Wednesday, 11th December 2024

ಬೇಸಗೆಯಲ್ಲಿ ಬಾಯಿರುಚಿ ಹೆಚ್ಚಿಸುವ ಹಣ್ಣು !

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಬಿರು ಬೇಸಗೆಯಲ್ಲಿ ರುಚಿಕರವಾಗಿರುವುದರ ಜತೆ, ದಾಹವನ್ನೂ ತಣಿಸುವ ಹಣ್ಣುಗಳೆಂದರೆ ಕಾಟು ಮಾವಿನ ಹಣ್ಣು. ತಮ್ಮಷ್ಟಕ್ಕೆ ತಾವು ಕಾಡು ಪ್ರದೇಶಗಳಲ್ಲಿ ಬೆಳೆದುಕೊಳ್ಳುವ ಕಾಟು ಮಾವಿನ ಮರಗಳು ಬಿಡುವ ಹಣ್ಣುಗಳ ರುಚಿಯು ಒಂದೊಂದು ಮರಕ್ಕೂ ವಿಭಿನ್ನ, ವಿಶಿಷ್ಟ, ಅನನ್ಯ. 

ಬೇಸಗೆಯ ದಿನಗಳು ಎಂದಾಕ್ಷಣ ನನಗೆ ಮೊದಲು ನೆನಪಾಗುವುದು ಕಾಟು ಮಾವಿನ ಹಣ್ಣು. ನಮ್ಮ ಹಳ್ಳಿ ಮನೆಯ ಹಿಂದೆ ಮತ್ತು ಮುಂದೆ ಇದ್ದ ಕಾಡುಪ್ರದೇಶದಲ್ಲಿ ತಮ್ಮಷ್ಟಕ್ಕೆ ತಾವೇ ಬೆಳೆದುಕೊಂಡಿದ್ದ ಕಾಟು ಮಾವಿನ ಮರಗಳಲ್ಲಿ ಬಿಡುತ್ತಿದ್ದ ಮುಷ್ಟಿಗಾತ್ರದ ಪುಟಾಣಿ ಮಾವಿನ ಹಣ್ಣಿಗೂ, ನನ್ನ ಬಾಲ್ಯದ ಬೇಸಗೆಗೂ ಬಿಡಿಸಲಾಗದ ನಂಟು.

ಆ ಮಾವಿನ ಹಣ್ಣನ್ನು ಆರಿಸಿ ತಿನ್ನುವುದಕ್ಕೂ, ನಮ್ಮ ಹಳ್ಳಿಯ ಬಿರುಬೇಸಗೆಗೂ ಅದಾವ ಸಂಬಂಧ ಎಂದು ನಿಮಗೆ ಅಚ್ಚರಿ ಎನಿಸಿದರೆ, ಅದಕ್ಕಿಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮ ಹಳ್ಳಿ ಮನೆಯ ಎದುರಿನಲ್ಲಿ ಉತ್ತರ ದಿಕ್ಕಿಗೆ ಒಂದು ಕಿ.ಮೀ., ಪೂರ್ವ ದಿಕ್ಕಿಗೆ ಒಂದು ಕಿ.ಮೀ. ಗದ್ದೆ ಬಯಲುಗಳು. ವರ್ಷಕ್ಕೆ ಎರಡು ಅಥವಾ ಒಮೊಮ್ಮೆ ಮೂರು ಬೆಳೆ ನೀಡಿದ ನಂತರ, ಆ ಬಯಲುಗಳು ಬೇಸಗೆಯ ಸಮಯದಲ್ಲಿ ಮುಕ್ಕಾಲು ಭಾಗ ಖಾಲಿ. ಅಲ್ಲಲ್ಲಿ ಕೆಲವರು, ನೀರಿನಾಶ್ರಯ ಇದ್ದವರು ಈ ಗದ್ದೆಗಳಲ್ಲಿ ಬಣ್ಣದ ಸೌತೆ, ಗೆಣಸು, ಅವಡೆ, ತೊಂಡೆ, ಅಲಸಂದೆ, ಬದನೆ ಮತ್ತಿತರ ತರಕಾರಿ ಗಳನ್ನು ಬೆಳೆಸುವುದಿದೆ.

