Thursday, 12th December 2024

ತೈಲ ಬೆಲೆಗೆ ಬೆಂಕಿ ಹಚ್ಚಿಸಿದವರ‍್ಯಾರು ?

ಸಂಗತ

ವಿಜಯ್‌ ದರ್‌ಡ

ಜಿ.ಎಸ್.ಟಿ. ಪದ್ಧತಿ ಉತ್ತಮವೆಂದು ಜನರಿಂದ ಸ್ವೀಕೃತವಾಗಿರುವಾಗ ಮತ್ತು ಅದರ ಫಲಿತಾಂಶವೂ ಉತ್ತಮವೇ ಆಗಿರುವಾಗ ಪೆಟ್ರೋಲ್-ಡೀಸೆಲ್‌ ಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ಯಾಕೆ ತರಬಾರದು? ಒಂದೇ ತೆರನಾದ ಸುಂಕ ವಿಧಿಸುವ ಪದ್ಧತಿ ಜಾರಿಗೆ ತರಬೇಕು.

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕೇಂದ್ರ-ರಾಜ್ಯಗಳ ಪಾಲು ಎಷ್ಟು ಎಂಬುದರ ಬಗ್ಗೆ ಜನಸಾಮಾನ್ಯ ತಲೆಕೆಡಿಸಿಕೊಳ್ಳುವುದಿಲ್ಲ. ಆತನಿಗೆ ಬೇಕಿರುವುದು
ನೆಮ್ಮದಿ, ಅಷ್ಟೆ. ಉತ್ತರಪ್ರದೇಶ ಸೇರಿದಂತೆ ಹಲವೆಡೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಗಳು ಮುಗಿದಾಕ್ಷಣ ದಿಂದ ಎಲ್ಲ ರಾಜ್ಯಗಳೂ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಎಗ್ಗುಸಿಗ್ಗಿಲ್ಲದೇ ಪ್ರತಿನಿತ್ಯ ಹೆಚ್ಚಿಸುತ್ತಲೇ ಇವೆ. ಈಗ ಇಂಧನಬೆಲೆಗಳು ಅತ್ಯಧಿಕ ದಾಖಲೆಯನ್ನು ದಿನವಹಿ ಮಾಡುತ್ತ ಮುಂದುವರಿದಿವೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಕೇಂದ್ರ ಸರಕಾರ ಇಂಧನ ಬೆಲೆಯ ಮೇಲಿನ ತೆರಿಗೆ ಕಡಿತಗೊಳಿಸಿದ ಕಾರಣದಿಂದ ಜನರಿಗೆ ಒಂದಷ್ಟು ನೆಮ್ಮದಿ ಸಿಕ್ಕಿತ್ತು. ಚುನಾವಣೆಗಳು ಮುಗಿದ ನಂತರ ಮತ್ತೆ ಬೆಲೆಗಳು ಗಗನಮುಖಿಯಾಗಲಿವೆ ಎಂದು ಜನರು ಆಗಲೇ ಮಾತನಾಡುತ್ತಿದ್ದರು. ಅದು ಸುಳ್ಳಾಗಲಿಲ್ಲ. ಹಾಗೆಯೇ ಆಗಿದೆ. ಕೇಂದ್ರವಾಗಲೀ ರಾಜ್ಯ ವಾಗಲೀ ಇಂಧನ ಬೆಲೆ ಏರಿಕೆ ವಿಚಾರದಲ್ಲಿ ಇಷ್ಟೊಂದು ನಿರ್ದಯಿಗಳಾಗುತ್ತಾರೆಂದು ಜನ ಖಂಡಿತವಾಗಿಯೂ ನಿರೀಕ್ಷೆ ಮಾಡಿರಲಿಲ್ಲ.

