Saturday, 14th December 2024

ಗಾಂಧೀಜಿ ಅಸಹಕಾರ ಚಳವಳಿ ಉ.ಕ ಭೇಟಿಗೆ ಶತಮಾನ

ಸಾಂದರ್ಭಿಕ

ಡಾ.ಎಸ್.ಬಿ.ಬಸೆಟ್ಟಿ

ಒಂದು ಶತಮಾನದ ಹಿಂದಿನ ಕಾಲ ಬ್ರಿಟಿಷ್ ಆಳ್ವಿಕೆಯ ಅತಿರೇಖಗಳಿಂದ ಇಡೀ ಭಾರತವೇ ರೋಸಿ ಹೋಗಿತ್ತು. ಕಳೆದ ಶತಮಾನದ ಪೂರ್ವಾಅರ್ಧದಲ್ಲಿ ಪ್ಲೇಗ್, ಕಾಲರಾ, ಸಿಡುಬು, ಸ್ಪಾನಿಶ್ ಪ್ಲ್ಯೂ ಇತ್ಯಾದಿ ಸಾಂಕ್ರಮಿಕ ಸೋಂಕುಗಳು ಜಗತ್ತನ್ನು ಕಂಗೆಡಿಸಿದ್ದವು.

ಪ್ಲೇಗ್, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ ಸ್ವಾನಿಶ್ ಪ್ಲ್ಯೂ ಮಾತ್ರ 1918-19ರ ವೇಳೆ ಒಮ್ಮೆಲೆ ವ್ಯಾಪಕವಾಗಿ ಹರಡಿತು. ಆಗ ರೈಲು ಮಾರ್ಗದಲ್ಲಿ ಸಂಚರಿಸುವವರ ಮೂಲಕ ವೈರಸ್ ಮದ್ರಾಸ್ ಪ್ರಾಂತ್ಯ, ಮುಂಬೈ (ಈಗಿನ ಉತ್ತರ ಕರ್ನಾಟಕ), ಹೈದರಾಬಾದ್ ಪ್ರಾಂತ್ಯಗಳಿಗೆ (ಹೈದರಾಬಾದ್ ಕರ್ನಾಟಕ) ಹಬ್ಬಿತು. ರೈಲು ಮೂಲಕ ಕರಾವಳಿಗೂ ತಲುಪಿತು. ಇನ್ನೊಂದೆಡೆ
ಧಾರವಾಡ ಕಡೆಯಿಂದಲೂ ಬಂತು. ಕರಾವಳಿ ಕರ್ನಾಟಕದಲ್ಲಿ ಹೊಳೆದಾಟಿ ಹೋಗಬೇಕಾಗಿದ್ದು ನೇರ ರಸ್ತೆ ಮಾರ್ಗಗಳಿಲ್ಲದ ಕಾರಣ ವೈರಸ್ ಬೇರೆ ಕಡೆಯಷ್ಟು ತೀವ್ರವಾಗಿ ಬಾಧಿಸಲಿಲ್ಲ. ಆದರೂ ಜನಸಂಖ್ಯೆಯ ಶೇ. 2ರಷ್ಟು ಮಂದಿ ಸಾವಿಗೀಡಾಗಿದ್ದ
ರೆಂದು ಅಂದಾಜಿಸಲಾಗಿದೆ. ದೇಶದಲ್ಲಿ 1 ಕೋಟಿಗೂ, ಜಗತ್ತಿನಲ್ಲಿ 5 ಕೋಟಿಗೂ ಅಧಿಕ ಜನರು ಸಾವಿಗೀಡಾಗಿದ್ದರು.

ಪ್ರಥಮ ವಿಶ್ವ ಯುದ್ಧದ ತರುವಾಯ ಭಾರತದ ಜನತೆ 1918-19ರ ಸ್ಪ್ಯಾನಿಷ್ ಪ್ಲ್ಯೂ ಎಂಬ ವಿಶ್ವವ್ಯಾಪಿ ಮಹಾಮಾರಿಯಿಂದ ತತ್ತರಿಸಿ ಹೇಗೋ ಚೇತರಿಕೊಳ್ಳುತ್ತಿರುವಂತೆಯೇ 1919ರ ಕರಾಳವಾದ ರೌಲೆಟ್ ಕಾಯ್ದೆಯು ಜನತೆಯ ಸ್ವಾತಂತ್ರ್ಯವನ್ನು ಮತ್ತಷ್ಟು ಮೊಟಕುಗೊಳಿಸಿತ್ತು. ಆ ವೇಳೆಗೆ ಗಾಂಧೀಜಿ ರೌಲೆಟ್ ಕಾಯ್ದೆಯ ವಿರುದ್ಧವಾಗಿ 6ನೇ ಎಪ್ರಿಲ್ 1919ರಂದು ದೇಶವ್ಯಾಪಿ ಸತ್ಯಾಗ್ರಹವನ್ನು ನಡೆಸಿದರು.

ಬ್ರಿಟಿಷ್ ಸರಕಾರದ ಆಳ್ವಿಕೆಯಲ್ಲಿನ ದಬ್ಬಾಳಿಕೆಯ ಪರಮಾವಧಿ ಎಂಬಂತೆ 13ನೇ ಎಪ್ರಿಲ್ 1919ರಂದು ಜನರಲ್ ಡೈಯರನು ಎಸಗಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಮಾನವೀಯತೆಯ ಸಾಕ್ಷಿ ಪ್ರಜ್ಞೆಯನ್ನೇ ಅಲುಗಾಡಿಸಿ ಹಾಕಿತ್ತು. ಈ ಘಟನೆಯಿಂದ ಭಾರತದ ಮೂಲೆ ಮೂಲೆಗಳಲ್ಲಿ ಜನರು ಶೋಕ ತಪ್ತರಾದರು. ಹಾಗೂ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗಾಣಿಸಲು ಹೊಸದಾಗಿ ಚಳುವಳಿಯನ್ನು ನಡೆಸಲು ದೃಢವಾದ ಸಂಕಲ್ಪವನ್ನು ಮಾಡಿದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವು
ದಕ್ಕಾಗಿ ಬ್ರಿಟಿಷ್ ಸರಕಾರ ಯಾವ ಮಟ್ಟಕ್ಕೂ ಇಳಿದು ಪಾಶವೀಕೃತ್ಯಗಳನ್ನು ಹಾಗೂ ಅನಾಚರಗಳನ್ನೂ ಮಾಡಬಲ್ಲದು ಎಂದು ಗಾಂಧೀಜಿಯ ಮನಸ್ಸಿನಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯ ಯೋಜನೆಯು ಮೂಡಿತು. ಅವರು ಅದನ್ನು ಅವರ
ಸತ್ಯಾಗ್ರಹದ ಪಥದಲ್ಲಿ ಹಂತಹಂತವಾಗಿ ರೂಪಿಸಿದರು.

ಈ ಚಳುವಳಿಯು 1ನೇ ಆಗಸ್ಟ್ 1920ರಂದು ಆರಂಭವಾಗುವ ಹೊತ್ತಿನಲ್ಲಿ ಲೋಕಮಾನ್ಯ ತಿಲಕರು ಕಾಲವಾದರು. ದೇಶವು ಶೋಕದಲ್ಲಿ ಮುಳುಗಿದ್ದರೂ, ಲೋಕಮಾನ್ಯರ ಸ್ಮರಣೆಯೊಂದಿಗೆ ಗಾಂಧೀಜಿಯ ನಾಯಕತ್ವದಿಂದ ಜನತೆಯಲ್ಲಿ ಮಹಾ ಜಾಗೃತಿಯು ಉಂಟಾಯಿತು. ಹಿಂದೂಗಳು ಹಾಗೂ ಮುಸಲ್ಮಾನರು ಅಲ್ಲದೇ ಎಲ್ಲಾ ಮತಧರ್ಮದವರೂ ಒಂದಾಗಿ ಅಸಹಕಾರ ಚಳುವಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಅಸಹಕಾರದ ಮೊದಲ ಹೆಜ್ಜೆಯಾಗಿ ಗಾಂಧೀಜಿ ತಮಗೆ ಸರಕಾರ ಕೊಟ್ಟಿದ್ದ ಕೈಸರ್-ಎ-ಹಿಂದ್ ಮತ್ತೀತರ ಪದಕಗಳನ್ನು ಹಿಂತಿರುಗಿಸಿದರು.

