ಹೋರಾಟಪಥ
ಬಸವರಾಜ ಎಂ.ಯರಗುಪ್ಪಿ
ನಮ್ಮದು ಅಧಿಕಾರಕ್ಕಾಗಿನ ಧಾವಂತವಲ್ಲ. ಭಾರತದ ಸ್ವಾತಂತ್ರ್ಯಕ್ಕಾಗಿ ಸಂಪೂರ್ಣ ಅಹಿಂಸಾತ್ಮಕ ಹೋರಾಟದಲ್ಲಿ ತೊಡಗಿಸಿಕೊಂಡ ಸೈನಿಕ ತನಗಾಗಿ ಏನನ್ನೂ ಅಪೇಕ್ಷಿಸುವುದಿಲ್ಲ. ಹಾಗೆಯೇ ಅಂತಿಮವಾಗಿ ಉಳಿಯುವುದು ಸತ್ಯವೊಂದೇ, ಉಳಿದವು ಕಾಲದ ಅಲೆಯಲ್ಲಿ ಮುಳುಗುತ್ತವೆ’- ಇದು ಮಹಾತ್ಮ ಗಾಂಧಿ ಯವರು ಬಾಂಬೆಯಲ್ಲಿ ನಡೆದ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಅಥವಾ ‘ಕ್ವಿಟ್ ಇಂಡಿಯಾ’ ಎಂಬ ಉದ್ಘೋಷವನ್ನು ಒಳಗೊಂಡಿದ್ದ ಚಳವಳಿಯ ನೇತೃತ್ವ ವಹಿಸಿಕೊಂಡು ಆಡಿದ ಮಾತು.
ಕ್ವಿಟ್ ಇಂಡಿಯಾ ಚಳವಳಿ ನಡೆದು ೮೦ ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಅಂದಿನ ಅವಿಸ್ಮರಣೀಯ ಕ್ಷಣ ಗಳನ್ನು ನೆನೆಯುವ ಪುಟ್ಟ ಪ್ರಯತ್ನವಿದು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿಯಾದ ಅಥವಾ ಹೊಸ ತಿರುವು ನೀಡಿದ ಈ ಚಳವಳಿ ಆರಂಭವಾಗಿದ್ದು ೧೯೪೨ರ ಆಗಸ್ಟ್ ೯ರಂದು. ತಮ್ಮ ೫೦ ಮಂದಿ ಬೆಂಬಲಿಗರೊಂದಿಗೆ ಗಾಂಧೀಜಿ ಪ್ರಾರಂಭಿಸಿದ ಈ ಚಳವಳಿಯ ಗುರಿಯು, ಬ್ರಿಟಿಷರ ಬಿಗಿಮುಷ್ಟಿಯಿಂದ ಭಾರತಕ್ಕೆ ವಿಮೋಚನೆ ದೊರಕಿಸಿಕೊಡುವುದೇ ಆಗಿತ್ತು. ಕ್ರಿಪ್ಸ್ ಮಿಷನ್ನೊಂದಿಗಿನ ಬ್ರಿಟಿಷ್ ಯುದ್ಧದ ಯತ್ನಕ್ಕೆ ಭಾರತೀಯರ ಬೆಂಬಲ ಪಡೆಯಲು ಬ್ರಿಟಿಷರು ವಿಫಲವಾದ ನಂತರ ಮಹಾತ್ಮ ಗಾಂಽಯವರು ಮುಂಬೈಯಲ್ಲಿ ಹೋರಾಟಕ್ಕಿಳಿದು ‘ಮಾಡು ಇಲ್ಲವೇ ಮಡಿ’ ಎಂಬ ಕರೆ ನೀಡಿದರು.