ಇದನ್ನು ಹೊರತುಪಡಿಸಿದರೆ, ಆ ಇಡೀ ಗದ್ದೆ ಬಯಲಿನ ಸಾಲು ಬೇಸಗೆಯಲ್ಲಿ ಬೋಳು ಬೋಳಾಗಿರುತ್ತಿತ್ತು. ಆಗಿನ ದಿನಗಳಲ್ಲಿ ಎಲ್ಲಾ ಮನೆಯವರು ಸಾಕಿದ್ದ ಮಲೆನಾಡು ಗಿಡ್ಡ ತಳಿಯ ದನ, ಕರು, ಗುಡ್ಡ, ಎತ್ತುಗಳು ಆ ಒಣ ಗದ್ದೆಗಳ ಅಂಚಿನಲ್ಲಿದ್ದ ಹಸಿರಿನ ಕುಡಿಗಳನ್ನು ಮೇಯುತ್ತಿದ್ದವು, ಅಷ್ಟೆ. ಆ ಗದ್ದೆ ಬಯಲನ್ನು ಬಿಟ್ಟರೆ, ಅದರ ಎರಡೂ ಭಾಗಗಳಲ್ಲಿ ಕಾಡು ಪ್ರದೇಶ. ನಮ್ಮೂರಿನ ‘ಕಾಡು ಪ್ರದೇಶ’ದ ವಿಶೇಷತೆಯೆಂದರೆ, ಅಲ್ಲಿ ಸಿಗುವ ಹಸಿರು ಸೊಪ್ಪು, ಅಡರು, ಸೌದೆಗಳೇ ನಮ್ಮೂರಿನ ಗದ್ದೆಗಳ ‘ಮುಖ್ಯ ಪ್ರಾಣ’, ಗೊಬ್ಬರ ನೀಡುವ ತಾಣ. ಅದು ಹೇಗೆ ಎನ್ನುವ ಮೊದಲು ಈ ‘ಕಾಡು ಪ್ರದೇಶ’ ಎಂದರೇನು ಎಂದು ನೆನಪಿಸಿಕೊಳ್ಳ ಬೇಕು.

ಇದು ದಟ್ಟ ಕಾಡು ಅಲ್ಲ. ನಮ್ಮೂರಿನ ಸುತ್ತ ಮುತ್ತ ದಟ್ಟವಾದ, ಅಭೇದ್ಯವಾದ ಕಾಡು ಇಲ್ಲ. ಇಲ್ಲಿರುವುದು ಹಾಡಿ, ಹಕ್ಕಲು, ಬ್ಯಾಣ, ಗುಡ್ಡೆ,
ಅಲ್ಲೊಂದು ಇಲ್ಲೊಂದು ಬರೆ. ದೊಡ್ಡ ಮರಗಳಿದ್ದ ಜಾಗ ಹಾಡಿ, ಸಣ್ಣ ಗಾತ್ರದ ಮರಗಳಿದ್ದರೆ ಹಕ್ಕಲು. ನಮ್ಮೂರು ಹಾಲಾಡಿ ಹತ್ತಿರ ಹರಿಯುವ ವಾರಾಹಿ ನದಿಯನ್ನು ದಾಟಿ, ಅಮವಾಸ್ಯೆಬೈಲು ಕಡೆ ಹೋದರೆ ಮಾತ್ರ ದಟ್ಟವಾದ ಭಾರೀ ಕಾಡು ಅಥವಾ ‘ಹೊಲ’ ಸಿಗುತ್ತದೆ. ಅದು ಬಿಟ್ಟರೆ ನಮ್ಮೂರನಲ್ಲಿರುವುದು ಹಾಡಿ, ಹಕ್ಕಲುಗಳು ಮಾತ್ರ.

ಇಂತಹ ನಾಲ್ಕಾರು ಹಾಡಿಗಳು, ಒಂದೆರಡು ಹಕ್ಕಲುಗಳು ನಮ್ಮ ಮನೆ ಎದುರಿನ ಬಯಲಿನ ಆಚೀಚೆ ಹರಡಿಕೊಂಡಿವೆ. ಬಿರುಬಿಸಿಲಿನ
ಬೇಸಗೆಯ ದಿನಗಳಲ್ಲಿ, ಮಧಾಹ್ನ ಊಟವಾದ ಕೂಡಲೆ, ಮಾವಿನ ಹಣ್ಣು ತಿನ್ನಬೇಕೆಂಬ ಆಸೆ ಮೂಡಿದರೆ, ಸೀದ ಮನೆ ಎದುರಿನ ಗರಡಿ ಜಡ್ಡಿನ ಹತ್ತಿರವಿರುವ ಹಾಡಿಗೆ ನನ್ನ ಸವಾರಿ ಹೊರಡುತ್ತಿತ್ತು. ಮಾರ್ಚ್-ಎಪ್ರಿಲ್ ತಿಂಗಳ ಚುರುಕಾದ ಬಿಸಿಲಿನಲ್ಲಿ, ಮನೆ ಎದುರಿನ ಪುಟ್ಟ ಬೈಲು ದಾರಿಯನ್ನು ದಾಟುವಷ್ಟರಲ್ಲಿ ಸೂರ್ಯ ನೆತ್ತಿ ಸುಡುತ್ತಿದ್ದ. ಗರಡಿ ಜಡ್ಡಿನ ಬಳಿಯಿದ್ದ ತೋಡನ್ನು ದಾಟಿ, ಗುಡ್ಡೆ ಹತ್ತಿದರೆ, ಕೆಲವೇ ನಿಮಿಷಗಳಲ್ಲಿ ನೆರಳು ನೀಡುವ ಹಾಡಿ ಸಿಗುತ್ತಿತ್ತು.

ಅಲ್ಲಿ ದಟ್ಟವಾದ ಮರಗಳಿರಲಿಲ್ಲ, ಹದವಾದ ದಟ್ಟಣೆಯ ಹಾಡಿ ಅದು, ಎತ್ತರದ ಮರಗಳು ಹಲವು, ಅಲ್ಲಲ್ಲಿ ಸಣ್ಣ ಗಾತ್ರದ ಮರಗಳು. ಅವುಗಳಲ್ಲಿ ಬೋಗಿ, ಕಿರಾಲು ಬೋಗಿ, ದೂಪ, ಸುರಗಿ ಮರ, ನೇರಳೆ, ಮುಳ್ಳು ಹರಳು, ಸೊಳ್ಳೆ, ಜುಳಕ, ಮುರಿನ ಮರಗಳು ಜಾಸ್ತಿ.
ಇವುಗಳ ನಡುವೆ, ಒಂದೆರಡು ಕಾಟು ಮಾವಿನ ಮರಗಳು ತಲೆ ಎತ್ತಿ ನಿಂತಿದ್ದವು. ಇಪ್ಪತ್ತು-ಮೂವತ್ತು ಅಡಿ ಎತ್ತರದ ಕಾಟು ಮಾವಿನ ಮರಗಳ ತುದಿಯಲ್ಲಿ ಸಾಕಷ್ಟು ಮಾವಿನ ಕಾಯಿಗಳು; ಅವು ಹಣ್ಣಾಗಿ ಪ್ರತಿದಿನ ಹತ್ತೈವತ್ತು ಕೆಳಗೆ ಬೀಳುತ್ತಿದ್ದವು.

ಮರದ ಅಡಿ ಬಿದ್ದ ಒಂದೆರಡು ಹಣ್ಣನ್ನು ಆರಸಿ, ಸೊಳ್ಳೆ ಎಲೆಯಿಂದ ಹಣ್ಣಿನ ತೊಟ್ಟಿನ ಬಳಿಯ ಸೊನೆಯನ್ನು ವರೆಸಿ, ಚೊಟ್ಟಿನ ಹತ್ತಿರವೇ ಕಚ್ಚಿ ತೂತು ಮಾಡಿ, ಮೊದಲಿಗೆ ರಸ ಹೀರಿ ಕುಡಿದು, ನಂತರ ಹಣ್ಣಿನ ತೊಗಟೆ ಕಿತ್ತು, ಹಳದಿ ಬಣ್ಣದ ಭಾಗವನ್ನು ತಿನ್ನುವಾಗ, ಆ ಸೆಕೆಯ
ದಿನಗಳ ಮಹತ್ವ ಗೊತ್ತಾಗುತ್ತಿತ್ತು – ಬಿಸಿಲು ಹೆಚ್ಚಿದ್ದಷ್ಟೂ, ಸೆಕೆಯ ಗಾವು ಅಧಿಕವಾಗಿದ್ದಷ್ಟೂ, ಆ ಪುಟ್ಟ ಮಾವಿನ ಹಣ್ಣಿನ ರುಚಿ ಜಾಸ್ತಿ! ಅದೇ ಮರದ ನೆರಳಿನಲ್ಲಿ, ಅದರ ಬೇರುಗಳ ಮೇಲೆ ಕುಳಿತು, ಒಂದೆರಡು ಮಾವಿನ ಹಣ್ಣುಗಳನ್ನು ತಿಂದು, ಸುತ್ತ ಬೆಳೆದಿದ್ದ ನೇರಳೆ ಅಥವಾ ಸೊಳ್ಳೆ ಮರದ ಎಲೆಗಳಿಂದ ಕೈ ಒರೆಸಿಕೊಂಡು, ಮನೆಗೆ