ಅಖಿಲ ಭಾರತ ಮಟ್ಟದಲ್ಲಿ ಯಾವುದೇ ತಾರತಮ್ಯವಿಲ್ಲದೆ ಮಹಿಳೆಯರು ಮ್ಕಕಳೂ ಸೇರಿದಂತೆ ಎಲ್ಲಾ ವರ್ಗಗಳ ಜನರು ಈ
ಚಳುವಳಿಯಲ್ಲಿ ಸಹಜವಾಗಿ ಭಾಗವಹಿಸಲು ಅವಕಾಶ ಇದ್ದಿತು. ದೇಶ ಕಟ್ಟುವ ಕೆಲಸಕ್ಕಾಗಿ ಧನ – ಜನ ಸಂಗ್ರಹಿಸಲು ಮತ್ತು ನಿದ್ರಿಸುತ್ತಿದ್ದ ಭಾರತವನ್ನು ಎಚ್ಚರಿಸಲು ಗಾಂಧೀಜಿ ದೇಶದ ಉದ್ದಗಲಕ್ಕೂ ಉತ್ಸಾಹದ ಚಿಲುಮೆಯಂತೆ ಓಡಾಡುತ್ತಿದ್ದರು.
ವಿಮಾನಯಾನ ಹೊರತುಪಡಿಸಿ ಉಳಿದೆಲ್ಲ ಸಂಪರ್ಕ ಸಾಧನಗಳಾದ ಕಾಲ್ನಡಿಗೆ, ಎತ್ತಿನಬಂಡಿ, ಕುದುರೆ ಗಾಡಿ, ರೈಲು, ದೋಣಿ ಹಾಗೂ ಹಡಗುಗಳಲ್ಲಿ ಸಂಚರಿಸಿದರು.

ಹಾಗೆಯೇ ಕರ್ನಾಟಕಕ್ಕೂ ಗಾಂಧೀಜಿ ಹಲವು ಸಲ ಬಂದರು. ಕರ್ನಾಟಕದ ಉದ್ದಗಲಕ್ಕೂ ಅವರ ಅಭಿಮಾನಿಗಳು, ಆತ್ಮೀಯ ಸ್ನೇಹಿತರು ಹಾಗೂ ಕಾರ್ಯಕರ್ತರು ಹರಡಿದ್ದರು. ಉತ್ತರ ಕರ್ನಾಟಕ ಜನರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರಿಗೆ ಹೆಗಲಿಗೆ ಹೆಗಲು ಕೊಟ್ಟವರು. ಸ್ವಾತಂತ್ರ್ಯ ಆಂದೋಲನ ಸಂಪೂರ್ಣ ವಿಜಯದಲ್ಲಿ ಉತ್ತರ ಕರ್ನಾಟಕ ಜನರು ಪಾಲು ಇದೆ. ಅಂತೆಯೇ ಗಾಂಧೀಜಿ ಯುಗದ ಪ್ರಥಮ ಮಹಾ ಆಂದೋಲನವಾದ ಅಸಹಕಾರ ಚಳುವಳಿಯ ಉತ್ತರ ಕರ್ನಾಟಕದಲ್ಲಿ ಶತಮಾನದ ನೆನಪನ್ನು ಕೂಡ ಈ ವರ್ಷ (2020) ಮಾಡಿಕೊಳ್ಳುತ್ತಿದ್ದೇವೆ. ಆ ನೆನಪಿನಲ್ಲಿ ಗಾಂಧೀ ಹೆಜ್ಜೆಯನ್ನು, ಚಿಂತನೆಯನ್ನೂ ಸ್ಮರಿಸೋಣ.

ಗಾಂಧೀಜಿಯವರ ಕರ್ನಾಟಕದ ಐದನೇ ಭೇಟಿ 1920ರ ನವೆಂಬರ್ 8ರಿಂದ 11ರವರೆಗೆ ನಡೆಯಿತು. ಕರ್ನಾಟಕದ ಮೊದಲನೆ ಮುಕ್ಕಾಂ ನಿಪ್ಪಾಣಿ ಎಂದು ಗೊತ್ತಾಗಿತ್ತು. ನಿಪ್ಪಾಣಿ ಅಲ್ಲಿಂದ ಚಿಕ್ಕೋಡಿ, ಹುಕ್ಕೇರಿ, ಸಂಕೇಶ್ವರಗಳ ಪ್ರವಾಸ ಮುಗಿಸಿಕೊಂಡು ಬೆಳಗಾವಿಗೆ ಬಂದರು. ಈ ಬೆಳಗಾವಿ ಭೇಟಿ ಮುಂದಿನ 1924 ಅಧಿವೇಶಕ್ಕೆೆ ಪೀಠಿಕೆಯಾಯಿತು.