ಇದು ದೇಶಾದ್ಯಂತ ಮಿಂಚಿನ ಸಂಚಾರ ಉಂಟು ಮಾಡಿತು. ಕೊನೆಗೆ ಬ್ರಿಟಿಷರು ಗಾಂಧೀಜಿಯನ್ನು ಬಂಧಿಸಿ ಗೃಹಬಂಧನದಲ್ಲಿಟ್ಟರು. ಮಹಾತ್ಮರ ಬಂಧನದ ನಂತರ ಜೆ.ಪಿ. ನಾರಾಯಣ್, ಅರುಣಾ ಆಸಿಫ್ ಅಲಿ ಮೊದ ಲಾದ ನಾಯಕರು ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಚಳವಳಿ ತೀವ್ರವಾಗುತ್ತಿರುವುದನ್ನು ಗ್ರಹಿಸಿದ ಬ್ರಿಟಿಷರು, ಬಹುತೇಕ ಪ್ರಮುಖ ನಾಯಕರನ್ನು ಜೈಲಿಗಟ್ಟಿದರು. ಆದರೆ ನಾಯಕರಿಲ್ಲದೆಯೂ ಚುರುಕು ಹೆಚ್ಚಿಸಿಕೊಂಡಿದ್ದು ಈ ಚಳವಳಿಯ ಹೆಗ್ಗಳಿಕೆ. ಕಾಂಗ್ರೆಸ್ ಸಿದ್ಧಾಂತಕ್ಕನುಗುಣವಾಗಿ, ಇದು ಭಾರತಕ್ಕೆ ಸ್ವಾತಂತ್ರ್ಯ ನೀಡುವಂತೆ ಬ್ರಿಟಿಷರನ್ನು ಒತ್ತಾಯಿಸುವ ಉದ್ದೇಶದ ಶಾಂತಿಯುತ ಚಳವಳಿಯಾಗಿತ್ತು. ಆದರೆ ಆ ಕಾಲಘಟ್ಟದಲ್ಲಿ ಬ್ರಿಟಿಷ್ ವೈಸರಾಯ್ ಆಗಿದ್ದ ಲಿನ್ಲಿತ್ಗೋ ಈ ಚಳವಳಿಯನ್ನು ‘೧೮೫೭ರಿಂದ ಇದುವರೆಗಿನ ಅತ್ಯಂತ ಗಂಭೀರ ದಂಗೆ’ ಎಂದು ಟೀಕಿಸಿದರು.
ಈ ಚಳವಳಿಯ ಸಂದರ್ಭದಲ್ಲಿ ಸಮಾಜದ ವಿವಿಧ ವರ್ಗದವರಿಗೆ ಗಾಂಧೀಜಿ ನೀಡಿದ ಸೂಚನೆಗಳು ಹೀಗಿದ್ದವು: ? ಸರಕಾರಿ ನೌಕರರು: ನಿಮ್ಮ ಕೆಲಸಕ್ಕೆ ರಾಜೀನಾಮೆ ನೀಡ ಬೇಡಿ, ಆದರೆ ಕಾಂಗ್ರೆಸ್ಗೆ ನಿಷ್ಠೆಯನ್ನು ಘೋಷಿಸಿ. ? ಸೈನಿಕರು: ಸೈನ್ಯದೊಂದಿಗೆ ಇರಿ, ಆದರೆ ದೇಶವಾಸಿಗಳ ಮೇಲೆ ಗುಂಡು ಹಾರಿಸುವು ದನ್ನು ತಡೆಯಿರಿ. ? ರೈತರು: ಜಮೀನ್ದಾರರು ಸರಕಾರದ ವಿರೋಽಗಳಾಗಿದ್ದರೆ ಒಪ್ಪಿದ ಬಾಡಿಗೆಯನ್ನು ಪಾವತಿಸಿ; ಅವರು ಸರಕಾರದ ಪರವಾಗಿದ್ದರೆ ಬಾಡಿಗೆ ಪಾವತಿಸದಿರಿ. ? ವಿದ್ಯಾರ್ಥಿಗಳು: ಸಾಕಷ್ಟು ಆತ್ಮವಿಶ್ವಾಸವಿದ್ದರೆ ಅಧ್ಯಯನ ವನ್ನು ಬಿಡಬಹುದು. ? ರಾಜಕುಮಾರರು: ಜನರನ್ನು ಬೆಂಬಲಿಸಿ ಮತ್ತು ಅವರ ಸಾರ್ವಭೌಮತ್ವವನ್ನು ಸ್ವೀಕರಿಸಿ.
