Thursday, 5th December 2024

ಚಂದನವನದಲ್ಲಿ ಗಾಂಜಾ ಬೆಳೆಯದಿರಿ

ವಿದ್ಯಮಾನ
ಚಂದ್ರಶೇಖರ ಬೇರಿಕೆ

ಕೆಲವರಿಗೆ ಖ್ಯಾತಿ ಎಂಬುದು ವಂಶಪಾರಂಪರ್ಯದಿಂದ ಬಂದರೆ ಇನ್ನೂ ಕೆಲವರು ಸ್ವಂತ ಪರಿಶ್ರಮದಿಂದ ಗಳಿಸುತ್ತಾರೆ. ಈ ಪೈಕಿ ಕೆಲವರು ಖ್ಯಾತಿಯನ್ನು ಕೊನೆಯವರೆಗೆ ಉಳಿಸಿಕೊಳ್ಳಲು ಶ್ರಮಿಸಿದರೆ ಇನ್ನೂ ಕೆಲವರಿಗೆ ಗಳಿಸಿದ ಖ್ಯಾತಿಯನ್ನು ಉಳಿಸಿಕೊಳ್ಳುವ
ಯೋಗ್ಯತೆಯೇ ಇರುವುದಿಲ್ಲ.

ಖ್ಯಾತಿಯನ್ನು ಗಳಿಸಿದಕ್ಕಿಿಂತ ವೇಗವಾಗಿ ಅಪಖ್ಯಾತಿಗೊಳಗಾಗುತ್ತಾರೆ. ಖ್ಯಾತಿ ಗಳಿಸಲು ಅಪಾರ ಪರಿಶ್ರಮ ಮತ್ತು ಕೆಲವು ವರ್ಷಗಳೇ ಬೇಕಾಗಬಹುದು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಕುಖ್ಯಾತಿಯಾಗಬಹುದು. ಇಂತಹವರಿಗೆ ಖ್ಯಾತಿ ಮತ್ತು ಕುಖ್ಯಾತಿಯ ವ್ಯತ್ಯಾಸವೇ ಗೊತ್ತಿಲ್ಲ ಎಂಬುದಕ್ಕೆೆ ಪ್ರಸಕ್ತ ವಿದ್ಯಮಾನವೇ ಸಾಕ್ಷಿ.

ಸಾಮಾನ್ಯವಾಗಿ ಮಾದಕ ವಸ್ತುವಿನ ಬಳಕೆ, ಅದರ ಜಾಲ ಹಾಗೂ ಶಿಕ್ಷಣ ಸಂಸ್ಥೆೆಗಳಲ್ಲೂ ಮಾದಕ ವಸ್ತುಗಳ ಹಾವಳಿಯ
ಬಗ್ಗೆೆ ವರದಿಯಾಗುತ್ತಲೇ ಇದೆ. ಆದರೆ ಈ ಬಾರಿ ಅದು ನೇರವಾಗಿ ಕನ್ನಡ ಚಿತ್ರರಂಗದ ಕೆಲವು ಕಲಾವಿದರೊಂದಿಗೆ ಸಂಪರ್ಕ ಬೆಸೆದುಕೊಂಡಿದ್ದು, ಪರದೆಯ ಹಿಂದಿನ ಕೆಲವರ ಜೀವನ ಮತ್ತು ಮುಖವಾಡ ಅನಾವರಣಗೊಂಡಿದೆ. ಕನ್ನಡ ಚಿತ್ರರಂಗದಲ್ಲಿ ನೈತಿಕತೆ ಮತ್ತು ಆದರ್ಶವಿಲ್ಲದ ಕೆಲವರು ಮಾಡುವ ಇಂತಹ ನಾಚಿಕೆಗೇಡಿನ ಕೆಲಸಗಳಿಂದ ಚಂದನವನದ ಘನತೆಗೆ ಧಕ್ಕೆೆ ಯಾಗಿದೆ, ಅವಮಾನ ಎದುರಿಸುವಂತಾಗಿದೆ. ಕನ್ನಡದ ಹಲವು ಮಹಾನ್ ನಟ ಸಾಧಕರು ಶ್ರಮಿಸಿ ಬೆಳೆಸಿದ ಚಂದನವನ ಎಂಬ ಚಿತ್ರರಂಗದ ಹೆಸರು ಹಾಳುಗೆಡವಿದ್ದು ಅಕ್ಷಮ್ಯ. ಇದು ಸಾಧಕರ ಪರಿಶ್ರಮಕ್ಕೆ ಮಾಡಿದ ಅವಮಾನವೇ ಸರಿ. ಮಾದಕ ವಸ್ತುವಿನ ಚಟದಲ್ಲಿರುವವರು ಕೇವಲ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತವಾಗಿಲ್ಲ.

