Thursday, 12th December 2024

ಸ್ವಾತಂತ್ರ‍್ಯ ಪ್ರತಿಮೆಯ ಬಳಿ ಕನ್ನಡದ ಕಂಪು

ಶಶಾಂಕಣ

shashidhara.halady@gmail.com

ಈ ಮಹಾನಗರದ ಬೀದಿಗಳಲ್ಲಿ ಪ್ರವಾಸಿಗರ ನಡುವೆ ಸಂಚರಿಸುತ್ತಿರುವಾಗ, ಜನರ ಗದ್ದಲ, ಸಂಭ್ರಮ; ಆ ನಡುವೆ ಒಂದು ರೀತಿಯ ವಾಸನೆ ತೇಲಿಬರುತ್ತದೆ – ಬಿಜಿ ಬಿಜಿ ಅತ್ತಿತ್ತ ಓಡಾಡುವ ಜನರಲ್ಲಿ ಹಲವರು, ಬಾಯಿಯಿಂದ ಹೊಗೆ ಬಿಡುತ್ತಾ ನಡೆಯುತ್ತಿದ್ದರು. ಆದರೆ ಅವರು ಪುಸು ಪುಸು ಬಿಡುವ ಹೊಗೆಯ ವಾಸನೆಯು, ನಮ್ಮ ದೇಶದ ಸಿಗರೆಟ್ ವಾಸನೆಯ ರೀತಿ ಇಲ್ಲ! ‘ಯಾಕೊ ಒಂದು ರೀತಿಯ ಕಾಪಿಯ ವಾಸನೆ ಬಂದಂತೆ ಇದೆ’ ಎಂದಾಗ, ಜತೆಯಲ್ಲಿದ್ದ ನನ್ನ ಮಗಳು ಹೇಳಿದಳು ‘ಅದು ಕಾಫಿ ಅಲ್ಲ, ಮೇರುವಾನ ವಾಸನೆ’.

ಸ್ವಾತಂತ್ರ್ಯಕ್ಕೆ ಹೆಸರಾದ ಈ ನಗರದ ಇದೊಂದು ಅಂಶವನ್ನು ನಾವು ಜೀರ್ಣಿಸಿಕೊಳ್ಳುವುದು ತುಸು ಕಷ್ಟವೇ – ಅದೇನೆಂದರೆ, ನ್ಯೂಯಾರ್ಕ್‌ನಲ್ಲಿ ಮೇರುವಾನ (ಕೆನ್ನಾಬಿಸ್, ವೀಡ್) ಸೇವನೆಗೆ ಅನುಮತಿ ಇದೆ. ಇಲ್ಲಿ ರಾಜ್ಯ ಮತ್ತು ಫೆಡರಲ್ ಎಂಬ ಎರಡು ಹಂತದ ವ್ಯವಸ್ಥೆಯ ಕಾನೂನುಗಳ ನಿಯಂತ್ರಣವಿದ್ದರೂ, ನ್ಯೂಯಾರ್ಕ್‌ನಲ್ಲಿ ಮೇರು ವಾನವನ್ನು ಬಹಿರಂಗವಾಗಿ ಸೇವಿಸಬಹುದು; ಮಾತ್ರವಲ್ಲ, ‘ನಮ್ಮ ಅಂಗಡಿಯಲ್ಲಿ ವೀಡ್ ದೊರೆಯುತ್ತದೆ’ ಎಂಬ ಫಲಕವನ್ನು ಪ್ರದರ್ಶಿಸಿ, ಮಾರಾಟ ಮಾಡುವ ಅಂಗಡಿಗಳೂ ಇಲ್ಲಿ ಸಾಮಾನ್ಯ. ನ್ಯೂಯಾರ್ಕ್ ನಗರದ ರಸ್ತೆಗಳಲ್ಲಿ ಓಡಾಡುತ್ತಾ, ಬಾಯಿಂದ ಹೊಗೆ ಬಿಡುವ ಸ್ವಾತಂತ್ರ್ಯವೂ ಸಹ ಪ್ರವಾಸಿಗರಿಗೆ ಇರುವುದರಿಂದ, ‘ಅದರ’ ವಾಸನೆಯನ್ನು ನಮ್ಮಂತಹ ಪ್ರವಾಸಿಗರು ಕುಡಿಯುವುದು ಸಹ ಸಾಮಾನ್ಯ ಎನಿಸಿದೆ.

