Monday, 9th December 2024

ಹೆಸರಿಗಾಗಿ ಕೊಲೆಯನ್ನು ಮಾಡಬಲ್ಲರು !

ಹಿಂದಿರುಗಿ ನೋಡಿದಾಗ

ಪ್ಯಾಂಕ್ರಿಯಾಸ್ ಗ್ರಂಥಿ, ಮನುಷ್ಯನ ಒಳಾಂಗಗಳಲ್ಲಿ ಒಂದು. ಗ್ರೀಕ್ ಭಾಷೆಯಲ್ಲಿ pankreas ಎಂದರೆ ಮಾಂಸಲವಾದದ್ದು ಎಂದರ್ಥ.

ಪ್ರಾಣಿಗಳಲ್ಲಿರುವ ಪ್ಯಾಂಕ್ರಿಯಾಸ್ ಗ್ರಂಥಿಯು ಅತ್ಯಂತ ಮೃದುವಾದ ಹಾಗೂ ಸಿಹಿಯಾಗಿರುವ ಅಂಗ. ಮಧ್ಯಯುಗದ ಯೂರೋಪಿನ ಜನರು ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದರು. ಹಾಗಾಗಿ ಇದನ್ನು-ಸಿಹಿರೊಟ್ಟಿ-ಸ್ವೀಟ್ ಬ್ರೆಡ್ ಎಂದು ಕರೆಯುತ್ತಿದ್ದರು. Pan = ಎಲ್ಲವೂ kreas = ಮಾಂಸದ ಹಾಗೆ ತುಂಬಿಕೊಂಡಿರುವಂತಹದ್ದು ಎಂದರ್ಥ.

ಪ್ಯಾಂಕ್ರಿಯಾಸ್ ಶಬ್ದದ ವ್ಯುತ್ಪತ್ತಿಯನ್ನು ಆಧರಿಸಿ ಕನ್ನಡದಲ್ಲಿ ಮಾಂಸಲಿ ಮತ್ತು ಬಾಡಲಿ ಎನ್ನುವ ಸಮ ಪದಗಳನ್ನು ರೂಪಿಸುವ ಪ್ರಯತ್ನಗಳಲ್ಲಿ ನಡೆದಿವೆ. ಮೇದೋಜೀರಕಾಂಗ ಎನ್ನುವುದು ಸಾಕಷ್ಟು ಕಾಲದಿಂದಲೂ ಪ್ರಚಲಿತದಲ್ಲಿರುವ ಪದ. ಆದರೆ ಇದು ಪ್ಯಾಂಕ್ರಿಯಾಸ್ ಗ್ರಂಥಿಯ ಅರ್ಧ
ಕೆಲಸವನ್ನು ಮಾತ್ರ ಸೂಚಿಸುತ್ತದೆ. ಪೂರ್ಣವಲ್ಲ. ಹಾಗಾಗಿ ಇದನ್ನು ಬಳಸದಿರುವುದು ಒಳ್ಳೆಯದು ಎಂಬ ಅಭಿಪ್ರಾಯವಿದೆ. ಹಾಗಾಗಿ ಸಧ್ಯಕ್ಕೆ ಪ್ಯಾಂಕ್ರಿಯಾಸ್ ಎನ್ನುವ ಹೆಸರನ್ನೇ ಕನ್ನಡದಲ್ಲಿಯೂ ಉಳಿಸಿಕೊಳ್ಳಬಹುದು.

ಪ್ಯಾಂಕ್ರಿಯಾಸ್ ಒಂದು ಉಭಯ ಗ್ರಂಥಿ. ಅಂದರೆ ಒಂದು ಅಂಗವೇ ಎರಡು ಭಿನ್ನವಾದ ಕೆಲಸಗಳನ್ನು ಮಾಡುತ್ತದೆ ಎಂದರ್ಥ. ಇದರ ಮೊದಲನೆಯ ಕೆಲಸ, ನಾವು ಸೇವಿಸಿದ ಆಹಾರ ಪದಾರ್ಥಗಳು ಜೀರ್ಣವಾಗಲು ಅಗತ್ಯವಾದ ಕಿಣ್ವಗಳನ್ನು ಉತ್ಪಾದಿಸಿ ಬಿಡುಗಡೆ ಮಾಡುವುದು. ಟ್ರಿಪ್ಸಿನ್ ಕಿಣ್ವವು ಪ್ರೋಟೀನ್ ಜೀರ್ಣಕ್ರಿಯಯೆಲ್ಲಿ ಭಾಗವಹಿಸುತ್ತದೆ. ಲೈಪೇಸ್, ಫಾಸ್ಫೋಲೈಪೇಸ್ ಎ೨, ಲೈಸೋ-ಸೋಲೈಪೇಸ್, ಕೊಲೆಸ್ಟೆರಾಲ್ ಎಸ್ಟೆರೇಸ್ ಮುಂತಾದ ಕಿಣ್ವಗಳು ಮೇದಸ್ಸನ್ನು ಜೀರ್ಣಿಸಲು ನೆರವಾಗುತ್ತವೆ (ಹಾಗಾಗಿ ಇದನ್ನು ಮೇದೋಜೀರಕಾಂಗ ಎಂದು ಕರೆದರು) ಅಮೈಲೇಸ್ ಎನ್ನುವ ಕಿಣ್ವವು ಕಾರ್ಬೋಹೈಡ್ರೇಟನ್ನು ಜೀರ್ಣಿಸುತ್ತದೆ.

