Sunday, 15th December 2024

G Prathap Kodancha Column: ಸ್ವರ್ಗಾರೋಹಣ ವಿವಾದದ ಒಂದು ಇಣುಕು ನೋಟ !

ನುಡಿ ಸ್ವರ್ಗ

ಜಿ.ಪ್ರತಾಪ್‌ ಕೊಡಂಚ

ತನ್ನ ಒಡಲಲ್ಲಿನ ಬಗೆಬಗೆಯ ರುಚಿಕರ ತಿಂಡಿ ಮತ್ತು ಅಡುಗೆಗಳಿಂದಾಗಿ ವಿಶ್ವದಾದ್ಯಂತ ಮನೆಮಾತಾಗಿರುವ ಉಡುಪಿ ಈಗ ಇನ್ನೊಮ್ಮೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಕೃಷ್ಣಾಷ್ಟಮಿಯ ಚಿಣ್ಣರ ವೇಷವೋ, ಹುಲಿ ಕುಣಿತದ ಸ್ಪರ್ಧೆಯೋ, ಮೊಸರು ಕುಡಿಕೆ ಒಡೆಯುವ ವಿಶೇಷ ಸಂಭ್ರಮವೋ ಇದಕ್ಕೆ ಕಾರಣ ಎಂದುಕೊಂಡಿರಾ? ಅದಲ್ಲ. ಹಿಜಾಬ್ ಗಲಾಟೆ? ಛೇ! ಅದೂ ಅಲ್ಲ. ಧಾರಾಕಾರವಾಗಿ ಸುರಿದ ಮಳೆಯೂ ಅಲ್ಲ. ಈ ಸುದ್ದಿಗೆ ಕಾರಣವಾಗಿರು ವುದು- ‘ಸ್ವರ್ಗವೆನಗೆ ಬೇಡ, ನನಗೂ ಬೇಡ’ ಎನ್ನುತ್ತಿರುವ (ಅ)ಸಹನಾಮಣಿಗಳ ಬೊಬ್ಬಿರಿತದ ಸ್ಪರ್ಧೆ! ಅದು ಈಗ ಉಡುಪಿಯಿಂದ ಶುರುವಾಗಿ ಕರ್ನಾಟಕದಾದ್ಯಂತ ಪಸರಿಸುವ ಲಕ್ಷಣ ತೋರುತ್ತಿದೆ.

ಸ್ವರ್ಗಪ್ರಾಪ್ತಿಯ ಗಮ್ಯವನ್ನು ಶತಾಯಗತಾಯ ತಲುಪಲೆಂದು ಕೊಲೆಗೂ ಸನ್ನದ್ಧರಾಗಿರುವವರು(!) ಇರುವ
ಇಂದಿನ ಕಾಲಮಾನದಲ್ಲಿ, ‘ಸ್ವರ್ಗ ಬೇಡ’ ಎನ್ನುವ ಚಳವಳಿಯ ಹಿನ್ನೆಲೆ ಹುಡುಕಿ ಹೊರಟಾಗ ನನಗೆ ಸಿಕ್ಕಿದ್ದು- ಅಲ್ಲಲ್ಲಿನ ಕೆಲ ಮಾಧ್ಯಮಗಳು (ಭಾವಾರ್ಥ) ತಿರುಚಿ ಪ್ರಕಟಿಸಿದ ರೋಚಕ ಶೀರ್ಷಿಕೆಯ ಸುದ್ದಿ; ‘ಸಂಸ್ಕೃತ ಭಾಷೆ ಗೊತ್ತಿಲ್ಲದಿದ್ದರೆ, ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ’ ಎಂಬ ಕೆಂಪಕ್ಷರದ ತಲೆಬರಹದ ಸುದ್ದಿ ಮತ್ತು ಅದರ ಫೋಟೋ, ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಪರ-ವಿರೋಧದ ಅನಿಸಿಕೆಗಳ ಪ್ರವಾಹ.

