Monday, 16th September 2024

ಕಟುಮಾತುಗಳು ಎಲ್ಲ ಸರಕಾರಗಳಿಗೂ ಅಪಥ್ಯ !

ಅಶ್ವತ್ಥ ಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಆಧಾರ ಸ್ತಂಭಗಳು ಎಂದು
ಕರೆಯುತ್ತೇವೆ. ಈ ಮೂರರೊಂದಿಗೆ ಪತ್ರಿಕಾರಂಗವನ್ನೇ ನಾಲ್ಕನೇ ಆಧಾರಸ್ತಂಭವೆಂದು ಹೇಳಲಾಗುತ್ತದೆ. ಈ ಮೂರು ಅಂಗಗಳು ಮಾಡುವ ಕೆಲಸದ ಮೇಲೆ ಕಣ್ಣಿಡಲು, ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸುವುದೇ ಪತ್ರಿಕಾ ರಂಗದ ಕೆಲಸ.

ಆದರೆ ನಿಜವಾಗಿಯೂ ಈ ಕೆಲಸ ಮಾಡಲು ನಾಲ್ಕನೇ ಆಧಾರ ಸ್ತಂಭಕ್ಕೆ ಸಾಧ್ಯವಾಗುತ್ತಿದೆಯೇ ಎನ್ನುವ ಪ್ರಶ್ನೆಗಳು ಬಂದಾಗ ಉತ್ತರ ನೀಡುವುದು ಕಷ್ಟವಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದ ಬಗ್ಗೆ ಸಾರ್ವಜನಿಕ ಜೀವನದಲ್ಲಿರುವ ಪ್ರತಿ ಯೊಬ್ಬರೂ ಮಾತನಾಡುತ್ತಾರೆ. ಸಂವಿಧಾನದ ನಾಲ್ಕನೇ Pillar ಗೆ ಯಾರನ್ನು ಬೇಕಾದರೂ ಪ್ರಶ್ನಿಸುವ, ತಪ್ಪು ಮಾಡಿದಾಗ ತಿದ್ದಿ ಹೇಳುವ ಅಧಿಕಾರವಿದೆ ಎಂದು ಹೇಳುತ್ತಾರೆ.

ಪ್ರತಿಪಕ್ಷದಲ್ಲಿರುವ ಪ್ರತಿಯೊಬ್ಬ ನಾಯಕರು ಈ ಮಾತುಗಳನ್ನು ಘಂಟಾಘೋಷವಾಗಿ ಹೇಳುತ್ತಾರೆ. ಆದರೆ ಅದೇ ಪಕ್ಷ ಆಡಳಿತಕ್ಕೆ ಬಂದಾಗ ಅವರು ಇದೇ ಮಾತನ್ನು ಹೇಳುತ್ತಾರೆಯೇ ಎಂದು ನೋಡುವುದಾದರೆ, ಉತ್ತರ ‘ಇಲ್ಲ’ ಎಂದು ಹೇಳಬಹುದು. ಅಂದ ಮಾತ್ರಕ್ಕೆ ಮಾಧ್ಯಮಗಳೇನು ಎಲ್ಲರನ್ನು ಮೀರಿದ ಅತೀತ ಶಕ್ತಿ ಹೊಂದಿರುವ ಕ್ಷೇತ್ರವಲ್ಲ. ಅವುಗಳಿಗೂ ಸಂವಿಧಾನದಲ್ಲಿ ಹಲವು ನಿರ್ಬಂಧಗಳಿವೆ. ಮಾಧ್ಯಮಗಳು ತಪ್ಪು ಮಾಡಿದಾಗ ಅವುಗಳ ಕಿವಿ ಹಿಂಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಅವಕಾಶಗಳು ಕಾನೂನಾತ್ಮಕ ವಾಗಿದ್ದರೆ ಹೆಚ್ಚು ಸಮಸ್ಯೆಯಾಗುವುದಿಲ್ಲ. ಆದರೆ ಬಹುತೇಕ ಬಾರಿ ಕಾನೂನು ಮೀರಿ, ಅಧಿಕಾರ ವನ್ನು ಬಳಸಿಕೊಂಡು ಮಾಧ್ಯಮಗಳನ್ನು ಕಟ್ಟಿಹಾಕುವ ಪ್ರಯತ್ನ ನಡೆಯುತ್ತಲೇ ಇದೆ.

ಈ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುವುದಾದರೂ ಏಕೆ ಎಂದರೆ, ಕಳೆದ ಕೆಲ ದಿನಗಳ ಹಿಂದೆ ರಿಪಬ್ಲಿಕ್ ಟಿವಿ ಮುಖ್ಯಸ್ಥ ಹಾಗೂ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಮಹಾರಾಷ್ಟ್ರ ಪೊಲೀಸರು 2018ರ ಪ್ರಕರಣ ವೊಂದರಲ್ಲಿ ವಶಕ್ಕೆ ಪಡೆದು ಬಳಿಕ, ನ್ಯಾಯಾಂಗ ಬಂಧನ ಮಾಡಿದ್ದಾರೆ.

ಆತ್ಮಹತ್ಯೆಗೆ ಕಾರಣ ಎನ್ನುವ ಕೇಸ್‌ನಲ್ಲಿ ಅರ್ನಾಬ್ ಅವರನ್ನು ಬಂಽಸಿದ್ದಾರೆ. ಆದ್ದರಿಂದ ಪತ್ರಿಕಾ ಸ್ವಾತಂತ್ರ್ಯಕ್ಕೂ ಇದಕ್ಕೂ ಯಾವ ಸಂಬಂಧವಿಲ್ಲವೆಂದು ಅನೇಕರು ವಾದಿಸುತ್ತಿದ್ದಾರೆ. ಆದರೆ ಅರ್ನಾಬ್ ಅವರನ್ನು ಬಂಧಿಸಿದ್ದು, ಈ ಪ್ರಕರಣ ಮೀರಿದ ರಾಜಕೀಯ ಒತ್ತಡಕ್ಕೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಹಾಗೇ ನೋಡಿದರೆ 2018ರಲ್ಲಿ ವಾಸ್ತುಶಿಲ್ಪಿ ಅನ್ವಾಯ್ ನಾಯ್ಕ್ ಹಾಗೂ ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಾಗ,
ಅರ್ನಾಬ್ ಅವರ ಹೆಸರನ್ನು ಬರೆದಿಟ್ಟು ಸಾವನ್ನಪ್ಪಿದ್ದಾರೆ. ಅರ್ನಾಬ್ ನೀಡಬೇಕಿದ್ದ 83 ಲಕ್ಷ ಬಾಕಿ ಉಳಿಸಿಕೊಂಡಿದ್ದರಿಂದಲೇ ಸಾಲ ಕಟ್ಟಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ. ಆದರೆ ಅನ್ವಾಯ್ ಸಾಯುವ ಮೊದಲು ಡೆತ್‌ನೋಟ್ ಕೇವಲ ಅರ್ನಾಬ್ ಹೆಸರು ಮಾತ್ರವಲ್ಲ, ಇನ್ನು ನಾಲ್ವರ ಹೆಸರನ್ನು ಬರೆದಿದ್ದ. ಆದರೆ ಬಂಧಿಸಿರುವುದು ಮಾತ್ರ ಅರ್ನಾಬ್ ಮಾತ್ರ.