ಪ್ಯಾಂಕ್ರಿಯಾಸ್ ಈ ಎಲ್ಲ ಕಿಣ್ವಗಳನ್ನು ಉತ್ಪಾದಿಸಿ, ಅವನ್ನು ಒಂದು ನಾಳದ ಮೂಲಕ ಸಣ್ಣಕರುಳಿನ ದ್ವಾದಶಾಂತ್ರ ಅಥವ ಡುಯೋಡಿನಮ್ ಎಂಬ ಭಾಗದಲ್ಲಿ ಸುರಿಸುತ್ತದೆ. ಹಾಗಾಗಿ ಇದನ್ನು ನಾಳಸಹಿತ ಗ್ರಂಥಿ ಎನ್ನುವರು. ೧೮೮೯ರಲ್ಲಿ ಆಸ್ಕರ್ ಮಿಂಕೋವ್‌ಸ್ಕಿ (೧೮೫೮-೧೯೩೧) ಎನ್ನುವ ಜರ್ಮನ್ ವೈದ್ಯನು ನಾಯಿಗಳ ದೇಹದಲ್ಲಿದ್ದ ಪ್ಯಾಂಕ್ರಿಯಾಸ್ ಗ್ರಂಥಿಯನ್ನು ಛೇದಿಸಿದ. ಆಗ ಆ ನಾಯಿಯಲ್ಲಿ ಮಧುಮೇಹವು ಕಾಣಿಸಿಕೊಂಡಿತು.
ಹಾಗಾಗಿ ಮಧುಮೇಹಕ್ಕೂ ಪ್ಯಾಂಕ್ರಿಯಾಸ್ ಗ್ರಂಥಿಗೂ ಸಂಬಂಧವಿರಬೇಕೆಂದು ತರ್ಕಿಸಿದ. ಕೊನೆಗೆ ೧೯೨೧ರಲ್ಲಿ ಫ್ರೆಡ್ರಿಕ್ ಗ್ರಾಂಟ್ ಬ್ಯಾಂಟಿಂಗ್ (೧೮೯೧-೧೯೪೧) ಮತ್ತು ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ (೧೮೯೯-೧೯೭೮) ಇಬ್ಬರೂ ಸೇರಿ, ಪ್ಯಾಂಕ್ರಿಯಾಸ್ ಗ್ರಂಥಿಯು ಇನ್ಸುಲಿನ್ ಎಂಬ
ಹಾರ್ಮೋನನ್ನು ಉತ್ಪಾದಿಸುತ್ತದೆ, ಅದು ಗ್ಲೂಕೋಸ್ ಉಪಾಪಚಯದಲ್ಲಿ ಪಾಲುಗೊಳ್ಳುತ್ತದೆ.