ಸಾಧ್ಯವೆನಿಸಿದಷ್ಟು ಒಳ್ಳೆಯ ಕೆಲಸ ಮಾಡಿ, ಸ್ವರ್ಗದಲ್ಲೊಂದು ಜಾಗ ಗಿಟ್ಟಿಸಿಕೊಳ್ಳಬೇಕೆಂಬ ಹಲವು ದಶಕಗಳ ಕನಸೊಂದು ಕ್ಷಣಾರ್ಧದಲ್ಲಿ ಈ ರೀತಿಯ ದುಃಖಾಂತ್ಯ ಕಾಣುತ್ತದೆಂದು ಊಹಿಸಿಯೇ ಇರದಿದ್ದ ನಾನು ಒಮ್ಮೆ ಬೆಚ್ಚಿ ಬೆವರಿದ್ದು ನಿಜ! ನನಗೂ ಸಂಸ್ಕೃತ ಬರೋದಿಲ್ಲ ಮತ್ತು ನನ್ನ ಹೆತ್ತವರೂ, ಹಿತೈಷಿಗಳೂ ನನಗಿನ್ನೂ ಈ ಅರಿವು ಮೂಡಿಸಲಿಲ್ಲವಲ್ಲ ಎಂಬ ಬೇಸರವೂ ಹಠಾತ್ತನೆ ಕಾಣಿಸಿಕೊಂಡಿದ್ದು ಸುಳ್ಳಲ್ಲ!

ಇದೆಂಥಾ ಗ್ರಹಚಾರವಾಯ್ತು ಎಂಬ ಗೊಂದಲದಲ್ಲೇ ಸುದ್ದಿಯ ಮೂಲ ಹುಡುಕಿ ಹೊರಟ ನನಗೆ ಸಿಕ್ಕಿದ್ದು, ಈ
ಹೇಳಿಕೆಯನ್ನು ನೀಡಿದ್ದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಎಂಬ ಇನ್ನೊಂದು ಆಘಾತಕಾರಿ ಸುದ್ದಿ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪಣತೊಟ್ಟು, ತಮ್ಮ ನಡುವಿನವರದ್ದೇ ವಿರೋಧವನ್ನು ಎದುರಿಸಿ, ವಿದೇಶಗಳಲ್ಲಿ ವಿರಳ ಸಂಖ್ಯೆಯ ಅನ್ಯಮತೀಯರಾಗಿ ಬದುಕು ಕಟ್ಟಿಕೊಂಡಿರುವ ನಮ್ಮಂಥವರಿಗೊಂದು ವೇದಿಕೆ ಕಲ್ಪಿಸಿ, ನಮ್ಮತನವನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಸುಗುಣೇಂದ್ರ ತೀರ್ಥರು ಹೀಗೆಂದಿರ ಲಿಕ್ಕಿಲ್ಲ ಎನಿಸಿದರೂ, ಮಂಗಳೂರು ಮೂಲದ ಪತ್ರಿಕೆಯೊಂದರ ಈ ತಲೆಬರಹ, ದೇಶವ್ಯಾಪಿ ಪ್ರಸಾರ ಕಾಣುತ್ತಿರುವ ಇಂಗ್ಲಿಷ್ ಪತ್ರಿಕೆಯೊಂದರ ಸುದ್ದಿ ಇದನ್ನು ಹೇಳುತ್ತಿರುವುದನ್ನು ನೋಡಿ ನನ್ನ ಬೆವರುವಿಕೆ ಹೆಚ್ಚಿತು.