ಮುಚ್ಚಿ ಹೋದ ಈ ಪ್ರಕರಣವನ್ನು ಕೆದಕಿದ್ದರಿಂದ ಹಿಂದೆ, ಪೊಲೀಸ್ ಇಲಾಖೆಯ ತನಿಖೆಗಿಂತ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರಕಾರದ ಒತ್ತಡವೇ ಹೆಚ್ಚಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಸರಕಾರ ವೈಫಲ್ಯಗಳನ್ನು ಎತ್ತಿ ತೋರಿಸುವ ಕೆಲಸವನ್ನು ಅರ್ನಾಬ್ ಮಾಡುತ್ತಿದ್ದರು. ಎಂದಿನಂತೆ ದೊಡ್ಡ ಧ್ವನಿಯಲ್ಲಿ ಡಿಬೆಟ್‌ಗಳನ್ನು ಮಾಡುತ್ತಿದ್ದ ಅರ್ನಾಬ್, ಇತ್ತೀಚಿಗೆ ಸುಶಾಂತ್ ಸಿಂಗ್ ಪ್ರಕರಣ, ಪಾಗಾರ್‌ನಲ್ಲಿ ಸಂನ್ಯಾಸಿ ಯ ಕೊಲೆಯ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ವಾದಿಸಿದ್ದು, ಭೀಮಾ ಕೋರೆಗಾಂವ್ ಗಲಾಟೆ ಪ್ರಕರಣದಲ್ಲಿ ದಲಿತರ ಮೇಲೆ ಹಲ್ಲೆಯಾಗಿದ್ದು ಸೇರಿದಂತೆ ಹಲವು ಪ್ರಕರಣಗಳನ್ನು ವರದಿ ಮಾಡಿ ಸರಕಾರಕ್ಕೆ ಮುಜುಗರ ತಂದಿದ್ದರು.

ಇದು ಶಿವಸೇನಾ ನೇತೃತ್ವದ ಸರಕಾರಕ್ಕೆ ಸಹ್ಯವಾಗಲಿಲ್ಲ. ಇದಕ್ಕಾಗಿ ಟಿ.ಆರ್‌ಪಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಮುಂಬೈ
ಪೊಲೀಸ್ ಆಯುಕ್ತರಿಂದ ಸುದ್ದಿಗೋಷ್ಠಿ ನಡೆಸಿ ರಿಪಬ್ಲಿಕ್ ಟಿವಿ ವಿರುದ್ಧ ಆರೋಪ ಮಾಡಲಾಯಿತು. ಆದರೆ ಈ ಪ್ರಕರಣದಲ್ಲಿ ತಾವಿಲ್ಲವೆಂದು ಸಾಕ್ಷ್ಯ ಸಮೇತ ಅರ್ನಾಬ್ ತೋರಿಸುತ್ತಿದ್ದಂತೆ ಮಹಾರಾಷ್ಟ್ರ ಸರಕಾರಕ್ಕೆ ಮತ್ತಷ್ಟು ಹಿನ್ನಡೆಯಾಯಿತು. ಆದ್ದರಿಂದ ನ್ಯಾಯಾಲಯದಲ್ಲಿ ಮುಚ್ಚಿ ಹೋಗಿದ್ದ ಕೇಸ್ ಒಂದನ್ನು ರೀಓಪನ್ ಮಾಡಿಸಿ, ಅದರಲ್ಲಿ ಅರ್ನಾಬ್ ಹೆಸರನ್ನು ಹಿಡಿದುಕೊಂಡು ಇದೀಗ ಬಂಧಿಸಲಾಗಿದೆ.

