Friday, 22nd November 2024

ನಾನು, ನಾನೇ ಮತ್ತು ನನ್ನದು

ಹಿಂದಿರುಗಿ ನೋಡಿದಾಗ

ಮನುಷ್ಯ ಖಂಡಿತವಾಗಿಯೂ ಹುಚ್ಚ. ಅವನಿಂದ ಒಂದು ಹುಳುವನ್ನೂ ಸೃಜಿಸಲು ಸಾಧ್ಯ ವಿಲ್ಲದಿದ್ದರೂ ಹತ್ತಾರು ದೈವಗಳನ್ನು ಸೃಜಿಸಬಲ್ಲ!  -ಮಿಶೆಲ್ ಡು ಮಾಂಟೇನಿಯ ಫೆಬ್ರವರಿ 28, 1571.

ಇದೊಂದು ಅಪರೂಪದ ದಿನ. ಮೈಕೇಲ್ ಡು ಮಾಂಟೇನ್ ಎಂಬ ಅಸಮಾನ್ಯ ವಿದ್ಯಾ ವಂತ ಗಣ್ಯವ್ಯಕ್ತಿಯು ನ್ಯಾಯಾಲಯದ ಹಾಗೂ ಸಾರ್ವಜನಿಕ ಸೇವೆಗಳ ಗುಲಾಮೀ ಬದುಕಿ ನಿಂದ ಬಿಡುಗಡೆಯನ್ನು ಪಡೆದ ದಿನ. ವಂಶ ಪಾರಂಪರ್ಯವಾಗಿ ಬಂದಂತಹ, ಕೋಟೆ ಯಂತಹ ಬೃಹತ್ ಮಹಲಿನ ತುತ್ತ ತುದಿಯಲ್ಲಿದ್ದ ಕೋಣೆಗೆ ತನ್ನ ಕುರ್ಚಿಯನ್ನು, ಮೇಜನ್ನು ವರ್ಗಾಯಿಸಿ, ಸಮಕಾಲೀನ ಜಗತ್ತಿನ ಅತ್ಯಂತ ಪ್ರಮುಖ ಧರ್ಮ, ದರ್ಶನ, ಕಾನೂನು, ಸಾಹಿತ್ಯ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧ ಪಟ್ಟಿದ್ದ 1500  ಗ್ರಂಥ ಗಳನ್ನು ತರಿಸಿ, ಬಾಗಿಲನ್ನು ಹಾಕಿಕೊಂಡು ಬರೆಯಲಾರಂಭಿಸಿದ ದಿನ.

ಮಿಶೆಲ್ ಡು ಮಾಂಟೇನಿಯ ಫ್ರಾನ್ಸ್‌ನ ಪ್ರಬಂಧಕಾರ, ದಾರ್ಶನಿಕ. ಆತ ತನ್ನನ್ನು ತಾನು ದಾರ್ಶನಿಕ ಎಂದು ಕರೆದುಕೊಳ್ಳಲಿಲ್ಲ. ಅವನು ಪ್ರಬಂಧಗಳನ್ನು ಮಾತ್ರ ಬರೆದ. ಅವನ ಪ್ರಬಂಧಗಳ ಕೇಂದ್ರ ವಿಷಯ ನಾನು. ತನ್ನ ಬಗ್ಗೆ ತಾನು ಹರಿಸಿದ ಒಂದು ಒಳನೋಟವು, ಒಂದು ದರ್ಶನದ ರೂಪವನ್ನು ತಳೆಯಿತು. ಮುಂದಿನ ಹಲವು ತಲೆಮಾರುಗಳಲ್ಲಿ ಕಂಡುಬಂದ ಅಸಂಖ್ಯ ಪ್ರತಿಭಾವಂತರನ್ನು ಸೆಳೆಯಿತು.

