Saturday, 23rd November 2024

ಗಂಗೆ ಇನ್ನೂ ಕೊಳಕಾಗಿಯೇ ಇರುವುದಕ್ಕೆ ಐದು ಕಾರಣಗಳು

ಅಭಿವ್ಯಕ್ತಿ

ಅಭಯ್ ಮಿಶ್ರಾ, ಪರಿಸರ 

ಗಂಗಾ ನದಿಯನ್ನು ಸ್ವಚ್ಛಗೊಳಿಸುವ ವಿಚಾರ ರಾಜಕೀಯ ಘೋಷಣೆ, ಭರವಸೆ ಹಾಗೂ ಸಾಧನೆಯ ಜಂಭ ಕೊಚ್ಚಿಕೊಳ್ಳುವು ದರಲ್ಲಿ ಕಳೆದುಹೋದಂತೆ ಕಾಣಿಸುತ್ತಿದೆ.

ಗಂಗಾ ನದಿಯ ಸ್ವಚ್ಛತೆಯ ಬಗ್ಗೆ ಸಾಕಷ್ಟು ‘ಕಲ್ಪಿತ ಸತ್ಯ’ಗಳನ್ನು ಸೃಷ್ಟಿಸಿ ಹೇಳಿದ ಮೇಲೂ ಗಂಗೆ ಎಂದಿನಂತೆ ಕೊಳಕಾಗಿಯೇ ಹರಿಯುತ್ತಿದ್ದಾಳೆ. ಹಾಗಿದ್ದರೆ ಸೋಕಾಲ್ಡ್‌ ಗಂಗಾ ನದಿಯ ಪುನರುಜ್ಜೀವನವನ್ನು ತಡೆಯುತ್ತಿರುವ ಸಂಗತಿಯಾದರೂ ಯಾವುದು? ನದಿಯ ಸ್ವಚ್ಛಂದ ಹರಿಗೆ ಇವತ್ತಿಗೂ ಅಡ್ಡಿಯಾಗಿರುವ ಐದು ಪ್ರಮುಖ ಕಾರಣಗಳನ್ನಿಲ್ಲಿ ನೋಡೋಣ.

ಪರಿಸರ ಕಾಳಜಿಗೆ ತಿಲಾಂಜಲಿ: ಗಂಗಾ ನದಿಯಿಂದ ಆದಾಯ ಬರುವಂತೆ ಮಾಡಲು ‘ಅರ್ಥ ಗಂಗಾ’ (ಗಂಗಾ ಆರ್ಥಿಕತೆ) ಎಂಬ
ಹೊಸ ಚಿಂತನೆಯನ್ನು ಕೇಂದ್ರ ಸರಕಾರ ಹರಿಬಿಟ್ಟಿತು. ಗಂಗಾ ನದಿಯ ಸ್ವಚ್ಛತೆಗೆ ಯೋಜನೆ ರೂಪಿಸುವವರು ಗಂಗಾ ನದಿಯ
ನಿಜವಾದ ಅರ್ಥವನ್ನೇ ತಿಳಿದುೊಳ್ಳುವಲ್ಲಿ ವಿಫಲರಾಗಿರುವುದನ್ನು ಇದು ತೋರಿಸುತ್ತದೆ. ಗಂಗಾ ನದಿ ತನ್ನ ಹರಿವಿನುದ್ದಕ್ಕೂ 40
ಕೋಟಿಗೂ ಹೆಚ್ಚು ಭಾರತೀಯರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜೀವನೋಪಾಯ ಕಲ್ಪಿಸುತ್ತಿದೆ ಎಂಬುದೇನೋ ನಿಜ. ಆದರೆ, ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಈ ನದಿಯನ್ನು ಯಾವತ್ತೂ ಯಾರೂ ಕೇವಲ ಆರ್ಥಿಕ ದೃಷ್ಟಿಯಿಂದ ನೋಡಿದ
ಉದಾಹರಣೆ ಇಲ್ಲ. ಆದರೆ, ‘ಅರ್ಥ ಗಂಗಾ’ ಚಿಂತನೆಯನ್ನು ಒಪ್ಪಿಕೊಳ್ಳುವ ಮೂಲಕ ಈ ನದಿಯ ರಕ್ಷಣೆಯ ಹೊಣೆ ಹೊತ್ತವರು
ನದಿಯ ಹಣೆಬರಹವನ್ನೂ ಒಪ್ಪಿಕೊಂಡಂತೆ ಕಾಣಿಸುತ್ತದೆ.

