Friday, 22nd November 2024

ಫ್ರೆಂಚ್ ಲೆಟರ್ಸ್‌ ಮತ್ತು ಇಂಗ್ಲಿಷ್ ರೇನ್ ಕೋಟ್

ಹಿಂದಿರುಗಿ ನೋಡಿದಾಗ

ಇತ್ತೀಚೆಗೆ ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಚೀಲವನ್ನು ಪರೀಕ್ಷಿಸಿದಾಗ, ಅವುಗಳಲ್ಲಿ ಮಕ್ಕಳಿಗೆ ಅನಗತ್ಯವಾದ ಹಲವು ವಸ್ತುಗಳು ದೊರೆತವು. ಸಿಗರೇಟ್, ಲೈಟರ್, ಕಾಂಡಮ್ಸ್, ಸಂತಾನ ನಿಯಂತ್ರಣ ಗುಳಿಗೆಗಳು, ವೈಟನರ್ಸ್ ಇತ್ಯಾದಿ ವಸ್ತುಗಳು ದೊರೆತಿವೆ.

10 ನೆಯ ತರಗತಿಯ ವಿದ್ಯಾರ್ಥಿಗಳ ಚೀಲದಲ್ಲಿ ದೊರೆತ ಕಾಂಡಮ್ ಬಗ್ಗೆ ಅಧ್ಯಾಪಕ ವರ್ಗದವರು, ಪೋಷಕ ವರ್ಗದವರು ಹಾಗೂ ಮಾಧ್ಯಮದವರು ಹೌಹಾರಿದರು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಇದು ಬಹಳ ದೊಡ್ಡ ಸುದ್ದಿ ಯಾಯಿತು. ಒಂದಷ್ಟು ದಿನಗಳ ಕಾಲ ಚರ್ಚೆಯಾಗಿ ನಂತರ ಎಲ್ಲವೂ ತಣ್ಣಗಾಯಿತು. ಕಾಂಡಮ್ ದೊರೆತದ್ದೇ ಎಲ್ಲರಿಗೂ ದೊಡ್ಡ ಸುದ್ಧಿಯಾಯಿತೇ ಹೊರತು, ಸಿಗರೇಟ್ ಸಿಕ್ಕಿದ ಸುದ್ದಿ ಅಥವಾ ವೈಟನರ್ ಸಿಕ್ಕಿದ ಸುದ್ಧಿ ಆಗಲೇ ಇಲ್ಲ.

ವಾಸ್ತವದಲ್ಲಿ ಇವು ನಿಜಕ್ಕೂ ಮಾರಕವಾಗಿರುವಂತಹವು. ಈ ಹಿನ್ನೆಲೆಯಲ್ಲಿ ಮತ್ತೆ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಲೈಂಗಿಕ ಶಿಕ್ಷಣವನ್ನು ನೀಡಬೇಕಾದ ಪ್ರಶ್ನೆಯು ಮತ್ತೆ ತಲೆಯೆತ್ತಿದೆ. ಯಥಾ ಪ್ರಕಾರ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತೆ, ಈ ಪ್ರಶ್ನೆಗೆ ಒಂದು ಖಚಿತ ಪರಿಹಾರವನ್ನು ಕಂಡುಕೊಳ್ಳುವ ಹೊಣೆಯಿಂದ ಎಲ್ಲರೂ ಮುಕ್ತ ಮುಕ್ತರಾಗಿದ್ದಾರೆ.