ಹೊರಡುತ್ತಿತ್ತು ನನ್ನ ಸವಾರಿ. ಇಂತಹದೇ ಬಿರು ಬೇಸಗೆಯ ದಿನಗಳಲ್ಲಿ, ಪ್ರತಿ ವರ್ಷ ಬರುವ ಪರೀಕ್ಷೆಗೆ ಓದಿಕೊಳ್ಳಬೇಕಲ್ಲ – ಅದೊಂದು ಕರ್ಕರಿ ಇಲ್ಲದಿದ್ದರೆ, ಪಕ್ಕದ ಇನ್ನೊಂದು ಹಾಡಿಗೆ ಸಾಗಿ ಇನ್ನೂ ಒಂದೆರಡು ಗಂಟೆ ಅಲೆದಾಡುತ್ತ, ಯಾವ ಮಾವಿನ ಮರದ ಹಣ್ಣಿನ ರುಚಿ ಹೇಗೆ ಎಂದು ಪರೀಕ್ಷಿಸಬಹುದಿತ್ತು! ಕಾಟು ಮಾವಿನ ಹಣ್ಣು ಆ ಬೇಸಗೆಯ ಮಧ್ಯಾಹ್ನ, ನಮಗೆ, ಅಂದರೆ ಮಕ್ಕಳಿಗೆ ಸಿಗುವಲ್ಲಿ ಕೆಲವು ‘ಲಕ್ಷಣ’ಗಳು ಕೆಲಸ ಮಾಡುತ್ತಿದ್ದವು. ಕಾಡು ಪ್ರದೇಶಗಳಲ್ಲಿ ಬೆಳೆಯುವ ಮಾವಿನ ಮರವು ಹೆಚ್ಚು ಎತ್ತರವಿದ್ದಷ್ಟೂ, ವಿಶಾಲವಾಗಿದ್ದಷ್ಟೂ, ಮಕ್ಕಳಿಗೆ ಹಣ್ಣು ಸಿಗುವ ಸಾಧ್ಯತೆ ಅಧಿಕ.

ಏಕೆಂದರೆ, ಇದೇ ಮಾವಿನ ಮರಗಳ ಮಿಡಿಗಳನ್ನು ಒಂದೆರಡು ತಿಂಗಳುಗಳ ಮುಂಚೆ ಕೊಯ್ದು, ಉಪ್ಪಿನಕಾಯಿ ಮಾಡುತ್ತಿದ್ದರು, ನಮ್ಮೂರಿನವರು. ಕಡಿಮೆ ಎತ್ತರದ ಮರಗಳಲ್ಲಿದ್ದ ಮಾವಿನ ಮಿಡಿಗಳನ್ನು ಬೇಗ ಬೇಗನೆ ಕೊಯ್ಯುತ್ತಿದ್ದರು. ಜಾಸ್ತಿ ಎತ್ತರದ ಮರಗಳ
ಟೊಂಗೆಗಳಿಂದ ಮಾವಿನ ಮಿಡಿಯನ್ನು ಕೊಯ್ಯುವುದು ಕಷ್ಟ- ಆದ್ದರಿಂದ, ಅಂತಹ ಎತ್ತರದ ಕೊಂಬೆಗಳ ಮಿಡಿಗಳೇ, ಒಂದೆರಡು ತಿಂಗಳುಗಳಲ್ಲಿ ಹಣ್ಣಾಗಿ ನಮಗೆ ಸಿಗುತ್ತಿದ್ದುದು.

ಬೃಹತ್ ಗಾತ್ರದಲ್ಲಿ, ವಿಶಾಲವಾಗಿ ಬೆಳೆದ ಮಾವಿನ ಮರಗಳಲ್ಲಿ ಎಷ್ಟು ಕೊಯ್ದರೂ, ಸಾಕಷ್ಟು ಮಿಡಿಗಳು ಉಳಿದಕೊಳ್ಳುವುದರಿಂದಾಗಿ, ಅಂತಹ ಮರಗಳ ಕಾಟು ಮಾವಿನ ಹಣ್ಣು ಮಕ್ಕಳ ಬಾಯನ್ನು ತಣಿಸುತ್ತಿತ್ತು. ನಮ್ಮನೆ ಎದುರಿನ ಹಾಡಿಯಲ್ಲಿ, ‘ಹಾಳುಮನೆ ಜಡ್’ ಎಂಬ ಜಾಗವಿದೆ; ಬಹುಹಿಂದೆ ಅಲ್ಲೊಂದು ಮನೆಯಿತ್ತಂತೆ; ಆ ಮನೆ ಹಾಳುಬಿದ್ದುದರಿಂದ, ಆ ಜಾಗಕ್ಕೆ ಹಾಳು ಮನೆ ಜಡ್ ಎಂಬ ಹೆಸರು
ಸ್ಥಾಯಿಯಾಗಿದೆ. ಅಲ್ಲೊಂದು ದೊಡ್ಡದಾದ ಕಾಟು ಮಾವಿನ ಮರ ಇತ್ತು. ಗರಡಿ ಜಡ್ ಬಳಿಯ ಮಾವಿನ ಮರದಲ್ಲಿ ಹಣ್ಣುಗಳ ಶ್ರಾಯ ಮುಗಿದ ನಂತರ, ನನ್ನ ಸವಾರಿ ಹಾಳುಮನೆ ಜಡ್‌ನತ್ತ ಸಾಗುತ್ತಿತ್ತು.

