Sunday, 15th December 2024

ಪಂಚಚಾಮರ ಸರ್ಕಲ್‌ನಲ್ಲಿ ಪೆಂಡಾಲ್ ಗಣಪತಿಯ ಪಾಡು

ತಿಳಿರು ತೋರಣ

srivathsajoshi@yahoo.com

ನಿಜವಾಗಿಯಾದರೆ ಗಣೇಶನ ಆರಾಧನೆಗೆ ಬೇಕಾದ ನಾದ ಇದಿಷ್ಟೇ: ‘ಓಂ ಗಂ ಗಣಪತಯೇ ನಮಃ’. ಗಣೇಶನಿಗೆ ಅದೇ ಸುನಾದ. ಅದೇ ಸುಘೋಷ. ಆಮೇಲೊಂದಿಷ್ಟು ವೇದಮಂತ್ರಗಳು, ಮನಸ್ಸಿನ ವಿಲಾಸಕ್ಕಾಗಿ ಗಾಯನ-ಕೀರ್ತನಗಳೂ ಸೇರಿಕೊಳ್ಳಬಹುದೆನ್ನಿ. ಪ್ರಾಚೀನ ಕಾಲದಿಂದಲೂ ಚೌತಿ
ಹಬ್ಬದಂದು ಇಂತಹ ನಿನಾದವನ್ನಷ್ಟೇ ಕೇಳಿ ಅಭ್ಯಾಸವಿರುವುದು ಗಣೇಶನಿಗೆ. ಆದರೀಗ ಗಣೇಶನ ಪೆಂಡಾಲ್‌ನಲ್ಲಿ ಕಾಣುವುದೇನು? ಕಿವಿ ತೂತಾಗುವಷ್ಟು ಗೌಜಿ ಗಲಾಟೆ. ಮೈಕಾಸುರನ ಭರಾಟೆ. ಡಬಡಬಡಬ ಬಡಿತ. ಅದು ತಾಳವೋ ಬೇತಾಳವೋ ಪಾತಾಳವೋ ಒಂದೂ ಅರ್ಥವಾಗುವಲ್ದು!

‘ಅಥರ್ವಶೀರ್ಷ ಸೂಕ್ತದಲ್ಲಿ ಒಂದು ಕಡೆ ‘ನಾದಃ ಸಂಧಾನಮ್’ ಎಂದು ಬರುತ್ತದೆ. ನಾದ ಎಂದರೇನು? ಸರಳವಾದ ಅರ್ಥದಲ್ಲಿ ಹೇಳುವುದಾದರೆ ಶಬ್ದ ಅಥವಾ ಧ್ವನಿ. ‘ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ…’ ವಚನದ ಸಾಲನ್ನು ನೆನಪಿಸಿಕೊಳ್ಳಿ. ಗಣೇಶನ ಅಪ್ಪನಾದಪ್ರಿಯನಲ್ಲ ಎಂದು ವಚನಕಾರರೇನೋ ಹೇಳಿರಬಹುದು, ಆದರೆ ಗಣೇಶ ಖಂಡಿತವಾಗಿಯೂ ನಾದಪ್ರಿಯನೇ! ಏಕೆ ಮತ್ತು ಹೇಗೆ ಎಂದು ಆಮೇಲೆ ನೋಡೋಣ. ಎರಡನೆಯದಾಗಿ, ನಾದ ಶಬ್ದಕ್ಕೆ (ನಾದ ಎಂಬ ಪದಕ್ಕೆ) ಪರಬ್ರಹ್ಮ ಸ್ವರೂಪವಾದ ಒಂದು ಘೋಷ, ಅದೇ ನಾದಬ್ರಹ್ಮ ಎಂಬ ವ್ಯಾಖ್ಯಾನವೂ ಇದೆ.

ಸಚ್ಚಿದಾನಂದ ಸ್ವರೂಪವಾದ ಪರಬ್ರಹ್ಮ ತತ್ತ್ವದಿಂದ ಒಂದು ಶಕ್ತಿಯು ಉತ್ಪತ್ತಿಯಾಗಿ ಅದರಿಂದ ನಾದವು ಉತ್ಪನ್ನವಾಯಿತು ಎನ್ನಲಾಗಿದೆ. ಈ ನಾದವೇ ಸಂಗೀತದ ಸ್ವರ, ರಾಗಗಳ ಮೂಲ. ಮೂರನೆಯದಾಗಿ ನಾದ ಅಂದರೆ ಉಚ್ಚಾರಣೆಯ ಬಾಹ್ಯ ಪ್ರಯತ್ನಗಳಲ್ಲಿ ಒಂದು ಎಂಬ ಅರ್ಥವೂ ಇದೆ. ಅಥರ್ವಶೀರ್ಷದಲ್ಲಿ ನಾದಃ ಸಂಧಾನಮ್ ಎಂದಿದ್ದು ಈ ಮೂರನೆಯ ಅರ್ಥದಲ್ಲೇ. ಓಂಕಾರ ಅಥವಾ ಪ್ರಣವನಾದ ಎಂದು ನಾವೆಲ್ಲ ಕೇಳಿಯೇ ಇದ್ದೇವೆ. ಸೃಷ್ಟಿಯ ಆರಂಭವು ಓಂ ಎಂಬ ಪ್ರಣವನಾದ ದಿಂದಾಯ್ತು ಎನ್ನುತ್ತೇವೆ.