ಕಾಂಡಮ್ ಎನ್ನುವುದು ಒಂದು ವೈದ್ಯಕೀಯ ಸಾಧನ. ಕಾಂಡಮ್ ಎನ್ನುವ ಸಾಧನಕ್ಕೆ ನಾನಾ ಅಡ್ಡ ಹೆಸರುಗಳಿವೆ. ವೆಟ್‌ಸೂಟ್, ರಬ್ಬರ್, ಜಿಮ್ಮಿ, ನೈಟ್ ಕ್ಯಾಪ್, ಪ್ರೊಫೈಲಾಕ್ಟಿಕ್, ಫ್ರೆಂಚ್ ಲೆಟರ್, ಇಂಗ್ಲಿಷ್ ರೇನ್ ಕೋಟ್ ಇತ್ಯಾದಿ. ಕಾಂಡಮ್‌ನ ಮೂಲ ಉದ್ದೇಶ ಉದ್ದೇಶ ಅನಗತ್ಯ ಗರ್ಭಕಟ್ಟದಂತೆ ಹಾಗೂ ಲೈಂಗಿಕ ರೋಗಗಳು ಅಂಟದಂತೆ ರಕ್ಷಣೆಯನ್ನು ನೀಡುವುದಾಗಿದೆ. ಹಾಗಾಗಿ ಇದನ್ನು ಸಂತಾನ ಹಾಗೂ ರೋಗ ರಕ್ಷಣಾ ಕವಚ ಎನ್ನಬಹುದು. ಕಾಂಡಮ್ ಬಳಕೆಗೆ ಸುಮಾರು ೫೦೦೦ ವರ್ಷಗಳ ಇತಿಹಾಸ ವಾದರೂ ಇರಬೇಕು ಎನ್ನುವ ವಿಚಾರವಿದೆ.

ಅನಾದಿ ಕಾಲದಿಂದಲೂ ಇಂದಿನವರೆಗೆ, ಕಾಂಡಮ್ ಸುಧಾರಣೆಯಾಗುತ್ತಾ ಬಂದಿದ್ದು, ಇಂದಿಗೂ ಬಳಕೆಯಲ್ಲಿದೆ. ಇದು ನಡೆದು ಬಂದ ದಾರಿಯು ನಿಜಕ್ಕೂ ರೋಚಕವಾಗಿದೆ. ಗ್ರೀಕ್ ಪುರಾಣದ ಅನ್ವಯ, ಕ್ರಿ.ಪೂ.3000 ವರ್ಷಗಳ ಹಿಂದೆ, ಕ್ರೀಟ್ ದೇಶವನ್ನು ಮಿನೋಸ್ ಎಂಬ ರಾಜನು ಆಳುತ್ತಿದ್ದ. ಈತನು ಗ್ರೀಕ್ ದೇವತೆಗಳ ರಾಜ ಸ್ಯೂಸ್ ಮತ್ತು ಯೂರೋಪ ಅವರ ಮಗ. ಮಿನೋಸ್ ಕಂಚು ಯುಗದಲ್ಲಿ ಬದುಕಿದ್ದ ಐತಿಹಾಸಿಕ ವ್ಯಕ್ತಿ ಎಂಬ ವಾದವೂ ಇದೆ. ಹೋಮರ್ ಮಹಾಕವಿಯು ಬರೆದ ಇಲಿಯಡ್ ಕಾವ್ಯ ದಲ್ಲಿ ಹಾಗೂ ಇತರ ಪ್ರಾಚೀನ ಗ್ರೀಕ್ ಸಾಹಿತ್ಯದಲ್ಲಿ ಈತನ ಪ್ರಸ್ತಾಪವಿದೆ.

ಮಿನೋಸ್ ರಾಜನ ವೀರ್ಯದಲ್ಲಿ ಹಾವುಗಳು ಮತ್ತು ಚೇಳುಗಳು ಇದ್ದವಂತೆ. ಈತನೊಡನೆ ಲೈಂಗಿಕ ಸಂಪರ್ಕವನ್ನು ಮಾಡಿದ ಈತನ ಪ್ರೇಯಸಿ ಮರಣವನ್ನಪ್ಪ ಬೇಕಾಯಿತಂತೆ. ಈ ಕಥೆಯನ್ನು ಕೇಳಿದ ರಾಜ ಮಿನೋಸ್‌ನ ಮಡದಿ ಪ್ಯಾಸಿಸ್ಟ್, ತಾನೂ ಸಾಯಬಹುದು ಎಂದು ಭಯ ಪಟ್ಟಳಂತೆ. ಹಾಗಾಗಿ ತನ್ನ ಜೀವವನ್ನು ಉಳಿಸಿಕೊಳ್ಳಲು ಆಕೆ, ಮೇಕೆಯ ಮೂತ್ರಾಶಯದಿಂದ ಒಂದು ರಕ್ಷಾಕವಚವನ್ನು ರೂಪಿಸಿ, ಅದನ್ನು ತನ್ನನ್ನು ಯೋನಿ ನಾಳದಲ್ಲಿ ಧರಿಸಿ, ಹಾವುಗಳು ಹಾಗೂ ಚೇಳುಗಳಿಂದ ತನ್ನನ್ನು ರಕ್ಷಿಸಿಕೊಂಡಳಂತೆ.