ಅವರ ಬದುಕು-ಬರಹ-ಸಾಧನೆಗಳ ಮೇಲೆ ಅಪಾರ ಪ್ರಭಾವವನ್ನು ಬೀರಿತು. ಒಬ್ಬರು ಮಾಂಟೇನಿಯನನ್ನು ‘ದಿ ಫ್ರೆಂಚ್ ಥೇಲ್ಸ್’ ಎಂದು ಕರೆದರೆ ಮತ್ತೊಬ್ಬರು ‘ದಿ ಫ್ರೆಂಚ್ ಸಾಕ್ರಟಿಸ್’ ಎಂದರು. ಮಾಂಟೆನೇರ್ ವೃತ್ತಿಯಿಂದ ನ್ಯಾಯಾಧೀಶ. ವೈದ್ಯನಲ್ಲ. ಆದರೂ ಅಧುನಿಕ ಮನೋವಿಜ್ಞಾನದ ಬೆಳವಣಿಗೆಯಲ್ಲಿ ಇವನ ಕಾಣಿಕೆಯು ಬಹಳ ದೊಡ್ಡದು ಎಂದು ಈಗಲೂ ಸ್ಮರಿಸುವು ದುಂಟು.

ಮಿಶೆಲ್ ಡು ಮಾಂಟೇನಿಯನ ೩೮ನೆಯ ಹುಟ್ಟು ಹಬ್ಬದ ದಿನ. ತನ್ನ ಏಕಾಂತ ಕೋಣೆಯಲ್ಲಿ ಕುಳಿತ ಮೊದಲ ಎರಡು ಸಾಲು ಗಳನ್ನು ಬರೆದ. ಆ ಎರಡು ಸಾಲುಗಳನ್ನು ತನಗಾಗಿ ಯೇ ಬರೆದುಕೊಂಡು ಎದ್ದುಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ಬರೆದು ತನ್ನ ಕೋಣೆಯಲ್ಲಿ ಪ್ರದರ್ಶಿಸಿದ.

‘The bosom of the learned Virgins, where in calm and freedom from all cares, he will spend what little remains
of his life, already more than half expired’ಎಲ್ಲ ಕರ್ತವ್ಯಗಳಿಂದ ಮುಕ್ತಿಯನ್ನು ಪಡೆದು, ಅಳಿದುಳಿದ ಬದುಕಿನ ದಿನಗಳನ್ನು, ಜ್ಞಾನಿಗಳ ಹೃದಯದಲ್ಲಿ ಪ್ರಶಾಂತವಾಗಿ ವಿಹರಿಸುವ ಆಸೆ. ಈಗಾಗಲೇ ಅರ್ಧ ಆಯಸ್ಸು ಕಳೆದು ಹೋಗಿದೆ. ಮಾಂಟೇನಿಯ ಈ ಸಾಲನ್ನು ಬರೆಯುವ ವೇಳೆಗೆ, ಅವನು ತನ್ನ ನ್ಯಾಯಾಲಯದ ಹಾಗೂ ಸಾರ್ವಜನಿಕ ಸೇವಿಗಳ ಗುಲಾಮಿ ಬದುಕಿನಿಂದ ತನ್ನನ್ನು ತಾನು ಬಿಡಿಸಿಕೊಂಡಿದ್ದ.

ಹಾಗೆಯೇ ಕೌಟುಂಬಿಕ ಹೊಣೆಯಿಂದ-ಮಡದಿ, ಮಕ್ಕಳು ಹಾಗೂ ಅವರ ಭವಿಷ್ಯದ ಹೊಣೆಗಾರಿಕೆಯಿಂದ ತನ್ನನ್ನು ತಾನು ಮುಕ್ತಗೊಳಿಸಿಕೊಂಡಿದ್ದ. ಅವನು ಶ್ರೀಮಂತರ ಮನೆತನಕ್ಕೆ ಸೇರಿದವನು. ಅವನದ್ದೇ ಹಲವು ಉದ್ಯಮಗಳಿದ್ದವು. ಹಾಗಾಗಿ ಅವನಿಗಾಗಲಿ ಅಥವ ಅವನ ಕುಟುಂಬಕ್ಕಾಗಲಿ ಹಣವು ಒಂದು ಸಮಸ್ಯೆಯಾಗಿರಲಿಲ್ಲ. ಹಾಗಾಗಿ ಎಲ್ಲ ಸಾಂಸರಿಕ ಬಂಧನ ಗಳಿಂದ ತನ್ನನ್ನು ಮುಕ್ತಿಗೊಳಿಸಿಕೊಂಡು, ತನ್ನ ಉಳಿದ ಅರ್ಧ ಬದುಕನ್ನು ವಿದ್ವಾಂಸರ ಜ್ಞಾನವಾರಧಿಯಲ್ಲಿ ಪ್ರಶಾಂತವಾಗಿ
ಈಜಲು ಆರಂಭಿಸಿದ.