ಹೋಗಲಿ, ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಾಬ್‌ರನ್ನು ಕಾನೂನಾತ್ಮಕವಾಗಿ ಬಂಧಿಸಿದ್ದರೆ, ಪತಿಕ್ರಾ ಸ್ವಾತಂತ್ರ್ಯಕ್ಕೂ ಇದಕ್ಕೂ ಸಂಬಂಧವಿಲ್ಲ ಎನ್ನಬಹುದಾಗಿತ್ತು. ಆದರೆ ಮಹಾರಾಷ್ಟ್ರ ಸರಕಾರ ಅರ್ನಾಬ್‌ರನ್ನು ಬಂಧಿಸಲು ಯಾವುದೇ ಸೂಕ್ತ ಸಮನ್ಸ್ ನೀಡಿಲ್ಲ. ಅದಕ್ಕೂ ಮೇಲಾಗಿ ಒಬ್ಬ ಪತ್ರಕರ್ತನನ್ನು ವಿಚಾರಣೆ ಅಥವಾ ಬಂಧಿಸಲು ಹೋಗುವಾಗ 50ಕ್ಕೂ ಹೆಚ್ಚು ಪೊಲೀಸರು, ಎಕೆ 47 ಗನ್ ಗಳನ್ನು ತಗೆದುಕೊಂಡು ಹೋಗುವ ಅಗತ್ಯವಾದರೂ ಏನಿತ್ತು? ಉಗ್ರ ಕಸಬ್‌ನನ್ನು ಬಂಧಿಸು ವಾಗಲೂ ಇಷ್ಟು ದೊಡ್ಡ ಪ್ರಮಾಣದ ಶಸಸಜ್ಜಿತ ಪೊಲೀಸರನ್ನು ಬಳಸಿರಲಿಲ್ಲವೇನೋ. ಅಷ್ಟು ದೊಡ್ಡ ಪ್ರಮಾಣದಲ್ಲಿ ಶಸಸಜ್ಜಿತ ಪೊಲೀಸ್ ಹೋಗುವ, ಅಲ್ಲಿ ಅರ್ನಾಬ್ ಹಾಗೂ ಅವರ ಮಗನನ್ನು ಎಳೆದಾಡುವ ಅಗತ್ಯವೇನಿತ್ತು? ಇದನ್ನೆಲ್ಲ ಗಮನಿಸಿದರೆ ಅರ್ನಾಬ್ ‌ರನ್ನು ಬಂಧಿಸುವುದಕ್ಕಿಂತ, ಸರಕಾರವನ್ನು ಎದುರು ಹಾಕಿಕೊಂಡರೆ ಏನೆಲ್ಲ ಸಮಸ್ಯೆಯಾಗುತ್ತದೆ ಎನ್ನುವ ಸಂದೇಶವನ್ನು ರವಾನಿಸುವುದಷ್ಟೇ ಆಗಿತ್ತು.

ಆಡಳಿತ ಪಕ್ಷವೊಂದು ಈ ರೀತಿ ನಡೆದುಕೊಂಡಿರುವುದು ಇದೇ ಮೊದಲಲ್ಲ. ಬಹುಶಃ ಇದೇ ಕೊನೆಯೂ ಅಲ್ಲ. ಕರ್ನಾಟಕದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರಕಾರವಿದ್ದ ಸಮಯದಲ್ಲಿ ‘ವಿಶ್ವವಾಣಿ’ ವಿರುದ್ಧ ಇದೇ ರೀತಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನಡೆದುಕೊಂಡಿದ್ದರು. ಲೋಕಸಭಾ ಚುನಾವಣೆ ಬಳಿಕ ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ವರದಿಯೊಂದಕ್ಕೆ ಪ್ರತಿಕಾರದ ರೀತಿ ಎಫ್ಐ‌ಆರ್ ಹಾಕಿಸಲಾಗಿತ್ತು.

ಆಗಲೂ ಸಹ ಪತ್ರಿಕೆ ಹಾಗೂ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರ ವಿರುದ್ಧ ಹಾಕಿದ್ದು, ವಿಶ್ವಾಸದೋಹ್ರ, ವಂಚನೆ, ಫೋರ್ಜರಿ ಹಾಗೂ ಇತರ ಕೇಸ್‌ಗಳು. ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೂ ಪತ್ರಿಕೆಯ ಮೇಲೆ ಹಾಕಿದ್ದ ಕೇಸ್ ಗಳಿಗೂ ಸಂಬಂಧವೇ ಇರಲಿಲ್ಲ. ಆದರೂ ಪೊಲೀಸರು ದೂರು ನೀಡಿದ ಅರ್ಧ ಗಂಟೆಯಲ್ಲಿ ಎಫ್ಐ‌ಆರ್ ದಾಖಲಿಸಿದ್ದರು!

