Tuesday, 10th December 2024

ಕನ್ನಡ ಗೀತೆಗಳ ಹೊಸ ಸಾಹಸ ಗಂಧರ್ವಗಾನ

ಶಶಾಂಕಣ

shashidhara.halady@gmail.com

ಕನ್ನಡದ ವಿಚಾರ ಬಂದಾಗ, ವರನಟ ಡಾ.ರಾಜ್‌ಕುಮಾರ್ ಅವರದು ಬಹು ದೊಡ್ಡ ಹೆಸರು. ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಕರ್ನಾಟಕದಲ್ಲಿ ಕನ್ನಡವು ಮೊದಲ ಸ್ಥಾನದಲ್ಲೇ ಇರಬೇಕು ಎಂದು ಹಕ್ಕೊತ್ತಾಯ ಮಂಡಿಸಿದ ಡಾ.ರಾಜ್‌ಕುಮಾರ್ ಅವರು, ಕನ್ನಡಕ್ಕಾಗಿ ಹೋರಾಡಿದ ಧೀಮಂತ. ಕರ್ನಾಟಕದ ಜನರ ಮೇಲೆ ಡಾ.ರಾಜ್‌ಕುಮಾರ್ ಮಾಡಿದ ಮೋಡಿ, ಪ್ರಭಾವ ಅಷ್ಟಿಷ್ಟಲ್ಲ.

ರಾಜ್‌ಕುಮಾರ್ ಅಭಿನಯದ ಸಿನಿಮಾಗಳನ್ನು ನೋಡಿದ ಜನರು, ಅವರ ರೀತಿಯೇ ನ್ಯಾಯ ಪಕ್ಷಪಾತಿಯಾಗಿ ಬದುಕಲು ಪ್ರಯತ್ನಪಟ್ಟರು, ರಾಜ್ ಅವರು ಸಿನಿಮಾದಲ್ಲಿ ತೋರಿದ ಆದರ್ಶ ಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸಿದರು. ‘ಬಂಗಾರದ ಮನುಷ್ಯ’ ದಲ್ಲಿ ರಾಜ್‌ಕುಮಾರ್ ಅವರ ಮನೋಜ್ಞ ಅಭಿನಯವನ್ನು ಕಂಡು, ಅವರ ರೀತಿಯೇ ಹಳ್ಳಿಗೆ ಹೋಗಿ ಕೃಷಿಯನ್ನು ಕೈಗೊಂಡವರ ಉದಾಹರಣೆಗಳು ಹಲವು. ರಾಜ್‌ಕುಮಾರ್ ಅವರ ಚಲನಚಿತ್ರಗಳಲ್ಲಿ ಮೂಡಿದ ಆದರ್ಶ, ರಾಜ್‌ಕುಮಾರ್ ಅವರ ನಲ್ನುಡಿಯ ಶೈಲಿಗಳನ್ನು ಯುವಕರು ತಮ್ಮ ಜೀವನದಲ್ಲೂ ಅಳವಡಿಸಿಕೊಂಡು, ಅವರನ್ನು ಅನುಕರಿಸಿದ್ದು ಇದೆ.

ಜತೆಗೆ ರಾಜ್‌ಕುಮಾರ ಅವರ ಹೆಚ್ಚಿನ ಸಿನಿಮಾಗಳಲ್ಲಿ, ಅವರು ನ್ಯಾಯಪಕ್ಷಪಾತಿಯಾದ ಪಾತ್ರವನ್ನು ವಹಿಸಿದ್ದು ವಿಶೇಷ. ಡಾ.ರಾಜ್‌ಕುಮಾರ್ ಎಂದರೆ ಸಜ್ಜನಿಕೆ ಎಂಬಷ್ಟರ ಮಟ್ಟಿಗೆ ಅವರು ನಮ್ಮ ನಾಡಿನಲ್ಲಿ ಮನೆಮಾತಾಗಿದ್ದರು, ಜನಾನುರಾಗಿಯಾಗಿದ್ದರು. ಸಹಜವಾಗಿ ಡಾ.ರಾಜ್‌ಕುಮಾರ್ ಅವರು ಚಲನಚಿತ್ರಗಳಲ್ಲಿ ಹಾಡಿದ, ನಟಿಸಿದ ಹಾಡುಗಳು ನಮ್ಮ ನಾಡಿನಲ್ಲಿ ಅತಿ ಜನಪ್ರಿಯ. ಡಾ.ರಾಜ್ ಅವರು ಹಾಡಿದ, ಅವರು ನಟನೆ ನೀಡಿ ಹಾಡುಗಳಿಗೆ ಜೀವತುಂಬಿದ ಗೀತೆಗಳನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನ ಈಗಾಗಲೇ ಆಗಿದೆ. ಅವರು ನಟಿಸಿದ ಎಲ್ಲಾ ಚಿತ್ರಗಳ ಹಾಡುಗಳಿಗೆ ಉತ್ತಮ ಮತ್ತು ಸೂಕ್ತ ಟಿಪ್ಪಣಿಯನ್ನು ನೀಡಿ, ಅವನ್ನು ಒಂದು ಸಮಗ್ರ ಗ್ರಂಥದಲ್ಲಿ ಅಡಕಗೊಳಿಸುವ ಪ್ರಯತ್ನ ಈಗ ನಡೆದಿದ್ದು, ಈ ವಾರ ಅಂತಹದೊಂದು ಬೃಹತ್ ಗ್ರಂಥ ಬಿಡುಗಡೆಯಾಗಿದೆ!