ಪುರಾಣದಲ್ಲಿ ಹೇಳುವಂತೆ ಗಂಗಾ ನದಿ ಮತ್ತೆ ಯಾವತ್ತಾದರೂ ಒಂದು ದಿನ ಸ್ವರ್ಗಕ್ಕೆ ಮರಳುತ್ತದೆ ಎಂದು ಆಸ್ತಿಕರು  ನಂಬು ತ್ತಾರೆ. ಹೀಗಾಗಿ ಅದು ಭೂಮಿಯ ಮೇಲೆ ಇದ್ದಷ್ಟು ದಿನ ಅದನ್ನೊಂದು ಸರಕಿನಂತೆ ನೋಡಿದರೆ ಸಾಕು ಎಂದು ಇವರೆಲ್ಲ ಭಾವಿಸಿ ದ್ದಾರೆಯೇ? ಗಂಗಾ ನದಿಯಲ್ಲಿ ಜಲಮಾರ್ಗ ನಿರ್ಮಿಸುವುದು, ಡಾಲ್ಫಿನ್ ಪ್ರವಾಸೋದ್ಯಮದ ಅಭಿವೃದ್ಧಿ, ನೀಲಿ ಕ್ರಾಂತಿ ಮುಂತಾದ ಯೋಜನೆಗಳ ಮೂಲಕ ನರೇಂದ್ರ ಮೋದಿ ಸರಕಾರ ಗಂಗಾ ನದಿಯನ್ನು ಅದರ ಪ್ರಾಚೀನ ರೂಪದಲ್ಲಿ ಪುನರು ಜ್ಜೀವನಗೊಳಿಸುವ ಬದಲು ಈ ನದಿಯಿಂದ ಆದಾಯ ಗಳಿಸಲು ಹೆಚ್ಚು ಒತ್ತು ನೀಡುತ್ತಿದೆ ಎಂಬ ಸಂದೇಶ ರವಾನಿಸಿದಂತಾಗಿದೆ.

ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಯೋಜನೆಯಲ್ಲಿ ಕೇಂದ್ರ ಸರಕಾರ ಈಗಲೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ
(ಸಿಪಿಸಿಬಿ) ಅಭಿವೃದ್ಧಿಪಡಿಸಿರುವ ನೀರಿನ ಗುಣಮಟ್ಟ ಮಾಪಕದಲ್ಲೇ ಸಿಲುಕಿದೆಯೇ ಹೊರತು ‘ಗಂಗತ್ವ’ ಎಂಬ ಉದಾತ್ತ
ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ತಯಾರಿಲ್ಲ. ‘ಗಂಗತ್ವ’ ಎಂಬುದು ಕೇವಲ ಸ್ವಚ್ಛ ನೀರಿಗೆ ಸಂಬಂಧಿಸಿದ್ದಲ್ಲ ಎಂಬುದನ್ನು ತಿಳಿದುಕೊಳ್ಳಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಂತ, ‘ಗಂಗತ್ವ’ ಎಂಬುದೊಂದು ಇದೆ ಎಂದೇನೋ ಸರಕಾರ ಮತ್ತು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಆದರೆ, ಅದನ್ನು ನದಿ ಪುನರುಜ್ಜೀವನ ಯೋಜನೆಯ ಭಾಗವನ್ನಾಗಿ ಮಾತ್ರ ಮಾಡಿ ಕೊಳ್ಳುವುದಿಲ್ಲ. ಏಕೆಂದರೆ, ಗಂಗತ್ವವನ್ನು ರಕ್ಷಿಸಲು ಒಪ್ಪಿಕೊಂಡರೆ ಗಂಗಾ ನದಿಯಿಂದ ಆದಾಯ ಪಡೆಯುವ ಯೋಚನೆ ಯನ್ನು ಕೈಬಿಟ್ಟು, ನದಿಯನ್ನು ಅದರ ಹಳೆಯ ಪವಿತ್ರ ರೂಪದಲ್ಲೇ ಪರಿಗಣಿಸಿ ಸಂರಕ್ಷಣೆ ಮಾಡಬೇಕಾಗುತ್ತದೆ. ಇದಕ್ಕೆೆ ಸರಕಾರ ತಯಾರಿಲ್ಲ.

