Saturday, 21st September 2024

ಗಾಂಧೀಜಿಯ ಸರಳಂ, ಶಿವಂ, ಸುಂದರಂ

ತನ್ನಿಮಿತ್ತ
ಗುರುರಾಜ್ ಎಸ್.ದಾವಣಗೆರೆ

ಸರಳವಾಗಿ ಬದುಕಿ ಅಸಾಧಾರಣವಾದದ್ದನ್ನು ಸಾಧಿಸಿ ಇತರರಿಗೆ ಮಾದರಿಯಾದವರ ಕುರಿತು ತಿಳಿದಾಗಲೆಲ್ಲ ಅವರನ್ನು ಮೆಚ್ಚುತ್ತ ನಾವೂ ಸಹ ಯಾಕೆ ಅವರಂತೆ ಇಲ್ಲ ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಸರಳವಾಗಿ ಇರುವುದು, ಬದುಕುವುದು ಅಷ್ಟು ಸುಲಭವಲ್ಲ. ದಾರಿಯುದ್ದಕ್ಕೂ ಸವಾಲುಗಳ ಸರಮಾಲೆಯನ್ನೇ ಧರಿಸಿ ನಡೆಯಬೇಕು ಎಂಬುದು ಬದುಕಿ ತೋರಿಸಿದವರು ಬರೆದ ಲೇಖನ ಸಂದರ್ಶನ ಮತ್ತು ವರದಿಯಾದ ಘಟನೆಗಳ ಮೂಲಕ ತಿಳಿದಾಗಲಂತೂ ಅವರಂತಾಗಬೇಕು ಎಂಬ ದೂರದ
ಆಸೆಯೂ ನಮ್ಮಿಂದ ದೂರವಾಗಿಬಿಡುತ್ತದೆ.

ಜಗತ್ತಿನ ಹಾದಿ ಒಂದಾದರೆ, ಸರಳ ಜೀವಿಗಳು ತುಳಿಯುವ ಹಾದಿ ಅತ್ಯಂತ ಅಪರೂಪದ್ದು ಮತ್ತು ಭಿನ್ನವಾದದ್ದೂ ಆಗಿರುತ್ತದೆ. ಅಡ್ಡಿ – ಆತಂಕ – ಅವಮಾನ, ಹಿಂಸೆ, ನಿಂದನೆ, ಒಂಟಿತನ ಬಹಿಷ್ಕಾರಗಳನ್ನು ಎದುರಿಸಿ ಬದುಕುವುದಲ್ಲದೇ, ತಮ್ಮ ಬದುಕಿನ ರೀತಿಯ ಬಗ್ಗೆ ಹೆಮ್ಮೆ ಪಡುವ ಅವರ ಮನೋಸ್ಥೈರ್ಯ ಮತ್ತು ಆತ್ಮಬಲ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ನಾವೆಲ್ಲ
‘ಅಯ್ಯೋ’ ನಿಮಗೆ ಕಷ್ಟವಾಗಲಿಲ್ಲವೆ? ಎಂದು ಮರುಗಿದರೆ ‘ಬದುಕು ಇರಬೇಕಾದದ್ದೇ ಹಾಗೆ, ಅದೇನೂ ಯೋಚಿಸುವ ವಿಚಾರವೇ ಅಲ್ಲ ಎಂದುತ್ತರಿಸಿ ನಮ್ಮ ಅಜ್ಞಾನದ ಹರವನ್ನು ನಮಗೇ ತಿಳಿಸಿಕೊಡುತ್ತಾರೆ.

