Thursday, 12th December 2024

ಗಾಂಧಿತತ್ತ್ವ ಭಾಷಣಕ್ಕಷ್ಟೇ ಸೀಮಿತವಾಗದಿರಲಿ

ಸಂಸ್ಮರಣೆ

ಮಾರುತೀಶ್ ಅಗ್ರಾರ

ಭಾರತ ನಿಂತಿರುವುದೇ ಹಳ್ಳಿಗಳ ಅಭಿವೃದ್ಧಿಯ ಮೇಲೆ ಎನ್ನುತ್ತಿದ್ದ ಗಾಂಧೀಜಿ, ಪ್ರತಿಯೊಂದು ಗ್ರಾಮವೂ ತನ್ನದೇ ಆದ ವ್ಯವಹಾರಗಳಿಗೆ ತೆರೆದುಕೊಳ್ಳುವ ಮೂಲಕ ಸ್ವಾವಲಂಬಿಯಾಗಬೇಕು ಎಂದು ಆಶಿಸಿದ್ದರು. ತನ್ಮೂಲಕ ‘ಆತ್ಮ ನಿರ್ಭರ ಭಾರತ’ದ ಕನಸನ್ನು ಅಂದೇ ಕಟ್ಟಿಕೊಟ್ಟಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹಾತ್ಮ ಗಾಂಧಿಯವರ ಹೋರಾಟ ಪ್ರಶಂಸ ನೀಯ. ಅಹಿಂಸೆ ಮತ್ತು ಸತ್ಯವನ್ನೇ ಸದಾಕಾಲ ಪ್ರತಿಪಾದಿಸಿದ ಗಾಂಧೀಜಿ ಕೊನೆಯವರೆಗೂ ತಮ್ಮ ತತ್ತ್ವ-ಸಿದ್ಧಾಂತಗಳೊಂದಿಗೆ ಕಟಿಬದ್ಧರಾಗಿ ನಿಂತರು. ಹೀಗಾಗಿ ಅವರ ವಿಚಾರಧಾರೆ ಗಳು ಇಡೀ ಜಗತ್ತನ್ನೇ ಪ್ರಭಾವಿಸಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ದುರ್ದೈವವೆಂದರೆ, ಗಾಂಧೀಜಿ ಪ್ರತಿಪಾದಿಸಿದ ವಿಚಾರ ಧಾರೆಗಳು, ತತ್ತ್ವ-ಸಿದ್ಧಾಂತಗಳು ಇಂದು ವೇದಿಕೆ ಕಾರ್ಯ ಕ್ರಮಗಳಿಗಷ್ಟೇ ಸೀಮಿತವಾಗಿವೆ.

ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ಮಾತ್ರ, ಅವರು ನಡೆದು ಬಂದ ದಾರಿ ಮತ್ತು ಹೋರಾಟದ ಗುಣಗಾನ ಮಾಡಿ ಸುಮ್ಮನಾಗಿಬಿಟ್ಟರೆ ನಮ್ಮವರಿಗೆ ಮತ್ತೆ ಗಾಂಧೀಜಿಯ ನೆನಪಾಗೋದು ಸ್ವಾತಂತ್ರ್ಯ ದಿನಾಚರಣೆಯಂದು, ಜನವರಿ ೩೦ರಂದು ಅಥವಾ ಮುಂದಿನ ಅಕ್ಟೋಬರ್‌ನಲ್ಲಿ! ಇದೇನಾ ನಾವು ಗಾಂಧೀಜಿಗೆ ಕೊಡುತ್ತಿರುವ ಗೌರವ? ಸರಕಾರಿ ಕಚೇರಿ ಗಳಲ್ಲಿ, ಸರಕಾರಿ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಫೋಟೋ ಇಟ್ಟು ನೆಪಮಾತ್ರಕ್ಕೆ ಪೂಜಿಸ ಲಾಗುತ್ತದೆಯಾದರೂ, ಅವರ ಆದರ್ಶಗಳು ಬಹುತೇಕ ಪಾಲನೆಯಾಗುತ್ತಿಲ್ಲ ಎಂಬುದು ವಿಷಾದನೀಯ.

ನಮ್ಮ ಸಮಾಜ ಮತ್ತು ರಾಜಕೀಯ ಧುರೀಣರಾದಿಯಾಗಿ ಎಲ್ಲರೂ ಭಾಷಣಕ್ಕಷ್ಟೇ ಗಾಂಧೀಜಿಯ ಮೌಲ್ಯಗಳನ್ನು ಸೀಮಿತ ಗೊಳಿಸಿ, ಮಿಕ್ಕದ್ದೆಲ್ಲವನ್ನೂ ಗಾಳಿಗೆ ತೂರಿಬಿಟ್ಟಿದ್ದಾರೆ. ಒಂದೊಮ್ಮೆ ಗಾಂಧೀಜಿ ಇಂದೇನಾದರೂ ಜೀವಂತ ಕಂಡುವಾಗಿದ್ದಿದ್ದರೆ ವರ್ತಮಾನದಲ್ಲಿ ನಡೆಯುತ್ತಿರುವ ಘಟನೆ ಗಳನ್ನು ಅದೆಷ್ಟು ಮರುಗುತ್ತಿದ್ದರೋ ಏನೋ! ಏಕೆಂದರೆ, ಅವರು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ರಾಮರಾಜ್ಯದ ಕನಸು ಕಂಡವರು. ಹೆಣ್ಣೊಬ್ಬಳು ಮಧ್ಯರಾತ್ರಿ ನಿರ್ಭಿಡೆಯಿಂದ ಒಬ್ಬಳೇ ಓಡಾಡುವ ದಿನಗಳು ಬರಬೇಕೆನ್ನುವುದೊಂದೇ ಗಾಂಧೀಜಿಯ ರಾಮರಾಜ್ಯದ ಕನಸಾಗಿರಲಿಲ್ಲ; ಬದಲಾಗಿ, ‘ಎಲ್ಲ ಧರ್ಮ ಗಳನ್ನೂ ಸಮಾನ ವಾಗಿ ಕಾಣಬೇಕು, ಜಾತಿ-ಮತ-ಪಂಥವೆನ್ನದೆ ಎಲ್ಲರನ್ನೂ ಪರಸ್ಪರ ಗೌರವಿಸಬೇಕು, ನಾಯಕರು ಮತ್ತು ಜನಸಾಮಾನ್ಯರ ನಡುವೆ ಯಾವುದೇ ವ್ಯತ್ಯಾಸ ಇರಬಾರದು, ಪ್ರತಿಯೊಬ್ಬ ನಾಗರಿಕನಿಗೂ ತ್ವರಿತವಾಗಿ ನ್ಯಾಯ ದೊರೆಯಬೇಕು, ಭ್ರಷ್ಟಾಚಾರ-ರಹಿತ ಆಡಳಿತ ವ್ಯವಸ್ಥೆ ನಮ್ಮದಾಗಬೇಕು, ಮೇಲು-ಕೀಳು ಎಂಬ ಭಾವನೆ ಸಮಾಜದಿಂದ ತೊಲಗಬೇಕು. ಇವೆಲ್ಲ ಸಾಕಾರಗೊಂಡಾಗ ಭಾರತವು ರಾಮರಾಜ್ಯವಾಗುತ್ತದೆ’ ಎಂಬುದು ಮಹಾತ್ಮ ಗಾಂಧಿಯವರ ಕನಸಾಗಿತ್ತು.

ಆದರೆ ಇಂದು ಜಾತಿ-ಮತದ ನೆಪದಲ್ಲಿ ದಿನನಿತ್ಯ ಘರ್ಷಣೆಗಳು ನಡೆಯುತ್ತಿವೆ. ಬೆಳಗ್ಗೆ ಮನೆಯಿಂದ ಹೊರ ಹೋದ ಮಗ
ಅಥವಾ ಮಗಳು ಸಂಜೆ ವಾಪಸ್ ಬರುತ್ತಾರೆಂಬ ಖಾತರಿ ಹೆತ್ತವರಿಗಿಲ್ಲ. ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಎಂಬುದು ತಿಮಿಂಗಿಲದ ಸ್ವರೂಪ ಪಡೆದಿದೆ. ಜನಪರ ಯೋಜನೆಗಳು ಜನಸಾಮಾನ್ಯರನ್ನು ತಲುಪುವಷ್ಟರಲ್ಲಿ ಹಳ್ಳ ಹಿಡಿದಿರುತ್ತವೆ. ಉಳ್ಳವರು ಮಾರುಕಟ್ಟೆಯಲ್ಲಿ ಸಿಗುವ ಗುಣಮಟ್ಟದ ಆಹಾರಧಾನ್ಯಗಳನ್ನು ಪಡೆದರೆ, ಬಡವರಿಗೆ ಪಡಿತರ ವ್ಯವಸ್ಥೆಯಲ್ಲಿ ವಿತರಣೆಯಾಗುವ ಅಕ್ಕಿ, ಗೋಧಿ, ರಾಗಿಯ ಸ್ಥಿತಿಯನ್ನು ಹೇಳುವ ಅಗತ್ಯವಿಲ್ಲ.

ಇನ್ನು ಮತದಾರರಿಗೆ ವಿವಿಧ ಆಮಿಷವೊಡ್ಡಿ, ದುಡ್ಡು-ಕಾಸು ಹಂಚಿ, ನಾನಾ ಬಗೆಯ ವಸ್ತುಗಳನ್ನು ನೀಡಿ ಮನವೊಲಿಸಿ ಕೊಳ್ಳುವ ರಾಜಕಾರಣಿಗಳ ನಡೆ ಚುನಾವಣಾ ಅಕ್ರಮ ಎಸಗಿದಂತೆ ಅಲ್ಲವೇ? ಭಾರತ ನಿಂತಿರುವುದೇ ಹಳ್ಳಿಗಳ ಅಭಿವೃದ್ಧಿಯ ಮೇಲೆ ಎನ್ನುತ್ತಿದ್ದ ಗಾಂಧೀಜಿ, ಪ್ರತಿಯೊಂದು ಗ್ರಾಮವೂ ತನ್ನದೇ ಆದ ವ್ಯವಹಾರಗಳಿಗೆ ತೆರೆದುಕೊಳ್ಳುವ ಮೂಲಕ ಸ್ವಾವಲಂಬಿ
ಯಾಗಬೇಕು ಎಂದು ಆಶಿಸಿದ್ದರು. ತನ್ಮೂಲಕ ‘ಆತ್ಮನಿರ್ಭರ ಭಾರತ’ದ ಕನಸನ್ನು ಅಂದೇ ಕಟ್ಟಿಕೊಟ್ಟಿದ್ದರು. ಹಳ್ಳಿಗಳ
ಅಭಿವೃದ್ಧಿಗಾಗಿ ವಿಕೇಂದ್ರಿತ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದರು.

ಇದು ಭಾರತದ ಹಳ್ಳಿಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಉಂಟುಮಾಡಿ, ಗ್ರಾಮೀಣರ ಜೀವನಶೈಲಿಯನ್ನು ಉನ್ನತ ಮಟ್ಟಕ್ಕೆ ಏರಿಸುವ ಆಶಯವಾಗಿತ್ತು. ಇದಕ್ಕಾಗಿ ದೇಶಾದ್ಯಂತ ತಿರುಗಾಡಿದ ಗಾಂಧೀಜಿ ಹಳ್ಳಿಗರ ಬದುಕು-ಬವಣೆಯನ್ನು ಕಂಡು ಮಮ್ಮಲ ಮರುಗಿದರು, ಬಡತನಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡರು. ನಿರುದ್ಯೋಗ ಸಮಸ್ಯೆಯ ನಿವಾರಣೆ ಯಾಗದಿದ್ದಲ್ಲಿ, ಜನಸಾಮಾನ್ಯರನ್ನು ಬಡತನದ ಬೇಗೆಯಿಂದ ಪಾರುಮಾಡಲು ಭಗವಂತನಿಂದಲೂ ಸಾಧ್ಯವಿಲ್ಲ ಎಂಬುದು ಗಾಂಧೀಜಿಯ ಅಭಿಪ್ರಾಯವಾಗಿತ್ತು. ಅವರ ಆಶಯದ ಸಾಕಾರಕ್ಕೆ ನಮ್ಮ ಆಳುಗರು ಸಂಕಲ್ಪಿಸದ ಕಾರಣ ನಮ್ಮ ದೇಶದಲ್ಲಿ ಈಗಲೂ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ!

ಆಡಂಬರದ ಜೀವನಕ್ಕೆ ಮಾರುಹೋಗದೆ ಸರಳತೆಯನ್ನು ಕಾಯ್ದುಕೊಳ್ಳುವ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾದ
ಗಾಂಧೀಜಿ, ಸತ್ಯವನ್ನೇ ದೇವರೆಂದು ಉಪಾಸನೆ ಮಾಡಿದರು. ಗಾಂಧೀಜಿಗೆ ಸತ್ಯವೇ ದಾರಿದೀಪವಾಗಿತ್ತು, ಗುರಾಣಿ ಮತ್ತು ವಜ್ರ ಕವಚವಾಗಿತ್ತು. ಆದರೆ ಗಾಂಧಿ-ತತ್ತ್ವಗಳ ಪ್ರತಿಪಾದಕರೆಂದು ಹೇಳಿಕೊಳ್ಳುವ ಅನೇಕರು ಇಂದು ಆಡಂಬರದ ಜೀವನದಲ್ಲೇ ತೇಲುತ್ತಿರುವುದು, ಭ್ರಷ್ಟಾಚಾರದಲ್ಲೇ ಮುಳುಗಿರುವುದು ವಿಪರ್ಯಾಸ.

ಈ ಪರಿಪಾಠವನ್ನು ಇನ್ನಾದರೂ ಕೈಬಿಡುವಂತಾಗುವುದಕ್ಕೆ ಈ ಬಾರಿಯ ಗಾಂಧಿ ಜಯಂತಿ ಆಚರಣೆ ಪರ್ವಕಾಲವಾಗಲಿ. ಗಾಂಽಜಿ ಬಿತ್ತಿದ ಮೌಲ್ಯಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಹೀಗಾಗಿ ಗಾಂಧೀಜಿಯ ವಿಚಾರಧಾರೆಗಳನ್ನು ಕಾರ್ಯಕ್ರಮಗಳ ಭಾಷಣಗಳಿಗಷ್ಟೇ ಸೀಮಿತಗೊಳಿಸದೆ ಪ್ರತಿಯೊಬ್ಬರೂ ತಂತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದು ವೈಯಕ್ತಿಕ ನೆಲೆಗಟ್ಟಿನಲ್ಲೂ ಕೌಟುಂಬಿಕವಾಗಿಯೂ ಉತ್ತಮಿಕೆ ಯನ್ನು ಹೊಮ್ಮಿಸುತ್ತದೆ. ಜತೆಗೆ ಸಭ್ಯಸಮಾಜದ ನಿರ್ಮಾಣವೂ ಕೈಗೂಡು ತ್ತದೆ. ಹೀಗಾದಾಗ ಗಾಂಧಿ ಜಯಂತಿಯ ಆಚರಣೆಗೊಂಡು ಅರ್ಥ ಬರುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)