ಈಜಿಪ್ಟ್ ದೇಶವನ್ನು ಟೂಟನ್ಕಾಮುನ್ (1341-1323) ಎಂಬ ಯುವ ಫ್ಯಾರೋ ರಾಜ್ಯಭಾರವನ್ನು ನಡೆಸಿದ. ಈತನ ಸಮಾಧಿ ಯನ್ನು ಹೋವಾರ್ಡ್ ಕಾರ್ಟರ್ 1922ರಲ್ಲಿ ಗುರುತಿಸಿ, ಅದರ ಅಧ್ಯಯನವನ್ನು ಮಾಡಿದ. ಸಮಾಧಿಯಲ್ಲಿ ಸುಮಾರು ೫೦೦೦ ವಸ್ತುಗಳು ದೊರೆತವು. ಈ ವಸ್ತುಗಳಲ್ಲಿ ಯುವ ಅರಸನು ಬಳಸುತ್ತಿದ್ದ ಒಂದು ರಕ್ಷಾಕವಚವೂ ದೊರೆತಿದೆ. ಇದು ಅತ್ಯಂತ ನಯವಾದ ಲಿನೆನ್ ಇಂದ ತಯಾರಿಸಿ, ಅಲಿವ್ ಎಣ್ಣೆಯಲ್ಲಿ ಅದ್ದಿದ್ದರು. ಇದರ ಎರಡು ಅಂಚಿಗೆ ದಾರವಿದ್ದು ಅದನ್ನು ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದರು.

ಈ ರಕ್ಷಾಕವಚದಲ್ಲಿ ಯುವ ಅರಸನ ಡಿಎನ್‌ಎ ಶೇಷವೂ ದೊರೆತಿದೆ. ಇದೇ ಸಮಾಧಿಯಲ್ಲಿ ಎರಡು ಭ್ರೂಣಗಳ ಅವಶೇಷವೂ ದೊರೆತಿದೆ. ಅವುಗಳ ಡಿಎನ್‌ಎ ಅರಸನ ಡಿಎನ್‌ಎಗೆ ಹೋಲಿಕೆಯಿದೆ. ಅವೆರಡು ಭ್ರೂಣಗಳ ಅರಸನ ಸಂತಾನವಾಗಿರಬಹುದು ಎನ್ನಲಾಗಿದೆ. ಈಜಿಪ್ಷಿಯನ್ ಶ್ರೀಸಾಮಾನ್ಯರು ಅನಗತ್ಯ ಸಂತಾನವರ್ಧನೆಯನ್ನು ತಡೆಗಟ್ಟುವುದರ ಜತೆಯಲ್ಲಿ, ಆಫ್ರಿಕಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಶಿಸ್ಟೋಸೋಮ್ ಎಂಬ ಹುಳುವಿನಿಂದ ಬರುವ ಬಿಲ್ಹಾರಿಯ ಅಥವಾ ಶಿಸ್ಟೋಸೋಮಿಯಾಸಿಸ್
ಎಂಬ ಕಾಯಿಲೆಯು ಅಂಟಿಕೊಳ್ಳದಿರಲು ರಕ್ಷಾಕವಚಗಳನ್ನು ಉಪಯೋಗಿಸುತ್ತಿದ್ದಿರಬಹುದು ಎನ್ನಲಾಗಿದೆ.