ಹೀಗೆ ಬೆವರುತ್ತಲೇ, ಆತ್ಮೀಯ ಮಾರ್ಗದರ್ಶಿಗಳೂ ಆಗಿರುವ ಅಮೆರಿಕದ ನ್ಯೂಜೆರ್ಸಿಯ ಪುತ್ತಿಗೆ ಮಠದ ಜವಾಬ್ದಾರಿ
ಯುತ ಸ್ಥಾನದಲ್ಲಿರುವ ಹಿರಿಯ ಸ್ನೇಹಿತರೊಬ್ಬರನ್ನು ಸಂಪರ್ಕಿಸಿ, ಸ್ವಾಮೀಜಿಗಳ ಅಂದಿನ ಮಾತಿನ ಸಂಪೂರ್ಣ ವಿಡಿಯೋ ತುಣುಕನ್ನು ತರಿಸಿಕೊಂಡು ೨-೩ ಬಾರಿ ಕೇಳಿಸಿಕೊಂಡೆ. ತದನಂತರ, ಒಂದೆರಡು ಪತ್ರಿಕೆಗಳು ವ್ಯಕ್ತಪಡಿ ಸಿದ ಭಾವಾರ್ಥ, ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮವರೇ ಆರಂಭಿಸಿದ ವಾದ- ವಿವಾದ, ‘ನನಗೂ ಸ್ವರ್ಗ ಬೇಡ’ ಎಂಬ ಸ್ವರ್ಗ ನಿರಾಕರಣ ಚಳವಳಿ ಅರ್ಥಹೀನ ಎನಿಸಿದ್ದಂತೂ ನಿಜ.

ಇಷ್ಟಕ್ಕೂ, ಅದ್ಯಾವ ಸಂದರ್ಭ? ಸ್ವಾಮೀಜಿಗಳು ಅಲ್ಲಿ ಹೇಳಿದ್ದೇನು? ಎಂಬುದನ್ನು ಒಮ್ಮೆ ನೋಡೋಣ. ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ, ಒಂದು ತಿಂಗಳ ಕೃಷ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ, ಪ್ರಸ್ತುತ ಪರ್ಯಾಯ ಜವಾಬ್ದಾರಿ ಹೊಂದಿರುವ ಪುತ್ತಿಗೆ ಶ್ರೀಪಾದರು ಸಂಸ್ಕೃತದಲ್ಲೇ ಮಾತನಾಡಿದ್ದರು. ಸಂಸ್ಕೃತದ ಪ್ರಾಚೀನತೆ, ಸರಳತೆ, ಅಗಾಧತೆ ಗಳನ್ನು ವಿವರಿಸುತ್ತಾ, ‘ಎಲ್ಲ ಭಾಷೆಗಳ ಮೂಲ ಸಂಸ್ಕೃತ. ತುಳು ನಮ್ಮ ಪ್ರಾದೇಶಿಕ ಭಾಷೆ, ಕನ್ನಡ ನಮ್ಮ ರಾಜ್ಯದ ಭಾಷೆ, ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ.

ಹಾಗೆಯೇ ದೇವಭಾಷೆ ಎನಿಸಿಕೊಂಡಿರುವ ಸಂಸ್ಕೃತವು ದೇವಲೋಕದ ಭಾಷೆ’ ಎನ್ನುವುದನ್ನು ಹೇಳುವ ಸಂದರ್ಭ ದಲ್ಲಿ, ಸಂಸ್ಕೃತವೆಂಬುದು ಸ್ವರ್ಗವೆನಿಸಿಕೊಂಡಿರುವ ದೇವಲೋಕಕ್ಕೆ ತೆರಳಲು ಅವಶ್ಯ ರಹದಾರಿ ಎನ್ನುವ ತಾತ್ಪರ್ಯದ ಉಪಮೆಗೆ ಉದಾಹರಿಸುತ್ತಾ, ಸಂಸ್ಕೃತವೆಂಬುದು ಸ್ವರ್ಗವನ್ನು ಪ್ರವೇಶಿಸಲು ‘ವೀಸಾ’ ಇದ್ದಂತೆ ಎಂದು ಹೇಳಿ, ಸಂಸ್ಕೃತದ ಕಲಿಕೆಗೆ ಪ್ರೇರೇಪಿಸುವ, ಲಘುಹಾಸ್ಯದ ಲೌಕಿಕ ಉದಾಹರಣೆಯನ್ನು ಬಳಸಿದ್ದರು. ಅವರ ಮಾತಿಗೆ ಸಭೆಯಲ್ಲಿದ್ದ ಶ್ರದ್ಧಾವಂತ ಜನರು, ವೇದಿಕೆಯ ಮೇಲಿದ್ದ ಗಣ್ಯರು ನಕ್ಕು ಹಗುರಾದರು. ಆದರೆ ಶ್ರೀಗಳ ಆ ಮಾತನ್ನೇ ಕೆಲವರು ತಿರುಚಿ ‘ಸ್ವರ್ಗಕ್ಕೆ ಅನರ್ಹರು’ ಎಂಬರ್ಥದ ಸುದ್ದಿ ಪ್ರಕಟಿಸಿ ಕಿಡಿ ಹೊತ್ತಿಸಿದ್ದು!