ಬೆಂಗಳೂರಿನ ಬೀದಿಗಳ ಜನದಟ್ಟಣೆಯನ್ನು ನೆನಪಿಸುವ ಈ ಮಹಾನಗರದ ಬೀದಿಗಳಲ್ಲಿ ಓಡಾಡುವಾಗ, ‘ಹೊಗೆ ಬಿಡುವ’ ಪ್ರವಾಸಿಗರ ಕೃಪೆಯಿಂದ,
ಅದರ ‘ಕಾಫಿ’ ಹೋಲುವ ವಾಸನೆ ನಮಗೂ ಬಡಿಯಬಹುದು! ‘ಕಾಫಿ’ ವಾಸನೆ ಎಂದು ನಾನು ಹೋಲಿಕೆಗೆ ಹೇಳಿದರೂ, ಅದು ಕಾಫಿಯ ವಾಸನೆ ಅಲ್ಲ, ಮಾದಕ ವಸ್ತು ಎನಿಸಿರುವ ಮೆರುವಾನದ ವಾಸನೆ. ಇದನ್ನು ವೀಡ್, ಕೆನ್ನಾಬಿಸ್ ಎಂದೂ ಕರೆಯಲಾಗಿದ್ದು, ನಮ್ಮ ದೇಶದ ಭಂಗಿ, ಚರಸ್‌ಗಳು ಇದರ ಸಂಬಂಧಗಳು. ವ್ಯತ್ಯಾಸವೆಂದರೆ, ನಮ್ಮ ದೇಶದಲ್ಲಿ ಇದು ಬಹುಮಟ್ಟಿಗೆ ಬ್ಯಾನ್ ಆಗಿದೆ; ಆದರೆ ನ್ಯೂಯಾರ್ಕ್ ಸೇರಿದಂತೆ, ಯುಎಸ್‌ನ ಹಲವು ರಾಜ್ಯಗಳಲ್ಲಿ ಇದರ ಸೇವನೆಗೆ ಷರತ್ತುಬದ್ಧ ಅನುಮತಿ ಇದೆ.

ನ್ಯೂಯಾರ್ಕ್‌ನ ಬೃಹತ್ ಕಟ್ಟಡಗಳನ್ನು, ಝಗಮಗದ ವಾತಾವರಣವನ್ನು ನೋಡುತ್ತಾ ಓಡಾಡುವ ನಮ್ಮಂತಹ ಪ್ರವಾಸಿಗರು ಅದರ ವಾಸನೆಯನ್ನು ಸೇವಿಸುವುದು ಅನಿವಾರ್ಯ ಎನ್ನಲೂಬಹುದು! ಆ ರೀತಿ ಸೇವಿಸುವವರ ಹಲವರು ಅಕ್ಕಪಕ್ಕದಲ್ಲಿ ಹಾದುಹೋದಾಗ ಬರುವ ವಾಸೆ, ಹೊಗೆ ಕುಡಿದು, ಸಣ್ಣಗೆ ‘ಅಮಲು’ ಸಹ ಏರಬಹುದೇ ಎಂಬ ಗುಮಾನಿಯೂ ಹುಟ್ಟಬಹುದು!

ನ್ಯೂಯಾರ್ಕ್ ನಗರದ ದೃಶ್ಯಗಳನ್ನು ಬೆರಗಿನಿಂದ ನೋಡುತ್ತಾ ಸಾಗುವ ನನ್ನಂತಹ ಸಾಮಾನ್ಯ ಪ್ರವಾಸಿಗನಿಗೆ, ಪ್ರವಾಸದ ‘ಅಮಲು’ ಎರುವುದಂತೂ ಖಚಿತ. ಯುಎಸ್‌ನ ಅತಿ ದೊಡ್ಡ ನಗರವಿದು; ನೋಡಲು ಲಭ್ಯವಿರುವ ಪ್ರವಾಸಿ ತಾಣಗಳ ಸಂಖ್ಯೆಯೂ ಹಲವು; ಎಲ್ಲವನ್ನೂ ನೋಡುತ್ತಾ ಹೋದರೆ, ಹಲವು ವಾರಗಳೇ ಬೇಕಾಗಬಹುದು – ಆದರೆ, ಪ್ರವಾಸಿಗನ ದೃಷ್ಟಿಯಲ್ಲಿ ಅತಿ ದುಬಾರಿ ನಗರವಿದು! ಡಾಲರ್ ಲೆಕ್ಕದಲ್ಲಿ ಹಣ ಬಿಚ್ಚುತ್ತಾ ಹೋದರೆ, ವೈಭವದ ಹಲವು ಮಜಲುಗಳು ಕೈಗೆ ಸಿಗಬಹುದು. ಇಲ್ಲಿನ ‘ಹಾಪ್ ಇನ್’ ಬಸ್‌ನ ತೆರೆದ ಮಹಡಿಯಲ್ಲಿ ಕುಳಿತು, ಪ್ರವಾಸ ಹೊರಟೆವು.