ಈ ಹುಳುವು ಸೋಂಕುಗ್ರಸ್ತನ ಮಲ-ಮೂತ್ರಗಳ ಮೂಲಕ ಆರೋಗ್ಯವಂತರಿಗೆ ಹರಡಬಲ್ಲುದು. ಈಜಿಪ್ಟ್ ಸಂಸ್ಕೃತಿಯಲ್ಲಿದ್ದ ಸಾಮಾಜಿಕ ಸ್ತರಗಳು ಬಹಳ ಸಂಕೀರ್ಣವಾಗಿದ್ದವು. ಹಾಗಾಗಿ ಒಂದೊಂದು ಸ್ತರದ ವ್ಯಕ್ತಿಗಳು ಒಂದೊಂದು ಬಣ್ಣದ ರಕ್ಷಾ ಕವಚಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ರೋಮನ್ನರು ರಕ್ಷಾಕವಚಗಳನ್ನು ಪ್ರಧಾನವಾಗಿ ಅನಗತ್ಯ ಗರ್ಭವನ್ನು ತಡೆ ಗಟ್ಟಲು ಬಳಸುವುದಕ್ಕಿಂತ ಲೈಂಗಿಕ ರೋಗಗಳನ್ನು ತಡೆಗಟ್ಟಲು ಬಳಸುತ್ತಿದ್ದರು. ರೋಮನ್ನರ ರಕ್ಷಾಕವಚಗಳನ್ನು ಲಿನೆನ್ ಅಥವ ಕುರಿಗಳ ಕರುಳು ಇಲ್ಲವೇ ಮೂತ್ರಾಶಯದಿಂದ ರಚಿಸುತ್ತಿದ್ದರು.

ಈಜಿಪ್ಟಿನಲ್ಲಿ ಬುಶ್ ನೀಗ್ರೋಸ್ ಎಂದು ಹೆಸರಾದ ಬುಡಕಟ್ಟಿನ ಜನರು ವಾಸವಾಗಿದ್ದರು. ಇವರಲ್ಲಿ ಆರು ಗುಂಪುಗಳಿದ್ದವು. ಅವುಗಳಲ್ಲು ಜುಕಾಸ್ ಎಂಬುದು ಒಂದು. ಈ ಬುಡಕಟ್ಟಿನ ಮಹಿಳೆಯರು ಅನಗತ್ಯ ಗರ್ಭವನ್ನು ತಡೆಗಟ್ಟಲು ತಮ್ಮದೇ ಆದ ಮಹಿಳಾ ರಕ್ಷಾಕವಚಗಳನ್ನು ಬಳಸುತ್ತಿದ್ದರು. ಇದು ಸುಮಾರು ೬ ಉದ್ದದ ಬಟ್ಟಲಿನಾಕಾರದ ರಚನೆ. ಇದನ್ನು ವಿಶೇಷ ಗಿಡವೊಂದರ ನಾರಿನಿಂದ ಮಾಡುತ್ತಿದ್ದರು. ಈ ರಕ್ಷಾಕವಚವನ್ನು ಮಹಿಳೆಯರು ತಮ್ಮ ಯೋನಿ ನಾಳದೊಳಗೆ ಇರಿಸಿಕೊಳ್ಳು ತ್ತಿದ್ದರು.

ಮಧ್ಯಯುಗದ ಯೂರೋಪ್, ಚೀನಾ, ಜಪಾನ್ ಮತ್ತು ಮಧ್ಯಪ್ರಾಚ್ಯ ದೇಶಗಳು ತಮ್ಮದೇ ಆದ ರಕ್ಷಕಾವಚಗಳನ್ನು ಬಳಸು ತ್ತಿದ್ದರು. ಪ್ರಾಚೀನ ಚೀನೀಯರೂ ರೇಷ್ಮೆ ಮತ್ತು ಕಾಗದದಿಂದ ಇಲ್ಲವೇ ಮೇಕೆಯ ಕರುಳಿನಿಂದ ರಕ್ಷಕವಚಗಳನ್ನು ತಯಾರಿಸಿ, ಅದಕ್ಕೆ ತೈಲವನ್ನು ಲೇಪಿಸುತ್ತಿದ್ದರು. ಶಿಶ್ನಾಗ್ರವನ್ನು ಮಾತ್ರ ಆವರಿಸುತ್ತಿದ್ದ ಈ ರಕ್ಷಕವಚಗಳನ್ನು ವಿಶೇಷವಾಗಿ ಶ್ರೀಮಂತರು ಮಾತ್ರ ಅನಗತ್ಯ ಗರ್ಭಗಳನ್ನು ತಡೆಗಟ್ಟಲು ಬಳಸುತ್ತಿದ್ದರು.