ಪಾಶ್ಚಾತ್ಯರ ‘ಬಿಗ್ ಬ್ಯಾಂಗ್ ಥಿಯರಿ’ಗೂ ಅದೇ ಮೂಲ. ಓಂಕಾರದ ಅನಂತರ ಕೇಳಿಬಂದ ಶಬ್ದ ಯಾವುದು? ಗಣೇಶನ ಏಕಾಕ್ಷರ ಮಹಾಮಂತ್ರ ಎಂದೆನಿಸಿದ
‘ಗಂ’ ಎಂಬ ಶಬ್ದ! ಅಥರ್ವಶೀರ್ಷದಲ್ಲಿ ನಾದಃ ಸಂಧಾನಮ್ ಎಂದಿರುವುದು ಈ ಗಂ ಶಬ್ದದ ಉಚ್ಚಾರ ಹೇಗೆ ಎಂಬ ವಿವರಣೆ ಯಲ್ಲೇ. ‘ಗಣಾದಿಂ ಪೂರ್ವ ಮುಚ್ಚಾರ್ಯ ವರ್ಣಾದಿಂಸ್ತದ ನಂತರಮ್| ಅನುಸ್ವಾರಃ ಪರತರಃ ಅರ್ಧೇಂದುಲಸಿತಮ್| ತಾರೇಣ ರುದ್ಧಮ್| ಏತತ್ತವ ಮನು ಸ್ವರೂಪಮ್…’ ಎಂದು
ಬರುತ್ತದೆ. ಗಣಾದಿ ಅಂದರೆ ಗಣ ಶಬ್ದದ ಆರಂಭದಲ್ಲಿರುವ ‘ಗ್’ ವ್ಯಂಜನವನ್ನು ಮೊದಲು ಉಚ್ಚರಿಸಬೇಕು.

ವರ್ಣಾದಿ ಅಂದರೆ ವರ್ಣಮಾಲೆಯ ಆದಿಯಲ್ಲಿರುವ ‘ಅ’ ಎಂಬ ಸ್ವರವನ್ನು ಉಚ್ಚರಿಸಬೇಕು. ಅಲ್ಲಿಗೆ ಗ ಆಯ್ತು. ಬಳಿಕ ಅನುಸ್ವಾರ. ಇದು ಅರ್ಧಚಂದ್ರನಂತೆ ಶೋಭಿಸಬೇಕು(ಅರ್ಧ+ಇಂದು+ಲಸಿತಮ್) , ಅಂದರೆ ಅರ್ಧಾನುಸ್ವಾರವನ್ನು ಹೇಳಬೇಕು. ಇನ್ನು, ತಾರೇಣ ರುದ್ಧಮ್ ಎಂದರೇನು? ತಾರ ಅಂದರೆ ಪ್ರಣವನಾದ ಅಥವಾ ಓಂಕಾರ. ರುದ್ಧಮ್ ಅಂದರೆ ಆವರಿಸಲ್ಪಟ್ಟ. ಗಣೇಶನ ಏಕಾಕ್ಷರ ಮಂತ್ರವಾದ ‘ಗಂ’ ಹೇಳುವಾಗ ಅದು ಓಂಕಾರದಿಂದ ಕೂಡಿರ
ಬೇಕು. ಈ ಸಾಂಕೇತಿಕ ನಿರೂಪಣೆ ಸ್ಪಷ್ಟವಾಗಲೆಂದು ಪುನಃ ವಿವರಣೆ: ‘ಗಕಾರಃ ಪೂರ್ವರೂಪಮ್| ಅಕಾರೋ ಮಧ್ಯಮ ರೂಪಮ್| ಅನುಸ್ವಾರಶ್ಚಾಂತ್ಯರೂಪಮ್| ಬಿಂದುರುತ್ತರ ರೂಪಮ್| ನಾದಃ ಸಂಧಾನಮ್…’ ಅಂದರೆ, ಮಂತ್ರರೂಪದ ಆರಂಭದಲ್ಲಿ ಗಕಾರ(ಗ್) ಇರಬೇಕು. ನಡುವೆ ‘ಅ’ಕಾರ ಇರಬೇಕು. ಕೊನೆಯಲ್ಲಿ ಅನುಸ್ವಾರ ಇರಬೇಕು. ಅರ್ಧಮಾತ್ರಾತ್ಮಕ ಚಂದ್ರಬಿಂದು ಬರಬೇಕು. ಹೀಗೆ ದೀರ್ಘವಾಗಿ ಉಚ್ಚರಿಸುವಾಗ ಹುಟ್ಟುವ ನಾದವೇ ಸಂಧಾನ(ಪ್ರಯತ್ನ). ಎಲ್ಲವನ್ನೂ ಒಟ್ಟುಸೇರಿಸಿ ‘ಓಂ ಗಮ್’ ಎಂದು ಉಚ್ಚರಿಸುವುದೇ ಗಣೇಶವಿದ್ಯೆ (ಮೂಲಮಂತ್ರ). ‘ಓಂ ಗಂ ಗಣಪತಯೇ ನಮಃ’ ಎಂಬುದು
ಮಂತ್ರದ ಪೂರ್ಣರೂಪ.

ನಿಜವಾಗಿಯಾದರೆ ಗಣೇಶನ ಆರಾಧನೆಗೆ ಬೇಕಾದ ನಾದ ಇದಿಷ್ಟೇ: ‘ಓಂ ಗಂ ಗಣಪತಯೇ ನಮಃ’. ಗಣೇಶನಿಗೆ ಅದೇ ಸುನಾದ. ಅದೇ ಸುಘೋಷ. ಆಮೇಲೊಂದಿಷ್ಟು ವೇದಮಂತ್ರ ಗಳು, ಮನಸ್ಸಿನ ವಿಲಾಸಕ್ಕಾಗಿ ಗಾಯನ-ಕೀರ್ತನಗಳೂ ಸೇರಿಕೊಳ್ಳ ಬಹುದೆನ್ನಿ. ಪ್ರಾಚೀನ ಕಾಲದಿಂದಲೂ ಚೌತಿ ಹಬ್ಬದಂದು ಇಂತಹ ನಿನಾದವನ್ನಷ್ಟೇ ಕೇಳಿ ಅಭ್ಯಾಸವಿರುವುದು ಗಣೇಶನಿಗೆ. ಅದನ್ನೇ ಕವಿ ಹೇಳುತ್ತಾರೆ: ಅನಾದಿಕಾಲದಿಂದಲೂ ಗಣೇಶ ಚೌತಿ ಹಬ್ಬದೀ ಸುನಾದ ವೇದ ಮಂತ್ರದಿಂ ಸುಘೋಷ ಗಾನ ಕೀರ್ತನಾ ಮನೋವಿಲಾಸ ಗಾಯನಂ ನಿನಾದ ಕೇಳುತಿದ್ದೆ ನಾ ವಿನೋದವೇನಿದೀಸರೀಭಯಂಕರಾತಿ ಶಬ್ದದೀ ||೧||

ಸ್ವಲ್ಪ ತಾಳಿ. ಮೇಲಿನ ನಾಲ್ಕು ಸಾಲುಗಳನ್ನು ನೀವು ಬರೀ ಪಾಠದಂತೆ ಅಥವಾ ಒಣ ಕವನವಾಚನದಂತೆ ಓದಿದಿರಾ? ಹಾಗೆ ಮಾಡಬೇಡಿ! ಅದನ್ನು ಗಣೇಶ ಪಂಚರತ್ನ ಸ್ತೋತ್ರ ‘ಮುದಾಕರಾತ್ತ ಮೋದಕಂ…’ ಧಾಟಿಯಲ್ಲಿ ಓದಿ. ಎಂ.ಎಸ್.ಸುಬ್ಬುಲಕ್ಷ್ಮಿಯವರು ಹಾಡಿರುವುದನ್ನನುಸರಿಸಿ ಒಮ್ಮೆ ಹಾಡಿನೋಡಿ. ಜತೆ
ಯಲ್ಲೇ ನಾಲ್ಕನೆಯ ಸಾಲನ್ನಷ್ಟೇ ಇನ್ನೊಮ್ಮೆ ಗಮನಿಸಿ. ಮೊದಲ ಮೂರು ಸಾಲುಗಳಲ್ಲಿ ತನ್ನ ಆಡಿಯೊ ಪ್ರಿಫರೆನ್ಸನ್ನು ತಿಳಿಸಿರುವ ಗಣೇಶ ನಾಲ್ಕನೆಯ ಸಾಲಿನಲ್ಲಿ ಕೊಂಚ ಕಸಿವಿಸಿಗೊಂಡಂತೆ ಅನಿಸುವುದಿಲ್ಲವೇ? ಇದೇನಿವು ಅತಿಭಯಂಕರ ಶಬ್ದಗಳು, ಎಲ್ಲಿಂದ ಬರುತ್ತಿವೆ ಎಂದು ಆತನಿಗೆ ದಿಗಿಲು!

ಗಣೇಶನಿಗಾಗಿರುವ ಕಿರಿಕಿರಿಯನ್ನು ಕವಿ ಬಣ್ಣಿಸುತ್ತಾರೆ (ಮುದಾಕರಾತ್ತ ಮೋದಕಂ ಧಾಟಿ ಯಲ್ಲೇ ಓದಿಕೊಳ್ಳಿ): ಹೊಡೀಮಗಾ ಬಡೀಮಗಾ ವಿಚಿತ್ರ ಚಿತ್ರಮಂಜರೀ ಸುಡುತ್ತ ಕಾದ ಮಾಡಡೀ ಗಲಾಟೆ ಗೌಜು ಭರ್ಜರೀ ದಡಬ್ದಡಬ್ಬ ತಾಳದಿಂ ವಿಕಾರ ನೃತ್ಯ ವೈಖರೀ ಪಡುತ್ತ ಪಾಡು ಕಷ್ಟದಿಮ್ಮದೆಷ್ಟು ತಾಳೆ ಕಿರ್ಕಿರೀ ||೨||

ಏನೇನೋ ಅರ್ಥವಾಗದ ಶಬ್ದಗಳು ಕೇಳಿಬರುತ್ತಿವೆ. ಹೊಡೀಮಗಾ ಬಡೀಮಗಾ ಅಂತೆ. ಜಿಂಕೆ ಮರೀನಾ ಅಂತೆ. ಅಲ್ಲಾಡ್ಸ್ ಅಲ್ಲಾಡ್ಸು ಅಂತೆ. ಏನು ನಡೀತಿದೆ ಇಲ್ಲಿ!? ರಸ್ತೆ ಮಧ್ಯದಲ್ಲೇ ಪೆಂಡಾಲ್ ಹಾಕಿ ನನ್ನನ್ನು ಬಂಧಿಸಿಟ್ಟಿದ್ದಾರೆ. ಮಳೆಯಿಂದ ರಕ್ಷಣೆಗೆಂದು ಹಾಕಿದ್ದೋ ಏನೋ ಝಿಂಕ್‌ಶೀಟ್ ತಗಡುಗಳಿಂದಾಗಿ ಮೈ ಸುಡುವ ಸೆಖೆ. ಅಷ್ಟು ಸಾಲದೆಂಬಂತೆ ಕಿವಿ ತೂತಾಗುವಷ್ಟು ಗೌಜಿ ಗಲಾಟೆ. ಮೈಕಾಸುರನ ಭರಾಟೆ.