ಎಲ್ಲಾ ಭಾಷೆಗಳ ಚಿತ್ರರಂಗದಲ್ಲೂ ಇದರ ಹಾವಳಿಯಿದ್ದು, ಬಾಲಿವುಡ್‌ನಲ್ಲಿ ಈ ಮಾದಕ ವಸ್ತುವಿನ ಘಾಟು ಆಗಾಗ್ಗೆೆ ಜೋರಾಗಿಯೇ ಹೊಡೆಯುತ್ತಿದೆ. ಅಂತರಾಷ್ಟ್ರೀಯ ಡ್ರಗ್‌ಸ್‌ ಸಂಪರ್ಕವೂ ಬಯಲಾಗುತ್ತಿದೆ. ಈ ದಂಧೆಯ ಡ್ರಗ್ ಪೆಡ್ಲರ್‌ಗಳ ಜೊತೆ ಚಿತ್ರರಂಗ ಹೊರತಾಗಿ ಗಣ್ಯ ವ್ಯಕ್ತಿಗಳು, ಕೆಲವು ರಾಜಕಾರಣಿಗಳು, ಇನ್ನು ಕೆಲವು ರಾಜಕಾರಣಿಗಳ ಮಕ್ಕಳು, ಉದ್ಯಮಿಗಳ ಹೆಸರುಗಳೂ ಬಯಲಾಗುತ್ತಿರುವುದನ್ನು ಗಮನಿಸಿದಾಗ ಒಟ್ಟಾರೆ ವ್ಯವಸ್ಥೆೆಯೇ ಹದಗೆಟ್ಟಿರುವಂತೆ ಭಾಸವಾಗುತ್ತಿದೆ. ಮಾದಕ
ವ್ಯಸನ, ಸಾಮಾಜಿಕ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ಮತ್ತು ನಟನೆಯ
ಮೂಲಕ ಉತ್ತಮ ಸಂದೇಶ ಸಾರಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಮಹೋನ್ನತ ಸಾಮಾಜಿಕ
ಜವಾಬ್ದಾರಿ ಹೊತ್ತು ಸಮಾಜಕ್ಕೆೆ ಮಾದರಿಯಾಗಿರಬೇಕಾದ ಕಲಾವಿದರೇ ಮಾದಕ ಜಾಲ ಮತ್ತು ಚಟಕ್ಕೆೆ ಅಂಟಿಕೊಂಡಿರುವುದು ವಿಡಂಬನೆ ಮಾತ್ರವಲ್ಲದೆ ನಟನೆಯ ಖ್ಯಾತಿಯಿಂದ ಅಪಖ್ಯಾತಿಗೆ ಈಡಾಗಿದ್ದು ದುರಂತ.