ನಾವು ಮೊದಲಿಗೆ ನೋಡಿದ್ದು ‘ಟೈಮ್ಸ್ ಸ್ಕ್ವೇರ್’ – ಜಗತ್ತಿನ ಅತಿ ಪ್ರಸಿದ್ಧ ‘ಸ್ಕ್ವೇರ್’ ಇದು. ಬೆಳಕಿನ ಹಲವು ಮಜಲುಗಳ ಒಡ್ಡೋಲಗ, ಗಗನ ಚುಂಬಿಗಳ
ಮೆರವಣಿಗೆಯು ಇಲ್ಲಿ ಪ್ರವಾಸದ ‘ಅಮಲನ್ನು’ ಮನದೊಳಗೆ ಏರಿಸುತ್ತಾ ಹೋಗುತ್ತದೆ. ಅಲ್ಲಿಂದ ಮುಂದೆ ಒಂದೊಂದೇ ಪ್ರವಾಸಿತಾಣಗಳನ್ನು ನೋಡುತ್ತಾ ಹೋದಂತೆ, ‘ನ್ಯೂಯಾರ್ಕ್ ಅಮಲು’ ಬಡಿಸಿಕೊಳ್ಳದ ಪ್ರವಾಸಿಗನೇ ಇಲ್ಲವೇನೊ. ಒಂದಕ್ಕಿಂತ ಒಂದು ಮಿಗಿಲು ಎನ್ನುವ ಆಕರ್ಷಣೆಗಳು, ಉದ್ಯಾನಗಳು, ರಸ್ತೆಗಳು, ಪಾರಂಪರಿಕ ಕಟ್ಟಡಗಳು, ಗಗನ ಚುಂಬಿಗಳು; ಜತೆಗೆ ಐತಿಹಾಸಿಕ ಪರಂಪರೆ ಹೊಂದಿದ ‘ಸ್ವಾತಂತ್ರ್ಯ ಪ್ರತಿಮೆ’ (ಸ್ಟ್ಯಾಚ್ಯೂ ಆಫ್ ಲಿಬರ್ಟಿ), ಬ್ರೂಕ್ಲಿನ್ ಬ್ರಿಜ್‌ನಂತಹ ರಚನೆ ಗಳು.

ನ್ಯೂಯಾರ್ಕ್‌ನಲ್ಲಿ ನೂರು-ಇನ್ನೂರು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಹಲವು ಕಟ್ಟಡಗಳು ಇಂದಿಗೂ ಸುಸ್ಥಿತಿಯಲ್ಲಿರುವುದನ್ನು ಕಾಣಬಹುದು.
ನನ್ನಂತಹ ಸಾಮಾನ್ಯ ಪ್ರವಾಸಿಗನನ್ನು ನಿಬ್ಬೆರಗಾಗಿಸುವ ನ್ಯೂಯಾರ್ಕ್ ದೃಶ್ಯವಂದರೆ, ಅಲ್ಲಿನ ಸಾವಿರಾರು ಗಗನಚುಂಬಿ ಕಟ್ಟಡಗಳು. ೧೫೦ ಮೀಟರ್‌ಗಿಂತ ಹೆಚ್ಚು ಎತ್ತರದ ೩೧೭ ಕಟ್ಟಡಗಳು ಇಲ್ಲಿವೆ ಮತ್ತು ಅವುಗಳಲ್ಲಿ ಹೆಚ್ಚಿನವು, ಸಾಲಾಗಿ ಮೇಲೆದ್ದಿದ್ದು, ಅಲ್ಲಿನ ಸ್ಕೈಲೈನ್‌ನನ್ನೇ ಬದಲಿಸಿವೆ! ಇವುಗಳ ಜತೆ ಸುಮಾರು ೭,೦೦೦ ಬಹುಮಹಡಿ ಕಟ್ಟಡಗಳು ಇಲ್ಲಿವೆ! ಅತಿ ಎತ್ತರದ ಕಟ್ಟಡ ‘ವನ್ ವರ್ಲ್ಡ್ ಟ್ರೇಡ್ ಸೆಂಟರ್’, ೫೪೧ ಮೀಟರ್ ಎತ್ತರವಿದೆ. (ಅವಳಿ ವರ್ಲ್ಡ್ ಟ್ರೇಡ್ ಸೆಂಟರಿಗೆ ವಿಮಾನ ಢಿಕ್ಕಿ ಹೊಡೆದು ಉರುಳಿಸಿದ ಜಾಗದಲ್ಲಿ ನಿರ್ಮಾಣ ಗೊಂಡ ಕಟ್ಟಡ). ಈ ಅಂಕಿಸಂಕಿಗಳು ಒತ್ತಟ್ಟಿಗಿರಲಿ; ಈ ನಗರದಲ್ಲಿ ಇಷ್ಟೊಂದು ಸಂಖ್ಯೆಯ ಗಗನಚುಂಬಿ ಕಟ್ಟಡಗಳಿರುವ ಮಾಹಿತಿ ಇದ್ದರೂ, ಅವುಗಳ ಫೋಟೋ ನೋಡಿದ್ದರೂ, ಸಿನಿಮಾಗಳಲ್ಲಿ ಕಂಡಿದ್ದರೂ, ಕಣ್ಣಾರೆ ಕಂಡಾಗ ಉಂಟಾಗುವ ಬೆರಗು ಬೇರೆಯದೇ ರೀತಿಯದು.

ಮಧ್ಯಮ ಗಾತ್ರದ ಬಹುಮಹಡಿ ಕಟ್ಟಡಗಳ ನಡುವೆ ಮೇಲೆದ್ದಿರುವ ಅತಿ ಎತ್ತರದ ಕಟ್ಟಡಗಳ ಖದರೇ ಬೇರೆ. ೧೯೩೧ರಲ್ಲಿ ನಿರ್ಮಾಣಗೊಂಡ ವರ್ಲ್ಡ್ ಟ್ರೇಡ್ ಸೆಂಟರ್, ೧೯೭೦ರ ತನಕ ಜಗತ್ತಿನ ಅತಿ ಎತ್ತರದ ಕಟ್ಟಡವಾಗಿತ್ತು! ಅದರ ೯೬ನೆಯ ಮಹಡಿಯಲ್ಲಿ ನಿಂತಾಗ, ಕಿಟಕಿಯ ಮೂಲಕ ನ್ಯೂಯಾರ್ಕ್‌ನ ಪಕ್ಷಿನೋಟ ದೊರಕಿತು. ಈ ಒಂದು ಕಟ್ಟಡವು ಇಪ್ಪತ್ತನೆಯ ಶತಮಾನದ ಯುವ ಜನಾಂಗದ ಮೇಲೆ, ಆಧುನಿಕ ಸಮಾಜದ ಮೇಲೆ ಬೀರಿದ ಪ್ರಭಾವ ಗಾಢ, ವಿಶಿಷ್ಟ. ಹಲವು
ಚಲನಚಿತ್ರಗಳಲ್ಲಿ ಈ ಕಟ್ಟಡವು ಒಂದು ಪಾತ್ರದ ರೀತಿಯೇ ಪ್ರದರ್ಶನಗೊಂಡು, ಆ ದಿನಗಳಲ್ಲಿ ಜಗತ್ತಿನ ಎಲ್ಲಾ ದೇಶಗಳು ಅಮೆರಿಕದ ಕಡೆ ಮುಖ ಮಾಡುವಂತಾಯಿತು. (೧೯೩೧ರಲ್ಲಿ ಅದು ನಿರ್ಮಾಣಗೊಂಡಾಗ, ನಮ್ಮಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದು, ಒಂದು ಹಿಡಿ ಉಪ್ಪಿಗಾಗಿ ನಾವು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದೆವು.) ಜಗತ್ತಿನ ಹಲವು ಜನಾಂಗಗಳ, ದೇಶಗಳ ಜನರ ಅಂತಿಮ ಗುರಿಯೇ ‘ಅಮೆರಿಕದಲ್ಲಿ ವಾಸ’ ಎಂಬಂತಾಗಲು, ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಂತಹ ಬಹುಮಹಡಿ ಕಟ್ಟಡಗಳ ‘ಅಮಲು’ ಸಹ ಒಂದು ಕಾರಣ.