ಡಬಡಬಡಬ ಬಡಿಯುತ್ತಿದ್ದಾರೆ. ಅದು ತಾಳವೋ ಬೇತಾಳವೋ ಪಾತಾಳವೋ ಒಂದೂ ಅರ್ಥವಾಗುವಲ್ದು. ಎಲ್ಲಿಗೆ ಬಂದಿದ್ದೇ ನಂತಲೇ ಗೊತ್ತಾಗ್ತಿಲ್ಲ. ಎಂಥ ವಿಚಿತ್ರ ಗಾಯನ ಎಂಥ ವಿಚಿತ್ರ ನರ್ತನ. ಮತ್ತೆಮತ್ತೆ ಅದದೇ ರಿಪಿಟೀಷನ್ ಬೇರೆ. ನನ್ನಪ್ಪನ ತಾಂಡವ ನೃತ್ಯಕ್ಕಾದರೆ ಏನದ್ಭುತ ಲಯ ಇತ್ತೂ ಅಂತೀನಿ.
ಇವುಗಳ ವಿಕಾರ ನೃತ್ಯ ನೋಡಿದ್ರೆ ಇಲ್ಲಿಂದ ಓಡಿಹೋಗೋಣ ಅನ್ನಿಸ್ತಿದೆ… ಗಣೇಶ ಅಲವತ್ತುಕೊಳ್ಳುತ್ತಿದ್ದಾನೆ.

ಕವಿ ಅದನ್ನು ಹೀಗೆ ಬಣ್ಣಿಸುತ್ತಾರೆ (ಮೇಲಿನ ಧಾಟಿಯಲ್ಲೇ ಮುಂದುವರಿಸಿ): ಇದೇನದೆಲ್ಲಿ ಬಂದಿಹೇ ಪ್ರದೇಶವೇಕೆ ಹೀಗಿದೇ ಇದೇನು ನನ್ನ ಪದ್ಯವೇನದೇನು ನೃತ್ಯ ತಾಂಡವಾ ಅದೇ ವಿಚಿತ್ರ ಗೀತೆ ಮತ್ತದೇ ವಿಕಾರ ನರ್ತನಾ ಪದೇ ಪದೇ ಪ್ರಸಾರಿಸೋ ವಿಧಾನವೇಕೆ ಮೈಕಲೀ ||೩||
ಈಗ, ‘ನಾದಃ ಸಂಧಾನಮ್’ ವಾಕ್ಯವನ್ನು ಆಧುನಿಕ ಕಾಲಕ್ಕೆ, ಅಂದರೆ ೨೧ನೆಯ ಶತಮಾನಕ್ಕೆ ಅನ್ವಯಿಸೋಣ. ಸಂಧಾನ ಎಂಬ ಪದಕ್ಕೆ ನಿಘಂಟುಕಾರರು ಒಂಬತ್ತು ಬೇರೆಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ. ಒಟ್ಟುಗೂಡುವುದು, ಮಿಶ್ರಣ ಮಾಡುವುದು, ಧನುಸ್ಸಿನಲ್ಲಿ ಬಾಣವನ್ನು ಸೇರಿಸುವುದು ಮುಂತಾದ ಅರ್ಥಗಳು
ನಮಗಿಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಶಾಂತಿಯ ಒಪ್ಪಂದ ಅಥವಾ ಸಂಧಿ ಎಂಬ ಅರ್ಥಗಳೂ ಅಷ್ಟೇನೂ ಪ್ರಯೋಜನವಾಗಲಿಕ್ಕಿಲ್ಲ. ಹಾಂ… ಇನ್ನೊಂದು ಅರ್ಥವಿದೆ, ಶರೀರದಲ್ಲಿನ ಅಂಗಗಳ ಕೀಲುಗಳು ಎಂದು! ಈಗಿನ ಕೆಲ ಭಕ್ತಾದಿಗಳು ಗಣೇಶನ ಮುಂದೆ ಹುಚ್ಚೆದ್ದು ಕುಣಿಯುವಾಗ ಶರೀರದಲ್ಲಿನ ಅಂಗಾಂಗಗಳ ಕೀಲು ಗಳೆಲ್ಲವೂ ಇನ್ವಾಲ್ವ್ ಆಗುವುದನ್ನು ನೋಡಿದರೆ ಈ ಕಾಲಕ್ಕೆ ಇದೇ ‘ನಾದಃ ಸಂಧಾನಮ್’! ಇನ್ನೂ ಒಂದು ತಮಾಷೆ ಇದೆ ಕೇಳಿ. ಸಂಧಾನ ಎಂಬ ಪದಕ್ಕೆ ಮದ್ಯ ಅಥವಾ ಮದಿರೆ ಎಂಬ ಅರ್ಥವೂ ಇದೆ! ಈಗ ಗೊತ್ತಾಯ್ತಲ್ಲ ಪೆಂಡಾಲ್ ಗಣೇಶೋತ್ಸವಗಳು ಇಷ್ಟೊಂದು ಶಬ್ದಮಯವಾಗಿರುವುದರ ಗುಟ್ಟು ಏನೆಂದು!? (ಕವಿ ಹೇಳುತ್ತಿರುವುದನ್ನು ಗಣೇಶನ ಮಾತುಗಳೆಂಬಂತೆ ಅದೇ ಧಾಟಿ ಯಲ್ಲಿ ಓದಿಕೊಳ್ಳಿ): ಪ್ರಧಾನವಾಯ್ತೆ ಶಬ್ದವೇ ಸಮಂತ್ರ ಪೂಜೆ ಬೇಡವೇ
ಪ್ರಧಾನವೇ ಕುನೃತ್ಯವೇ ಸುಶಾಸ್ತ್ರ ಸೇವೆಯಿಲ್ಲವೇ ಸದಾ ಗಲಾಟೆ ಸುತ್ತಲಲ್ಲದೆಂದು ನಂಗೆ ಮುಕ್ತಿಯೂ ವಿದಾಯ ಹೇಳಿ ಸಾಲದೇ ಜಲಾಽವಾಸವೆಂದಿಗೇ ||೪||
ಬೇಡಪ್ಪಾ ಇವರ ಸಹವಾಸ. ನನಗಿನ್ನು ವಿದಾಯ ಹೇಳಿ ನೀರಲ್ಲಿ ಮುಳುಗಿಸಿಬಿಡಿ ಎಂದು ಗಣೇಶ ಗೋಗರೆಯುತ್ತಿದ್ದಾನೆ.

ಸರಿ, ವಿಸರ್ಜನೆಯ ಮೆರವಣಿಗೆ ಹೊರಟಿದೆ. ಅಲ್ಲಾದರೂ ಕಣ್ಣಿಗೆ ಹಿತಮಿತವೆನಿಸುವ ಕೀಲುಗೊಂಬೆಯಂಥ ಸದಭಿರುಚಿಯ ನೃತ್ಯ ಪ್ರಕಾರಗಳಿವೆಯೇ? ದೇವರಾಣೆಗೂ ಇಲ್ಲ. ಡಿಸ್ಕೋ ಅಂತೆ ಭಾಂಗ್ಡಾ ಅಂತೆ ಝುಂಬಾ ಅಂತೆ. ಅಂಗಾಂಗಭಂಗ ಶೂಲೆಯಿಂದ ತಲೆ ಚಿಟ್ಟು ಹಿಡಿಯೋದೊಂದೇ ಬಾಕಿ. ಈ ಜನಪ್ರವಾಹದಿಂದ ಬಿಡಿಸಿಕೊಂಡು ಯಾವಾಗ ಕೈಲಾಸಕ್ಕೆ ಮರಳುತ್ತೇನೋ ಎಂದು ಪರಿತಪಿಸುತ್ತಿದ್ದಾನೆ ಪಾಪ. ಜಲಾಽವಾಸಕೆನ್ನಯಪ್ರಯಾಣ ಮುಂದೆ ಸಾಗಿರಲ್ ಕಲಾದಿ ನೃತ್ಯ ಕೀಲುಗೊಂಬೆಯಾಟಕಿಲ್ಲ ತಾಣವೂ ಕಲಾಸಿಪಾಳ್ಯ ಬೆಂಗಳೂರ್ಜನ ಪ್ರವಾಹ ರಸ್ತೆಯಲ್ ಕಲಾಪದಲ್ಲೆ ಬಂಧಿ ನಾ ಹಿಮಾದ್ರಿಗೆಂದು ಸೇರ್ವುದು ||೫|| ಎಂಬಲ್ಲಿಗೆ ಪೆಂಡಾಲ್ ಗಣಪತಿಯ ಪಾಡು ಮುಗಿದುದು.

ನೀವು ಈ ಐದೂ ಪದ್ಯಭಾಗಗಳನ್ನು ‘ಮುದಾಕರಾತ್ತ ಮೋದಕಂ…’ ಲಯದಲ್ಲೇ ಓದಿಕೊಂಡಿರಷ್ಟೆ? ಛಂದಸ್ಸಿನ ಪರಿಭಾಷೆಯಲ್ಲಿ ಇದಕ್ಕೆ ಪಂಚಚಾಮರ ವೃತ್ತ ಎಂದು ಹೆಸರು. ಪ್ರತಿ ಸಾಲಿನಲ್ಲೂ ಲಘು-ಗುರು-ಲಘು-ಗುರು ಮಾತ್ರೆಗಳ ಆವರ್ತನ. ಲೆಫ್ಟ್ ರೈಟ್ ಲೆಫ್ಟ್ ರೈಟ್ ಎಂದು ಮಾರ್ಚ್‌ಪಾಸ್ಟ್ ಮಾಡಿದ ಅನುಭವ. ಹೀಗೆ ಲಘು-ಗುರುಗಳ ಸಮಪ್ರಮಾಣದ ಮಿಶ್ರಣವು ಗಣೇಶನಿಗೆ ಹೇಳಿಮಾಡಿಸಿದಂಥದ್ದು. ಏಕೆಂದರೆ ಗಣೇಶನು ದೈವಿಕ-ಆಧ್ಯಾತ್ಮಿಕ ನೆಲೆಯಲ್ಲಿ ಎಷ್ಟು ‘ಗುರು’ವೋ, ಲೌಕಿಕ ಲವಲವಿಕೆಯ ನೆಲೆಯಲ್ಲಿ ಅಷ್ಟೇ ‘ಲಘು’ ಕೂಡ! ಮುದಾಕರಾತ್ತ ಮೋದಕಂ ಸ್ತೋತ್ರದ ಸಂದರ್ಭದಲ್ಲಾದರೆ ಪಂಚಚಾಮರ ವೃತ್ತ
ಎಂದು ಗಂಭೀರವಾಗಿಯೇ ಹೇಳಬೇಕಾಗುತ್ತದೆ.

ಅದೇ, ಪೆಂಡಾಲ್ ಗಣಪನ ಸಂದರ್ಭದಲ್ಲಾದರೆ ಪಂಚಚಾಮರ ಸರ್ಕಲ್ ಎಂದು ಲಘುವಾಗಿ ಹೇಳಿದರೂ ಗಣೇಶನೇನೂ ಮುನಿಸಿಕೊಳ್ಳುವುದಿಲ್ಲ. ಅಂಥ ಅದ್ಭುತ ಸೆನ್ಸ್ ಆಫ್ ಹ್ಯೂಮರ್ ಆತನಿಗಿದೆ. ಅದ್ಸರಿ, ಪೆಂಡಾಲ್ ಗಣಪತಿಯ ಪಾಡನ್ನು ಇಷ್ಟು ಚಂದವಾಗಿ, ಮತ್ತು ಛಂದವಾಗಿ, ಬರೆದ ಕವಿ ಯಾರು? ಅವರನ್ನು ಈಗ ನಿಮಗೆ ಪರಿಚಯಿಸಬೇಕು. ಅದನ್ನು ಉತ್ತಮಪುರುಷ ಏಕವಚನ ಧ್ವನಿ ಯಲ್ಲಿ ಅವರಿಂದಲೇ ತಿಳಿದುಕೊಂಡರೆ ಇನ್ನೂ ಬೆಸ್ಟು: ‘ನನ್ನ ಹೆಸರು ಮೃತ್ಯುಂಜಯ ತೇಜಸ್ವಿ. ತಂದೆಯ ಊರು ಶೃಂಗೇರಿ ಹತ್ತಿರ ಹೆಗ್ಗದ್ದೆ ಎಂಬ ಚಿಕ್ಕ ಹಳ್ಳಿ. ಶೃಂಗೇರಿಗೆ ಸಮೀಪದ ಹರಿಹರಪುರದ ಬಳಿಯಿರುವ ಜಮ್ಮಟಿಗೆ ನನ್ನ ತಾಯಿಯ ತವರು. ಅದು ನನ್ನ ಹುಟ್ಟೂರು. ಈಗಿನ ವಾಸಸ್ಥಳ ಬೆಂಗಳೂರು.