ಈ ಸಾಹಸವನ್ನು ಕೈಗೊಂಡವರು ನಿವೃತ್ತ ಬ್ಯಾಂಕ್ ಉದ್ಯೋಗಿ ಬೀ.ಸಿ.ಜಗನ್ನಾಥ್ ಜೋಯಿಸ್. ಬೀ.ಸಿ. ಜಗನ್ನಾಥ್ ಜೋಯಿಸ್ ಅವರು ರಾಜ್
ಕುಮಾರ್ ಚಿತ್ರಗಳ ಸಮಗ್ರ ಗೀತಮಾಲಿಕೆಯನ್ನು ಸಂಗ್ರಹಿಸಿದ್ದರ ಜತೆಯಲ್ಲೇ ಪ್ರತಿ ಚಿತ್ರಕ್ಕೂ ಆಕರ್ಷಕ ಮತ್ತು ಕುತೂಹಲಕಾರಿ ಮಾಹಿತಿಯನ್ನು ರೂಪಿಸಿ, ಹೊರತರುವ ಸಾಹಸ ಮಾಡಿದ್ದಾರೆ. ಸುಮಾರು ೮೯೬ ಪುಟಗಳ ಈ ಬ್ರಹತ್ ಗ್ರಂಥವು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಒಳಗೊಂಡಿದ್ದು, ನೂರಾರು ಫೋಟೋಗಳನ್ನು ಒಳಗೊಂಡಿವೆ.

ಡಾ.ರಾಜ್‌ಕುಮಾರ್ ಅವರ ನಟಿಸಿದ ಎಲ್ಲಾ ಚಲನಚಿತ್ರಗಳ ಮಾಹಿತಿ, ಅವು ಬಿಡುಗಡೆಗೊಂಡ ವರ್ಷ, ಗೀತೆಗಳನ್ನು ರಚಿಸಿದ ಸಾಹಿತಿ, ಗೀತೆ ಗಳನ್ನು ಹಾಡಿದ ಇತರ ಕಲಾವಿದರು, ಜತೆಗೆ ರಾಜ್‌ರ ಧ್ವನಿಯಲ್ಲಿ ಹೊರಬಂದ ಹಾಡುಗಳ ಮಾಹಿತಿ ಎಲ್ಲವನ್ನೂ ಒಳಗೊಂಡ ಈ ಪುಸ್ತಕ, ಸಮಗ್ರ ಸ್ವರೂಪ ಪಡೆದಿದೆ. ಸರಳವಾಗಿ ಹೇಳಬೇಕೆಂದರೆ, ಇದು ಡಾ.ರಾಜ್‌ಕುಮಾರ ಚಲನಚಿತ್ರಗಳ ಮತ್ತು ಗೀತೆಗಳ ವಿಶ್ವಕೋಶ!