ಇಂದು ಈ ಕಟ್ಟಡವನ್ನು ಮೀರಿಸುವ ಹಲವು ಕಟ್ಟಡಗಳು ನ್ಯೂಯಾರ್ಕ್‌ನಲ್ಲಿ, ಬೇರೆ ದೇಶ ಗಳಲ್ಲಿ ಇವೆ; ಆದರೆ ಎಂಪೈರ್ ಸ್ಟೇಟ್ ಕಟ್ಟಡಕ್ಕೆ ಇರುವ ಐಕಾನಿಕ್, ಐತಿಹಾಸಿಕ ಪ್ರಭಾವಳಿ ಮಾತ್ರ ಅನನ್ಯ. ನ್ಯೂಯಾರ್ಕ್ ನಗರದ ಜನಸಂಖ್ಯೆ ಸುಮಾರು ೮೦ ಲಕ್ಷ; ಅದರಲ್ಲಿ ಶೇ.೪೦ರಷ್ಟು ಜನರ ಮೂಲವು ಜಗತ್ತಿನ ವಿವಿಧ ದೇಶಗಳಲ್ಲಿದೆ; ಅವರಲ್ಲಿ ದಕ್ಷಿಣ ಅಮೆರಿಕದವರಿದ್ದಾರೆ, ಚೀನಾದವರಿದ್ದಾರೆ, ಯುರೋಪಿನ ವಿವಿಧ ದೇಶಗಳಿಂದ ಬಂದವರಿದ್ದಾರೆ, ಭಾರತದವರೂ ಇದ್ದಾರೆ. ಬೇರೆ ದೇಶದ ಪ್ರವಾಸಿಗರಂತೂ ಇಲ್ಲಿನ ಬೀದಿಗಳಲ್ಲಿ ಪ್ರವಾಹದ ರೀತಿ ಹರಿದಾಡುತ್ತಲೇ ಇರುತ್ತಾರೆ.

ನ್ಯೂಯಾರ್ಕ್ ಮತ್ತು ಬ್ರೂಕ್ಲಿನ್ ನಡುವೆ ಹರಿಯುತ್ತಿರುವ ಹಡ್ಸನ್ ನದಿಗಡ್ಡಲಾಗಿ ೧೮೭೫ರಲ್ಲಿ ನಿರ್ಮಿಸಲಾಗಿರುವ ಬ್ರೂಕ್ಲಿನ್ ಬ್ರಿಜ್‌ನ ಮೇಲೆ ನಡೆದಾಡುವ ಪ್ರವಾಸಿ ಗರನ್ನು ಕಂಡಾಗ, ‘ಪ್ರವಾಸಿಗರ ಪ್ರವಾಹ’ದ ಚಿತ್ರಣ ಸ್ಪಷ್ಟವಾಗುತ್ತದೆ. ಜನರು ನಡೆಯಲೆಂದೇ ಇರುವ ಮೇಲ್ಭಾಗದಲ್ಲಿ ಚೀನಾದವರು, ಯುರೋಪಿಯ
ನರು, ದಕ್ಷಿಣ ಅಮೆರಿಕದವರು, ಇನ್ನೂ ಯಾವ್ಯಾವುದೋ ದೇಶದವರು ಮತ್ತು ಭಾರತೀಯ ಪ್ರವಾಸಿಗರು ಕಾಣಸಿಕ್ಕರು. ಬ್ರೂಕ್ಲಿನ್ ಸೇತುವೆಯ ನಿರ್ಮಾಣದ ಇತಿಹಾಸವನ್ನು ಗಮನಿಸಿದರೆ, ನ್ಯೂಯಾರ್ಕ್ ಮತ್ತು ಆ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಅದರ ಕೊಡುಗೆ ಮಹತ್ತರ ಎಂಬುದರ ಅರಿವಾಗುತ್ತದೆ. ನಮ್ಮ ದೇಶವು ಬ್ರಿಟಿಷ್ ಸರಕಾರದ ನೇರ ಆಳ್ವಿಕೆಗೆ ಒಳಗಾದ ಸಂದರ್ಭದಲ್ಲಿ ಅದು ನಿರ್ಮಾಣಗೊಂಡಿತು; ಮೊದಲ ಸ್ವಾತಂತ್ರ್ಯ ಸಂಗ್ರಾಮದ (೧೮೫೭) ಹೊಡೆತ ವನ್ನು, ಸೋಲನ್ನು ಎದುರಿಸಿ ಕೆಲವೇ ವರ್ಷಗಳಾಗಿದ್ದವು; ಆ ಕಾಲದಲ್ಲಿ ನ್ಯೂಯಾರ್ಕ್‌ನಲ್ಲಿ ಈ ಗಟ್ಟಿಮುಟ್ಟಾದ ಸೇತುವೆ ನಿರ್ಮಾಣಗೊಂಡಿತು.

