊಂದಿರುವುದರ ಜತೆಗೆ ಪ್ರತಿ ಯೊಂದರ ಕೊಡುಗೆಯೂ ಪ್ರಮುಖವಾಗೇ ಇರುತ್ತದೆ. ಯಾವುದನ್ನೂ ಅಲಕ್ಷಿಸಿ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ. ಯುವ ಜನತೆಯಲ್ಲಿ ಆಕಾಂಕ್ಷೆಗಳಿವೆ. ಆದರೆ ಮಾರ್ಗದರ್ಶನದ ಕೊರತೆಯಿದೆ. ಯುವ ಜನತೆಯಲ್ಲಿ ಶಕ್ತಿಯಿದೆ. ಆದರೆ ಚಿಂತನೆಯ ಕೊರತೆಯಿದೆ. ಬುದ್ಧಿಯಿದೆ, ವಿದ್ಯೆಯಿದೆ. ಆದರೆ ಸಂಸ್ಕಾರದ ಕೊರತೆಯಿದೆ.

ವಿದ್ಯಾವಂತರೆಲ್ಲ ಕಲ್ಚರ್ಡ್ ಆಗಿರುವುದಿಲ್ಲ. ಆದ್ದರಿಂದ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಮೊತ್ತಮೊದಲ ಕೆಲಸ ವೆಂದರೆ ರಾಷ್ಟ್ರ ನಿರ್ಮಾಣ ಕ್ಕಾಗಿ ತಮ್ಮನ್ನು ತಾವು ಸನ್ನದ್ಧಗೊಳಿಸಿಕೊಳ್ಳುವುದು. ಈ ದಿಸೆಯಲ್ಲಿ ನಮ್ಮ ಶಿಕ್ಷಣದ ಪರಿಕಲ್ಪನೆಗಳು ಇನ್ನೂ ಹೆಚ್ಚು ಬಲಗೊಳ್ಳಬೇಕಿದೆ. ಆ ಹಿನ್ನೆಲೆಯಲ್ಲಿ ನೋಡಿದರೆ ಈಗ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಬಲವಾಗಿದೆ. ಆದರೆ,
ಅದು ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಮಾತ್ರ ಬಲಿಷ್ಠವಾದರೆ ಸಾಧ್ಯವಿಲ್ಲ.

ವ್ಯಾಸಂಗ ಮುಗಿದು ಉದ್ಯೋಗ ಪಡೆದು ಈ ಸಮಾಜದಲ್ಲಿ ನಾಗರಿಕನಾಗಿ ಬದುಕುತ್ತಿರುವಾಗಲೂ ರಾಷ್ಟ್ರ ನಿರ್ಮಾಣದ ರಾಷ್ಟ್ರೀಯತೆಯ ಪ್ರಜ್ಞೆ ಜಾಗೃತವಾಗಿರುವಂತೆ ನಿರಂತರವಾಗಿರಬೇಕು. ಅಂದರೆ ರಾಷ್ಟ್ರ ಪ್ರಜ್ಞೆ ಬಲಗೊಳಿಸುವ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಿಗಿಸಿ ಕೊಳ್ಳುವ ಕಾರ್ಯದಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು. ಕಾಯಕಜೀವಿಯಾಗಿ ವೈಜ್ಞಾನಿಕವಾಗಿ ಪಡೆದುಕೊಂಡ ಸವಲತ್ತುಗಳನ್ನು ಬಳಸಿಕೊಂಡು ತನ್ನ ಸುತ್ತಲ ಹಿತವನ್ನು ಕೆಡಿಸದಂತೆ ಕಾಯ್ದುಕೊಂಡು ನಿತ್ಯದ ಬದುಕನ್ನು ಬಾಳುವುದು.