೮೯೬ ಪುಟಗಳ ಈ ಪುಸ್ತಕವನ್ನು ರಚಿಸಲು ಬೀ.ಸಿ.ಜಗನ್ನಾಥ್ ಜೋಯಿಸ್ ಅವರಿಗೆ ಆರು ವರ್ಷ ಬೇಕಾಯಿತು. ಇದೊಂದು ರೀತಿಯ ಸಾಹಸ,
ಜತೆಗೆ, ಜಗನ್ನಾಥ್ ಜೋಯಿಸ್ ಅವರು ಒಬ್ಬ ತಪಸ್ವಿಯ ರೀತಿ ಪಟ್ಟಾಗಿ ಕುಳಿತು ಈ ಪುಸ್ತಕವನ್ನು ರಚಿಸಿದ್ದಾರೆ. ಇಂತಹ ಬೃಹತ್ ಪುಸ್ತಕವನ್ನು ರಚಿಸಲು ತಪಿಸ್ಸಿನ ರೀತಿಯ ಏಕಾಗ್ರತೆ ಅಗತ್ಯ, ಅದರಲ್ಲಿ ಅನುಮಾನವಿಲ್ಲ. ಜತೆಗೆ, ಬೀ.ಸಿ.ಜಗನ್ನಾಥ್ ಜೋಯಸ್ ಅವರ ಹಿನ್ನೆಲೆಯನ್ನು ಕೇಳಿದಾಗ, ಆ ತಪಸ್ಸಿನ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ!

ಏಕೆಂದರೆ, ಬೀ.ಸಿ.ಜಗನ್ನಾಥ್ ಜೋಯಿಸ್ ಅವರು ಮೂಲತಃ ಚಲನಚಿತ್ರ ರಂಗದಲ್ಲಿ ಇದ್ದವರಲ್ಲ, ಚಲನಚಿತ್ರ ಪತ್ರಕರ್ತರೂ ಅಲ್ಲ, ಅವರು ಬ್ಯಾಂಕ್ ಉದ್ಯೋಗಿ. ೨೦೧೬ರಲ್ಲಿ ಬ್ಯಾಂಕಿನಿಂದ ನಿವೃತ್ತಿಯಾದ ನಂತರ, ತಮ್ಮ ಬಹು ದಿನಗಳ ಕನಸಾದ ಈ ಪುಸ್ತಕವನ್ನು ನನಸು ಮಾಡಲು ಪಣತೊಟ್ಟರು. ಸುಮಾರು ೧೦೦೦ ಪುಟಗಳ ಇಂತಹದೊಂದು ಪುಸ್ತಕವನ್ನು ಹೊರತರ ಬೇಕು ಎಂಬುದು ಅವರ ಜೀವಮಾನದ ಆಸೆ ಆಗಿತ್ತು, ಅಭಿಲಾಷೆಯಾಗಿತ್ತು. ಆದರೆ, ಯಾರಿಗೇ ಆಗಲಿ, ಆಸೆಪಟ್ಟ ಕೂಡಲೆ, ಅಂತಹದೊಂದು ಕಾರ್ಯವನ್ನು ಮಾಡಲಾಗುವುದಿಲ್ಲವಲ್ಲ!

ನಮ್ಮೆಲ್ಲರಲ್ಲೂ ನಾನಾ ರೀತಿಯ ಆಸೆಗಳಿರುತ್ತವೆ, ಇಂತಹದೊಂದು ಸಾಧನೆ ಮಾಡಬೇಕೆಂಬ ಅಭಿಲಾಷೆ ಇರುತ್ತದೆ, ಆದರೆ ಬಹುಪಾಲು ಮಂದಿಯ
ಅಂತಹ ಆಸೆಯು ಆಸೆಯಾಗಿಯೇ ಉಳಿದುಹೋಗುತ್ತದೆ. ಅಂತಹ ಆಸೆಯನ್ನು, ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ಸು ಪಡೆಯುವವರು
ಕೆಲವೇ ಕೆಲವರು. ಅಂತಹ ಅದೃಷ್ಟವಂತರಲ್ಲಿ ಬೀ.ಸಿ.ಜಗನ್ನಾಥ್ ಜೋಯಿಸ್ ಸೇರಿದ್ದಾರೆ. ಹಾಗೆಂದು ಅದೃಷ್ಟವಂತ ಎಂಬ ಯೋಚನೆಯಿಂದ ಅದೃಷ್ಟವನ್ನು ನಂಬಿಕೂತರೆ, ೮೯೬ ಪುಟಗಳ ಈ ಪುಸ್ತಕ ಹೊರಬರಲು ಸಾಧ್ಯವಿತ್ತೆ? ಖಂಡಿತ ಇಲ್ಲ.