೧೮೭೫ರಲ್ಲಿ ನಿರ್ಮಾಣ ಗೊಂಡ ಈ ಸೇತುವೆಯು, ಇಂದಿಗೂ ಅಂದರೆ, ೧೫೦ ವರ್ಷಗಳ ನಂತರವೂ ಭದ್ರವಾಗಿದೆ, ಪ್ರತಿದಿನ ಸಾವಿರಾರು ಕಾರುಗಳು ಇದರ ಮೇಲೆ ಸಂಚರಿಸುತ್ತವೆ! ಸೇತುವೆಯ ಮೇಲ್ಭಾಗದಲ್ಲಿ ಸಾವಿರಾರು ಪ್ರವಾಸಿಗರು ಓಡಾಡುತ್ತಿರುವಾಗಲೇ, ಕೆಳಭಾಗದಲ್ಲಿ ಸಾವಿರಾರು ಕಾರುಗಳ ಓಡಾಟ! ಕೆಲವು ಯುವ ಪ್ರವಾಸಿಗರು ಈ ಸೇತುವೆಯ ಸರಳುಗಳಿಗೆ, ಕಿಂಡಿ ಗಳಿಗೆ ಬೀಗ ಹಾಕುತ್ತಿದ್ದರು! ತಮ್ಮ ಪ್ರೇಮ ಶಾಶ್ವತ ವಾಗಿರಲಿ ಎಂಬ ಹಾರೈಕೆಯೊಂದಿಗೆ ಅಲ್ಲಿ ಬೀಗ
ಹಾಕುವ ಪದ್ಧತಿ! ಸೇತುವೆಯುದ್ದಕ್ಕೂ ಸಾವಿರಾರು ಪ್ರೇಮಿಗಳು ಹಾಕಿದ್ದ ಬೀಗಗಳು ಕಾಣಿಸುತ್ತಿದ್ದವು!

ನಾನು ಅದರ ಮೇಲೆ ನಿಂತಿರುವಾಗಲೇ, ಬಿಳಿ ಚರ್ಮದ ಯುವಕನೊಬ್ಬ ಒಂದು ಬೀಗವನ್ನು ಅಲ್ಲಿನ ತಂತಿಯೊಂದಕ್ಕೆ ಹಾಕಿ, ಮುತ್ತಿಕ್ಕಿದ. ಇದು ಆಧುನಿಕ ಜನಪದದ ಒಂದು ಮೂಢನಂಬಿಕೆ! ಸ್ವಚ್ಚಂದ ಪ್ರೀತಿಗೆ, ಬಹಿರಂಗ ಚುಂಬನಕ್ಕೆ, ಗೇ ಮದುವೆಗೆ, ಅಧಿಕ ಸ್ವಾತಂತ್ರ್ಯಕ್ಕೆ ಹೆಸರಾಗಿರುವ ನ್ಯೂಯಾರ್ಕ್ ನಗರದಲ್ಲಿ, ತಮ್ಮ ಪ್ರೀತಿ ಶಾಶ್ವತ ವಾಗಿರಲಿ ಎಂದು ಬ್ರೂಕ್ಲಿನ್ ಸೇತುವೆ ಸರಳಿಗೆ ಬೀಗ ಹಾಕುವುದು ಒಂದು ರೂಪಕದಂತೆ ಕಂಡಿತು. ನ್ಯೂಯಾರ್ಕ್ ನಗರದ ‘ಸ್ವಾತಂತ್ರ್ಯ ದೇವಿ’ ಪ್ರತಿಮೆಯೇ, ಆ ನಗರದ, ಆ ದೇಶದ ಜನರ ಸ್ವಾತಂತ್ರ್ಯಕ್ಕೆ ಮತ್ತೊಂದು ರೂಪಕ ತಾನೆ! ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಹರಿದು ಬರುವ ತಾಣಗಳಲ್ಲಿ
ಒಂದಾದ ‘ಸ್ವಾತಂತ್ರ್ಯ ಪ್ರತಿಮೆ’ (ಸ್ಟ್ಯಾಚ್ಯೂ ಆಫ್ ಲಿಬರ್ಟಿ) ಇರುವ ಪುಟ್ಟ ದ್ವೀಪಕ್ಕೆ ಫೇರಿಯಲ್ಲಿ ಪಯಣಸುವ ಅನುಭವವೇ ವಿಶಿಷ್ಟ.