ಸರಳತೆಯೇ ಆಧುನಿಕತೆಯ ಉತ್ತುಂಗ ಎಂದು ಡಂಚಿ ಹೇಳಿದ್ದ. ಬಾಲ್ಯ ಎಂದರೆ ಸರಳತೆ. ಮಗುವಿನ ಕಣ್ಣಿನಿಂದ ಜಗತ್ತನ್ನು ನೋಡಿ – ಅದು ತುಂಬಾ ಸುಂದರವಾಗಿರುತ್ತದೆ ಎಂದು ನೊಬೆಲ್ ಬಹುಮಾನ ವಿಜೇತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ. ಎಲ್ಲಿ ಉನ್ನತ ಆಲೋಚನೆ ಇರುತ್ತದೋ ಅಲ್ಲಿ ಸರಳತೆ ಇರುತ್ತದೆ, ಸರಳತೆ ಇದ್ದಲ್ಲಿ ನೇರವಂತಿಕೆ, ಮುಗ್ಧತೆ ಮತ್ತು ಸೌಂದರ್ಯ ವಿರುತ್ತದೆ. ಪರಿಶುದ್ಧತೆಯೂ ಇದ್ದು ಬದುಕು ಸಹನೀಯ ಎನಿಸುತ್ತದೆ ಎನ್ನುತ್ತಾರೆ ಪ್ರಾಜ್ಞರು. ಸರಳತೆ ಎಂದಾಕ್ಷಣ ಗಾಂಧೀಜಿ, ಎಚ್.ನರಸಿಂಹಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರರು, ಬೇಂದ್ರೆ, ಮನೋಹರ್ ಪರಿಕ್ಕರ್, ಲಾಲ್‌ಬಹದ್ದೂರ್ ಶಾಸ್ತ್ರಿ, ವಾಜಪೇಯಿ, ರಾಜಕುಮಾರ್ ಮುಂತಾದವರು ಅನಾಯಾಸವಾಗಿ ನೆನಪಾಗುತ್ತಾರೆ. ಇವರೆಲ್ಲ ಸಾಮಾನ್ಯರಂತೆಯೇ ಹುಟ್ಟಿದ್ದರೂ ಅಸಾಮಾನ್ಯರಂತೆ ಬದುಕಿ ತೋರಿಸಿದ್ದು ಈಗ ಇತಿಹಾಸ. ಸರಳವಾಗಿ ಬದುಕುವುದು ಎಂದರೆ ಪ್ರಕೃತಿಯ ನಿಯಮಗಳಿಗೆ ವಿರುದ್ಧ ಹೋಗದಂತೆ ಬದುಕುವುದು ಮತ್ತು ಅದರ ಭಾಗವಾಗಿ ಬದುಕುವುದು ಎಂಬುದನ್ನು ನಡೆದ ಹಾದಿಯುದ್ದಕ್ಕೂ ನಿರೂಪಿಸಿ ಎಲ್ಲಿಯೂ ಬೋಧಿಸದೆ, ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದವರು ಅವರು. ಆಧುನಿಕತೆಯ ಸ್ಪರ್ಶದ ಸುಖ ಅನುಭವಿಸುತ್ತಿದ್ದ ಲಕ್ಷಾಂತರ ಮಂದಿಯ ನಡುವೆ ಇದ್ದರೂ ಅದರ ವ್ಯಾಮೋಹಕ್ಕೆ ಬೀಳದೆ ಅದಿಲ್ಲದೆಯೂ ಬದುಕು ಸಾಗುತ್ತದೆ ಎಂದು ತೋರಿಸಿ ಕೊಟ್ಟ ಗಾಂಧೀಜಿ ಅನಿವಾರ್ಯವಾದಾಗ ಮಾತ್ರ, ಕಾರ್ಯಸಾಧನೆಯ ಉದ್ದೇಶದಿಂದ ಒದಗಿ ಬಂದ ವಿಮಾನ – ಹಡಗು ಪ್ರಯಾಣ, ಬಂಗಲೆಗಳ ವಾಸ ಮಾಡಿದರೇ ಹೊರತು ಬಯಸಿ ಯಾವತ್ತೂ ಪಡೆದವರಲ್ಲ. ರೈಲಿನ ಮೂರನೆ ದರ್ಜೆಯ ಸಾಮಾನ್ಯ
ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗಾಂಧೀಜಿಯನ್ನು ಯಾರೋ ‘ನೀವು ಏಕೆ ಈ ರೀತಿ ಥರ್ಡ್‌ಕ್ಲಾಸ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದೀರಿ’ ಎಂದು ಕೇಳಿದಾಗ ‘ಇದಕ್ಕಿಂತ ಕಡಿಮೆ ದರ್ಜೆಯದು ಇಲ್ಲವಲ್ಲ ಅದಕ್ಕೆ’ ಎಂದು ಸರಳವಾಗಿ ಉತ್ತರಿಸಿದ್ದ ರಂತೆ. ಅಂದಮೇಲೆ ಬದುಕಿನ ಘನತೆ – ಔನ್ನತ್ಯಗಳಿರುವುದು ನಾವು ಬಳಸುವ ವಸ್ತುಗಳಲ್ಲಲ್ಲ, ಅವುಗಳಿಗೆ ಘನತೆ ತಂದುಕೊಡು ವುದರಲ್ಲಿ ಎಂಬುದನ್ನು ಬಹುಶಃ ಗಾಂಧೀಜಿಯಷ್ಟು ನಿಖರವಾಗಿ ಯಾರೂ ಅರಿತಿರಲಿಲ್ಲವೆನ್ನಿಸುತ್ತದೆ.