ಸೆಲೆಬ್ರಿಟಿಗಳನ್ನು ಅಭಿಮಾನಿಗಳು ಬಹಳ ವೇಗವಾಗಿ ಅನುಕರಣೆ ಮಾಡುತ್ತಾರೆ. ನಟನೆಯಂತೆ ನಿಜ ಜೀವನದಲ್ಲೂ ಆದರ್ಶ ಮೆರೆಯಬೇಕಾದ ಇವರುಗಳು ಯುವ ಸಮೂಹಕ್ಕೆ ಪ್ರೇರಣೆ ಮತ್ತು ಸ್ಪೂರ್ತಿಯಾಗಿದ್ದು, ಇಂತವರು ಕಾನೂನು ಬಾಹಿರ ಕೃತ್ಯಗಳಲ್ಲಿ ಗುರುತಿಸಿಕೊಂಡರೆ ಯುವ ಸಮೂಹ ಇವರನ್ನೇ ಅನುಕರಿಸಿ ಸಮಾಜ ದಾರಿ ತಪ್ಪುತ್ತದೆ ಎಂಬ ಕನಿಷ್ಟ
ತಿಳುವಳಿಕೆ, ಚಿಂತನೆಯಾದರೂ ಇರಬೇಕಲ್ಲವೇ? ಇವರಿಂದ ಮುಂದಿನ ಪೀಳಿಗೆಗೆ ಯಾವ ಸಂದೇಶ ರವಾನೆಯಾಗುತ್ತದೆ?
ಇವರೊಂದಿಗೆ ಯುವಜನತೆಯೂ ದಾರಿ ತಪ್ಪುತ್ತಿರುವುದು ನೋವಿನ ಸಂಗತಿ.

ಗಾಂಜಾದಂತಹ ಮಾದಕ ವಸ್ತುಗಳನ್ನು ಸಾಮಾನ್ಯವಾಗಿ ಸಾರ್ವಜನಿಕರ ಚಲನವಲನ ಇಲ್ಲದ ಪ್ರದೇಶಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ, ಅಂಚಿನಿಂದ ಕಿಲೋಮೀಟರ್ ದೂರದಲ್ಲಿರುವ ಕಾಡಿನ ಒಳ ಪ್ರದೇಶದಲ್ಲಿ ಬೆಳೆಯುತ್ತಾರೆ. ಮುಖ್ಯವಾಗಿ ಹಿಮಾಚಲ ಪ್ರದೇಶ, ಕಾಶ್ಮೀರ, ಉತ್ತರಾಂಚಲ್ ಮತ್ತು ಅರುಣಾಚಲ ಪ್ರದೇಶದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ಬೆಳೆ ಬೆಳೆಯುವುದು ಕಂಡು ಬರುತ್ತಿದ್ದವು. ಆದರೆ ಈಗ ಕರ್ನಾಟಕದಲ್ಲೂ ಇಂತಹ ಬೆಳೆಗಳು ಕಂಡು ಬರುತ್ತದೆ. ಅಲ್ಲದೇ ಭಾರತದಲ್ಲಿ ಬೆಳೆದು ವಿದೇಶಗಳಿಗೆ ಮಾರಾಟ ಮಾಡುವ ವರದಿಗಳೂ ಇವೆ. ತೋಳು, ಹಣ, ಅಧಿಕಾರದ ಬಲ ಇರುವವರು ತಮ್ಮ ತೋಟದಲ್ಲೇ ಬೆಳೆಸಿಕೊಂಡು ಈ ಬಗ್ಗೆೆ ಎಲ್ಲೂ ಬಯಲಾಗದಂತೆ ತಮ್ಮ ನೆರೆಹೊರೆಯವರಿಗೆ ಧಮ್ಕಿ ಹಾಕಿಕೊಂಡು ನಿಭಾಯಿಸುವವರೂ ಇದ್ದಾರೆ. ಮಿಗಿಲಾಗಿ ನಗರ ಪ್ರದೇಶಗಳಲ್ಲಿ ಮನೆಯ ಮುಂಭಾಗ ಹೂವಿನ ಕುಂಡದಲ್ಲಿಯೂ ಗಾಂಜಾ ಬೆಳೆದ ಪ್ರಕರಣಗಳೂ ವರದಿಯಾಗಿವೆ.