ಇದೇ ಕಾರಣಕ್ಕಾಗಿ ಸರಕಾರದ ಆಡಳಿತ ಯಂತ್ರವು ನದಿಯ ಪ್ರಾಯೋಗಿಕ ವ್ಯಾಖ್ಯಾನಕ್ಕೇ ಒತ್ತು ಕೊಡುತ್ತದೆ. ಅದರ ಪ್ರಕಾರ
ಗಂಗಾ ನದಿಯ ಮಹತ್ವ ಅದರ ನೀರಿನಲ್ಲಿ ಅನಾದಿ ಕಾಲದಿಂದ ನೈಸರ್ಗಿಕವಾಗಿರುವ ಬ್ಯಾಕ್ಟೀರಿಯಾನಾಶಕ ಗುಣ, ಔಷಧೀಯ
ಗುಣ ಅಥವಾ ಅದರ ನೈಸರ್ಗಿಕ ಹರಿನಲ್ಲಿ ಇಲ್ಲ. ಬದಲಿಗೆ ಈ ನದಿಯ ಮಹತ್ವ ‘ಗಂಗಾ ಆರ್ಥಿಕತೆ’ಯಲ್ಲಿದೆ ಎಂಬುದು ಅವರ
ದೃಷ್ಟಿಕೋನ. ಆದರೆ, ಈ ಆರ್ಥಿಕ ಉದ್ದೇಶದ ದೃಷ್ಟಿಕೋನವು ತನ್ನ ಅನುಕೂಲಕ್ಕಾಗಿ ಕೆಲ ವೈಜ್ಞಾನಿಕ ವಿಚಾರಗಳನ್ನೇ ಕಡೆಗಣಿಸುತ್ತದೆ.

ಭಾಗೀರಥಿ ನದಿಯು ತನ್ನ ನೀರಿನಲ್ಲಿ ಕೇವಲ ಶೇ.10ರಷ್ಟು ಬ್ಯಾಕ್ಟೀರಿಯಾಗಳನ್ನು ಮಾತ್ರ ಇರಿಸಿಕೊಂಡಿರುತ್ತದೆ. ಇನ್ನು,
ಭೂಗೋಳದ ಪಠ್ಯದಲ್ಲಿ ವಿದ್ಯಾರ್ಥಿಗಳಿಗೆ ಗಂಗಾ ನದಿಯ ಒಟ್ಟು ಉದ್ದ 2,525 ಕಿ.ಮೀ. ಎಂದು ಬೋಧಿಸಲಾಗುತ್ತದೆ. ಆದರೆ,
ಇಂದು ಗಂಗಾ ನದಿ ತನ್ನ ನೈಸರ್ಗಿಕ ಹರಿವನ್ನು ಉಳಿಸಿಕೊಂಡಿರುವುದು ಕೇವಲ 80 ಕಿ.ಮೀ. ಮಾತ್ರ ಎಂದು ಯಾರೂ
ಹೇಳುವುದಿಲ್ಲ. ಈ ನೈಸರ್ಗಿಕ ಹರಿವನ್ನು ಹಾಗೇ ಉಳಿಸಿಕೊಂಡು ಇನ್ನಷ್ಟು ವಿಸ್ತರಿಸಲು ಹೊಸ ಪರಿಸರ ವಲಯಗಳನ್ನು
ಸೃಷ್ಟಿಸಬೇಕಾಗುತ್ತದೆ. ಅದು ಸರಕಾರದ ‘ಗಂಗಾ ಆರ್ಥಿಕತೆ’ಗೆ ವಿರುದ್ಧವಾಗಿದೆ.