ಆ ಮರದ ವಿಶೇಷತೆ ಎಂದರೆ, ತುಸು ದೊಡ್ಡ ಗಾತ್ರದ ಹಣ್ಣು, ಒಳಗಿನ ಭಾಗದಲ್ಲಿ ರಸದ ಜತೆಗೆ, ತಿನ್ನುವ ಅಂಶವೂ ಜಾಸ್ತಿ, ರುಚಿಯೂ
ಅಧಿಕ. ಮರದಿಂದ ಆಗ ತಾನೆ ಬಿದ್ದ ಹಣ್ಣನ್ನು ಆರಿಸಿ, ಹಲ್ಲಿನಿಂದ ಕಚ್ಚಿ ತಿನ್ನುವ ರುಚಿಯೇ ಅನುಪಮ! ಬಿರುಬಿಸಿನಲ್ಲಿ ಬೆವರಿಳಿಸಿ ಕೊಳ್ಳುತ್ತಾ, ಬೈಲುದಾರಿಯಲ್ಲಿ ನಡೆದು, ದರೆ ಹತ್ತಿ ಹಾಡಿಗೆ ಹೋಗಲು ಸೋಮಾರಿತನ ಎನಿಸಿದರೆ, ನಮ್ಮ ಮನೆ ಎದುರಿನ ಹಟ್ಟಿಯ ಹಿಂದೆಯೇ, ತೋಡಿನ ಅಂಚಿನಲ್ಲಿ ಎರಡು ಭಾರೀ ಗಾತ್ರದ ಮಾವಿನ ಮರಗಳಿದ್ದವು.

ಅವುಗಳ ಪೈಕಿ, ಒಂದು ಮರದ ಕಾಂಡವು ನೇರವಾಗಿ 30 ಅಡಿ ಏರಿ ಹೋಗಿದ್ದು, ನಂತರ ಅದರ ಟೊಂಗೆಗಳು ವಿಶಾಲವಾಗಿ
ಟಿಸಿಲೊಡೆದಿದ್ದವು. ಆ ಮರದಲ್ಲಿ ಎರಡು ವರ್ಷಗಳಿಗೊಮ್ಮೆ ಅಕ್ಷರಶಃ ಸಾವಿರಾರು ಕಾಟುಮಾವಿನ ಹಣ್ಣುಗಳಾಗುತ್ತಿದ್ದವು. ಅದನ್ನೂ
ಆರಿಸಿ ತಿನ್ನುವ ಪರಿಪಾಠ. ಆದರೆ ಒಂದೆರಡು ಹಣ್ಣು ತಿನ್ನುವಷ್ಟರಲ್ಲಿ, ಹಲ್ಲುಗಳು ಕಟಕಟ ಎನ್ನುತ್ತಿದ್ದವು – ಅಷ್ಟು ಹುಳಿ! ಆ ಮರದ ಅಡಿ ಪ್ರತಿದಿನ ಹತ್ತೈವತ್ತು ಹಣ್ಣುಗಳಿದ್ದರೂ, ಅದನ್ನು ಆರಿಸಿ ತಿನ್ನಲು ಅಷ್ಟು ಇಷ್ಟವಾಗುತ್ತಿರಲಿಲ್ಲ – ಹಣ್ಣಿನಲ್ಲಿ ಸಿಹಿಯ ಅಂಶವೇ ಇಲ್ಲವೆನ್ನ ಬಹುದು, ಬರೀ ಹುಳಿ ಜಮ. ಅದು ‘ಮಾವಿನಕಾಯಿ ಅಲ್ಲ, ದಿಂಡಿನ ಕಾಯಿ, ಸಾರು ಮಾಡಲು ಉತ್ತಮ’ ಎಂದು, ಒಮ್ಮೆ ಶೃಂಗೇರಿ ಯಿಂದ ಬಂದಿದ್ದ ಚಿಕ್ಕಮ್ಮ ಹೇಳುವ ತನಕ, ‘ದಿಂಡಿನ ಕಾಯಿ’ ಎಂಬ ಹೆಸರಿನ ‘ಹುಳಿ ಹುಳಿ ಮಾವು’ ಇದೆ ಎಂದು ನಮಗೆ ಗೊತ್ತೇ ಇರಲಿಲ್ಲ.