ಗಾಂಧೀಜಿಯಂತೆ ಬದುಕಿ ತೋರಿಸಿದವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೂ ಅವರು ಬೀರಿರುವ ಪ್ರಭಾವ ಮಾತ್ರ ಭಾರೀ ದೊಡ್ಡದು. ನಾವು ಇಂದೆಲ್ಲ ಪುಟಗಟ್ಟಲೆ ಬರೆಯುವ ಸುಸ್ಥಿರ ಜೀವನ, ಸಂತುಲಿತ ಅಭಿವೃದ್ಧಿ, ಸಾಮುದಾಯಿಕ ಉನ್ನತಿಯ ವಿಷಯಗಳು ಗಾಂಧೀಜಿಯಂಥವರ ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿದ್ದವು. ಮಾನ ಮುಚ್ಚಲಷ್ಟೇ ಬಟ್ಟೆ ಎಂಬ ಸರಳ ಉದಾತ್ತ ನಿಲುವನ್ನು ಪ್ರತಿಪಾದಿಸಿ, ಪ್ರಯೋಗಿಸಿ ಯಶಸ್ವಿಯಾದ ಗಾಂಧೀಜಿಯ ಬದುಕು ತೆರೆದ ಪುಸ್ತಕವಾಗಿ ನೆಲೆ ನಿಂತಿದ್ದೇ ಸರಳತೆಯ ಅಡಿಪಾಯದಲ್ಲಿ. ಸರಳತೆ ಎಂದರೆ ಶುದ್ಧತೆ, ಸ್ವಚ್ಛತೆ, ಪ್ರಾಮಾಣಿಕತೆ, ಸತ್ಯನಿಷ್ಠತೆ ಎಂದು ಗ್ರಹಿಸಿ ಅದರಂತೆಯೇ ಬದುಕು ರೂಪಿಸಿಕೊಂಡ ಅವರಿಗೆ, ಯಾವ ದೃಷ್ಟಿಯಿಂದ ನೋಡಿದರೂ ಶಸ್ತ್ರವೆನಿಸದ ಅಸ್ತ್ರ ‘ಅಹಿಂಸೆ’ಯನ್ನು ಬಳಸಿ ಬೃಹತ್
ಬಲದ ಬ್ರಿಟಿಷ್ ಸಾಮ್ರಾಜ್ಯದ ಶಕ್ತಿಯ ಎದುರು ನಿಲ್ಲಲು ಸಾಧ್ಯವಾದದ್ದು ಮತ್ತು ಅಂದಿನ ಭಾರತದ ಕೋಟ್ಯಂತರ ಜನರ ಪ್ರಜ್ಞೆಯ ಭಾಗವಾಗಿ ಅವರನ್ನು ಮುನ್ನಡೆಸಿದ್ದು ಅವರ ಸರಳತೆಯೇ ಎಂಬುದನ್ನು ಚರಿತ್ರೆಯ ಪುಟಗಳು ಕೂಗಿ ಹೇಳುತ್ತವೆ.
ಅಮಾಯಕತೆ, ನಿರಾಡಂಬರತೆ, ಸ್ಪಷ್ಟತೆ, ಭೋಳೆತನ, ನೈಜತೆ, ಖಚಿತತೆಗಳೂ ಸರಳತೆಯ ರೂಪಗಳೆ ಆಗಿದ್ದು ಇವೆಲ್ಲ ಗಾಂಧೀಜಿ ಬಳಸಿದ ಅಹಿಂಸೆ ಮತ್ತು ಸತ್ಯಾಗ್ರಹದ ದಾರಿಯ ಕೈಮರಗಳಾಗಿದ್ದವು ಎಂಬುದನ್ನು ನಾವು ಮರೆಯುವಂತಿಲ್ಲ.