‘ವಿಶ್ವವಾಣಿ’ಗೆ ಕೇಸ್ ಹಾಕಿದ ಕೆಲವೇ ದಿನಗಳ ಬಳಿಕ ಪಬ್ಲಿಕ್ ಟಿವಿ ವಿರುದ್ಧವೂ ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೆ ನೀಡಿ, ಒಂದು ಕೈ ನೋಡಿಕೊಳ್ಳುವ ಎನ್ನುವ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. ಅವರಿಗೆ ಅಪ್ರಿಯವಾಗುವ ಯಾವ ಸುದ್ದಿಯನ್ನು ಹಾಕಿದರೂ, ಮಾಧ್ಯಮದ ವಿರುದ್ಧ ಕಿಡಿಕಾರುತ್ತಿದ್ದರು. ಸಮ್ಮಿಶ್ರ ಸರಕಾರಕ್ಕೂ ಮೊದಲು ಅಧಿಕಾರದಲ್ಲಿದ್ದ ಕಾಂಗ್ರೆಸ್ ಅವಧಿಯಲ್ಲಿಯೂ ಇದೇ ರೀತಿಯ ದರ್ಪವನ್ನು ಒಮ್ಮೆ ತೋರಲಾಗಿತ್ತು.

ರಿಪಬ್ಲಿಕ್ ಟಿವಿ ವರದಿಗಾರರನ್ನು ಸುದ್ದಿಗೋಷ್ಠಿಗೆ ಸೇರಿಸುವಂತಿಲ್ಲ ಎನ್ನುವ ಮೌಖಿಕ ಆದೇಶವನ್ನು ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾಡಿದ್ದರು. ರಿಪಬ್ಲಿಕ್ ಟಿವಿಯನ್ನು ಬ್ಯಾನ್ ಮಾಡಿದ್ದೇಕೆ ಎಂದು ಕೇಳಿದಾಗ, ‘ಅವರು ನಮ್ಮ
ವಿರುದ್ಧ ಪ್ರಶ್ನೆ ಕೇಳುತ್ತಾರೆ’ ಅದಕ್ಕೆ ಹೀಗೆ ಮಾಡಿದ್ದೇವೆ ಎನ್ನುವ ಉತ್ತರವನ್ನು ನೀಡಿದ್ದರು.

ಈ ಎಲ್ಲ ಘಟನೆಗಳನ್ನು ನೋಡಿದರೆ, ಮಾಧ್ಯಮದವರು ವಾಚ್ ಡಾಗ್ ಆಗುವ ಬದಲು ಆಡಳಿತ ಪಕ್ಷಗಳ ವಕ್ತಾರಿಕೆ ಮಾಡಿ ಕೊಂಡಿದ್ದರೆ ಮಾತ್ರ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಅವರ ವಿರುದ್ಧ ಈ ರೀತಿಯ ಬೆದರಿಸುವ ತಂತ್ರಗಾರಿಕೆಯನ್ನು ಮಾಡುವ ಕೆಲಸವನ್ನು ಆಡಳಿತ ಪಕ್ಷಗಳು ಮಾಡಿಕೊಂಡೇ ಬಂದಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಭಾಷಣದಲ್ಲಿ ಪ್ರತಿಯೊಬ್ಬರು ಮಾತನಾಡುತ್ತಾರೆ. ಆದರೆ ವಿಶ್ವಮಟ್ಟದಲ್ಲಿ ಭಾರತದ ಪತ್ರಿಕಾ ಸ್ವಾತಂತ್ರ್ಯದ ರ‍್ಯಾಂಕಿಂಗ್ ಮಾತ್ರ 142ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ನಾರ್ವೇ ಇದ್ದರೆ, ಫಿನ್‌ಲ್ಯಾಂಡ್, ಡೆನ್ಮಾರ್ಕ್, ಸ್ವೀಡನ್, ನೆದರ್‌ಲ್ಯಾಂಡ್ ಮೊದಲ ಐದು ಸ್ಥಾನದಲ್ಲಿದೆ. ಭಾರತದಲ್ಲಿರುವ ರಾಜಕೀಯ ಪಕ್ಷಗಳು ವಿರೋಧ ಪಕ್ಷದಲ್ಲಿದ್ದಾಗ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು, ಅಧಿಕಾರಕ್ಕೆ ಬರುತ್ತಿದ್ದಂತೆ ಈ ಎಲ್ಲವನ್ನು ಮರೆಯುತ್ತಾರೆ. ಆಡಳಿತ ನಡೆಸುವಾಗ ಮಾಡುವ ತಪ್ಪನ್ನು ಎತ್ತಿ ತೋರಿಸಲು ಹೋದರೆ, ಅದು ತಪ್ಪು ಎನ್ನುವ ರೀತಿ ನಡೆದುಕೊಳ್ಳುತ್ತಾರೆ.

