Wednesday, 9th October 2024

ಉಚಿತ ಯೋಜನೆಗಳ ಯೋಚನೆ ಎಷ್ಟು ಉಚಿತ ?

ಯಕ್ಷ ಪ್ರಶ್ನೆ

ಡಾ.ಕೆ.ಪಿ.ಪುತ್ತೂರಾಯ

ಈ ನಡುವೆ, ಚುನಾವಣೆಗಳು ಬಂತೆಂದರೆ ಹೆಚ್ಚಿನ ರಾಜಕೀಯ ಪಕ್ಷಗಳು, ಮುಂದಿನ ದಿನಗಳಲ್ಲಿ ಬೀರಬಹುದಾದ/ಬರಬ
ಹುದಾದ ಪರಿಣಾಮಗಳನ್ನು ಆರ್ಥಿಕ ಹೊರೆಭಾರಗಳನ್ನು ಅರ್ಥೈಸಿಕೊಳ್ಳದೇನೇ ಜನತೆಗೆ ಕೆಲವಾರು ಉಚಿತಗಳನ್ನು
ಘೋಷಿಸಿಬಿಡುತ್ತವೆ. ಹಿಂದೆ ಇಲ್ಲದ ಈ ಸಾಮಾಜಿಕ ಕಳಕಳಿ, ಬಡವರ ಮೇಲಿನ ಪ್ರೀತಿ ದಿಢೀರ್ ಆಗಿ ಚುನಾವಣೆಯ ವೇಳೆಗೇ ಏಕೆ ಬಂತು? ಎಂಬುದನ್ನು ವಿಶ್ಲೇಷಿಸಿದರೆ, ಅದು ಮುಗ್ಧ ಮತದಾರರನ್ನು ಓಲೈಸ ಲೋಸುಗ, ತನ್ಮೂಲಕ ಅಧಿಕಾರದ ಗದ್ದುಗೆಯನ್ನು ಹಿಡಿಯಲೋಸುಗ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ!

ಈ ಕಾರ್ಯಕ್ರಮ ಏನಾದರೂ ಯಶಸ್ವಿಯಾದರೆ, ಅದು ಪಕ್ಷದಿಂದ ಪಕ್ಷಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಹರಡಿ, ನ್ಯಾಯ ಸಮ್ಮತವಾಗಿ ಧರ್ಮಸಮ್ಮತವಾಗಿ ಚುನಾವಣೆಯಲ್ಲಿ ಗೆಲ್ಲಬಯಸುವವರಿಗೆ ಒಂದು ಸವಾಲಾಗಿ ಪರಿಣಮಿಸು ವುದರಲ್ಲಿ ಸಂಶಯವಿಲ್ಲ. ಕಾರಣ, ಇವುಗಳೆಲ್ಲ ರಾಜ್ಯದ ಆರ್ಥಿಕ ವ್ಯವಸ್ಥೆ ಯನ್ನು ಬುಡಮೇಲು ಮಾಡುವ, ದೂರದೃಷ್ಟಿ ಇಲ್ಲದ, ತಾತ್ಕಾಲಿಕ ಲಾಭವನ್ನು ಪಡೆಯಲು ರೂಪಿತವಾದ ಯೋಜನೆಗಳು. ಉಚಿತವಾಗಿ ನೀಡುವುದರಿಂದ ಆಗುವ ಅನುಕೂಲತೆ ಗಳಿಗಿಂತ ಅನಾನುಕೂಲತೆಗಳೇ ಹೆಚ್ಚು ಎಂಬುದು ಅನೇಕರ ಅಭಿಮತ.