ನಮ್ಮೂರಿನ ಕಾಟು ಮಾವಿನ ಹಣ್ಣುಗಳ ರುಚಿಗಳ ವೈವಿಧ್ಯತೆಯ ಕುರಿತು ಹೇಳದಿದ್ದರೆ, ಬಿರು ಬೇಸಗೆಯಲ್ಲಿ ಅಮೃತಸಮಾನ ಎನಿಸುವ ಆ ಹಣ್ಣುಗಳ ಸ್ವಾರಸ್ಯಕರ ವಿಚಾರವನ್ನೇ ಮುಚ್ಚಿಟ್ಟಂತಾಗುತ್ತದೆ. ನಮ್ಮ ಹಾಲಾಡಿಯ ಸರಹದ್ದಿನಲ್ಲಿ ಆಗಿನ ದಿನಗಳಲ್ಲಿ ನೂರರಿಂದ
ನೂರೈವತ್ತು ಕಾಟು ಮಾವಿನ ಮರಗಳಿದ್ದಿರಬಹುದು. ಒಂದೊಂದು ಮರದ ಹಣ್ಣಿಗೂ ಪ್ರತ್ಯೇಕ ರುಚಿ! ಹಣ್ಣು ತಿಂದ ಕೂಡಲೇ, ಓಹ್, ಇದು ಹಂಜಾರ್ ಮನೆ ಹಾಡಿಯ ಮರದ್ದು ಎಂದು ಹೇಳುವಷ್ಟು ವಿಶಿಷ್ಟ ಆ ರುಚಿ.

ಕೆಲವು ತುಂಬಾ ಸಿಹಿ, ಕೆಲವು ಸ್ವಲ್ಪ ಹುಳಿ ಸಿಹಿ, ಕೆಲವುಗಳಲ್ಲಿ ರಸ ಜಾಸ್ತಿ, ಇನ್ನು ಕೆಲವುಗಳ ಗೊರಟು ಬಹಳ ದೊಡ್ಡದು. ಇನ್ನು ಕೆಲವು ಹಣ್ಣುಗಳ ರುಚಿಯಂತೂ ಅದ್ಭುತ! ನಂತರದ ವರ್ಷಗಳಲ್ಲಿ ನಾವು ಪೇಟೆಯಿಂದ ಖರೀದಿಸಿ ತಂದು ತಿಂದ ಮಲ್ಲಿಕಾ, ರಸಪೂರಿ ಹಣ್ಣುಗಳ ರುಚಿ ಹೊಂದಿದ್ದ ಕಾಟು ಮಾವಿನ ಹಣ್ಣುಗಳೂ ಇದ್ದವು. ವಿವಿಧ ರುಚಿಯ ಕಾಟು ಮಾವಿನ ಹಣ್ಣುಗಳನ್ನು ತಿನ್ನಬೇಕು ಎನಿಸಿದರೆ, ನಾವೆಲ್ಲಾ ಮಕ್ಕಳು ನಮ್ಮೂರಿನಿಂದ ಆರೇಳು ಕಿ.ಮೀ. ದೂರದಲ್ಲಿದ್ದ ಅಬ್ಲಿಕಟ್ಟೆಗೋ, ತಾರಿಕಟ್ಟೆಗೋ ಹೋಗಿ ಠಿಕಾಣಿ ಹೂಡುತ್ತಿದ್ದೆವು.

ಅಬ್ಲಿಕಟ್ಟೆಯಲ್ಲಿ ಬೇಸಗೆಯ ದಿನಗಳಲ್ಲಿ ಪ್ರತಿ ವರ್ಷ ನಾನು ಎರಡು ಮೂರು ವಾರ ಠಿಕಾಣಿ ಹೂಡಿದ್ದೂ ಉಂಟು. ಎಪ್ರಿಲ್ ಮೊದಲ ವಾರ ದಲ್ಲಿ ಪರೀಕ್ಷೆ ಮುಗಿದ ನಂತರ, ಒಂದು ಸಂಜೆ ಹೊರಟು, ಹಾಡಿ, ಗುಡ್ಡೆ, ಹಕ್ಕಲುಗಳ ದಾರಿಯಾಗಿ, ಬಾವಣಿ ತೋಡನ್ನು ದಾಟಿ ನಡೆದರೆ, ಒಂದೂವರೆ ಗಂಟೆ ನಡಿಗೆಯ ದೂರದಲ್ಲಿದ್ದ ತಾರಿಕಟ್ಟೆ ಮತ್ತು ಅಬ್ಲಿಕಟ್ಟೆ ತಲುಪುತ್ತಿದ್ದೆವು. ಅಲ್ಲಿದ್ದ ನಮ್ಮತ್ತೆ ಮತ್ತು ದೊಡ್ಡಮ್ಮ (ಕ್ರಮವಾಗಿ) ಇಬ್ಬರದೂ ಒಂದೇ ರೀತಿ ಸ್ವಾಗತ – ‘ಈಗ ನೀನು ಬಂದದ್ ಒಳ್ಳೆದಾಯ್ತು.

ಕಾಟು ಮಾವಿನ ಹಣ್ಣುಗಳು, ಗೋಯ್ ಹಣ್ಣುಗಳು ಮಸ್ತ್ ಆಯಿದೋ, ಸಮಾತಿನ್ಲಕ್!’ ಅಬ್ಲಿಕಟ್ಟೆ ಮನೆ ಸುತ್ತಲೂ ದಟ್ಟವಾದ ಹಾಡಿ, ಭಾರೀ ಮರಗಳು. ಅವುಗಳ ನಡುವೆ ವಿವಿಧ ರುಚಿಯ ಹಲವು ಕಾಟುಮಾವಿನ ಮರಗಳು. ಒಂದೆರಡರ ರುಚಿಯಂತೂ ವಿಶಿಷ್ಟ, ನೆನಪಿನಲ್ಲಿ
ಇಟ್ಟುಕೊಳ್ಳುವಂತಹದ್ದು. ಮಾವಿನ ಹಣ್ಣುಗಳ ಜತೆಯಲ್ಲೇ, ತಾರಿಕಟ್ಟೆಯಲ್ಲಿ ಗೋಯ್ ಹಣ್, ಹಲಸಿನ ಹಣ್ಣುಗಳೂ ಇದ್ದವು.

ಎಪ್ರಿಲ್-ಮೇ ಬಂತೆಂದರೆ, ಅಬ್ಲಿಕಟ್ಟೆ ಮನೆಯಲ್ಲಿ ಒಂದೊಂದು ದಿನ ಬುಟ್ಟಿಗಟ್ಟಲೆ ಕಾಟು ಮಾವಿನ ಹಣ್ಣುಗಳ ಸುಗ್ಗಿ. ಮರ ಹತ್ತುವ, ಕೊಕ್ಕೆ
ಹಾಕಿ ಕೊಯ್ಯುವ ಪ್ರಮೇಯವೇ ಇಲ್ಲ. ಬೆಳಗ್ಗೆ ಎದ್ದ ತಕ್ಷಣ ಬೆತ್ತದ ಬುಟ್ಟಿ ಹಿಡಿದು, ಮನೆಯ ಸುತ್ತಲೂ ಇದ್ದ ನಾಲ್ಕಾರು ಭಾರೀ ಗಾತ್ರದ ಮರಗಳ ಹತ್ತಿರ ಹೋದರಾಯ್ತು, ರಾತ್ರಿ ಬಿದ್ದ ಮಾವಿನ ಹಣ್ಣುಗಳ ರಾಶಿಯೇ ಅಲ್ಲಿರುತ್ತದೆ. ಅವುಗಳನ್ನು ಆಯ್ದು, ಬುಟ್ಟಿಗೆ ತುಂಬಿ ಮನೆಗೆ ತಂದು ನೀರಿನಲ್ಲಿ ತೊಳೆದು, ‘ಹಣ್‌ಚೆಟ್’ ಮಾಡುತ್ತಿದ್ದರು.

ಅಬ್ಲಿಕಟ್ಟೆ ದೊಡ್ಡಮ್ಮನ ಸಂಬಂಧಿಕರು ಒಬ್ಬಿಬ್ಬರು ಮಹಿಳೆಯರು ಅಲ್ಲಿಗೆ ಆಗಾಗ ಬಂದು ಇರುತ್ತಿದ್ದರು. ಬೇಸಗೆಯಲ್ಲಿ ಅವರಿಗೆ, ಮನೆಯ ವರಿಗೆ ಪ್ರತಿದಿನ ಹಣ್‌ಚೆಟ್ ಮಾಡುವ ಕೆಲಸ. ನೂರಾರು ಕಾಟು ಮಾವಿನ ಹಣ್ಣಿನ ಸಿಪ್ಪೆ ತೆಗೆದು, ಅರೆಯುವ ಕಲ್ಲಿಗೆ ಹಾಕಿ ಅರೆದು, ಗೊರಟು ಪ್ರತ್ಯೇಕಿಸಿ, ಹಣ್ಣಿನ ರಸವನ್ನು ಬೆತ್ತದ ಗೆರಸಿಯ (ಮೊರ) ಮೇಲೆ ಹರವಿ, ಬಿಸಿಲಿಗೆ ಇಡುತ್ತಾರೆ. ಆ ದಿನವಿಡೀ ಆ ರಸ ಚೆನ್ನಾಗಿ ಒಣಗಬೇಕು. ಪ್ರತಿದಿನವೂ ಬೆಳಗ್ಗೆ ರಸ ಮಾಡಿ, ಅದೇ ಗೆರಸಿಗೆ ಪದರ ಪದರವಾಗಿ ಹರಡುತ್ತಾರೆ.

ಹತ್ತರಿಂದ ಹದಿನೈದು ದಿನ ಈ ರೀತಿ ರಸ ಮಾಡಿ, ಹರವಿ, ಅದು ಒಣಗಿಸಿದಾಗ ಪದರು ಪದರಿನ ಚಾಪೆಯಂತಾಗುತ್ತದೆ. ಪೂರ್ತಿ ಒಣಗಿದ ನಂತರ ಅದನ್ನು ಮುತ್ತುಗದ ಅಥವಾ ದೂಪದ ಒಣಗಿದ ಎಲೆಯಲ್ಲಿ ಸುತ್ತಿ ಅಡುಗೆ ಮನೆಯ ಅಟ್ಟದಲ್ಲಿಡುತ್ತಾರೆ. ಮಳೆಗಾಲದಲ್ಲಿ ಸಾಸಿವೆ, ಗೊಜ್ಜು, ಚಟ್ನಿ ಮಾಡಲು ‘ಹಣ್‌ಚೆಟ್’ ಬಹು ರುಚಿಕರ. ಚೂರು ಚೂರೇ ಕತ್ತರಿಸಿ ತಿನ್ನಲು ಸಹ ರುಚಿಕರ.

ಕಲ್ಪವೃಕ್ಷದಂತೆ ಮಕ್ಕಳಿಗೆ ನಿರಂತರವಾಗಿ ಹಣ್ಣು ನೀಡುವ ಕಾಟು ಮಾವಿನ ಮರಗಳ ಕುರಿತು ಬರೆಯುತ್ತಾ ಹೋದರೆ ಕೊನೆಯೇ ಇಲ್ಲ.
ಬೇಸಗೆಯ ಬಿಸಿಲಿನ ತಾಪದಲ್ಲಿ ನಾವು ಮಕ್ಕಳು ಆರಿಸಿ ತಿನ್ನುವಂತೆಯೇ, ಮಂಗಗಳಿಗೂ ಈ ಹಣ್ಣು ಬಹು ಇಷ್ಟ. ಅತ್ತ ಅಳಿಲುಗಳಿಗೂ ಮಾವಿನ ಹಣ್ಣನ್ನು ತಿನ್ನುವುದು, ಅರ್ಧ ತಿಂದು ಕೆಳಗೆ ಬೀಳಿಸುವುದು ಎಲ್ಲವೂ ಇಷ್ಟದ ಹವ್ಯಾಸ. ಎತ್ತರದ ಮರದ ಅಡಿ ನಿಂತ ಹಳ್ಳಿ ಹುಡುಗನಿಗೆ ಆ ದಿನ ಮಾವಿನ ಹಣ್ಣು ಸಿಗದೇ ಇದ್ದರೆ, ಒಂದು ಪುಟ್ಟ ಕವಿತೆ ಹಾಡುತ್ತಾನೆ ‘ಚಣಿಲಣ್ಣಾ, ಮಣಿಲಣ್ಣಾ, ನಂಗೊಂದು ಹಣ್,
ನಿಂಗೊಂದು ಹಣ್, ದಡ್ಡೋ ಬುಡ್ಡೋ!’ ಹಾಡನ್ನು ಕೇಳಿದ ಚಣಿಲ (ಅಳಿಲು), ಒಂದು ಮಾವಿನ ಹಣ್ಣನ್ನು ತಾನು ತಿಂದು, ಇನ್ನೊಂದನ್ನು ಕಿತ್ತು ಕೆಳಗೆ ಹಾಕುತ್ತದೆ. ಮರದ ಅಡಿ ಕಾಯುತ್ತಾನಿಂತ ನನ್ನಂತಹ ಹುಡುಗರಿಗೆ ಸಿಗುವ ಬಿಸಿಲು ಕಾಲದ ಆ ಹಣ್ಣಿನ ರುಚಿ ಇಮ್ಮಡಿ ಗೊಳ್ಳುತ್ತದೆ!