ಕಳೆದೊಂದು ದಶಕದಿಂದ ಮಾಧ್ಯಮವನ್ನು ಧಮನಿಸುವ ಪ್ರಯತ್ನ ಹೆಚ್ಚಾಗುತ್ತಲೇ ಇದೆ. ವಸ್ತುನಿಷ್ಠ ವರದಿಗಾರಿಕೆ ಅಥವಾ ತಪ್ಪನ್ನು ಎತ್ತಿ ತೋರಿಸಲು ಹೋದರೆ, ಅದೇ ದೊಡ್ಡಅಪರಾಧ ಎನ್ನುವ ರೀತಿಯಲ್ಲಿ ಕೇಸ್ ದಾಖಲಿಸುವುದನ್ನು ನೋಡಿದ್ದೇವೆ.
ಹಾಗೇ ನೋಡಿದರೆ, ನೋಡಿದರೆ ರಾಜಕೀಯದಲ್ಲಿರುವ ಎಲ್ಲ ನಾಯಕರು ಈ ರೀತಿ ಮಾಧ್ಯಮದ ಹಕ್ಕನ್ನು ಕಸಿಯುವ ಅಥವಾ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಾರೆ ಎಂದಲ್ಲ. ಅನೇಕ ನಾಯಕರು ತಮ್ಮ ಬಗ್ಗೆ ಸಕಾರಾತ್ಮಕವಾಗಿ ಬರೆದಾಗ ಹೊಗಳುವು ದಕ್ಕಿಂತ, ನಕಾರಾತ್ಮಕವಾಗಿ ಬರೆದಾಗ ಅದನ್ನು ತಿದ್ದಿಕೊಳ್ಳುವ ಅಥವಾ ಸ್ಪಷ್ಟೀಕರಣ ನೀಡುವ ಕೆಲಸವನ್ನು ಮಾಡುತ್ತಾರೆ.

ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ, ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಾಗ ಅಥವಾ ಅವರನ್ನು ಬಂಧಿಸುವ ಸಮಯದಲ್ಲಿ ಅನೇಕ ವರದಿಗಾರರು ಅವರ ಮನೆಯ ಮುಂದೆ ನಿಂತುಕೊಂಡೇ ಲೈವ್
ನೀಡುತ್ತಿದ್ದರು. ಅವರ ಎದುರಿಗೆ ‘ಯಡಿಯೂರಪ್ಪ ಭ್ರಷ್ಟ’ ಎನ್ನುವ ಮಾತನ್ನು ಹೇಳುತ್ತಿದ್ದರು. ಈ ಎಲ್ಲ ಟೀಕೆ ಟಿಪ್ಪಣಿ ಮಾಡು ವವರ ವಿರುದ್ಧ ಎಂದಿಗೂ ಯಡಿಯೂರಪ್ಪ ಅವರು ತಮ್ಮ ‘ಪೊಲೀಸ್ ಅಸ್ತ್ರ’ ಬಳಸಲಿಲ್ಲ. ಬದಲಿಗೆ ಮಾಧ್ಯಮದವರ ಎಲ್ಲ ಟೀಕೆಗೆ ಪ್ರತಿಕ್ರಿಯಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿಯ ಟೀಕೆಗಳನ್ನು ಮಾಡಿದ ಬಳಿಕ ಅನೇಕ ಪತ್ರಕರ್ತರ ಅವರ ಮನೆಯಲ್ಲಿಯೇ ಊಟ ಮಾಡಿಕೊಂಡು ಹೊರಬರುತ್ತಿದ್ದರು ಎಂದರೆ ಅಚ್ಚರಿಯಾಗಬಹುದು.