ಜಪಾನೀಯರು ಕಬೂತ-ಗಟ ಎಂಬ ರಕ್ಷಕವಚವನ್ನು ಬಳಸುತ್ತಿದ್ದರು. ಇದು ಶಿಶ್ನಾಗ್ರವನ್ನು ಮಾತ್ರ ಆವರಿಸುತ್ತಿದ್ದ ಆಮೆಯ ಚಿಪ್ಪು ಅಥವಾ ಚರ್ಮದಿಂದ ಮಾಡಿದ ರಚನೆಯಾಗಿತ್ತು. ಬಹುಶಃ ನಿಮಿರುದೌರ್ಬಲ್ಯದಿಂದ ನರಳುವವರಿಗೂ ಈ ನಮೂನೆಯ ರಕ್ಷಾಕವಚವು ಉಪಯುಕ್ತ ವಾಗುತ್ತಿತ್ತು ಎಂದು ಭಾವಿಸಲಾಗಿದೆ. ಮಧ್ಯಯುಗದಯಹೂದಿಗಳು ಮತ್ತು ಮುಸ್ಲಿಮರೂ ಸಹ ತಮ್ಮದೇ ಆದ ರಕ್ಷಕವಚವನ್ನು ಬಳಸುತ್ತಿದ್ದಿರಬಹುದು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯು ತಿಳಿದುಬಂದಿಲ್ಲ.

ಪ್ರಾಚೀನ ಈಜಿಪ್ಷಿಯನ್ನರು, ಗ್ರೀಕರು ಹಾಗೂ ರೋಮನ್ನರು ಹಾಕಿದ ಭದ್ರವಾದ ಆರೋಗ್ಯ ವಿಜ್ಞಾನದ ತಳಹದಿಯ ಮೇಲೆ ರಿನೇಸಾನ್ಸ್ ಅವಧಿಯ (15-18ನೆಯ ಶತಮಾನ) ಯೂರೋಪಿಯನ್ನರು ಆಧುನಿಕ ವೈದ್ಯಕೀಯ ಸೌಧವನ್ನು ನಿರ್ಮಿಸಿದರು. ಈ ಅವಽಯ ಬಹುಪಾಲು ವೈಜ್ಞಾನಿಕ ಆವಿಷ್ಕಾರಗಳೆಲ್ಲ ಚರ್ಚಿನ ಹಿಡಿತ ಮತ್ತು ವ್ಯಾಪ್ತಿಯಿಂದ ಹೊರಗಿದ್ದವು. ಹಾಗಾಗಿ ಚರ್ಚ್ ಮತ್ತು ವಿಜ್ಞಾನದ ನಡುವೆ ನಿತ್ಯ ಸಂಘರ್ಷವು ಸಾಮಾನ್ಯವಾಗಿದ್ದವು. ಇದಕ್ಕೆ ರಕ್ಷಾಕವಚವು ಹೊರತಾಗೇನೂ ಇರಲಿಲ್ಲ.

ಸಿಫಿಲಸ್ ಒಂದು ಮಾರಕ ಲೈಂಗಿಕ ರೋಗ. 1494ರಲ್ಲಿ ಇದು ತೀವ್ರವಾಗಿ ಫ್ರೆಂಚ್ ಸೇನೆಯನ್ನು ಕಾಡಿತು. ಫ್ರಾನ್ಸ್ ಇಂದ ಕ್ರಮೇಣ ಇಡೀ ಯೂರೋಪಿಗೆ ಹಬ್ಬಿತು. ಅಮೆರಿಕನ್ ಇತಿಹಾಸಕಾರ ಜಾರೆಡ್ ಮೇಸನ್ ಡೈಮಂಡ್ (1937- ) ಪ್ರಕಾರ, 1495ರ ಸಿಫಿಲಸ್ ಎಷ್ಟು ಉಗ್ರವಾಗಿತ್ತು ಎಂದರೆ, ಸೋಂಕು ಪೀಡಿತರ ತಲೆಯಿಂದ ಮೊಳಕಾಲಿನವರೆಗೆ ಕೀವುಗುಳ್ಳೆಗಳು ಗಿಜಿಗುಡುತ್ತಿದ್ದವು. ಬಹಳಷ್ಟು ಸಲ ಕೀವುಗಟ್ಟಿದ ಮುಖದ ಸ್ನಾಯುಗಳು ಹಾಗೆಯೇ ಉದುರಿಬೀಳುತ್ತಿದ್ದವು.