ಶರೀರವು ಇನ್ಸುಲಿನ್ ಕೊರತೆಯ ಕಾರಣ ಅಥವಾ ಬಳಸಿಕೊಳ್ಳಲಾಗದ ಅಸಹಾಯಕತೆಯ ಕಾರಣ ಮಧುಮೇಹವು ತಲೆದೋರುತ್ತದೆ ಎನ್ನುವು ದನ್ನು ಪ್ರಕಟಿಸಿದರು. ಪ್ಯಾಂಕ್ರಿಯಾಸ್ ತನ್ನ ಇನ್ಸುಲಿನ್ ಉತ್ಪಾದನೆಯನ್ನು ಯಾವುದೇ ನಾಳದ ಮೂಲಕ ಹರಿಸದೇ, ನೇರವಾಗಿ ರಕ್ತನಾಳದೊಳಗೆ ಬೆರೆಸುತ್ತದೆ. ಹಾಗಾಗಿ ಇದನ್ನು ನಿರ್ನಾಳ ಗ್ರಂಥಿ ಎಂದೂ ಕರೆಯುವರು. ಹೀಗೆ ಪ್ಯಾಂಕ್ರಿಯಾಸ್ ನಾಳಸಹಿತ ಹಾಗೂ ನಾಳರಹಿತ ಉಭಯಗ್ರಂಥಿ ಯಾಗಿದೆ. ಪ್ಯಾಂಕ್ರಿಯಾಸ್ ಎಂಬ ಒಳಾಂಗದ ಭಾಗವನ್ನು ಮೊದಲ ಬಾರಿಗೆ ಗಮನಿಸಿದವನು ಗ್ರೀಕ್ ದೇಶದ ಚಾಲ್ಸಿಡಾನ್ ಎಂಬಲ್ಲಿ ವಾಸಿಸುತ್ತಿದ್ದ ಹೆರೋಫಿಲಸ್ (ಕ್ರಿ.ಪೂ.೩೩೫- ಕ್ರಿ.ಪೂ.೨೮೦) ಎಂಬ ಅಂಗರಚನ ವಿಜ್ಞಾನಿ ಹಾಗೂ ಶಸ್ತ್ರವೈದ್ಯ. ಬಹುಶಃ ಮನುಷ್ಯನ ಶರೀರವನ್ನು ಸಾರ್ವಜನಿಕ ವಾಗಿ ವಿಚ್ಛೇದಿಸಿದವರಲ್ಲಿ ಈತನೇ ಮೊದಲಿಗ ಎನ್ನಬಹುದು.

ಹೆರೋಫಿಲಸ್ ಈ ಅಂಗವನ್ನು ಗುರುತಿಸಿದನೇ ಹೊರತು, ಇದಕ್ಕೆ ಒಂದನ್ನು ಹೆಸರನ್ನು ನೀಡುವ ಅಥವ ಇದರ ಕೆಲಸವನ್ನು ಅರಿಯುವ ಪ್ರಯತ್ನವನ್ನು ಮಾಡಲಿಲ್ಲ. ಹೆರೋಫಿಲಸ್ ನಂತರ, ಸುಮಾರು ೪೦೦ ವರ್ಷಗಳಾದ ಮೇಲೆ ಗ್ರೀಸ್ ದೇಶದ ಈಫಿಸಸ್ ಎಂಬಲ್ಲಿ ವಾಸಮಾಡುತ್ತಿದ್ದ
ರೂ-ಸ್ (ಕ್ರಿ.ಶ.೧-೨ನೆಯ ಶತಮಾನ) ಎಂಬ ಅಂಗರಚನ ವಿಜ್ಞಾನಿಯು ಅತ್ಯಂತ ಮೃದುವಾಗಿದ್ದ ಈ ಅಂಗವನ್ನು, ಮಾಂಸಲವಾಗಿದೆ ಎನ್ನುವ ಅರ್ಥದಲ್ಲಿ ಪ್ಯಾಂಕ್ರಿಯಾಸ್ ಎಂದು ನಾಮಕರಣವನ್ನು ಮಾಡಿದ. ರೋಮಿನ ಕ್ಲಾಡಿಯಸ್ ಗ್ಯಾಲನಸ್ ಅಥವ ಗ್ಯಾಲನ್ (೧೨೯-೨೧೬) ಪ್ಯಾಂಕ್ರಿಯಾಸ್ ಗ್ರಂಥಿಯನ್ನು ಒಂದು ಮೃದು ತಲ್ಪ ಎಂದ. ಜಠರ ಮತ್ತು ಪ್ರಧಾನ ರಕ್ತನಾಳಗಳಿಗೆ ಆಘಾತವಾಗದ ಹಾಗೆ ರಕ್ಷಿಸುವ ಹಾಸಿಗೆ ಯಂತಹ ರಚನೆ ಎಂಬ ವಿವರಣೆಯನ್ನು ನೀಡಿದ.