ಯಡಿಯೂರಪ್ಪ ಅವರ ರೀತಿಯಲ್ಲಿಯೇ ಸಿದ್ದರಾಮಯ್ಯ ಅವರು ಸಹ ಮಾಧ್ಯಮದ ವರದಿಗಳನ್ನು ಎಂದಿಗೂ ವೈಯಕ್ತಿಕವಾಗಿ ತಗೆದುಕೊಂಡ ಉದಾಹರಣೆಗಳಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಹೊಬ್ಲಾಟ್ ವಾಚ್ ಪ್ರಕರಣ, ಅವರ ಸಂಪುಟ
ಸಹೋದ್ಯೋಗಿ ಆಂಜನೇಯ ವಿರುದ್ಧ ಕೇಳಿಬಂದ ಲಂಚ ಪ್ರಕರಣದ ಆರೋಪ, ಅವರ ಕಾಲದಲ್ಲಾದ ಕೋಮು ಗಲಭೆಗಳಿಗೆ ಸರಕಾರವೇ ಸಹಕರಿಸುತ್ತಿದೆ ಎನ್ನುವ ಗಂಭೀರ ಆರೋಪ ಸೇರಿದಂತೆ ಹತ್ತು ಹಲವು ಟೀಕೆಗಳು ಅವರ ವಿರುದ್ಧ ಬಂದವು. ಆದರೆ ಯಾವುದಕ್ಕೂ ತಲೆಗೆಡಿಸಿಕೊಳ್ಳದ ಅವರು, ಅವರ ವಿರುದ್ಧ ಬರೆದ ಪತ್ರಕರ್ತರೊಂದಿಗೆ ಹರಟೆ ಹೊಡೆದ ಅನೇಕ ಉದಾಹರಣೆ ಗಳಿವೆ.

ಆದರೆ ಈ ರೀತಿ ಎಲ್ಲವನ್ನು ಅರಗಿಸಿಕೊಂಡು ಮುಂದೆ ಸಾಗುವ ನಾಯಕರು ಇತ್ತೀಚಿನ ದಿನದಲ್ಲಿ ತೀರಾ ಅಪರೂಪ. ಕೇವಲ ಮಾಧ್ಯಮದಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ತಮ್ಮ ವಿರುದ್ಧ ಬರೆದರೆ, ಅವರ ವಿರುದ್ಧ ದೂರು ದಾಖಲಿಸುವ ಅಥವಾ ಅವರನ್ನು ಜೈಲಿಗೆ ಕಳುಹಿಸುವ ಹಂತಕ್ಕೆ ತಲುಪುವ ಹಂತದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗೂ ಮಾಧ್ಯಮಗಳು ಹೇಳುವ ಸುದ್ದಿಗಳಿಗೂ ಅನೇಕ ಬಾರಿ ವ್ಯತ್ಯಾಸವಿರುತ್ತದೆ. ಮಾಧ್ಯಮಗಳಲ್ಲಿ ಏನಾದರೂ ಆರೋಪ ಮಾಡುವ ಮೊದಲು ಅದಕ್ಕೆ ಸೂಕ್ತ ದಾಖಲೆಗಳ ಹುಡುಕಾಟಕ್ಕೆಂದ ಒಂದು ತಂಡ ಸಜ್ಜಾಗಿರುತ್ತದೆ.