ಒಂದು ಸುದ್ದಿಯಂತೂ ತಲೆಬರಹವೊಂದನ್ನು ಬಿಟ್ಟು ವಿವರಗಳಲ್ಲೆಲ್ಲೂ ‘ಅದುವೇ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಮಾತಿನ ಇಂಗಿತ’ ಎಂಬುದನ್ನು ತಾನೇ ದೃಢೀಕರಿಸದಿದ್ದುದನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ, ಅದು ವಿವಾದ ವನ್ನು ಸೃಷ್ಟಿಸಲೆಂದೇ ಮಾಡಿದ ತಿರುಚುವಿಕೆ ಎಂಬುದು ಸ್ಪಷ್ಟವಾಗುತ್ತದೆ.

ಒಂದು ವೇಳೆ ಸ್ವಾಮೀಜಿಯವರು, ‘ಸಂಸ್ಕೃತ ಬಲ್ಲವರಿಗೆ ಮಾತ್ರ ದೇವಲೋಕದ ಪ್ರವೇಶ’ ಅಂತ ಹೇಳಿದ್ದಾರೆ ಅಂದು ಕೊಂಡರೂ (ಅವರು ಹಾಗೆಂದಿಲ್ಲ ಎನ್ನಿ!), ತಮ್ಮರಿವಿಗೆ ತಕ್ಕಂತೆ ಶ್ರೇಷ್ಠವೆನಿಸಿದ್ದನ್ನು ಅನುಯಾಯಿಗಳಿಗೆ ಕಲಿಸಲು ಉತ್ತೇಜಿಸಲು ಅವರು ಹಾಗೆಂದಿದ್ದರೆ ಅದರಿಂದಾದ ಪ್ರಮಾದವಾದರೂ ಏನು? ಅವರು ‘ಸಂಸ್ಕೃತ ಕಲಿಯದಿದ್ದರೆ ನರಕವೇ ಗತಿ’ ಎಂದಿಲ್ಲವಲ್ಲ?! ಸಕಾರಾತ್ಮಕ ಪ್ರೇರಣೆಗೆ ಬಳಸಿದ ಉದಾಹರಣೆಯನ್ನು ನಕಾರಾತ್ಮಕ ದೃಷ್ಟಿಯಿಂದ ನೋಡಿ ನಮ್ಮನ್ನೇ ದೂಷಿಸಿಕೊಳ್ಳುವುದರ ಸಾರ್ಥಕತೆಯಾದರೂ ಏನು? ಅಷ್ಟಕ್ಕೂ, ನಾನು ಅಥವಾ ನಿಮ್ಮಲ್ಲೊ ಬ್ಬರು ‘ಸ್ವರ್ಗಕ್ಕೆ ಬರೋಲ್ಲ’ ಎಂದು ನಿರಾಕರಿಸಿದರೆ, ಸ್ವರ್ಗವೇನೂ ನರಕವಾಗೋಲ್ಲವೆನ್ನಿ!