ಈತನ ವಿವರಣೆಯನ್ನು, ಸುಮಾರು ೧೨೦೦ ವರ್ಷಗಳ ಕಾಲ, ಎಲ್ಲ ವೈದ್ಯರೂ ಕಮಕ್-ಕಿಮಕ್ ಎನ್ನದೆ ಒಪ್ಪಿಕೊಂಡಿದ್ದರು! ಪ್ಯಾಂಕ್ರಿಯಾಸ್ ಗ್ರಂಥಿಯ ಬಗ್ಗೆ  ಗಂಭೀರವಾದ ಅಧ್ಯಯನವನ್ನು ಮೊದಲ ಬಾರಿಗೆ ಕೈಗೊಂಡವನು ಜರ್ಮನ್ ದೇಶದ ಜೊಹಾನ್ ಜಾರ್ಜ್ ವಿರ್ಸಂಗ್ (೧೫೮೯-೧೬೪೩) ಈತನು ಪ್ಯಾಂಕ್ರಿಯಾಸ್ ಗ್ರಂಥಿಯು ಒಂದು ಪ್ರಧಾನ ನಾಳವನ್ನು ಗುರುತಿಸಿದ. (ಈ ನಾಳದ ಮೂಲಕವೇ ಪ್ಯಾಂಕ್ರಿಯಾಸ್ ತನ್ನ ಜೀರ್ಣಕಾರಿ ರಸಗಳನ್ನು ದ್ವಾದಶಾಂತ್ರದೊಳಗೆ ಸುರಿಸುತ್ತದೆ) ಹಾಗಾಗಿ ಈ ನಾಳವನ್ನು ಪ್ಯಾಂಕ್ರಿಯಾಸ್ ನಾಳ ಅಥವಾ ವಿರ್ಸಂಗ್ ನಾಳ
(ಡಕ್ಟ್ ಆ- ವಿರ್ಸಂಗ್) ಎಂದು ಕರೆಯುತ್ತೇವೆ. ಆದರೆ ವಿಪರ್ಯಾಸವೆಂದರೆ, ಈ ಹೊಸ ರಚನೆಯನ್ನು ಕಂಡು ಹಿಡಿದ ಕಾರಣಕ್ಕೆ, ವಿರ್ಸಂಗ್ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾಯಿತು.

ಜೊಹಾನ್ ಜಾರ್ಜ್ ವಿರ್ಸಂಗ್ ಮರಣಿಸಿ ಶತಮಾನಗಳು ಕಳೆದುಹೋಗಿವೆ. ರಿನೇಸಾನ್ಸ್ ಅವಧಿಯಲ್ಲಿ ಜ್ಞಾನದ ಬೆಳಕು ಎಲ್ಲೆಡೆ ಹರಡುತ್ತಿರುವಾಗ, ಇಟಲಿಯ ಪಡುವದಲ್ಲಿ ಮನುಷ್ಯನ ಶರೀರದ ಒಂದು ಅಂಗವನ್ನು ಕಂಡುಹಿಡಿದ ಕೀರ್ತಿಯನ್ನು ತಾಳಲಾಗದೆ ಹೊಟ್ಟೆಕಿಚ್ಚಿನಿಂದ ವಿರ್ಸಂಗ್‌ನನ್ನು
ಕೊಂದ ಘಟನೆ ಅಪರೂಪದ್ದಾಗಿದೆ. ಬಹುಶಃ ಇಂತಹ ಘಟನೆಯು ಹಿಂದೆಂದೂ ನಡೆದಿರಲಿಲ್ಲ. ನವೆಂಬರ್ ೧೬೨೯. ವಿರ್ಸಂಗ್, ಪ್ಯಾರಿಸ್ ಮತ್ತು
ಆಲ್ಡಾ- ಎಂಬ ಸ್ಥಳಗಳಲ್ಲಿ ಅಂಗರಚನ ವಿಜ್ಞಾನವನ್ನು ಕಲಿತವನು ಪಡುವಾ ನಗರಕ್ಕೆ ಬಂದ. ಉನ್ನತ ಅಧ್ಯಯನವನ್ನು ಕೈಗೊಂಡ. ಮಾರ್ಚ್ ೨೩, ೧೬೩೦ರಲ್ಲಿ ಮೆಡಿಸಿನ್ ಮತ್ತು ಫಿಲಾಸಫಿಯಲ್ಲಿ ಡಾಕ್ಟೋರೇಟ್ ಗಳಿಸಿದ.