ಸಾಮಾನ್ಯವಾಗಿ ಭಾರತದಲ್ಲಿ ಒಂದು ಎಕರೆ ಹೊಲದಲ್ಲಿ ಸಾಂಪ್ರದಾಯಿಕ ಪದ್ದತಿಯಲ್ಲಿ 25 ರಿಂದ 30 ಕ್ವಿಿಂಟಾಲ್ ಭತ್ತವನ್ನು ಬೆಳೆಯಬಹುದಾಗಿದ್ದು, 1 ಕ್ವಿಿಂಟಾಲ್ ಭತ್ತಕ್ಕೆ 1,500 ರಿಂದ 1,800 ವರೆಗೆ ಮಾರುಕಟ್ಟೆೆ ಬೆಲೆಯಿದ್ದರೆ, 1 ಕಿ.ಗ್ರಾಾಂ. ಗಾಂಜಾವನ್ನು ಬೇಡಿಕೆಯನ್ನು ಆಧರಿಸಿ 22,000 ದಿಂದ 50,000 ವರೆಗೆ ಮಾರಾಟ ಮಾಡಬಹುದು ಎಂಬ ವಿಶ್ಲೇಷಣೆಯಿದೆ. ಅಂದರೆ 1 ಎಕರೆ ಭೂಮಿಯಲ್ಲಿ ಬೆಳೆದ ಗಾಂಜಾದಿಂದ ಗಳಿಸುವ ಸಂಪಾದನೆ ಹಲವು ಲಕ್ಷಗಳು. ಡ್ರಗ್‌ಸ್‌ ದಂಧೆಯಲ್ಲಿ ನಡೆಯುವ ವ್ಯವಹಾರ ಸಾವಿರಾರು ಕೋಟಿಗಳದ್ದಾಗಿದ್ದು, ಅಲ್ಪ ಸಮಯದಲ್ಲಿ ಶ್ರೀಮಂತನಾಗಬಹುದು, ಐಷಾರಾಮಿ ಕಾರು, ಬಂಗಲೆ ಖರೀದಿಸಬಹುದು, ವಿಲಾಸಿ ಜೀವನ ನಡೆಸಬಹುದು.

ಔಷಧಿಗಳ ಉತ್ಪಾದನೆಯಲ್ಲಿ ಭಾರತ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಔಷಧ ತಯಾರಕಾ ಕಂಪನಿಗಳಿಗೆ ಔಷಧಿಗಳ ಉತ್ಪಾದನೆಗೆ ಉಪಯುಕ್ತವಾಗಿ ಬೇಕಾದ ಡ್ರಗ್ಗಳ ನಿಯಮಿತ ಬಳಕೆಗೆ ಪೂರಕವಾಗಿ ನಿಬಂಧನೆಗಳನ್ನು ವಿಧಿಸಿ ಸರಕಾರ ಪರವಾನಗಿಯನ್ನು ನೀಡುತ್ತದೆ. ಆದರೆ ಅದೇ ಪರವಾನಗಿಯನ್ನು ದುರುಪಯೋಗಪಡಿಸಿಕೊಂಡು ಕೆಲವು ಔಷಧ ತಯಾರಕಾ ಕಂಪನಿಗಳು ವಾಮ ಮಾರ್ಗದ ಮೂಲಕ ಲಾಭ ಗಳಿಸುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಡ್ರಗ್‌ಸ್‌ ದಂಧೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗಿದ್ದರೂ ಜಾಲ ನಿಯಂತ್ರಣಕ್ಕೆೆ ಬಾರದಿರುವುದು ವ್ಯವಸ್ಥೆಯಲ್ಲಿನ ಲೋಪವನ್ನು ಎತ್ತಿ ತೋರಿಸುತ್ತದೆ.

