ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ಜಾರ್ಜಿಯಾ ಎನ್ನುವ ದೇಶ ಮೊದಲಿಗೆ ಯುಎಸ್ ಎಸ್ಆರ್ನ ಭಾಗವಾಗಿತ್ತು. ಅಮೆರಿಕ ಮತ್ತು ರಷ್ಯಾ ನಡುವಿನ ಶೀತಲ ಸಮರದಲ್ಲಿ ಕೊನೆಗೂ ಕಮ್ಯುನಿಸ್ಟ್ ರಷ್ಯಾ ಸೋಲುತ್ತದೆ, ಸೋವಿಯತ್ ಯೂನಿಯನ್ ಛಿದ್ರವಾಗುತ್ತವೆ. ಹೀಗೆ ಛಿದ್ರವಾಗಿ ಅನೇಕ ಹೊಸ ರಾಷ್ಟ್ರಗಳ ಉದಯವಾಗುತ್ತದೆ. ಜಾರ್ಜಿಯಾ ಅದರಲ್ಲಿ ಒಂದು.
ತೂಬಿಲಿಸಿ ಜಾರ್ಜಿಯಾದ ರಾಜಧಾನಿ. ಮಧ್ಯಮ ಯುಗದ ಜಾರ್ಜಿಯಾ ಸಮೃದ್ಧವಾಗಿತ್ತು. ಕಪ್ಪು ಸಮುದ್ರವನ್ನ ನೋಡಲು ಬರುವ ಜನರ ಆರೈಕೆಯಲ್ಲಿ ಟೂರಿಸಂ ಬಹಳ ಚೆನ್ನಾಗೇ ಅಭಿವೃದ್ಧಿ ಹೊಂದಿತ್ತು. ಮ್ಯಾಂಗನೀಸ್ ಮತ್ತು ತಾಮ್ರವನ್ನ ಗಣಿಗಾರಿಕೆ ಮಾಡಿ ಕೂಡ ಸಾಕಷ್ಟು ಹಣವನ್ನ ಸರಕಾರ ಗಳಿಸುತ್ತಿತ್ತು. ಜತೆಗೆ ಸಿಟ್ರಸ್ ಜಾತಿಯ
ಹಣ್ಣುಗಳನ್ನ ಬೆಳೆಯುವುದು ಕೂಡ ಸಾಕಷ್ಟು ಲಾಭ ತಂದುಕೊಡುವ ಉದ್ಯಮವಾಗಿತ್ತು. ಅಲ್ಲದೆ ಟೀ ಮತ್ತು ದ್ರಾಕ್ಷಿ
ಹಣ್ಣು ಬೆಳೆಸುವುದು ಕೂಡ ಲಾಭದಾಯಕ ಉದ್ದಿಮೆಯಾಗಿತ್ತು. ಇವೆಲ್ಲವುಗಳ ಜತೆಗೆ ಕೈಗಾರಿಕೀಕರಣ ಕೂಡ ಬಹಳವಲ್ಲದಿದ್ದರೂ ಸಾಕಷ್ಟು ಇತ್ತು. ಮೆಟಲ್, ಮಷಿನರಿ, ಕೆಮಿಕಲ್ ಮತ್ತು ಟೆಕ್ಸ್ ಟೈಲ್ ಕೈಗಾರಿಕೆಗಳು ಕೂಡ ಸರಕಾರದ ಖಜಾನೆ ತುಂಬಿಸುವ ಆದಾಯದ ಮೂಲವಾಗಿದ್ದವು.