ಯಾವುದಾದರೂ ಮಹತ್ತನ್ನು ಸಾಧಿಸಲು ಸರಳವಾಗಿರುವುದು ಒಂದೆಡೆಯಾದರೆ, ಸರಳತೆಯೇ ಸಾಕ್ಷಾತ್ಕಾರದ ಹಾದಿ ಎಂದು ನಂಬಿ ನಡೆಯುವುದೂ ರೂಢಿಯಲ್ಲಿದೆ. ಸವಲತ್ತುಗಳಿಲ್ಲದಾಗ ಅವುಗಳಿಲ್ಲದೆ ಬದುಕುವುದನ್ನು ಸರಳತೆ ಎನ್ನುವುದಿಲ್ಲ. ಎಲ್ಲವೂ
ಇದ್ದು ಅದನ್ನು ತ್ಯಾಗ ಮಾಡಿ ಸಹಜ ಬದುಕಿಗೆ ಅವೆಲ್ಲವುಗಳ ಅವಶ್ಯಕತೆ ಇಲ್ಲ ಎನ್ನುವುದನ್ನು ಸಾಬೀತು ಮಾಡುವವರನ್ನು ಸರಳರು ಎನ್ನುತ್ತಾರೆ. ಸರಳತೆಯಲ್ಲಿ ಉಳಿತಾಯವೂ ಇದೆ. ಇದನ್ನು ಸಮರ್ಥವಾಗಿ ತೋರಿಸಿದವರು ಚೀನಾದ ಕ್ರಾಂತಿ ನಾಯಕ ಮಾವೊ ಮತ್ತು ನಮ್ಮ ಗಾಂಧೀಜಿ.

ರಾಷ್ಟ್ರೀಯ ಕ್ರಾಂತಿಯ ನಂತರ ದೇಶಕಟ್ಟುವ ಗುರುತರ ಜವಾಬ್ದಾರಿ ಹೊತ್ತಿದ್ದ ಮಾವೋ ಕಾರ್ಖಾನೆಗಳಲ್ಲಿ ಕೆಲಸ ಮಾಡು ವವರು ಎರಡು ದಶಕಗಳ ಕಾಲ ಒಂದೇ ಬಗೆಯ ಸಮವಸ್ತ್ರ ರೂಪದ ಉಡುಪು ಧರಿಸಿದಲ್ಲಿ ಬೇರೆಯ ಬಣ್ಣದ ಬಟ್ಟೆಯ ಬಳಕೆ ಯನ್ನು ವರ್ಜಿಸಿ ದೊಡ್ಡ ಮಟ್ಟದ ರಾಷ್ಟ್ರೀಯ ಉಳಿತಾಯವಾಗುತ್ತದೆ ಎಂದು ಪ್ರೇರೇಪಿಸಿ, ಅದರಂತೆ ಜನರನ್ನು ಮುನ್ನಡೆಸು ವಲ್ಲಿ ಯಶಸ್ವಿಯೂ ಆಗಿದ್ದ. ತನ್ನ ದೇಶದ ಜನರಿಗೆ ತೊಡಲು ಸಾಕಷ್ಟು ವಸ್ತ್ರಗಳಿರದಿದ್ದುದನ್ನು ಗಮನಿಸಿದ್ದ ಗಾಂಧೀಜಿ ತಾವೂ ಸಹ ಕಡಿಮೆ ಬಟ್ಟೆಗಳನ್ನುಟ್ಟೇ ಜೀವನ ಸಾಗಿಸಿದರು. ಸರಳತೆಯನ್ನು ಸ್ವಾವಲಂಬನೆ ಹಾಗೂ ಸಂತೃಪ್ತಿಯ ಮಾರ್ಗವೆಂದು ಅವರು ನಂಬಿ ಅದರಂತೆ ನಡೆದಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಕುಹಕಿಗಳು ಅದನ್ನು ದಾರಿದ್ರ್ಯ ಪೂರ್ಣ ಸರಳತೆ ಎಂದು ಜರಿದಿದ್ದರು. ಅವರ ನಡೆಯನ್ನು ಬಂಡಾಯ ಕವಿಯೊಬ್ಬ ‘ತಾನೊಬ್ಬನೇ ಉಡಲಿಲ್ಲ ತುಂಡು ಬಟ್ಟೆ ಇಡೀ ದೇಶಕ್ಕೇ ಉಡಿಸಿಬಿಟ್ಟ’ ಎಂದು ಬರೆದು ಲೇಖನಿಯ ತೆವಲು ತೀರಿಸಿಕೊಂಡಿದ್ದರು.

