ವಸ್ತುಸ್ಥಿತಿ
ಗಣೇಶ್ ಭಟ್, ವಾರಣಾಸಿ
ಉಚಿತ ಕೊಡುಗೆಗಳಿಂದ ಜನರಿಗೆ ಕ್ಷಣಿಕಲಾಭ, ರಾಜಕೀಯ ಪಕ್ಷಗಳಿಗೆ ತ್ವರಿತ ಜನಪ್ರಿಯತೆ ಮತ್ತು ಮತಗಳು ದಕ್ಕ ಬಹುದು. ಆದರೆ ಇವು ಸರಕಾರಿ ಬೊಕ್ಕಸವನ್ನು ಬರಿದು ಮಾಡುವುದರ ಜತೆಗೆ ರಾಜ್ಯ ಅಥವಾ ದೇಶದ ಅಭಿವೃದ್ಧಿಗೆ ಮಾರಕವಾಗುತ್ತವೆ. ರಸ್ತೆ, ಸಾರಿಗೆ, ನೀರಾವರಿಯಂಥ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಣದ ಕೊರತೆಯಾಗುತ್ತದೆ
ಅಧಿಕಾರ ಹಿಡಿಯುವುದು ಎಲ್ಲ ರಾಜಕೀಯ ಪಕ್ಷಗಳ ಗುರಿಯಾಗಿದೆ. ಹಣ, ಹೆಂಡ, ತೋಳ್ಬಲ, ಜಾತಿ, ಮೀಸಲಾತಿ, ಸಾಲಮನ್ನಾ, ಧರ್ಮ ಮೊದಲಾದವು ಚುನಾವಣಾ ಕಾಲದಲ್ಲಿ ಬಳಕೆ ಯಾಗುವ ವಿಷಯಗಳು. ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಕಾಲಕಾಲಕ್ಕೆ ಹೊಸ ತಂತ್ರಗಳನ್ನು ಹೂಡುತ್ತಲೇ ಇರುತ್ತವೆ.
ಉಚಿತ ಕೊಡುಗೆಗಳ ಘೋಷಣೆ ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಿರುವ ಬೆಳವಣಿಗೆ. ಇದು ಶುರುವಾಗಿದ್ದು ತಮಿಳುನಾಡಿನಲ್ಲಿ. ಜಯಲಲಿತಾರ ಎಐಎಡಿಎಂಕೆ ಪಕ್ಷ, ತಾನು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತವಾಗಿ ಮಿಕ್ಸರ್-ಗ್ರೈಂಡರ್ ಹಂಚುವು
ದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿ ಗೆಲುವು ಸಾಧಿಸಿತ್ತು. ನಂತರ ಆ ಆಶ್ವಾಸನೆ ಯನ್ನೂ ಈಡೇರಿಸಿತ್ತು.
ನಂತರದ ಚುನಾವಣೆಯಲ್ಲಿ ಕರುಣಾನಿಧಿಯವರ ಡಿಎಂಕೆ ಪಕ್ಷ, ತಾನು ಗೆದ್ದರೆ ಪ್ರತಿ ಮನೆಗೂ ಬಣ್ಣದ ಟಿವಿ ವಿತರಿಸುವುದಾಗಿ ಘೋಷಿಸಿ ಮತದಾರರನ್ನು ಸೆಳೆದು ಅಧಿಕಾರ ಹಿಡಿದಿತ್ತು, ತರುವಾಯದಲ್ಲಿ ಟಿವಿಗಳನ್ನೂ ವಿತರಿಸಿತ್ತು. ಜಯಲಲಿತಾ ಸರಕಾರದ ‘ಅಮ್ಮಾ ಇಡ್ಲಿ’ ಯೋಜನೆಯೂ ಪ್ರಸಿದ್ಧವಾಗಿತ್ತು. ಕರ್ನಾಟಕದಲ್ಲೂ ಸಿದ್ದರಾಮಯ್ಯ ಸರಕಾರ ಜನರಿಗೆ ೧ ರುಪಾಯಿಗೆ ಕೆ.ಜಿ. ಕ್ಕಿ
ನೀಡುವ ‘ಅನ್ನಭಾಗ್ಯ’ ಹಾಗೂ ‘ಇಂದಿರಾ ಕ್ಯಾಂಟೀನ್ ’ನಂಥ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿತ್ತು.