ಅದು ಹೇಗೆಂದರೆ: ‘ಉಚಿತವಾಗಿ ಏನನ್ನೇ ನೀಡಿದರೂ ಅದಕ್ಕೆ ಬೆಲೆ ಇಲ್ಲ’ ಎನ್ನುವುದು ಊರಿಗೇ ಗೊತ್ತಿರುವ ವಿಚಾರ. ದುಡಿದು ತಿನ್ನುವ ಅನ್ನಕ್ಕೆ ಇರುವ ರುಚಿ, ಬಿಟ್ಟಿ ಅನ್ನಕ್ಕೆ ಇಲ್ಲ. ದುಡಿದು ಗಳಿಸಿ ತಿಂದರೇನೇ ಆನಂದ, ಹೆಮ್ಮೆ ಮತ್ತು ಗೌರವ. ಈ ಸತ್ಯವನ್ನೇ ಬಲ್ಲವರು ಹೀಗೆ ಹೇಳುತ್ತಾರೆ- ‘ನೀರಲ್ಲಿ ಮಿಂದೆದ್ದರೆ ನಮ್ಮ ಬಟ್ಟೆಗಳು ಬದಲಾಗುತ್ತವೆ. ಆದರೆ ಶ್ರಮದ ಬೆವರಿನಲ್ಲಿ ಮಿಂದೆದ್ದರೆ ನಮ್ಮಭವಿಷ್ಯವೇ ಬದಲಾಗುತ್ತದೆ’. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಗಳಿಗೆ ಅವರನ್ನು ಪಾಸು
ಮಾಡಲೋಸುಗ ಕೃಪಾಂಕಗಳನ್ನು ನೀಡುವುದು ಅವಮಾನಕರ ವಿಷಯವೇ ಆಗಿದೆ.

ಕಾರಣ, “A pass in the examination is taken by merit and should not be given by mercy’. ಅದೇ ರೀತಿ, ವರದಕ್ಷಿಣೆಯ ರೂಪದಲ್ಲಿ ಕಿತ್ತುಕೊಳ್ಳುವ ಹಣವೂ ನಿಕೃಷ್ಟವಾದುದು. ಆದುದರಿಂದಲೇ, ‘ಸ್ವಾರ್ಜಿತಂ ಉತ್ತಮಂ ವಿತ್ತಂ, ಪಿತಾರ್ಜಿತಂ ಮಧ್ಯಮಂ, ದಾನಂ ಅಧಮಂ ವಿತ್ತಂ, ಅಧಮಾಧಮಂ ಸೀಣಾಂಚ ವಿತ್ತಂ’ ಎನ್ನಲಾಗಿದೆ. ‘ದುಡಿಯದೇ ತಿನ್ನುವ ಅನ್ನ, ಕದ್ದ ಅನ್ನವನು ಮೆದ್ದಂತೆ’ ಎಂದು ಕೂಡ ಹೇಳಲಾಗಿದೆ.

ಅದುದರಿಂದಲೇ ಸ್ವಾಭಿಮಾನಿಗಳು ಹೇಳಿದರು, ‘ದುಡಿಮೆ ಇಲ್ಲದ ದುಡ್ಡೇ ಬೇಡ, ಯೋಗ್ಯತೆ ಇಲ್ಲದ ಯೋಗವೇ ಬೇಡ, ಸಿದ್ಧಿ
ಇಲ್ಲದ ಪ್ರಸಿದ್ಧಿಯೇ ಬೇಡ’ ಅಂತ. ಈ ಸತ್ಯವನ್ನೇ ಶ್ರೀಕೃಷ್ಣ ಪರಮಾ ತ್ಮನು ಭಕ್ತಿಯೋಗ, ಜ್ಞಾನಯೋ ಗಗಳಿಗಿಂತ ಕರ್ಮ ಯೋ ಗವೇ ತನಗೆ ಹೆಚ್ಚು ಪ್ರಿಯವೆಂದ. ಇದರ ಅರ್ಥ ದುಡಿ, ಆಮೇಲೆ ತಿನ್ನು ಎಂಬುದಾಗಿ. ಇದನ್ನೇ ಬಸವಣ್ಣನವರೂ ‘ಕಾಯಕವೇ ಕೈಲಾಸ’ ಎಂಬುದಾಗಿ ತಿಳಿಸಿದರು.