ನಮ್ಮ ನಾವೆಯು ದಡವನ್ನು ಬಿಟ್ಟು ದೂರ ಚಲಿಸಿದಂತೆಲ್ಲಾ, ದಡದಲ್ಲಿರುವ ನೂರಾರು ಬಹುಮಹಡಿ ಕಟ್ಟಡಗಳು ಸಾಲಾಗಿ ಮೆರವಣಿಗೆ ಹೊರಟಂತೆ ಕಾಣುತ್ತವೆ!
೧೮೬೦ರ ದಶಕದಲ್ಲಿ ‘ಗುಲಾಮಗಿರಿ’ಯನ್ನು ನಿಷೇಧಿಸಿದ ನಂತರ, ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ವನ್ನು ಅಮೆರಿಕದಲ್ಲಿ ಘೋಷಿಸಲಾಯಿತು. ಆ
ಸಂಭ್ರಮದ ಭಾಗವೆನ್ನುವಂತೆ, ಫ್ರೆಂಚ್ ವಾಸ್ತುಶಿಲ್ಪಿ ಫ್ರೆಡರಿಕ್ ಆಗಸ್ಟೆ ಬರ್ತೋಲ್ಡಿಯು ನಿರ್ಮಿಸಿದ ಈ ಕಂಚಿನ ಪ್ರತಿಮೆಯು, ನ್ಯೂಯಾರ್ಕ್, ಅಮೆರಿಕ
ಮತ್ತು ಜಗತ್ತಿನ ಎಲ್ಲರಿಗೂ ಸ್ವಾತಂತ್ರ್ಯ ಸಂದೇಶ ಸಾರುವ ರೂಪಕವಾಗಿ ತಲೆಎತ್ತಿ ನಿಂತಿತು.

ಜತೆಗೆ, ೧೮೯೨ -೧೯೪೦ ಅವಧಿಯಲ್ಲಿ ದೂರದ ದೇಶಗಳಿಂದ ನ್ಯೂಯಾರ್ಕ್‌ಗೆ ವಲಸೆ ಬಂದ ಲಕ್ಷಾಂತರ ಜನರು, ಕೈಯಲ್ಲಿ ಬೆಳಕನ್ನು ಹಿಡಿದ ಈ ಮಹಿಳೆ ತಮ್ಮನ್ನು ಸ್ವಾಗತಿಸುತ್ತಿದೆ ಎಂದೇ ಸಂಭ್ರಮಿಸಿದರು! ಪಕ್ಕದಲ್ಲಿರುವ ‘ಎಲಿಸ್ ಐಲ್ಯಾಂಡ್’ ಆ ಎಲ್ಲಾ ವಲಸೆಗಾರರು ಅಧಿಕೃತವಾಗಿ ಅಮೆರಿಕವನ್ನು ಪ್ರವೇಶಿಸುವ ದಾಖಲೀಕರಣಕ್ಕೆ ಅಗತ್ಯವಿರುವ ಕಚೇರಿಗಳನ್ನು ಹೊಂದಿತ್ತು. ಯುರೋಪಿನ ಹಲವು ದೇಶಗಳು, ಚೀನಾ, ಆಫ್ರಿಕಾ ಮೊದಲಾದ ಪ್ರದೇಶದಿಂದ ಅಕ್ಷರಶಃ ಲಕ್ಷಾಂತರ ಜನರು ಅಮೆರಿಕಕ್ಕೆ ಖಾಯಂ ಆಗಿ ವಲಸೆ ಬಂದು, ಬದುಕನ್ನು ಕಟ್ಟಿಕೊಂಡರೂ, ೧೯೪೦ಕ್ಕಿಂತ ಮುಂಚಿನ ಆ ವರ್ಷಗಳಲ್ಲಿ ಭಾರತದಿಂದ
ಯುಎಸ್‌ಗೆ ವಲಸೆ ಬಂದವರ ಸಂಖ್ಯೆ ತೀರಾ ಕಡಿಮೆ; ಏಕೆಂದರೆ, ಅಂದು ನಮ್ಮನ್ನು ಆಳುತ್ತಿದ್ದ ಬ್ರಿಟಿಷರು, ಅದಕ್ಕೆ ಸುಲಭವಾಗಿ ಅನುಮತಿ ನೀಡುತ್ತಿರಲಿಲ್ಲ!