ಉಚಿತ ಕೊಡುಗೆ ರಾಜಕಾರಣವನ್ನು ಹೊಸಮಜಲಿಗೆ ಒಯ್ದಿದ್ದು ಅರವಿಂದ ಕೇಜ್ರಿವಾಲ್. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಮುನ್ನೆಲೆಗೆ ಬಂದ ಇವರು, ದೆಹಲಿ ಚುನಾವಣೆಯನ್ನು ಗೆದ್ದಿದ್ದು ಉಚಿತ ವಿದ್ಯುತ್ ಮತ್ತು ಉಚಿತ ನೀರಿನ ಘೋಷಣೆಗಳ ಮೂಲಕ. ನಂತರದ ಚುನಾವಣೆಯಲ್ಲೂ ಅವರು ಮೆಟ್ರೋ ರೈಲು ಮತ್ತು ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿ ಗೆದ್ದರು.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲೂ ಆಮ್ ಆದ್ಮಿ ಪಕ್ಷಕ್ಕೆ ಅಭೂತಪೂರ್ವ ಗೆಲುವು ದಕ್ಕಿದ್ದು ಉಚಿತ ಕೊಡುಗೆಗಳ ಘೋಷಣೆಯಿಂದಲೇ; ೧೮ರ ವಯಸ್ಸನ್ನು ಪೂರ್ತಿಗೊಳಿಸಿದ ಮಹಿಳೆಯರಿಗೆ ಪ್ರತಿ ತಿಂಗಳು ೧೦೦೦ ರುಪಾಯಿ ಕೊಡುಗೆ, ೩೦೦ ಯುನಿಟ್ ನಷ್ಟು ಉಚಿತ ವಿದ್ಯುತ್, ೨೫೦೦ ರುಪಾಯಿಗೆ ವೃದ್ಧಾಪ್ಯ ವೇತನದ ಏರಿಕೆ ಮೊದಲಾದ ಭರವಸೆ ಆಮ್ ಆದ್ಮಿ ಪಕ್ಷದಿಂದ ಹೊಮ್ಮಿತ್ತು. ಆದರೆ ಸಾಲದ ಸುಳಿಯಲ್ಲಿ ಸಿಲುಕಿರುವ ಭಗವಂತ್ ಮಾನ್ ಸರಕಾರಕ್ಕೆ ಈ ಭರವಸೆಗಳನ್ನು
ಈಡೇರಿಸಲು ಸಾಧ್ಯವಾಗಿಲ್ಲ ಎಂಬುದು ಬೇರೆ ಮಾತು!
ಇದೀಗ ಗುಜರಾತ್ ಚುನಾವಣೆಗೆ ಪ್ರಚಾರ ಆರಂಭಿಸಿರುವ ಕೇಜ್ರಿವಾಲ್, ಅಲ್ಲೂ ಉಚಿತ ಕೊಡುಗೆಗಳ ಭರವಸೆ ನೀಡುತ್ತಿದ್ದಾರೆ.
ಇಂಥ ಕೊಡುಗೆಗಳಿಂದ ಜನರಿಗೆ ಕ್ಷಣಿಕಲಾಭ, ರಾಜಕೀಯ ಪಕ್ಷಗಳಿಗೆ ತ್ವರಿತ ಜನಪ್ರಿಯತೆ ಮತ್ತು ಮತಗಳು ದಕ್ಕಬಹುದು. ಆದರೆ ಇವು ಸರಕಾರಿ ಬೊಕ್ಕಸವನ್ನು ಬರಿದು ಮಾಡುವುದರ ಜತೆಗೆ ರಾಜ್ಯ ಅಥವಾ ದೇಶದ ಅಭಿವೃದ್ಧಿಗೆ ಮಾರಕವಾಗುತ್ತವೆ.