ನಿಪ್ಪಾಣಿ ಭೇಟಿ (8ನೇ ನವೆಂಬರ್ 1920):  ಬೆಂಗಳೂರು ಪ್ರವಾಸದ ಎರಡೂವರೆ ತಿಂಗಳ ನಂತರ ಅಂದರೆ 8ನೇ ನವೆಂಬರ್ 1920ರಂದು ನಿಪ್ಪಾಣಿಗೆ ಬಂದ ಗಾಂಧೀಜಿ ಚಿಕ್ಕೋಡಿ, ಹುಕ್ಕೇರಿ ಹಾಗೂ ಸಂಕೇಶ್ವರದ ಮೂಲಕ ಬೆಳಗಾವಿ ತಲುಪಿದರು. ಆಗ್ಗೆ ಬ್ರಾಹ್ಮಣ – ಬ್ರಾಹ್ಮಣೇತರ ಎಂಬ ಭಾವನೆ ಬೆಳೆದು ಅಲ್ಲಲ್ಲಿ ವಾತಾವರಣ ಕದಡಿತ್ತು. ನಿಪ್ಪಾಣಿಯ ಸಾರ್ವಜನಿಕ ಸಭೆಯಲ್ಲಿ
ಮಾರುತಿರಾಯ ಎಂಬುವರು ಈ ವಿಷಯವನ್ನು ಎತ್ತಿದರು. ಗಾಂಧೀಜಿ ಈ ಬಗ್ಗೆೆ ಮಾತನಾಡುತ್ತಾ ಹೇಳಿದ ಅರ್ಥ ಹೀಗಿದೆ:
ಇಡೀ ಬ್ರಾಹ್ಮಣ ಸಮಾಜವನ್ನು ದ್ವೇಷಿಸಿ ಅವರಿಂದ ದೂರ ಇರುವುದು ಆತ್ಮಘಾತಕತನ. ನಮ್ಮಲ್ಲಿರುವ ಯಜ್ಞ ತ್ಯಾಗ, ತಪಸ್ಸು ಮುಂತಾದ ಅಭಿಪ್ರಾಯಗಳೆಲ್ಲ ನಮಗೆ ಬಂದದ್ದು ಬ್ರಾಹ್ಮಣರಿಂದಲೇ.

ಪ್ರಪಂಚದಲ್ಲಿ ಬ್ರಾಹ್ಮಣರಷ್ಟು ತ್ಯಾಗ ಮಾಡಿದರು ಬೇರೆ ಯಾರೂ ಇಲ್ಲ. ಈ ಮಾತು ಈ ಕಲಿಯುಗದಲ್ಲಿಯೂ ಅನ್ವಯಿಸು ವಂತಿದೆ. ಕುಡಿಯುವ ಹಾಲಿನಲ್ಲಿ ಏನಾದರೂ ಕೊಳೆ ಇದ್ದರೆ ಕೂಡಲೇ ಕಾಣುತ್ತದೆ. ಅದೇ ಕೊಳಕು ಪದಾರ್ಥದಲ್ಲಿ ಎಷ್ಟಿದ್ದರೂ ತಿಳಿಯುವುದಿಲ್ಲ. ಆದ್ದರಿಂದ ಅವರಲ್ಲಿ ಏನೇ ಲೋಪದೋಷ ಇದ್ದರೂ ಕೂಡಲೇ ನಮ್ಮ ಗಮನವನ್ನು ಸೆಳೆಯುತ್ತದೆ. ಬ್ರಾಹ್ಮಣರ ಅಲ್ಪ ದೋಷಗಳನ್ನು ದೊಡ್ಡದು ಮಾಡಿ ಹೇಳುವುದೇ ಅವರ ಯೋಗ್ಯತೆಗೆ ಸಾಕ್ಷಿ ಎಂದು ನನ್ನ ಭಾವನೆ.
ಬ್ರಾಹ್ಮಣರಷ್ಟು ತಪಸ್ಸು ಮಾಡಿದವರು ಯಾವ ದೇಶದಲ್ಲಿಯೂ ಇಲ್ಲ. ಆದ್ದರಿಂದ ಬ್ರಾಹ್ಮಣರ ತಪ್ಪು ಎಣಿಸುವಾಗ ವಿವೇಕ ಇರಬೇಕು. ಅವರೊಂದಿಗೆ ಅಸಹಕಾರ ಎಂದರೆ ಆತ್ಮನಾಶವೇ. ಜಗತ್ತಿಗೆ ಅವರು ಮಾಡಿದ ಸೇವೆಯನ್ನು ಒಪ್ಪಿಕೊಂಡು ಅವರೊಡನೆ ಸಹಕರಿಸುವುದೇ ಸರಿಯಾದ ದಾರಿ ಇತ್ಯಾದಿಯಾಗಿ ಹೇಳಿದರು ಎಂದು ಶ್ರೀ ಮಹಾದೇವ ದೇಸಾಯಿ ವರದಿ ಮಾಡಿದ್ದಾರೆ.