ಪಡುವ ನಗರದಲ್ಲಿ ಜೊಹಾನ್ ವೆಸ್ಲಿಂಗ್ (೧೫೯೮–೧೬೪೯) ಎಂಬ ಪ್ರಾಚಾರ್ಯರು ಬಳಿ ಅಂಗವಿಚ್ಚೇದನ ಸಹಾಯಕನಾಗಿ (ಪ್ರೊಸೆಕ್ಟರ್) ಆಗಿ ಕೆಲಸಕ್ಕೆ ಸೇರಿಕೊಂಡ. ಮಾರ್ಚ್ ೨, ೧೬೪೨. ಸ್ಯಾನ್ ಫ್ರಾನ್ಸೆಸ್ಕೋ ಆಸ್ಪತ್ರೆ. ಜ಼ುವಾನ್ ವಿಯಾರೊ ಡೆಲ್ಲ ಬೇಡಿಯ ಎಂಬ ೩೦ ವರ್ಷದ
ಯುವಕನನ್ನು ಹಿಂದಿನ ದಿನವಷ್ಟೇ ನೇಣು ಶಿಕ್ಷಗೆ ಒಳಪಡಿಸಿದ್ದರು. ಆತನ ಶವ ವಿಚ್ಛೇದನವನ್ನು ವಿರ್ಸಂಗ್ ಮಾಡುತ್ತಿದ್ದ. ಅಂಗವಿಚ್ಛೇದನದಲ್ಲಿ ಡೆನ್ಮಾರ್ಕ್ ದೇಶದ ಥಾಮಸ್ ಬಾರ್ಥೊಲಿನ್ (೧೬೧೬-೧೬೮೦) ಮತ್ತು ಜರ್ಮನಿ ದೇಶದ ಮೋರ್ಟ್ಜ್ ಹಾಫ್ಮನ್ (೧೬೨೧-೧೬೯೮) ಎಂಬ ವೈದ್ಯಕೀಯ ವಿದ್ಯಾರ್ಥಿಗಳು ನೆರವಾಗುತ್ತಿದ್ದರು.

ವಿರ್ಸಂಗ್ ಪ್ಯಾಂಕ್ರಿ ಯಾಸ್ ಗ್ರಂಥಿಯನ್ನು ಅಧ್ಯಯನ ಮಾಡುವಾಗ, ಆ ಗ್ರಂಥಿಯಲ್ಲಿ ಪ್ರಧಾನವಾದ ನಾಳವೊಂದು ಹುಟ್ಟಿ ಅದು ಡುಯೋಡಿನಮ್‌ ನನ್ನು ಸೇರುವುದನ್ನು ಗಮನಿಸಿದ. ವಿರ್ಸಂಗ್ ಕೂಡಲೇ ತಾನು ಗಮನಿಸಿದ ರಚನೆಯ ವಿವರಗಳನ್ನು ಸ್ವಯಂ ತಾಮ್ರಫಲಕದ ಮೇಲೆ ಕೊರೆದ. ಹಲವು ಕವಲುಗಳಿರುವ ಒಂದು ನಮೂನೆಯ ನಾಳದ ರಚನೆ. ಇತ್ತೀಚೆಗೆ ಅನೇಕ ಮಾನವ ದೇಹದಲ್ಲಿ ಗಮನಿಸಲಾಗಿದೆ. ಗಮನಿಸಿದವರು ಜೋ ಜಾರ್ಜ್ ವಿರ್ಸಂಗ್ ಎಂದು ಬರೆದ. ವಿರ್ಸಂಗನಿಗೆ ತಾನು ಹೊಸ ಅಂಗರಚನೆಯನ್ನು ಮೊದಲ ಬಾರಿಗೆ ಗಮನಿಸಿರುವುದು ಮನವರಿಕೆಯಾಗಿತ್ತು.