ಅದರಲ್ಲಿಯೂ ಯಾವುದಾದರೂ ಒಬ್ಬರ ವ್ಯಕ್ತಿಯ ಮೇಲೆ ಸುದ್ದಿ ಮಾಡುವ ವಿಷಯ ಬಂದಾಗ ಮತ್ತಷ್ಟು ಎಚ್ಚರಿಕೆಯನ್ನು ಎಲ್ಲ ಸಂಸ್ಥೆಗಳು ವಹಿಸುತ್ತವೆ. ಪ್ರತಿಪಕ್ಷಗಳಿಗೆ ಹೋಲಿಸಿದರೆ ಆಡಳಿತ ಪಕ್ಷದಲ್ಲಿರುವವರು ತಪ್ಪು ಹೆಜ್ಜೆ ಇಡುವುದು ಬಹುವೇಗವಾಗಿ ತಿಳಿಯುವುದರಿಂದ, ಮಾಧ್ಯಮಗಳು ಆಡಳಿತ ಪಕ್ಷಗಳ ಕೆಲಸ ವಿಚಾರದಲ್ಲಿ ‘ವಾಚ್ ಡಾಗ್’ ರೀತಿ ಕಾರ್ಯನಿರ್ವಹಿಸುತ್ತವೆ.

ಆದ್ದರಿಂದಲೇ ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸುವ ಕೆಲಸವನ್ನು ಮಾಡುತ್ತವೆ. ಈ ರೀತಿ ಆಡಳಿತ ನಡೆಸುವ ಪಕ್ಷಗಳು ತಮಗೆ ಬೇಕಾದ ರೀತಿಯಲ್ಲಿ ತುತ್ತೂರಿ ಊದಬೇಕು ಎಂದು ಅಪೇಕ್ಷೆಪಡುವ ಆಡಳಿತ ನಡೆಸುವವರು, ಅವರ ವಿರುದ್ಧ ಮಾತ ನಾಡಿದಾಗ ತಮ್ಮ ಬಳಿಯಿರುವ ‘ಪೊಲೀಸ್’ ಎನ್ನುವ ಅಸ್ತ್ರವನ್ನು ಬಳಸಿಕೊಂಡು ಮಾಧ್ಯಮದ ಬಾಯಿ ಮುಚ್ಚಿಸಲು ಆಗುವು ದಿಲ್ಲ.

ಇದಿಷ್ಟೇ ಅಲ್ಲದೇ ಈ ರೀತಿ ಆಡಳಿತ ನಡೆಸುವವರು ಯಾವುದಾದರೂ ಒಂದು ಮಾಧ್ಯಮದ ಮೇಲೆ ಮುಗಿಬಿದ್ದಾಗ, ಆ ಮಾಧ್ಯಮದ ರಕ್ಷಣೆ ಇತರ ಸಂಸ್ಥೆಗಳು ಹೋಗಬೇಕು. ಆದರೆ ಬಹುತೇಕ ಸಂಸ್ಥೆಗಳು ಹಲವು ಕಾರಣಗಳಿಗೆ ‘ಮೌನ’ಕ್ಕೆ ಶರಣಾಗಿ ಬಿಡುತ್ತವೆ. ಈ ರೀತಿ ಘಟನೆಗಳು ನಡೆದಾಗ ನಮ್ಮದು ಬಂದಾಗ ನೋಡಿಕೊಂಡರಾಯಿತು ಎನ್ನುವ ಮನಸ್ಥಿತಿಯಿಂದ ಹೊರ ಬಂದು ಒಗ್ಗಟ್ಟಾಗಿ ನಿಲ್ಲುವುದು ಒಂದು ಭಾಗವಾದರೆ, ಆಡಳಿತ ನಡೆಸುವವರು ಮಾಧ್ಯಮಗಳ ವರದಿಯನ್ನು ವೈಯಕ್ತಿಕವಾಗಿ ತಗೆದುಕೊಳ್ಳದೇ, ಆಗಿರುವ ಲೋಪವನ್ನು ಸರಿಪಡಿಸುವ ಕೆಲಸವನ್ನು ಮಾಡಿದರೆ, ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯ ವಾಗುತ್ತದೆ.

Leave a Reply

Your email address will not be published. Required fields are marked *