ಕೆಲವು ತಿಂಗಳ ಅವಧಿಯಲ್ಲಿ ಆ ವ್ಯಕ್ತಿಯು ಸಾಯುತ್ತಿದ್ದ. ಈ ಅವಧಿಯಲ್ಲಿ ಯೂರೋಪಿನಿಂದ ಭಾರತಕ್ಕೆ ಸಮುದ್ರ ಮಾರ್ಗ ವನ್ನು ಕಂಡುಹಿಡಿಯಲು ಹೊರಟ ಪೋರ್ಚುಗೀಸ್, ಬ್ರಿಟಿಷ್, ಫ್ರೆಂಚ್ ಮತ್ತು ಡಚ್ ನಾವಿಕರು, ಸಿಫಿಲಿಸ್ ಕಾಯಿಲೆಯನ್ನು ಮೊದಲು ಭಾರತಕ್ಕೆ ನಂತರ ಚೀನಾ ದೇಶಕ್ಕೆ ಹರಡಿದರು. ಅಲ್ಲಿಂದ ಈ ಸೋಂಕು ವಿಶ್ವಕ್ಕೆಲ್ಲ ಹರಡಿತು. 16ನೆಯ ಶತಮಾನದ ಪ್ರಖ್ಯಾತ ಇಟಾಲಿಯನ್ ಅಂಗರಚನ ವಿಜ್ಞಾನಿ ಗೇಬ್ರಿಯಲ್ ಫ್ಯಾಲೋಪಿಯೊ (1523- 1562; ವಿಶ್ವವಾಣಿ; 02-11-2022; ಪುಟ 6ನ್ನು ನೋಡಿ).

ರಕ್ಷಾಕವಚಗಳ ಸುಧಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ. ಡಿ ಮಾರ್ಬೋ ಗ್ಯಾಲಿಕೊ ಎನ್ನುವ ಪುಸ್ತಕವನ್ನು ಬರೆದ. ಫ್ರೆಂಚ್ ರೋಗಕ್ಕೆ ಸಂಬಂಧಿಸಿದ ಹಾಗೆ ಎಂದು ಈ ಶೀರ್ಷಿಕೆಯ ಅರ್ಥ. ಅಂದರೆ ಇಡೀ ಪುಸ್ತಕವು ಸಿಫಿಲಿಸ್ ರೋಗಕ್ಕೆ ಸಂಬಂಧಿ ಸಿತ್ತು. ಇವನು ಸಿಫಿಲಸ್ ಸೋಂಕನ್ನು ತಡೆಗಟ್ಟಲು ತನ್ನದೇ ಆದ ರಕ್ಷಕಾವಚವನ್ನು ರೂಪಿಸಿದ. ಲಿನನ್ ಇಂದ ಮಾಡಿದ ರಕ್ಷಾಕವಚವನ್ನು ರಾಸಾಯನಿಕ ದ್ರವವೊಂದರಲ್ಲಿ ಮುಳುಗಿಸಿ ಒಣಗಿಸುತ್ತಿದ್ದ. ಶಿಶ್ನಾಗ್ರವನ್ನು ಆವರಿಸುತ್ತಿದ್ದ ಈ ರಕ್ಷಕವಚ ಸ್ವಸ್ಥಾನದಲ್ಲಿರಿಸಲು ಒಂದು ರಿಬ್ಬನ್ ಇತ್ತು. ಈ ರಕ್ಷಾಕವಚಕ್ಕೆ ತಮ್ಮ ಜೊಲ್ಲನ್ನೇ ನುಣುಪು ಕಾರಕವಾಗಿ ಬಳಸುವಂತೆ ಸೂಚಿಸಿದ್ದ. ಈ ರಕ್ಷಕವಚದ ಉಪಯುಕ್ತತೆಗೆ ಋಜುವಾತನ್ನು ಒದಗಿಸಲು ಒಂದು ಅಧ್ಯಯನವನ್ನೇ ನಡೆಸಿದ.