ನಮ್ಮಿಚ್ಛೆಯಂತೆ ಏನೂ ನಡೆಯಲಿಕ್ಕಿಲ್ಲ ಎಂಬ ಖಚಿತತೆ ನನ್ನಂಥ ಬಹುತೇಕರಿಗಿದ್ದರೂ, ನಿರಾಕರಿಸಿ ಹೆಸರುವಾಸಿ ಯಾಗುವ ಹುಂಬತನ ವಿದು ಎನಿಸುತ್ತಿಲ್ಲವೇ? ತಮಗೆ ದಕ್ಕಿದ್ದ ಪ್ರಶಸ್ತಿಯ ಮೊತ್ತವನ್ನು ಹುತ್ತದಲ್ಲೇ ಬಚ್ಚಿಟ್ಟು ಕೊಂಡು, ‘ಪ್ರಶಸ್ತಿ ಪತ್ರ ಅಥವಾ ಪ್ರಶಸ್ತಿಯನ್ನು (ಮಾತ್ರ!)ಹಿಂದಿರುಗಿಸುತ್ತಿದ್ದೇವೆ’ ಎಂಬ ಪತ್ರಿಕಾ ಹೇಳಿಕೆಗಳನ್ನಷ್ಟೇ ಹರಿಯಬಿಟ್ಟ (ಆ) ಸಹಿಷ್ಣುಮತಿಗಳಂತೆಯೇ ಈ ಸ್ವರ್ಗ ನಿರಾಕರಣೆಯ ಹುಂಬರು ಎಂಬು ದಂತೂ ಸ್ಪಷ್ಟ.

ಸಂಸ್ಕೃತವೆಂಬುದು ನಮ್ಮ ಸಮಾಜದ ಒಂದು ವರ್ಗಕ್ಕೆ ಮಾತ್ರ ಸೀಮಿತವೆಂಬ ನೋವು ಕೆಲವೊಂದು ಪ್ರತಿಕ್ರಿಯೆ ಗಳಲ್ಲಿ ಕಾಣಿಸಿದೆ. ಅಂದಿನ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದವರು, ಮುಸ್ಲಿಂ ಸಮುದಾಯದವರಾಗಿದ್ದೂ
ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿಕೊಂಡ ಕೇರಳದ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ಅವರು. ಆರಿಫ್ ಅವರ ಸಂಸ್ಕೃತ ಪಾಂಡಿತ್ಯ, ಆಸಕ್ತಿಗಳನ್ನು ಶ್ರೀಗಳು ಅಂದು‌ ಪ್ರಶಂಸಿಸಿದರು.

‘ದೇವರ ಸ್ವಂತ ನಾಡೆಂದೇ ಪ್ರಖ್ಯಾತವಾಗಿರುವ ಕೇರಳದ ರಾಜ್ಯಪಾಲ ಆರಿಫ್ ಅವರೂ ದೇವಭಾಷೆ‌ ಬಲ್ಲವರು’ ಎಂಬ ಶ್ರೀ ಸುಗುಣೇಂದ್ರ ತೀರ್ಥರ ಅತಿಥಿ ಸತ್ಕಾರದ ಮಾತುಗಳ ನಡುವೆ ಈ ಮಾತುಗಳು ಬಂದಿದ್ದು, ಇತರರಲ್ಲೂ ಸಂಸ್ಕೃತ ಕಲಿಕೆಯನ್ನು ಪ್ರೇರೇಪಿಸುವ ಸ್ವಚ್ಛ ಹಂಬಲದಿಂದ. ಇದು ನಿಚ್ಚಳವಾಗದಿರುವುದು ಹಳದಿ ಕನ್ನಡಕ ಧರಿಸಿದವರಿಗೆ ಮಾತ್ರ ಎನಿಸುತ್ತಿದೆ. ಸುಗುಣೇಂದ್ರ ತೀರ್ಥರ ಇಂಗಿತವೇ ಅಲ್ಲದ ಭಾವಾರ್ಥದ ಸುದ್ದಿಯನ್ನು,
ದೇವರನ್ನೇ ನಂಬದ ಮತ್ತು ಸ್ವರ್ಗವೇ ಇಲ್ಲವೆಂದು ಪ್ರತಿಪಾದಿಸಿಕೊಂಡು ಬಂದಿದ್ದ ಹಲವರು ತಮ್ಮ ಪ್ರತಿಭಟನಾ
ಸ್ವರೂಪದ ‘ಸ್ವರ್ಗ ನಿರಾಕರಣೆ’ಗೆ ಮಾತ್ರ ಬಳಸಿಕೊಂಡರಷ್ಟೇ.