ಮಾತ್ರೆಗಳು ಮತ್ತು ಇಂಜೆಕ್ಷನ್ ರೂಪದಲ್ಲಿ ಮಾದಕ ವಸ್ತುಗಳ ಬಳಕೆಯಾಗುತ್ತಿದ್ದು, ಆನ್‌ಲೈನ್‌ನಲ್ಲೂ ಡ್ರಗ್‌ಸ್‌ ಮಾರಾಟವಾಗು
ತ್ತಿರುವ ಬಗ್ಗೆೆ ತನಿಖಾಧಿಕಾರಿಗಳು ನೀಡಿರುವ ಮಾಹಿತಿಯ ಬಗ್ಗೆ ವರದಿಯಾಗುತ್ತಿದೆ. ಅನ್ಯ ರಾಜ್ಯಗಳಿಂದ ನಮ್ಮ ರಾಜ್ಯದೊಳಗೆ ಮಾದಕ ವಸ್ತು ಪ್ರವೇಶಿಸುವಲ್ಲಿ ಅಧಿಕಾರಿಗಳು ಕೂಡಾ ಶಾಮಿಲಾಗಿರುವ ಬಗ್ಗೆೆ ಆರೋಪ ಕೇಳಿ ಬರುತ್ತಿರುವುದು ಆಘಾತಕಾರಿ. ಮಾದಕ ವ್ಯಸನಕ್ಕೆೆ ಬಲಿಯಾಗುವ ಮಧ್ಯಮ ವರ್ಗ ಮತ್ತು ಕೆಳವರ್ಗದ ವ್ಯಕ್ತಿಗಳು ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಹಣಕ್ಕಾಗಿ ಕುಟುಂಬ ಸದಸ್ಯರನ್ನೇ ಪೀಡಿಸುವುದು ಸಾಮಾನ್ಯವಾಗಿದ್ದು, ಮಾದಕ ವಸ್ತುವಿಗಾಗಿ ಮತ್ತು ಮಾದಕ ಮತ್ತಿನಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲೂ ಹೇಸುವುದಿಲ್ಲ.

ಮಾದಕ ಜಾಲ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಕೆಲವು ಸಚಿವರುಗಳ ಪರಾಕ್ರಮದ ಹೇಳಿಕೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವಂತಿಲ್ಲ. ಈ ಹಿಂದಿನ ಅದೆಷ್ಟೋ ಪ್ರಕರಣಗಳ ವಿರುದ್ಧ ಇಂತಹ ಹೇಳಿಕೆಗಳನ್ನು ಕೇಳಿದ್ದೇವೆ. ಅಲ್ಲದೇ ಸಂಬಂಧಪಟ್ಟ ಪ್ರಕರಣಗಳ ಆರೋಪಿಗಳು ಕ್ಲೀನ್‌ಚಿಟ್ ಪಡೆದು ಹೊರ ಬಂದಿರುವುದನ್ನೂ ನೋಡಿದ್ದೇವೆ. ಈ ಹಿಂದಿನ ಹಲವು ಪ್ರಕರಣಗಳಂತೆ ಈ ಪ್ರಕರಣವೂ ಮುಚ್ಚಿ ಹೋಗುವ ಸಾಧ್ಯತೆಯೇ ಹೆಚ್ಚು.

ಏಕೆಂದರೆ ಸಾರ್ವಜನಿಕರು ಎಲ್ಲವನ್ನೂ ಬಹಳ ಬೇಗ ಮರೆತು ಬಿಡುತ್ತಾರೆ ಎಂಬುದನ್ನು ಕ್ರಮ ತೆಗೆದುಕೊಳ್ಳಬೇಕಾದವರು
ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಉತ್ತರದಾಯಿತ್ವ ಮತ್ತು ಆದರ್ಶವಿಲ್ಲದ ಲಜ್ಜೆಗೆಟ್ಟ ಕೆಲವು ರಾಜಕಾರಣಿಗಳ
ಹಸ್ತಕ್ಷೇಪದಿಂದ ವಿಚಾರಣೆಯಲ್ಲಿ ತನಿಖಾಧಿಕಾರಿಗಳ ಕೈಕಟ್ಟಿದಂತಾಗುತ್ತದೆ. ಸ್ವತಂತ್ರವಾಗಿ ಕ್ರಮ ತೆಗೆದುಕೊಳ್ಳಬೇಕಾದವರು ಕಾಣದ ಕೈಗಳ ಒತ್ತಡಕ್ಕೆ ಮಣಿಯಬೇಕಾದ ಸಂದರ್ಭವೂ ಸೃಷ್ಟಿಯಾಗಿ ಇಡೀ ಪ್ರಕರಣ ದಿಕ್ಕು ತಪ್ಪುತ್ತದೆ.

ದಿನಗಳೆದಂತೆ ಪ್ರಕರಣದ ತೀವ್ರತೆಯೂ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲೇ ಇನ್ಯಾವುದೋ ಹೊಸ ಪ್ರಕರಣ ವರದಿಯಾಗಿ ಈ ಪ್ರಕರಣ ಗೆದ್ದಲು ಹಿಡಿಯುತ್ತದೆ. ನಾರ್ಕೋಟಿಕ್ ಡ್ರಗ್‌ಸ್‌ ಮತ್ತು ಸೈಕೋಟ್ರೋಪಿಕ್ ಸಬ್ ಸ್ಟೇನ್ಸಸ್ ಆಕ್‌ಟ್‌ (ಎನ್‌ಡಿಪಿಎಸ್ ಆಕ್‌ಟ್‌), 1985 ಇದು ಯಾವುದೇ ವ್ಯಕ್ತಿಯು ಮಾದಕ ವಸ್ತುವಿನ ಬಳಕೆ, ತಯಾರಿಕೆ, ಕೃಷಿ, ಸ್ವಾಧೀನ, ಮಾರಾಟ, ಖರೀದಿ, ಸಾಗಾಟ, ಸಂಗ್ರಹಣೆ ಯನ್ನು ನಿಷೇಧಿಸುತ್ತದೆ. ಹೀಗಾಗಿ ಎನ್‌ಡಿಪಿಎಸ್ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಕಠಿಣಾ ತಿಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದ್ದು, ಡ್ರಗ್‌ಸ್‌ ಪ್ರಕರಣ ದಲ್ಲಿ ಭಾಗಿಯಾದವರಿಗೆ ದೀರ್ಘಾವಧಿಯ ಕಠಿಣ ಜೈಲು ಶಿಕ್ಷೆಯಾಗಲಿದೆ. ಅಲ್ಲದೇ ಮಾದಕ ವಸ್ತುವಿನ ಅವ್ಯಹಾರದಿಂದ ಗಳಿಸಿದ ಅಕ್ರಮ ಸಂಪತ್ತಿನ ಬಗ್ಗೆೆ ಜಾರಿ  ನಿರ್ದೇಶನಾಲಯವೂ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂಬ ವರದಿಯಿದೆ.

ಆದರೆ ವರದಿಯಂತೆ ಪ್ರಕರಣದಲ್ಲಿ ಭಾಗಿಯಾದವರು ನಿಜವಾಗಿಯೂ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆಯೇ ಅಥವಾ ಭೂತಕಾಲದ ಹಲವು ಪ್ರಕರಣಗಳಂತೆ ಇಲ್ಲೂ ಕಠಿಣ ಶಿಕ್ಷೆಗಳು ಕೇವಲ ಕಾನೂನು ಪುಸ್ತಕದ ಸೆಕ್ಷನ್‌ಗಳಿಗಷ್ಟೇ ಸೀಮಿತವಾಗ ಲಿದೆಯೇ ಎಂಬುದನ್ನು ಕಾಲವೇ ಉತ್ತರಿಸಲಿದೆ. ದೇಶದಲ್ಲಿ ಯಾವುದೇ ಕಾನೂನು ಬಾಹಿರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖಾಕಿ ಪಡೆಯು ಆರೋಪಿಯನ್ನು ವಶಕ್ಕೆ ಪಡೆಯುತ್ತಿರುವ ಸಂದರ್ಭದಲ್ಲಿ ಅಂತಹ ಆರೋಪಿಗಳ ಮುಖದಲ್ಲಿ ಭಯದ ಮುಖಭಾವ ಗೋಚರಿಸುವ ಬದಲಾಗಿ ಅಂತಹ ಆರೋಪಿಗಳು ಸಾರ್ವಜನಿಕರನ್ನು ಅಥವಾ ಮಾಧ್ಯಮದವರ ಕಡೆಗೆ ಕೈಯಲ್ಲಿ ವಿಜಯದ ಸಂಕೇತ ತೋರಿಸಿ ಕಿರುನಗೆ ಬೀರುತ್ತಾ ಬಂಧನಕ್ಕೊಳಗಾಗಿ ಪ್ರಕರಣದಿಂದ ಹೊರಬರುವ ಅವರ ಆತ್ಮವಿಶ್ವಾಸದ ಮುಖಭಾವ ವನ್ನು ಗಮನಿಸಿದಾಗ ನಮ್ಮ ಕಾನೂನುಗಳಲ್ಲಿ ಬಹಳಷ್ಟು  ಲೋಪದೋಷಗಳಿವೆ ಎಂಬುದು ಅರ್ಥವಾಗುತ್ತದೆ.

ಹಾಗೆಯೇ, ಪ್ರಕರಣದ ಆರೋಪಿಯಾಗಿ ಶಿಕ್ಷೆಗೆ ಒಳಗಾಗಬೇಕಾದ ವ್ಯಕ್ತಿಗಳು ಕಾನೂನಿನ ಲೋಪದೋಷಗಳಿಂದಲೇ ರಕ್ಷಣೆ ಪಡೆದು ನಿರಪರಾಧಿಗಳಾಗಿ ಹೊರ ಬಂದು ಇನ್ನಷ್ಟು ಪ್ರಭಾವಿಗಳಾಗಿ ಹೊರಹೊಮ್ಮುವುದರಿಂದ ವ್ಯವಸ್ಥೆೆಯ ವಿರುದ್ಧ ಸಾರ್ವಜನಿಕರು ಹತಾಶರಾಗುವುದು, ಕಾನೂನಿನ ಬಗ್ಗೆೆ ನಂಬಿಕೆ ಕಳೆದುಕೊಳ್ಳುವುದು ಸಾಮಾನ್ಯ.

ಭಾರತೀಯ ಚಲನ ಚಿತ್ರರಂಗದ ಭಾಗವಾಗಿರುವ ಕನ್ನಡ ಚಿತ್ರರಂಗವು ಗಟ್ಟಿಯಾಗಿ ನೆಲೆಯೂರಲು ಚಿತ್ರರಂಗದ ಹಲವು ಹಿರಿಯ ಸಾಧಕರು ಭದ್ರ ಬುನಾದಿಯನ್ನು ಹಾಕಿದ್ದಾರೆ, ಸಾರ್ವಜನಿಕ ಜೀವನದಲ್ಲಿ ಆದರ್ಶವನ್ನು ಮೆರೆದು ಮೇಲ್ಪಂಕ್ತಿಯನ್ನು ಹಾಕಿ ದ್ದಾರೆ. ಅವರು ಬೆಳೆಸಿದ ಚಂದನವನ ಎಂಬ ಸುಂದರ ತೋಟದಲ್ಲಿ ಗಾಂಜಾದಂತಹ ಮಾದಕ ಬೆಳೆ ಬೆಳೆಯಲು ಅವಕಾಶ ದೊರೆಯದಿರಲಿ!