ಕೊನೆಯ ಮಾತು: ಬಹುಸಂಖ್ಯಾ ಕೋಟಿಯ ಭಾರತದಂಥ ದೇಶಕ್ಕೆ ಮಾನವ ಸಂಪತ್ತು ಎಂದರೆ ಯುವ ಜನತೆಯೇ ಆಗಿರುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಯುವಕರನ್ನು ಹೊಂದಿರುವ ದೇಶಕ್ಕೆ ಯಾವುದೂ ಅಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ, ದೇಶದ ಅಭಿವೃದ್ಧಿಗೆ ಬೇಕಾದುದೆಲ್ಲವೂ ಮಾನವ ಸಂಪತ್ತಿನಲ್ಲಿಯೇ ಅಡಗಿದೆ. ಮುಖ್ಯವಾಗಿ ಯುವಜನತೆಯಲ್ಲಿ.

ಯುವಜನತೆಗೆ ಸರಿಯಾದ ಮಾರ್ಗದರ್ಶನ ಬೇಕಾಗಿದೆ. ಬಂದ್ ಆಚರಣೆಗೆ, ಚುನಾವಣೆಗೆ, ಪಕ್ಷ ರಾಜಕಾರಣಕ್ಕೆ, ಪ್ರಭುತ್ವ ವಿರೋಧಿ ಹೋರಾಟಕ್ಕೆ ಅನಗತ್ಯವಾಗಿ ಬಳಸಿಕೊಳ್ಳುವುದರಿಂದ ಯುವಜನತೆಯ ಬೌದ್ಧಿಕ ಮತ್ತು ಭೌತಿಕ ಶಕ್ತಿ ವ್ಯಯವಾಗುತ್ತಿದೆ. ಈಗಂತೂ ವಾಟ್ಸ್ಯಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವೀಟರ್‌ಗಳಲ್ಲಿ ಯುವಜನತೆ ಮುಳುಗಿ ಹೋಗಿ ಸಮಯವನ್ನು ಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳದೆ ಅನಾವಶ್ಯಕವಾಗಿ ವ್ಯಯಿಸುತ್ತಿದೆ.

ಲಿಯೋನಾರ್ಡೋ ಡ ವಿಂಚಿ ಎಂಬ ಇಟಲಿಯ ಶಿಲ್ಪಿ ಒಂದು ವಿಗ್ರಹ ಕಡೆಯುವಾಗ ಹೇಳುತ್ತಿದ್ದನಂತೆ: ಈ ಬಂಡೆಯೊಳಗೆ
ಒಬ್ಬ ಸುಂದರಿ ಹುದುಗಿದ್ದಾಳೆ. ಅವಳನ್ನು ಹೊರತೆಗೆಯುತ್ತಿದ್ದೇನೆ. ಅವಳನ್ನು ಮುಸುಕಿರುವ ಅನವಶ್ಯ ಪದರ, ಶಿಲಾಂಶ ಗಳನ್ನಷ್ಟೇ ಕೆತ್ತಿ ಬಿಸಾಡುತ್ತಿದ್ದೇನೆ ಎಂದು. ಅಂದರೆ ಯುವಜನತೆ ಎಂಬ ಶಿಲ್ಪವನ್ನು ಕೆತ್ತಿ ಒಳಗಿರುವ ಅದ್ಭುತ ಶಕ್ತಿ ಸಾಮರ್ಥ್ಯ ವನ್ನು ಅನಾವರಣಗೊಳಿಸುವ ಹೊಣೆ ಹಿರಿಯರ ಮಾರ್ಗದರ್ಶನ ದಲ್ಲಿದೆ.

ಅವರಲ್ಲಿರುವ ಪ್ರತಿಭೆ ಅಭಿವ್ಯಕ್ತವಾಗಲು ಗುರುವಿನ ಮಾರ್ಗದರ್ಶನ ಬೇಕಾಗಿದೆ. ಬೀಜದಲ್ಲಿ ಶಕ್ತಿಯಿದ್ದರೂ ಸರಿಯಾದ ಭೂಮಿ, ಮಳೆ, ಗಾಳಿ, ಗೊಬ್ಬರ, ರಕ್ಷಣೆ, ಬೆಳೆಯಲು ಅವಕಾಶ ಹೇಗೆ ಬೇಕೋ ಹಾಗೆ ಯುವಜನತೆ ಸರಿಯಾದ ದಿಕ್ಕಿನಲ್ಲಿ ಕ್ರಮಿಸುವಂತೆ ಮಾಡಲು ವಿದ್ಯೆ, ಸಂಸ್ಕಾರ, ನಮ್ಮ ಪರಂಪರೆ, ಇತಿಹಾಸದರಿವು, ಧರ್ಮ, ತತ್ವ ಚಿಂತನೆ, ಸಾಹಿತ್ಯ ಕಲ್ಪನೆ, ಕಲೆ, ವಿಜ್ಞಾನ, ಶಿಕ್ಷಣ ಪರಿಸರ ಪ್ರೀತಿ, ಮನುಷ್ಯ ಗೌರವ, ವಿಶ್ವಪ್ರಜ್ಞೆ, ಶ್ರಮಗೌರವ, ಮುಖ್ಯವಾಗಿ, ಮಾನವೀಯ ಮೌಲ್ಯಗಳು ಬಾಲ್ಯದಿಂದಲೇ
ಒದಗಬೇಕು.

ಮನೆಮನೆಯಲ್ಲೂ ವಿದ್ಯಾಲಯಗಳಲ್ಲೂ ಇದು ಸಾಕಾರಗೊಳ್ಳಬೇಕು. ಅಂದಾಗ ಮಾತ್ರ ಸಶಕ್ತ ದೇಶ ನಿರ್ಮಾಣವೊಂದರ
ಬೀಜ ಮೊಳಕೆ ಯೊಡೆಯಲು ಸಾಧ್ಯ. ಇದಾಗಬೇಕು. ಹಾಗಾದರೆ ಮಾತ್ರ ನಮ್ಮಲ್ಲಿ ಜಮದಗ್ನಿ, ವಸಿಷ್ಠ, ವಾಮದೇವ, ಅಗಸ್ತ್ಯ ಗೌತಮರು ಹುಟ್ಟಿ ಬಂದು ದಿಕ್ಕು ತೋರಿಸುತ್ತಾರೆ. ಯಾಕೆಂದರೆ ಇವರಾರೂ ಅಮೆರಿಕಾ, ಯುರೋಪುಗಳಲ್ಲಿ ಹುಟ್ಟಿ ಬರಲಾರರು! ಹಾಗೆಯೇ ನಮ್ಮಲ್ಲಿ ಕೊಲಂಬಸ್, ರಾಬರ್ಟ್ ಕ್ಲೆ ವ್, ನೆಪೋಲಿಯನ್, ಅಲೆಗ್ಲ್ಸಾಂಡರ್, ಹಿಟ್ಲರ್ ಹುಟ್ಟಿ ಬರಲಾರರು!

ಕಾರಣ, ಮಾನವ ಸಂಪನ್ಮೂಲದ ಪರಿಕಲ್ಪನೆಯ ವ್ಯತ್ಯಾಸ. ಗ್ರೀಕರು ಪ್ಲೇಟೋ, ಅರಿಸ್ಟಾಟಲರನ್ನು ತಿರಸ್ಕರಿಸಿದರು; ಇಂಗ್ಲೆಂಡ್ ವಸಾಹತು ನಡೆಸುವಾಗ ಷೇಕ್ಸ್‌ಪಿಯರ್, ವರ್ಡ್ಸ್ ವರ್ತ್‌ರನ್ನು ಮರೆಯಿತು. ಆದರೆ ನಾವು ದುಷ್ಟರನ್ನು ಮಾತ್ರ ಮರೆತವು. ದೇಶ ನಿರ್ಮಾಣಕ್ಕೆ ಬೇಕಾದ ಎಲ್ಲ ಮಹನೀಯರನ್ನು ಬಳಸಿ ಕೊಂಡೆವು. ಯಾವ ಮೂಲದಿಂದ ಬಂದುದಾದರೂ ಒಳ್ಳೆಯ ಚಿಂತನೆಗಳನ್ನು ಸ್ವೀಕರಿಸಿದೆವು. ಅದಕ್ಕಾಗಿ ಈ ದೇಶ ವಿಶ್ವಗುರುವಾಗಿದೆ; ವಿಶ್ವಗುರುವಾಗಿಯೇ ಇರುತ್ತದೆ.