ಪ್ಯಾಂಕ್ರಿಯಸ್ ಜಠರದ ಕುಶನ್ ಎಂಬ ಗ್ಯಾಲನ್ನಿನ ಹೇಳಿಕೆ ಅವನಿಗೆ ನೆನಪಿತ್ತು. ಅದಕ್ಕಿಂತಲೂ ಹೆಚ್ಚಿನ ಕೆಲಸವನ್ನೇನಾದರೂ ಮಾಡುತ್ತಿರಬಹುದೇ ಎನ್ನುವುದರ ಬಗ್ಗೆ ಅವನಿಗೇನೂ ಹೊಳೆಯಲಿಲ್ಲ. ಹಾಗೆಯೇ ಮುಂದೆ ತಾನು ಏನು ಮಾಡಬೇಕೆಂಬುದು ಎಂಬುದೂ ತೋಚಲಿಲ್ಲ. ಆದರೂ ತಾಮ್ರ
ಫಲಕದಲ್ಲಿ ತಾನು ಬಿಡಿಸಿದ ಚಿತ್ರದ ಏಳು ಪ್ರತಿಗಳನ್ನು ತೆಗೆದ. ಸಮಕಾಲೀನ ಯೂರೋಪಿನ ಪ್ರಖ್ಯಾತ ಅಂಗರಚನ ವಿಜ್ಞಾನಿಗಳಿಗೆ ಅವನ್ನು ಕಳುಹಿಸಿಕೊಟ್ಟ. ಅವರಲ್ಲಿ ಆತನಿಗೆ ರಚನೆಯನ್ನು ಕಲಿಸಿಕೊಟ್ಟಿದ್ದ ಜೀನ್ ರಿಯೋಲಾನ್ (೧೫೮೦-೧೬೫೭) ಅವರೂ ಸೇರಿದ್ದರು.

ವಿರ್ಸಂಗ್‌ನದು ಒಂದು ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಹುನ್ನಾರವಾಗಿತ್ತು. ಮೊದಲನೆಯದು ತಾನೊಂದು ಹೊಸ ರಚನೆಯನ್ನು ಕಂಡು ಹಿಡಿದಿದ್ದೇನೆ ಎನ್ನುವುದನ್ನು ಜಗತ್ತಿಗೆ ತಿಳಿಸಿ, ಅದರ ಕೀರ್ತಿಯನ್ನು ತನ್ನದಾಗಿಸಿಕೊಳ್ಳಬೇಕಾಗಿತ್ತು ಹಾಗೂ ಎರಡನೆಯದು ಆ ಅಂಗದ ಬಗ್ಗೆ ಇತರ ಅಂಗರಚನ ವಿಜ್ಞಾನಿಗಳಿಗೆ ತಿಳಿದಿರಬಹುದಾದ ಜ್ಞಾನವನ್ನು ಅರಿಯುವ ಕುತೂಹವಿತ್ತು. ವಿರ್ಸಂಗನ ಮರಣಾನಂತರ ಈ ಎಲ್ಲ ಮಾಹಿತಿಯು ಹೊರಗೆ ಬಂದಿತು.

ವಿರ್ಸಂಗ್ ಮತ್ತು ಆತನ ಜತೆಯಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ಮೊದ ಮೊದಲು ಇದನ್ನು ಗುಲ್ಮದ (ಸ್ಪ್ಲೀನ್) ಭಾಗವೆಂದು ಪರಿಗಣಿಸಿದರೂ, ನಂತರ ತಮ್ಮನ್ನು ತಿದ್ದಿಕೊಂಡು, ಬಹುಶಃ ಈ ನಾಳವು ಪ್ಯಾಂಕ್ರಿಯಾಸ್ ಅಂಗವು ಉತ್ಪಾದಿಸುವ ಯಾವುದೋ ವಸ್ತುವನ್ನು ಸಾಗಿಸುತ್ತಿದ್ದಿರಬೇಕು ಎನ್ನುವ ತೀರ್ಮಾನಕ್ಕೆ ಬಂದರು. ಈ ಅನಿಸಿಕೆ ಸತ್ಯವಾಗಿತ್ತು. ಪ್ಯಾಂಕ್ರಿಯಾಸ್ ತನ್ನ ಜೀರ್ಣಕಾರಿ ರಸಗಳನ್ನು ಇದೇ ನಾಳದ ಮೂಲಕ ಕರುಳಿಗೆ
ರವಾನಿಸುತ್ತಿತ್ತು. ವಿರ್ಸಂಗ್, ರಿಯೋಲಾನ್ ಅವರಿಗೆ ಬರೆದ ಪತ್ರದಲ್ಲಿ, ತಾನು ಈ ಹೊಸ ರಚನೆಯನ್ನು ಎಲ್ಲ ವಯಸ್ಕರರಲ್ಲೂ, ನವಜಾತ ಶಿಶುಗಳಲ್ಲಿಯೂ ಹಾಗೂ ಭ್ರೂಣಗಳಲ್ಲಿಯೂ ಗಮನಿಸಿರುವುದಾಗಿ ದಾಖಲಿಸಿದ್ದ.