ನವೆಂಬರ್ ೨೦೨೧ರ ನಂತರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್ಲಿಗೆ ೩೫ ಡಾಲರ್ ಹೆಚ್ಚಾಗಿದೆ ಎಂಬುದು ಎಲ್ಲರಿಗೆ ಗೊತ್ತಿರುವ ಸತ್ಯ. ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ ಒಂದು ರುಪಾಯಿ ಹೆಚ್ಚಿದರೆ ಇಲ್ಲಿ ಪ್ರತಿ ಲೀಟರಿಗೆ ೫೫ ರಿಂದ ೬೦ ಪೈಸೆ ಹೆಚ್ಚಳ ಮಾಡುವ ಪ್ರವೃತ್ತಿ ನಡೆಯುತ್ತಲೇ ಇದೆ. ಮತದಾರ ಸಿಟ್ಟಾಗಿದ್ದಾನೆ ಎಂದು ಗೊತ್ತಾಗಿ ಕಳೆದ ನವೆಂಬರಿನಲ್ಲಿ ತಾತ್ಕಾಲಿಕ ಲಗಾಮು ಹಾಕುವ ಕೆಲಸ ನಡೆದಿತ್ತು. ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ತಗ್ಗಿಸಿತು, ತಕ್ಷಣ ಬಿ.ಜೆ.ಪಿ. ಅಧಿಕಾರದಲ್ಲಿದ್ದ ರಾಜ್ಯ ಸರಕಾರಗಳೂ ವ್ಯಾಟ್ ಪ್ರಮಾಣವನ್ನು ತಗ್ಗಿಸಿದವು. ಆದರೆ ಲೆಕ್ಕಾ ಚಾರ ಅಷ್ಟು ಸುಲಭವಿರಲಿಲ್ಲ.

ಒಂದು ಕನಿಷ್ಠ ತೆರಿಗೆ ಮೊತ್ತ ನಿಗದಿಮಾಡಲಾಗಿತ್ತು. ಜನರು ಬೆಲೆ ತಗ್ಗಿತೆಂದು ಕೊಂಚ ನಿರಾಳರಾದರು. ಆದರೆ ಬೆಲೆ ಎಷ್ಟು ತಗ್ಗಬೇಕಿತ್ತೋ ಅಷ್ಟು ತಗ್ಗಲಿಲ್ಲ. ಬಿಜೆಪಿಯೇತರ ಪಕ್ಷಗಳು ಅಽಕಾರದಲ್ಲಿದ್ದ ರಾಜ್ಯದಲ್ಲಿ ವ್ಯಾಟ್ ಇಳಿಕೆ ನಿರಾಕರಿಸಲಾಯಿತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತೆರಿಗೆಗಳ ಪ್ರಮಾಣವೇ ಸರಿಸುಮಾರು ೪೬% ರಷ್ಟಿದೆ. ಈ ಭಾರಿ ತೆರಿಗೆಯ ಭಾರದಿಂದಾಗಿಯೇ ಇಂಧನ ಬೆಲೆಗೆ ಬೆಂಕಿ ಬಿದ್ದಿದೆ ಮತ್ತು ಗ್ರಾಹಕ ಕಂಗಾಲಾಗಿದ್ದಾನೆ.

ಈ ವಿಚಾರ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಇತ್ತೀಚೆಗೆ ಕರೋನಾ ವೈರಸ್ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಾಗ, ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಲು, ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ಇಳಿಸುವಂತೆ ರಾಜ್ಯ
ಸರಕಾರಗಳಿಗೆ ಮನವಿ ಮಾಡಿದ್ದರು. ಕೇಂದ್ರ ಸರಕಾರದ ಪಾಲಿನ ೪೨% ತೆರಿಗೆಯಲ್ಲಿ ರಾಜ್ಯಗಳಿಗೂ ಪಾಲು ಹೋಗುತ್ತದೆ ಎಂದರು. ಆಗ ಮಹಾರಾಷ್ಟದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹನೆ ಕಳೆದುಕೊಂಡರು.

ಆಗ ವಾಗ್ವಾದಗಳು ನಡೆದವು. ತೆರಿಗೆಯಲ್ಲಿ ಕೇಂದ್ರ ಪಾಲು ಹೆಚ್ಚೋ ರಾಜ್ಯದ ಪಾಲು ಹೆಚ್ಚೋ ಎಂದು ಚರ್ಚೆ ಶುರುವಾಯಿತು. ಕೇಂದ್ರ ಸರಕಾರ
ತೆರಿಗೆ ಕಡಿತದಿಂದ ೨೩,೨೬೫ ಕೋಟಿ ರು. ನಷ್ಟ ಅನುಭವಿಸಿದ್ದರೆ, ವ್ಯಾಟ್ ಇಳಿಸದ ರಾಜ್ಯಗಳು ೧೨,೪೪೧ ಕೋಟಿ ರು. ಹೆಚ್ಚುವರಿಯಾಗಿ ಪಡೆದು ಕೊಂಡಿವೆ. ಉದಾಹರಣೆಗೆ, ಮಹಾರಾಷ್ಟ (೩೪೭೨ ಕೋಟಿ) ತಮಿಳುನಾಡು (೨೯೨೪ ಕೋಟಿ). ಮಹಾರಾಷ್ಟ, ಆಂಧ್ರಪ್ರದೇಶ ಮತ್ತು ತೆಲಂಗಾಣ
ರಾಜ್ಯಗಳಲ್ಲಿರುವ ವ್ಯಾಟ್ ತೆರಿಗೆ, ಕೇಂದ್ರ ಅಬಕಾರಿ ಸುಂಕಕ್ಕಿಂತ ಹೆಚ್ಚು ಎಂಬುದು ಗಮನಿಸಬೇಕಾದ ಅಂಶ. ಮಹಾರಾಷ್ಟ್ರದಿಂದ ಬಂದಿರುವ ಅಂಕಿ ಅಂಶಗಳು ಗಾಬರಿ ಹುಟ್ಟಿಸುವಂತಿವೆ.

ಮುಂಬೈ, ನವಿ ಮುಂಬೈ, ಥಾಣೆ, ಔರಂಗಾಬಾದ್ ಗಳಲ್ಲಿ ಪೆಟ್ರೋಲಿನ ಮೇಲೆ ೨೬% ವ್ಯಾಟ್ ವಿಽಸಲಾಗುತ್ತಿದ್ದು ಡೀಸೆಲ್ ಮೇಲೆ ೨೪% ವ್ಯಾಟ್ ಹೆಚ್ಚುವರಿಯಾಗಿ ವಿಧಿಸಲಾಗುತ್ತಿದೆ. ಮಹಾರಾಷ್ಟದ ಉಳಿದ ಭಾಗಗಳನೂ ದೊಡ್ಡ ವಿನಾಯಿತಿಯೇನಿಲ್ಲ. ಅಲ್ಲ ಪೆಟ್ರೋಲಿನ ಮೇಲೆ ೨೫% ವ್ಯಾಟ್, ಡೀಸೆಲ್ ಮೇಲೆ ೨೧% ವ್ಯಾಟ್ ಬೀಳುತ್ತಿದೆ. ಯಾಕೆ ಹೀಗೆ? ನಾನು ಮಹಾರಾಷ್ಟ್ರವೊಂದರ ಉದಾಹರಣೆ ಕೊಟ್ಟಿದ್ದೇನೆ. ಉಳಿದ ರಾಜ್ಯಗಳ ಸ್ಥಿತಿಯಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ.

ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳ ಸರಕಾರಗಳು ಹೇಗೆ ಹೆಚ್ಚುವರಿ ತೆರಿಗೆಗಳ ಮೂಲಕ ಇಂಧನ ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ ಎಂಬುದನ್ನು ಕೇಂದ್ರದ ಇಂಧನ ಸಚಿವ ಹರದೀಪ್ ಸಿಂಗ್ ಪುರಿ ತಮ್ಮ ಟ್ವೀಟ್‌ನಲ್ಲಿ ಇತ್ತೀಚೆಗೆ ವಿವರಿಸಿದ್ದರು. ಅವರ ಟ್ವೀಟ್ ಪ್ರಕಾರ ಬಿಜೆಪಿ ಅಧಿಕಾರದಲ್ಲಿರುವ
ರಾಜ್ಯಗಳಲ್ಲಿ ಪ್ರತಿಲೀಟರಿಗೆ ಬೀಳುವ ವ್ಯಾಟ್ ರು:೧೪-೫೦ ರಿಂದ ೧೭.೫೦ ಇದ್ದರೆ, ಬಿಜೆಪಿಯೇತರ ರಾಜ್ಯಗಳಲ್ಲಿ ಅದು ಪ್ರತಿಲೀಟರಿಗೆ ರು:೨೬-೦೦ ರಿಂದ ರು:೩೨-೦೦ ತನಕ ಇದೆ.