ಜನ ಸಾಕಷ್ಟು ನೆಮ್ಮದಿಯಿಂದ ಬದುಕುತ್ತಿದ್ದರು. ಜನರ ನೆಮ್ಮದಿಯನ್ನ ಎಂದೂ ಗಣನೆಗೆ ತೆಗೆದುಕೊಳ್ಳದ ಒಂದಷ್ಟು ಶಕ್ತಿ ಕೇಂದ್ರಗಳು ಜಾಗತಿಕವಾಗಿ ಪ್ರಬಲ ಶಕ್ತಿಯಾಗಲು ಹೊಡೆದಾಟ ನಡೆಸುತ್ತಲೇ ಬಂದಿವೆ. ಅಮೆರಿಕ ಜತೆಗಿನ ಶೀತಲ ಸಮರದಲ್ಲಿ ರಷ್ಯಾ ಛಿದ್ರವಾಗುತ್ತೆ. ಅದರೊಂದಿಗೆ ಜಗತ್ತು ಬದುಕುವ ರೀತಿ ಕೂಡ ಬದಲಾಗುತ್ತೆ. ಆನಂತರ ಒಂದೂವರೆ ದಶಕಗಳ ಕಾಲ ಅಮೆರಿಕಕ್ಕೆ ಸೆಡ್ಡು ಹೊಡೆಯುವರು ಯಾರೂ ಇರಲಿಲ್ಲ ಎನ್ನಬಹುದು. ಚೀನಾದ ಪ್ರವೇಶದೊಂದಿಗೆ ಅಮೆರಿಕ ಮತ್ತೆ ಪ್ರಬಲ ಪೈಪೋಟಿಗೆ ಮುಖ ಮಾಡಿದೆ. ಚೀನಾ ಜತೆಗೆ ಭಾರತ ಕೂಡ ಅಮೆರಿಕದ ಸಾರ್ವಭೌಮತ್ವಕ್ಕೆ ಸವಾಲಾಗಿ ನಿಂತಿದೆ. ಈ ಸಮಯದಲ್ಲಿ ಟೆಕ್ನಾಲಜಿ ಎನ್ನುವುದು ಊಹಿಸಲಾಗದ ವೇಗದಲ್ಲಿ
ಜಗತ್ತನ್ನ ಮತ್ತು ಜನರನ್ನ ಆಕ್ರಮಿಸಿದೆ.
ತಿಂಗಳುಗಳು ತೆಗೆದುಕೊಳ್ಳುತ್ತಿದ್ದ ಕೆಲಸಗಳು ದಿನಗಳಲ್ಲಿ ಅಥವಾ ಗಂಟೆಗಳಲ್ಲಿ ಮುಗಿದುಹೋಗುವ ವೇಗ ಪಡೆದು ಕೊಂಡಿವೆ. ತಂತ್ರಜ್ಞಾನ ಬಳಕೆ ಮಾಡಿಕೊಂಡು ಬಹಳಷ್ಟು ದೇಶಗಳು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿವೆ. ಒಂದು ನಾಣ್ಯಕ್ಕೆ ಎರಡು ಮುಖವಿರುವಂತೆ ತಂತ್ರeನ ತನ್ನೊಂದಿಗೆ ಒಂದಷ್ಟು ಘಾತುಕ ವಿಷಯಗಳನ್ನ ಕೂಡ ಹೊತ್ತು ತಂದಿದೆ. ಜಪಾನ್ ದೇಶ ಆನ್ಲೈನ್ ಆಟಗಳಿಗೆ ಅಡಿಕ್ಟ್ ಆಗಿರುವುದು ಮತ್ತು ಜನರು ವರ್ಚುಯಲ್ ವರ್ಲ್ಡ್ ನಲ್ಲಿ ಮುಳುಗಿರುವುದು ತಿಳಿದ ವಿಷಯ; ಜಾರ್ಜಿಯಾ ಕೂಡ ತಂತ್ರeನದ ಸೈಡ್ ಎಫೆಕ್ಟ್ ನಿಂದ ಜರ್ಜರಿತವಾಗಿದೆ.