ಇದರಲ್ಲಿ 1100 ಪುರುಷರು ಭಾಗವಹಿಸಿದ್ದರು. ಇವರಲ್ಲಿ ಒಬ್ಬರಿಗೂ ಸಿಫಿಲಿಸ್ ಸೋಂಕು ಅಂಟಿಕೊಳ್ಳಲಿಲ್ಲ. ಫ್ಯಾಲೋಪಿಯೊ ಜನಪ್ರಿಯಗೊಳಿಸಿದ ರಕ್ಷಕವಚವು ಮುಂದಿನ ದಿನಗಳಲ್ಲಿ ಎಲ್ಲ ಯೂರೋಪಿಯನ್ನರು ಲೈಂಗಿಕ ರೋಗಗಳನ್ನು ತಡೆಗಟ್ಟುವುದ ಜತೆಗೆ ಅನಗತ್ಯ ಗರ್ಭವನ್ನು ತಡೆಗಟ್ಟಲೂ ಬಳಸಲಾರಂಭಿಸಿದರು. ಇದು ಚರ್ಚಿಗೆ ಹಿಡಿಸಲಿಲ್ಲ. 1605ರಲ್ಲಿ ಚರ್ಚ್ ರಕ್ಷ ಕವಚಗಳ ಬಳಕೆಯನ್ನು ವಿರೋಧಿಸಿತು. ಲಿಯೋನಾರ್ಡಸ್ ಲೆಸ್ಸಿಯಸ್ (1554- 1623) ಎಂಬ ಪಾದ್ರಿಯು ನ್ಯಾಯ ಮತ್ತು ಕಾನೂನಿಗೆ ಸಂಬಂಧಿಸಿದಂತೆ (ಆನ್ ಜಸ್ಟೀಸ್ ಅಂಡ್ ಲಾ) ಎನ್ನುವ ಪುಸ್ತಕವನ್ನು ಬರೆದ.

ಇದರಲ್ಲಿ ಕ್ರೈಸ್ತ ಧರ್ಮದ ಅನ್ವಯ ಸಂತಾನ ನಿಯಂತ್ರಣವನ್ನು ಪರಿಪಾಲಿಸುವುದು ಅಪರಾಧ ಎಂದ. ಜನರು ಸಂತಾನ ನಿಯಂತ್ರಣವನ್ನು ಪರಿಪಾಲಿಸಬಾರದು ಎಂದು ಆಗ್ರಹಿಸಿದ. ಅದು ಅನೈತಿಕವೆಂದು ಸಾಧಿಸಿದ. 1666ರಲ್ಲಿ ಬ್ರಿಟಿಷ್ ಜನನ ಪ್ರಮಾಣ ಆಯೋಗವು ಬ್ರಿಟನ್ನರ ಫಲವಂತಿಕೆಯ ಪ್ರಮಾಣವು (ಫರ್ಟಿಲಿಟಿ ರೇಟ್) ಕಡಿಮೆಯಾಗುತ್ತಿದೆ ಎಂದು ಘೋಷಿಸಿತು. ಅದಕ್ಕೆ ಕಾರಣ ರಕ್ಷಣಾಕವಚಗಳ ಬಳಕೆ ಎಂದಿತು. ತನ್ನ ವರದಿಯನ್ನು ಮೊದಲ ಬಾರಿಗೆ ಕಾಂಡನ್ ಎನ್ನುವ ಪದವನ್ನು ಬಳಸಿತು.

ರಕ್ಷಾಕವಚಕ್ಕೆ ಅದುವರೆಗು ಒಂದು ನಿರ್ದಿಷ್ಟ ಪದವಿರಲಿಲ್ಲ. ಬ್ರಿಟನ್ನಿನಲ್ಲಿ ಇಂಗಿಷ್ ಸಿವಿಲ್ ವಾರ್ 1642-1651 ರವರೆಗೆ ನಡೆಯಿತು. ರಾಜ ಚಾರ್ಲ್ಸ್-1 (1600-1649) ಕಡೆಯ ಸೈನಿಕರು ಯುದ್ಧದ ಅವಽಯಲ್ಲಿ ಪದೇ ಪದೇ ಬೆಲೆವೆಣ್ಣುಗಳ ಸಹವಾಸ ವನ್ನು ಮಾಡುತ್ತಿದ್ದ ಕಾರಣ, ಬಹುಪಾಲಿನ ಸೈನಿಕರು ಸಿಫಿಲಿಸ್ ಪೀಡಿತರಾದರು. ರಾಜನು ಕೂಡಲೇ ಸೈನಿಕರಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ರಕ್ಷಾಕವಚಗಳನ್ನು ಸೈನಿಕರಿಗೆ ಸರಬರಾಜು ಮಾಡಿದನು.