ಹಾಗೆಯೇ ಇಂತಹ ರಚನೆಗಳು ಪ್ರಾಣಿಗಳಲ್ಲಿಯೂ ಇರಬಹುದೇ ಎನ್ನುವ ಬಗ್ಗೆ ಕುತೂಹಲವನ್ನು ವ್ಯಕ್ತಪಡಿಸಿದ್ದ. ಇದುವರೆಗಿನ ವಿವರಗಳ ಬಗ್ಗೆ ನಮಗೇನೂ ಗೊಂದಲವಿಲ್ಲ. ಇನ್ನು ಮುಂದೆ ನಡೆದದ್ದು ಮಾತ್ರ ಏನೆಂದು ಇಂದಿಗೂ ನಿಗೂಢವಾಗಿದೆ. ಆಗಸ್ಟ್ ೨೨, ೧೬೪೩. ಪಡುವದಲ್ಲಿ ಕೊಲೆಜಿಯೊ ಪ್ರಾಟೆನ್ಸ್ ಮತ್ತು ಸೈಂಟ್ ಆಂಥನಿ ಬೆಸಿಲಿಕ ಬಳಿ ವಿರ್ಸಂಗನ ಮನೆ. ಅಲ್ಲಿ ಜಾಕ್ವೆಸ್ ಕೇಂಬಿಯರ್ ಎಂಬ ವ್ಯಕ್ತಿಯು ಗುಂಡು ಹಾರಿಸಿ ವಿರ್ಸಂಗನನ್ನು ಕೊಂದ. ಜಿಯೋವನ್ನಿ ಬ್ಯಾಟಿಸ್ಟ ಮೋರ್ಗ್ಯಾಗ್ನಿ (೧೬೮೨-೧೭೭೧) ಎಂಬ ಪ್ರಖ್ಯಾತ ಅಂಗರಚನೆ ವಿಜ್ಞಾನಿಯು ೧೭೧೫ರಲ್ಲಿ ಇದು ವೈಯುಕ್ತಿಕ ಸೇಡಿನ ಕೊಲೆ ಎಂದು ಕರೆದ.

ಆದರೆ ಆ ವೈಯುಕ್ತಿಕ ಸೇಡಿನ ವಿವರಗಳ ಬಗ್ಗೆ ಏನನ್ನೂ ಹೇಳದೆ ಮೌನವಾಗಿದ್ದ. ವಿರ್ಸಂಗ್ ಕಂಡುಹಿಡಿದ ಹೊಸ ನಾಳದ ಬಗ್ಗೆ ಅಥವಾ ಆ ಹೊಸ ನಾಳಕ್ಕೆ ನಾಮಕರಣವನ್ನು ಮಾಡುವ ವಿಚಾರದಲ್ಲಿ ಮೂಡಿದ ಭಿನ್ನಾಭಿಪ್ರಾಯವೇ ವಿರ್ಸಂಗನ ಸಾವಿಗೆ ಕಾರಣವಾಗಿದೆ ಎನ್ನುವ ಒಟ್ಟಾಭಿಪ್ರಾಯವು ಹರಡಿತು. ಅಂದರೆ ವಾಸ್ತವದಲ್ಲಿ ಕೇಂಬಿಯರ್ ಓರ್ವ ಬಾಡಿಗೆ ಕೊಲೆಗಾರನಾಗಿದ್ದು, ಕೊಲೆಯನ್ನು ಯಾರೋ ಮಾಡಿಸಿದ್ದಾರೆ ಎನ್ನುವ ವಿಚಾರಕ್ಕೆ ಹೆಚ್ಚು ಒತ್ತು ದೊರೆಯಿತು. ಜೊಹಾನ್ ವೆಸ್ಲಿಂಗ್ ಅಥವಾ ಮಾರ್ಟಿಜ಼್ ಹಾಫ್ಮನ್ ಈ ಕೆಲಸವನ್ನು ಮಾಡಿಸಿರಬೇಕು ಎನ್ನುವ ಗುಮಾನಿಯು ಪ್ರಬಲವಾಗಿತ್ತು.

ವಿರ್ಸಂಗ್, ಜೊಹಾನ್ ವೆಸ್ಲಿಂಗ್ ಬಳಿ ಕೆಲಸವನ್ನು ಮಾಡುತ್ತಿದ್ದ. ವೆಸ್ಲಿಂಗ್ ಜತೆಯಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿದ್ದ. ಮಾರ್ಟಿಜ಼್ ಹಾಫ್ಮನ್,
ವಿರ್ಸಂಗ್ ಪ್ಯಾಂಕ್ಲಿಯಾಸ್ ನಾಳವನ್ನು ಪತ್ತೆ ಹಚ್ಚುವಾಗ, ಅವನ ಜತೆಯಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿ. ಇವರಿಬ್ಬರಲ್ಲಿ ಯಾರೋ ಒಬ್ಬರು ಪ್ಯಾಂಕ್ರಿಯಾಸ್ ನಾಳವನ್ನು ಪತ್ತೆಹಚ್ಚಿದ ಖ್ಯಾತಿಯನ್ನು ತಮ್ಮದಾಗಿಸಿಕೊಳ್ಳಲು, ವಿರ್ಸಂಗನನ್ನು ಕೊಂದಿರಬೇಕು ಎನ್ನುವ ಪುಕಾರು ಬಲವಾಯಿತು.
ವಿರ್ಸಂಗ್ ಮರಣಿಸಿ ಐದು ವರ್ಷಗಳಾದವು.

ಮಾರ್ಟಿಜ಼್ ಹಾಫ್ಮನ್, ಪ್ಯಾಂಕ್ರಿಯಾಸ್ ನಾಳವನ್ನು ಪತ್ತೆ ಹಚ್ಚಿದ ಕೀರ್ತಿ ತನ್ನದು ಎಂದು ಘೋಷಿಸಿದ. ತಾನು ಸೆಪ್ಟೆಂಬರ್ ೧೬೪೧ರಲ್ಲಿ ಟರ್ಕಿ ಕೋಳಿಯ ವಿಚ್ಚೇದನವನ್ನು ಮಾಡುವಾಗ, ಈ ಹೊಸ ರಚನೆಯನ್ನು ಪತ್ತೆ ಹಚ್ಚಿದ್ದಾಗಿಯೂ, ಅದನ್ನು ವಿರ್ಸಂಗನ ಬಳಿ ಪ್ರಸ್ತಾಪಿಸಿ, ಅದು ಮನುಷ್ಯರಲ್ಲಿಯೂ ಇರಬಹುದೇ ಎಂದು ನೋಡೋಣ ಎಂದಿದ್ದನಂತೆ. ಮನುಷ್ಯರಲ್ಲೂ ಅದು ಪತ್ತೆಯಾದಾಗ, ಅದರ ಕೀರ್ತಿಯನ್ನು ವಿರ್ಸಂಗ್ ಕಬಳಿಸುವ ಪ್ರಯತ್ನವನ್ನು ನಡೆಸಿದನಂತೆ ಎಂದು ಹೇಳಿಕೆಯನ್ನಿತ್ತ.

ಆದರೆ ಹಾಫ್ಮನ್ ತಾನು ಟರ್ಕಿ ಕೋಳಿಯಲ್ಲಿ ಗಮನಿಸಿದ ಹೊಸ ರಚನೆಯ ಬಗ್ಗೆ ಯಾರಿಗೂ ಹೇಳಿರಲಿಲ್ಲ ಹಾಗೂ ಎಲ್ಲಿಯೂ ಪ್ರಕಟಪಡಿಸಿರಲಿಲ್ಲ. ಆದರೆ ವಿರ್ಸಂಗ್ ತಾನು ಗಮನಿಸಿದ ವಿಚಾರವನ್ನು ಕನಿಷ್ಠ ಏಳು ಅಂಗರಚನಕಾರರಿಗೆ ತಿಳಿಸಿದ್ದ. ಹಾಗಾಗಿ ಪ್ಯಾಂಕ್ರಿಯಾಸ್ ನಾಳವನ್ನು
ಕಂಡುಹಿಡಿದ ಕೀರ್ತಿ ವಿರ್ಸಂಗನಿಗೆ ದೊರೆಯಿತು. ಈಗ ಪ್ಯಾಂಕ್ರಿಯಾಸ್ ನಾಳವನ್ನು ವಿರ್ಸಂಗ್ ನಾಳ ಡಕ್ಟ್ ಆಫ್ ವಿರ್ಸಂಗ್ ಎಂದೇ ಗುರುತಿಸು ತ್ತೇವೆ. ಮನುಷ್ಯನು ಹೆಸರಿಗಾಗಿ ಒಬ್ಬರನ್ನು ಕೊಲ್ಲಲು ಹೇಸುವುದಿಲ್ಲ ಎನ್ನುವುದಕ್ಕೆ ವಿರ್ಸಂಗ್-ಹಾ-ನ್ ಪ್ರಕರಣವು ಜ್ವಲಂತ ಉದಾಹರಣೆಯಾಗಿದೆ.