Thursday, 12th December 2024

ಹಿಂದಿ ಹೇರಿಕೆ ಮಾಡಿದ್ದ ಗಾಂಧಿ !

ವೀಕೆಂಡ್ ವಿತ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಸಮ್ಮೇಳನ ನಡೆದ ಕೆಲವೇ ಕೆಲವು ತಿಂಗಳುಗಳಲ್ಲಿ ಮದ್ರಾಸಿನಲ್ಲಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಆರಂಭವಾಯಿತು. ಹಿಂದಿ ಭಾಷೆಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚುರಪಡಿಸುವ ಉದ್ದೇಶ ಗಾಂಧಿಯವರದ್ದಾಗಿತ್ತು.

ಹಿಂದಿ ರಾಷ್ಟ್ರೀಯ ಭಾಷೆಯೋ ಅಥವಾ ಆಡಳಿತ ಭಾಷೆಯೋ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಸ್ವತಂತ್ರ್ಯ ಪೂರ್ವದಿಂದಲೂ ಹಿಂದಿ ಭಾಷೆಯ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭ್ ಭಾಯ್ ಪಟೇಲ, ಅಂಬೇಡ್ಕರ್ ಎಲ್ಲರೂ ಸಹ ಹಿಂದಿ ಭಾಷೆಯ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ.

ಬ್ರಿಟಿಷರ ಗುಲಾಮಗಿರಿಯ ಸಂಕೇತವಾಗಿದ್ದಂತಹ ಇಂಗ್ಲಿಷ್ ಭಾಷೆಯನ್ನು ಒಪ್ಪಿ ಕೊಂಡಂತಹ ದಕ್ಷಿಣ ಭಾರತದ ಕೆಲ ರಾಜಕೀಯ ನಾಯಕರು ಭಾರತದ ಹಿಂದಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಸದಾ ಒಂದಿಂದು ರಾಜಕೀಯ ಪ್ರಹಸನಗಳಿಗೆ ಹೆಸರುವಾಸಿಯಾಗಿ ರುವ ತಮಿಳುನಾಡಿನವರಿಗಂತೂ ಹಿಂದಿ ಎಂದರೆ ಮೈ ಮೇಲೆ ಹುಳುಗಳು ಓಡಾಡಿ ದಂತಾಗುತ್ತದೆ. ಅಸಲಿ ಗಾಂಧಿಯ ಹೆಸರಿನಲ್ಲಿ ರಾಜಕೀಯ ಮಾಡುವ ಢೋಂಗಿ ಗಾಂಧಿ ಕುಟುಂಬದ ಕುಡಿಗಳ ಹಿಂಬಾಲಕರು ಕರ್ನಾಟಕದಲ್ಲಿಯೂ ಹಿಂದಿ ವಿಚಾರವಾಗಿ ರಾಜಕೀಯ ಮಾಡಿದ್ದರು.

ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿಯನ್ನು ರಾಷ್ಟ್ರೀಯ ಭಾಷೆಯೆಂದು ಹೇಳಿದ್ದನ್ನು ನಟ ಸುದೀಪ್ ವಿರೋಧಿಸಿದ್ದರು. ಅವರಿಬ್ಬರ
ನಡುವಣ ಟ್ವೀಟ್ ಯುದ್ಧಕ್ಕೆ ರಾಜಕೀಯ ಬಣ್ಣ ಬಳೆದ ಕಾಂಗ್ರೆಸ್ಸಿನ ನಾಯಕರು ಮತ್ತದೇ ಹಿಂದಿ ಹೇರಿಕೆಯೆಂಬ ಬಣ್ಣವನ್ನು ಕಟ್ಟಿದರು. ಗಾಂಽಯ ಹೆಸರನ್ನು ಅಡ್ಡತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಾಯಕರು, ಗಾಂಧಿಯವರ ಹಿಂದಿ ಪ್ರೇಮ ಎಷ್ಟಿತ್ತೆಂಬು ದನ್ನು ಮೊದಲು ತಿಳಿದುಕೊಳ್ಳಬೇಕು.

ಗಾಂಧಿಯವರು ತಮ್ಮ ಆತ್ಮಕಥನದಲ್ಲಿ ಶಿಕ್ಷಣದಲ್ಲಿ ಹಿಂದಿ, ಸಂಸ್ಕೃತ, ಪರ್ಷಿಯಾ, ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆಗಳನ್ನು ಕಲಿಯ ಬೇಕೆಂದಿದ್ದರು. ವಿದೇಶಿ ಭಾಷೆಯೊಂದನ್ನು ಕಲಿಯಲು ತೋರುವ ಆಸಕ್ತಿಯನ್ನು ಹಿಂದಿಯ ಮೇಲೆ ಯಾಕೆ ತೋರಿಸಬಾರದೆಂಬುದು ಅವರ ವಾದವಾಗಿತ್ತು. ಹಿಂದಿ, ಗುಜರಾತಿ ಹಾಗೂ ಸಂಸ್ಕೃತ ಭಾಷೆಯನ್ನು ಒಂದು ಭಾಷೆಯನ್ನಾಗಿ ಹಾಗೂ ಪರ್ಷಿಯಾ, ಅರೇಬಿಕ್ ಭಾಷೆಯನ್ನು ಒಂದು ಭಾಷೆಯನ್ನಾಗಿ ನೋಡಬಹುದೆಂದು ಗಾಂಧಿ ಸ್ಪಷ್ಟವಾಗಿ ಹೇಳಿದ್ದರು.

ಅದೇ ಸಮಯದಲ್ಲಿ ಗಾಂಧಿಯವರ ಹಿಂದಿ ಮೇಲಿನ ಪ್ರೇಮ ಪ್ರಾದೇಶಿಕ ಭಾಷೆಗಳಿಗೆ ತೊಂದರೆಯಾಗುವುದಿಲ್ಲವೆಂಬುದನ್ನು ಸ್ಪಷ್ಟವಾಗಿ ಹೇಳಿದ್ದರು. ನಂತರದ ದಿನಗಳಲ್ಲಿ ತಮ್ಮ ಆತ್ಮಕಥನದಲ್ಲಿ ಗಾಂಧಿಯವರು ಹಿಂದಿ ಅಥವಾ ಹಿಂದೂಸ್ತಾನಿ (ಹಿಂದಿಗೆ ಅವರು ಕರೆಯು
ತ್ತಿದ್ದಂತಹ ಪರ್ಯಾಯ ಪದ) ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಿದರೆ ತಪ್ಪಿಲ್ಲವೆಂದು ಹೇಳಿದ್ದರು. 1927ರಲ್ಲಿ ಪ್ರಕಟವಾದ ತಮ್ಮ ಆತ್ಮಕಥನದ ೨೭ನೆಯ ಅಧ್ಯಾಯದಲ್ಲಿ ಬ್ರಿಟಿಷರು ನಡೆಸುತ್ತಿದ್ದಂತಹ ನೇಮಕಾತಿ ಅಭಿಯಾನದ ಬಗ್ಗೆ ಗಾಂಧಿ ಮಾತನಾಡುತ್ತಾರೆ.

ಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಿಕೊಳ್ಳುವ ನಿರ್ಣಯವೊಂದರ ಬಗ್ಗೆ ಚರ್ಚೆಯಾಗುತ್ತದೆ. ಈ ನಿರ್ಣಯಕ್ಕೆ ಗಾಂಧಿಯವರು ತಮ್ಮ ಒಪ್ಪಿಗೆಯನ್ನು ಸೂಚಿಸಿರುತ್ತಾರೆ. ನಿರ್ಣಯವನ್ನು ಅಂಗೀಕಾರ ಮಾಡಿಕೊಳ್ಳುವ ಸಭೆಗೆ ಗಾಂಧಿ ಯವರನ್ನು ಕರೆಯಲಾಗುತ್ತದೆ. ಗಾಂಧಿಯವರು ಸಭೆಯನ್ನುದ್ದೇಶಿಸಿ ತಾವು ಹಿಂದಿ ಭಾಷೆಯಲ್ಲಿ ಮಾತನಾಡುತ್ತೇನೆಂದು ಹೇಳುತ್ತಾರೆ, ಅವರ ಮನವಿಗೆ ಒಪ್ಪಿದ ವೈಸ್ ರಾಯ್ ಗಾಂಽಯವರು ಹಿಂದಿಯಲ್ಲಿ ಮಾತನಾಡಬಹುದೆಂದು ಹೇಳುತ್ತಾನೆ.

ಸಭೆಯನ್ನುದ್ದೇಶಿಸಿ ಗಾಂಧಿಯವರು ಹಿಂದಿಯಲ್ಲಿ ಮಾತನಾಡುತ್ತಾರೆ. ಅಲ್ಲಿ ನೆರೆದಿದ್ದವರು ಮೊಟ್ಟಮೊದಲ ಬಾರಿಗೆ ಬ್ರಿಟಿಷರ ಅಧಿಕೃತ ಸಭೆಯೊಂದರಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಗಾಂಧಿಯವರನ್ನು ಅಭಿನಂದಿಸುತ್ತಾರೆ. ಭಾರತದ ಭಾಷೆಯನ್ನು ಬ್ರಿಟಿಷರ ಸಭೆಯೊಂದ ರಲ್ಲಿ ಮೊಟ್ಟಮೊದಲ ಬಾರಿಗೆ ಮಾತನಾಡಲು ಇಷ್ಟು ವರ್ಷಗಳು ಬೇಕಾಯಿತಲ್ಲವೆಂದು ಗಾಂಧಿಯವರಿಗೆ ನೋವಾಗುತ್ತದೆ. ರಾಷ್ಟ್ರದ ಕೆಲಸವೊಂದರ ಬಗ್ಗೆ ನಮ್ಮದೇ ಭಾಷೆಯಲ್ಲಿ ಮೊದಲ ಬಾರಿಗೆ ಅನುಮತಿ ಕೇಳಿ ಮಾತನಾಡುವ ಪರಿಸ್ಥಿತಿ ಬಂತಲ್ಲವೆಂದು ಗಾಂಧಿ ನೊಂದುಕೊಳ್ಳುತ್ತಾರೆ.

ಗಾಂಽಯವರು ತಮ್ಮ ಆತ್ಮಕಥನದ ೩೬ನೆಯ ಅಧ್ಯಾಯವಾದ ‘ಗೋವುಗಳ ಸಂರಕ್ಷಣೆಯ ವಿರುದ್ಧ ಖಿಲಾಫತ್’ ಅಧ್ಯಾಯದಲ್ಲಿ, ತಾವು ಮುಸಲ್ಮಾನರ ಸಭೆಯೊಂದರಲ್ಲಿ ಭಾಷಣ ಮಾಡಿದ ಘಟನೆಯೊಂದರ ಬಗ್ಗೆ ಹೇಳುತ್ತಾರೆ. ತಾವು ಮುಸಲ್ಮಾನರನ್ನು ಉದ್ದೇಶಿಸಿ ಮಾತನಾಡುವಾಗ ಹಿಂದಿ ಭಾಷೆಯ ಸಂಪೂರ್ಣ ಅರಿವಿಲ್ಲದೆ ಅರ್ಧಂಬರ್ಧ ತಿಳಿದ ಹಿಂದಿಯಲ್ಲಿ ಮಾತನಾಡಿದ್ದರು.ಆದರೂ ಸಹ
ತಮಗೆ ತಿಳಿದ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿ ಸಭೆಯನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದ್ದರ ಬಗ್ಗೆ ಉಲ್ಲೇಖಿಸಿದ್ದಾರೆ.

ತಾವು ಇಂಗ್ಲಿಷ್‌ನಲ್ಲಿ ಮಾತನಾಡಿ ದ್ದರೆ ಸಭೆಯಲ್ಲಿ ಚರ್ಚೆಯಾದ ವಿಷಯಗಳು ದೊಡ್ಡ ಮಟ್ಟದಲ್ಲಿ ನೆರೆದಿದ್ದವರಿಗೆ ತಲುಪುತ್ತಿರಲಿಲ್ಲವೆಂದು ಗಾಂಧಿ ಹೇಳಿದ್ದಾರೆ. ತಾವು ಹಿಂದಿಯಲ್ಲಿ ಭಾಷಣ ಮಾಡಿ ನೆರೆದಿದ್ದವರಿಗೆ ವಿಷಯ ತಲುಪಿಸಿದ್ದು ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬಂದಿತೆಂಬುದನ್ನು ಗಾಂಧಿ ಹೇಳಿದ್ದಾರೆ. ಸಭೆಯ ಭಾಷಣದ ನಂತರ ಅವರ ತಲೆಯಲ್ಲಿ ಕೇವಲ ಹಿಂದಿ ಮಾತ್ರ ರಾಷ್ಟ್ರೀಯ ಭಾಷೆ ಯಾಗಬಲ್ಲುದೆಂಬ ಸ್ಪಷ್ಟ ಚಿತ್ರಣ ಸಿಕ್ಕಿತೆಂಬುದನ್ನು ಹೇಳಿದ್ದಾರೆ. ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದರೆ ರಾಜ್ಯಗಳ ನಡುವಣ ಸಂವಹನ ಚೆನ್ನಾಗಿರುತ್ತದೆಯೆಂದು ಅಮಿತ್ ಶಾ ಹೇಳಿದ್ದರು. ಅವರ ಮಾತನ್ನು ತಿರುಚಿ ಹಿಂದಿ ಹೇರಿಕೆಯೆಂಬ ರಾಜಕೀಯ ಶುರುವಾಗಿತ್ತು.

ಅಮಿತ್ ಶಾ ಅವರ ಮಾತು ಹಿಂದಿ ಹೇರಿಕೆಯಾದರೆ, ಗಾಂಽಯವರು ಹೇಳಿದ ಮಾತುಗಳೂ ಸಹ ಹಿಂದಿ ಹೇರಿಕೆಯಲ್ಲದೆ ಮತ್ತೇನು? ಗಾಂಧಿ ತತ್ವವನ್ನು ಅನುಸರಿಸುತ್ತೇನೆಂದು ಹೇಳುವ ನಾಯಕರೇಕೆ ಹಿಂದಿಯ ವಿಷಯದಲ್ಲಿ ಅವರನ್ನು ಅನುಸರಿಸುತ್ತಿಲ್ಲ? ಹಿಂದಿ ಭಾಷೆಯನ್ನು ದಕ್ಷಿಣ ಭಾರತದಲ್ಲಿ ಪ್ರಚುರಪಡಿಸಲು 1918ರಲ್ಲಿ ಗಾಂಧಿಯವರು ಹಿಂದಿ ಕಲಿಕಾ ಸಂಸ್ಥೆಯನ್ನು ಸ್ಥಾಪಿಸುವತ್ತ ಯೋಚಿಸಿದ್ದ ರು. ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದ ಹಿಂದಿ ಸಾಹಿತ್ಯ ಸಮ್ಮೇಳನದಲ್ಲಿ ಗಾಂಧಿಯವರಿಗೆ ಈ ಯೋಚನೆ ಹೊಳೆದಿತ್ತು. ಸಮ್ಮೇಳನ ನಡೆದ ಕೆಲವೇ ಕೆಲವು ತಿಂಗಳುಗಳಲ್ಲಿ ಮದ್ರಾಸಿನಲ್ಲಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಆರಂಭವಾಯಿತು.

ಹಿಂದಿ ಭಾಷೆಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚುರಪಡಿಸುವ ಉದ್ದೇಶ ಗಾಂಧಿಯವರದ್ದಾಗಿತ್ತು. 1918 ರಿಂದ 1948 ರವರೆಗೆ ಗಾಂಧಿಯವರು ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ದಕ್ಷಿಣ ಭಾರತದ ರಾಜ್ಯಗಳಲ್ಲಿನ ಸ್ವಯಂ ಸೇವಕರನ್ನು ಗುರುತಿಸಿ ಗಾಂಧಿಯವರು ವಾರಾಣಸಿಗೆ ಹಿಂದಿ ಕಲಿಕೆಗಾಗಿ ಕಳುಹಿಸಿದ್ದರು. ತಮ್ಮ ಮಗ ದೇವದಾಸ್ ನನ್ನು ಮದ್ರಾಸಿಗೆ ಕರೆಸಿ ಹಿಂದಿ ಪ್ರಚಾರ ಸಭಾದ ಮೊದಲ ಪ್ರಚಾರಕನನ್ನಾಗಿಸಿದ್ದರು. ಮಾತು ಮಾತಿಗೂ ಗಾಂಧಿ ತತ್ವವೆಂದು ರಾಜಕೀಯ ಮಾಡುವ ನಕಲಿ ಗಾಂಧಿ ಕುಟುಂಬದವರು, ಅಸಲಿ ಗಾಂಧಿಯವರು ಸ್ವತಃ ತನ್ನ ಮಗನನ್ನೇ ಹಿಂದಿ ಭಾಷೆಯ ಪ್ರಚಾರಕನನ್ನಾಗಿಸಿ ದಕ್ಷಿಣ ಭಾರತಕ್ಕೆ ಕಳುಹಿಸಿದ್ದರ ಬಗ್ಗೆ ಜಾಣಮೌನ ಪ್ರದರ್ಶಿಸುತ್ತಾರೆ.

1934ರಲ್ಲಿ ಗಾಂಧಿಯವರು ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದ ನಾಲ್ಕು ನೂತನ ಶಾಖೆಗಳನ್ನು ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ಮಾತನಾಡುವ ಸ್ಥಳಗಳಲ್ಲಿ ಸ್ಥಾಪಿಸಿದರು. ಇದರ ಹಿಂದಿನ ಉದ್ದೇಶ ದಕ್ಷಿಣ ಭಾರತದ ಪ್ರತಿಯೊಂದು ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಪ್ರಚುರಪಡಿಸುವುದಾಗಿತ್ತು. ಗಾಂಧಿಯವರು ಸ್ಥಾಪಿಸಿದ ದಕ್ಷಿಣ ಭಾರತ ಹಿಂದಿ ಪ್ರಚಾರಕ್ ಮಹಾಸಭಾದಲ್ಲಿ ಪ್ರಸ್ತುತ ೮೩,೭೯೫ ಜನ ಪ್ರಚಾರಕರಾಗಿ ದಕ್ಷಿಣ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕುತೂಹಲಕಾರಿಯಾದ ಅಂಶವೆಂದರೆ ತಮಿಳುನಾಡಿನಿಂದಲೇ ೪೩,೦೦೦ಕ್ಕೂ ಅಧಿಕ ಮಂದಿ ಹಿಂದಿ ಪ್ರಚಾರಕರಾಗಿ ಸೇವೆ ನಿರ್ವಹಿಸು ತ್ತಿದ್ದಾರೆ. ತಿಂಗಳ ಹಿಂದೆ ಅಮಿತ್ ಶಾ ಹಿಂದಿಯನ್ನು ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಭಾಷೆಯನ್ನಾಗಿ ಬಳಸಿದರೆ ಉತ್ತಮವೆಂದು ಹೇಳಿದ್ದರು. ಅವರ ಮಾತನ್ನು ತಿರುಚಿ ಹಿಂದಿ ಭಾಷೆ ಹೆಸರಿನ ರಾಜಕೀಯ ಮಾಡಲಾಯಿತು. ಆದರೆ ಗಾಂಧಿಯವರು ೧೯೩೫ರಲ್ಲಿ ಮಧ್ಯ ಪ್ರದೇಶದ ಇಂದೋರಿನಲ್ಲಿ ನಡೆದ ಹಿಂದಿ ಸಾಹಿತ್ಯ ಸಮ್ಮೇಳನದಲ್ಲಿ ಭಾರತದ ಪ್ರತಿಯೊಬ್ಬರೂ ಹಿಂದಿಯನ್ನು ಕಲಿಯಬೇಕು, ಕಲಿತರೆ ಪ್ರಾಂತ್ಯಗಳ ನಡುವಣ ಸಂವಹನ ಸುಲಭವಾಗುತ್ತದೆಂದು ಹೇಳಿದ್ದರು.

ಹಿಂದಿಯನ್ನು ನಾವು ರಾಷ್ಟ್ರ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಯೋಚಿಸುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಗಾಂಧಿ ಹೇಳಿದ್ದರು. ಹಿಂದಿ, ಇಂಗ್ಲಿಷ್ ಭಾಷೆಯ ಸ್ಥಾನವನ್ನು ಬದಲಾಯಿಸಿದರೆ ಉತ್ತಮವೆಂದು ಗಾಂಧಿ ಹೇಳಿದ್ದರು. ಗಾಂಧಿಯವರು ತಮ್ಮ ಹರಿಜನ್ ಪತ್ರಿಕೆ ಯಲ್ಲಿಯೂ ಸಹ ಆಗಾಗ ಈ ವಿಷಯವನ್ನು ಹೇಳುತ್ತಿದ್ದರು. ೧೦-೦೯-೧೯೩೮ರಲ್ಲಿ ಹರಿಜನದಲ್ಲಿ ಪ್ರಕಟವಾದ ಲೇಖನದಲ್ಲಿ ಗಾಂಧಿ ಯವರು ಹಿಂದಿ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿದರೆ ತಪ್ಪಿಲ್ಲವೆಂದು ಹೇಳಿದ್ದರು.

ನಾವೆಲ್ಲರೂ ಪ್ರಾಂತೀಯ ಹೊರಪದರದಿಂದ ಹೊರಬಂದು ಒಂದು ದೇಶವೆಂಬ ಕಲ್ಪನೆಯನ್ನು ಅನುಷ್ಠಾನಗೊಳಿಸಬೇಕಾದರೆ ಪ್ರತಿನಿತ್ಯ ಪೋಷಕರು ತಮ್ಮ ಮಕ್ಕಳಿಗೆ ಒಂದು ಗಂಟೆಗಳ ಕಾಲ ಹಿಂದಿ ಭಾಷೆಯನ್ನು ಕಲಿಸುವುದರೆಡೆಗೆ ವ್ಯಯಿಸಿದರೆ ತಪ್ಪಿಲ್ಲವೆಂದು ಗಾಂಧಿ ಹೇಳಿದ್ದರು. ಹಿಂದಿ ಕಲಿಕೆಯ ವಿರುದ್ಧ ಮಾತನಾಡುವವರು ತಮ್ಮ ಮಾತೃ ಭಾಷೆ ಅಪಾಯದಲ್ಲಿದೆಯೆಂದರೆ ಅವರಿಗೆ ಜ್ಞಾನದ ಅವಶ್ಯಕತೆ ಇದೆ ಅಥವಾ ಬೂಟಾಟಿಕೆಯಿಂದಾಗಿ ಹೇಳುತ್ತಿರಬಹುದಷ್ಟೆ ಎಂಬ ಮಾತನ್ನೂ ಗಾಂಧಿ ಹೇಳಿದ್ದರು.

ಸುಮಾರು ಎಂಟು ದಶಕಗಳ ಹಿಂದೆ ಗಾಂಧೀ ಹೇಳಿದ್ದಂತಹ ಮಾತುಗಳು ಇಂದಿಗೂ ನಿಜವಾಗಿದೆ. ನೂತನ ಶಿಕ್ಷಣ ಪದ್ದತಿಯಲ್ಲಿ ಮಾತೃಭಾಷೆಯಲ್ಲಿ ಮೊದಲ ಐದು ವರ್ಷಗಳ ಕಾಲ ಶಿಕ್ಷಣ ಕಡ್ಡಾಯವೆಂದು ಮಾಡಲಾಗಿದೆ. ಹಿಂದಿನ ಸರಕಾರಗಳು ಈ ನೀತಿಯನ್ನು ಜಾರಿಗೆ ತಂದಿರಲಿಲ್ಲ, ಮಾತೃ ಭಾಷೆಗೆ ಮೊದಲ ಆದ್ಯತೆಯನ್ನು ನೀಡಿ ನಂತರದ ಸ್ಥಾನವನ್ನು ಇತರ ಭಾಷೆಗಳಿಗೆ ನೀಡಲಾಗಿದೆ. ಹೀಗಿರುವಾಗ ಹಿಂದಿ ಹೇರಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.