ಮಾಂಟನೇರ್ ಪ್ರಬಂಧಗಳು (ಎಸ್ಸೇಸ್) ಎನ್ನುವ ಶೀರ್ಷಿಕೆಯಡಿಯಲ್ಲಿ ಮೂರು ಪುಸ್ತಕಗಳನ್ನು ಬರೆದು ಪ್ರಕಟಿಸಿದ. ಅವುಗಳಲ್ಲಿ ಒಟ್ಟು ೧೦೭ ಅಧ್ಯಾಯಗಳಿದ್ದವು. ಒಂದೊಂದು ಅಧ್ಯಾಯದ ವಿಚಾರವೂ ಭಿನ್ನವಾದದ್ದು ಹಾಗೂ ಸ್ವತಂತ್ರವಾದದ್ದು. ಒಂದೊಂದು ಅಧ್ಯಾಯದ ವ್ಯಾಪ್ತಿಯೂ ಅಜಗಜಾಂತರ. ತನ್ನ ಪ್ರಬಂಧಗಳನ್ನು 1570-1592ರವರೆಗೆ ಮಿಡ್ಲ್ ಫ್ರೆಂಚ್  ಭಾಷೆ ಯಲ್ಲಿ ಬರೆದ. ಮೂರೂ ಪುಸ್ತಕಗಳನ್ನು ಫ್ರಾನ್ಸ್ ಸಾಮ್ರಾಜ್ಯದಲ್ಲಿ ಪ್ರಕಟಿಸಿದ. ಈ ಪ್ರಬಂಧಗಳು ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಬಂಧಗಳು ಎನ್ನುವ ಒಂದು ಹೊಸ ಸಾಹಿತ್ಯ ಪ್ರಕಾರವು ಹುಟ್ಟಲು ಕಾರಣವಾದವು.

ಈ ಎರಡೂ ಭಾಷೆಗಳ ಸಾಹಿತ್ಯ ವಿಚಾರ ಮತ್ತು ಶೈಲಿಯ ಮೇಲೆ ಅಪಾರ ಪ್ರಭಾವವನ್ನು ಬೀರಿದವು. ಮಾಂಟೆನೇರ್ ನಿಶ್ಚಿತ ಸಿದ್ಧರೂಪ ಶೈಲಿಯನ್ನು ಬಳಸಲಿಲ್ಲ. ಮಾಂಟೆನೇರ್ ತನ್ನ ಒಳನೋಟಕ್ಕೆ ಪೂರಕವಾಗಿ ಪ್ರಾಚೀನ ಗ್ರೀಕ್, ಲ್ಯಾಟಿನ್, ಇಟಾಲಿ ಯನ್ ಭಾಷೆಗಳಲ್ಲಿ ಬರೆದ ಅಗಸ್ಟೈನ್, ಸಿಸಿರೊ, ದಯೋನಿಸಸ್, ಎಪಿಕ್ಯೂರಸ್, ಹೆರಾಕ್ಲೀಟಸ್, ಹೊರೇಸ್, ಲ್ಯೂಕ್ರೀಷಿಯಸ್, ಓವಿಡ್, ಪ್ಲೇಟೊ, ಪ್ಲುಟಾರ್ಕ್, ಸೆಕ್ಸ್ಟಸ್ ಎಂಪೆರಿಕಸ್, ಸಾಕ್ರಟಿಸ್, ಟೆರೆನ್ಸ್, ವರ್ಜಿಲ್ ಮುಂತಾದವರ ವಿಚಾರಗಳನ್ನು ಹಾಗೂ ಹೇಳಿಕೆಗಳನ್ನು ಧಾರಾಳವಾಗಿ ಬಳಸಿದ.