ಮಹಾತ್ಮ ಗಾಂಧಿಯವರ ಕರೆಗೆ ಜನರು ಉತ್ಸಾಹದಿಂದ ಸ್ಪಂದಿಸಿದರು. ಆದರೆ ಅವರ ನಾಯಕತ್ವದ ಅನುಪಸ್ಥಿತಿಯಲ್ಲಿ ಚಳವಳಿ ದಾರಿತಪ್ಪಿ ಹಿಂಸಾಚಾರದ ಘಟನೆಗಳು ಸಂಭವಿಸಿ ದವು, ಸರಕಾರಿ ಸ್ವತ್ತುಗಳಿಗೆ ಹಾನಿಯಾದವು. ಅನೇಕ ಕಟ್ಟಡ ಗಳಿಗೆ ಬೆಂಕಿ ಹಚ್ಚಲಾಯಿತು. ವಿದ್ಯುತ್ ಸಂಪರ್ಕಗಳು ಕಡಿತ ಗೊಂಡವು, ಸಾರಿಗೆ-ಸಂಪರ್ಕ ಮಾರ್ಗಗಳಿಗೆ ಅಡಚಣೆ ಒದಗಿದವು. ಕೆಲ ರಾಜಕೀಯ ಪಕ್ಷಗಳು ಈ ಚಳವಳಿಗೆ ಬೆಂಬಲ ನೀಡಲಿಲ್ಲ. ಮುಸ್ಲಿಂ ಲೀಗ್, ಕಮ್ಯುನಿಸ್ಟ್ ಪಾರ್ಟಿ ಆ- ಇಂಡಿಯಾ ಮೊದಲಾದವುಗಳಿಂದ ಚಳವಳಿಗೆ ವಿರೋಧವಿತ್ತು. ಆಂದೋಲನವು ತ್ವರಿತ -ಲಿತಾಂಶಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂಬ ಭಾವನೆಯು ಅನೇಕ ರಾಷ್ಟ್ರೀಯವಾದಿಗಳನ್ನು ಖಿನ್ನತೆಗೆ ಒಳಪಡಿಸಿತು.
ಕಾಂಗ್ರೆಸ್ನ ಕೆಲ ವಿರೋಧಿಗಳು ಗಾಂಧಿಯವರನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದರು. ಈ ವೇಳೆಗೆ ಸುಭಾಷ್ಚಂದ್ರ ಬೋಸರು ಭಾರತೀಯ ರಾಷ್ಟ್ರೀಯ ಸೇನೆ ಹಾಗೂ ಆಜಾದ್ ಹಿಂದ್ ಸೇನೆಯನ್ನು ದೇಶದ ಹೊರಗಿನಿಂದ ಸಂಘಟಿಸುತ್ತಿದ್ದರು. ದೇಶಾ ದ್ಯಂತ ಧರಣಿ, ಪ್ರತಿಭಟನೆಗಳು ನಡೆದವು. ಈ ಚಳವಳಿಗೆ ಕಮ್ಯು ನಿಸ್ಟ್ ಗುಂಪಿನ ಬೆಂಬಲದ ಕೊರತೆಯ ಹೊರತಾಗಿಯೂ ಕಾರ್ಮಿಕರು ಕಾರ್ಖಾನೆಗಳಲ್ಲಿ ಕೆಲಸ ಮಾಡದೆ ಬೆಂಬಲವನ್ನು ನೀಡಿದರು. ಬಲ್ಲಿಯಾ, ತಮ್ಲುಕ್, ಸತಾರಾ ಮೊದಲಾದ ಪ್ರದೇಶಗಳಲ್ಲಿ ಸಮಾನಾಂತರ ಸರಕಾರಗಳನ್ನು ಕೂಡ ಸ್ಥಾಪಿಸ ಲಾಯಿತು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಮೈಸೂರು ಪ್ರಾಂತ್ಯ ಮೊದಲಾದವು ಚಳವಳಿಯ ಮುಖ್ಯ ಪ್ರದೇಶಗಳೆನಿಸಿಕೊಂಡವು. ೧೯೪೪ರವರೆಗೆ ಈ ಚಳವಳಿ ನಡೆಯಿತು.
‘ಬ್ರಿಟಿಷರೇ, ಭಾರತವನ್ನು ಬಿಟ್ಟು ತೊಲಗಿ’ ಎಂಬ ಘಂಟಾ ಘೋಷ ಮೊಳಗಿದ ಈ ಚಳವಳಿಯಲ್ಲಿ ಬ್ರಿಟಿಷ್ ಅಂದಾಜಿನ ಪ್ರಕಾರ ೧,೦೨೮ ಮಂದಿ ಕೊಲ್ಲಲ್ಪಟ್ಟು ೩,೧೨೫ ಮಂದಿ ಗಾಯಾಳುಗಳಾದರು. ೧ ಲಕ್ಷಕ್ಕೂ ಹೆಚ್ಚು ಜನರ ಬಂಧನ ವಾಯಿತು. ಗಣನೀಯ ಸಂಖ್ಯೆಯಲ್ಲಿ ಅಧಿಕಾರಿಗಳ ಸಾವು, ಗಾಯಗೊಳ್ಳುವಿಕೆ ಮತ್ತು ಬಂಧನಗಳೂ ಆದವು. ಭಾರತದ ಮೇಲಿನ ಬ್ರಿಟಿಷ್ ವಸಾಹತುಶಾಹಿಯ ಆಳ್ವಿಕೆ ಯನ್ನು ತಕ್ಷಣವೇ ಕೊನೆಗೊಳಿಸಬೇಕು, ಎಲ್ಲ ರೀತಿಯ ಫ್ಯಾಸಿಸಂ ಮತ್ತು ಸಾಮ್ರಾಜ್ಯಶಾಹಿ ವರ್ತನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮುಕ್ತ ಭಾರತದ ಬದ್ಧತೆಯ ಘೋಷಣೆ ಮಾಡಬೇಕು ಎಂಬುದು ಈ ಚಳವಳಿಯ ಆಗ್ರಹ ವಾಗಿತ್ತು. ಕ್ವಿಟ್ ಇಂಡಿಯಾ ಚಳವಳಿಯ ದನಿ ಮೈಸೂರು ಪ್ರಾಂತ್ಯ ದಲ್ಲೂ ಪ್ರತಿಧ್ವನಿಸಿತು.
ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಇದಕ್ಕೆ ಸಾಕ್ಷಿಯಾಯಿತು. ತಾಲೂಕಿನ ಈಸೂರು ಗ್ರಾಮದಲ್ಲಿ ಬ್ರಿಟಿಷರು ಮತ್ತು ಸ್ವಾತಂತ್ರ್ಯ ಹೋರಾಟ ಗಾರರ ನಡುವೆ ಘರ್ಷಣೆ ತೀವ್ರಗೊಂಡು, ವಿಕೋಪಕ್ಕೆ ತಿರುಗಿ ಹಲವರನ್ನು ಜೀವಂತ ಸುಟ್ಟು ಹಾಕಲಾಯಿತು. ೧೯೪೨ರ ಸೆಪ್ಟೆಂಬರ್ ೨೭ರಂದು ಈಸೂರಿನ ವೀರಭದ್ರೇಶ್ವರ ದೇವಾಲಯದ ಮೇಲೆ ಪ್ರತ್ಯೇಕ ಧ್ವಜವನ್ನು ಹಾರಿಸಲಾಯಿತು. ಹೀಗಾಗಿ ಈಸೂರು, ಸ್ವಾತಂತ್ರ್ಯ ಪಡೆದ ಭಾರತದ ಮೊದಲ ಗ್ರಾಮ ಎಂದು ಘೋಷಿಸಲ್ಪಟ್ಟಿತು. ಸ್ವಾತಂತ್ರ್ಯವನ್ನು ಪಡೆಯಲು ತಮ್ಮ ಪ್ರಾಣವನ್ನೇ ಅರ್ಪಿಸಿದ ಕಲಿಗಳಿಂದಾಗಿ ಈ ಊರು ದೇಶದೆಲ್ಲೆಡೆ ಹೆಮ್ಮೆಗೆ ಪಾತ್ರವಾಯಿತು.
ಒಟ್ಟಾರೆಯಾಗಿ, ೧೯೪೨ರ ನಂತರದಲ್ಲಿ ಬ್ರಿಟಿಷರ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧದ ದನಿ ತೀವ್ರವಾಗಿ ಸೋಟಗೊಂಡಿತು. ಭಾರತದಲ್ಲಿ ನಡೆಯುತ್ತಿದ್ದ ಈ ಹೋರಾಟವು ಅತ್ತ ಆಫ್ರಿಕಾದಲ್ಲಿದ್ದ ಬ್ರಿಟಿಷ್ ವಸಾಹತುಶಾಹಿ ಗಳ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾಯಿತು, ವಿಶ್ವದ ವಿವಿಧೆಡೆಯೂ ಇಂಥ ಹೋರಾಟಕ್ಕೆ ಸೂರ್ತಿ ನೀಡಿತು. ಭಾರತದ ರೀತಿಯಲ್ಲಿ ತಾವೂ ಹೋರಾಟ ಮಾಡಿದರೆ ದಾಸ್ಯದಿಂದ ಮುಕ್ತಿ ಹೊಂದಬಹುದು ಎಂಬ ಭಾವನೆ ಇಂಥ ಸಂತ್ರಸ್ತ ಜನರಲ್ಲಿ ಮೊಳಕೆ ಒಡೆಯಿತು. ಇದು ಕೂಡ ಭಾರತ ಹುಟ್ಟುಹಾಕಿದ ‘ಕ್ವಿಟ್ ಇಂಡಿಯಾ’ ಚಳವಳಿಗೆ ಸಿಕ್ಕ ದೊಡ್ಡ ಯಶಸ್ಸು ಎನ್ನಬಹುದು.