ಇವೆಲ್ಲಾ ಏನು, ಎತ್ತ? ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಜಾರ್ಜಿಯಾದ ಜನಸಂಖ್ಯೆ 38 ಲಕ್ಷ. ಯುಎಸ್ಎಸ್ಆರ್ ಭಾಗವಾಗಿ ಹೊಸ 15 ದೇಶಗಳ ಉಗಮವಾಗುತ್ತದೆ. ಅದರಲ್ಲಿ ಜಾರ್ಜಿಯಾ ಕೂಡ ಒಂದು. 80 ಪ್ರತಿಶತ ಕ್ರಿಶ್ಚಿಯನ್, 11 ಪ್ರತಿ ಶತ ಮುಸ್ಲಿಂ ಮತ್ತು ಉಳಿದ ಧರ್ಮದ ಜನ ಇಲ್ಲಿದ್ದಾರೆ.
40 ಲಕ್ಷಕ್ಕೂ ಕಡಿಮೆ ಜನಸಂಖ್ಯೆಯ ಜಾರ್ಜಿಯಾ ಸುಖವಾಗೇ ಇತ್ತು- ಎಲ್ಲಿವರೆಗೆ ಆನ್ಲೈನ್ ಜೂಜಾಟ ಇರಲಿಲ್ಲ ವೋ ಅಲ್ಲಿವರೆಗೆ. ಇದೀಗ ಇಲ್ಲಿನ 7 ಲಕ್ಷ ಜನರು ಈ ಜೂಜಾಟದ ದಾಸರಾಗಿದ್ದಾರೆ. ಇಂಥ ಆಟವನ್ನ ಆಡಲು 18 ವರ್ಷ ತುಂಬಿರಬೇಕು. ಇದಕ್ಕೆ ಯುರೋಪಿನ ದೇಶಗಳಲ್ಲಿ 21 ಅಥವಾ 23ರ ವಯೋಮಿತಿ ಇದೆ.
ಆದರೆ ಜಾರ್ಜಿಯಾದ ಯುವಜನತೆಗೆ ಇದೊಂದು ತರಹದ ಹುಚ್ಚು ಹಿಡಿದಿದೆ. 2021ರಲ್ಲಿ ಈ ವಯೋಮಿತಿಯನ್ನು 21 ವರ್ಷಕ್ಕೆ ಏರಿಸಲಾಗಿದೆ. ಜತೆಗೆ ಈ ಸಮಸ್ಯೆ ಮುಂದುವರಿದರೆ ಅದನ್ನು 25ಕ್ಕೆ ಏರಿಸುವ ಯೋಚನೆ ಕೂಡ ಇದೆ ಎನ್ನಲಾಗುತ್ತದೆ. ಬಹಳಷ್ಟು ಯುವ ಜನರು ತಮ್ಮ ಪೋಷಕರ ಗುರುತನ್ನ ಬಳಸಿ ಇಂಥ ಆನ್ಲೈನ್ ಅಡ್ಡಗಳಲ್ಲಿ ಆಟ ಆಡಲು ಬರುತ್ತಾರೆ. ಇದು ಅವರ ಮುಂದಿನ ದಾರಿಯನ್ನ ಮುಚ್ಚಿಬಿಟ್ಟಿದೆ.