ಬೆಳಗಾವಿ ಭೇಟಿ(9ನೇ ನವೆಂಬರ್ 1920): ಗಾಂಧೀಜಿ ನಿಪ್ಪಾಣಿಯಿಂದ ಬೆಳಗಾವಿಗೆ  ಬಂದರು. ಮರುದಿವಸ (09-11-1920) ಅಂದಿನ ಸಭೆಯ ವ್ಯವಸ್ಥೆ ವಹಿಸಿಕೊಂಡಿದ್ದವರು ಮಳಗಿ ಗೋವಿಂದರಾಯರು. 15 ಸಾವಿರಕ್ಕೂ ಮೇಲ್ಪಟ್ಟು ಜನ ಆ ಸಭೆಗೆ ಆಗಮಿಸಿದ್ದರು. ಅಷ್ಟು ದೊಡ್ಡ ಸಭೆ ಆವರೆಗೆ ಅಲ್ಲಿ ನಡೆದಿರಲಿಲ್ಲ. ಮೌಲಾನ ಶೌಕತ್ ಅಲಿಯವರಿಗೂ ಮತ್ತು ಗಾಂಧೀಯ ವರಿಗೂ ಬೆಳ್ಳಿಯ ಕರಂಡಕದಲ್ಲಿ ಸಮ್ಮಾನ ಪತ್ರ ಅರ್ಪಿಸಲಾಯಿತು. ಸಭೆಯಲ್ಲಿ ಒಂದು ಸಾವಿರ ರುಪಾಯಿ ನಿಧಿ ಕೂಡಿತು. ನಂತರ ಅಲ್ಲಿನ ಮಾರುತಿ ಗುಡಿಯಲ್ಲಿ ಮಹಿಳೆಯರ ಸಭೆ ನಡೆಯಿತು.

ಬೆಳಗಾವಿಯಲ್ಲಿ ಮಹಿಳೆಯರ ಸಭೆ (9ನೇ ನವೆಂಬರ್ 1920): ಮಹಿಳೆಯರ ಸಭೆ ಮಾರುತಿ ಗುಡಿಯಲ್ಲಿ ನಡೆಯಿತು. ಆ ಸಭೆಯಲ್ಲಿ ಗಾಂಧೀಜಿ ಭಾಷಣ ಮಾಡುತ್ತಾ ರಾವಣನೊಂದಿಗೆ ಸೀತೆ ಅಸಹಕಾರ ಮಾಡಿದ ಹಾಗೆ ನಾವು ಬ್ರಿಟಿಷರ ರಾಕ್ಷಸೀ
ಸರಕಾರದೊಂದಿಗೆ ಸಹಕರಿಸಬಾರದು ಎಂದು ಹೇಳಿದರು. ಮಹಿಳೆಯರೆಲ್ಲರೂ ರಾಟೆಯ ಮೇಲೆ ನೂಲಬೇಕು ಮತ್ತು ಒಡವೆಗಳ ಮೇಲಿನ ವ್ಯಾಮೋಹ ತೊರೆಯಬೇಕೆಂದರು. ನಿಮ್ಮ ಒಡವೆಗಳನ್ನು ಕೊಟ್ಟರೆ ಅದರಿಂದ ಬಂದ ಹಣವನ್ನು ದೇಶಪಾಂಡೆ
ಗಂಗಾಧರರಾಯರು ರಾಷ್ಟ್ರೀಯ ವಿದ್ಯಾಭ್ಯಾಸಕ್ಕೆ ಮತ್ತು ಸ್ವದೇಶಿಯ ಪ್ರಚಾರಕ್ಕೆ ಬಳಸುತ್ತಾರೆ ಎಂದು ಸ್ತ್ರೀಯರ ಒಡವೆಗಳನ್ನು ತೆಗೆದುಕೊಂಡರು. ಅಂದಿನ ಮಹಿಳೆಯರ ಸಭೆಯಲ್ಲಿ ಎರಡು ಸಾವಿರ ರುಪಾಯಿಗೆ ಕಡಿಮೆಯಿಲ್ಲದೆ ಆಭರಣಗಳು ಬಂದವು. ಜೊತೆಗೆ ಸ್ವಲ್ಪ ನಗದು ಹಣವೂ ಬಂತು.

(ಮುಂದುವರಿಯಲಿದೆ)