೨೦೧೬ರಲ್ಲಿ ನಿವೃತ್ತರಾದಕೂಡಲೆ, ಬೀ.ಸಿ.ಜಗನ್ನಾಥ ಜೋಯಿಸರು, ಡಾ. ರಾಜ್‌ಕುಮಾರ್ ಅವರ ಚಲನಚಿತ್ರಗಳ ಮಾಹಿತಯನ್ನು ಸಂಗ್ರಹಿಸ ತೊಡಗಿದರು. ಡಾ.ರಾಜ್ ಅವರ ಕುರಿತು ನೂರಾರು ಪುಸ್ತಕಗಳು ಹೊರಬಂದಿವೆ, ಅವುಗಳಲ್ಲಿ ಕೆಲವು ಸಮಗ್ರ ಗ್ರಂಥಗಳ ಸ್ವರೂಪದಲ್ಲೇ ಪ್ರಕಟಗೊಂಡಿವೆ. ರಾಜ್ ಕುಮಾರ್ ಅವರ ಕುರಿತಾದ ಹೊಸ ಪುಸ್ತಕದ ಸ್ವರೂಪ ಹೇಗಿರಬೇಕು ಎಂಬ ಕಲ್ಪನೆ ಮೂಡಲು ಕೆಲವು ಕಾಲ ಬೇಕಾಯಿತು. ಜೋಯಿಸರು ಡಾ. ರಾಜ್ ಕುರಿತ ಲಭ್ಯವಿರುವ ಪುಸ್ತಕಗಳನ್ನು ಸಂಗ್ರಹಿಸಿ ಓದತೊಡಗಿದರು, ಅವರ ಹಾಡುಗಳ ಸಿಡಿಗಳನ್ನು ಸಂಗ್ರಹಿಸಿ ಕೇಳ ತೊಡಗಿದರು. ಈ ನಡುವೆ ದೊಡ್ಡ ಹುಲ್ಲೂರು ರುಕ್ಕೋಜಿ ಅವರು ರಾಜ್‌ಕುಮಾರ್ ಕುರಿತು ಬರೆದ ಎರಡು ಬ್ರಹತ್ ಗ್ರಂಥಗಳನ್ನು ಸ್ನೇಹಿತರೊಬ್ಬರು ತಂದು ಕೊಟ್ಟರು.

ಅದನ್ನು ಓದಿದ ನಂತರ, ಜಗನ್ನಾಥ್ ಜೋಯಿಸ್ ಅವರಿಗೆ ಅನಿಸಿದ್ದೆಂದರೆ, ಈಗಾಗಲೇ ರುಕ್ಕೋಜಿಯವರು ಎಲ್ಲಾ ಬರೆದಿದ್ದಾರೆ, ಇನ್ನು ತಾನು ಏನು ಬರೆಯಬಲ್ಲೆ ಎಂಬ ಭಾವ. ಇದೇ ಭಾವದಲ್ಲಿ ದೊಡ್ಡಹುಲ್ಲೂರು ರುಕ್ಕೋಜಿ ಯವರನ್ನು ಬೀ.ಸಿ. ಜಗನ್ನಾಥ ಜೋಯಿಸರು ಭೇಟಿಯಾಗಿ, ಮುಂದಿನ ಮಾರ್ಗದರ್ಶನ ಬಯಸಿದರು. ‘ತಿಣುಕಿದನು -ಣಿರಾಯ ರಾಮಾಯಣದ ಕವಿಗಳ ಭಾರದಲಿ, ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ!’ ಎಂಬ ಭಾವದಲ್ಲಿದ್ದ ಜೋಯಿಸರಿಗೆ, ರುಕ್ಕೋಜಿಯವರೊಂದಿನ ಸಮಾಲೋಚನೆಯ ಸಮಯದಲ್ಲಿ, ಮಿಂಚೊಂದು ಕಂಡಂತಾಗಿ, ಹೊಸ ಪುಸ್ತಕದ ಸ್ವರೂಪ ಸ್ಪಷ್ಟವಾಯಿತು.