ನದಿಯ ಹರಿವಿನ ದತ್ತಾಂಶ, ಮತ್ತದರ ವಿಶ್ಲೇಷಣೆ: ಸಿಪಿಸಿಬಿ ದಾಖಲೆಗಳ ಪ್ರಕಾರ ಉತ್ತರಾಖಂಡದಲ್ಲಿ 18 ಪ್ರಮುಖ ತ್ಯಾಜ್ಯ
ಕಾಲುವೆಗಳು ನೇರವಾಗಿ ಗಂಗಾ ನದಿಗೆ ಬಂದು ಸೇರುತ್ತವೆ. ಆದರೆ, ನಮಾಮಿ ಗಂಗೆ ಯೋಜನೆಯನ್ನು ಜಾರಿಗೊಳಿಸುತ್ತಿರುವ  ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ (ಎನ್‌ಎಂಸಿಜಿ) ಪ್ರಕಾರ ಈ ತ್ಯಾಜ್ಯ ಕಾಲುವೆಗಳ ಸಂಖ್ಯೆೆ 141. ಕೇವಲ ಹರಿದ್ವಾರದಲ್ಲೇ ಇಂತಹ 22 ತ್ಯಾಜ್ಯ ಕಾಲುವೆಗಳು ಗಂಗಾ ನದಿಗೆ ಸೇರುತ್ತವೆ ಎಂದು ಎನ್‌ಎಂಸಿಜಿ ಹೇಳುತ್ತದೆ. ಆದರೆ, ಹರಿದ್ವಾರದಲ್ಲಿ ಇವುಗಳ ಸಂಖ್ಯೆ ಕೇವಲ 3 ಎಂದು ಸಿಪಿಸಿಬಿ ಹೇಳುತ್ತದೆ. ನಾವೀಗ ಗಣಿತದ ಈ ಕಲ್ಪವನ್ನು ಡೀಕೋಡ್ ಮಾಡಲು ಯತ್ನಿಸೋಣ. ಸಿಪಿಸಿಬಿ ‘ದೊಡ್ಡ ತ್ಯಾಜ್ಯ ಕಾಲುವೆ’ ಅಂದರೆ ಏನು ಎಂಬುದನ್ನು ತನ್ನ ನಿಯಮಗಳಲ್ಲಿ ವ್ಯಾಖ್ಯಾನಿಸುವುದಿಲ್ಲ. ಆದರೆ, ಎನ್‌ಎಂಸಿಜಿ ಎಲ್ಲಾ ಸಣ್ಣ ಮತ್ತು ದೊಡ್ಡ ಕಾಲುವೆಗಳನ್ನೂ ತನ್ನ ಸಮೀಕ್ಷೆಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಈ ಲೆಕ್ಕಾಚಾರದ ವಿಧಾನ ದಲ್ಲೇ ಸಮಸ್ಯೆೆಯಿದೆ, ಏಕೆಂದರೆ ಇದರಲ್ಲಿ ನೈಸರ್ಗಿಕ ಜಲಪಾತಗಳೂ ಸೇರುತ್ತವೆ. ಇನ್ನು, ಸಿಪಿಸಿಬಿ ತನ್ನ ಲೆಕ್ಕಾಚಾರದಲ್ಲಿ ಸಾಮಾನ್ಯ ಕಾಲುವೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅದರ ಪ್ರಕಾರ ಹರ್ ಕಿ ಪೌರಿ ಗಂಗಾ ನದಿಯೇ ಅಲ್ಲ. ಹಾಗಾಗಿ ಹರ್ ಕಿ ಪೌರಿಗೆ ಬಂದು ಸೇರುವ ಸಾಕಷ್ಟು ತ್ಯಾಜ್ಯ ಕಾಲುವೆಗಳನ್ನು ಅದು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.