ಪಂಜಾಬ್ ಕೃಷಿ ಪ್ರಧಾನ ರಾಜ್ಯವಾಗಿದ್ದು ಅಲ್ಲಿ ಭಾರಿ ಕೈಗಾರಿಕೆಗಳಿಲ್ಲವಾದ್ದರಿಂದ ಸರಕಾರಕ್ಕೆ ದಕ್ಕುವ ಆದಾಯವೂ ಕಮ್ಮಿಯೇ. ಹೀಗಾಗಿ ಚುನಾವಣೆ ದೃಷ್ಟಿಯಿಂದ ಉಚಿತ ಕೊಡುಗೆಗಳ ಭರವಸೆ ನೀಡಿದ್ದರೂ ಅದನ್ನು ಈಡೇರಿಸುವಷ್ಟು ಸಂಪನ್ಮೂಲ ಪಂಜಾಬ್‌ನಲ್ಲಿಲ್ಲ. ಆಮ್ ಆದ್ಮಿ ಪಕ್ಷದ ವಿವಿಧ ಭರವಸೆಗಳನ್ನು ಈಡೇರಿಸಲು ವಾರ್ಷಿಕವಾಗಿ ಹೆಚ್ಚುವರಿಯಾಗಿ ೧೫-೧೬ ಸಾವಿರ ಕೋಟಿ ರುಪಾಯಿ ಬೇಕು. ಈಗಾಗಲೇ ೨.೬೩ ಲಕ್ಷ ಕೋಟಿ ರು. ಸಾಲ ಹೊತ್ತಿರುವ ಪಂಜಾಬ್ ಈ ಭರವಸೆಗಳನ್ನು ಈಡೇರಿಸ ಬೇಕೆಂದರೆ ಇನ್ನಷ್ಟು ಸಾಲ ಮಾಡಬೇಕಾಗುತ್ತದೆ.
ಇದರಿಂದಾಗಿ ರಸ್ತೆ, ಸಾರಿಗೆ, ನೀರಾವರಿಯಂಥ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಣದ ಕೊರತೆಯಾಗುವುದು ಖಂಡಿತ.
೨೦೧೯ರ ಲೋಕಸಭಾ ಚುನಾವಣೆಯ ವೇಳೆ ಕೇರಳ ದಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಸರಕಾರದ ಜನಪ್ರಿಯತೆ ಕುಸಿದು ಪಕ್ಷಕ್ಕೆ ಕೇವಲ ಒಂದು ಎಂಪಿ ಸೀಟು ಲಭಿಸಿತ್ತು. ಆದರೆ ೨೦೨೧ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು.
ಕರೋನಾ ಕಾಲದಲ್ಲಿ ಪ್ರತಿ ಪಡಿತರ ಚೀಟಿದಾರರಿಗೆ ಆಹಾರಧಾನ್ಯ, ಎಣ್ಣೆ, ಬೆಲ್ಲ, ಸಕ್ಕರೆ, ಮೆಣಸು, ಚಹಾಪುಡಿಯಂಥ ದಿನಸಿ ಪದಾರ್ಥಗಳಿರುವ ಕಿಟ್ ಗಳನ್ನು ವಿತರಿಸಿದ್ದು ಕಮ್ಯುನಿಸ್ಟ್ ಸರಕಾರದ ಜನಪ್ರಿಯತೆ ಹೆಚ್ಚಿಸಿ ಪುನಃ ಅಕಾರಕ್ಕೇರಲು ನೆರವಾ ಯಿತು. ಆದರೆ ಕೇರಳ ಸರಕಾರವೂ ಸಾಲಕೂಪದಲ್ಲಿ ಸಿಲುಕಿದ್ದು, ಸರಕಾರಿ ಉದ್ಯೋಗಸ್ಥರಿಗೆ ಸಂಬಳ ನೀಡಲೂ ಸಾಲಮಾಡ ಬೇಕಾದ ಸ್ಥಿತಿಯಲ್ಲಿದೆ. ಈಗಾಗಲೇ ಅದು ೩.೩೨ ಲಕ್ಷ ಕೋಟಿ ರು.ನಷ್ಟು ಸಾಲದ ಹೊರೆ ಹೊತ್ತಿದ್ದರೂ, ೫೩೦ ಕಿ.ಮೀ.