ಸರಳವಾಗಿರುವವರಲ್ಲಿ ಸಮಷ್ಟಿಪ್ರಜ್ಞೆ ಜಾಸ್ತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತ, ಅಧಿಕಾರ, ಸ್ಥಾನ, ಪದವಿ ಮತ್ತು ಶ್ರೀಮಂತಿಕೆಯನ್ನು ಬದಿಗಿಟ್ಟು ಸಾಮಾನ್ಯರ ಸೇವೆಗೆ ನಿಂತಿರುವ ಕೆಲವರು ಲೌಕಿಕದ ಅನೇಕ ಸಂಗತಿಗಳಿಗೆ ಘನತೆ ತರುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಕೇಂದ್ರದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಪ್ರತಿನಿತ್ಯ ಆಟೋ ರಿಕ್ಷಾದಲ್ಲಿ ಲೋಕಸಭೆಗೆ ಬರುತ್ತಿದ್ದರು. ಗಾಂಧಿವಾದಿ ನರಸಿಂಹಯ್ಯ ಚಾಪೆಯ ಮೇಲೆ ಮಲಗುತ್ತಿದ್ದರು. ಜನವರಿಯಲ್ಲಿ ಲಕ್ಷವೃಕ್ಷೋತ್ಸದ ಜಾಗೃತಿ ಜಾಥಾ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಶಾಲಾ ಬಾಲಕನ ಶೂ ಲೇಸ್ ಬಿಚ್ಚಿ ಹೋಗಿತ್ತು.

ಇದನ್ನು ಗಮನಿಸಿದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಬಾಲಕನ ಶೂಲೇಸ್ ಕಟ್ಟಿ ಸರಳತೆ ಮೆರೆದದ್ದು ವರದಿಯಾಗಿತ್ತು. ಹಿಂದಿನ ಸರಕಾರದಲ್ಲಿ ಕೆಲಕಾಲ ಗೃಹಮಂತ್ರಿಯಾಗಿದ್ದ ಎಂ.ಬಿ.ಪಾಟೀಲರು ತಾವು ಓಡಾಡುವ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ, ಸಾರ್ವಜನಿಕರಂತೆ ನಾನೂ ಟ್ರಾಫಿಕ್ ನಿಯಮ ಪಾಲಿಸುತ್ತೇನೆ. ಎಂದು ಹೇಳಿದ್ದಲ್ಲದೆ, ಅಧಿಕಾರ
ದಲ್ಲಿರುವವರೆಗೆ ಅದನ್ನು ಪಾಲಿಸಿ ಸರಳತೆಗೆ ಸಾಕ್ಷಿಯಾಗಿದ್ದರು. ಸರಳತೆ ಇದ್ದಲ್ಲಿ ಮಗ್ಧತೆಯೂ ಇರುತ್ತದೆ ಎಂಬುದಕ್ಕೆ ರಾಜ್‌ಕುಮಾರ್ ಜೀವನವೇ ಸಾಕ್ಷಿ.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ರಾಜ್‌ಕುಮಾರ್ ಸಾರ್ವಜನಿಕ ಬದುಕಿನುದ್ದಕ್ಕೂ ಸರಳತೆಗೆ ಅನ್ವರ್ಥದಂತೆ ಬದುಕಿ ತೋರಿಸಿದರು. ದೇಶದ ಪ್ರಥಮ ಪ್ರಜೆಯಾಗಿದ್ದ ವಿಜ್ಞಾನಿ ಅಬ್ದುಲ್ ಕಲಾಂ ಸರಳತೆಯ ಸಾಕಾರಮೂರ್ತಿಯಾಗಿದ್ದರು.
ಸರಳ ಬದುಕು ಸಂಯಮ, ಸಹಿಷ್ಣುತೆ, ವಿವೇಕ ಮತ್ತು ಆತ್ಮವಿಶ್ವಾಸವನ್ನೂ ವೃದ್ಧಿಸುತ್ತದೆ. ಅದು ಕೆಲವೊಮ್ಮೆ ವಿವಾದವನ್ನು ತರುತ್ತದೆ ಎಂಬುದಕ್ಕೆ ಎಂ.ಎಸ್.ಧೋನಿಯ ಬದುಕಿನಲ್ಲಿ ನಡೆದ ಘಟನೆಯೇ ಸಾಕ್ಷಿ. ಎದುರಾಳಿ ಕ್ರಿಕೆಟ್ ತಂಡದ ಆಟಗಾರರಿಗೆ
ಸಲಹೆ ನೀಡಿ ಸರಳತೆ ಮೆರೆದಿದ್ದ ಎಂ.ಎಸ್.ಧೋನಿ ದೊಡ್ಡ ವಾದ ಎದುರಿಸಿದ್ದರು.