ಇದು ಅವರವರ ದ್ವಂದ್ವವನ್ನು ತೆರೆದಿಟ್ಟ ದೈವಿಕ ಸತ್ಯ! ‘ನಮ್ಮೂರು ಕುಂದಾಪುರ, ನಮಗೆ ಕುಂದಾಪುರವೇ ಸ್ವರ್ಗ’ ಎಂದು ಒಂದೊಮ್ಮೆ ಹೇಳಿದರೆ, ಪಕ್ಕದ ಉಡುಪಿಯಲ್ಲಿರುವವರು ನರಕದಲ್ಲಿದ್ದಾರೆ ಎಂದರ್ಥವೇ? ನಮ್ಮೂರಿನ ಬಗ್ಗೆ ನಮಗಿರುವ ಅಭಿಮಾನದಿಂದಾಗಿ ಕುಂದಾಪುರವನ್ನು ನಾವು ಹೊಗಳುತ್ತೇವೆ. ಉಡುಪಿ, ಮಂಗಳೂರು, ಬೆಳಗಾವಿ ಹೀಗೆ ಯಾವುದೇ ಊರಿಗೆ ಸೇರಿದವರು ಅಥವಾ ಆ ಮಣ್ಣಿನ ಅಭಿಮಾನಿಗಳು ತಮ್ಮ ನೆಲದ ಬಗ್ಗೆ ಹೀಗೆ ಹೇಳಿಕೊಳ್ಳು ವುದು ಸಹಜ. ಆ ಊರಿನತ್ತ, ಆ ಸಮಾಜಗಳತ್ತ ಹೊರಗಿನವರನ್ನು ಆಕರ್ಷಿಸುವ ಸಾತ್ವಿಕ ಅಭಿಮಾನ, ತುಸು ಗರ್ವ ಅದರಲ್ಲಿರುವುದು ನಿಜವೆನಿಸಿದರೂ, ಅದರ ಹಿಂದೆ ‘ನಮ್ಮೂರು ಒಂದೇ ಶ್ರೇಷ್ಠ, ಉಳಿದವು ನಿಕೃಷ್ಟ’ ಎಂಬ ಭಾವನೆ ಖಂಡಿತವಾಗಿಯೂ ಇರುವುದಿಲ್ಲ.

ಬಹುಪಾಲು ಜನರು ‘ಅಮ್ಮನ ಮಡಿಲೇ ಸ್ವರ್ಗ’ ಎನ್ನುವುದುಂಟು; ಹಾಗೆಂದ ಮಾತ್ರಕ್ಕೆ ಅಪ್ಪನ, ಅಥವಾ ಅಜ್ಜ-
ಅಜ್ಜಿಯ ಮಡಿಲು ನರಕವೆಂಬ ಭಾವನೆ ಅಲ್ಲಿ ತುಳುಕುತ್ತದೆಯೇ? ಖಂಡಿತವಾಗಿಯೂ ಇಲ್ಲ. ಕೊನೆಯಲ್ಲಿ ನನ್ನ ದೊಂದು ಚಿಕ್ಕದಾದ ಅಫಿಡವಿಟ್ಟು: ನಾನು ಶ್ರೀಮಠದ ವಕ್ತಾರನಲ್ಲ. ಮಠದಲ್ಲಿನ ಕೆಲವು ಹಿರಿಯರ ಸಂಪರ್ಕ ನನಗಿದೆಯಾದರೂ, ಅವರಾರೂ ನನ್ನನ್ನು ಪ್ರೇರೇಪಿಸಿ ಬರೆಸಿದ ಅನಿಸಿಕೆ ಇದಲ್ಲ. ಉಡುಪಿಯ ಸುತ್ತಮುತ್ತಲಿನವನೇ ಆದರೂ, ನಾನು ಮಠಕ್ಕೆ ಕೊಟ್ಟ ಭೇಟಿ ಬೆರಳಿಕೆಯಷ್ಟು ಸಲದ್ದು. ಶ್ರೀಕೃಷ್ಣಮಠಕ್ಕೆ ಹೋಗಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಬಾರಿ ನನ್ನ ಉಡುಪಿ ಭೇಟಿ ತಲುಪಿದ್ದು ರಥಬೀದಿಯಲ್ಲಿನ ಮಿತ್ರಸಮಾಜವನ್ನೋ ಅಥವಾ ಅಲ್ಲೇ ಸನಿಹ ದಲ್ಲಿರುವ ವುಡ್‌ಲ್ಯಾಂಡ್ಸ್ ಉಪಾಹಾರ ಗೃಹವನ್ನೋ ಎಂಬುದು ನಾನಿಲ್ಲಿ ನಾಚಿಕೊಳ್ಳುತ್ತಲೇ ದಾಖಲಿಸಲು ಬಯಸುವ ಸತ್ಯ. ಪಾಂಡಿತ್ಯ ಬಿಡಿ, ಅದು ೩ ಅಥವಾ ೪ನೇ ತರಗತಿಯಲ್ಲಿದ್ದಾಗ ೧೦ ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರವೊಂದರಲ್ಲಿ ತೊಡಗಿಸಿಕೊಂಡಿದ್ದರ ಫಲ ಶ್ರುತಿಯಷ್ಟೇ. ಅದನ್ನು ಹೊರತುಪಡಿಸಿದರೆ, ಬೇರಾವ ಸಂಸ್ಕೃತ ಅಧ್ಯಯನದ ಪರಿಶ್ರಮ ನನ್ನದಲ್ಲ.