ಅಂದರೆ, ಅದುವರೆಗೂ ಯೂರೋಪಿಯನ್ ಬೌದ್ಧಿಕ ಜಗತ್ತು ಕಂಡುಕೊಂಡಿದ್ದ ಜ್ಞಾನವನ್ನು, ತನ್ನ ಅನುಭವದ-ವಿಚಾರದ ಮೂಸೆಯಲ್ಲಿ ಕರಗಿಸಿ ಪ್ರಬಂಧಗಳ ರೂಪದಲ್ಲಿ ಎರಕಹೊಯ್ದ ಎನ್ನಬಹುದು. ಮಾಂಟನೇರ್ ಪ್ರಬಂಧಗಳ ವಿಷಯ ನಾನು, ನಾನೇ ಮತ್ತು ನನ್ನದು. ಅವನು ನೇರವಾಗಿ ಮತ್ತು ಪ್ರಾಮಾಣಿಕವಾಗಿ ತನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದಾಗಿ
ಹೇಳಿದ. ಈ ಜಗತ್ತಿನಲ್ಲಿರುವ ಜ್ಞಾನರಾಶಿ ಅಪಾರ. ಅದರಲ್ಲಿ ನನಗೇನು ಗೊತ್ತಿದೆ? ದಶಕಗಳ ಅವಽಯಲ್ಲಿ ನಡೆಸಿದ
ಅಂತರಾ ವಲೋಕನದ ಫಲ ಅವನ ಪ್ರಬಂಧಗಳು.

ಹಾಗಾಗಿ ಈತನ ಪ್ರಬಂಧಗಳನ್ನು ಓದುವವರೂ ಸಹ ತಮಗರಿವಿಲ್ಲದೆಯೇ ತಮ್ಮನ್ನು ತಾವು ಅಂತರಾವಲೋಕನವನ್ನು ಮಾಡಿ ಕೊಳ್ಳಲಾರಂಭಿಸುವುದರಿಂದ, ಮಾಂಟನೇರ್ ಬರಹಗಳು ಬಹಳ ಬೇಗ ಪ್ರಸಿದ್ಧಿಗೆ ಬಂದವು. ಅವನ ಕೃತಿಗಳು ಫ್ರೆಂಚ್ ನಲ್ಲಿ ಪ್ರಕಟವಾಗುತ್ತಿರುವಂತೆಯೇ, ಅವು ಇಂಗ್ಲಿಷಿಗೂ ಅನುವಾದವಾದವು. ಇಂಗ್ಲೀಷರು ಅವನ ಬರಹಗಳಿಗೆ ಮಾರುಹೋದರು.  ಆದರೆ ಮಾಂಟನೇರನಿಗೆ ತನ್ನ ಬರಹಗಳು ಈ ಪರಿಯ ಪ್ರಭಾವವನ್ನು ಬೀರಬಹುದೆಂಬ ಕಲ್ಪನೆಯೇ ಇರಲಿಲ್ಲ. ತನ್ನ ಬರಹ ಗಳನ್ನು ಕೇವಲ ತನ್ನ ನಿಕಟವರ್ತಿಗಳು ಮಾತ್ರ ಓದಬಹುದು ಎಂದುಕೊಂಡಿದ್ದ. ಹಾಗಾಗಿ ಈ ಪುಸ್ತಕದ ವಿಷಯ ನಾನೇ. ಇಂತಹ ಕ್ಷುಲ್ಲಕ ವಿಚಾರಗಳನ್ನು ಓದುತ್ತಾ ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ ಎಂದೂ ಪುಸ್ತಕದಲ್ಲಿ ಬರೆದ.