ಇನ್ನು, ಹರಿದ್ವಾರದ ಹರ್ ಕಿ ಪೌರಿಯಲ್ಲೇ ದೇಶದ ಮೂಲೆಮೂಲೆಯಿಂದ ಬರುವ ಅಸಂಖ್ಯ ಭಕ್ತಾದಿಗಳ ಎಲ್ಲಾ ರೀತಿಯ ಪುಣ್ಯಸ್ನಾನಗಳೂ ನಡೆಯುತ್ತವೆ ಎಂಬುದು ಸಂಪೂರ್ಣ ಬೇರೆಯದೇ ವಿಚಾರ. ದೇಶದಲ್ಲಿ ತ್ಯಾಜ್ಯ ಕಾಲುವೆಗಳ ಮೇಲೆ ನಿಗಾ ವಹಿಸುವ ಪರಮೋಚ್ಚ ಸಂಸ್ಥೆ ಸಿಪಿಸಿಬಿ ಆಗಿರುವುದರಿಂದ ಅದು ನೀಡುವ ದತ್ತಾಂಶಗಳನ್ನೇ ಅಧಿಕೃತವೆಂದು ಪರಿಗಣಿಸ ಬೇಕಾಗುತ್ತದೆ. ಆದರೆ, ಗಂಗಾ ನದಿಯ ಸ್ವಚ್ಛತೆಗೆ ರೂಪಿಸಿರುವ ಯೋಜನೆಗಳಲ್ಲಿ ತಳಮಟ್ಟದಲ್ಲಿ ಎನ್‌ಎಂಸಿಜಿ ಬಳಿಯಿರುವ ದತ್ತಾಂಶಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಈ ವೈರುಧ್ಯ ಅಥವಾ ವ್ಯತ್ಯಾಸವನ್ನು ಗುರುತಿಸದಿದ್ದರೆ ಈ ಸಮಸ್ಯೆ ಬಗೆಹರಿಯುವುದೇ ಇಲ್ಲ. ಆಗ ತ್ಯಾಜ್ಯ ಕಾಲುವೆಗಳ ನೀರು ಗಂಗಾ ನದಿಗೆ ಹರಿಯದಂತೆ ತಡೆಯುವುದೂ ಸಾಧ್ಯವಾಗುವುದಿಲ್ಲ. ಇನ್ನು, ಎಲ್ಲಾ ತ್ಯಾಜ್ಯ ಕಾಲುವೆಗಳೂ – ವಿಶೇಷವಾಗಿ ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಲ್ಲಿನ ತ್ಯಾಜ್ಯ ಕಾಲುವೆಗಳು – ಗಂಗಾ ನದಿಗೆ ಸಮಸ್ಯೆ ಉಂಟುಮಾಡುತ್ತಿಲ್ಲ  ಎಂಬು ದನ್ನು ಎನ್ ಎಂಸಿಜಿ ಗಮನಿಸಬೇಕು. ತೀರಾ ಇತ್ತೀಚಿನವರೆಗೂ ಜನರು ನದಿ ಮತ್ತು ನಾಲೆ (ಕಾಲುವೆ)ಯನ್ನು ಒಟ್ಟೊ ಟ್ಟಿಗೇ ನದಿ-ನಾಲೆ ಎಂದು ಒಂದೇ ಉಸಿರಿನಲ್ಲಿ ಹೇಳುತ್ತಿದ್ದರು.

ಯಾವಾಗ ನಾಲೆಯು ನಗರ ಪ್ರದೇಶಗಳ ಚರಂಡಿ ವ್ಯವಸ್ಥೆಯ ತ್ಯಾಜ್ಯವನ್ನು ಸೇರಿಸಿಕೊಂಡು ಹರಿಯಲು ಆರಂಭಿಸಿತೋ ಆಗ ಅದಕ್ಕೆ ಕುಖ್ಯಾತಿ ಬಂತು. ಹೀಗಾಗಿ ಸರಕಾರವು ಗುಡ್ಡಗಾಡು ಪ್ರದೇಶಗಳಲ್ಲಿ ನಗರ ಪ್ರದೇಶಗಳ ತ್ಯಾಜ್ಯ ಕಾಲುವೆ ಮತ್ತು ಹಿಮಾಲಯದ ಕಾಲುವೆ (ತೊರೆ)ಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುವ ಅಗತ್ಯವಿದೆ.

ಪರಿಸರದ ಬದಲು ಬಿಸಿನೆಸ್ಸಿಗೇ ಹೆಚ್ಚು ಒತ್ತು

ಗಂಗಾ ನದಿ ಉಳಿಸುವ ಯೋಜನೆಯ ಒಂದು ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಾಜೆಕ್ಟ್‌ ಡಾಲ್ಫಿನ್’ ಘೋಷಿಸಿ ದ್ದಾರೆ. ಈ ಯೋಜನೆಯ ಜಾರಿ ಮತ್ತು ಪ್ರಚಾರದ ಹೊಣೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಮೇಲಿದೆ. ನಿಜ ಹೇಳಬೇಕೆಂದರೆ, ಪರಿಸರ ಸಚಿವಾಲಯಕ್ಕೆ ಪ್ರಾಜೆಕ್ಟ್‌ ಡಾಲ್ಫಿನ್ ಯೋಜನೆಯ ಬಗ್ಗೆೆ ಕಿಂಚಿತ್ತೂ ಆಸಕ್ತಿಯಿಲ್ಲ. ಏಕೆಂದರೆ ಈ ಯೋಜನೆಯು ಪರಿಸರ ಪರಿಣಾಮ ಅಧ್ಯಯನ (ಇಐಎ)ದ ಪ್ರಾಮುಖ್ಯತೆಯನ್ನು ಕಡೆಗಣಿಸಿ ಕಾರ್ಪೊರೇಟ್ ಕುಳಗಳನ್ನು ಖುಷಿಪಡಿಸುವುದಕ್ಕೆಂದೇ ಘೋಷಿಸಿದಂತಿದೆ.