ರಾಜ್ ಚಿತ್ರಗಳ ಸುಮಾರು ೧೩೬೦ ಹಾಡುಗಳು ಸಮಗ್ರವಾಗಿ ಒಂದೆಡೆ ಅದುವರೆಗೆ ಬಂದಿಲ್ಲ ಎಂಬ ಮಾಹಿತಿ ಮತ್ತು ಎಲ್ಲಾ ಹಾಡುಗಳಿಗೂ ಟಿಪ್ಪಣಿ
ಬರೆಯುವ ಅವಕಾಶ ಇದೆ ಎಂಬ ವಿಚಾರ ಸ್ಪಷ್ಟವಾಗಿ, ಅದನ್ನೇ ಬರೆಯುವ ಸಾಹಸಕ್ಕೆ ಕುಳಿತರು. ಕೇವಲ ಹಾಡುಗಳನ್ನು ಓದುಗರ ಕೈಗಿಡುವುದಲ್ಲ,
ಬದಲಿಗೆ, ಆ ಚಿತ್ರಗೀತೆಗಳಲ್ಲಿ ಇರುವ ಸಾಹಿತ್ಯಕ ಮೌಲ್ಯ, ಮಾನವಿಕ ವಿಚಾರಗಳು, ಉಕ್ತಿ ಸೌಂದರ್ಯ, ನಮ್ಮ ನಾಡಿನ ಘನತೆಯನ್ನು ಎತ್ತಿ
ಹಿಡಿಯುವ ರೀತಿ ಇವುಗಳನ್ನು ಎತ್ತಿತೋರಿಸುವ ಟಿಪ್ಪಣಿಯನ್ನು ಬರೆಯುವುದು ತನ್ನ ಕೆಲಸ ಎಂದು ಅವರು ತಮ್ಮ ಗುರಿಯನ್ನು ಸ್ಪಷ್ಟಪಡಿಸಿ ಕೊಂಡರು. ಈ ಬ್ರಹತ್ ಗ್ರಂಥದಲ್ಲಿ ರಾಜ್ ಅಭಿಯನಯದ ಎಲ್ಲಾ ಚಿತ್ರಗಳ ಮಾಹಿತಿ ಇದೆ, ಗೀತೆಗಳಿಗೆ ಟಿಪ್ಪಣಿಗಳಿವೆ.

ಜತೆಯಲ್ಲಿ, ಸಾಂದರ್ಭಿಕವಾಗಿ ಮಂಕುತಿಮ್ಮನ ಕಗ್ಗದಿಂದ ಆಯ್ದ ೪೩ ಪದ್ಯಗಳಿವೆ, ನಮ್ಮ ಪರಂಪರೆಯ ೬೫ ಶ್ಲೋಕಗಳಿವೆ, ನಮ್ಮ ನಾಡಿನ
ಖ್ಯಾತ ಕವಿಗಳ ಕವನಗಳ ೧೫೪ ಉಲ್ಲೇಖಗಳು, ೪೯ ವಚನಗಳು, ೧೫ ದಾಸಸಾಹಿತ್ಯದ ಸಾಲುಗಳು ಅಡಕಗೊಂಡಿವೆ. ಇವೆಲ್ಲವೂ ಚಲನಚಿತ್ರ ಗೀತೆಗಳ ಟಿಪ್ಪಣಿ ರಚಿಸುವಾಗ ಸಾಂದರ್ಭಿಕವಾಗಿ, ಬಳಕೆಗೊಂಡು, ಇಲ್ಲಿನ ಟಿಪ್ಪಣಿಗಳ ಮೌಲ್ಯ ಹೆಚ್ಚಿಸಿವೆ.