ಚಾರ್ಲ್ಸ್-2 (1630-1685) ಮಹಾಲಂಪಟ. ಇವನಿಗೆಷ್ಟು ಪ್ರೇಯಸಿಯರು ಇದ್ದರು ಎನ್ನುವುದು ತಿಳಿಯದು. ಅವರಿಗೆ ಹಲವು ಮಕ್ಕಳೂ ಇದ್ದರು. ಈ ಅನಧಿಕೃತ ಸಂತಾನವು ಮುಂದಿನ ದಿನಗಳಲ್ಲಿ ತಲೆನೋವನ್ನು ತರಬಹುದೆಂಬ ಹಿನ್ನೆಲೆಯಲ್ಲಿ, ಕರ್ನಲ್ ಕಾಂಡಮ್ ಎನ್ನುವ ವೈದ್ಯನು ರಾಜನಿಗೆ ರಕ್ಷಕವಚಗಳನ್ನು ನಿತ್ಯ ಬಳಸುವಂತೆ ಸೂಚಿಸಿದರು. ರಕ್ಷಾಕವಚಕ್ಕೆ ಕಾಂಡಮ್ ಎಂಬ ಹೆಸರು ಈತನಿಂದಲೇ ಬಂದಿತೆಂದು ಹೇಳಲಾಗಿದೆ. ಆದರೆ ಕರ್ನಲ್ ಕಾಂಡಮ್ ಎನ್ನುವ ವ್ಯಕ್ತಿಯೇ ಇತಿಹಾಸದಲ್ಲಿ ಇರಲಿಲ್ಲ ಎನ್ನುವ ವಾದವೂ ಇದೆ. ಈ ಕಾಂಡಮ್ ಎನ್ನುವ ಹೆಸರನ್ನು ಯಾರು ಮೊದಲು ನೀಡಿದರು ಎನ್ನುವ ಬಗ್ಗೆಯೂ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಸಣ್ಣ ವಾಗ್ವಾದವಿದೆ. ಕಾಂಡಮ್ಮನ್ನು ಬ್ರಿಟೀಷರು ಫ್ರೆಂಚ್ ಲೆಟರ್ ಎಂದು ಕರೆದರೆ ಫ್ರೆಂಚರು ಇದನ್ನು ಇಂಗ್ಲಿಷ್ ರೇನ್ ಕೋಟ್ ಎಂದು ಪರಸ್ಪರ ಕಿಚಾಯಿಸುವುದುಂಟು.

ಕಾಂಡಮ್ ಎನ್ನುವ ಪದವು ಅಧಿಕೃತವಾಗಿ ಮೊದಲ ಬಾರಿಗೆ ಡೇನಿಯಲ್ ಟರ್ನರ್ (1667-1740) ಎನ್ನುವ ವೈದ್ಯರ ಡೈರಿಯಲ್ಲಿ ಕಂಡುಬಂದಿದೆ. 1785ರ ವೇಳೆಗೆ ಲಂಡನ್ ನಗರವಾಸಿಗಳು ರಕ್ಷಾಕವಚವನ್ನು ಕಾಂಡಮ್ ಎಂದೇ ಗುರುತಿಸಲಾ ರಂಭಿಸಿದರು. ಅಂದಿನಿಂದ ಇಂದಿನವರೆಗೆ ರಕ್ಷಾಕವಚಕ್ಕೆ ಕಾಂಡಮ್ ಎಂಬ ಹೆಸರೇ ಬಳಕೆಯಲ್ಲಿದೆ. ಕನ್ನಡದಲ್ಲಿ ರಕ್ಷಾಕವಚ ಎಂದು ಕರೆಯ ಬಹುದಾದರೂ ಕಾಂಡಮ್ ಎನ್ನುವುದೇ ಸರಿಯಾದ ರೂಪ. ಬಸ್ಸು, ಕಾರು, ಲಾರಿ ಮುಂತಾದ ಪ್ರಯೋಗಗಳನ್ನು ಕನ್ನಡವೆಂದು ಸ್ವೀಕರಿಸಿರುವಾಗ, ಕಾಂಡಮ್ ಶಬ್ದವನ್ನೂ ಕನ್ನಡದ್ದೇ ಎಂದು ಭಾವಿಸುವುದು ಉಚಿತವಾದೀತು.