ಮಾಂಟನೇರ್ ತಾನು ಬದುಕಿರುವವರಿಗೂ ತನ್ನ ಬರಹಗಳನ್ನು ತಿದ್ದುತ್ತಲೇ ಇದ್ದ. ಈ ತಿದ್ದುವಿಕೆಯು ಕೆಲವು ಬರಹಗಳಲ್ಲಿ ಕೇವಲ ಒಂದು ಶಬ್ದವನ್ನು ಸೇರಿಸುವಷ್ಟರ ಮಟ್ಟಿಗೆ ಮಾತ್ರ ಇದ್ದರೆ, ಹಲವು ಬರಹಗಳಲ್ಲಿ ಇಡೀ ಪ್ಯಾರವನ್ನು ಹೊಸದಾಗಿ ಸೇರಿಸುತ್ತಿದ್ದ. ಹಾಗಾಗಿ ಅವನ ಪುಸ್ತಕಗಳಲ್ಲಿ ಬರಹ-ಪ್ರಕಟಣೆಯ ವಿವರಗಳು ವಿಶೇಷವಾಗಿರುತ್ತಿದ್ದವು. ಉದಾಹರಣೆಗೆ  ಹೇಳುವು ದಾದರೆ, ನಿರ್ದಿಷ್ಟ ಪ್ರಬಂಧವೊಂದನ್ನು 1571-1580ರ ವ್ಯಾಪ್ತಿಯಲ್ಲಿ ಬರೆದು, ಅದನ್ನು 1580ರಲ್ಲಿ ಪ್ರಕಟಿಸಿದೆ ಎನ್ನುವ ವಿವರ ಗಳು ದೊರೆಯುತ್ತವೆ.

ಹಾಗಾಗಿ ಮಾಂಟನೇರ್ ತನ್ನ ಚಿಂತನ-ಮಂಥನಗಳನ್ನು ಸದಾ ಕಾಲಕ್ಕೂ ನಡೆಸುತ್ತಲೇ ಇದ್ದ. ಮಾಟನೇರ್ ವೈವಿಧ್ಯಮಯ ವಿಷಯಗಳ ಬಗ್ಗೆ ಬರೆದ. ಸೋಮಾರಿತನದ ಬಗ್ಗೆ, ಸುಳ್ಳರ ಬಗ್ಗೆ, ಭಯದ ಬಗ್ಗೆ, ಕಲ್ಪನೆಯ ಬಗ್ಗೆ, ವಾಸನೆಯ ಬಗ್ಗೆ, ಪತ್ರಗಳನ್ನು ಅಂಚೆಗೆ ಹಾಕುವ ಬಗ್ಗೆ, ಗೆಳೆತನದ ಬಗ್ಗೆ, ನಿದ್ರೆಯ ಬಗ್ಗೆ, ಹೆಸರುಗಳ ಬಗ್ಗೆ, ವಯಸ್ಸಿನ ಬಗ್ಗೆ… ಇಂತಹ ಸಾಮಾನ್ಯ ವಿಷಯ ಗಳಿಂದ ಹಿಡಿದು ಫ್ರೆಂಚ್ ಧಾರ್ಮಿಕ ಕದನಗಳವರೆಗೆ (1562-1598) ಹಲವು ಗಂಭೀರ ವಿಚಾರಗಳನ್ನು ಬರೆದ. ಫ್ರಾನ್ಸ್ ದೇಶದಲ್ಲಿ ಕ್ರೈಸ್ತರ ರೋಮನ್ ಕ್ಯಾಥೋಲಿಕ್ ಮತ್ತು ಪ್ರಾಟಿಸ್ಟಾಂಟರ ನಡುವೆ ಘರ್ಷಣೆಯು ಆರಂಭವಾಗಿತ್ತು.