ಬೀ.ಸಿ.ಜಗನ್ನಾಥ ಜೋಯಿಸರ ಟಿಪ್ಪಣಿಗಳು  ಅವರದೇ ಶೈಲಿಯಲ್ಲಿ ವಿಶಿಷ್ಟ ಎನಿಸಿವೆ, ಅನನ್ಯ ಎನಿಸಿವೆ. ಡಾ.ರಾಜ್‌ಕುಮಾರ್ ಅವರು ನಾಯಕ
ನಾಗಿ ನಟಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ಕನ್ನಡ ಚಿತ್ರಗಳಲ್ಲಿ ಚಿರಸ್ಥಾಯಿ. ಅದರಲ್ಲಿರುವ ಹಾಡು ‘ಶಿವಪ್ಪ ಕಾಯೊ ತಂದೆ, ಮೂರುಲೋಕ
ಸ್ವಾಮಿ ದೇವ, ಹಸಿವೆಯನ್ನು ತಾಳಲಾರೆ ಕಾಪಾಡೆಯಾ..’ ಇದನ್ನು ಕೇಳದ ಕನ್ನಡಿಗರು ಇಲ್ಲ. ಇದನ್ನು ವಿಶ್ಲೇಷಿಸುತ್ತಾ, ಜೋಯಿಸರು, ಇದು ಆ
ಕಾಲದ ಹಸಿದವರ ಹಾಡು ಎಂದು ಟಿಪ್ಪಣಿ ಬರೆದಿದ್ದಾರೆ. ‘ಗಂಧರ್ವಗಾನ’ ಪುಸ್ತಕವು ಅಭಿನಯದ ಹಿರಿಮೆಯನ್ನೂ ಉದ್ದಕ್ಕೂ ಎತ್ತಿ ಹೇಳಿದೆ.
ಬೇಡರ ಕಣ್ಣಪ್ಪ ಚಿತ್ರವು, ‘ಕನ್ನಡ ಚಿತ್ರರಂಗದ ಮೊದಲ ೨೦ ವರ್ಷಗಳ (೧೯೩೪-೧೯೫೪) ಇತಿಹಾಸದಲ್ಲಿ ಅತಿ ಹೆಚ್ಚು ಚಿತ್ರ ಮಂದಿರಗಳಲ್ಲಿ (೨೦)
ತೆರೆಗಂಡ ಪ್ರಥಮ ಚಿತ್ರ.

ಭಾರತ ಸರಕಾರವು ಚಲನಚಿತ್ರ ಪ್ರಶಸ್ತಿ ಆರಂಭಿಸಿದ ಮೊದಲ ವರ್ಷವೇ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ. ಮೊದಲ ಫಿಲಂಫೇರ್ ಪ್ರಶಸ್ತಿ ಗಳಿಸಿದ ಚಿತ್ರ. ಡಾ. ರಾಜ್‌ಕುಮಾರ್ ಅವರ ಅಭಿಯನಯದ ಚಿತ್ರಗಳ ಗೀತೆಗಳ ಸಮಗ್ರ ಕೋಶವಾಗಿರುವುದರ ಜತೆಯಲ್ಲೇ, ಈ ಪುಸ್ತಕವು ಕನ್ನಡ ಚಿತ್ರಗಳ ಹಲವು ವೈಶಿಷ್ಟ್ಯಗಳನ್ನೂ ಬಿಂಬಿಸುವುದು ವಿಶೇಷ ಎನಿಸುತ್ತದೆ. ಉದಾಹರಣೆಗೆ ೧೯೬೩ರಲ್ಲಿ ತೆರೆಕಂಡ ‘ಕುಲವಧು’ ಚಲನಚಿತ್ರವು ತುಸು ಅಪರೂಪದ್ದು. ಡಾ.ರಾಜ್‌ಕುಮಾರ್ ಅಭಿನಯದ ಈ ಚಲನಚಿತ್ರವು, ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧಾರಿತ ಚಿತ್ರ.

ಜತೆಗೆ, ನಮ್ಮ ನಾಡಿನ ಶ್ರೇಷ್ಠ ಕವಿಗಳ ಸಾಲಿಗೆ ಸೇರಿರುವ ದ.ರಾ.ಬೇಂದ್ರೆ, ಎಂ. ಗೋವಿಂದ ಪೈ ಮತ್ತು ವಿ.ಸೀತಾರಾಮಯ್ಯ ಅವರು ರಚಿಸಿದ ಗೀತೆಗಳು ಈ ಚಿತ್ರದಲ್ಲಿವೆ! ದ.ರಾ.ಬೇಂದ್ರೆಯವರು ಬರೆದ ‘ಯುಗ ಯುಗಾದಿ ಕಳೆದೂ ಯುಗಾದಿ ಮರಳಿ ಬರುತಿದೆ..’ ಈ ಚಿತ್ರದಲ್ಲಿ ಅಡಕಗೊಂಡು,
ಕನ್ನಡ ನಾಡಿನ ಮೂಲೆ ಮೂಲೆಗೂ ತಲುಪಿತು. ರಾಷ್ಟ್ರಕವಿ ಗೋವಿಂದ ಪೈ ಅವರ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ, ಹರಸು
ತಾಯೆ ಸುತರ ಕಾಯ ನಮ್ಮ ಜನ್ಮದಾತೆಯೆ’ ಗೀತೆ ಯನ್ನು ಎಸ್. ಜಾನಕಿಯವರು ಈ ಚಿತ್ರದಲ್ಲಿ ಹಾಡಿ ದ್ದಾರೆ. ಹಿರಿಯ ಕವಿ ವಿ.ಸೀತಾರಾಮಯ್ಯ ಅವರ ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು, ನಿಮ್ಮ ಮಡಿಲೊಳಗಿಡಲು ತಂದಿರುವೆವು..’ ಅವರ ಪ್ರಸಿದ್ಧ ಗೀತೆ ಸಹ ಈ ಚಿತ್ರದಲ್ಲಿದೆ. ಇವುಗಳ ಜತೆ, ಕಣಗಾಲ್ ಪ್ರಭಾಕರ ಶಾಸಿಯವರು ರಚಿಸಿದ ‘ಒಲವಿನ ಪ್ರಿಯಲತೆ ಅವಳದೇ ಚಿಂತೆ, ಅವಳ ಮಾತೆ ಮಧುರ ಗೀತೆ ಅವಳೆ ಎನ್ನ ದೇವತೆ’ ಎಂಬ ಸುಂದರ ಪ್ರೇಮಗೀತೆಯು, ಪಿ.ಬಿ.ಶ್ರೀನಿವಾಸ್ ಅವರ ದನಿಯಲ್ಲಿ ಈ ಚಿತ್ರದಲ್ಲಿ ಅಡಕಗೊಂಡಿದೆ.