ಉಚಿತವಾಗಿ ನೀಡುವುದರಿಂದ ವ್ಯಕ್ತಿ ಆಲಸಿಯಾಗುತ್ತಾನೆ, ಸೋಮಾರಿಯಾಗುತ್ತಾನೆ. ಎಲ್ಲವೂ ಉಚಿತ ಸಿಗುವಾಗ ಯಾಕೆ ದುಡಿಯಬೇಕು ಎಂಬ ಮನೋಭಾವ ಅವನ ತಲೆಯೊಳಗೆ ತುಂಬಿಕೊಳ್ಳುತ್ತದೆ, ಉತ್ಪಾದನಾಶೀಲತೆ ನಶಿಸಿ ಆತ ಅನುತ್ಪಾದ ಕನಾಗಿ ಮಾರ್ಪಡುತ್ತಾನೆ. ಇದು ದೇಶದ ಉತ್ಪಾದಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಉಚಿತವಾಗಿ ನೀಡುವುದರಿಂದ ವ್ಯಕ್ತಿ ದಡ್ಡನಾ ಗುತ್ತಾನೆ. ಅವನಲ್ಲಿರುವ ಸೃಜನಶೀಲತೆ ನಾಶವಾಗುತ್ತದೆ. ಕಾರಣ, ‘ಸಿರಿತನ ಬದುಕನ್ನು ಬದಲಿಸುತ್ತದೆ. ಆದರೆ ಬಡ ತನ ಬದುಕೋದನ್ನು ಕಲಿಸುತ್ತದೆ’.

ಈ ಪ್ರವೃತ್ತಿ ಅಭಿವೃದ್ಧಿಯ ಮೇಲೆ ಅನಪೇಕ್ಷಿತ ಪರಿಣಾಮವನ್ನು ಬೀರುತ್ತದೆ. ಮೇಲಾಗಿ, ಈ ಉಚಿತ ಕೊಡುಗೆಗಳನ್ನು ಎಷ್ಟು
ವರ್ಷಗಳವರೆಗೆ, ಎಲ್ಲಿಯವರೆಗೆ ನೀಡುತ್ತೀರಿ? ಇದಕ್ಕೊಂದು ಆದಿ-ಅಂತ್ಯಗಳು ಬೇಡವೇ? ಇವು ತಾತ್ಕಾಲಿಕ ಯೋಜನೆ ಗಳಾದರೆ, ಅವು ಇಲ್ಲವಾದಾಗ ಜನರ ವಿಶ್ವಾಸವೂ ಇಲ್ಲವಾಗು ತ್ತದಲ್ಲ! ಇವು ಶಾಶ್ವತ ಯೋಜನೆಗಳಾದರೆ ಇವನ್ನು ಮುಂದು ವರಿಸಿಕೊಂಡು ಹೋಗುವ ಆರ್ಥಿಕ ಸಂಪತ್ತನ್ನು, ಸಂಪನ್ಮೂಲಗಳನ್ನು ಹೇಗೆ ಕ್ರೋಡೀಕರಿಸುವಿರಿ? ಹೇಗೆ ಸರಿದೂಗಿಸುವಿರಿ? ಅಂತೆಯೇ, ಯಾರಿಗೆಲ್ಲ ಉಚಿತವಾಗಿ ನೀಡಬೇಕು ಹಾಗೂ ಎಷ್ಟು ನೀಡಬೇಕು ಎಂಬುದರ ಬಗ್ಗೆಯೂ  ನಿಖರವಾದ ಅಂಕಿ ಸಂಖ್ಯೆಗಳಿಲ್ಲ, ಮಾಹಿತಿ ಇಲ್ಲ. ಅಂದ ಮೇಲೆ, ಇದು ಗೊಂದಲದ ಗೂಡಾಗದೇ? ಇಂದು ನೀಡಿದ ಉಚಿತಗಳೆಲ್ಲ ಕ್ರಮೇಣ ಮೇಲ್ಮು ಖವಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂಶಯವಿಲ್ಲ.