2017ರಲ್ಲಿ ಮುಂಬೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಶ್ರೀಲಂಕ ತಂಡ ಭಾರತದೆದುರು ಹೀನಾಯ ಸೋಲು ಕಂಡಿತ್ತು. ಆಟಗಾರರ ಮನೋಸ್ಥೈರ್ಯ ಕುಗ್ಗಿ ಹೋಗಿತ್ತು. ಅವರ ಪರಿಸ್ಥಿತಿ ನೋಡಲಾಗದ ಧೋನಿ ಅವರ ಬಳಿ ಹೋಗಿ ಕೆಲವು ಉಪಯುಕ್ತ ಸಲಹೆ ನೀಡಿದ್ದರು. ಮರುದಿನ ನಡೆದ ಟಿ 20 ಪಂದ್ಯದಲ್ಲಿ ಶ್ರೀಲಂಕದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಸರಳತೆ ಎಂದರೆ ಸನ್ಯಾಸವಲ್ಲ. ಸರಳ ಬದುಕು ಎಂಬುದು ಸನ್ಯಾಸಿಯ ಬದುಕಲ್ಲ. ಸರಳತೆಯು
ದೇಹದ ಆವರಣದಂತಿರಬೇಕು. ಮನುಷ್ಯನ ಶ್ರೇಷ್ಠತೆ ಏನು ಎಂಬುದು ಅವನ ಸರಳ ವ್ಯಕ್ತಿತ್ವದ ಮೂಲಕ ಅನಾವರಣಗೊಳ್ಳ ಬೇಕು. ನಿರ್ದಿಷ್ಟ ಸವಲತ್ತೊಂದನ್ನು ನಿರಾಕರಿಸಿ ಬದುಕುವುದು ಮತ್ತು ಯಾವುದಕ್ಕೂ ಅವಲಂಬಿತರಾಗದೇ ಇರುವುದು ಸರಳತೆಯ ಮೊದಲ ಹೆಜ್ಜೆಯಾಗಿರುತ್ತದೆ. ಗಾಂಧೀಜಿ ಸರಳ ಜೀವನದ ಅನೇಕ ಪ್ರಯೋಗಗಳನ್ನು ಮಾಡಿದ್ದರು.

ಎಲ್ಲವೂ ಯಶಸ್ವಿಯಾಗಿರಲಿಲ್ಲ. ಅವುಗಳಿಗೂ ಮಿತಿ ಇದೆ ಎಂಬುದನ್ನು ಅರಿತಿದ್ದರು. ಗಾಂಧೀಜಿಯ ಕ್ರಮ ಮತ್ತು ಶೈಲಿಗಳೇ ಇತರರಿಗೂ ಮಾರ್ಗದರ್ಶಿ ಸೂತ್ರಗಳಾಗಲಾರವು. ಅವರು ಅನುಸರಿಸುತ್ತಿದ್ದ ಸರಳತೆಯ ತತ್ತ್ವ ಮಾತ್ರ ಎಲ್ಲ ಕಾಲಕ್ಕೂ ಸಲ್ಲುವಂಥದ್ದು. ಆಧುನಿಕತೆ ಯನ್ನು ದೂರ ಇಟ್ಟು ಬದುಕುತ್ತಿದ್ದರು ಎನ್ನುವುದಕ್ಕಿಂತ ತಮ್ಮ ಜೀವನ ಶೈಲಿಗೆ ಆಧುನಿಕತೆಯ ಅಗತ್ಯ ಅಷ್ಟಾಗಿ ಬೇಕಿಲ್ಲ ಎಂಬುದನ್ನು ಅವರು ನಿರೂಪಿಸಿದ್ದರು.

ಸಮಾಜ ಸೇವೆಯಲ್ಲಿ ನಿರತನಾದ ವ್ಯಕ್ತಿ ಸರಳ ಜೀವನ ನಡೆಸಬೇಕು, ಅದುವೇ ಆತನ ಉತ್ತರದಾಯಿತ್ವ ಎಂದು ಅವರು ಪ್ರತಿಪಾದಿಸಿದ್ದರು.