ಮೂವರು ಹಿರಿಯ ಕನ್ನಡ ಸಾಹಿತಿಗಳ ಗೀತೆಗಳು ಡಾ. ರಾಜ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿದೆ ಎಂಬ ಮಾಹಿತಿಯನ್ನು ಎತ್ತಿ ತೋರುವ ಕೆಲಸವನ್ನು ಈ ಪುಸ್ತಕ ಮಾಡಿದೆ. (ಪುಟ ೧೮೬) ಇಂತಹ ಹಲವು ಅಪರೂಪದ ಮಾಹಿತಿಗಳ ಆಗರ ‘ಗಂಧರ್ವಗಾನ’ ಪುಸ್ತಕ. ಈ ಬೃಹತ್ ಗ್ರಂಥವನ್ನು ಪ್ರಕಟಿಸಿರುವವರು ಚಿತ್ತ ಪ್ರಕಾಶನ (೯೮೮೦೯೨೬೭೨೮). ಬೀ.ಸಿ.ಜಗನ್ನಾಥ್ ಜೋಯಿಸ್ ಅವರು ‘ಗಂಧರ್ವಗಾನ’ ಪುಸ್ತಕದುದ್ದಕ್ಕೂ ಬರೆದಿರುವ ಟಿಪ್ಪಣಿಗಳು, ಹಲವು ಮಾಹಿತಿಗಳನ್ನು ಕೊಡುವುದರ ಜತೆಯಲ್ಲೇ, ಸಂಗೀತ ಪ್ರೇಮಿಗಳ ಜ್ಞಾನವನ್ನೂ ಹೆಚ್ಚಿಸುವಂತೆ ರೂಪುಗೊಂಡಿವೆ.

ಪುಟ ೭೪೦ರಲ್ಲಿರುವ ಈ ಟಿಪ್ಪಣಿ ನೋಡಿ ‘ಗ್ರಹಭೇದ ಎನ್ನುವುದು ಕರ್ನಾಟಕ ಸಂಗೀತದ ಒಂದು ಆಸಕ್ತಿದಾಯಕ ಪರಿಕಲ್ಪನೆಯಾಗಿದೆ. ಇದರಲ್ಲಿ ಒಂದು ರಾಗದ ಸ್ವರವನ್ನು ಅದೇ ರಾಗದಲ್ಲಿನ ಮತ್ತೊಂದು ಸ್ವರಕ್ಕೆ ಬದಲಾಯಿಸಿ, ಬೇರೆ ರಾಗಕ್ಕೆ ಬರುವ ಪ್ರಕ್ರಿಯೆ ಇದೆ. ಈ ಗ್ರಹಭೇದಂ ಎಂಬ ಸಮಾನ ಪ್ರಕ್ರಿಯೆಯನ್ನು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ‘ಮೂರ್ಛನಾ’ ಎಂದು ಕರೆಯುತ್ತಾರೆ. ಒಂದು ರಾಗಕ್ಕೆ ಗ್ರಹಭೇದವನ್ನು ಅನ್ವಯಿಸಿ ದಾಗ, ಅದು ಇತರ ಪ್ರಮುಖ ರಾಗಗಳನ್ನು ನೀಡುತ್ತದೆ. ಇದನ್ನು ವಿವರಿಸುವುದು ಸುಲಭ. ಆದರೆ ಪ್ರಾಯೋಗಿಕವಾಗಿ ಹಾಡುವಾಗ ಅದರ ಕಷ್ಟದ ಅರಿವಾಗುತ್ತದೆ.

ಇದಕ್ಕೆ ಶಾಸ್ತ್ರೀಯ ಸಂಗೀತದ ಅನುಭವ ಇರಬೇಕಾಗುತ್ತದೆ. ಈ ಗ್ರಹಭೇದದ ಪ್ರಯೋಗವು ‘ನೀ ನನ್ನ ಗೆಲ್ಲಲಾರೆ’ ಚಿತ್ರದ ‘ನನ್ನ ನೀನು ಗೆಲ್ಲಲಾರೆ..’ ಹಾಡಿನಲ್ಲಿ ಡಾ. ರಾಜ್‌ಕುಮಾರ್ ಅವರು ಅಮೋಘವಾಗಿ ಹಾಡಿ ಗೆದ್ದಿದ್ದಾರೆ’. ಡಾ. ರಾಜ್‌ಕುಮಾರ್ ಅವರು ನಟಿಸಿದ ೨೦೮ ಚಲನಚಿತ್ರಗಳ ಹಾಡುಗಳು ಇಲ್ಲಿ ಸೂಕ್ತ ಟಿಪ್ಪಣಿ ಯೊಂದಿಗೆ ಒಡಮೂಡಿರುವುದನ್ನು ಓದುವ ಅನುಭವವೇ ವಿಶಿಷ್ಟ, ಅನನ್ಯ. ಬೀ.ಸಿ.ಜಗನ್ನಾಥ್ ಜೋಯಿಸರು ಕೈಗೊಂಡ ಒಂದು ಸಾಹಸ ಎಂದೇ ‘ಗಂಧರ್ವಗಾನ’ ಪುಸ್ತಕವನ್ನು ಗುರುತಿಸಬೇಕು.

ಇಂತಹ ಗ್ರಂಥ ರಚಿಸಲು ಅರ್ಥಪೂರ್ಣ ಟಿಪ್ಪಣಿ ಬರೆಯುವ ಸಾಮರ್ಥ್ಯವೂ ಬೇಕು. ಇವೆಲ್ಲವೂ ಬೀ.ಸಿ.ಜಗನ್ನಾಥ್ ಜೋಯಿಸರ ಬರವಣಿಗೆಯಲ್ಲಿ
ನಾವು ನೋಡಬಹುದು. ಜತೆಗೆ, ತಮ್ಮ ಬ್ಯಾಂಕ್ ವೃತ್ತಿಯಿಂದ ನಿವೃತ್ತಿಗೊಂಡ ನಂತರ, ‘ಗಂಧರ್ವಗಾನ’ ಪುಸ್ತಕವನ್ನು ಇವರು ರೂಪಿಸಿದರು
ಎಂಬುದು, ಅಭೂತಪೂರ್ವ ವಿಚಾರ. ಡಾ. ರಾಜ್ ಅವರ ನಟನೆಯ ಚಿತ್ರಗಳ ಗೀತೆಗಳ ವಿಶ್ವಕೋಶವಾಗಿರುವುದರ ಜತೆಯಲ್ಲೇ, ಯಾವುದೇ ಕ್ಷೇತ್ರದಲ್ಲಿ ಹೊಸ ಸಾಹಸ ಕೈಗೊಳ್ಳುವವರಿಗೆ ‘ಗಂಧರ್ವಗಾನ’ ಗ್ರಂಥದ ಸ್ವರೂಪವು ಮಾರ್ಗದರ್ಶಿಯೂ ಆಗಬಲ್ಲದು, ಬೃಹತ್ ಕಾರ್ಯವನ್ನು ಕೈಗೊಂಡು ಹೇಗೆ ಯಶಸ್ವಿಯಾಗಿ ಪೂರೈಸಬಹುದು ಎಂಬುದಕ್ಕೆ ಉದಾಹರಣೆಯೂ ಆಗಬಲ್ಲದು.