ಹೀಗಿದ್ದೂ, ಸುಗುಣೇಂದ್ರ ತೀರ್ಥರ ಸಂಸ್ಕೃತ ಮಾತಿನ ಪದಶಃ ಅರ್ಥ, ನನ್ನರಿವಿನ ಅಲ್ಪ ಪ್ರಮಾಣದ ಕನ್ನಡ ಜ್ಞಾನದ ಮೂಲಕವೇ ಆಗಿದೆ. ಸಂಸ್ಕೃತವೇ ಬರದ, ಸ್ವರ್ಗವನ್ನು ಬಯಸದಿದ್ದರೂ ತಕ್ಕಮಟ್ಟಿನ ಕನ್ನಡ ಬಳಕೆ
ಬಲ್ಲ, ಧರಿಸಿಕೊಂಡಿರುವ ಬಣ್ಣಬಣ್ಣದ ಕನ್ನಡಕವನ್ನು ಕಳಚಿಟ್ಟು ಸುಗುಣೇಂದ್ರ ತೀರ್ಥರ ಅಂದಿನ ಸಂಪೂರ್ಣ
ಮಾತನ್ನು ಕೇಳಿಸಿಕೊಳ್ಳಬಲ್ಲ ಎಲ್ಲ ಸಹೃದಯಿಗಳಿಗೂ ಶ್ರೀಗಳ ಮಾತಿನ ಭಾವಾರ್ಥ ತಲುಪಬಲ್ಲದು ಎಂಬುದು
ನನ್ನ ವಿನಮ್ರ ಅನಿಸಿಕೆ ಮತ್ತು ವೈಯಕ್ತಿಕ ಅನುಭವ.

ಇನ್ನು, ಎಲ್ಲರನ್ನೂ ಒಪ್ಪಿಸುವ ಹುಂಬತನ ನನ್ನದಲ್ಲ. ‘ಒಂದನ್ನು ಎರಡೆಂಬ, ಹಂದಿ ಹೆಬ್ಬುಲಿಯೆಂಬ, ನಿಂದ
ದೇಗುಲದ ಮರೆವೆಂಬ ಮೂರ್ಖ ತಾನೆಂದಂತೆ ಎನ್ನಿ ಸರ್ವಜ್ಞ’ ಎಂಬ ವಚನದ ಪರಿಪಾಲಕನೂ ನಾನಲ್ಲ. ಹಾಗಾಗಿ, ಸಂದರ್ಭಸಹಿತವಾಗಿ ವಿಷಯ ತೆರೆದಿಟ್ಟು, ಫಲಾಫಲವನ್ನು ‘ಅವರವರ ಭಾವಕ್ಕೆ, ಅವರವರ ಭಕುತಿಗೆ’ ಸಮರ್ಪಿ ಸಲು ಇಲ್ಲಿ ಯತ್ನಿಸಿರುವೆ.

(ಲೇಖಕರು ಹವ್ಯಾಸಿ ಬರಹಗಾರರು)