ಕಾರಣ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿರುತ್ತವೆ. ಇಂದಿನ ಉಚಿತಗಳು ಮುಂದಿನ ದಿನಗಳಿಗೆ ಸಾಕಾಗದೇ ಹೋಗ ಬಹುದು. ಆಗ ನಿರೀಕ್ಷೆಗಳು, ಅಪೇಕ್ಷೆಗಳು ಹೆಚ್ಚಾಗಬಹುದು. ಹಾಗಾದಾಗ ಅವನ್ನು ಸರಿದೂಗಿಸುವುದು ಒಂದು ಸಮಸ್ಯೆಯೇ ಆಗಬಹುದಲ್ಲ! ಮಾತ್ರವೇ ಅಲ್ಲ, ಇಂದು ಉಚಿತವಾಗಿ ಪಡೆದುದು ನಾಳೆಗೆ ಒಂದು ಹಕ್ಕಾಗಿ ಪರಿವರ್ತನೆಗೊಳ್ಳುವ
ಸಂಭವವೂ ಇದೆ. ಕಾರಣ ಇದು ಮನುಷ್ಯನ ಸರ್ವೇಸಾಮಾನ್ಯವಾದ ಗುಣ-ಸ್ವಭಾವ.

ಅದನ್ನು ಪೂರೈಸದಿದ್ದರೆ ಜನ ದಂಗೆ ಯೇಳುವ, ಹೋರಾಟ ಮಾಡುವ ಸಾಧ್ಯತೆಗಳೂ ಹುಟ್ಟಿಕೊಳ್ಳಬಹುದು. ಇದನ್ನು ತಡೆಗಟ್ಟುವುದೆಂತು? ಇಲ್ಲವಾದರೆ, ಇದು ಸಾಮಾಜಿಕ ಅಶಾಂತಿಗೂ ಕಾರಣವಾಗದೇ? ಎಲ್ಲದಕ್ಕೂ ಮಿಗಿಲಾಗಿ, ಉಚಿತವಾಗಿ ಪಡೆಯುವ ಪ್ರವೃತ್ತಿ ವ್ಯಕ್ತಿಯ ಸ್ವಾಭಿಮಾನ, ಆತ್ಮವಿಶ್ವಾಸ, ಆತ್ಮನಿರ್ಭರತೆಯನ್ನು ಕೂಡ ನಾಶಮಾಡಬಲ್ಲದು. ಪ್ರತಿ ಯೊಂದಕ್ಕೂ ಪ್ರತಿಸಲವೂ ಕೈಯೊಡ್ಡಿ ಭಿಕ್ಷೆ ಬೇಡುವ ಈ ಪರಿಪಾಠ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರದೇ? ಇಷ್ಟಕ್ಕೂ ಇದು ಯಾರ ಹಣ? ರಾಜಕಾರಣಿಗಳ ಜೇಬಿನಿಂದ ಬಂದ ಹಣವಲ್ಲ! ಅವರು ಕೂಡಿಟ್ಟ ಹಣದಿಂದ ಬಂದ ಕೊಡುಗೆ ಅಲ್ಲ.

ಉಚಿತವಾಗಿ ನೀಡಲು ವ್ಯಯವಾಗುವ ಹಣ, ತೆರಿಗೆ ರೂಪದಲ್ಲಿ ಜನಸಾಮಾ ನ್ಯರಿಂದ ಸಂಗ್ರಹಿಸಿದ ಹಣವೇ. ‘Rob Peter to pay Paul’ ಎಂಬ ಮಾತಿನಂತೆ, ಕೆಲವರಿಂದ ಕಿತ್ತು ಕೆಲವರಿಗೆ ಕೊಡುವ ಈ ಪ್ರಕ್ರಿಯೆ ನ್ಯಾಯಸಮ್ಮತವೇ? ಜನರ ಹಣವನ್ನು ಜನರಿಗೇ ಕೊಡುವ ಈ ವಿಧಾನ ಯಾವ ದೊಡ್ಡ ಸಹಾಯ? ಸಮಾಜಸೇವೆ? ‘The tax I pay shold be
spent for developmental works, not for free distribution for your benefit’ ಎಂಬ ಮಾತಿನಂತೆ, ತೆರಿಗೆ ರೂಪದಲ್ಲಿ ಸಂಗ್ರಹಿಸಲ್ಪಟ್ಟ ಹಣ, ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲ್ಪಡಬೇಕೇ ಹೊರತು, ಕೆಲವು ವರ್ಗದವರನ್ನು ಖುಷಿಪಡಿಸಲು ಮಾತ್ರ ಅಲ್ಲ!

ಉಚಿತ ಯೋಜನೆಗಳಿಗೆ ಖರ್ಚಾಗುವ ಹಣವನ್ನು ಸರಿದೂಗಿಸಲು, ಬೇರೆ ರೀತಿಯಲ್ಲಿ ಹಣ ಸಂಗ್ರಹಣೆ ಆಗಲೇಬೇಕಲ್ಲವೇ! ಇದುವೇ ತೆರಿಗೆ ಹೆಚ್ಚಳ, ದರ ಹೆಚ್ಚಳ. ಅಂದರೆ, ಜನರ ಮೇಲೆ ಮತ್ತೆ ಆರ್ಥಿಕ ಹೊರೆಯಾಗದೇ? ಇದು ಸಾಲದ್ದಕ್ಕೆ ಈ ವ್ಯವಸ್ಥೆಯಿಂದ ಒಂದು ಹೊಟ್ಟೆ ತುಂಬಿಸಲು ಹೋಗಿ ಇನ್ನೊಂದು ಹೊಟ್ಟೆಯನ್ನೇ ಉಪವಾಸ ವಿರಿಸೋದು ಅನಿವಾರ್ಯ ವಾಗುತ್ತದೆ. ಉದಾಹರಣೆಗೆ, ಉಚಿತ ಬಸ್ ಪ್ರಯಾಣದಿಂದ ಲಕ್ಷಾಂತರ ಆಟೋರಿಕ್ಷಾ, ಟ್ಯಾಕ್ಸಿ ಚಾಲಕರ ಆದಾಯಕ್ಕೆ ಕತ್ತರಿ ಬಿದ್ದಿರುವುದನ್ನು ನಾವು ಕಾಣುತ್ತೇವೆ.

ಒಟ್ಟಿನಲ್ಲಿ, ಉಚಿತವಾಗಿ ನೀಡುವುದರಿಂದ ಆಗುವ ಅಪಾಯ-ಅನಾಹುತಗಳೆಂದರೆ, ಅರ್ಥವ್ಯವಸ್ಥೆಯ ನಾಶ, ರಾಜ್ಯದ ಬೊಕ್ಕಸಕ್ಕೆ ತುಂಬಲಾರದ ನಷ್ಟ ಹಾಗೂ ಸಮಾ ಜದಲ್ಲಿ ಅಶಾಂತಿ- ಅರಾಜಕತೆ. ಹಾಗೊಮ್ಮೆ ಉಚಿತವಾಗಿ ಕೊಡಲೇ
ಬೇಕಿದ್ದರೆ ಈ ಕ್ರಮಗಳನ್ನು ಅನುಸರಿಸುವುದು ಸೂಕ್ತ: ನಿರುದ್ಯೋಗಿಗಳಿಗೆ ದುಡಿದು ತಿನ್ನಲು ಅನುಕೂಲವಾಗುವಂತೆ ನೌಕರಿ ಕೊಡಿ, ಕೈಗೊಂದು ಕೆಲಸ ಕೊಡಿ. ಇದು ಶಾಶ್ವತ ಪರಿಹಾರವೆಂದೆನಿಸೀತು.

ಕಾರಣ, “When a man is hungry don’t give him fish, teach him fishing’ ಎಂಬ ಮಾತಿನಂತೆ, ಹಸಿದ ವ್ಯಕ್ತಿಗೆ ಮೀನನ್ನು ಕೊಡಬೇಡಿ, ಮೀನು ಹಿಡಿಯೋದನ್ನು ಕಲಿಸಿಕೊಡಿ. ಆಗ ಮಾತ್ರ ಅವನ ಬಡತನ ಶಾಶ್ವತವಾಗಿ ನಿವಾರಣೆಯಾದೀತು! ಅಂತೆಯೇ, ಉಚಿತವಾಗಿ ನೀಡುವುದಿದ್ದರೆ ಜನರಿಗೆ ಆರೋಗ್ಯವನ್ನು ಕೊಡಿ. ವೈದ್ಯಕೀಯ ಸೌಲಭ್ಯ ಗಳನ್ನು ನೀಡಿ, ಔಷಽಗಳನ್ನು ನೀಡಿ. ಬಡಮಕ್ಕಳಿಗೆ ಉಚಿತ ವಿದ್ಯಾ ಭ್ಯಾಸದ ವ್ಯವಸ್ಥೆಯನ್ನು ಮಾಡಿಕೊಡಿ.

ಶಾಲಾ ಕಾಲೇಜು ಗಳನ್ನು ತೆರೆಯಿರಿ, ಅಲ್ಲಿಗೆ ಉಪನ್ಯಾಸಕರನ್ನು ನೇಮಕ ಮಾಡಿ. ಶಾಲೆಗಳೇ ಇಲ್ಲದ, ಇದ್ದರೂ ಮೇಷ್ಟ್ರು
ಗಳೇ ಇಲ್ಲದ ಹಳ್ಳಿಗಳೆಷ್ಟಿಲ್ಲ! ಮನೆಮನೆಗೆ ಉಚಿತ ಶೌಚಾಲಯಗಳನ್ನು ಕಟ್ಟಿಕೊಡಿ, ಹಳ್ಳಿಹಳ್ಳಿಗೆ ರಸ್ತೆಯ ಸಂಪರ್ಕಗಳನ್ನು ಒದಗಿಸಿ ಕೊಡಿ. ಕುಡಿಯುವ ನೀರಿನ ವ್ಯವಸ್ಥೆಯಾಗಲಿ. ಇನ್ನೆಷ್ಟೋ ಅಭಿವೃದ್ಧಿ ಕಾರ್ಯ ಗಳಿವೆ ಯಲ್ಲ, ಅವೆಲ್ಲವನ್ನೂ ಒಂದೊಂದಾಗಿ ಕೈಗೆತ್ತಿಕೊಳ್ಳಿ.

ಉಚಿತವಾಗಿ ಕೊಡುವ ಬದಲು ರಿಯಾಯಿತಿ ದರ ದಲ್ಲಿ ಕೊಡಿ. ಯಾರಿಗೆ? ಎಲ್ಲರಿಗಲ್ಲ! ಹಿರಿಯ ನಾಗರಿಕರಿಗೆ, ನಿವೃತ್ತ ಯೋಧರಿಗೆ, ಅಂಗವಿಕಲರಿಗೆ, ದುಡಿಯಲಾಗದ ಅಸಮರ್ಥರಿಗೆ. ಆದರೆ ಎಂದೂ ಉಚಿತವಾಗಿ ಯಾವುದನ್ನೂ ಕೊಡ ಬಾರದು. ಆಗಲೇ ಸಮಾಜದಲ್ಲಿ ಸರ್ವತೋಮುಖ ಪ್ರಗತಿ ಸಾಧ್ಯ. ಇಲ್ಲವಾದರೆ ಆಪತ್ತುಗಳನ್ನು ಆಹ್ವಾನಿಸಿದಂತೆ! ಏನೋ ಮಾಡಲು ಹೋಗಿ ಇನ್ನೇನನ್ನೋ ಮಾಡಿಕೊಂಡಂತಾದೀತು! ಜೋಕೆ!