ಇಷ್ಟಕ್ಕೂ ಪರಿಸರ ಸಚಿವಾಲಯದಿಂದ ಈ ಹಿಂದೆ ಘೋಷಿತವಾದ ಯಾವುದೇ ಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಆಗ, ಪರಿಸರ ಸಂರಕ್ಷಣೆ ಕೇವಲ ನೆಪಕ್ಕಷ್ಟೇ ಹೊರತು ಯೋಜನೆಗಳ ಪ್ರಮುಖ ಉದ್ದೇಶ ವ್ಯಾಪಾರ ಹಾಗೂ ವಾಣಿಜ್ಯವೇ ಆಗಿರು ತ್ತದೆ ಎಂಬುದು ನಿಮಗೆ ತಿಳಿಯುತ್ತದೆ. ಇನ್ನು, ಗಂಗಾ ನದಿಯ ಶುದ್ಧೀಕರಣದಲ್ಲಿ ತಳಮಟ್ಟದಲ್ಲಿರುವ ಸಮಸ್ಯೆ ಅಥವಾ ವಾಸ್ತವಗಳನ್ನು ಗಮನಿಸೋಣ. ನದಿಗೆ ತ್ಯಾಜ್ಯ ಕಾಲುವೆಯ ನೀರು ಹರಿಸುವ ಮುನ್ನ ಅದನ್ನು ಶುದ್ಧೀಕರಿಸಲು ತ್ಯಾಜ್ಯ ಶುದ್ಧೀ ಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

ಇಂತಹ ತ್ಯಾಜ್ಯ ಶುದ್ಧೀಕರಣ ಘಟಕ (ಎಸ್‌ಟಿಪಿ)ಗಳು ಒಂದೊಂದು ಕಡೆ ಒಂದೊಂದು ಸಾಮರ್ಥ್ಯದಲ್ಲಿ ಅಗತ್ಯವಿರಬಹುದು.
ಉದಾಹರಣೆಗೆ, ದಿನಕ್ಕೆ 1 ಕೋಟಿ ಲೀಟರ್ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕ ದೆಹಲಿಗೆ ಬಹಳ ಸಣ್ಣದಾಯಿತು, ಆದರೆ
ಉತ್ತರಾಖಂಡಕ್ಕೆ ಅದು ಬಹಳ ದೊಡ್ಡದಾಯಿತು. ಆದರೆ, ಇದರ ಬಗ್ಗೆ ನಿಯಮಗಳನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವ ಪರಿಸರ ಸಚಿವಾಲಯ ಇಡೀ ದೇಶಕ್ಕೆ ಈ ಘಟಕಗಳ ಸಾಮರ್ಥ್ಯವನ್ನು ಒಂದೇ ರೀತಿಯಲ್ಲಿರಿಸಿದೆ. ಹೀಗಾಗಿ ಸಹಜವಾಗಿಯೇ ಈ
ನಿಯಮಗಳು ತಳಮಟ್ಟದ ಅಗತ್ಯಕ್ಕೆ ಹೊಂದುವಂತಿರುವುದಿಲ್ಲ. ತ್ಯಾಜ್ಯ ಕಾಲುವೆಗೆ ಹರಿಯುವ ಕೊಳಚೆಯನ್ನು ಮೂಲದಲ್ಲೇ
ಶುದ್ಧೀಕರಿಸಿ ಬಿಡುವ ವ್ಯವಸ್ಥೆೆ ಬೇಕೇ ಹೊರತು ನದಿಯವರೆಗೆ ಅದು ಹರಿದು ಬರಲು ಬಿಡಬಾರದು.

ಶಿವನ ನದಿಗಿಂತ ಸರಕಾರದ ಚರಂಡಿಯೇ ಪವರ್‌ಫುಲ್!
ನಾವು ಚರಂಡಿಯ ಬಗ್ಗೆ ಮಾತನಾಡುತ್ತಿರುವುದರಿಂದ ಅವುಗಳ ಸಾಮರ್ಥ್ಯ ಹಾಗೂ ಪರಿಣಾಮವನ್ನೂ ಅರ್ಥ ಮಾಡಿಕೊಳ್ಳುವುದು ಮುಖ್ಯ. ಕಾನ್ಪುರದ ಟಿ.ವಿ. ಆಸ್ಪತ್ರೆಯಿಂದ ನೇರವಾಗಿ ಗಂಗಾ ನದಿಗೆ ಬಂದು ಬೀಳುವ ಚರಂಡಿಯ ನೀರಿನ ಪ್ರಮಾಣ ಎಷ್ಟು ಅಗಾಧವಾಗಿ  ಅಂದರೆ ಅದರ ಮುಂದೆ ನದಿಯ ನೈಸರ್ಗಿಕ ನೀರನ್ನು ಪತ್ತೆಹಚ್ಚುವುದಕ್ಕೇ ಸಾಧ್ಯವಿಲ್ಲ.