ಘರ್ಷಣೆಯು ಯುದ್ಧಕ್ಕೆ ಪರಿವರ್ತನೆಯಾಗಿ ಹಲವು ದಶಕಗಳ ಕಾಲ ಮುಂದುವರೆಯಿತು. ಕ್ರೈಸ್ಥ ಧರ್ಮದ ಎರಡೂ ಶಾಖೆಗಳು ಏಸುವನ್ನೇ ನಂಬುತ್ತಿರುವುದು ಸತ್ಯ. ಹಾಗಿದ್ದ ಮೇಲೆ ಅವರಿಬ್ಬರ ನಡುವೆ ಯಾಕೆ ಭಿನ್ನಾಭಿಪ್ರಾಯವು ಬರೆಯಬೇಕು? ಎರಡು ಶಾಖೆಗಳ ನಡುವೆ ನಡೆದ ಯುದ್ಧದ ಸ್ವರೂಪವನ್ನು ಅರಿಯುವ ಪ್ರಯತ್ನವನ್ನು ನಡೆಸಿದ. ಮಾಂಟನೇರ್ ಜಗತ್ತಿನ ಎಲ್ಲ ಚರಾ ಚರ ವಸ್ತುಗಳ ಸ್ವರೂಪ ಹಾಗೂ ಮನುಷ್ಯರ ಸ್ವಭಾವದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಇನ್ನಿಲ್ಲದ ಹಾಗೆ ಪ್ರಯತ್ನ ವನ್ನು ಪಟ್ಟ. ಆದರೆ ಅವನಿಗೆ ಅಂತಹ ಯಶಸ್ಸೇನೂ ದೊರೆಯಲಿಲ್ಲ.

ಏಕೆಂದರೆ ಅವನಿಗೆ ಮನುಷ್ಯನ ಮತಿ ಮತ್ತು ಅನುಭವದ ಸೀಮಿತ ವ್ಯಾಪ್ತಿ ತಿಳಿದಿತ್ತು. ಸತ್ಯವು ಅನಂತ. ಮನುಷ್ಯನು ತನ್ನ ಇಡೀ ಜೀವಮಾನ ಕಾಲ ಪ್ರಯತ್ನಿಸಿದರೂ ಆ ಅನಂತದ ಒಂದು ಸೆಳೆಮಿಂದಚನ್ನು ಮಾತ್ರ ಮನುಷ್ಯನು ಕಾಣಬಹುದೇನೋ! ಆದರೆ ಸಮಗ್ರವಾಗಿ ಅನಂತ ಸತ್ಯವು ಅವನ ಬುದ್ಧಿಗೆ ನಿಲುಕದು. ಹಾಗೆ ನಿಲುಕಬೇಕಾದರೆ ಅದಕ್ಕೆ ದೈವಾನುಗ್ರಹವಿರಬೇಕು ಎಂದು ಭಾವಿಸಿದ. ದೈವಾನುಗ್ರಹವಿಲ್ಲದಿದ್ದರೆ ಬಹಳಷ್ಟು ವಿಚಾರಗಳಿಗೆ ಸಂಬಂಧಿಸಿದಂತೆ,

ನಮ್ಮ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ನಮ್ಮನ್ನು ಕತ್ತಲಲ್ಲಿ ಬಿಟ್ಟಂತಾಗುತ್ತದೆ ಎನ್ನುವುದು ಅವನ ನಿಲುವಾಗಿತ್ತು. ಮನುಷ್ಯನ
ಸ್ವಭಾವ ಎನ್ನುವುದು ನಿಶ್ಚಿತವಲ್ಲ. ಅದು ಸದಾ ಬದಲಾಗುತ್ತಿರುತ್ತದೆ. ಆವಿಯಂತೆ ತೇಲಿ ಹೋಗುತ್ತದೆ. ಅದು ತೀರಾ ದುರ್ಬಲ ವಾದದ್ದು. ಪುನರುತ್ಥಾನದ ಅವಽಯಲ್ಲಿದ್ದ ಎಲ್ಲ ಬುದ್ಧಿಜೀವಿಗಳು ಮನುಷ್ಯನ ಕಷ್ಟ, ನೋವು, ದೌರ್ಬಲ್ಯ, ಸೀಮಿತತೆಯ ಬಗ್ಗೆಯೇ, ಹೆಚ್ಚು ವಿಚಾರ ಮಾಡಿರುವುದನ್ನು ಇಲ್ಲಿ ನಾವು ಪ್ರಾಸಂಗಿಕವಾಗಿ ನೆನಪಿಸಿಕೊಳ್ಳಬಹುದು.

ಸ್ವಯಂ ಮಾಂಟನೇರ್ ಒಂದು ಕಡೆ ನಾನು, ನನ್ನಂತಹ ಪೆಡಂಭೂತದ ಬಗ್ಗೆ ಅಥವ ನನ್ನಂತಹ ಅದ್ಭುತದ ಬಗ್ಗೆ ಬೇರೆಲ್ಲೂ
ನೋಡಿಲ್ಲ ಎಂದು ಹೇಳಿಕೊಂಡಿರುವುದು ಗಮನೀಯ. ಮಾಂಟನೇರನ ವಿಚಾರ ಧಾಟಿಯನ್ನು ತಿಳಿಯಲು ಒಂದು ವಿಚಾರ ವನ್ನು ಗಮನಿಸೋಣ. ಮಕ್ಕಳ ಶಿಕ್ಷಣದ ಬಗ್ಗೆ ಶುಷ್ಕ ಪಾಂಡಿತ್ಯದ ಬಗ್ಗೆ ಮತ್ತು ಅನುಭವದ ಬಗ್ಗೆ ಎಂಬ ಪ್ರಬಂಧಗಳಲ್ಲಿ ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಬರೆದದ್ದು ಇಂದಿಗೂ ಮನನೀಯವಾಗಿದೆ.

ಅಂದಿನ ದಿನಗಳಲ್ಲಿದ್ದ ಪಠ್ಯ ವಿಷಯ ಮತ್ತು ಅದನ್ನು ಹೇಳುತ್ತಿದ್ದ ವಿಧಾನದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ. ಅಂದಿನ ದಿನಗಳ ಶಾಲಾ ಪಠ್ಯಗಳನ್ನು ಯೂರೋಪಿಯನ್ ಶ್ರೇಷ್ಠ ಗ್ರಂಥಗಳಿಂದ ಆಯ್ದುಕೊಳ್ಳುತ್ತಿದ್ದರು. ಮಕ್ಕಳು ಅವನ್ನು ಉರುಹಚ್ಚಿಯೇ ಕಲಿಯಬೇಕಾಗಿತ್ತು. ಹಾಗೇ ಕಲಿತದ್ದನ್ನೇ ಅವರು ಪರಮ ಸತ್ಯವೆಂದು ಭಾವಿಸಬೇಕಾಗಿತ್ತು. ಪ್ರಶ್ನೆಗಳನ್ನು ಕೇಳಲು, ಚರ್ಚೆಯನ್ನು ಮಾಡಲು ಅವಕಾಶವೇ ಇರಲಿಲ್ಲ. ಹಾಗಾಗಿ ಅಂತಿಮ ಸತ್ಯವೆನ್ನುವುದು ಮಕ್ಕಳಿಂದ ಬಹಳ ದೂರವೇ ಉಳಿಯುತ್ತಿತ್ತು. ಒಂದು ವಿಷಯದ ಬಗ್ಗೆ ಲಭ್ಯ ಮಾಹಿತಿಯನ್ನು ನೀಡಿ, ಮಕ್ಕಳೇ ಸ್ವಯಂ ತೀರ್ಮಾನಕ್ಕೆ ಬರುವಂತೆ ಪ್ರಚೋದಿ ಸುವುದು ಉತ್ತಮ ವಿಧಾನ ಎಂದು ಆತನ ಅಭಿಪ್ರಾಯವಾಗಿತ್ತು.

