ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ಗಾಂಧಿ ಕಾಲೇಜು ಎಂದು ಕರೆಯಲ್ಪಡುತ್ತಿದ್ದ ನ್ಯಾಷನಲ್ ಕಾಲೇಜಿನಲ್ಲಿ ನಾನು ಓದಿದ್ದು. ಅದಕ್ಕೆ ಮೊದಲು ನ್ಯಾಷನಲ್ ಹೈಸ್ಕೂಲ್. ಅದಕ್ಕೂ ಮುಂಚೆ ನ್ಯಾಷನಲ್ ಪ್ರೈಮರಿ ಮತ್ತು ಮಿಡ್ಲ್ ಸ್ಕೂಲ್. ಎಲ್ಲ ಅವಽಯಲ್ಲೂ ಖಾದಿ ತೊಡುತ್ತಿದ್ದ ಅಥವಾ
ಶ್ವೇತವಸಧಾರಿಗಳಿದ್ದ ಕೆಲವು ಶಿಕ್ಷಕರು. ಅವರಲ್ಲಿ ಎಚ್ ಎಸ್ ವರದಾದೇಶಿಕಾಚಾರ್ಯ, ಎಂ ನಂದಗುಡಿ ಮತ್ತು ಎಚ್ ನರಸಿಂಹಯ್ಯ ಪ್ರಮುಖರು. ನಮ್ಮ ಬೃಹತ್ ಸಂಸ್ಥೆಯ ಪಕ್ಕದಲ್ಲೇ ಗಾಂಧಿ ಬಜಾರು.
ವಿದ್ಯಾರ್ಥಿಯಾಗಿ ನಾನು ಮಾಡುತ್ತಿದ್ದ ಚೇಷ್ಟೆಗಳಲ್ಲಿ ಸಮಪಾಲು ಪಡೆದಿದ್ದ ಸಹಪಾಠಿ ಶ್ರೀನಾಥನ ಹುಟ್ಟಿದ ಹಬ್ಬ ಗಾಂಧಿ ಜಯಂತಿಯಂದು (ನಾನು ಹುಟ್ಟಿದ್ದೂ ಅದೇ ಅಕ್ಟೋಬರ್ ತಿಂಗಳಲ್ಲಿ). ನಾವಿದ್ದ ರಂಗರಾವ್ ರಸ್ತೆಯಲ್ಲಿ ಕರ್ನಾಟಕ ಸರ್ವೋದಯ ಸಂಘ. (ಅದಾರೋ ತರಲೆಗಳಿಂದ ಪದೇ ಪದೇ ಠಠಠ ಠಾವ್ ಠಸ್ತೆ ಎಂದು ವಿರೂಪಗೊಳ್ಳುತ್ತಿದ್ದ ರಸ್ತೆಯ ಹೆಸರು ಹೊತ್ತ ಶಿಲಾಶಾಸನ!) -ಷನ್ ಪ್ರಿಯನಾದ ನಾನು ಬಣ್ಣಬಣ್ಣದ ಖಾದಿ ಶರ್ಟ್‌ಗಳಿಗೆ ಅಲ್ಲಿ ಬಟ್ಟೆ ಕೊಂಡದ್ದಿದೆ. ಕೆಲವೊಮ್ಮೆ ಪಂಚೆ ಯುಟ್ಟು ಕಾಲೇಜಿಗೆ ಹೋಗಿದ್ದೂ ಉಂಟು. ಸಂಘದ ಪಕ್ಕದಲ್ಲೇ, ಕಾಕತಾಳೀಯವಾಗಿ, ಕೇಶವ ಕೃಪಾ. ಒಂದೆರಡು ದಿನ ಶಾಖೆಗೆ ಹೋಗಿದ್ದೂ ಉಂಟು. ಎಮರ್ಜೆನ್ಸಿಯಲ್ಲಿ ಅಲ್ಲಿ ಬೀಗ ಜಡಿಯಲಾಗಿತ್ತು.
ಹೊರಗೆ ಕಾವಲಿಗಿದ್ದ ಪೊಲೀಸ್ ಪೇದೆ ಲೈಸೆನ್ಸ್ ಇಲ್ಲದೆ ಸುವೇಗ ಓಡಿಸುತ್ತಿದ್ದ ಬಾಲಕ ನಾದ ನನ್ನನ್ನು ತಡೆದು ನನ್ನ ಬಳಿಯಿದ್ದ ಎರಡು ರುಪಾಯಿಯನ್ನು ಕಸಿದುಕೊಂಡು ಕಳಿಸಿದ್ದ. ಒಟ್ಟಿನಲ್ಲಿ, ನಾನು ಬೆಳೆದದ್ದು ಗಾಂಧಿ ವಾತಾವರಣದಲ್ಲಿ. ಗಿಳಿಗೆ ಹೇಳಿಕೊಡು ವಷ್ಟು ಮಾತ್ರ ಗಾಂಧಿಯ ಬಗ್ಗೆ ವ್ಯವಸ್ಥೆ ಹೇಳಿಕೊಟ್ಟಿತ್ತಾದರೂ, ಅಪ್ಪ ಒಮ್ಮೆ ಗಾಂಧಿಯ ಬಗ್ಗೆ ಋಣಾತ್ಮಕವಾಗಿ ಮಾಡಿದ ಕಲಿ ಎಂಬ ಒಂದು ಶಬ್ದ ಅಪಸ್ವರವಾಗಿ ಕೇಳಿತ್ತು. ಅಪ್ಪನ ಗ್ರಹಿಕೆಯೇ ಸರಿಯಿಲ್ಲವೆಂದುಕೊಂಡಿದ್ದೆ. ಗಾಂಧಿಯ ಬಗ್ಗೆ ಕವಿತೆಯೊಂದನ್ನು ಬರೆದಿದ್ದ ಹಿರಿಯ ವಿದ್ಯಾರ್ಥಿ ಅಶ್ವಥ ನಾರಾಯಣ ನನಗೆ ಅಷ್ಟಾಗಿ ಪರಿಚಯವಿಲ್ಲ ದಿದ್ದರೂ ಅವನನ್ನೇ ಚುನಾವಣೆಯಲ್ಲಿ ಬೆಂಬಲಿಸಿ ಸಕ್ರಿಯವಾಗಿ ಪ್ರಚಾರ ಮಾಡಿದ್ದೆ.
ಅಶ್ವಥ ಠೇವಣಿ ಕಳೆದುಕೊಂಡ. ಗೆದ್ದವನು ಒಬ್ಬ ಪುಂಡ. ಎಚ್ ನರಸಿಂಹಯ್ಯ (ಏಘೆ) ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡಾಗ ಸಮಸ್ತ ನ್ಯಾಷನಲ್ ಎಜುಕೇಶನ್ ಸೊಸೈಟಿಯ ವಿದ್ಯಾರ್ಥಿಗಳಿಗೆ ವಿಬಿ ಬೇಕರಿಯಲ್ಲಿ ತಯಾರಿಸಿದ ಬಾದಾಮ್ ಬರ್ಫಿಯನ್ನು ವಿತರಿಸಿದ್ದರು. ಆಗ ನಾನು ಎಂಟನೇ ತರಗತಿಯಲ್ಲಿದ್ದೆ. ಅವರ ಮುಖಾಮುಖಿಯಾಗಿದ್ದು ಕಾಲೇಜಿನ ಮೆಟ್ಟಿಲು ಹತ್ತಿದಾಗ. ರಾಷ್ಟ್ರೀಯ ಸೇವಾ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದೆ. ಅಲ್ಲಿ ಸಿಗುತ್ತಿದ್ದರು. ಕಾಲೇಜಿನ ಪ್ರಾಂಗಣದಲ್ಲಿ ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳನ್ನು – ಆರೇ ಮಂದಿಯಿದ್ದರೂ – ಖಾಲಿ ಕೊಠಡಿಗೆ ಕರೆದುಕೊಂಡು ಹೋಗಿ ಉಪನ್ಯಾಸ ಕೊಡುತ್ತಿದ್ದರು.
ವಿಚಾರವಾದದ ಬಗ್ಗೆ, ಚಾರಿತ್ರ್ಯದ ಬಗ್ಗೆ ಮಾತನಾಡುತ್ತಿದ್ದರು. ನಾವೊಂದಿಬ್ಬರು, ಮೂರ್ವರು ಅವರನ್ನು ಕಿಚಾಯಿಸುತ್ತಿದ್ದೆವು. ಇಕ್ಕಟ್ಟಿನ ಪ್ರಶ್ನೆ ಕೇಳಿದರೆ ಕೆಲಸವಿದೆಯೆಂದು ಹೊರಟುಬಿಡುತ್ತಿದ್ದರು. ಅವರೇ ಸಂಸ್ಥಾಪಕ-ಅಧ್ಯಕ್ಷರಾಗಿದ್ದ ಬೆಂಗಳೂರು ವಿಜ್ಞಾನ ವೇದಿಕೆಯ ಕಾರ್ಯಕಾರಿ ಸಮಿತಿಯಲ್ಲೂ ನಾನಿದ್ದೆ. ಸಮಿತಿಯ ಸಭೆಯಲ್ಲಿ ಒಮ್ಮೆ ಮುಜುಗರಕ್ಕೆ ಈಡುಮಾಡಿದ್ದೆ.
ಮತ್ತೊಮ್ಮೆ, ನಾನು ಮಾತನಾಡಲು ಹೊರಟಾಗ, ದೊಡ್ಡವರು ಮಾತನಾಡಲೆಂದು ಹೇಳಿ ನನ್ನನ್ನು ಸುಮ್ಮನಾಗಿಸಿದ್ದರು.
ಎನ್‌ಎಸ್‌ಎಸ್ ವತಿಯಿಂದ ನಿಮ್ಹಾನ್ಸ್ ನ ರೋಗಿಗಳಿಗೆ ನಾವೊಂದು ಕಾರ್ಯಕ್ರಮವನ್ನು ರೂಪಿಸಿದ್ದೆವು. ಆ ನಂತರ, ಸಹಪಾಠಿ ನಾಗೇಶ್ ಎಚ್‌ಎನ್‌ರಿಗೆ ಸಾರ್, ವಿಜ್ಞಾನ ವೇದಿಕೆಗೂ ಒಂದು ಸುಸಜ್ಜಿತ ಸಭಾಂಗಣ ಬೇಕು. ನಿಮ್ಹಾನ್ಸ್ ನ ಸಭಾಂಗಣವೇ ಎಷ್ಟು ಚೆನ್ನಾಗಿದೆ ಗೊತ್ತಾ, ಸಾರ್ ಎಂದು ಸಲಹೆ ನೀಡಿದ. ಅಲ್ಲಿರೋರು ಹುಚ್ಚರಪ್ಪಾ ಅಂತ ಎಚ್ ಎನ್ ನಗಾಡಿದರು. ಅಲ್ಲಿಯ ಆಡಳಿತಗಾರರು ಹುಚ್ಚರಲ್ಲ ಅಂತ ಪಕ್ಕದಲ್ಲಿದ್ದ ಶ್ರೀನಾಥ್ ಹೇಳಿದ.
ನಾನು ಬಿಎಸ್ಸಿ ಓದುವಾಗ ಚಿಂತಾಮಣಿಯ ವಿದ್ಯಾರ್ಥಿ ಯೊಬ್ಬ ನಮ್ಮಲ್ಲಿ ಬಿಎ ಮಾಡುತ್ತಿದ್ದ. ಅವನ ಹೆಸರು ರಾಜಗೋಪಾಲ. ರೌಡಿ, ರೇಪ್ ಕೇಸ್ನಲ್ಲಿ ಗಡಿಪಾರಾಗಿದ್ದ ಎಂದು ಕೇಳಿದ್ದೆವು. ಅವನಿಗೆ ನಮ್ಮ ಕಾಲೇಜಿನಲ್ಲಿ ಹೇಗೆ ಸೀಟ್ ಸಿಕ್ಕಿತ್ತೋ ಕಾಣೆ. ಒಂದು ಮಧ್ಯಾಹ್ನ. ಕಾಲೇಜ್ ಬಿಡುವ ಹೊತ್ತು. ಎರಡನೇ ಮಹಡಿಯಲ್ಲಿದ್ದ ತರಗತಿಯಿಂದ ಹೊರ ಬೀಳುತ್ತಿದ್ದ ನಮಗೆ ಪ್ರಿನ್ಸಿಪಾಲರ ಕಚೇರಿಯಿಂದ ಟೆಲೆಫೋನ್ ಡೈರೆಕ್ಟರಿ ಗಾಳಿಯಲ್ಲಿ ತೂರಿಬಂದದ್ದು ಕಂಡುಬಂತು. ಮರುಕ್ಷಣವೇ ಆಲಿವ್ ಹಸಿರು ಬಣ್ಣದ ಫೋನ್ ಹಾರಿಬಂತು. ಆನಂತರ ರಾಜಗೋಪಾಲನೇ ಹೊರಬಂದ. ಕುಡಿದಿದ್ದ ನರಪೇತಲ ರಾಜಗೋಪಾಲ ತೂರಾಡುತ್ತಿದ್ದ. ಷಟಲ್ ಆಟಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಯ ಷಟಲ್ ಕಾಕ್‌ಗಳನ್ನು ಕಿತ್ತೆಸೆದ.
ಷಟಲ್ ರ‍್ಯಾಕೆಟ್ಟನ್ನು ಮುರಿದ. ಮುಕ್ತ ಸಭಾಂಗಣದ ವೇದಿಕೆಯ ಮೇಲೆ ನಡೆಯುತ್ತಿದ್ದ ಹಂಗಾಮಿ ಕ್ಯಾಂಟೀನ್ ಮೇಜಿನ
ಮೇಲಿದ್ದ ಖಾಲಿ ಗ್ಲಾಸನ್ನು ಮುಷ್ಟಿಯಿಂದ ಗುದ್ದಿದ. ಕೈನಲ್ಲಿ ರಕ್ತ ಬಂತು. ನಶೆಯೂ ಸ್ವಲ್ಪ ಇಳಿಯಿತು. ಅವನ ಹತ್ತಿರ ಯಾರೂ ಹೋಗಲಿಲ್ಲ. ಪ್ಯಾಂಟ್ನೊಳಗೆ ಟಕ್ ಮಾಡಿದ್ದ ಅವನ ಶರ್ಟ್‌ನ ಬಹಳಷ್ಟು ಗುಂಡಿಗಳು ತೆರೆದಿದ್ದು ಶರ್ಟೊಳಗೆ ಕ್ಷೌರಿಕರು ಬಳಸುವ ರೇಝರನ್ನು ಸಿಕ್ಕಿಸಿಕೊಂಡಿದ್ದ. ಇಡೀ ಕಾಲೇಜ್ ಇದನ್ನು ಆಘಾತದಿಂದ ವೀಕ್ಷಿಸಿತು. ಪ್ರಿನ್ಸಿಪಾಲ್ ಎಂ ಎಸ್ ವೆಂಕಟರಾವ್ ಮೂಕರಾಗಿ ನೋಡುತ್ತಿದ್ದರು. ಎಚ್ಎನ್ ಇದನ್ನು ನೋಡಿಯೂ ನೋಡದಂತಿದ್ದುದನ್ನು ನಾವು ಕೆಲವರು ಕಣ್ಣಾರೆ ನೋಡಿದೆವು. ಅಷ್ಟು ಹೊತ್ತಿಗೆ ರಾಜಗೋಪಾಲ ಅಲ್ಲಿದ್ದ ಕೆಲವು ದ್ವಿಚಕ್ರ ವಾಹನಗಳ ಸೀಟನ್ನು ಕುಯ್ಯಲಾರಂಭಿಸಿದ.
ತನ್ನ ವಿಜಯ್ ಸ್ಕೂಟರನ್ನು ಅವನಿಂದ ರಕ್ಷಿಸಲು ಒಬ್ಬ ವಿದ್ಯಾರ್ಥಿ ಧೈರ್ಯತೋರಿ ಸ್ಕೂಟರೇರಿ ಹೊರಡುವಾಗ ರಾಜಗೋಪಾಲ ಬಲವಂತವಾಗಿ ಹಿಂಬದಿ ಸೀಟಿನ ಮೇಲೆ ಹಾರಿ ಕುಳಿತ. ವೆಂಕಟ ರಾವ್ ದೂರದಿಂದಲೇ, ಅವನನ್ನು ಹೇಗಾದರೂ ಮಾಡಿ ಹೊರಗೆ ಕರೆದುಕೊಂಡುಹೋಗು ಎಂದು ಗಾಡಿ ಓಡಿಸುತ್ತಿದ್ದ ವಿದ್ಯಾರ್ಥಿಗೆ ಹೇಳಿ, ಅವರು ಹೊರಬೀಳುತ್ತಿದ್ದಂತೆ ದಕ್ಷಿಣಕ್ಕಿದ್ದ ಕಾಲೇಜಿನ ದೊಡ್ಡ ಗೇಟಿಗೆ ಬೀಗ ಹಾಕಲು ಜವಾನನಿಗೆ ಹೇಳಿದರು.
ನಂತರ ಹಾಸ್ಟೆಲ್‌ಗೆ ಹೊಂದಿಕೊಂಡಿದ್ದ ಅವರ ಕ್ಯಾಬಿನ್ನಿಂದ ಹೊರಬಂದ ಎಚ್ ಎನ್ ಏನಾಗುತ್ತಿದೆ ಎಂದು ರಾಯರನ್ನು ವಿಚಾರಿಸಿದರು. ಪೊಲೀಸ್‌ಗೆ ದೂರು ನೀಡಿದಿರೇ ಎಂದು ಕೇಳಿ, ಇಲ್ಲವೆಂದ ರಾಯರಿಗೆ ಗದರಿದರು. ಕಾಲೇಜಿನ ಗೌರವದ ಪ್ರಶ್ನೆ, ಆದ್ದರಿಂದ ದೂರು ನೀಡಲಿಲ್ಲ ಎಂದು ಸಮಜಾಯಿಷಿ ನೀಡಿದ ಅವರಿಗೆ ಏನ್ಸಾರ್, ಇಷ್ಟೊಂದು ಜನ ಹೆಣ್ಣುಮಕ್ಕಳು ಇದ್ದಾರೆ, ಅವರಿಗೇನಾದರೂ ಹೆಚ್ಚೂಕಡಿಮೆ ಆದ್ರೆ, ಮರ್ಯಾದೆ ಅಂತ ಹೇಳಿ ಸುಮ್ನಿರಲಿಕ್ಕಾಗುತ್ತಾ? ಎಂದು ದಬಾಯಿಸಿದರು.
ಇದಾದ ಕೆಲವು ಅವಽಯಲ್ಲೇ ಕಾಲೇಜಿನ ವಾರ್ಷಿಕೋತ್ಸವ ನಡೆಯಿತು. ಮುಖ್ಯ ಅತಿಥಿಯಾಗಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ನರಸಿಂಹ ರಾವ್ ಆಗಮಿಸಿದ್ದರು. ಕತ್ತಲಿನ ಲಾಭ ಪಡೆದ ಕೆಲವು ಪುಂಡ ವಿದ್ಯಾರ್ಥಿಗಳು ಕೆಟ್ಟದಾಗಿ ವರ್ತಿಸಿದರು. ಸಮಾರಂಭ ಮಧ್ಯದಲ್ಲೇ ನಿಂತುಹೋಯಿತು. ಸ್ವಲ್ಪ ದಿನಗಳಲ್ಲಿ, ಹರಟೆಯಲ್ಲಿ ತೊಡಗಿದ್ದ ನಾವು ನಾಲ್ಕೈದು ವಿದ್ಯಾರ್ಥಿ ಗಳನ್ನು ಎಚ್ ಎನ್ ಎಂದಿನಂತೆ ಅರಿವಿನ ಉಪನ್ಯಾಸಕ್ಕಾಗಿ ಕೊಠಡಿಯೊಂದಕ್ಕೆ ಕರೆದೊಯ್ದು ಸಮಾರಂಭದಂದು ನಡೆದ ಪುಂಡಾಟಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಅವತ್ತು ನಡೆದ ಘಟನೆ ನಾವೆಲ್ಲರೂ ತಲೆ ತಗ್ಗಿಸಬೇಕಾದಂಥದ್ದು. ಗಲಾಟೆ ಮಾಡಿದವರು ಕೆಲವಷ್ಟೇ ಮಂದಿ. ಬಹುಸಂಖ್ಯಾತರಾಗಿದ್ದ ನೀವು ಸುಮ್ಮನಿದ್ದುದು ತಪ್ಪು ಎಂದು ತಿಳಿವಳಿಕೆ ನೀಡಿದರು.
ಆ ಸಂಜೆ ಮೌನವಾಗಿದ್ದು ಅಸಹಾಯಕರಾಗಿದ್ದ ಬಹುಸಂಖ್ಯಾತರಲ್ಲಿ ನಾನೂ ಒಬ್ಬ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಆದರೆ, ಅವತ್ತು ರಾಜಗೋಪಾಲ ಕುಡಿದು ಬಂದು ದಾಂಧಲೆ ನಡೆಸಿದ್ದನ್ನು ಇಡೀ ಕಾಲೇಜು ನೋಡಿತು, ನೀವೂ ನೋಡಿದಿರಿ. ಅವನ ಮೇಲೆ ಯಾವ ಕ್ರಮ ಜರುಗಿಸಿದಿರಿ, ಸರ್? ಕೇಳಿದೆ.ನೋಡಪ್ಪಾ, ಬುದ್ಧನನ್ನೂ ಕೆಲವರು ಹೀಗೆಯೇ ಪ್ರಶ್ನಿಸಿದರು. ಬುದ್ಧ ಏನು ಮಾಡಿದ ಗೊತ್ತಲ್ಲಾ? ಎನ್ನುತ್ತಾ ಎಚ್ ಎನ್ ಮಂದಸ್ಮಿತರಾದರು.
ಇದಾದ ಮರುವರ್ಷ ಕೆಲವು ವಿದ್ಯಾರ್ಥಿಗಳು ಮಚ್ಚಿನಲ್ಲಿ ಹೊಡೆದಾಡಿಕೊಂಡರು. ರ‍್ಯಾಂಕ್ ಗಳಿಸುವುದೇ ಕಾಲೇಜಿನ ಶ್ರೇಷ್ಠತೆಯ ಮಾನದಂಡವಲ್ಲ. ಪಬ್ಲಿಕ್ ಪರೀಕ್ಷೆಗಳಲ್ಲಿ ಸಗಟಾಗಿ ರ‍್ಯಾಂಕ್ ಗಳಿಸುತ್ತಿದ್ದ ಕಾಲೇಜು ಇಂದು ಹಿಂದೆ ಸರಿದಿದೆ. ಕಾಲೇಜಿನ ಆಗುಹೋಗುಗಳನ್ನು ದುಗುಡದಿಂದ ಗಮನಿಸುತ್ತಿರುವ ಸ್ನೇಹಿತನೊಬ್ಬನ ಪ್ರಕಾರ ಕಾಲೇಜು ಹಳ್ಳ ಹಿಡಿದಿದೆ. ಅದಕ್ಕೆ ಎಚ್ ಎನ್ ರ ಕೊಡುಗೆ ಅಪಾರ. ಕೇಳಿದರೆ, ಖಿನ್ನತೆ ಆವರಿಸುತ್ತದೆ. ಸಂಸ್ಥೆ ಮುಖ್ಯ, ವ್ಯಕ್ತಿಗಳಲ್ಲ ಎಂಬ ಮಾತು ಅದೆಷ್ಟು ಮುಖ್ಯ! ಎಚ್ ಎನ್ ಬ್ರಹ್ಮಚಾರಿ.
ಬ್ರಹ್ಮಚಾರಿ ಸಾರ್ವಜನಿಕ ಜೀವನದಲ್ಲಿರುವುದರ ಪ್ರಯೋಜನಗಳು ಅನೇಕ. ಆದರೆ, ವಿವಾಹಪೂರ್ವದಲ್ಲೇ ಆಗಲಿ, ದಾಂಪತ್ಯ ದಲ್ಲೇ ಆಗಲಿ, ಬ್ರಹ್ಮಚರ್ಯ (ಸಂಯಮ) ಹೆಚ್ಚಿನ (ನಿಸ್ವಾರ್ಥ) ಸಾಧನೆಗೆ ಸೋಪಾನವಾಗಬೇಕು. ಸಂಯಮದಿಂದ ದೊರಕುವ ಸಾತ್ವಿಕತೆ ಕೋಡು ಮೂಡಿಸಬಾರದು. ಬ್ರಹ್ಮಚರ್ಯ ಪ್ರಾಮಾಣಿಕತೆಯ ಒಂದು ಅಂಗ. ನಾಯಕನೊಬ್ಬನಿಗೆ ಪ್ರಾಮಾಣಿಕತೆ ಅತ್ಯವಶ್ಯ. ಪ್ರಾಮಾಣಿಕತೆಯೂ ಅಲಂಕಾರದ ಸಾಧನವಲ್ಲ, ತೊಡಬೇಕಾದ ಟೈ ಅಲ್ಲ. ಇದು ಅರ್ಥವಾಗದಿದ್ದರೆ, ಮದ ನೆತ್ತಿಗೇರಿ ಸರ್ವಾಧಿಕಾರೀ ಧೋರಣೆಯಲ್ಲಿ ಪರ್ಯವಸಾನ ಹೊಂದುತ್ತದೆ.
ಗಾಂಧಿತನವೆಂಬ ಮಾದಕವಸ್ತುವಿನ ಸೇವನೆಯಿಂದ ವ್ಯಕ್ತಿತ್ವವನ್ನೇ ಏರುಪೇರು ಮಾಡಿಕೊಂಡಿದ್ದ ಎಡಬಿಡಂಗಿ ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾಗಿ ದೇಶದ ಭದ್ರತೆಗೆ ಯಾವುದೇ ಭಯೋತ್ಪಾದಕನಿಗಿಂತ ಹೆಚ್ಚಿನ ಹಾನಿಮಾಡಿದರು. ಅವಾಸ್ತವಿಕತೆಯ ಟೊಪ್ಪಿ ಧರಿಸಿದ್ದ ಮೊರಾರ್ಜಿ ಹುಚ್ಚು ಹೆಜ್ಜೆಗಳನ್ನಿಟ್ಟರು. ಅವರ ಎಡವಟ್ಟುಗಳು ಸ್ವಮೂತ್ರಪಾನಕ್ಕೆ
ಸೀಮಿತವಾಗಿದ್ದರೆ ದೇಶ ಎಷ್ಟೋ ನೆಮ್ಮದಿಯಾಗಿರುತ್ತಿತ್ತು. ಪಾರದರ್ಶಿಕತೆ ಪ್ರಾಮಾಣಿಕತೆಯನ್ನು ಬಿಂಬಿಸುವ ಒಂದು ಪೋಸ್ಟರ್. ಎಲ್ಲ ವಿಷಯಗಳಲ್ಲೂ, ಎಲ್ಲ ಸಂದರ್ಭಗಳಲ್ಲೂ ಅಂತಹ ಪಾರದರ್ಶಕತೆ ಅವಶ್ಯವಿಲ್ಲ. ರಾಮ್ ತೇರೀ ಗಂಗಾ
ಮೈಲಿಯ ಮಂದಾಕಿನಿಯಷ್ಟಾದರೂ ಅರೆಪಾರದರ್ಶಕತೆ ಅಗತ್ಯವಿರುತ್ತದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಅಪಾರ ದರ್ಶಕತೆ ಕೂಡ ಅಪೇಕ್ಷಣೀಯವಾಗಿರುವ ಸಂದರ್ಭದಲ್ಲಿ ಗಾಂಧಿತನ ಅಡ್ಡಬಂದರೆ ಕೊಡಲಿಯಿಂದ ತಲೆತುರಿಸಿಕೊಂಡಂತೆ. ಪ್ರಾಮಾಣಿಕತೆ ವಿವೇಕವನ್ನು ವಿಚ್ಛೇದಿಸಬಾರದು. ಪಾರದರ್ಶಕತ್ವಕ್ಕಿಂತ ಮುಖ್ಯ ಸದುದ್ದೇಶ. ಹಾಗಿದ್ದಲ್ಲಿ ಮಾತ್ರ ಪ್ರಾಮಾಣಿಕತೆ ಪ್ರದರ್ಶನದ ಮಟ್ಟಕ್ಕಿಳಿಯುವುದಿಲ್ಲ. ಗಾಂಧಿಯ ಬ್ರಹ್ಮಚರ್ಯದ ಪ್ರಯೋಗಗಳು ಅವಿವೇಕದ ಪರಾಕಾಷ್ಠೆಯಾಗಿದ್ದವು, ಅಸೂಕ್ಷ್ಮತೆಯಿಂದ ಕೂಡಿದ್ದವು.
ಪ್ರಾಮಾಣಿಕತೆ ಗಳಿಸಿಕೊಟ್ಟ ಅಂತಸ್ತಿನ ದುರ್ಬಳಕೆಯಾಗಿದ್ದವು. ದಟ್ಟ ಕಾಮುಕತೆಯಿಂದಾವೃತವಾದ ಅತೃಪ್ತ ಮನಸ್ಸಿಗೆ ಬ್ರಹ್ಮಚರ್ಯದ ಕಾಂಡೊಮ್ ತೊಡಿಸಿದಂತಿತ್ತು. ಈ ಒಂದು ವಿಚಾರದಲ್ಲಿ ಜೆ ಎಚ್ ಪಟೇಲರು ಗಾಂಧಿಗಿಂತ ಕಡಿಮೆ ತಿರಸ್ಕೃತ ಯೋಗ್ಯರಾಗಿದ್ದರು. ಪತ್ನಿವಿಯೋಗದ ನಂತರ ತಮ್ಮ ದಂತಪಂಕ್ತಿಯನ್ನೇ ಕಿತ್ತಿಸಿಕೊಂಡು ತಮ್ಮನ್ನು ತಾವು ವಿರೂಪಗೊಳಿಸಿ ಕೊಂಡ ಬೆಳೆಗೆರೆ ಕೃಷ್ಣ ಶಾಸ್ತ್ರಿ; ಮೂವತ್ತರ ಸರಿಸುಮಾರಿನಲ್ಲೇ, ದಾಂಪತ್ಯದಲ್ಲಿ ಸಾಫಲ್ಯ ಕಂಡು, ಧರ್ಮಪತ್ನಿ ಯಿಂದ ದೈಹಿಕ ಅಂತರ ಕಾಪಾಡಿಕೊಂಡ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮುಂತಾದವರ ಏಕಾಂತದಲ್ಲಿನ ಸಭ್ಯತೆಗಿಂತ ಬೇಕೇ? ತಮ್ಮ ೩೮ನೆಯ ವಯಸ್ಸಿಗೇ ಬ್ರಹ್ಮಚರ್ಯವನ್ನು ಪಾಲಿಸಲಾರಂಭಿಸಿದ್ದ ಗಾಂಧಿಗೆ ೭೭ನೆಯ ವಯಸ್ಸಿಗೆ ಅದನ್ನು ಪರೀಕ್ಷೆಗೊಡ್ಡುವ ಉಮೇದು ಬಂದದ್ದಾರೂ ಏಕೆ? ನೌಖಾಲಿಯಲ್ಲಿ ನಡೆದ ಮಾರಣಹೋಮಕ್ಕೆ ತಮ್ಮ ಅಸಮರ್ಪಕ ಬ್ರಹ್ಮಚರ್ಯವೇ ಕಾರಣ ವೆಂದು ನಂಬುವುದರ ವೈಪರೀತ್ಯವನ್ನು ವಿಶ್ಲೇಷಿಸಬೇಕು.
ತಂದೆ ಮೃತ್ಯುಶಯ್ಯೆಯಲ್ಲಿರಬೇಕಾದರೆ ಅಪ್ರಬುದ್ಧ ಗಾಂಧಿ ಪತ್ನಿಯೊಂದಿಗಿದ್ದದ್ದು ಕ್ಷಮ್ಯ. ಅದವರ ವಯಸ್ಸಿನ ಮಹಿಮೆ ಯೆಂದು ಉಪೇಕ್ಷಿಸಬಹುದು. ಅವರು ದೀರ್ಘಕಾಲ ಪಾಪಪ್ರeಯಿಂದ ನರಳುವ ವಿಷಯವಾಗಬೇಕಾಗಿರಲಿಲ್ಲ. ಅದೇನೇ ಇರಲಿ, ಅದು ಅವರ ಮತ್ತು ಕಸ್ತೂರ ಬಾ ಅವರ ನಡುವಿನ ವಿಚಾರ. ಆದರೆ, ಮೃತ್ಯುದೇವತೆಯ ನಗ್ನನರ್ತನದ ಹಿನ್ನೆಲೆಯಲ್ಲಿ ಗಾಂಧಿಯ ಕಾಮವಿರೋಧಿ ಕಾಮುಕತೆ ದುಃಸ್ವಪ್ನಕ್ಕಿಂತಾ ಘೋರ.
ಅವಾಸ್ತವಿಕತೆಯ ಅಪದ್ಧವನ್ನು ಸಮಷ್ಠಿ ಪ್ರಜ್ಞೆಯ ರಟ್ಟರಿವೆಯ (ZqZo) ಮೇಲೆ ತಮ್ಮ ಆ ನಿಷ್ಕ್ರಿಯವಾದ ಅಂಗದಿಂದ ಚಿತ್ರಿಸಿಬಿಟ್ಟರು. ಸಂತನ ಪಟ್ಟ ಅವರ ಸಮತೋಲನವನ್ನೇ ಏರುಪೇರು ಮಾಡಿಬಿಟ್ಟಿತು. ಅವರ ಪ್ರಯೋಗಕ್ಕೆ ಸಮ್ಮತಿಸಿದ ಹೆಣ್ಣುಗಳೇನೋ ಅವರ ಕೋರೈಸುವ ಅತಿ ಸಂತತನದಿಂದ ಕುರುಡಾಗಿ ವಿವೇಚನೆ ಕಳೆದುಕೊಂಡಿದ್ದರು.
ಪರೀಕ್ಷಕರಾದರೂ ಸಂಯಮವನ್ನು ಮೀರಿದ ಸಂಯಮದ ಪರೀಕ್ಷೆಯಿಂದ ದೂರವಿರಬೇಕಿತ್ತು. ತಮ್ಮ ಜತೆಯಲ್ಲೇ ಸ್ನಾನ ಮಾಡುತ್ತಿದ್ದ ಬಂಟೆ ನಗ್ನರಾಗಿದ್ದರೋ, ಅರೆನಗ್ನರಾಗಿದ್ದರೋ ಗೊತ್ತಿರಲಿಲ್ಲ, ಯಾಕೆಂದರೆ ಕಣ್ಣುಮುಚ್ಚಿರುತ್ತಿದ್ದೆ, ಆದರೆ ಆಕೆ ಸೋಪ್ ಬಳಸುತ್ತಿದ್ದರೆಂದು ಶಬ್ದದಿಂದ ಗೊತ್ತಾಗುತ್ತಿತ್ತು ಎಂಬುದು ಐಲಾಟವಲ್ಲದೇ ಮತ್ತಿನ್ನೇನು? ಅವರ ಕಠೋರ ಬ್ರಹ್ಮಚರ್ಯದ ಸ್ವಪರೀಕ್ಷೆಗೆ ಕಸ್ತೂರ್ ಬಾ ಸಮ್ಮತಿಸುತಿದ್ದರೇ ಎಂಬುದನ್ನು ಗಾಂಧಿ ಕೇಳಿಕೊಂಡಿದ್ದರೆ ಅಂತಹ ಶತಮರ್ಕಟ ಪರೀಕ್ಷೆಗಳ ಅಗತ್ಯ ಬೀಳುತ್ತಿರಲಿಲ್ಲ.
ಸೋಂಕು ತಗುಲೀತೆಂಬ ಭಯದಲ್ಲಿ ನಿರಂಕುಶಾಧಿಕಾರಿ ಹಿಟ್ಲರ್ ಸೆಕ್ಸ್‌ನಿಂದ ದೂರವಿದ್ದ ಎಂದು ಇತಿಹಾಸಕಾರ ಇಯನ್ ಕೆರ್ಷಾ ದಾಖಲಿಸಿದ್ದಾನೆ. ಶಿಶ್ನವೈಕಲ್ಯವೂ ಇದ್ದುದು ನಮೂದಾಗಿದೆ. ಆತನಿಗೆ ಮತಿಭ್ರಮಣೆಯಾಗಿರಲಿಲ್ಲ, ಆದರೆ ರಾಜಕೀಯದಲ್ಲೇ ಪೂರ್ಣಾವಧಿ ಮುಳುಗಿದ್ದರಿಂದ ಹುಚ್ಚು ಕೆಲಸಗಳಿಗೆ ಕೈಹಾಕಿದ್ದ ಎನ್ನಲಾಗಿದೆ.
ಎರಡನೇ ಮಹಾಯುದ್ಧ ನಡೆಯುವಾಗ, ಎದುರಾಳಿ ಹಿಟ್ಲರ್ ಮುಂದೆ ಬ್ರಿಟನ್ ಶಸತ್ಯಾಗ ಮಾಡಿ ತನ್ನ ನೈತಿಕ ಶಕ್ತಿಯನ್ನು ಪ್ರದರ್ಶಿಸಬೇಕು ಎಂಬ ಉಚಿತ ಸಲಹೆಯನ್ನು ಗಾಂಧಿ ನೀಡಿ ಚರ್ಚಿಲ್‌ನ ಕೆಂಗಣ್ಣಿಗೆ ಗುರಿಯಾಗಿದ್ದರು. ಅಸುರೀ ಮುಸ್ಲಿಮರು ಕೊಲ್ಲಲು ಬಂದರೆ ಕೊಲ್ಲಲಿ ಬಿಡಿ ಎಂಬ ನಿಲುವಿನಂತದು. ಸೆಕ್ಸ್ ಮತ್ತು ಹಿಂಸೆ (ಹಾಗೂ ಸೆಕ್ಸ್ ನಲ್ಲಿನ ಹಿಂಸೆ) ನಮ್ಮ ರಜತಪರದೆಯನ್ನಲಂಕರಿಸುವ ಬಹು ಮುಂಚೆಯೇ ಇವರೆಡಕ್ಕೂ ಗಾಂಧಿ ಇಂಧನ ತುಂಬಿದ್ದರು. ಸ್ನೇಹಿತನ ಮಗ ಮೊನ್ನೆ ವಿಶ್ಲೇಷಣೆ ಮಾಡಿ ಬರೆದ ಲೇಖನದಲ್ಲಿ, ಸಾಧಕ-ಬಾಧಕಗಳೆರಡೂ ತುಂಬಿರುವ ಗಾಂಧಿ ತತ್ವಗಳಲ್ಲಿ ಸದ್ಯಕ್ಕೆ ಬಾಧಕಗಳ ಮೇಲೆ ಬೆಳಕು ಚೆಲ್ಲುವ ಸಮಯ ಎಂದು ಮಾರ್ಮಿಕವಾಗಿ ಹೇಳಿದ್ದಾನೆ.
ತನಗಿಂತ ರಾಷ್ಟ್ರ ಮುಖ್ಯ ಎಂಬ ಸರಳ ಸತ್ಯ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ರಾಷ್ಟ್ರಪಿತನಿಗೆ ಹೊಳೆಯದಿದ್ದುದು ದುರಂತ. ಒಬ್ಬ ಸಂತನ ತೆವಲುಗಳಿಗೆ ದೇಶದ ಹಿತವನ್ನು ಬಲಿಕೊಡುವಷ್ಟು ಕ್ಷುದ್ರವಲ್ಲ ಭವ್ಯ ಪರಂಪರೆಯ ಈ ದೇಶ. ಸಮಾಧಾನವೆಂದರೆ, ಭಾರತ ಗಾಂಧಿಯನ್ನೂ ಅರಗಿಸಿಕೊಂಡಿದೆ.