ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಗಾಂಧಾರ ದೇಶದಲ್ಲಿ ಓರ್ವ ಸನ್ಯಾಸಿ ಇದ್ದ. ಬೇರೆ ಬೇರೆ ಊರುಗಳಲ್ಲಿ ಸುತ್ತುವುದು, ಅಲ್ಲಿನ ವಿಚಾರಗಳನ್ನು ಕುತೂಹಲದಿಂದ ನೋಡು ವುದು, ಸಂಜೆಯಾದ ನಂತರ ಹಳೆಯ ಮಂಟಪದಲ್ಲೋ, ಆಶ್ರಮದಲ್ಲೋ, ಮರದ ಅಡಿಯೋ ತಂಗುವುದು ಅವನ ಹವ್ಯಾಸ ವಾಗಿತ್ತು.
ಒಮ್ಮೆ ಅದ್ಯಾವುದೋ ದೂರದ ಹಳ್ಳಿಯಲ್ಲಿದ್ದ ಆಶ್ರಮದ ವಾಸಿಗಳು ಅವನಿಗೊಂದು ವಿಚಾರ ಹೇಳಿದರು – ‘ಸ್ವರ್ಗದ ಹಣ್ಣನ್ನು ತಿಂದರೆ ಬೇಗನೆ ಮೋಕ್ಷ ದೊರೆಯುತ್ತದೆ’. ಅದನ್ನು ಕೇಳಿದ ನಂತರ ದಿನ – ರಾತ್ರಿ ಆ ಸನ್ಯಾಸಿಗೆ ಸ್ವರ್ಗದ ಹಣ್ಣಿನ ಕುರಿತು ಯೋಚನೆ ಹತ್ತಿತು. ತನ್ನ ಊರಿನ ಹತ್ತಿರವೇ ಇದ್ದ ಬೈರಾಗಿಯೊಬ್ಬರನ್ನು ‘ಸ್ವರ್ಗದ ಹಣ್ಣು ಎಲ್ಲಿ ಸಿಗುತ್ತದೆ’ ಎಂದು ಕೇಳಿದ.
‘ನೀನು ನನ್ನ ಶಿಷ್ಯನಾಗಿ ಸೇರಿಕೋ, ಇಲ್ಲಿರುವ ಎಲ್ಲಾ ಗ್ರಂಥಗಳನ್ನು ಅಧ್ಯಯನ ಮಾಡು. ಇಲ್ಲೇ ಇದ್ದು ಆಶ್ರಮದ ಕೆಲಸಗಳನ್ನೂ ಮಾಡ ಬೇಕು. ಇಲ್ಲಿನ ತೋಟದಲ್ಲಿ ಗಿಡಗಳನ್ನು ನೆಟ್ಟು ಆರೈಕೆ ಮಾಡಬೇಕು. ಆಗ ನಿನಗೆ ಸ್ವರ್ಗದ ಹಣ್ಣು ಸಿಗುತ್ತದೆ. ಇದಲ್ಲದೇ ಇನ್ನೊಂದು ಮಾರ್ಗ ಇದೆ. ವರ್ಷಾನುಗಟ್ಟಲೆ, ಗಾಂಧಾರದ ಸುತ್ತಮುತ್ತ ಮರುಭೂಮಿಯ ಮಧ್ಯೆ ಇರುವ ಎಲ್ಲಾ ದೇಶಗಳಲ್ಲೂ ಸುತ್ತಾಡುತ್ತಲೇ ಇರಬೇಕು, ಆಗ ಒಂದಲ್ಲಾ ಒಂದು ದಿನ ‘ಸ್ವರ್ಗದ ಹಣ್ಣು’ ಸಿಗುತ್ತದೆ’ ಎಂದು ಆ ಬೈರಾಗಿ ಹೇಳಿದ. ಸನ್ಯಾಸಿಯು ಸುತ್ತಾಟವೇ ತನಗೆ ಇಷ್ಟ, ಒಂದೇ ಕಡೆ ಇದ್ದು ಅಧ್ಯಯನ ತನ್ನ ಜಾಯಮಾನ ಅಲ್ಲ ಎಂದು ನಿಶ್ಚಯಿಸಿ, ಒಂದಾದ ನಂತರ ಒಂದು ದೇಶದಲ್ಲಿ ನಡೆಯತೊಡಗಿದ. ಸುತ್ತಾಟದ ನಡುವೆ ದೊರಕಿದ ಸನ್ಯಾಸಿಗಳು, ಗುರುಗಳು, ಚಿಂತಕರು, ಚಾರಣಿಗರು ಮತ್ತು ಬೈರಾಗಿಗಳನ್ನು ಕಂಡು ಕೂಡಲೆ ಮೊದಲಿಗೆ ಅವನ ಪ್ರಶ್ನೆ ಎಂದರೆ ‘ನೀವು ಸ್ವರ್ಗದ ಹಣ್ಣನ್ನು ನೋಡಿದ್ದೀರಾ?’ ಎಂದು.
ಹೆಚ್ಚಿನವರು ತಮಗೆ ಗೊತ್ತಿಲ್ಲ ಎಂದರು. ಇನ್ನು ಕೆಲವರು, ‘ನನಗೆ ಗೊತ್ತು. ಆ ಹಣ್ಣು ಇದೆ. ಬಹುದೂರ ದೇಶದಲ್ಲಿ ಒಂದು ಸುಂದರವಾದ ತೋಟ ಇದೆ. ಆ ತೋಟದ ಮಧ್ಯೆ ಇರುವ ಸಣ್ಣ ಕೊಳದ ನಡುವೆ ಬೆಳೆದಿರುವ ಒಂದು ದೊಡ್ಡ ಮರದಲ್ಲಿ ಆ ಹಣ್ಣು ಇದೆ, ಈ ದಿಕ್ಕಿಗೆ ನಡೆದುಕೊಂಡು ಹೋದರೆ ಸಿಗುತ್ತದೆ. ಆದರೆ ಆ ದಾರಿಯಲ್ಲಿ ಕುಡಿಯುವ ನೀರು ಸಿಗುವುದಿಲ್ಲ’ ಎನ್ನುತ್ತಿದ್ದರು. ಆದರೆ ಅವರೆಲ್ಲಾ ತೋರಿ ಸುವ ದಿಕ್ಕು ಹೇಗಿತ್ತೆಂದರೆ, ಕೆಲವರು ಪೂರ್ವ ತೋರಿಸಿದರೆ, ಇನ್ನು ಕೆಲವರು ಪಶ್ಚಿಮದ ದಾರಿ ತೋರಿಸುತ್ತಿದ್ದರು! ಇನ್ನು ಕೆಲವರು ಉತ್ತರ ದಿಕ್ಕನ್ನು ತೋರಿಸುತ್ತಿದ್ದರು.
ಸನ್ಯಾಸಿಗೆ ಇದರಿಂದ ಸ್ವಲ್ಪವೂ ಬೇಸರವೂ ಆಗಲಿಲ್ಲ, ಅಚ್ಚರಿಯೂ ಆಗಲಿಲ್ಲ. ಎಂತಿದ್ದರೂ ಒಂದಲ್ಲ ಒಂದು ದಿನ ಆ ತೋಟ, ಸ್ವರ್ಗದ ಹಣ್ಣು ಸಿಕ್ಕಿಯೇ ಸಿಗುತ್ತದೆ ಎಂಬ ಭರವಸೆಯಿಂದ ಇನ್ನಷ್ಟು ದೂರದ ದೇಶಗಳಿಗೆ ಉತ್ಸಾಹದಿಂದ ಹೋಗತೊ ಡಗಿದ. ಎಂತಿದ್ದರೂ ಬೇರೆ ಬೇರೆ ಊರುಗಳನ್ನು ನೋಡುವುದು ಅವನ ನೆಚ್ಚಿನ ಹವ್ಯಾಸ ತಾನೆ! ಇದೇ ರೀತಿ ಮೂವತ್ತು ವರ್ಷ ತಿರುಗಾಟದ ನಂತರ, ಒಂದು ದಿನ ಸ್ವರ್ಗದ ಹಣ್ಣು ಇದ್ದ ಮರ ಸಿಕ್ಕಿತು. ಒಂದು ಸುಂದರ ತೋಟದ ಮಧ್ಯೆ ಇರುವ ಪುಟ್ಟ ಕೊಳದ ನಡುವೆ ಬೆಳೆದಿದ್ದ ಮರದಲ್ಲಿ ಇದ್ದ ‘ಸ್ವರ್ಗದ ಹಣ್ಣನ್ನು’ ಕಂಡು ಆ ಸನ್ಯಾಸಿಗೆ ತುಂಬಾ ಸಂತೋಷ ಆಯಿತು. ಆದರೆ ಅಲ್ಲಿ ಅವನು ಕಂಡ ಅತಿ ದೊಡ್ಡ ಆಶ್ಚರ್ಯವೆಂದರೆ, ತಾನು ಮೊದಲು ಭೇಟಿ ಮಾಡಿದ್ದ ಬೈರಾಗಿಯ ಆ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು!
ಅವರು ಕಣ್ಣು ತೆರೆದಾಗ, ಸನ್ಯಾಸಿ ಕೇಳಿದ ‘ಬೈರಾಗಿಗಳೇ, ಮೊದಲ ಬಾರಿ ನಾನು ನಿಮ್ಮ ಹತ್ತಿರ ‘ಸ್ವರ್ಗದ ಹಣ್ಣಿನ’ ಕುರಿತು ನಾನು ವಿಚಾರಿಸಿದಾಗ, ಈ ವಿಚಾರ ಯಾಕೆ ಹೇಳಲಿಲ್ಲ! ನಿಮಗೆ ಈ ಮರ ಇಲ್ಲಿದ್ದದ್ದು ಗೊತ್ತಿತ್ತು, ಅಲ್ಲವೆ?’ ಬೈರಾಗಿಯು ನಸುನಗುತ್ತಾ ಹೇಳಿದರು ‘ನಾನು ಅವತ್ತು ಈ ಮರ ಇರುವ ಜಾಗದ ವಿಳಾಸವನ್ನು ಹೇಳಿದ್ದರೆ ನೀನು ನಂಬುತ್ತಲೇ ಇರಲಿಲ್ಲ. ಜತೆಗೆ ಇನ್ನೊಂದು ವಿಚಾರ ಏನಪ್ಪಾ ಅಂದರೆ, ಈ ಮರ ಹಣ್ಣು ಬಿಡುವುದು ಮೂವತ್ತು ವರ್ಷಕ್ಕೆ ಒಂದು ಬಾರಿ ಮಾತ್ರ!’