ಒಬ್ಬ ವಿದ್ಯಾರ್ಥಿಯು ಶ್ರೇಷ್ಠ ವಿದ್ವಾಂಸನಾಗಬಕಾದರೆ, ಅವನಿಗೆ ಒಬ್ಬ ಅತ್ಯುತ್ತಮ ಅಧ್ಯಾಪಕನಿರಬೇಕು. ಅಧ್ಯಾ ಪಕನು ವಿದ್ಯಾರ್ಥಿಯ ಬೌದ್ಧಿಕ ಮಟ್ಟ ಮತ್ತು ಕಲಿಕೆಯ ವೇಗಕ್ಕೆ ಅನುಗುಣವಾಗಿ ಪಾಠವನ್ನು ಹೇಳಬೇಕು. ಪಾಠವು ಯಾವಾಗಲು ವಿದ್ಯಾರ್ಥಿಯಲ್ಲಿರುವ ಸುಪ್ತಪ್ರತಿಭೆಯು ಜಾಗೃತಗೊಳಿಸುವ ರೀತಿಯಲ್ಲಿರಬೇಕು. ವಿದ್ಯಾರ್ಥಿಗಳಲ್ಲಿರುವ ನೈಸರ್ಗಿಕ ಕುತೂಹಲ ವನ್ನು ಕೆರಳಿಸುವಂತಿರಬೇಕು.

ಪಾಠವು ಭಾಷಣವಾಗಬಾರದು. ಅದು ಯಾವಾಗಲೂ ಸಂಭಾಷಣೆಯ ರೂಪದಲ್ಲಿರಬೇಕು. ವಿದ್ಯಾರ್ಥಿಯೇ ಮೊದಲು ಸಂಭಾ ಷಣೆಯನ್ನು ಆರಂಭಿಸಬೇಕು. ಆನಂತರವೇ ಅಧ್ಯಾಪಕನು ಅಗತ್ಯ ಮಾಹಿತಿಯನ್ನು ಮಾತುಕತೆಯ ಮೂಲಕವೇ ನೀಡಬೇಕು. ಅಧ್ಯಾಪಕನು ಪುಸ್ತಕಗಳಲ್ಲಿರುವ ಮಾಹಿತಿಯನ್ನು ತಲೆಯಲ್ಲಿ ತುಂಬದೆ, ತನ್ನ ಅನುಭವದ ಹಿನ್ನೆಲೆಯಲ್ಲಿ ಅಗತ್ಯ ವಿಚಾರ ಗಳನ್ನು ಮಾತ್ರ ತಿಳಿಸಬೇಕು. ಪ್ರಶ್ನೆಗಳಿಗೆ ಹಾಗೂ ಚರ್ಚೆಗೆ ಅವಕಾಶವನ್ನು ಮಾಡಿಕೊಡ ಬೇಕು. ಆಗ ವಿದ್ಯಾರ್ಥಿಯು ಸ್ವಯಂ ಶಿಕ್ಷಿತನಾಗಲು ಅವಕಾಶವು ದೊರೆಯುತ್ತದೆ. ವಿದ್ಯಾರ್ಥಿಯು ತನ್ನ ತಪ್ಪು-ಒಪ್ಪುಗಳನ್ನು ತಾನೇ ತಿಳಿದುಕೊಂಡು, ಅಂತಿಮ ಸತ್ಯದ ಕಡೆಗೆ ನಡೆಯಲು ಸಾಧ್ಯವಾಗುತ್ತದೆ.

ಅಧ್ಯಾಪಕರು ಹೇಳುವುದನ್ನು ಮಾತ್ರ ಕೇಳುತ್ತಾ, ಅವರು ತೋರಿದ ಹಾದಿಯಲ್ಲೇ ನಡೆಯುತ್ತ ಹೋದರೆ, ನಿಷ್ಕ್ರಿಯ ವಯಸ್ಕ ರನ್ನು ಸೃಜಿಸಿದ ಹಾಗೆ ಆಗುತ್ತದೆ. ಅಷ್ಟೆ. ಮಗುವು ಯಾವ ವಿಚಾರದಲ್ಲಿ ಕುತೂಹಲವನ್ನು ವ್ಯಕ್ತಪಡಿಸುತ್ತದೆಯೋ, ಅದೇ ವಿಷಯದಲ್ಲಿ ಮುಂದುವರೆಯಲು ಅವಕಾಶವನ್ನು ಮಾಡಿಕೊಟ್ಟರೆ, ಆ ಮಗುವಿನ ನೈಜ ಪ್ರತಿಭೆಯು ಹೊರಬರುತ್ತದೆ.

Read E-Paper click here