ಈಗ ಅಪ್ಪ (ಕೃಷ್ಣಮೂರ್ತಿ) ಅಮ್ಮ(ಸುಮನಾ) ಹೆಂಡತಿ(ಉಮಾ) ಹಾಗೂ ಇಬ್ಬರು ಮಕ್ಕಳೊಂದಿಗೆ(ಉತ್ತಮ್ ತೇಜಸ್ವಿ ಹಾಗೂ ಸುಘೋಷ್ ತೇಜಸ್ವಿ) ಸ್ವಂತ ಮನೆಯಲ್ಲಿ ವಾಸ. ಅಣ್ಣ ಕಿರಣ್ ಹೆಗ್ಗದ್ದೆ ಶಿವಮೊಗ್ಗದಲ್ಲಿ ಕರ್ನಾಟಕ ಬ್ಯಾಂಕ್ ಉದ್ಯೋಗಿ. ನಾನು ಯುವಿಸಿಇ ಕಾಲೇಜಲ್ಲಿ ೨೦೦೦ನೆಯ ಇಸವಿಯಲ್ಲಿ ಬಿ.ಇ.
ಪದವೀಧರನಾದೆ. ಸದ್ಯ ಎಸ್‌ಎಪಿ ಕಂಪನಿಯಲ್ಲಿ ತಂತ್ರಾಂಶ ಪರೀಕ್ಷೆ ಮತ್ತು ಗುಣಮಟ್ಟ ನಿಯಂತ್ರಣ ಅಧಿಕಾರಿಯಾಗಿದ್ದೇನೆ. ಪಿಯುಸಿ ಓದಿದ್ದು ಬೆಂಗಳೂರಿನ ಬಸವನಗುಡಿಯಲ್ಲಿರುವ ಜೈನ್ ಕಾಲೇಜಿನಲ್ಲಿ. ಆಗ ಎರಡು ವರ್ಷ ರಾಮಕೃಷ್ಣ ವಿದ್ಯಾರ್ಥಿನಿಲಯ ವಾಸ.

ಎಸ್ಸೆಸ್ಸೆಲ್ಸಿವರೆಗೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಎಂಬ ಪುಟ್ಟಹಳ್ಳಿಯಲ್ಲಿರುವ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದು. ನನ್ನ ಅಪ್ಪ ಅದೇ ಶಾಲೆಯಲ್ಲಿ ಮೂರು ದಶಕಗಳ ಕಾಲ ಸಂಸ್ಕೃತ, ಕನ್ನಡ ಹಾಗೂ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ನನಗೆ ಸಾಹಿತ್ಯ ಕ್ಷೇತ್ರದ ಅನುಭವ ನಗಣ್ಯವೆನ್ನುವಷ್ಟು ಕಡಿಮೆ. ನಾನಿನ್ನೂ ಕಾವ್ಯ ಶಿಶುವಿಹಾರಿ. ಕಳೆದ ನಾಲ್ಕೈದು ವರ್ಷಗಳಿಂದ ತೋಚಿದ್ದನ್ನು ಛಂದಸ್ಸಿನಲ್ಲಿ ಗೀಚುತ್ತಿದ್ದೇನೆ. ನಾನು, ಅಣ್ಣ ಕಿರಣ್ ಹೆಗ್ಗದ್ದೆ, ಮತ್ತು ಕುಟುಂಬ ಸಂಬಂಽಗಳೊಂದಿಬ್ಬರು ಕೂಡಿ ‘ರಾಗಾರಾಧಕ’ (ರಾ.ಗಣೇಶರ ಆರಾಧಕ) ಎಂಬ ವಾಟ್ಸ್ಯಾಪ್ ಗ್ರೂಪ್ ಮಾಡಿಕೊಂಡು ರಾ.ಗಣೇಶರ ಚಿತ್ರದ ಡಿಪಿ ಹಾಕಿಕೊಂಡು ಅವರನ್ನು ಮನದಲ್ಲಿ ನೆನೆಯುತ್ತ ಮೊದಲಿಗೆ ಭಾಮಿನಿ ಷಟ್ಪದಿಯಲ್ಲಿ ಹೀಗೆಯೇ ಸುಮ್ಮನೆ ಬರೆಯಲು ಶುರುಮಾಡಿದ್ದು.

ಬಾಲ್ಯದಲ್ಲಿ ನನ್ನಜ್ಜ ಕುಮಾರವ್ಯಾಸ ಭಾರತವನ್ನು ಭಾಮಿನಿಯ ಧಾಟಿಯಲ್ಲಿಯೇ ವಾಚಿಸುತ್ತಿದ್ದುದನ್ನು ಕೇಳಿದ ನೆನಪು. ಹಾಗಾಗಿ ಬಹುಶಃ ಕಾವ್ಯಾಸಕ್ತಿ ಹುಟ್ಟಿತೇನೋ. ಆದರೆ ಖಂಡಿತವಾಗಿಯೂ ಕವಿಯೆನ್ನಿಸಿಕೊಳ್ಳುವ ಯಾವ ಯೋಗ್ಯತೆಯನ್ನಾಗಲೀ ಸಾಹಿತ್ಯದ ಡಿಗ್ರಿಗಳನ್ನಾಗಲೀ ಯಾವುದನ್ನೂ ನಾನು
ಪಡೆದಿಲ್ಲ. ಕುವೆಂಪು ಅವರ ಹುಟ್ಟೂರು ಕವಿಶೈಲದಲ್ಲಿ ನಡೆದ ಕವಿಸಮ್ಮಿಲನವೊಂದರಲ್ಲಿ ಕಳೆದವರ್ಷ ಭಾಗವಹಿಸಿ ಸ್ವರಚಿತ ಕವನವಾಚನ, ಮುಕ್ತಕ ಬಳಗವೊಂದರಲ್ಲಿ ಒಮ್ಮೆ ವಾಚನದ ಅವಕಾಶ, ಉತ್ಥಾನ ಪತ್ರಿಕೆಯಲ್ಲಿ ಒಂದು ಕವನ ಪ್ರಕಟ- ಇಷ್ಟೇ ನನ್ನ ಇದುವರೆಗಿನ ಸಾಧನೆ ಎಂದು ನಮ್ರನಾಗಿ ಒಪ್ಪಿಕೊಳ್ಳುತ್ತೇನೆ. ಆ ಕವಿ ಸಮ್ಮಿಲನ ಕಾರ್ಯಕ್ರಮದಲ್ಲಿ ಪರಿಚಯವಾದ ಕೆಲವು ಕವಿಗಳ ಬಳಗದಲ್ಲಿ ನನ್ನನ್ನೂ ಸೇರಿಸಿಕೊಂಡರು.

ಹಾಗಾಗಿ ಈಗ ಕೆಲವು ಕವಿಬಳಗದ ವಾಟ್ಸ್ಯಾಪ್ ಗುಂಪುಗಳಲ್ಲಿ ಸಕ್ರಿಯವಾಗಿದ್ದೇನೆ. ಪ್ರತಿ ವಾರಾಂತ್ಯ ಬಳಗದಲ್ಲಿ ನಡೆಯುವ ಛಂದೋಬದ್ಧ ಪದ್ಯರಚನಾ ಸ್ಪರ್ಧೆಯಲ್ಲಿ ಬೇರೆಬೇರೆ ಛಂದಸ್ಸುಗಳಲ್ಲಿ ಬರೆಯುವ ಮೂಲಕ ಭಾಗವಹಿಸುತ್ತಿರುತ್ತೇನೆ. ಸುಮಾರು ೫೦ ಜನರಿರುವ ಕವಿಬಳಗವದು. ಲಲಿತಮ್ಮ ನನಗೆ ಅಲ್ಲೇ ಪರಿಚಯವಾದರು. ಅರ್ಚನಾ ಹೆಬ್ಬಾರ್, ಎಪಿ ಉಮಾಶಂಕರಿ, ಕೃಷ್ಣಪ್ರಸಾದ್, ರಾಮಚಂದ್ರ ಹೂರಣೆಬೈಲು, ಹನಿಯ ರವಿ ಇವರೆಲ್ಲ ಹೀಗೆಯೇ ಕೆಲವು ಕವಿಬಳಗದಲ್ಲಿ ಪರಿಚಯವಾದವರು. ಛಂದೋಬದ್ಧ ಪದ್ಯಗಳು, ಅದರಲ್ಲೂ ಭಾಮಿನಿ ಷಟ್ಪದಿ ನನಗೆ ಬಹಳ ಇಷ್ಟ.

ಭೋಗ ಷಟ್ಪದಿಯಲ್ಲೂ ಸುಮಾರು ೩೦ ಪದ್ಯಗಳಲ್ಲಿ ನನ್ನ ತಾತನವರ ಜೀವನಕ್ರಮ ಹಾಗೂ ಅವರ ಮರಣ ಸಮಯದಲ್ಲಿ ನಡೆದ ಕೆಲವು ಅದ್ಭುತ ಘಟನೆಗಳನ್ನೆಲ್ಲ ಕಾವ್ಯದ ಶೈಲಿಯಲ್ಲಿ ಬರೆದಿದ್ದೇನೆ. ನನ್ನಜ್ಜನ ಜೀವನಚರಿತ್ರೆ ಆದ್ದರಿಂದ ಅದು ಮನೆಮಂದಿಗೆಲ್ಲ ಇಷ್ಟವಾಯ್ತು. ವಿದ್ವಲ್ಲೋಕದ ವಿಸ್ಮಯವೆಂದೇ
ಖ್ಯಾತರಾದ ಶತಾವಧಾನಿ ಡಾ. ರಾ. ಗಣೇಶರ ಅಷ್ಟಾವಧಾನ ಮತ್ತು ಕಾವ್ಯಪ್ರವಚನಗಳನ್ನು ನೋಡುವುದು, ಕೇಳುವುದು ನನ್ನ ನೆಚ್ಚಿನ ಹವ್ಯಾಸ. ಅವರ ಅವಧಾನಗಳನ್ನು ಕೇಳಿದ್ದೇ ನನ್ನ ಬರವಣಿಗೆಗೆ ಪ್ರೇರಣೆಯೆಂದರೆ ತಪ್ಪಲ್ಲ. ಮೊದಲೇ ತಿಳಿಸಿದಂತೆ ಆ ಮಹನೀಯರು ನನ್ನ ಮಾನಸ ಗುರುಗಳು. ನನ್ನ ಯಾವುದಾದರೂ ರಚನೆ ಅಥವಾ ಪದ್ಯದ ಸಾಲು ನಿಮಗಿಷ್ಟವಾದರೆ ಅದು ಅವರ ಆಶೀರ್ವಾದದ ಬಲ.

ಅವರು ನನ್ನ ಯಾವ ಪದ್ಯವನ್ನೂ ನೇರವಾಗಿ ತಿದ್ದಿಲ್ಲ. ಹಾಗಾಗಿ ನನ್ನ ರಚನೆಗಳಲ್ಲಿ ತೂರಿರಬಹುದಾದ ತಪ್ಪುಗಳು ಹಾಗೂ ಜೊಳ್ಳೆಲ್ಲ ನನ್ನವೇ. ಬಿಡುವಿನ ವೇಳೆ ಪ್ರಚಲಿತ ವಿದ್ಯಮಾನಗಳನ್ನೇ ಚಿಕ್ಕಪುಟ್ಟ ಪದ್ಯಗಳಲ್ಲಿ ಛಂದಸ್ಸಿನಲ್ಲಿ ಬರೆಯುವ ಪ್ರಯತ್ನ ಮಾಡುತ್ತೇನೆ. ಅಂಥದೊಂದು ರಚನೆಯೇ ಈ ಪಂಚಚಾಮರ ವೃತ್ತದಲ್ಲಿ ಪೆಂಡಾಲ್ ಗಣಪತಿಯ ಪಾಡು.’ ಮೃತ್ಯುಂಜಯ ತೇಜಸ್ವಿ ಅವರು ನನಗೆ ಈ ಪೆಂಡಾಲ್ ಗಣಪತಿ ಪಾಡನ್ನು ಐದಾರು ತಿಂಗಳ ಹಿಂದೆ ಕಳುಹಿಸಿದ್ದರು. ನನಗೆ
(ಅವರಂತೆಯೇ) ನವ್ಯ-ಭವ್ಯ ಕವಿತೆಗಳ ತಲೆಬುಡ ಅರ್ಥವಾಗುವುದಿಲ್ಲ ಛಂದೋಬದ್ಧ ಇರುವಂಥವನ್ನಾದರೆ ಓದಿ ಆನಂದಿಸುತ್ತೇನೆ ಎಂದು ಅವರಿಗೆ ಗೊತ್ತಿದೆ. ಹಾಗೆ ಆಗೊಮ್ಮೆ ಈಗೊಮ್ಮೆ ತನ್ನ ರಚನೆಗಳನ್ನು ನನಗೂ ಕಳುಹಿಸುತ್ತಾರೆ. ಈ ಪದ್ಯ ಓದಿದ ಕೂಡಲೇ, ಇದನ್ನು ಗಣೇಶಚೌತಿ ಆಸುಪಾಸಿನ ವಾರದ ತಿಳಿರುತೋರಣದಲ್ಲಿ ಪ್ರಸ್ತುತಪಡಿಸಬೇಕು, ನನ್ನ ಕಡೆಯಿಂದ ಇದರದೊಂದು ವರ್ಲ್ಡ್ ಪ್ರೀಮಿಯರ್ ಪ್ರದರ್ಶನ ಆಗಬೇಕು ಅಂದುಕೊಂಡು ಎತ್ತಿಟ್ಟುಕೊಂಡಿದ್ದೆ. ಅವರ ಬಳಿ ಏನೂ ಹೇಳಿರಲಿಲ್ಲ.

ಮೊನ್ನೆ ಅವರಿಗೆ ವಾಟ್ಸ್ಯಾಪ್ ಕರೆ ಮಾಡಿ ನನ್ನ ಇರಾದೆ ತಿಳಿಸಿದೆ. ಅವರದೊಂದು ಕಿರುಪರಿಚಯ ಬರೆದು ಕಳುಹಿಸುವಂತೆಯೂ ಕೇಳಿದೆ. ತುಂಬ ಸಂಕೋಚ ದಿಂದಲೇ ಒಪ್ಪಿದರು. ಅದು ಅವರ ವಿದ್ಯೆ ಮತ್ತು ವಿನಯಸಂಪನ್ನತೆಗೆ ಸಾಕ್ಷಿ. ಪದ್ಯದ ಪ್ರಸ್ತುತಿಗೆ ಪೂರಕ ಪಾಯಿಂಟು ಗಳನ್ನೆಲ್ಲ ಕಲೆಹಾಕಿದೆ. ವ್ಯಂಗ್ಯಚಿತ್ರಕಾರ ಸ್ನೇಹಿತ ರಘುಪತಿ ಶೃಂಗೇರಿ ಅವರಿಗೆ ವಿಷಯ ತಿಳಿಸಿ ಚಂದದ್ದೊಂದು ಕಾರ್ಟೂನ್ ಬರೆದು ಕೊಡುವಂತೆ ಕೋರಿಕೆ ಸಲ್ಲಿಸಿದೆ. ಅವರು ಎಂದೂ ಇಲ್ಲ ಎಂದವರಲ್ಲ, ಕಾರ್ಟೂನಿನ ಕ್ವಾಲಿಟಿಯಲ್ಲಿ ನನ್ನ ನಿರೀಕ್ಷೆಯನ್ನು ಹುಸಿಗೊಳಿಸಿದವರಲ್ಲ. ಶೃಂಗೇರಿ-ಶೃಂಗೇರಿ ಕನೆಕ್ಷನ್ ಬೇರೆ ಕಾಕತಾಳೀಯ. ಒಟ್ಟಿನಲ್ಲಿ ಪ್ರತಿಭಾಸಂಗಮದ ಪಂಚ್ -ಕಜ್ಜಾಯವೊಂದು ಚೌತಿಯ ಸಂಭ್ರಮ ಹೆಚ್ಚಿಸಲಿಕ್ಕೆ ಸಿದ್ಧವಾಯ್ತು. ಅದನ್ನು ಚಪ್ಪರಿಸುವ ಸರದಿ ಈಗ ನಿಮ್ಮದು. ನಾದಪ್ರಿಯ ಹಾಸ್ಯಪ್ರಿಯ ಅಕ್ಷರಪ್ರಿಯ ಗಣೇಶನು ಸಕಲರಿಗೂ ಸನ್ಮಂಗಳ ವನ್ನುಂಟುಮಾಡಲಿ. ಗೌರಿಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.