ಸ್ವಾತಂತ್ರ್ಯ ದೇವಿಯ ಪ್ರತಿಮೆಯ ಪಾದದ ಬಳಿಗೆ ಹೋಗಲು, ೪೭ ಮೀಟರ್ ಎತ್ತರದ ಕಟ್ಟೆ ಯೊಳಗೆ, ೧೯೬ ಮೆಟ್ಟಿಲುಗಳಿವೆ; ಜತೆಗೆ, ಈಚಿನ ವರ್ಷಗಳಲ್ಲಿ ವಿಗ್ರಹದ ಪಾದದ ಹತ್ತಿರದ ಭಾಗಕ್ಕೆ ತೆರಳಲು ಲಿಫ್ಟ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಆ ತುದಿಯನ್ನೇರಿ, ಸುತ್ತಲಿನ ಸಮುದ್ರ ದೃಶ್ಯಗಳನ್ನು, ಅನತಿ ದೂರದ ನ್ಯೂಯಾರ್ಕ್ ನಗರದ ಸಾವಿರಾರು ಗಗನ ಚುಂಬಿ ಕಟ್ಟಡಗಳನ್ನು ನೋಡುತ್ತಾ ನಿಲ್ಲುವ ಅನುಭವವೇ ವಿಭಿನ್ನ. ಜಗತ್ತಿನ ಯಾವ್ಯಾವುದೋ ದೇಶಗಳಿಂದ, ಎದುರಿದ್ದ ಸಮುದ್ರ ಮಾರ್ಗವಾಗಿ ಬಂದು, ಸ್ವಾತಂತ್ರ್ಯ ಪ್ರತಿಮೆಯನ್ನು ನೋಡುತ್ತಾ, ಪಕ್ಕದ ಎಲಿಸ್ ಐಲ್ಯಾಂಡ್‌ನಲ್ಲಿ ಇಳಿದು, ವಲಸೆ ಪ್ರಕ್ರಿಯೆಗೆ ಒಳಪಟ್ಟು, ತಮ್ಮ ವಿವರಗಳನ್ನು ದಾಖಲಿಸಿ, ನ್ಯೂಯಾರ್ಕ್ ಪ್ರವೇಶಿಸಿದ ವಲಸೆ ಗಾರರು ಆ ನಗರವನ್ನು ಬೆಳೆಸಿದರು, ಅಮೆರಿಕದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಿದರು; ಇವೆಲ್ಲಾ ಐತಿಹಾಸಿಕ ಕಥನಗಳನ್ನು ನೆನಪಿಸಿಕೊಳ್ಳುತ್ತಾ, ಪ್ರತಿಮೆಯ ಪಾದದ ಬಳಿಯಿರುವ ಅಗಲ ಕಿರಿದಾದ ದಾರಿಯಲ್ಲಿ ನಿಂತು, ಸಮುದ್ರದ ಮೇಲೆ ಬೀಸಿ
ಬರುತ್ತಿದ್ದ ತಂಗಾಳಿಗೆ ಮೈಒಡ್ಡಿ ಸಂಭ್ರಮಿಸುತ್ತಿದ್ದಾಗ, ಕನ್ನಡ ಮಾತುಗಳು ಕೇಳಿಸಿದವು.

ಜತೆಗೆ ‘ಆಟೊ ರಾಜ’ ಎಂದು ಕನ್ನಡದ ಅಕ್ಷರಗಳಿದ್ದ ಬಿಳಿ ಟಿ-ಷರ್ಟ್ ಧರಿಸಿದ್ದ ಒಬ್ಬ ಸಜ್ಜನರು ಎದುರಿನಲ್ಲಿದ್ದರು. ಸದ್ಯ ನ್ಯೂಜೆರ್ಸಿಯಲ್ಲಿರುವ, ವಿಶ್ವಾಸ್,
ಬಾಯ್ತುಂಬಾ ಕನ್ನಡ ಮಾತನಾಡಿದರು. ವಿಶ್ವಾಸ್ ದಂಪತಿಗಳು ಸದ್ಯ ವರ್ಜೀನಿಯಾದಲ್ಲಿ ನೆಲೆಸಿದ್ದಾರೆ. ಅವರ ಜತೆ ಬಂದಿದ್ದ ಬೆಂಗಳೂರಿನ ಬಂಧು
ಗಳೊಂದಿಗೆ, ಆ ಎತ್ತರದಲ್ಲಿ ನಿಂತು ಕನ್ನಡದಲ್ಲಿ ಬಾಯ್ತುಂಬಾ ಮಾತನಾಡಿದೆವು. ಆ ದೂರದೇಶ ದಲ್ಲಿ ಕನ್ನಡದ ‘ಕಂಪು’ ನನ್ನನ್ನು ಆವರಿಸಿತು; ಬೇರೆಲ್ಲಾ ‘ಅಮಲು’ಗಳಿಗಿಂತಾ, ಕನ್ನಡದ ‘ಕಂಪು’ ಮಿಗಿಲು ಎನಿಸಿತು; ಆತ್ಮೀಯ ಭಾವವೊಂದು ಎದೆತುಂಬಿತು.