ಕಾರ್ಖಾನೆಗಳಿಂದ ಬಂದು ಸೇರುವ ಚರಂಡಿ ನೀರೂ ಗಂಗೆಯನ್ನು ಮಲಿನಗೊಳಿಸುತ್ತದೆ ಎಂಬುದು ನಿಜವೇ ಆಗಿದ್ದರೂ, ಸರಕಾರದ ನಿಗಾದಲ್ಲಿ ನಿರ್ವಹಣೆಯಾಗುವ ಒಳಚರಂಡಿಗಳೇ ನದಿಗೆ ಅದಕ್ಕಿಂತ ಹೆಚ್ಚು ಕೊಳಕು ತ್ಯಾಜ್ಯವನ್ನು ತಂದು ಸೇರಿಸು ತ್ತವೆ. ಸಾಕಷ್ಟು ಬಾರಿ ಸರಕಾರ ಅಂತಹ ಒಳಚರಂಡಿಗಳನ್ನು ಬಂದ್ ಮಾಡುವುದಾಗಿ ಹೇಳಿದೆ. ಆದರೆ, ಯಾವತ್ತೂ ಆ ಕೆಲಸ ಮಾಡಿಲ್ಲ. ಅವುಗಳನ್ನು ಮುಚ್ಚುವುದಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. 126 ವರ್ಷ ಹಳೆಯದಾದ ಸಿಸಾಮೌ ಚರಂಡಿ ಯನ್ನು ಬಂದ್ ಮಾಡಿಸಿ ಸಾಕಷ್ಟು ಹೊಗಳಿಕೆ ಪಡೆದ ಮೋದಿ ಸರಕಾರ ಈಗ ಮತ್ತೆ ಆ ಚರಂಡಿಯ ನೀರು ಮೊದಲಿನಂತೆಯೇ
ನದಿಗೆ ಬಂದು ಸೇರತೊಡಗಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಗಂಗೆಯನ್ನು ಸ್ವಚ್ಛಗೊಳಿಸಲು ಯಾವುದೇ ಅಡ್ಡದಾರಿ ಗಳು ಇಲ್ಲ. ಇಂತಹ ಚರಂಡಿಗಳ ನೀರು ಗಂಗಾ ನದಿಗೆ ಬಂದು ಸೇರುವುದನ್ನು ತಪ್ಪಿಸಲು ಇಡೀ ಚರಂಡಿ ವ್ಯವಸ್ಥೆೆಯನ್ನೇ ಬಂದ್
ಮಾಡಿ, ಸಂಪೂರ್ಣ ಹೊಸತಾದ ಒಳಚರಂಡಿ ವ್ಯವಸ್ಥೆಯನ್ನು ಸರಕಾರ ನಿರ್ಮಾಣ ಮಾಡಬೇಕಾಗುತ್ತದೆ. ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಟೆಂಪಲ್ ಕಾರಿಡಾರ್ ಯೋಜನೆಯಡಿಹೇಗೆ ಹೊಚ್ಚಹೊಸತಾಗಿ ಎಲ್ಲವನ್ನೂ ನಿರ್ಮಿಸಲಾಗುತ್ತಿದೆಯೋ ಹಾಗೆ
ಇಲ್ಲೂ ಮಾಡಬೇಕು.