ಮಧ್ಯಮ ವಯಸ್ಸಿನ ಜನ ಇದರಿಂದ ಸಂಸಾರದಲ್ಲಿ ಬಿರುಕು ತಂದುಕೊಂಡಿದ್ದಾರೆ. ಜಾರ್ಜಯಾ ಇಂದು ಒಡೆದ ಮನೆ. ಜನರಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದು ಈಗ ರಾಷ್ಟ್ರೀಯ ಸಮಸ್ಯೆಯಾಗಿ ಅಲ್ಲಿನ ಸಂಸದರು ಇದಕ್ಕೆ ಪರಿಹಾರ ಹುಡುಕುತ್ತಿದ್ದಾರೆ. ಇದರ ಫಲವಾಗಿ ಇಂಥ ಆಟಗಳ ಮೇಲಿನ ತೆರಿಗೆಯನ್ನ ದುಪ್ಪಟ್ಟು
ಗೊಳಿಸ ಲಾಯಿತು. ಇದರಿಂದ ಸರಕಾರದ ಖಜಾನೆಗೆ ಹೇರಳವಾಗಿ ಹಣ ಹರಿದುಬರುತ್ತಿದೆ. 2016ರ ಅಂಕಿ-ಅಂಶಕ್ಕೆ ಹೋಲಿಸಿದರೆ 2017-2018ರಲ್ಲಿ ಮತ್ತು 2024ರಲ್ಲಿ ಸಂಗ್ರಹವಾದ ಹಣದ ಮೊತ್ತ ಅಚ್ಚರಿಗೊಳಿಸುತ್ತದೆ. ಸರಕಾರಕ್ಕೇ ಇಷ್ಟು ಹಣ ಬರುತ್ತಿರ ಬೇಕಾದರೆ, ಇಂಥ ಕ್ಯಾಸಿನೊ ನಡೆಸುವ ಜನರಿಗೆ ಎಷ್ಟು ಬರುತ್ತಿರಬಹುದು? ಹೀಗೆ ಬಹಳ ಹಣ ಸಂಪಾದಿಸಿರುವ ಈ ಜನ ಕ್ಯಾಸಿನೊ ಮುಚ್ಚಲು ಬಿಡದೆ ಲಾಬಿ ಮಾಡುತ್ತಿದ್ದಾರೆ.
ಹೇಗಾದರೂ ಸರಿಯೇ ಜನರನ್ನ ದಾಸರನ್ನಾಗಿಸುವ ಈ ಆನ್ಲೈನ್ ಕ್ಯಾಸಿನೊಗಳನ್ನ ಮುಚ್ಚಿಸಬೇಕು ಎಂದು ಅಲ್ಲಿನ ಕನ್ಸರ್ವೆಟಿವ್ ಪಕ್ಷದ ಕೆಲವರು ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಕ್ಕಿಲ್ಲ. ತೂಬಿಲಿಸಿ ನಗರದಲ್ಲಿ
ಸ್ವರ್ಗವನ್ನ ನಾಚಿಸುವ ಕ್ಯಾಸಿನೊಗಳು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತವೆ. ಇಲ್ಲಿ ಆಡಲು ಬಂದವರು ನಶೆಗೆ ಒಳಗಾದವರಂತೆ ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. ಸೋಲು ಅವರನ್ನ ಸಾಲದ ಸುಳಿಗೆ ತಳ್ಳುತ್ತದೆ. ಇಂಥವರ ಸಂಖ್ಯೆಯೂ ಅಸಂಖ್ಯ. ವಿದ್ಯಾಭ್ಯಾಸ ಮುಂದುವರಿಸಲಾಗದ ಯುವಜನರು, ಕೆಲಸ ಮಾಡಲಾಗದ ಜನರು, ಸಂಸಾರವನ್ನ ಕಳೆದುಕೊಂಡ ಜನರು ಹೀಗೆ ಜಾರ್ಜಿಯಾ ಹೊಸದೊಂದು ಸಮಸ್ಯೆಯ ಸುಳಿಯಲ್ಲಿದೆ.
ದೇಶದ ಇತರ ನಾಗರಿಕರಿಗೆ ಈ ವೈರಸ್ ಹರಡುವ ಮುಂಚೆ, ಹೀಗೆ ವ್ಯಸನಕ್ಕೆ ತುತ್ತಾದವರನ್ನು ಆ ಕೂಪದಿಂದ ಹೊರತರಲು ಸರಕಾರವು ಮನಶ್ಶಾಸ್ತ್ರಜ್ಞರ ಮೊರೆಹೋಗಿದೆ. ಇಲ್ಲಿನ ಮನಶ್ಶಾಸ್ತ್ರಜ್ಞರ ಪ್ರಕಾರ ಹೀಗೆ ವ್ಯಸನಕ್ಕೆ ಸಿಕ್ಕ ಜನತೆಯನ್ನ ಮರಳಿ ದಾರಿಗೆ ತರಲು ಸಮಯ ಬೇಕು. ಹಾಗೊಮ್ಮೆ ಈ ವ್ಯಸನದಿಂದ ಹೊರಬಂದ ವ್ಯಕ್ತಿ ಹೆಜ್ಜೆ ಹೆಜ್ಜೆಗೂ ಕಾಣುವ, ಕಣ್ಣು ಕೋರೈಸುವ ಕ್ಯಾಸಿನೊ ಬಲೆಗೆ ಬೀಳುವುದು ಕಷ್ಟವೇನಲ್ಲ.
‘ಕ್ಯಾಸಿನೊ ಬೇಡ’ ಎನ್ನುವವರ ಸಂಖ್ಯೆ ಕಡಿಮೆಯೇನಿಲ್ಲ; ಆದರೆ ಅವರ ಸದ್ದು ಮಾತ್ರ ಎಷ್ಟಿರಬೇಕೋ ಅಷ್ಟಿಲ್ಲ. ಕ್ಯಾಸಿನೊ ಪರವಾಗಿ ಲಾಬಿ ಮಾಡುವ ಜನರು ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚು ಹಣ ಮಾಡಿಕೊಂಡು ನಗುತ್ತಿದ್ದಾರೆ. ಇಂಥ ಸಮಸ್ಯೆಯನ್ನ ಕೂಡ ಸರಕಾರ ಹಲವಾರು ವರ್ಷದಿಂದ ಮುಂದೂಡಿಕೊಂಡು ಬಂದಿದೆ
ಎಂದರೆ ಲಾಬಿಕೋರರ ಶಕ್ತಿ ಎಷ್ಟಿರಬಹುದು? ಕೊನೆಗೆ ಒತ್ತಾಯ ತಡೆಯಲಾಗದ ಸರಕಾರ ‘ಕ್ಯಾಸಿನೊ ಬೇಕೋ ಬೇಡವೋ ಎನ್ನುವುದನ್ನ ಜನರು ಮತ ಚಲಾಯಿಸಿ ನಿರ್ಧರಿಸಲಿ’ ಎಂದು ಹೇಳಿ ಕೈ ತೊಳೆದುಕೊಂಡಿದೆ.
2014ರಲ್ಲಿ, ‘ಯುರೋಪಿಯನ್ ಇಕನಾಮಿಕ್ ಝೋನ್ ’ನಲ್ಲಿ ಜಾರ್ಜಿಯಾ ಸದಸ್ಯತ್ವ ಪಡೆಯಿತು. ಅಂದರೆ ಇಲ್ಲಿ ಫ್ರೀ ಟ್ರೇಡ್ಗೆ ಅವಕಾಶವಿದೆ. ಹೆಚ್ಚಿನ ತೆರಿಗೆ ಮತ್ತು ಪೇಪರ್ವರ್ಕ್ ಇಲ್ಲದೆ ವ್ಯಾಪಾರ ಮಾಡಬಹುದು. ಹೀಗಾಗಿ ‘ಯುರೋಪಿಯನ್ ಯೂನಿಯನ್’ ಜಾರ್ಜಿಯಾದ ಮುಖ್ಯ ಟ್ರೇಡ್ ಪಾರ್ಟ್ನರ್. ಯುರೋಪಿನಲ್ಲಿ ಸದ್ಯಕ್ಕೆ ಇರುವ ಸಮಸ್ಯೆಗಳಿಗೆ ಅವರು ಉತ್ತರ ಹುಡುಕುತ್ತಿದ್ದಾರೆ.
2007ರಲ್ಲಿ ಅಮೆರಿಕದಲ್ಲಿ ಶುರುವಾದ ಹಣಕಾಸು ಮುಗ್ಗಟ್ಟು 2009ರಲ್ಲಿ ಯುರೋಪನ್ನ ಆಕ್ರಮಿಸಿತ್ತು. ಅಂದಿ ನಿಂದ ಇಂದಿನವರೆಗೆ ಅಂದರೆ 2024ರಲ್ಲಿ ಕೂಡ ಯುರೋಪ್ ಚೇತರಿಸಿಕೊಳ್ಳುವ ಹಂತದ ಇದೆ. ಕಳೆದ ಎರಡು ವರ್ಷದಿಂದ ಯುರೋಪಿನ ಮುಖ್ಯ ಎಂಜಿನ್ ಜರ್ಮನಿ ಕೂಡ ಸ್ವಲ್ಪ ನಿಧಾನಗತಿ ಕಂಡಿದೆ. ಬಹುತೇಕ ಐರೋಪ್ಯ ದೇಶಗಳು ಹೇಳಿಕೊಳ್ಳುವ ಅಭಿವೃದ್ಧಿ ಕಾಣುತ್ತಿಲ್ಲ. ಜಾರ್ಜಿಯಾಗೆ ಯುರೋಪಿನ ಅವಲಂಬನೆಯಲ್ಲಿ ಬದುಕ ಬೇಕಾದ ಸ್ಥಿತಿಯಿದೆ. ಪರಿಸ್ಥಿತಿ ಹೀಗಿದ್ದೂ ಜಾರ್ಜಿಯಾ ಆಂತರಿಕವಾಗಿ ಬದಲಾಗದೆ ಸಮಸ್ಯೆಯಿಂದ ಬಳಲುತ್ತಿದೆ. ಆನ್ಲೈನ್ನಲ್ಲಿ ಆಡುವ ಕ್ಯಾಸಿನೊಗಳಲ್ಲಿ ಆಟಗಾರನಿಗೆ 70 ಪ್ರತಿಶತ ವಾಪಸ್ ನೀಡಬೇಕು ಎನ್ನುವ ರೀತಿಯಲ್ಲಿ ಆಟವನ್ನ ನಿರ್ಮಿಸಲಾಗಿದೆ. ಅಂದರೆ ಆಟಗಾರ 100 ರುಪಾಯಿಯನ್ನ ಆಟದಲ್ಲಿ ತೊಡಗಿಸಿದರೆ 70 ರುಪಾಯಿ ಆತನಿಗೆ ವಾಪಸ್ ಹೋಗಬೇಕು ಎನ್ನುವ ರೀತಿಯಲ್ಲಿ ಆಟವನ್ನ ನಿರ್ಮಿಸಲಾಗಿದೆ. ಅಂದರೆ ಆತ ಪೂರ್ಣ ಹಣವನ್ನ ಕಳೆದುಕೊಂಡರೆ ಆತನಿಗೆ ಆಟದಲ್ಲಿ ಮತ್ತೆ ಸ್ಪೂರ್ತಿ ಹುಟ್ಟುವುದಿಲ್ಲ.
ಹೀಗಾಗಿ ಒಂದಷ್ಟು ವಾಪಸ್ ಕೊಡಬೇಕು, ಮತ್ತೆ ಮತ್ತೆ ಆಡುವಂತೆ ಆತನನ್ನ ಪ್ರೇರೇಪಿಸಬೇಕು. ಇದರ ಜತೆಗೆ ಲೈವ್
ಕ್ಯಾಸಿನೊದಲ್ಲಿ ಅಳವಡಿಸಿಕೊಂಡಿರುವ ‘ಮುಂದಿನ ಬಾರಿ ಗೆಲುವು ನನ್ನದೇ’ ಎನ್ನುವ ಭಾವದ ತಂತ್ರವನ್ನು ಇಲ್ಲೂ
ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಸೋಲು ಸೋಲಲ್ಲ ಎನ್ನುವ ಭಾವನೆ ಆಟಗಾರರಲ್ಲಿ ಉಂಟಾಗುತ್ತದೆ. ಮುಂದಿನ ಆಟದಲ್ಲಿ ಗೆಲ್ಲುವ ಉಮೇದಿನಲ್ಲಿ ಸಾಲ ಮಾಡಿಯಾದರೂ ಸರಿಯೇ ಅವರು ಆಟವನ್ನ ಆಡಲು ಮತ್ತೆ ಬರುತ್ತಾರೆ. ಗ್ಯಾಂಬ್ಲಿಂಗ್ ಸಾಮಾಜಿಕ ಪಿಡುಗಾಗಿ ಮಾರ್ಪಾಡಾಗಲು ಇದು ಬಹುಮುಖ್ಯ ಕಾರಣ.
ಅಂದರೆ, ಇಲ್ಲಿ ಸೋಲಿನ ಭ್ರಮನಿರಸನ ಒಮ್ಮೆಲೇ ನಿಮ್ಮನ್ನ ಅವರಿಸಿಕೊಳ್ಳಲು ಬಿಡುವುದಿಲ್ಲ; ನಿಧಾನವಾಗಿ ವ್ಯಸನಕ್ಕೆ ದೂಡಿ ನಿಮ್ಮಲ್ಲಿದ್ದ ಸರ್ವಸ್ವವನ್ನೂ ಇದು ಕಸಿದುಕೊಳ್ಳುತ್ತದೆ. ಕೊನೇಮಾತು: ಜಾರ್ಜಿಯಾ ಇಂದಿಗೆ ಇಂದೇ ಸಮಸ್ಯೆಯ ಸುಳಿಯಿಂದ ಹೊರಬಂದರೂ ಆರ್ಥಿಕವಾಗಿ ಸಬಲವಾಗಲು ಸಮಯ ಬೇಕು. ಜಗತ್ತಿನ ಕೆಲವು ಬಲಿಷ್ಠ ಮನೆತನಗಳು ಮತ್ತಷ್ಟು ಹಣವಂತರಾಗಲು ಜಗತ್ತಿನ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಆಡುವ ಆಟ ದಲ್ಲಿ ಒಂದು ವರ್ಗದ ಜನರು, ಒಂದು ತಲೆಮಾರಿನವರು ಭವಿಷ್ಯವೇ ಇಲ್ಲದೆ ಜೀವವಿರುವ ಶವಗಳಾಗಿ ಹೇಗೆ ಕಳೆದುಹೋಗುತ್ತಾರೆ ಎನ್ನುವುದು ಆಶ್ಚರ್ಯ ಹುಟ್ಟಿಸುತ್ತದೆ.
ಅದರ ಜತೆಜತೆಗೆ, ಕಣ್ಣ ಮುಂದಿರುವ ‘ಟ್ರ್ಯಾಪ್/ಬಲೆಯನ್ನ’ ಗಮನಿಸದೆ ಅಷ್ಟೊಂದು ದೊಡ್ಡ ಸಂಖ್ಯೆಯ ಜನ ಹೇಗೆ
ಬಲಿಯಾಗುತ್ತಾರೆ ಎನ್ನುವುದು ಕೂಡ ಕುತೂಹಲದ ಪ್ರಶ್ನೆ. ಜಗತ್ತಿನ ಮೇಲೆ ಹಿಡಿತ ಸಾಧಿಸುವ ಹೊಡೆದಾಟದಲ್ಲಿ ರಷ್ಯಾ ಛಿದ್ರವಾದ ಹಾಗೆ ಆಕಸ್ಮಾತ್ ಚೀನಾ ಛಿದ್ರವಾದರೆ? ನಿಮ್ಮ ಮನೆಯಲ್ಲಿ ಮುಸುರೆ ತಿಕ್ಕಲು ನಿಂಗಮ್ಮ, ಗಂಗಮ್ಮರ ಜಾಗದಲ್ಲಿ ಚೀನಿ ಹುಡುಗಿ ಇರುತ್ತಾಳೆ, ಖಂಡಿತ!
ಇದನ್ನೂ ಓದಿ: Rangaswamy Mookanahalli Column: ಸ್ವಾತಂತ್ರ್ಯವೇ ಜಗತ್ತಿನಲ್ಲಿ ಬೆಲೆ ಬಾಳುವ ಆಸ್ತಿ !