ಉದ್ದದ ಮತ್ತು ೬೪೦೦೦ ಕೋಟಿ ರು. ಅಂದಾಜುವೆಚ್ಚದ ಸೆಮಿ ಹೈಸ್ಪೀಡ್ ರೈಲು ಯೋಜನೆ ರೂಪಿಸುತ್ತಿದ್ದು ಇಷ್ಟು
ಭಾರಿ ಮೊತ್ತವನ್ನು ಎಲ್ಲಿಂದ ತರಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕೇರಳದಲ್ಲಿ ಹೇಳಿಕೊಳ್ಳುವಂಥ ಕೈಗಾರಿಕೆಗಳಿಲ್ಲ. ಕಮ್ಯುನಿಸ್ಟ್ ಸಂಘಟನೆಗಳ ಕಿರುಕುಳಕ್ಕೆ ಬೇಸತ್ತು ಕಿಟೆಕ್ಸ್, ಕೋಕಾಕೋಲಾ, ಪೆಪ್ಸಿಕೋದಂಥ ಉದ್ಯಮಗಳು ಕೇರಳವನ್ನುವ ತೊರೆದಿವೆ. ಜನಪ್ರಿಯತೆಯ ಬೆನ್ನತ್ತಿ ಸಂಕಷ್ಟಕ್ಕೆ ಸಿಲುಕಿದೆ ಕೇರಳ. ಜನರಿಗೆ ಪ್ರತಿನಿತ್ಯ ಮೀನನ್ನು ಕೊಡುವ ಬದಲಿಗೆ ಮೀನುಗಾರಿಕೆ ಕಲಿಸಿದರೆ ಸ್ವಾವಲಂಬಿ-ಸುಸ್ಥಿರ ಅಭಿವೃದ್ಧಿಗೆ ಅದು ಕಾರಣವಾಗುತ್ತದೆ. ಉಚಿತ ಪಡಿತರ ಅಥವಾ ಹಣ ನೀಡುವ ಬದಲು ಆದಾಯ ಗಳಿಕೆಯ ಅವಕಾಶವನ್ನು ಜನರಿಗೆ ಕಲ್ಪಿಸಿಕೊಟ್ಟರೆ ಅದು ಜನರನ್ನು
ಪರಾವಲಂಬನೆಯಿಂದ ಹೊರತರುತ್ತದೆ.
ರಸ್ತೆ, ವಿದ್ಯುತ್, ನೀರಿನ ಪೂರೈಕೆಯಂಥ ಮೂಲಸೌಕರ್ಯಗಳು ಉದ್ಯಮಗಳಿಗೆ ಮತ್ತು ಹೂಡಿಕೆಗೆ ಅನುವು ಮಾಡಿಕೊಡುತ್ತವೆ. ದರಿಂದ ಜನರಿಗೆ ಉದ್ಯೋಗ ದಕ್ಕಿ ಅವರ ಆದಾಯ ವಽಸುತ್ತದೆ. ಅಭಿವೃದ್ಧಿಪರ ರಾಜಕಾರಣವೂ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಬಲ್ಲದು ಎಂಬು ದನ್ನು ತೋರಿಸಿಕೊಟ್ಟಿದ್ದು ನರೇಂದ್ರ ಮೋದಿಯವರು. ೨೦೧೮ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ
ಆಯ್ಕೆಯಾದ ಅವರು ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದಾಗಿ ಸತತ ೩ ಬಾರಿ ಗೆದ್ದರು.
ಸರ್ದಾರ್ ಸರೋವರ ಅಣೆಕಟ್ಟನ್ನು ಎತ್ತರಿಸಿ ಗುಜರಾತ್‌ನ ಎಲ್ಲೆಡೆ ಕೃಷಿಗೆ ನೀರು ಸಿಗುವಂತೆ ಮಾಡಿದ್ದು, ಕೊಳಚೆಯಾಗಿ ಪರಿವರ್ತನೆಯಾಗಿದ್ದ ಸಾಬರಮತಿ ನದಿಯನ್ನು ಶುಚಿಗೊಳಿಸಿ ಅಲ್ಲಿಗೆ ಸರ್ದಾರ್ ಸರೋವರ ಅಣೆಕಟ್ಟಿನ ನೀರು ಹರಿಸಿ ಆ ಸ್ಥಳವನ್ನು ಪ್ರವಾಸಿ ತಾಣವಾಗಿಸಿದ್ದು, ಪ್ರತಿವರ್ಷ ‘ವೈಬ್ರಂಟ್ ಗುಜರಾತ್’ ಕಾರ್ಯಕ್ರಮ ಹಮ್ಮಿಕೊಂಡು ಹೂಡಿಕೆದಾರರನ್ನು ಸೆಳೆದಿದ್ದು, ಪಶ್ಚಿಮ ಬಂಗಾಲದಿಂದ ಗುಳೆ ಎದ್ದು ಹೊರಟಿದ್ದ ಟಾಟಾ ಕಂಪನಿಯನ್ನು ಆಹ್ವಾನಿಸಿ ರಾಜ್ಯವನ್ನು ಆಟೋ ಮೊಬೈಲ್ ಕ್ಷೇತ್ರದ ಆಕರ್ಷಣಾ ಕೇಂದ್ರವಾಗಿಸಿದ್ದು, ಸೌರವಿದ್ಯುತ್ ಕ್ರಾಂತಿಯ ಮೂಲಕ ಪ್ರತಿಮನೆಗೆ ನಿರಂತರ ವಿದ್ಯುತ್ ಪೂರೈಸಿದ್ದು, ರಸ್ತೆಗಳು-ಹೆದ್ದಾರಿಗಳನ್ನು ಉನ್ನತೀಕರಿಸಿದ್ದು ಇವೇ ಮೊದಲಾದ ಕ್ರಮಗಳಿಂದ ಗುಜರಾತ್ ಒಂದು ಸಂಪದ್ಭರಿತ ರಾಜ್ಯವಾಗಿ ರೂಪಾಂತರಗೊಂಡಿತು.
ಪರಿಣಾಮವಾಗಿ, ಜನರಿಗೆ ಉದ್ಯೋಗಾವಕಾಶ ಹೆಚ್ಚಿಸಿ ಅವರ ಆದಾಯವನ್ನು ವಽಸಿತು. ಇಂಥ ಉಪಕ್ರಮಗಳು ಮೋದಿಯವರ
ಜನಪ್ರಿಯತೆಯನ್ನು ಪ್ರತಿವರ್ಷ ಹೆಚ್ಚಿಸುತ್ತಲೇ ಹೋಗಿ, ೨೦೧೪ರಲ್ಲಿ ಅವರು ಪ್ರಧಾನಿಪಟ್ಟ ಏರುವುದಕ್ಕೂ ಅದು ಚಿಮ್ಮುಹ ಲಗೆಯಾಯಿತು. ಅಭಿವೃದ್ಧಿ ಮಾದರಿಯ ರಾಜಕಾರಣವನ್ನು ಪ್ರಧಾನಿಯಾದ ಮೇಲೂ ಮೋದಿ ಮುಂದುವರಿಸಿದ್ದಾರೆ.
ಕಳೆದ ೮ ವರ್ಷಗಳಲ್ಲಿ ದೇಶದ ಬಹುತೇಕ ಹಳ್ಳಿಗಳಿಗೆ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ, ೫೦ ಸಾವಿರ ಕಿ.ಮೀ.ನಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಸದಾಗಿ ನಿರ್ಮಿಸಲಾಗಿದೆ, ೩೩ ಎಕ್ ಪ್ರೆಸ್ ಹೆದ್ದಾರಿಗಳ ನಿರ್ಮಾಣ ನಡೆಯುತ್ತಿದೆ. ೨೦೧೪ರಲ್ಲಿ ದೇಶದಲ್ಲಿ ೬೫ ನಾಗರಿಕ ವಿಮಾನ ನಿಲ್ದಾಣಗಳಿದ್ದುದು ಈಗ ಆ ಸಂಖ್ಯೆ ೧೩೭ಕ್ಕೇರಿದೆ.
ನವೋದ್ಯಮಗಳಿಗೆ ನೆರವಾಗುವ ಸ್ಟಾರ್ಟಪ್ ಇಂಡಿಯಾ ಯೋಜನೆಯಡಿ ಹೊಸದಾಗಿ ೭೯,೬೪೮ ಉದ್ಯಮಗಳು ಆರಂಭವಾಗಿವೆ.
ಉದ್ಯಮದ ಆರಂಭಕ್ಕೆ ಮತ್ತು ಮೇಲ್ದರ್ಜೆಗೇರಿಸುವುದಕ್ಕೆ ೩೭.೧ ಕೋಟಿ ಜನರಿಗೆ ಮುದ್ರಾ ಸಾಲವನ್ನು ನೀಡಲಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಯೋಜನೆಗಳಡಿಯಲ್ಲಿ ರಕ್ಷಣೆ, ಆಟೋಮೊಬೈಲ್, ಇಲೆಕ್ಟ್ರಾನಿಕ್ಸ್ ಉಪಕರಣಗಳ
ಉತ್ಪಾದನೆಗೆಂದು ೨.೭೩ ಕೋಟಿ ರುಪಾಯಿಗಳ ಉತ್ಪಾದನಾಧಾರಿತ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಈ ಎಲ್ಲ ಉಪಕ್ರಮಗಳ ಕಾರಣದಿಂದಾಗಿ ಭಾರತವಿಂದು ವಾರ್ಷಿಕವಾಗಿ ೮೩ ಶತಕೋಟಿ ಡಾಲರ್‌ನಷ್ಟು ವಿದೇಶಿ ನೇರಹೂಡಿಕೆ ಯನ್ನು ಕಾಣುತ್ತಿದೆ. ಭಾರತದಲ್ಲೀಗ ಅನುಸರಿಸಲಾಗುತ್ತಿರುವ ಅಭಿವೃದ್ಧಿ ಮಾದರಿಯ ರಾಜಕಾರಣವು ದೇಶದ ಆರ್ಥಿಕತೆಯನ್ನು ಬಲಿಷ್ಠವಾಗಿಸಿದೆ. ೨೦೧೪ರಲ್ಲಿ ಜಾಗತಿಕವಾಗಿ ೧೦ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದ ಭಾರತವಿಂದು ೫ನೇ
ಸ್ಥಾನಕ್ಕೆ ಜಿಗಿದಿದೆ. ಉಚಿತ ಕೊಡುಗೆಗಳ ಮಾದರಿಯ ಜನಕಲ್ಯಾಣ ಯೋಜನೆಗಳು ಅಗತ್ಯವಿಲ್ಲದವರಿಗೂ ಸಂದಾಯವಾಗಿ ಸಂಪನ್ಮೂಲಗಳು ಪೋಲಾಗುತ್ತಿದ್ದರೆ, ಅಭಿವೃದ್ಧಿ ಮಾದರಿಯ ಜನಕಲ್ಯಾಣ ಯೋಜನೆಗಳು ನಿಜಾರ್ಥದಲ್ಲಿ ಸಂಪನ್ಮೂಲಗಳನ್ನು ಸೃಷ್ಟಿಸುತ್ತಿವೆ. ಉಚಿತ ಯೋಜನೆಗಳು ಸರಕಾರಿ ಬೊಕ್ಕಸವನ್ನು ಬರಿದುಮಾಡಿದರೆ, ಅಭಿವೃದ್ಧಿಪರ ಯೋಜನೆಗಳು ಅದನ್ನು
ತುಂಬಿಸುತ್ತವೆ ಎಂಬುದಕ್ಕೆ ಇದು ಸಾಕ್ಷಿ. ಉಚಿತ ಕೊಡುಗೆಗಳ ಯೋಜನೆಗಳು ಜನರನ್ನು ಪರಾವಲಂಬಿ ಗಳನ್ನಾಗಿಸಿದರೆ, ಅಭಿವೃದ್ಧಿಪರ ಯೋಜನೆಗಳು ಜನರನ್ನು ಸ್ವಾವಲಂಬಿಗಳನ್ನಾಗಿಸುತ್ತವೆ. ಇದನ್ನು ತಥಾಕಥಿತ ಆಳುಗರು ಅರಿತರೆ ಒಳ್ಳೆಯದು.