ಅಧಿಕಾರಶಾಹಿ ಎಂಬ ಬೆನ್ನಿಗಂಟಿದ ಶಾಪ
ನಮ್ಮ ದೇಶದಲ್ಲಿ ಅಧಿಕಾರಿಗಳಿಗೆ ಇರುವ ಕುತ್ಸಿತ ಬುದ್ಧಿವಂತಿಕೆಯ ಬಗ್ಗೆೆ ಹಿಂದಿಯ ಪ್ರಸಿದ್ಧ ಡಂಬನ ಬರಹಗಾರ ಹರಿಶಂಕರ್ ಪಾಸೈರ್ ಬಹಳ ಚೆನ್ನಾಗಿ ಬರೆಯುತ್ತಾರೆ. ಒಂದು ಶಾರ್ಕ್ ಹಾಗೂ ಅಧಿಕಾರಿಯ ನಡುವೆ ಒಮ್ಮೆ ಜಗಳ ನಡೆಯಿತಂತೆ. ಆಗ ಅಧಿಕಾರಿಗೆ ಸಿಟ್ಟು ಬಂತು. ಶಾರ್ಕ್ ಅತ್ಯಂತ ಬುದ್ಧಿವಂತ ಹಾಗೂ ವೇಗವಾದ ಪ್ರಾಣಿಯಲ್ಲವೇ? ಶಕ್ತಿಯಲ್ಲೂ ಅದಕ್ಕೆ ಸರಿಸಮನಾದ ಪ್ರಾಣಿ ಇನ್ನೊೊಂದಿಲ್ಲ. ಆದರೂ ಅಧಿಕಾರಿ ಸಮುದ್ರಕ್ಕೆ ಜಿಗಿದು, ತನ್ನ ದವಡೆಯಲ್ಲಿ ಶಾರ್ಕನ್ನೇ ಕಚ್ಚಿಕೊಂಡು ನೀರಿನಿಂದ ಮೇಲಕ್ಕೆ ಎಳೆದುಕೊಂಡು ಬಂದೆ ಎಂದು ಹೇಳಿ ಯಾರನ್ನೋ ನಂಬಿಸಿದ್ದನಂತೆ!

ಅಧಿಕಾರಿ ವರ್ಗ ಎಷ್ಟು ಚಾಣಾಕ್ಷವಾಗಿರುತ್ತದೆ ಅಂದರೆ ಅವರು ಬೇಕಾದರೆ ಗಂಗಾ ನದಿ ಈಗಾಗಲೇ ಸಂಪೂರ್ಣ ಸ್ವಚ್ಛವಾಗಿದೆ ಎಂದು ಸರಕಾರಕ್ಕೆ ಮನವರಿಕೆ ಮಾಡಿಕೊಡಬಲ್ಲರು. ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಎಸ್‌ಟಿಪಿ ಅತ್ಯದ್ಭುತವಾಗಿ ಕೆಲಸ ಮಾಡುತ್ತಿದೆಯೆಂದೂ, ಸಿಸಾಮೌನಲ್ಲಿ ಬಂದ್ ಮಾಡಿರುವ ದೊಡ್ಡ ಒಳಚರಂಡಿ ಈಗ ಪ್ರವಾಸಿಗರಿಗೆ ಸೆಲ್ಫಿ ಪಾಯಿಂಟ್ ಆಗಿದೆಯೆಂದೂ, ಗಂಗಾನದಿಯ ನೀರೆಲ್ಲ ವ್ಯರ್ಥವಾಗಿ ಸಮುದ್ರಕ್ಕೆ ಹೋಗಿ ಸೇರುತ್ತಿರುವು ದರಿಂದ ಅದನ್ನು ಹಿಡಿದಿಡಲು  ಇನ್ನಷ್ಟು ಅಣೆಕಟ್ಟೆೆಗಳನ್ನು ಕಟ್ಟಬೇಕೆಂದೂ ಅವರು ಮಂತ್ರಿಗಳಿಗೆ ಮನವರಿಕೆ ಮಾಡಿಕೊಡ ಬಲ್ಲರು.

ಮನುಷ್ಯನಿಂದ ನದಿಗಳನ್ನು ಸೃಷ್ಟಿಸಲು ಸಾಧ್ಯವೆಂದು ಈಗಾಗಲೇ ಅಧಿಕಾರಿಗಳು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಈಗಾಗಲೇ ಸಬರಮತಿ ನದಿಯನ್ನು ಸೃಷ್ಟಿಸಿ, ಸರಸ್ವತಿ ನದಿಯನ್ನು ಪುನರ್ ಸೃಷ್ಟಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿ ದ್ದಾರೆ. ಅದೇ ರೀತಿ ಅವರು ಗಂಗಾ ನದಿಯನ್ನೂ ಪುನರುಜ್ಜೀವನಗೊಳಿಸಬಲ್ಲರು.