ಎಲ್ಲಾ ರಾಜ್ಯಗಳಲ್ಲೂ ಏಕರೂಪದ ವ್ಯಾಟ್ ಪದ್ಧತಿ ಏಕಿರಬಾರದು ಎಂದು ಜನರು ಕೇಳಬೇಕಲ್ಲವೇ? ವ್ಯಾಟ್ ವಿಧಿಸದೇ ಹೋದರೆ ತಮ್ಮ ಬೊಕ್ಕಸಕ್ಕೆ ಬರುವ ವರಮಾನ ಎಷ್ಟು ಕಡಿಮೆಯಾಗುತ್ತದೆ ಎಂದು ರಾಜ್ಯಸರಕಾರಗಳು ಅಲವತ್ತುಕೊಳ್ಳುತ್ತವೆ. ರಾಜ್ಯ ಸರಕಾರಗಳ ವರಮಾನಮೂಲಗಳು ಸೀಮಿತ ವಾಗಿವೆ. ಹಲವಾರು ರಾಜ್ಯಗಳು ಸಾಲದ ಹೊರೆಯಲ್ಲಿವೆ. ಸರಕಾರ ನಡೆಸುವುದರೊಂದಿಗೆ, ಜನಪ್ರಿಯ ಯೋಜನೆಗಳಾದ ಉಚಿತ ವಿದ್ಯುತ್, ಉಚಿತ ಆಹಾರಧಾನ್ಯ, ಉಚಿತ ಶಿಕ್ಷಣ, ಉಚಿತ ವೈದ್ಯಕೀಯ ಸವಲತ್ತುಗಳನ್ನೂ ನೋಡಿಕೊಳ್ಳಬೇಕಲ್ಲ, ಅದಕ್ಕೆಲ್ಲ ಹೆಚ್ಚುವರಿ ಖರ್ಚುಗಳು ಬರುತ್ತವೆ. ಎಲ್ಲಾ ಕೆಲವು ರಾಜ್ಯಗಳಿಗೆ ಇದನ್ನೆಲ್ಲ ನಿಭಾಯಿಸುವ ಶಕ್ತಿ ಇದೆ. ಆದರೆ ಎಡೆ ಹಾಗಿಲ್ಲ. ಇದೆಲ್ಲವನ್ನೂ ನಿರ್ವಹಿಸಿದ ನಂತರ ತುರ್ತುಬಳಕೆಗೆ ಬೊಕ್ಕಸದಲ್ಲಿ ಸ್ವಲ್ಪವಾದರೂ ದುಡ್ಡು ಇರಬೇಕಲ್ಲ.

ಪೆಟ್ರೋಲಿಯಂ ಪ್ಲಾನಿಂಗ್ ಆಂಡ್ ಅನಾಲಿಸಿಸ್ ಸೆಲ್ ಕೊಡುವ ಅಂಕಿ ಅಂಶಗಳ ಪ್ರಕಾರ ಲಕ್ಷದ್ವೀಪದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಲ್ಲಿನ
ಸರಕಾರ ಯಾವ ಸುಂಕವನ್ನೂ ವಿಧಿಸುತ್ತಿಲ್ಲ. ಅಂಡಮಾನ್ ನಿಕೋಬಾರ್‌ನಲ್ಲಿ ವಿಧಿಸಲಾಗುತ್ತಿರುವ ವ್ಯಾಟ್ ಕೇವಲ ೧% ಮಾತ್ರ. ಎಲ್ಲ ರಾಜ್ಯಗಳಿಗೂ ಹೀಗೆ ಮಾಡಲಾಗದು, ಏಕೆಂದರೆ ಅವರ ಅವಶ್ಯಕತೆ ಪ್ರಮಾಣ ಬಹಳ ದೊಡ್ಡದಿದೆ ಅಂತಾರೆ ಪರಿಣತರು. ರಾಜ್ಯ ಸರಕಾರಗಳ ಯೋಚನಾ ಲಹರಿಯೇ
ತಪ್ಪು ಎಂದು ಅರ್ಥಶಾಸ್ತಜ್ಞರು ಹೇಳುತ್ತಾರೆ. ಆಡಳಿತ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ. ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರೈಸುವುದಿಲ್ಲ, ಹಾಗಾಗಿ ಯೋಜನಾ ವೆಚ್ಚ ತೀವ್ರವಾಗಿ ಹೆಚ್ಚುತ್ತದೆ. ನಾನು ಪಾರ್ಲಿಮೆಂಟಿನಲ್ಲಿದ್ದ ೧೮ ವರ್ಷಗಳ ಅವಧಿಯಲ್ಲಿ ಈ ಪ್ರಶ್ನೆಯನ್ನು ಸತತವಾಗಿ
ಎತ್ತುತ್ತಲೇ ಬಂದಿದ್ದೆ.

ಸರಕಾರದ ಎಲ್ಲ ಯೋಜನೆ/ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಗಿಯುವಂತಾದರೆ ಆಗುವ ಆರ್ಥಿಕ ಲಾಭ ಬಹಳ ದೊಡ್ಡದು ಎಂಬುದನ್ನು ಸಂಸತ್ತಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಲೇ ಬಂದಿದ್ದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ವಿಚಾರದ ಬಗ್ಗೆ ಆಳವಾದ ಅರಿವಿದೆ. ಹಾಗಾಗಿ ಬಹುಮುಖ್ಯ ಕಾಮಗಾರಿಗಳ ಒಂದು ಪಟ್ಟಿಯನ್ನು ಅವರು ತಯಾರು ಮಾಡಿದ್ದು, ಅವು ನಿಗದಿತ ಅವಧಿಯಲ್ಲಿ ಮುಗಿಯಬೇಕು ಮತ್ತು ಯೋಜನಾ ವೆಚ್ಚ ಏರಿಕೆಗೆ ಅವಕಾಶ ನೀಡಕೂಡದು ಎಂದವರು ಒತ್ತಿಹೇಳಿದ್ದಾರೆ.

ಇಂಧನ ಬೆಲೆ ವಿಚಾರದಲ್ಲಿ ಜನರಿಗೆ ನ್ಯಾಯ ಕೊಡುವ ಚಿಂತನೆಗೆ ಮತ್ತೆ ಬರುವುದಾದರೆ, ಹಿಂದೆ ಅಟಲ್‌ಜೀಯವರ ಅಧಿಕಾರಾವಧಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ವಿಧಿಸಲಾಗುತ್ತಿದ್ದ ರೋಡ್ ಸೆಸ್ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ. ಆ ಸೆಸ್ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇನ್ನೊಂದು ಕಡೆ
ದೊಡ್ಡ ಮೊತ್ತವನ್ನು ಟೋಲ್ ಶುಲ್ಕವಾಗಿ ಸಂಗ್ರಹಿಸಲಾಗುತ್ತಿದೆ. ನೀವು ಟೋಲ್ ಶುಲ್ಕ ವಿಧಿಸುತ್ತಿರುವಾಗ ಮತ್ಯಾಕೆ ರೋಡ್ ಸೆಸ್ ವಿಧಿಸುತ್ತೀರಿ? ಆದರೆ ಈ ಪ್ರಶ್ನೆಗೆ ಉತ್ತರ ಎಲ್ಲಿಯೂ ಸಿಕ್ಕುತ್ತಿಲ್ಲ. ಜನಸಾಮಾನ್ಯನಿಗೆ ನೆಮ್ಮದಿ ತರುವ ಯಾವ ಕ್ರಮ ಕೈಗೊಳ್ಳುವುದಕ್ಕೂ ಸರಕಾರಗಳಿಗೆ ಮನಸ್ಸಿಲ್ಲ ಎಂದು ಹೇಳಬೇಕಾಗುತ್ತದೆ.

ಜಿ.ಎಸ್.ಟಿ. ಪದ್ಧತಿ ಉತ್ತಮವೆಂದು ಜನರಿಂದ ಸ್ವೀಕೃತವಾಗಿರುವಾಗ ಮತ್ತು ಅದರ ಫಲಿತಾಂಶವೂ ಉತ್ತಮವೇ ಆಗಿರುವಾಗ ಪೆಟ್ರೋಲ್-ಡೀಸೆಲ್
ಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ಯಾಕೆ ತರಬಾರದು? ಒಂದು ದೇಶಕ್ಕೆ ಒಂದು ತೆರಿಗೆ ಪದ್ಧತಿ ಇರಬೇಕು ಎಂಬುದನ್ನು ನಾನು ಸದಾ ಪ್ರತಿಪಾದಿಸುತ್ತಾ ಬಂದವನು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹಮತಕ್ಕೆ ಬಂದು ಒಂದೇ ತೆರನಾದ ಸುಂಕ ವಿಧಿಸುವ ಪದ್ಧತಿ ಜಾರಿಗೆ ತರಬೇಕು. ನಾವು ಒಂದು ರಾಷ್ಟ್ರ-ಒಂದು ಕಾರ್ಡ್ ಪದ್ಧತಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಆ ವಿವಿಧೋದ್ದೇಶ ಕಾರ್ಡಿನಲ್ಲಿ ಆಧಾರ್ ಮತ್ತು ಪಾನ್ ಕಾರ್ಡಿನ ಎಲ್ಲ ಅಂಶಗಳೂ ಇರಬೇಕು. ಎಲ್ಲವನ್ನೂ ಆ ಒಂದು ಕಾರ್ಡ್ ಒಳಗೊಂಡಿರಬೇಕು. ಆದರೆ ನಮ್ಮ ಸರಕಾರಗಳು ಈ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲವೋ, ನನಗಿನ್ನೂ ಅರ್ಥವಾಗುತ್ತಿಲ್ಲ. ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲೇಬೇಕು.