Friday, 22nd November 2024

Ganesh Chaturthi: ಸರ್ವಲೋಕೈಕ ನಾಯಕ ವಿನಾಯಕ; ಗಣೇಶನಿಗೆ ಗಣೇಶನೇ ಸಾಟಿ!

ganesh chaturthi

ಮುಕ್ಕೋಟಿ ದೇವರಲ್ಲಿ ಮೊದಲ ಪೂಜೆ ಗಣೇಶನಿಗೆ!

  • ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
    (ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)

ಕಷ್ಟಗಳ ನಿವಾರಕ, ಸಿದ್ಧಿ-ಬುದ್ಧಿದಾಯಕ ಶ್ರೀಗಣೇಶ. ಶಿವ ಪರ್ವತಿಯ ಪುತ್ರನಾದ ಗಣೇಶನು ಗಣಗಳ ಒಡೆಯ. ಹಿಂದೂ ಧರ್ಮದಲ್ಲಿ ಗಣೇಶನಿಗೆ ಮೊದಲು ಪೂಜೆ ಸಲ್ಲಿಸದೆ ಯಾವ ಕೆಲಸವನ್ನೂ ಪ್ರಾರಂಭಿಸುವುದಿಲ್ಲ. ಗಣೇಶನಿಗೆ ಮೊದಲ ಪೂಜೆಯನ್ನು ಸಮರ್ಪಿಸಿದರೆ ನಮ್ಮ ಕೆಲಸ ಕಾರ್ಯಗಳು ಹಾಗೂ ಅಪೇಕ್ಷಿತ ಯೋಜನೆಗಳು ಸುಗಮವಾಗಿ ನೆರವೇರುತ್ತವೆ. ಕಷ್ಟಗಳು ಎದುರಾದಾಗ ಗಣೇಶನನ್ನು ನೆನೆಸಿಕೊಂಡರೆ ಸಾಕು ಎಲ್ಲವೂ ಬಹುಬೇಗ ಮಾಯವಾಗುತ್ತವೆ ವಿಘ್ನಹರ್ತ ವಿಘ್ನ ಕರ್ತ,ಸುಖಕರ್ತ ದುಃಖಹರ್ತ ಎನ್ನುವ ನಂಬಿಕೆಯಿದೆ.

ಸರಳ ಹಾಗೂ ಉದಾರ ಗುಣವನ್ನು ಹೊಂದಿರುವ ದೇವನೆಂದರೆ ಗಣೇಶ. ಗಣೇಶನ ಪೂಜೆಯ ಪದ್ಧತಿಯು ಅತ್ಯಂತ ಸರಳತೆಯಿಂದ ಕೂಡಿರುತ್ತದೆ. ಪೂಜೆ ಸಲ್ಲಿಸುವಾಗ ಕೆಲವು ಮಂತ್ರಗಳನ್ನು ವಿಶೇಷವಾಗಿ ಹೇಳಿದರೆ, ಗಣೇಶನು ಭಕ್ತರ ಭಕ್ತಿಯನ್ನು ಮೆಚ್ಚಿ ಆಶೀರ್ವದಿಸುತ್ತಾನೆ.ಇಂತಹ ಮಹಾಗಣಪತಿಯ ವಿಶೇಷತೆಯ ಬಗ್ಗೆ ಇನ್ನಷ್ಟು ತಿಳಿದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದರೆ ಇನ್ನೂ ಹೆಚ್ಚಿನ ಫಲ ಸಿಗುತ್ತದೆ.

  • ಗಣೇಶನ ರೂಪ

ಹುಚ್ಚುಗುದುರೆಯಂತೆ,ಮರ್ಕಟದಂತೆ ಮಾನವನ ಮನಸ್ಸು ಓಡಾಡುತ್ತಿರುತ್ತದೆ, ಓಲಾಡುತ್ತಿರುತ್ತದೆ ಅಷ್ಟು ಚಂಚಲ ಬುದ್ಧಿ. ಅದನ್ನು ಹಗ್ಗ ಕಟ್ಟಿ, ಆಧ್ಯಾತ್ಮದತ್ತ ಕೇಂದ್ರೀಕರಿಸುವುದರಿಂದ, ನಿಯಂತ್ರಿಸುವುದರಿಂದ ಮಾನಸಿಕ ನೆಮ್ಮದಿ ಸದಾ ಸಾಧ್ಯ ಎಂದು ಬಿಂಬಿಸುತ್ತದೆ ಇವನ ಆಯುಧ. ಗಣೇಶನ ಮಾನವರೂಪವು ‘ತ್ವಂ’ನ ಪ್ರಾತಿನಿಧಿಕ ರೂಪ ಮತ್ತು ಆನೆಮೊಗವು ‘ತತ್’ನ ರೂಪ. ಇವೆರಡನ್ನೂ ಸೇರಿಸಿದರೆ ತತ್ ತ್ವಂ ಎಂದೂ, (ತತ್ ಎಂದರೆ ಬ್ರಹ್ಮ, ಆತ್ಮ ಎಂದೂ ಅರ್ಥೈಸಬಹುದು) ನೀನೇ ಸರ್ವಲೋಕೈಕ ನಾಯಕ ಎಂಬರ್ಥದ ‘ತತ್ತ್ವಮಸಿ’ ಎಂಬುದು ಮುದ್ಗಲ ಪುರಾಣದಲ್ಲಿ ಉಲ್ಲೇಖಿತವಾದ ವಿಷಯ.ಅಲ್ಲದೇ ಗಣಪತಿ ಅಥರ್ವಶೀರ್ಷದಲ್ಲೂ ಬರುತ್ತದೆ.

ಓಂ ನಮಸ್ತೇ ಗಣಪತಿಯೇ।
ತ್ವಮೇವ ಪ್ರತ್ಯಕ್ಷಂ ತತ್ವಮಸಿ॥

ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಆದಿದೇವತೆಯಾಗಿರುವ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಆಧೀಶ್ವರ, ಮೋದಕ-ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶ.

ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಶ್ರೀಗಣೇಶನ ಆವಾಹನೆ, ಸಂಸ್ಥಾಪನೆ ಮತ್ತು ಪೂಜೆ ಮಾಡಲಾಗುತ್ತದೆ. ಮಹಾಭಾರತ ಕಾಲಕ್ಕೂ ಬಹು ಹಿಂದೆಯೇ ಗಣೇಶ ಪೂಜೆ ಅಥವಾ ಗಣೇಶ ಚತುರ್ಥಿ ವ್ರತ ಇತ್ತೆಂಬುದಕ್ಕೆ ಪೌರಾಣಿಕ ಪುರಾವೆಗಳಿವೆ. ಸ್ವಯಂ ಭಗವಾನ್ ಶ್ರೀಕೃಷ್ಣನೇ ಗಣೇಶನ ವ್ರತ ಆಚರಿಸಿದ್ದ ಎಂದೂ ಶಾಸ್ತ್ರ-ಪುರಾಣಗಳು ಸಾರಿ ಹೇಳುತ್ತವೆ. ಅಷ್ಟೇ ಅಲ್ಲದೇ ಗಣೇಶನು ಮಂಗಳಕಾರಕವೂ ವಿಘ್ನ ನಿವಾರಕನೂ ಆಗಿದ್ದಾನೆ ಮತ್ತು ವಿದ್ಯಾ-ಬುದ್ಧಿಯ ಅಭೀಷ್ಟ ಪ್ರದಾಯಕನೂ ಆಗಿದ್ದಾನೆ.ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿಯಂದು ಭಗವಾನ್ ಗಣೇಶನ ಅವತಾರವಾಯಿತು.

ಇವನು ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಆಧಿದೇವತೆಯೂ ಹೌದು. ಮಾತ್ರವಲ್ಲ, ಎಲ್ಲ ಭಜಕ ಆಸ್ತಿಕ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಅತ್ಯಂತ ಪ್ರಿಯನಾದ ದೇವಾಧಿದೇವನೂ ಹೌದು. ಗಣೇಶನ ಕೈಯಲ್ಲಿರುವ ಆಯುಧಗಳನ್ನು ಪರಿಗಣಿಸಿದರೆ, ಅಂಕುಶ ಎಂಬುದು ಅಹಂ ನಿಯಂತ್ರಣ ಪ್ರತೀಕ. ಅಷ್ಟು ಬೃಹತ್ತಾದ ಆನೆಯನ್ನು ಈ ಪುಟ್ಟ ಅಂಕುಶವೊಂದರಿಂದ ನಿಯಂತ್ರಿಸಬಹುದಲ್ಲವೇ? ಅದೇ ರೀತಿ ಮನುಷ್ಯನ ಅಹಂ ಎಂಬುದು ಯಾವ ಪ್ರಮಾಣಕ್ಕೂ ಬೆಳೆಯಬಹುದು. ಅದನ್ನು ನಿಯಂತ್ರಿಸಲು ಈ ಅಂಕುಶವೆಂಬ, ಛಲ, ಮನೋಬಲ ಅಥವಾ ಇಚ್ಛಾಶಕ್ತಿ ಸಾಕು.

ಇನ್ನು ಪಾಶ ಎಂಬುದು ಹುಚ್ಚೆದ್ದ ಮನಸ್ಸಿಗೆ ಕಡಿವಾಣ ಹಾಕುವ ಸಂಕೇತ.

  • ಗಣಪನ ಸ್ವರೂಪ

ಯಾಜ್ಞವಲ್ಕ್ಯರ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು.

ಬ್ರಹ್ಮವೈವರ್ತ ಪುರಾಣದಲ್ಲಿ, ಇಷ್ಟು ಜನಪ್ರಿಯವಲ್ಲದ ಇನ್ನೊಂದು ಕತೆಯಿದೆ. ಶಿವನ ಸೂಚನೆಯಂತೆ ಪಾರ್ವತಿ ಒಂದು ವರ್ಷ ಕಾಲ ವಿಷ್ಣುವನ್ನು ಕುರಿತು ತಪಸ್ಸು ಮಾಡಿದಳು. ಪ್ರಸನ್ನನಾದ ವಿಷ್ಣು ಪ್ರತ್ಯಕ್ಷನಾಗಿ, ಮುಂದೆ ಪ್ರತಿ ಕಲ್ಪದಲ್ಲೂ ತಾನು ಆಕೆಗೆ ಮಗುವಾಗಿ ಜನಿಸುವುದಾಗಿ ವರ ನೀಡಿದ. ಹಾಗೆ ಜನಿಸಿದ ಮಗುವೇ ಗಣಪತಿ. ಮಗುವನ್ನು ನೋಡಲು ಎಲ್ಲ ದೇವತೆಗಳಿಗೆ ಆಹ್ವಾನ ಹೋಯಿತು. ಎಲ್ಲರೂ ಬಂದು ನೋಡಿ ಖುಷಿಪಟ್ಟರು. ಆದರೆ ಶನಿ ಬರಲು ಹಿಂಜರಿದ. ಯಾಕೆಂದು ಕೇಳಿದಾಗ, ತನ್ನ ದೃಷ್ಟಿ ಅಷ್ಟೊಂದು ಒಳ್ಳೆಯದಲ್ಲವೆಂದ. ಪಾರ್ವತಿ ಒತ್ತಾಯಿಸಿ ಮಗುವನ್ನು ನೋಡುವಂತೆ ಮಾಡಿದಳು. ಗತ್ಯಂತರವಿಲ್ಲದೆ ಶನಿ ಗಣಪನತ್ತ ನೋಡಿದಾಗ, ಆತ ತಲೆ ಭಸ್ಮವಾಗಿ ಹೋಯಿತು. ಗೌರಿ ಗೋಳಾಡಿದಳು. ಕೂಡಲೇ ಶಿವ- ವಿಷ್ಣು ಸೇರಿ ಗಂಧಮಾದನ ಪರ್ವತದಲ್ಲಿ ಉತ್ತರ ದಿಕ್ಕಿಗೆ ತಲೆಯಿಟ್ಟು ನಿದ್ರಿಸಿದ್ದ ಆನೆಯ ತಲೆಯನ್ನು ಕತ್ತರಿಸಿ ತಂದು ಜೋಡಿಸಿದರು.ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.

  • ವಿನಾಯಕನ ಲೋಕ ಯಾವುದು?

ಸತ್ಯಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ.!ಹೀಗೆ ಒಬ್ಬೊಬ್ಬ ದೇವರಿಗೂ ಒಂದೊಂದು ಲೋಕ. ಹಾಗಿದ್ದಲ್ಲಿ ವಿಶ್ವಮಾನ್ಯನಾದ, ವಿಶ್ವ ವಂದ್ಯನಾದ ವಿನಾಯಕ ಇರುವ ಲೋಕ ಯಾವುದು? ಶ್ರೀ ಗಣೇಶನು ತನ್ನ ಮಾತಾ- ಪಿತೃಗಳ ಜೊತೆ ಕೈಲಾಸದಲ್ಲೇ ವಿರಾಜಮಾನನಾಗಿರುತ್ತಾನೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ‘ಶ್ರೀ ಗಣೇಶ ಪುರಾಣ’ದ ಉಪಾಸನ ಖಂಡದ 51 ನೇ ಅಧ್ಯಾಯದಲ್ಲಿ ಹೇಳಿರುವಂತೆ ಗಣೇಶನಿಗೆ ಪ್ರತ್ಯೇಕ ಲೋಕವಿದೆ. ‘ಸ್ವಾನಂದ ಲೋಕ’ ಎಂದು ಅದರ ಹೆಸರು. ಇದನ್ನು ನಿಜಲೋಕ, ದಿವ್ಯಲೋಕವೆಂದೂ ಸಹ ಕರೆಯುತ್ತಾರೆ.

ಪುರಾಣಗಳಲ್ಲಿ ವರ್ಣಿಸಲ್ಪಟ್ಟಿರುವ ಇತರ ಲೋಕಗಳಿಗಿಂತ ಗಣೇಶ ಲೋಕಕ್ಕೆ ಪ್ರತ್ಯೇಕ ಸ್ಥಾನವಿದೆ. ಈ ಲೋಕ ಐದು ಸಾವಿರ ಯೋಜನಗಳಷ್ಟು ವಿಸ್ತಾರವಾದುದು. ರತ್ನಖಚಿತವಾದ ಸುವರ್ಣಭೂಮಿಯಲ್ಲಿ ಹತ್ತು ದಿಕ್ಕುಗಳನ್ನು ಬೆಳಗುತ್ತ ಸಮಷ್ಟಿ ವೃಷ್ಟಿರೂಪ ಜಗದಾತ್ಮಕವಾಗಿ ವಿನಾಯಕನು ಇಲ್ಲಿ ನೆಲೆಸಿದ್ದಾನೆ.

ಲೋಕದ ತುಂಬೆಲ್ಲ ಇಕ್ಷು ಸಾಗರ (ಕಬ್ಬಿನ ರಸದ ಸಮುದ್ರ). ಅದರ ಮಧ್ಯೆ ಸಾವಿರ ದಳಗಳ ಶ್ವೇತ ಕಮಲದ ಕರ್ಣಿಕೆಯಲ್ಲಿ ರತ್ನಖಚಿತವಾದ ಸುವರ್ಣ ಮಂಚ ಶೋಭಿಸುತ್ತಿದೆ. ಆ ಮಂಚದ ಮೇಲೆ ಬಾಲ ಸ್ವರೂಪಿಯಾಗಿ, ರಕ್ತವರ್ಣದ ಪೀತಾಂಬರವನ್ನು ಧರಿಸಿದ, ಅರ್ಧಚಂದ್ರಕಿರೀಟ, ಮುತ್ತು ಮಣಿ ಮಾಣಿಕ್ಯಾದಿ ಹೊನ್ನಾಭರಣ ಧರಿಸಿದ, ತ್ರಿನೇತ್ರಧಾರಿಯಾದ, ಶಯನಭಂಗಿಯಲ್ಲಿ ಇರುವ (ಯೋಗ ನಿದ್ರಾರೂಢನಾದ) ವಿನಾಯಕ ವಿರಾಜಿಸುತ್ತಿದ್ದಾನೆ.

ಸರ್ವಸಿದ್ಧಿಗಳಿಗೂ ಕಾರಣರಾದ ಸಿದ್ಧಿ-ಬುದ್ಧಿ ದೇವಿಯರು ಗಣಪನ ಪಾದ ಪೂಜಿಸುತ್ತ, ಅಣಿಮಾ-ಗರಿಮಾದೇವಿಯರು ಶ್ವೇತ ಚಾಮರ ಸೇವೆಗೈಯುತ, ಜ್ವಾಲಿನಿ-ತೇಜಿನಿ ದೇವಿಯರಿಬ್ಬರೂ ದೇವದೇವನ ಎರಡೂ ಪಾರ್ಶ್ವಗಳಲ್ಲಿ ಪುಷ್ಪಾರ್ಚನೆಗೈಯುತ್ತ ಛತ್ರಿಯನ್ನು ಹಿಡಿದು ಶೋಭಿಸುತ್ತಿರುತ್ತಾರೆ. ಮಹಿಮಾ-ಪ್ರತಿಮೆಯರಿಗೆ ದೇವನ ದೃಷ್ಟಿ ಗೋಚರವಾಗಿ ಸಮೀಪದಲ್ಲೇ ರತ್ನಖಚಿತ ಸುವರ್ಣ ಜಲಪಾತ್ರೆ ಹಿಡಿದು ನಿಂತಿರುತ್ತಾರೆ.

Ganesh Chaturthi 2024

ಸಾಮವೇದ ಪುರುಷನು ಗಣೇಶನ ಮಹಿಮೆಯನ್ನು ಗುಣಗಾನ ಮಾಡುತ್ತಿರುತ್ತಾನೆ. ಎಲ್ಲ ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೂರ್ತಿವತ್ತಾಗಿ ಬಂದು ಶ್ರೀ ಗಣೇಶನ ಮಹಿಮೆಯನ್ನು ಕೊಂಡಾಡುತ್ತಿರುತ್ತವೆ. ಈ ಎಲ್ಲ ರಸಮಯ ಸನ್ನೀವೇಶಗಳನ್ನು ಒಳಗೊಂಡ ‘ಸ್ವಾನಂದ ಲೋಕ’ವನ್ನು ನೆನೆಯುವುದೇ ನೀಡುವುದು ಒಂದು ಅಲೌಕಿಕ ಆನಂದ.

  • ಗಣಪತಿಯ ನಾಮದ ಸಂಕೇತಾರ್ಥಗಳು ಪ್ರಮುಖ ಅಧಿಪತಿ, ಎಲ್ಲಾ ಪೂಜೆಗಳಲ್ಲೂ ಪ್ರಥಮ ವಂದ್ಯನೆಂದೇ ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿಯನ್ನು ನಾನಾ ರೀತಿಯಲ್ಲಿ ಪೂಜಿಸುವುದುಂಟು ಗಣಪನ ಪ್ರತಿಯೊಂದು ಆಕಾರಕ್ಕೂ ,ನಾಮಕ್ಕೂ ಅದರದೇ ಆದ ವಿಶೇಷತೆ ಇದೆ.
  1. ಅಖುರಾತ: ಇಲಿಯನ್ನು ತನ್ನ ಸಾರಥಿಯಾಗಿ ಹೊಂದಿರುವವನು.

ಬೃಹತ್ ದೇಹವನ್ನು ಹೊಂದಿರುವ ಗಣೇಶನು ತನ್ನ ಸಾರಥಿಯಾಗಿ ಸಣ್ಣ ಇಲಿಯನ್ನು ಹೊಂದಿದ್ದಾನೆ. ಜೀವನ, ತತ್ವಗಳ ಅಧ್ಯಯನವನ್ನು ಪರಿಗಣಿಸಿದಾಗ ದೊಡ್ಡತನವು ಸ್ವಲ್ಪ ಮುಖ್ಯವಾಗಿದೆ. ಆತ್ಮವು ಶ್ರೇಷ್ಠವಾಗಿರಬಹುದು ಅಥವಾ ಚಿಕ್ಕದಾಗಿರಬಹುದು. ಆದರೆ ಇದು ಜೀವನವನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತದೆ ಮತ್ತು ಗಣೇಶನು ಈ ವಿಶ್ವ ಅಂಶಗಳನ್ನು ಸೂಚಿಸುತ್ತಾನೆ ಎಂದು.

  1. ಅಲಂಪಟ: ಯಾರ ಬಿಡುಗಡೆಯಿಂದ ಈ ಭ್ರಮೆಯ ಪ್ರಪಂಚವು ಪ್ರಕಟವಾಗುತ್ತದೆಯೋ, ಯಾರ ಸೃಷ್ಟಿಯು ಈ ಬ್ರಹ್ಮಾಂಡವೋ, ಯಾರು ಎಲ್ಲಾ ದೇವರುಗಳ ಮತ್ತು ಸೃಷ್ಟಿಗೆ ಅಧಿಪತಿಯೋ , ಅವನು ಶಾಶ್ವತ, ಭಗವಾನ್ ಗಣೇಶ.
  2. ಅಮಿತ: ಹೋಲಿಕೆ ಇಲ್ಲದವನು.

ಗಣೇಶನು ಮಹಾನ್ ದೇವರ ಸಂಕೇತವಾದ ‘ಓಂ’ ನ ಸಾಕಾರವಾಗಿದೆ. ಅವನು ಶಾಶ್ವತ ಆತ್ಮ, ಎಲ್ಲಾ ಆರಂಭಗಳ ಆರಂಭ, ಹೀಗಾಗಿ ಹೋಲಿಕೆಯನ್ನು ಮೀರಿದವ.

  1. ಅನಂತಚಿದ್ರೂಪಮಯಂ: ಅನಂತ ಮತ್ತು ಪ್ರಜ್ಞೆ ವ್ಯಕ್ತಿತ್ವ.

ಪ್ರಪಂಚದ ಮೂಲ ಕಾರಣ ಯಾರು? ಎಲ್ಲರ ಹೃದಯದಲ್ಲಿ ಅನನ್ಯವಾಗಿ ಪ್ರಕಟವಾಗುತ್ತಾರೋ ಅವರು ಏಕಾಗ್ರತೆಯ ಧ್ಯಾನದಿಂದ ಮಾತ್ರ ಸಾಕಾರಗೊಳ್ಳಬಹುದು. ಅನಂತನಾದ ಭಗವಾನ್ ಗಣೇಶ ಇಂತಹ ಭೇದಗಳು ಮತ್ತು ಆರಂಭವನ್ನು ಮೀರಿದವನು.

  1. ಅವನೀಶ: ಇಡೀ ಭೂಮಿಯ ಒಡೆಯ.

ಸುತ್ತುತ್ತಿರುವ,ಆನೆ ಮುಖದ ಆಕೃತಿಯಂತೆ,ಗಣೇಶ ದೇವರು ಇಡೀ ಭೂಮಿಯ ದೇವರು ಮತ್ತು ಗುರು. ಅವನು ಗೋಚರ ಪ್ರಪಂಚದ ರಕ್ಷಕ ಮತ್ತು ಅಸಹಾಯಕರ ನಾಯಕ, ಎಲ್ಲಾ ದುಷ್ಟ ಮತ್ತು ಅಡೆತಡೆಗಳನ್ನು ನಾಶಮಾಡುತ್ತಾನೆ ಎಂದು.

  1. ಅವಿಘ್ನ: ಅಡೆತಡೆಗಳಿಲ್ಲದವ.

ಶಕ್ತಿಯುತ, ಬೃಹತ್ ಗಣೇಶ, ತನ್ನ ವಾಹನದ ಮೇಲೆ ಏರಿ, ತನ್ನ ಭಕ್ತರು ಉತ್ಸಾಹದಿಂದ ಮತ್ತು ಭಕ್ತಿಯಿಂದ ತನ್ನ ಹೆಸರನ್ನು ಜಪಿಸಿದರೆ ಬಯಸಿದ ಎಲ್ಲ ವರವನ್ನೂ ನೀಡುತ್ತಾನೆ; ಅವರ ಹಾದಿಯಿಂದ ಎಲ್ಲಾ ಅಡೆತಡೆಗಳನ್ನು ದೂರವಿಡುವವನು.

  1. ಬಾಲಗಣಪತಿ: ಮಗುವಿನಂತೆ

ಗಣೇಶನನ್ನು ಎಲ್ಲಾ ದೇವರುಗಳು, ನಾಲ್ಕು ಮುಖದ ಬ್ರಹ್ಮ ಮತ್ತು ಇಂದ್ರ ದೇವರು ಕೂಡ ಆರಾಧಿಸುತ್ತಾರೆ. ಆನೆಯ ಮುಖದ ಮಗುವಾಗಿ, ಅವನು ಉದಯಿಸುವ ಸೂರ್ಯನ ಕಿರಣಗಳ ಬಣ್ಣವಾಗಿದ್ದಾನೆಂದು.

  1. ಬಾಲಚಂದ್ರ: ಚಂದ್ರನನ್ನು ಶೃಂಗರಿಸಿಕೊಂಡವ.

ಗಣಪತಿಯ ಮುಂಚೂಣಿಯನ್ನು ಅಲಂಕರಿಸುವ ಚಂದ್ರನ ಶೃಂಗ. ಇದು ಮಕರಂದದ ಮಡಕೆಯನ್ನು ಸೂಚಿಸುತ್ತದೆ, ಧರಿಸಿದವರಿಗೆ ದೈವಿಕ ತಂಪನ್ನು ನೀಡುತ್ತದೆ. ಇದು ಬುದ್ಧಿವಂತಿಕೆ ಮತ್ತು ಮಾನಸಿಕ, ಜ್ಞಾನೋದಯವನ್ನು ಸೂಚಿಸುತ್ತದೆ, ಚಂದ್ರನು ಮನಸ್ಸು ಮತ್ತು ಶಾಂತಿಯ ಸಂಕೇತವಾಗಿದೆ.

  1. ಭೀಮ: ದೈತ್ಯಾಕಾರದವನು.

ಆಭರಣದ ಸಿಂಹಾಸನದ ಮೇಲೆ ಬೃಹತ್ ಗಣೇಶನು ತನ್ನ ಕೈಯಲ್ಲಿ ಬಲೆ, ಹಾವುಗಳು ಮತ್ತು ಕಮಲದ ಹೂವಿನೊಂದಿಗೆ ಮಲಗುತ್ತಾನೆ. ಅವನು ನಾಲ್ಕು ಕೈಗಳನ್ನು ಹೊಂದಿದ್ದಾನೆ, ಒಂದೇ ದಂತವನ್ನು ಹೊಂದಿದ್ದಾನೆ, ಅವನು ದೈತ್ಯಾಕಾರದವನು.

  1. ಭೂಪತಿ: ಅಧಿಪತಿಗಳ ಅಧಿಪತಿ,

ಗಣಪತಿ ಎಂದು ಕರೆಯಲ್ಪಡುವ ಭೂಪತಿಯು ಅಧಿಪತಿಗಳ ಅಧಿಪತಿ, ಗಣಗಳು ಅಥವಾ ಆಕಾಶ ಸಮೂಹಗಳ ಒಡೆಯ. ಅವನು ಬ್ರಹ್ಮನಿಂದ ಪೂಜಿಸಲ್ಪಡುತ್ತಾನೆ ಮತ್ತು ಮೂರು ಲೋಕಗಳಲ್ಲಿಯೂ ಪೂಜಿಸಲ್ಪಡುತ್ತಾನೆ.

  1. ಭುವನಪತಿ: ಜಗತ್ತಿನ ಒಡೆಯ.

ಭುವನಪತಿಯು ಸ್ವತಃ ಮಹಾನ್ ದೇವರು – ತ್ರಿಮೂರ್ತಿಗಳು ಸಹ ನಮಸ್ಕಾರವನ್ನು ಸಲ್ಲಿಸಿ ಜಗತ್ತನ್ನು ದುಷ್ಟರಿಂದ ರಕ್ಷಿಸಲು ಬೇಡಿದರು.

  1. ಬುದ್ಧಿನಾಥ: ಬುದ್ಧಿವಂತಿಕೆಯ ಪ್ರಭು

ಗಣೇಶನು, ಬುದ್ಧಿವಂತಿಕೆಯ ದೇವರು ಎಲ್ಲಾ ಜ್ಞಾನದ ಭಂಡಾರ. ಅವನ ಅಪ್ರತಿಮ ಪಾಂಡಿತ್ಯವು ಸರಸ್ವತಿ ದೇವತೆ ಮತ್ತು ಮಹರ್ಷಿ ನಾರದರನ್ನು ವಿಸ್ಮಯದಿಂದ ತಲೆ ತಗ್ಗಿಸುವಂತೆ ಮಾಡುತ್ತದೆ. ಹೀಗೆ ಅವನ ಪ್ರತಿ ನಾಮಗಳಿಗೂ ಒಂದೊಂದು ವಿಶೇಷತೆ ಇದೆ.

  • ಸಂಕಷ್ಟ ಚತುರ್ಥಿ ಮತ್ತು ವಿನಾಯಕ ಚತುರ್ಥಿ ಎಂದರೇನು.? ಮಹತ್ವ ಮತ್ತು ಮಂತ್ರ ಹೀಗಿದೆ.!

ಒಂದು ಮಾಸದಲ್ಲಿ ಎರಡು ಚತುರ್ಥಿ ತಿಥಿಗಳಿರುತ್ತವೆ. ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟಹರ ಚತುರ್ಥೀ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ 24 ಚತುರ್ಥಿಗಳು ಮತ್ತು ಪ್ರತಿ ಮೂರು ವರ್ಷಗಳ ನಂತರ ಅಧಿಕ ಮಾಸದಲ್ಲಿ 26 ಚತುರ್ಥಿಗಳು ಬರುತ್ತವೆ. ಪ್ರತಿ ಚತುರ್ಥಿಯ ಮಹಿಮೆ ಮತ್ತು ಪ್ರಾಮುಖ್ಯತೆ ವಿಭಿನ್ನವಾಗಿರುತ್ತದೆ. ಗಣೇಶನನ್ನು ಮೆಚ್ಚಿಸಲು ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಸಂಕಷ್ಟ ಚತುರ್ಥಿ ಎಂದರೇನು..?

  • ಸಂಕಷ್ಟದ ಅರ್ಥ

ಬಿಕ್ಕಟ್ಟನ್ನು ಸೋಲಿಸುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯಗಳಿಂದ ಮುಕ್ತಿ ನೀಡುವುದು ಎಂಬುದಾಗಿದೆ. ಯಾವುದೇ ರೀತಿಯ ದುಃಖವಿದ್ದರೆ ಅದನ್ನು ಹೋಗಲಾಡಿಸಲು ಈ ಚತುರ್ಥಿಯಂದು ವಿಧಿವತ್ತಾಗಿ ಉಪವಾಸವಿದ್ದು ಗೌರಿಯ ಪುತ್ರನಾದ ಗಣೇಶನನ್ನು ಪೂಜಿಸಬೇಕು. ಈ ದಿನ ಜನರು ಸೂರ್ಯೋದಯದ ಸಮಯದಿಂದ ಚಂದ್ರನ ಉದಯದವರೆಗೆ ಉಪವಾಸ ಮಾಡುತ್ತಾರೆ.

  • ಸಂಕಷ್ಟ ಮತ್ತು ವಿನಾಯಕ ಚತುರ್ಥಿಯ ವ್ಯತ್ಯಾಸ.

ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಮತ್ತು ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಒಂದು ಚತುರ್ಥಿಯು ಹುಣ್ಣಿಮೆಯ ನಂತರ ಬಂದರೆ, ಇನ್ನೊಂದು ಚತುರ್ಥಿಯು ಅಮಾವಾಸ್ಯೆಯ ನಂತರ ಬರುತ್ತದೆ.

• ಗಣೇಶ ಏಕದಂತನಾದದ್ದು ಹೇಗೆ.?

ಗಣಪತಿಯ ಲೀಲಾ ವಿಲಾಸಗಳು ಅನೇಕ ಗಣಪತಿಯು ಒಂದೊಂದು ಯುಗದಲ್ಲೂ ಲೋಕರಕ್ಷಣಾರ್ಥವಾಗಿ ಹಲವು ಅವತಾರಗಳನ್ನೆತ್ತಿರುವನು. ಆತನ ಮಹಿಮೆಯು ಅಪಾರ.ಪುರಾಣಗಳಲ್ಲಿ ಉಲ್ಲೇಖವಿರುವ ಆತನ ಲೀಲಾ ವಿಲಾಸದ ಕೆಲವು ಪ್ರಸಂಗಗಳನ್ನು ತಿಳಿಯುದಾದರೆ.

  • ವಿಷ್ಣು – ಗಣಪತಿ

ವಿಷ್ಣುವು ಗಣಪತಿಯನ್ನು ಸುಂದರವಾದ ಆಭರಣಗಳಿಂದ ಅಲಂಕರಿಸಿ, ಆತನಿಗೆ ಅಷ್ಟವಿಧ ನಾಮಗಳನ್ನು ಕೊಟ್ಟಿದ್ದಾನೆ. ಅವುಗಳು ವಿಘ್ನೇಶ್ವರ, ಗಣೇಶ, ಹೇರಂಬ, ಗಜಾನನ, ಲಂಬೋದರ, ಏಕದಂತ, ಶೂರ್ಪಕರ್ಣಾ, ವಿನಾಯಕ. ವಿಷ್ಣುವು ಗಣಪತಿಯನ್ನು ಕುರಿತು ಈ ರೀತಿ ಸ್ತೋತ್ರ ಮಾಡಲು ಪ್ರಸಂಗವೊಂದು ಕಾರಣವಾಗುತ್ತದೆ.

ವೈಕುಂಠದಲ್ಲಿ ಒಮ್ಮೆ ನಾರಾಯಣನಾದ ವಿಷ್ಣುವಿನ ಪಾಂಚಜನ್ಯ ಶಂಖ ಕಣ್ಮರೆಯಾಯಿತಂತೆ. ಎಲ್ಲೆಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಮುಂದೊಂದು ದಿನ ಕೈಲಾಸದ ಕಡೆಯಿಂದ ಪಾಂಚಜನ್ಯದ ಶಂಖಾರವ ಮೊಳಗಿದ್ದು ಕೇಳಿ ಬಂತು. ಅದು ಹೇಗೋ ಶಂಖ ಪರಮೇಶ್ವರನ ಅಧೀನವಾಗಿದೆಯೆಂದು ತಿಳಿದ ವಿಷ್ಣುವು, ತಪಸ್ಸುಗೈದು ಪರಶಿವನನ್ನು ಪ್ರಸನ್ನಗೊಳಿಸಲು ನಿರ್ಧರಿಸಿದ. ವಿಷ್ಣುವಿನ ತಪಸ್ಸಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನೂ ಆದ. ಆದರೆ ಶಂಖ ಬೇಕಿದ್ದರೆ ತನ್ನ ಮಗನಾದ ಗಣೇಶನನ್ನು, ಅದೂ ಬಲಮುರಿ ಗಣೇಶ ಅಂದರೆ ಸೊಂಡಿಲು ಬಲಗಡೆಗೆ ವಾಲಿರುವ ಗಣೇಶನನ್ನು ಪೂಜಿಸಬೇಕು ಎಂದನು. ವಿಷ್ಣು ಅದರಂತೆ ಗಣೇಶನನ್ನು ಪೂಜಿಸಿದ ಬಳಿಕ, ಬಲಮುರಿ ಗಣೇಶನು, ಬಲಮುರಿ ಶಂಖವನ್ನು ವಿಷ್ಣುವಿಗೆ ಮರಳಿಸಿದನು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶಂಖನಾದಕ್ಕೂ, ಆನೆಯ (ಗಣಪನ ಶಿರೋಭಾಗ) ಹೂಂಕರಿಸುವಿಕೆಗೂ ಇರುವ ಸಾಮ್ಯ. ಹಾಗೆಯೇ ಜಗತ್ತಿನ ಪ್ರತಿಯೊಂದು ವಿಷಯವನ್ನೂ ಶಿವನು ತನ್ನ ಪುತ್ರ ಗಣೇಶನ ಮೂಲಕ ಹೇಗೆ ನಿಯಂತ್ರಣದಲ್ಲಿಟ್ಟಿರುತ್ತಾನೆ ಎಂಬ ಸಿದ್ಧಾಂತ! ಬಲಮುರಿ ಗಣಪತಿಯನ್ನು ಪೂಜಿಸಿದರೆ ಭಕ್ತರ ಇಷ್ಟಾರ್ಥಗಳೆಲ್ಲ ಪೂರೈಸುವುದು.

  • ಪರಶುರಾಮ – ಗಣಪತಿ ಗಣಪನಿಗಿರುವ ಎರಡು ದಂತಗಳಲ್ಲಿ ಒಂದು ತುಂಡಾಗಿದೆ ಅಲ್ಲವೇ? ಅದೇಕೆ ಹಾಗಾಯಿತು ಗೊತ್ತೇ?

ಒಮ್ಮೆ ಪರಶುರಾಮರು ಬ್ರಹ್ಮದೇವನ ಆಜ್ಞೆಯಂತೆ ಈಶ್ವರನ ದರ್ಶನಕ್ಕೆ ಬಂದರು. ಆಗ ಪಾರ್ವತಿ-ಪರಮೇಶ್ವರರು ಏಕಾಂತದಲ್ಲಿದ್ದರು. ದ್ವಾರದಲ್ಲಿದ್ದ ಗಣಪತಿಯು ತನ್ನ ಮಾತಾಪಿತೃಗಳ ಏಕಾಂತಕ್ಕೆ ಭಂಗ ಬರದಿರಲೆಂದು ಪರಶುರಾಮರನ್ನು ಒಳಗೆ ಬಿಡಲಿಲ್ಲ. ಮೊದಲೇ ಕೋಪಿಷ್ಟರಾದ ಪರಶುರಾಮರ ಸಿಟ್ಟು ಗಣಪತಿಯ ಪ್ರತಿರೋಧವನ್ನು ಕಂಡು ನೆತ್ತಿಗೇರಿತು. ಅವರೀರ್ವರ ನಡುವೆ ಭಾರಿ ಕಾಳಗವಾಯಿತು. ಗಣಪನೂ ಅಸಾಮಾನ್ಯ ವೀರನೇ ತಾನೇ? ಬಾಲಕನಾಗಿದ್ದರೂ ಮುಷ್ಟಿಕಟ್ಟಿ ಹೋರಾಟಕ್ಕೆ ಅನುವಾದ. ಹೋರಾಟದ ನಡುವೆ ಪರಶುರಾಮರು ‘ಮುಕ್ತ ಕವಚ’ವನ್ನು ಅಭಿಮಂತ್ರಿಸಿ ಗಂಡುಗೊಡಲಿಯಿಂದ ಪ್ರಹಾರ ಮಾಡಿದರು. ಆಗ ಪುಟ್ಟ ಗಣಪತಿಯ ದಂತ ಭಗ್ನವಾಯಿತು. ಶಿವನ ಮಧ್ಯಸ್ಥಿಕೆಯಿಂದ ಅವರೀರ್ವರ ನಡುವಿನ ಕಾಳಗ ನಿಂತಿತು. ಹೀಗೆ ಗಣಪತಿ ಏಕದಂತನಾದನು.

  • ರಾವಣ-ಆತ್ಮಲಿಂಗ-ಗಣಪತಿ

ಲಂಕೇಶ್ವರನಾದ ರಾವಣನು ತನ್ನ ತಾಯಿಯಾದ ಕೈಕಸೆಯ ಅಭೀಷ್ಟೆಯನ್ನು ಪೂರೈಸಲು, ಈಶ್ವರನನ್ನು ಕುರಿತು ಅಖಂಡ ತಪಸ್ಸನ್ನಾಚರಿಸಿದನು. ಆತನ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾದಾಗ, ಶಿವನ ಪರಮ ಪವಿತ್ರವಾದ ‘ಆತ್ಮಲಿಂಗವನ್ನೇ’ ದಯಪಾಲಿಸಲು ಬೇಡಿದನು. ಭಕ್ತಾಭೀಷ್ಟಪ್ರದನಾದ ಶಿವನು ರಾವಣನ ಕೋರಿಕೆಯಂತೆ ಲಂಕೆಯನ್ನು ಶತ್ರುಗಳು ಜಯಿಸಲಾಗದಂತೆ, ರಾವಣನು ಯುದ್ಧಗಳಲ್ಲಿ ಸದಾ ವಿಜಯಿಯಾಗುವಂತೆ ಅನುಗ್ರಹಿಸಿ, ಆತ್ಮಲಿಂಗವನ್ನೇ ಅವನಿಗೆ ಕೊಟ್ಟುಬಿಟ್ಟನು. ಆತ್ಮಲಿಂಗವನ್ನು ಲಂಕೆ ಮುಟ್ಟುವವರೆಗೂ ‘ಭೂಸ್ಪರ್ಶವಾಗದಂತೆ’ ನೋಡಿಕೊಳ್ಳಬೇಕೆಂದು ತಿಳಿಸಿದನು. ರಾವಣನಿಗೆ ಅತ್ಯಾನಂದವಾಯಿತು. ದೇವತೆಗಳೆಲ್ಲ ಭಯಕ್ರಾಂತರಾದರು. ದೇವಾದಿದೇವತೆಗಳೆಲ್ಲರೂ ಒಂದು ಕಡೆ ಸೇರಿ ರಾವಣನು ಆತ್ಮಲಿಂಗವನ್ನು ಲಂಕೆಗೆ ಒಯ್ಯದಂತೆ ಮಾಡುವಂತೆ ಕೇಳಿಕೊಂಡರು.

ಸೂರ್ಯಾಸ್ತದ ಸಮಯವಾಗಿತ್ತು, ರಾವಣನು ಸಂಧ್ಯಾವಂದನೆ ಮಾಡುವ ಸಮಯವದು. ಶಿವನ ಆತ್ಮಲಿಂಗವು ಭೂಸ್ಪರ್ಶವಾಗದಂತೆ ಎಲ್ಲಿಡುವುದು ಎಂದು ರಾವಣನು ಯೋಚಿಸುತ್ತಿರಲು, ಗಣಪತಿಯು ಬಾಲವಟುವಿನ ವೇಷ ಧರಿಸಿ ರಾವಣನಿಗೆ ಕಾಣಿಸಿಕೊಂಡನು. ಲಂಕೇಶನಾದ ರಾವಣನು ವಟುರೂಪದಲ್ಲಿದ್ದ ಬಾಲಕನ್ನು ತಾನು ಸಂಧ್ಯಾವಂದನೆ ಮಾಡಿಬರುವವರೆಗೂ, ತನಗಾಗಿ ಆತ್ಮಲಿಂಗವನ್ನು ಕೆಲವು ಕಾಲ ಹಿಡಿದಿಟ್ಟುಕೊಂಡಿರಬೇಕೆಂದು ಕೇಳಿಕೊಂಡನು. ವಟುರೂಪಿ ಗಣಪತಿಯು, ರಾವಣನನ್ನು ತಾನು ಮೂರು ಬಾರಿ ಕೂಗಿ ಎಚ್ಚರಿಸುವುದಾಗಿಯೂ, ಅಷ್ಟರಲ್ಲಿ ಆತ ಹಿಂದಿರುಗಿ ಬೇಕೆಂದು ಹೇಳಿದನು. ರಾವಣನು ಸ್ವಲ್ಪ ದೂರ ಹೋದ ಕೂಡಲೇ ವಟುರೂಪಿ ಗಣೇಶನು, ರಾವಣನನ್ನು ಮೂರು ಬಾರಿ ಕೂಗಿದಂತೆ ಮಾಡಿ ಆತ್ಮಲಿಂಗವನ್ನು ನೆಲದ ಮೇಲಿಟ್ಟುಬಿಟ್ಟನು. ಆಗ ರಾವಣನಿಗೆ ತುಂಬ ಕೋಪ ಬಂದು, ವಟುವನ್ನು ಕೊಂದುಬಿಡುವುದಾಗಿ ಮುಂದುವರೆದು ಬಂದನು. ಹೀಗೆ ರಾವಣನ ಆಸೆ ಈಡೇರಲಿಲ್ಲ. ಗೋಕರ್ಣವೆಂಬ ಸ್ಥಳದಲ್ಲಿ ಆತ್ಮಲಿಂಗವು ಭೂಶಾಯಿಯಾಗಿಬಿಟ್ಟಿತು.

  • ಯಾರಿಗೆ ಬಹುಮಾನ ಸಿಕ್ಕುವುದು ?

ಕಾರ್ತಿಕೇಯ ಮತ್ತು ಗಣಪತಿ ಇಬ್ಬರೂ ಪಾರ್ವತಿಯ ಹತ್ತಿರ ಇದ್ದರು. ಭಗವತಿಯ ಕೊರಳಲ್ಲಿ ಒಂದು ವಜ್ರದಹಾರವಿತ್ತು. ಆಗ ತಾಯಿಭಗವತಿ, “ಯಾರು ಈ ಪ್ರಪಂಚವನ್ನು ಮೊದಲು ಸುತ್ತಿಕೊಂಡು ಬರುವರೊ ಅವರಿಗೆ ಈ ಹಾರವನ್ನು ಬಹುಮಾನವಾಗಿ ಕೊಡುತ್ತೇನೆ” ಎಂದಳು.

ಕೇಳಿದ ತಕ್ಷಣವೇ ಕಾರ್ತಿಕೇಯ ನವಿಲಿನ ಮೇಲೆ ಹೊರಟ. ಗಣೇಶ ನಿಧಾನವಾಗಿ ಭಗವತಿಯ ಸುತ್ತಲೂ ಪ್ರದಕ್ಷಿಣೆ ಮಾಡಿ ಬಂದ. ಅವನು ಭಗವತಿ ಸೃಷ್ಟಿಯನ್ನೆಲ್ಲ ತನ್ನಲ್ಲಿ ಅಡಗಿಸಿಕೊಂಡಿರುವಳು ಎಂಬುದನ್ನು ತಿಳಿದುಕೊಂಡಿದ್ದ.

ಭಗವತಿ ಗಣೇಶನ ಭಕ್ತಿಯನ್ನು ನೋಡಿ ಸಂತೋಷದಿಂದ ತನ್ನ ಕೊರಳ ಹಾರವನ್ನು ಗಣಪತಿಗೆ ಹಾಕಿದಳು. ಬಹಳ ಕಾಲದ ಮೇಲೆ ಕಾರ್ತಿಕೇಯ ಹಿಂತಿರುಗಿ ಬಂದ.

ಅಲ್ಲಿ ಆಗಲೆ ಪಾರ್ವತಿ ಗಣಪತಿಯ ಕೊರಳಿನಲ್ಲಿ ಹಾರವನ್ನು ಹಾಕಿದ್ದಳು. ಬರೀ ಸರಳವಾದ ಭಕ್ತಿಯಿಂದ ಸರ್ವವನ್ನೂ ಪಡೆದುಕೊಳ್ಳಬಹುದು,ಅಲ್ಲದೇ ತಾಯಿಯೇ ಸೃಷ್ಟಿ ಭಗವಂತನನ್ನು ಪ್ರೀತಿಸಿದರೆ ಯಾವ ಕೊರತೆಯೂ ಇರುವುದಿಲ್ಲ ಎಂದು ಸಾಕ್ಷಾತ್ಕಾರ ಮಾಡಿಸಿದ.

  • ವಿಘ್ನ ನಿವಾರಕ ಗಣೇಶನಿಗೆ 21 ನಮಸ್ಕಾರಗಳು.

ಗಣಪತಿಗೆ ದೂರ್ವೆ ಅಥವಾ ಗರಿಕೆ ಪವಿತ್ರವಾದದು. ಮಂಗಳವಾರ, ಸಂಕಷ್ಟ ಚತುರ್ಥಿ, ಗಣೇಶ ಚತುರ್ಥಿ, ವಿಶೇಷ ದಿನಗಳಲ್ಲದೆ ಬೇರೆ ದಿನ, ವಾರ ಹಾಗೂ ವಿಶೇಷ ಮಾಸಗಳಲ್ಲಿ ಹರಕೆಗೆಂದೋ, ಮಕ್ಕಳ ಪರೀಕ್ಷೆ ಸಮಯ, ಅಥವಾ ಮಾಡಿಕೊಂಡ ಸಂಕಲ್ಪಗಳಿಗೋ ಇಲ್ಲಾ ಎಳೆ ಗರಿಕೆಗಳು ಹುಲುಸಾಗಿ ಬೆಳೆದಾಗ ಇಂಥ ಹಲವು ಕಾರಣಗಳಿಗಾಗಿ ಗರಿಕೆಗಳನ್ನು ಬಿಡಿಸಿ ಶುದ್ಧವಾಗಿ ತೊಳೆದು ಚೆನ್ನಾಗಿರುವ ಎಸಳಿನ ಗರಿಕೆಗಳನ್ನು 21 ಆರಿಸಿ ಅದನ್ನು ಕಟ್ಟು ಕಟ್ಟಿ ಅರಿಶಿನ ಕುಂಕುಮ ಹಚ್ಚಿ ಗಣೇಶನ ಬಲಭಾಗದಲ್ಲಿಟ್ಟು ಭಕ್ತಿಯಿಂದ ಬೇಡಿಕೊಂಡರೆ, ಜನ್ಮ ಸಾರ್ಥಕತೆನಿಸುತ್ತದೆ. ವಿಷ್ಣು ತುಳಸಿ ಪ್ರಿಯನಾದರೆ, ಶಿವನಿಗೆ ಬಿಲ್ವಪತ್ರೆ ಹಾಗೆ ಗಣೇಶಗೆ ಗರಿಕೆ ಶ್ರೇಷ್ಠ. ಯಾವ ಕಾರ್ಯ ಕೈಗೊಂಡರೂ ಪ್ರಥಮವಾಗಿ ಗಣೇಶನಿಗೆ ದೂರ್ವೆಗಳನ್ನು ಅರ್ಪಿಸಿ ಪೂಜಿಸಿ, ಮುಂದಿನ ವ್ರತ -ಕಥೆ, ಪೂಜೆ, ಶುಭ ಕಾರ್ಯಗಳನ್ನು ಮಾಡುವ ಪದ್ಧತಿ ಪೂರ್ವಜರಿಂದಲೂ ಬೆಳೆದು ಬಂದಿದೆ. ಈ 21 ಗರಿಕೆಗಳನ್ನೇ ಅರ್ಪಿಸುವುದರ ಹಿಂದೆ ಒಂದು ಪುರಾಣಗಳಲ್ಲಿ ಉಲ್ಲೇಖಿಸಲಾದ ಕುತೂಹಲ ಕಥೆ ಇದೆ.

ಪೌರಾಣಿಕ ಕಥೆ ಹೀಗಿದೆ, ಹಿಂದೆ ಅನಲಾಸುರ ಎಂಬ ದುಷ್ಟ ದೈತ್ಯನಿದ್ದನು. ಅವನ ಕಣ್ಣುಗಳಿಂದ ಬೆಂಕಿ ಉಂಡೆ ಬರುತ್ತಿತ್ತು. ಅವನಿಗೆ ಎದುರಾಗಿ ಏನೇ ಕಂಡರೂ ಅವನ ಕಣ್ಣಿನ ಬೆಂಕಿಯಿಂದ ಸುಟ್ಟು ಹೋಗುತ್ತಿತ್ತು. ಈ ದೈತ್ಯ ಭೂಲೋಕದಲ್ಲಿರುವ ಋಷಿಮುನಿ ಗಳಿಗಲ್ಲದೆ, ಸ್ವರ್ಗ ಲೋಕ ಮತ್ತು ದೇವತೆಗಳಿಗೆ ಹಿಂಸೆ ಕೊಡುತ್ತಿದ್ದ. ಇವನ ಕಾಟ ಸಹಿಸಲಾಗದೆ ದೇವಾನುದೇವತೆಗಳೆಲ್ಲ ಶಿವನಲ್ಲಿ ಬಂದು ಭಗವಂತ ಈ ರಾಕ್ಷಸನು ಉಪಟಳದಿಂದ ನಮ್ಮನ್ನು ರಕ್ಷಿಸಿ ಎಂದು ಪರಿಪರಿಯಾಗಿ ಪ್ರಾರ್ಥಿಸಿದರು.

ಶಿವನು ದೇವತೆಗಳ ಮೊರೆಯನ್ನು ಆಲೈಸಿ ರಾಕ್ಷಸನನ್ನು ಸಂಹಾರ ಮಾಡಲು ಗಣೇಶನಿಂದ ಮಾತ್ರ ಸಾಧ್ಯ ಎಂದು ಗಣೇಶನನ್ನು ಕರೆದು ರಾಕ್ಷಸನನ್ನು ಸಂಹಾರ ಮಾಡುವಂತೆ ಹೇಳುತ್ತಾನೆ. ತಂದೆಯ ಆಜ್ಞೆಯಂತೆ ಗಣೇಶ ಅನಲಾ ಸುರನೊಡನೆ ಯುದ್ಧ ಮಾಡುತ್ತಾನೆ. ಆದರೆ ರಾಕ್ಷಸನು ತನ್ನ ಕಣ್ಣಿನ ಬೆಂಕಿ ಉಂಡೆಗಳಿಂದ ಗಣೇಶನನ್ನು ಸುಡಲು ಬರುತ್ತಾನೆ. ಗಣೇಶನು ಉಗ್ರರೂಪಿಯಾಗಿ ದೈತ್ಯಾಕಾರದಲ್ಲಿ ಬೆಳೆದು ರಾಕ್ಷಸನನ್ನೇ ನುಂಗಿಬಿಡುತ್ತಾನೆ. ಬೆಂಕಿ ಉಂಡೆ ಕಣ್ಣಿನ ರಾಕ್ಷಸನನ್ನು ನುಂಗಿದ್ದ ಕಾರಣ ಗಣೇಶನ ಹೊಟ್ಟೆ ಉಬ್ಬಿ, ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಗಣೇಶನಿಗೆ ಹೊಟ್ಟೆ ಉರಿ ಶುರುವಾಯಿತು. ಉಪಶಮನಕ್ಕಾಗಿ ಔಷಧಿಗಳನ್ನು ತೆಗೆದುಕೊಂಡರು ಕಡಿಮೆಯಾಗಲಿಲ್ಲ.ಗಣೇಶನ ಒದ್ದಾಟವನ್ನು ನೋಡಿದ ದೇವತೆಗಳು ಹಾಗೂ ತ್ರಿಮೂರ್ತಿಗಳು ಚಿಂತೆಯಲ್ಲಿ ಮುಳುಗಿರುವಾಗ, ಋಷಿಮುನಿಗಳೆಲ್ಲ ಸೇರಿ 21 ಗರಿಕೆ ಹುಲ್ಲು ತಂದು ಕಟ್ಟು ಕಟ್ಟಿ ಗಣೇಶನ ತಲೆಯ ಮೇಲೆ ಇಡುತ್ತಾರೆ. ಇದರಿಂದ ಗಣೇಶನ ಹೊಟ್ಟೆ ಉರಿ ಶಮನವಾಗಿ ದೇಹ ತಂಪಾಗುತ್ತದೆ. ಸಂತೋಷಗೊಂಡ ಗಣೇಶ ಯಾರು ತನಗೆ 21 ಗರಿಕೆ ಹುಲ್ಲನ್ನು ಭಕ್ತಿಯಿಂದ ಅರ್ಪಿಸಿ ಆರಾಧಿಸುತ್ತಾರೋ, ಅವರನ್ನು ಅನುಗ್ರಹಿಸುತ್ತೇನೆ ಎಂದು ಅಭಯ ಹಸ್ತವನ್ನು ನೀಡಿದನು. ಹೀಗಾಗಿ ಗಣೇಶನಿಗೆ ಗರಿಕೆ ಬಹಳ ಪ್ರಿಯ ಹಾಗೂ ಶ್ರೇಷ್ಠವಾದದ್ದು ಆಗಿದೆ.

ಇನ್ನೂಂದು ಕಥೆಯ ಪ್ರಕಾರ, ಒಮ್ಮೆ ಅತ್ರಿ ಮಹರ್ಷಿಗಳು ಶಿವನ ಪರಿವಾರವನ್ನು ಔತಣಕ್ಕೆ ಆಹ್ವಾನಿಸಿದರು. ಅನುಸೂಯಾದೇವಿ ಅವರಿಗಾಗಿ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸಿದಳು. ಶಿವನು ತನ್ನ ಕುಟುಂಬ ಸಮೇತ ಅತ್ರಿಮನೆಗಳಿಗೆ ಬಂದನು. ಅನಸೂಯಾದೇವಿ ಹೇಳಿದಳು, ಬಾಲ ಗಣೇಶನಿಗೆ ಮೊದಲು ಊಟ ಬಡಿಸಿ ನಂತರ ಎಲ್ಲರಿಗೂ ಬಡಿಸುತ್ತೇನೆ ಎಂದು ಗಣೇಶನನ್ನು ಕೂರಿಸಿ ಊಟ ಬಡಿಸಿದಳು. ಮಾಡಿದ ಅಡುಗೆ ಎಲ್ಲ ಖಾಲಿಯಾಯಿತು ಆದರೂ ಗಣೇಶನಿಗೆ ಹೊಟ್ಟೆ ತುಂಬಲಿಲ್ಲ. ಶಿವ ಪಾರ್ವತಿಯರಿಗೂ ಹಸಿವಾಗಿದೆ. ಆದರೆ ಗಣೇಶನೇ ಎಲ್ಲವನ್ನೂ ಊಟ ಮಾಡಿ ಇನ್ನು ಹಸಿವೆ ಎನ್ನುತ್ತಿದ್ದಾನೆ. ಆಗ ಅನುಸೂಯಾದೇವಿ ಕಾಯಿ ಬೆಲ್ಲವನ್ನು ಬೆರೆಸಿ ಹೂರ್ಣ ಮಾಡಿ ಕಲಸಿದ ಹಿಟ್ಟಿನ್ನು ತಟ್ಟಿ ಅದರೊಳಗೆ ಹೂರ್ಣ ತುಂಬಿ ಉಂಡೆಯಂತೆ ಮಾಡಿ ಬೇಯಿಸಿ ಗಣೇಶನಿಗೆ ತಿನ್ನಲು ಕೊಟ್ಟಳು. ಇದನ್ನು ಬಾಯಿಗೆ ಹಾಕಿ ಚಪ್ಪರಿಸಿಕೊಂಡು ತಿಂದ ಗಣೇಶನಿಗೆ ಹೊಟ್ಟೆ ತುಂಬಿ 21 ಸಲ ತೇಗು ತೇಗಿದ. ಮಗನಿಗೆ ಹೊಟ್ಟೆ ತುಂಬಿ ಹರ್ಷವಾಗಿದ್ದನ್ನು ನೋಡಿಯೇ ಶಿವನಿಗೂ ತೇಗು ಬಂದಿತು. ಗಣೇಶನ ಸಂತೋಷ ಕಂಡು ಪಾರ್ವತಿಗೂ ಸಮಾಧಾನವಾಯಿತು ನನ್ನ ಮಗ ಗಣೇಶನು ಪ್ರಸನ್ನನಾಗಬೇಕಾದರೆ 21 ದೂರ್ವೆ ಅರ್ಪಿಸಿ, ಪೂಜೆ ಮಾಡಿ, 21 ಮೋದಕಗಳನ್ನು ನೈವೇದ್ಯ ಮಾಡಿ, 21 ಪ್ರದಕ್ಷಣೆ ನಮಸ್ಕಾರ ಮಾಡಿದವರ ಸಕಲ ಕಷ್ಟಗಳು ಪರಿಹಾರ ನಿವಾರಣೆಯಾಗಲಿ ಎಂದು ವರ ಕೊಟ್ಟಳು.

ಗರಿಕೆಗೆ ಸಂಸ್ಕೃತದಲ್ಲಿ ‘ದೂರ್ವಾ’ ಎನ್ನುತ್ತಾರೆ.‌ ದೂರ್ವಾ ಎಂದರೆ ಯಾವುದು ನಮ್ಮನ್ನು ಹತ್ತಿರಕ್ಕೆ ತರುತ್ತದೆಯೋ ಅದು, ದುಃಖ ನಿವಾರಣೆ ಯಾಗುವುದಕ್ಕೆ ‘ದೂರ್ವಾ’ ಎನ್ನುತ್ತಾರೆ. ಮನುಷ್ಯನಿಗೆ ದುಃಖ ಬರುವುದು ಅರಿಷಡ್ವರ್ಗಗಳಿಂದ

ಒಂದು ಗರಿಕೆಯಲ್ಲಿ ಮೂರು ಎಸಳುಗಳು ಅಥವಾ ಹೆಚ್ಚು ಇರುವ 21 ಗರಿಕೆಯನ್ನು ಏರಿಸಬೇಕು. ಮೂರು ಎಸಳುಗಳು ದೈವ ತತ್ವಗಳಾದ ಶಿವ -ಶಕ್ತಿ -ಗಣಪತಿಯರನ್ನು ಪ್ರತಿಬಿಂಬಿಸುತ್ತದೆ. ಮಧ್ಯದ ಎಸಳು ಗಣೇಶನ ತತ್ವವಾಗಿದೆ ಗರಿಕೆ ಗಣೇಶನನ್ನು ಬೇಗ ಆಕರ್ಷಿಸುತ್ತದೆ. ಗಣೇಶನಿಗೆ ಅರ್ಪಿಸುವ ಗರಿಕೆ ಎಳೆಯದಿರಬೇಕು. ಇಂಥ 21 ಗರಿಕೆಯನ್ನು ಭಕ್ತಿಯಿಂದ ಗಣಪತಿಗೆ ಅರ್ಪಿಸಿ ಪೂಜಿಸಿದವರ ಕಷ್ಟ ಕಾರ್ಪಣ್ಯ ಕಳೆದು ಸುಖ- ಶಾಂತಿ ದೊರೆಯುತ್ತದೆ.

ದೂರ್ವೆ ಪೂಜೆ:-

ಓಂ ಗಣಧಿಪಾತಯ ನಮಃ, ಓಂ ಉಮಾ ಪುತ್ರಾಯ ನಮಃ!

ಓಂ ಅಘನಾಶನಾಯ ನಮಃ, ಓಂ ಸರ್ವಸಿದ್ಧಿ ಪ್ರದಾಯ ನಮಃ!

ಓಂ ಏಕದಂತಾಯ ನಮಃ, ಓಂ ಇಭವಕ್ತ್ರಾಯ ನಮಃ!

ಓಂ ಮೂಷಕವಾಹನಾಯನಮಃ, ಓಂ ಕುಮಾರ ಗುರುವೇ ನಮಃ!

ಓಂ ಗೌರೀಸೂನವೇ ನಮಃ, ಓಂ ಮಹಾಾಗ್ರಜಾಯ ನಮಃ!

ಓಂ ಪತ್ನಿ ಹೀನಾಯ ನಮಃ, ಓಂ ವಟವೇ ನಮಃ!

ಓಂ ಧೂಮಕೇತುವೆ ನಮಃ, ಓಂ ಗಜಾನನಾಯ ನಮಃ!

ಓಂ ಸರ್ವಾತ್ಮನೇ ನಮಃ, ಓಂ ಹೇರಂಬಾಯ ನಮಃ !

ಓಂ ಕಪಿಲಾಯ ನಮಃ, ಓಂ ಗಜಕರ್ಣಾಯ ನಮಃ!

ಓಂ ಲಂಬೋದರಾಯ ನಮಃ,

ಓಂ ವಿಘ್ನರಾಜಾಯ ನಮಃ!

ಓಂ ಶಕ್ತಿಯುಕ್ತಾಯ ನಮಃ, ಓಂ ದೂರ್ವಾಯುಕ್ತಂ ಸಮರ್ಪಯಾಮಿ!! ಎಂದು.

  • “ಸಿದ್ಧಿ ಮತ್ತು ಬುದ್ಧಿಯೊಂದಿಗೆ ಗಣೇಶನ ವಿವಾಹ” ಈ ಪೌರಾಣಿಕ ಕಥೆಯು ಭಗವಾನ್ ಗಣೇಶನು ತನ್ನ ಇಬ್ಬರು ಪತ್ನಿಯರಾದ ಸಿದ್ಧಿ (“ಆಧ್ಯಾತ್ಮಿಕ ಶಕ್ತಿ”) ಮತ್ತು ಬುದ್ಧಿ (“ಬುದ್ಧಿ”) ರನ್ನು ಮದುವೆಯಾಗುತ್ತಾನೆ. ಪೌರಾಣಿಕ ಕಥೆಗಳಲ್ಲಿ ಉಲ್ಲೇಖ ವಿರುವ ಒಂದು ಕಥೆ ಹೀಗಿದೆ ಗಣಪತಿಯು ಪ್ರಜಾಪತಿ ವಿಶ್ವರೂಪನ ಮಗಳು ಸಿದ್ಧಿ ಮತ್ತು ರಿದ್ಧಿಯನ್ನು ವಿವಾಹವಾದರು ಎಂದು ಹೇಳುತ್ತದೆ.ಆದಾಗ್ಯೂ,ಈ ಕಥೆಯು ಗಣೇಶ ಪುರಾಣವನ್ನು ಆಧರಿಸಿದೆ ಮತ್ತು ಗಣೇಶನು ಸಿದ್ಧಿ ಮತ್ತು ಬುದ್ಧಿಯನ್ನು ಮದುವೆಯಾಗುತ್ತಾನೆ.ಹಿಂದೂ ಪುರಾಣಗಳ ಆಧಾರದ ಮೇಲೆ ಬ್ರಹ್ಮ ದೇವರು ಈ ವಿಶ್ವವನ್ನು ಸೃಷ್ಟಿಸಿದ ಸರ್ವೋಚ್ಚ ದೇವರು. ಬ್ರಹ್ಮದೇವನ ಪತ್ನಿ ಸರಸ್ವತಿ, ಜ್ಞಾನ,ಸಂಗೀತ,ಕಲೆ,ಮಾತು, ಬುದ್ಧಿವಂತಿಕೆ ಮತ್ತು ಕಲಿಕೆಯ ದೇವತೆ.ಬ್ರಹ್ಮ ಮತ್ತು ಸರಸ್ವತಿಯರಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರು ಸುಂದರ ಹೆಣ್ಣು ಮಕ್ಕಳಿದ್ದರು. ಮದುವೆಯ ವಯಸ್ಸಾದಾಗ, ಬ್ರಹ್ಮ ದೇವರು ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಗಣೇಶನನ್ನು ವರನನ್ನಾಗಿ ಆರಿಸಿದನು. ಬ್ರಹ್ಮದೇವನಿಗೆ ತನ್ನ ಹೆಣ್ಣುಮಕ್ಕಳ ಮದುವೆಯ ಬಯಕೆಯ ಬಗ್ಗೆ ತಿಳಿದ ನಂತರ, ನಾರದ ಋಷಿ ಕೈಲಾಸಕ್ಕೆ ಹೋದರು.ಅಲ್ಲಿ ಗಣೇಶನನ್ನು ಭೇಟಿಯಾಗಿ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟರು. ಗಣೇಶನು ಮದುವೆಗೆ ಒಪ್ಪಿಗೆ ನೀಡಿದನು ಮತ್ತು ನಾರದನು ಇದನ್ನು ಬ್ರಹ್ಮನಿಗೆ ತಿಳಿಸಿದನು.

•ಗಣಪತಿ ಅಥರ್ವಶೀರ್ಷ ಮಂತ್ರ ಅಥರ್ವಶೀರ್ಷ ಎಂದರೆ ಒಬ್ಬರ ದೈವಿಕ ಪ್ರಜ್ಞೆಗಾಗಿ ಉದ್ದೇಶಿಸಿರುವ ಬುದ್ಧಿಶಕ್ತಿಯ ನಿರ್ಣಯ ಅಥವಾ ಏಕಾಂಗಿ ಗಮನ. ಗಣಪತಿ ಅಥರ್ವಶೀರ್ಷ ಪಠಣವು ಸನಾತನ ಧರ್ಮದಲ್ಲಿ ವಿವರಿಸಿದಂತೆ ಜೀವನದ ನಾಲ್ಕು ಸದ್ಗುಣಗಳನ್ನು ಪಡೆಯಲು ಜಪ ಮಾಡುವವರಿಗೆ ಸಹಾಯ ಮಾಡುತ್ತದೆ:

  1. ಧರ್ಮ (ಉತ್ತಮ ಕಾರ್ಯಗಳನ್ನು ಮಾಡುವುದು),
  2. ಅರ್ಥ (ವಸ್ತು ಸಂಪತ್ತು),

3.ಕಾಮ (ಇಂದ್ರಿಯ ಆನಂದದ ತೃಪ್ತಿ)

  1. ಮೋಕ್ಷ (ಚೇತನದ ವಿಮೋಚನೆ)

ಗಣಪತಿ ಅಥರ್ವಶೀರ್ಷ ಪದಕ್ಕೆ ವಿಶೇಷ ಮಹತ್ವವಿದೆ. ಇದು ಅಥರ್ವ + ಶೀರ್ಷದಿಂದ ಮಾಡಲ್ಪಟ್ಟಿದೆ. ಅಥರ್ವ ಎಂದರೆ ಸ್ಥಿರ. ಶಿರ್ಷ ಎಂದರೆ ಮೆದುಳು ಅಥವಾ ಮನಸ್ಸು. ಆದ್ದರಿಂದ ಗಣಪತಿ ಅಥರ್ವಶೀರ್ಷವನ್ನು ನಿಯಮಿತವಾಗಿ ಪಠಿಸಬೇಕು.

  • ಗಣಪತಿ ಸಂಕ್ಷಿಪ್ತ ಪೂಜಾ ವಿಧಾನ.

ಸರ್ವಮೂಲ ಗಣೇಶ;

Ganesh Chaturthi 2024

ಮಹಿಮೆಯಲ್ಲಿ ಅವರಿಗಿಂತ ಕಡಿಮೆ ಏನು ಇಲ್ಲ. ಪಂಚಾಯತನ ದೇವತೆಗಳಲ್ಲಿ ಒಬ್ಬ. ಶಿವನಿಗೆ ಸಮಾನವಾಗಿ ಪೂಜೆ ಸ್ವೀಕರಿಸುವವ. ಇವನೇ ಪರತತ್ವ. ಸೃಷ್ಟಿ-ಸ್ಥಿತಿ-ಲಯಕ್ಕೂ ಕಾರಣೀಭೂತ. ಸರ್ವಮೂಲವು, ಸರ್ವಮಯವೂ ಆಗಿರುವವನು. “ತ್ವಮೇವಕೇವಲಂಕರ್ತಾಸಿs। ತ್ವಮೇವಕೇವಲಂಧರ್ತಾsಸಿ। ತ್ವಮೇವಕೇವಲಂಹರ್ತಾsಸಿ।. “ತ್ವಂಬ್ರಹ್ಮಾ ತ್ವಂವಿಷ್ಣುಸ್ತ್ವಂರುದ್ರಸ್ತ್ವಮಿಂದ್ರಸ್ತ್ವಮಗ್ನಿಸ್ತ್ವಂವಾಯುಸ್ತ್ವಂಸೂರ್ಯಸ್ತ್ವಂಚಂದ್ರಮಾಸ್ತ್ವಂಬ್ರಹ್ಮಭೂರ್ಭುವ: ಸುವರೋಮ್”।. ಗಣಪತಿ ಅಥರ್ವಶೀರ್ಷದಲ್ಲಿ ಬರುವ ಈಮಾತುಗಳು ಅವನ ಮಹಿಮೆಯನ್ನು ಹೇಳುತ್ತದೆ.

ಮಣ್ಣಿನ ಗಣಪತಿಯ ಪೂಜೆ: ಮೂಲಾಧಾರ ಚಕ್ರವು ಪೃಥ್ವಿತತ್ವದಸ್ಥಾನ. ಸ್ವಾಧಿಷ್ಠಾನ ಜಲತತ್ವದಸ್ಥಾನ. ಅಂತರಂಗದಲ್ಲಿ ಯೋಗಿಗಳು ಮೂಲಧಾರಪ್ರದೇಶದಲ್ಲಿ ಗಣೇಶನನ್ನುಪೂಜಿಸಿ, ಅದರ ಮೇಲಿರುವ ಸ್ವಾಧಿಷ್ಠಾನಚಕ್ರದಲ್ಲಿ ಗಣೇಶನೊಡನೆ ಮನೋಲಯ ಮಾಡುತ್ತಾರೆ. ಆದರೆ ಯೋಗಿಗಳಲ್ಲದವರಿಗೆ, ಒಳಪ್ರಪಂಚದ ಸಂಸ್ಕಾರವನ್ನು ಉಂಟುಮಾಡಿ ಅವರೂ ಗಣೇಶನ ಅನುಗ್ರಹಕ್ಕೆ ಪಾತ್ರರಾಗಲು, ಪೃಥ್ವಿತತ್ವದ ಸೂಚಕವಾಗಿ ಮಣ್ಣನ್ನು ತೆಗೆದುಕೊಂಡು, ಅದರಲ್ಲಿ ಗಣಪತಿಯ ವಿಗ್ರಹವನ್ನು ಮಾಡಿ ಅದನ್ನು ನೀರಿನಲ್ಲಿ (ಜಲತತ್ವದಲ್ಲಿ) ಲಯಗೊಳಿಸುವುದು ಎನ್ನುವ ಯುಕ್ತಿಯಿಂದ ಸಂಪ್ರದಾಯವನ್ನು ತಂದಿದ್ದಾರೆ.

ಮನೆಯಲ್ಲಿ ಯಾವ ಸ್ಥಳದಲ್ಲಿ ಮೂರ್ತಿಯನ್ನು ಇಡಬೇಕಾಗಿರುತ್ತದೆಯೋ, ಅಲ್ಲಿ ಮಣೆಯ ಮೇಲೆ ಸ್ವಲ್ಪ ಅಕ್ಕಿಯನ್ನಿಟ್ಟು ಅದರ ಮೇಲೆ ಮೂರ್ತಿಯನ್ನಿಡಬೇಕು.

ಷೋಡಶೋಪಚಾರ ಪೂಜೆ (16 ರೀತಿಯ ಉಪಚಾರಗಳು)

ಆಸನಂ ಸ್ವಾಗತಂ ಚಾರ್ಘ್ಯಂ ಪಾದ್ಯಮಾಚಮನೀಯಕಂ। ಮಧುಪರ್ಕಾರ್ಪಣಂ ಸ್ನಾನವಸನಾಭರಣಾನಿ ಚ॥ ಸುಗಂಧಃ ಸುಮನೋ ಧೂಪೋ ದೀಪಮನ್ನೇನ ಭೋಜನಂ। ಮಾಲ್ಯಾನುಲೇಪನಂ ಚೈವ ನಮಸ್ಕಾರ ಇತಿಕ್ರಮಾತ್ ॥

೧.ಆಸನಂ ೨.ಸ್ವಾಗತಂ, ೩.ಅರ್ಘ್ಯಂ, ೪.ಪಾದ್ಯಂ,(ಆಚರಣೆಯಲ್ಲಿ ಪಾದ್ಯ ಆದ ಮೇಲೆ ಅರ್ಘ್ಯ), ೫.ಆಚಮನೀಯಕಂ। ೬.ಮಧುಪರ್ಕಾರ್ಪಣಂ, ೭.ಸ್ನಾನಂ, ೮.ವಸನ, ೯.ಆಭರಣಾನಿ ಚ ೧೦.ಸುಗಂಧಃ, ೧೧.ಸುಮನೋ ಧೂಪೋ, ೧೨.ದೀಪಂ, ೧೩.ಅನ್ನೇನಭೋಜನಂ ೧೪.ಮಾಲ್ಯಾ ೧೫. ಅನುಲೇಪನಂ ಚೈವ, ೧೬.ನಮಸ್ಕಾರ .

ಗಣೇಶನಿಗೆ ದೀಪ ಬೆಳಗುವಾಗ ಈ ಮಂತ್ರ ಪಠಿಸಿ

ಸಾಜ್ಯಂ ಚ ವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ |
ದೀಪಂ ಗ್ರಹಣ ದೇವೇಶ ತ್ರೈಲೋಕ್ಯತಿಮಿರಾಪಹಂ |
ಭಕ್ತ್ಯಾ ದೀಪಂ ಪ್ರಯಚ್ಛಾಮಿ ದೇವಾಯ ಪರಮಾತ್ಮನೇ |
ತ್ರಾಹಿ ಮಾಂ ನಿರಯಾದ್‌ ಘೋರದ್ಧೀಪಜ್ಯೋತ ||

ಗಣೇಶನಿಗೆ ಸಿಂಧೂರವನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ

ಸಿಂಧೂರಂ ಶೋಭನಂ ರಕ್ತಂ ಸೌಭಾಗ್ಯಂ ಸುಖವರ್ಧನಂ।
ಶುಭಂ ಕಾಮದಂ ಚೈವ ಸಿಂಧೂರ ಪ್ರತಿಗೃಹ್ಯತಾಂ ॥

ಗಣೇಶನಿಗೆ ಪ್ರಸಾದವನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ:

ನೈವೇದ್ಯ ಗೃಹ್ಯತಂ ದೇವ ಭಕ್ತ ಮೆ ಹಯಾಚಲಂ ಕುರು।
ಇಪ್ಸಿತಾಂ ಮೆ ವರಾಂ ದೇಹೀ ಪರಾತ್ರ ಚಾ ಪರಂ ಗತಿಂ॥
ಶರ್ಕರ ಖಾಂಡಾ ಖಾದ್ಯಾನಿ ದಾದಿ ಕ್ಷೀರ ಘೃತಾನಿ ಚಾ।
ಆಹರಾಂ ಭಾಗ್ಯ ಭೋಜ್ಯಂ ಚ ನೈವೇದ್ಯ ಪ್ರತಿಹ್ರಿಹ್ಯಾತಂ ॥

ಗಣೇಶನಿಗೆ ಹೂವಿನ ಹಾರ ಅರ್ಪಿಸುವಾಗ ಪಠಿಸಬೇಕಾದ ಮಂತ್ರ:

ಮಾಲ್ಯಾದಿನಿ ಸುಗಂಧಿನಿ ಮಲ್ಯಾದಿನಿವಾಯ್ ಪ್ರಭು।
ಮಾಯಾ ಹೃತಾನಿ ಪುಷ್ಪಾಣಿ ಗೃಹತ್ಯಂ ಪೂಜನಾಯಭೋಹ॥
ಓಂ ಸಿದ್ಧಿ-ಬುದ್ಧಿ ಶ್ರೀ ಮಹಾಗಣಾಧಿಪತೆಯೇ ನಮಃ
ಪುಷ್ಪಮಾಲಮ್ ಸಮರ್ಪಯಾಮಿ ॥

ಗಣೇಶನಿಗೆ ಹೂವಿನ ಹಾರ ಅರ್ಪಿಸುವಾಗ ಪಠಿಸಬೇಕಾದ ಮಂತ್ರ

5) ಯಜ್ಞೋಪವೀತ ಹಾಕುವಾಗ ಪಠಿಸಬೇಕಾದ ಮಂತ್ರ:

ನವಭಿಸ್ತಂತುಭಿರುಕ್ತಂ ತ್ರಿಗುಣಂ ದೇವತಮಯಂ।
ಉಪವಿತಮ್ ಮಾಯದತ್ತಂ ಗೃಹಣ ಪರಮೇಶ್ವರ॥

ಓಂ ಸಿದ್ಧಿ-ಬುದ್ಧಿ ಶ್ರೀ ಮಹಾಗಣಾಧಿಪತೆಯೇ ನಮಃ
ಯಜ್ಞೋಪವಿತಮ್ ಸಮರ್ಪಯಾಮಿ ॥

ಓಂ ಗಣಾಧಿಪಯೇ ನಮಃ’

‘ಓಂ ಉಮಾಪುತ್ರಾಯ ನಮಃ’

‘ಓಂ ವಿಘ್ನನಾಶನಾಯ ನಮಃ’

‘ಓಂ ವಿನಾಯಕಾಯ ನಮಃ’

‘ಓಂ ಈಶಪುತ್ರಾಯ ನಮಃ’

‘ಓಂ ಸರ್ವಸಿದ್ಧಿಪ್ರದಾಯ ನಮಃ’

‘ಓಂ ಏಕದಂತಾಯ ನಮಃ’

‘ಓಂ ಇಭವಕ್ತ್ರಾಯ ನಮಃ’

‘ಓಂ ಮೂಷಕವಾಹನಾಯ ನಮಃ’

‘ಓಂ ಕುಮಾರಗುರವೇ ನಮಃ’

ಎಂದು ಅಕ್ಷತೆ ಹಾಕ್ಬೇಕು.

  • ಗಣೇಶ ಚತುರ್ಥಿ: ಅಂಗ ಪೂಜೆ ಎಂದರೇನು..? ಗಣೇಶನಿಗೆ ಅಂಗ ಪೂಜೆ ಹೀಗೆ ಮಾಡಿ..!

ಸನಾತನ ಧರ್ಮದಲ್ಲಿ ಅಂಗ ಪೂಜೆ ಎನ್ನುವುದು ಧಾರ್ಮಿಕ ಪೂಜೆಗಳ ಅವಿಭಾಜ್ಯ ಅಂಗವಾಗಿದೆ. ಗಣೇಶ ಚತುರ್ಥಿ ಸೇರಿದಂತೆ ಇನ್ನಿತರ ಗಣೇಶ ಪೂಜೆ ಸಮಯದಲ್ಲಿ ಗಣೇಶನನ್ನು ಮೆಚ್ಚಿಸಲು ಭಕ್ತರು ಅಂಗ ಪೂಜೆಯನ್ನು ಕೈಗೊಳ್ಳುತ್ತಾರೆ. ಅಂಗ ಪೂಜೆಯಲ್ಲಿ ಭಗವಾನ್‌ ಗಣೇಶನ ದೇಹದ ಪ್ರತಿಯೊಂದು ಭಾಗವನ್ನು ಮಂತ್ರಗಳೊಂದಿಗೆ ಪೂಜಿಸಲಾಗುತ್ತದೆ.

ಗಣೇಶ ಚತುರ್ಥಿ ಸಮಯದಲ್ಲಿ ಗಣೇಶ ಭಕ್ತರು ಗಣೇಶನ ಆಶೀರ್ವಾದವನ್ನು ಪಡೆಯಲು ಏಕ ವಿಂಶತಿ ಗಣೇಶ ಪೂಜೆಯೊಂದಿಗೆ ಮತ್ತು ಷೋಡಶೋಪಚಾರ ಗಣೇಶ ಪೂಜೆಯೊಂದಿಗೆ ಅಂಗ ಪೂಜೆಯನ್ನು ಕೂಡ ಅರ್ಪಿಸುತ್ತಾರೆ. ಹಾಗಾದರೆ ಅಂಗ ಪೂಜೆ ಮಾಡುವುದು ಹೇಗೆ..?

ಅಂಗ ಪೂಜೆಯಲ್ಲಿ ಗಣೇಶನ ಪ್ರತಿಯೊಂದು ಭಾಗಕ್ಕೂ ಈ ಮಂತ್ರಗಳೊಂದಿಗೆ ಪೂಜೆಯನ್ನು ಸಲ್ಲಿಸಬೇಕು:

1) ಗಣೇಶ ಚತುರ್ಥಿಯಂದು ಗಣೇಶನಿಗೆ ಅಂಗ ಪೂಜೆಯನ್ನು ಮಾಡುವಾಗ ಕಾಲುಗಳನ್ನು ಈ ಮಂತ್ರದಿಂದ ಪೂಜಿಸಿ.

ಓಂ ಗಣೇಶ್ವರಾಯ ನಮಃ ಪಾದೌ ಪೂಜಯಾಮಿ|

ಓಂ ವಿಘ್ನರಾಜಾಯ ನಮಃ ಜಾನುನು ಪೂಜಯಾಮಿ

ಓಂ ಆಕುವಾಹನಾಯ ನಮಃ – ಊರೂಃ ಪೂಜಯಾಮಿ

ಓಂ ಹೇರಂಭಾಯ ನಮಃ – ಕಟಿಂ ಪೂಜಯಾಮಿ

ಓಂ ಕಾಮಾರಿಸೂನವೇ ನಮಃ – ನಾಭಿಂ ಪೂಜಯಾಮಿ

ಓಂ ಲಂಬೋದರಾಯ ನಮಃ – ಉದರಂ ಪೂಜಯಾಮ

ಓಂ ಗೌರಿಸುತಾಯ ನಮಃ – ಸ್ಥನೌ ಪೂಜಯಾಮಿ

ಓಂ ಗಣನಾಥಾಯ ನಮಃ – ಹೃದಯಂ ಪೂಜಯಾಮಿ

ಓಂ ಸ್ಥೂಲ ಕಂಠಾಯ ನಮಃ – ಕಂಠಂ ಪೂಜಯಾಮಿ

ಓಂ ಪಾಶ ಹಸ್ತಾಯ ನಮಃ – ಸ್ಕಂಧೌ ಪೂಜಯಾಮಿ

ಓಂ ಗಜವಕ್ತ್ರಾಯ ನಮಃ – ಹಸ್ತಾನ ಪೂಜಯಾಮಿ

ಓಂ ಸ್ಕಂದಾಗ್ರಜಾಯ ನಮಃ – ವಕ್ತ್ರಂ ಪೂಜಯಾಮಿ

ಓಂ ವಿಘ್ನರಾಜಾಯ ನಮಃ – ಲಲಾಟಂ ಪೂಜಯಾಮಿ

ಓಂ ಸರ್ವೇಶ್ವರಾಯ ನಮಃ – ಶಿರಃ ಪೂಜಯಾಮಿ

ಓಂ ಗಣಾಧಿಪತಾಯ ನಮಃ – ಸರ್ವಾಂಗಾಣಿ ಪೂಜಯಾಮಿ

ಈ ಮೇಲಿನ ಮಂತ್ರಗಳನ್ನು ಬಳಸಿಕೊಂಡು ಗಣೇಶನ ಅಂಗಪೂಜೆಯನ್ನು ನೆರವೇರಿಸುವುದು ಗಣೇಶ ಪೂಜೆಯ ಪದ್ಧಿತಿಯಾಗಿದೆ. ಈ ವಿಧಿ – ವಿಧಾನಗಳ ಮೂಲಕ ನೀವು ಗಣೇಶ ಚತುರ್ಥಿಯಂದು ಗಣೇಶನ ಅಂಗ ಪೂಜೆಯನ್ನು ಮಾಡಬಹುದು.

ಸಾಧ್ಯವಾದಷ್ಟು ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿಯು ಪೂಜೆಗೆ ವಿಹಿತವಾಗಿರುವುದು.ಅಂದ ಚೆಂದದ ರಾಸಾಯನಿಕ ಬಣ್ಣಗಳನ್ನು ಬಳಿಸಿದ ಆಡಂಬರದ ಪೂಜೆಗಿಂತ ಸಾತ್ವಿಕ ಪೂಜೆಯಾಗಿರಲಿ.

  • ಸ್ವಾತಂತ್ರ್ಯ ಸಂಗ್ರಾಮದ ಐಕ್ಯತೆಯ ಪ್ರತೀಕ ಗಣೇಶೋತ್ಸವ :

ಗಣಪತಿಯು ನಮ್ಮನ್ನು ದಾಸ್ಯದಿಂದ ಬಿಡುಗಡೆ ಮಾಡಲು ಶಕ್ತಿ ಗಣಪತಿಯಾಗಿ ಪ್ರೇರಣೆಯನ್ನು ನೀಡಿ ಸ್ವಾತಂತ್ರ್ಯವನ್ನು ತಂದು ಕೊಟ್ಟವನು.

ganesh chaturthi

ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಉತ್ಸವವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಸಾರ್ವಜನಿಕ ಗಣೇಶ ಉತ್ಸವವನ್ನ . ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡವುವ ಸಾಧನವಾಗಿ ಬಳಸಿಕೊಂಡರು. 1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೆಬ್ ಲಕ್ಷ್ಮಣ್ ಜವೇಲ್ ಅವರು ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರಾದರೂ, 1893ರಲ್ಲಿ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.

ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಲೋಕಮಾನ್ಯ ತಿಲಕರು, ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆ ಮ‌ೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಸಮರ್ಪಕವಾಗಿ ಬಳಸಿಕೊಂಡರು.

ಒಟ್ಟಾರೆಯಾಗಿ ಈ ಗಣೇಶ ಚತುರ್ಥಿ ಉತ್ಸವವು ಬೇಡಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಆರಾಧನೆ.

ಸರ್ವರಿಗೂ ಸಂಕಷ್ಟಗಳನ್ನು ದೂರಮಾಡಲಿ, ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಃ।