Saturday, 23rd November 2024

ವೈದ್ಯಕೀಯ ಗಾಂಜಾ ಬಳಕೆ: ಎರಡಲುಗಿನ ಖಡ್ಗ !

ಹಿಂದಿರುಗಿ ನೋಡಿದಾಗ

ನಮ್ಮ ಪೂರ್ವಜರು ತಮ್ಮ ಅಲೆಮಾರಿ ಬದುಕು ತ್ಯಜಿಸಿ ಒಂದೆಡೆ ನಿಂತು ಕೃಷಿ ಚಟು ವಟಿಕೆಗಳನ್ನು ಆರಂಭಿಸಿದ ಹೊಸದರಲ್ಲಿ ಬೆಳೆದ ವಿವಿಧ ಸಸ್ಯಗಳಲ್ಲಿ ಭಂಗಿಸೊಪ್ಪು ಅಥವಾ ಗಾಂಜಾಗಿಡವೂ ಒಂದಾಗಿತ್ತು. ಜಪಾನಿನ ಓಕಿ ದ್ವೀಪದಲ್ಲಿ ಕ್ರಿ.ಪೂ. ೮೦೦೦ ವರ್ಷಗಳ ಹಿಂದೆ ಗಾಂಜಾಕೃಷಿ ನಡೆಸುತ್ತಿದ್ದವರು ಅದರ ಹೂವು-ಕಾಯಿಯನ್ನು ಆಹಾರವಾಗಿ ಬಳಸುತ್ತಿದ್ದರು. ನಾರನ್ನು ಪ್ರತ್ಯೇಕಿಸಿ ಹಗ್ಗ ಹೊಸೆಯುತ್ತಿದ್ದರು.

ಬಹುಶಃ ಗಾಂಜಾಸೇವನೆಗೂ ತೊಡಗಿದ್ದಿರಬಹುದು, ಅದು ಮೈಕೈ ನೋವು ನಿವಾರಿಸುವು ದರ ಜತೆಗೆ ಆನಂದವನ್ನೂ ನೀಡುತ್ತಿದ್ದಿ ರಬಹುದು. ‘ಚೀನಿ ವೈದ್ಯಕೀಯ ಪಿತಾಮಹ’ ಎಂದು ಹೆಸರಾಗಿದ್ದ ಪ್ರಾಚೀನ ಚೀನಿ ಸಾಮ್ರಾಟ ಶೇನ್-ನುಂಗ್, ‘ಚೀನಿ ವೈದ್ಯಕೀಯದಲ್ಲಿ ಬಳಕೆಯಲ್ಲಿರುವ ೫೦ ಪ್ರಧಾನ ಮೂಲಿಕೆಗಳಲ್ಲಿ ಭಂಗಿಯೂ ಒಂದು ಎಂದು ಹೇಳಿ, ಅದರ ವೈದ್ಯಕೀಯ ಉಪಯೋಗಗಳನ್ನು ದಾಖಲಿಸಿದ. ಮಲಬದ್ಧತೆ, ಕೀಲು ವಾತಕಿ, ರುಮಟಾಯ್ಡ್ ಆರ್ಥ್ರೈಟಿಸ್, ಮರೆಗುಳಿತನ ನಿವಾರಣೆಗೆ ಭಂಗಿಯನ್ನು ಬಳಸಬಹು ದೆಂದ.

ಅಥರ್ವವೇದದ ೧೧.೮.೧೫ನೇ ಮಂತ್ರವು ‘ಸೋಮಲತೆ, ದರ್ಭೆ, ಬಾರ್ಲಿ, ಬತ್ತ ಮತ್ತು ಭಂಗ ಎಂಬ ೫ ಸಸ್ಯಗಳು ಪವಿತ್ರ ಮತ್ತು ಪೂಜಾರ್ಹ’ ಎನ್ನುತ್ತದೆ. ಭಂಗಿಯನ್ನು ‘ಆನಂದದಾಯಕ’, ಮುಕ್ತಿಪ್ರದಾಯಕ’ ಎಂದು ಬಣ್ಣಿಸುತ್ತದೆ. ಭಂಗಿಯು ಜೀರ್ಣಶಕ್ತಿಯ ಸುಧಾರಕ, ಕಫ ನಿವಾರಕ, ಕುಷ್ಟ ಪರಿಹಾರಕ ಎನ್ನುತ್ತದೆ ಸುಶ್ರತ ಸಂಹಿತೆ. ಭಂಗಿಯು ಅಧ್ಯಾತ್ಮಿಕ ಜಗತ್ತಿಗೆ ರಹದಾರಿ ಎಂಬ ನಂಬಿಕೆಯಿಂದ ಸಾಧು-ಸಂತರು ಇಂದಿಗೂ ಭಂಗಿ ಸೇದುವುದುಂಟು.

ಭಂಗಿಯು ಭಗವಂತನಿಗೆ ಪ್ರಿಯವೆಂದೇ ಬಗೆವ ಕೆಲವರು ಹಬ್ಬ-ಹರಿದಿನಗಳಲ್ಲಿ ಭಂಗಿ ಅರೆದ ಹಾಲು (ರಾಮರಸ) ಅಥವಾ ಸಿಹಿತಿಂಡಿಯನ್ನು ಸೇವಿಸುವ ಪದ್ಧತಿಯಿದೆ. ಭಾರತಕ್ಕೆ ಬಂದ ಬ್ರಿಟಿಷರು ಭಂಗಿಯಿಂದ ಆಕರ್ಷಿತರಾಗಿ ಅಧ್ಯಯನಗಳಿಗೆ ಮುಂದಾದರು. ೧೮೩೯ರಲ್ಲಿ ಕಲ್ಕತ್ತದಲ್ಲಿ ಅಸಿಸ್ಟೆಂಟ್ ಸರ್ಜನ್ ಮತ್ತು ಕಲ್ಕತ್ತ ಮೆಡಿಕಲ್ ಕಾಲೇಜಿನಲ್ಲಿ ರಸಾಯನ ವಿಜ್ಞಾನದ ಪ್ರಾಚಾರ್ಯನಾಗಿದ್ದ ಸರ್ ವಿಲಿಯಂ ಬ್ರೂಕ್ ಓ’ಶಾಘ್ನೆಸಿ ಭಂಗಿಯ ಬಗ್ಗೆ ಕುತೂಹಲಗೊಂಡು ಅದರ ವೈದ್ಯಕೀಯ ಉಪ ಯೋಗಗಳ ಬಗ್ಗೆ ಅಧ್ಯಯನ ನಡೆಸಿದ.

ಕಾರ್ಗಿಲ್ ಹುತಾತ್ಮರಿಗೆ ನಮಿಸೋಣ…ಇದನ್ನು ಓದಿ

http://vishwavani.news/ankanagalu/kargil_martyrs/

ಭಂಗಿಯಿಂದ ರುಮಾಟಿಕ್ ಕಾಯಿಲೆಯ ಕೀಲು ನೋವನ್ನು ಗುಣಪಡಿಸಿದ. ಸೆಳವು ಬಂದ ಮಗುವೊಂದಕ್ಕೆ ಈತ ರಕ್ತನಾಳ ಚುಚ್ಚುಮದ್ದಿನ ರೂಪದಲ್ಲಿ ಭಂಗಿಯನ್ನು ನೀಡಿದಾಗ ಸೆಳವು ನಿಂತಿತು. ಧನುರ್ವಾಯು ಮತ್ತು ಹುಚ್ಚು ನಾಯಿ ಕಾಯಿಲೆಗೊಳ ಗಾಗಿ ಸ್ನಾಯು ಸೆಡೆತದಿಂದ ವಿಪರೀತ ನೋವು ಅನುಭವಿಸುತ್ತಿದ್ದವರ ಮೇಲೆ ಭಂಗಿಯನ್ನು ಪ್ರಯೋಗಿಸಿ ಸೆಡೆತವನ್ನು ತಗ್ಗಿಸಿದ. ಇದರಿಂದ ಆ ಕಾಯಿಲೆ ಗಳು ಗುಣವಾಗದಿದ್ದರೂ, ಅವರು ಅನುಭವಿಸುತ್ತಿದ್ದ ಹಿಂಸೆ ತಗ್ಗಿತು. ಕೆಮ್ಮನ್ನು, ಪಾರ್ಕಿನ್ಸನ್ ಕಾಯಿ ಲೆಯ ಕಂಪನ್ನು ನಿಯಂತ್ರಿಸುವ, ಮೈಕೈ ನೋವು ತಗ್ಗಿಸುವ, ಋತುನೋವನ್ನು ನಿಗ್ರಹಿಸುವ, ಮೈಗ್ರೇನ್ ತಲೆನೋವನ್ನು ನಿವಾರಿಸುವ ಔಷಧವಾಗಿ ಭಂಗಿಯನ್ನು ಜನಪ್ರಿಯಗೊಳಿಸಿದ ಓ’ ಶಾಘ್ನೆಸಿ, ಭಂಗಿಯ ಬಗ್ಗೆ ತಾನು ನಡೆಸಿದ್ದ ವೈದ್ಯಕೀಯ ಸಂಶೋಧನೆಯನ್ನು ಇಂಗ್ಲೆಂಡ್‌ನಲ್ಲಿ ಪ್ರಚುರಪಡಿಸಿದ.

ಭಂಗಿಯಲ್ಲಿ ೪೦೦ಕ್ಕೂ ಹೆಚ್ಚು ರಾಸಾಯನಿಕಗಳಿದ್ದು, ಇವು ಗಳಲ್ಲಿ ಕೆನಾಬಿನಾಯ್ಡ್ ವರ್ಗದ ೭೦ಕ್ಕೂ ಹೆಚ್ಚು ಘಟಕಗಳಿವೆ. ಈ ಘಟಕಗಳು ಭಂಗಿಯ ಎಲ್ಲ ಸುಲಕ್ಷಣ-ದುರ್ಲಕ್ಷಣಗಳಿಗೂ ಕಾರಣವಾಗಿವೆ. ಈ ಎಲ್ಲ ರಾಸಾಯನಿಕಗಳ ವಿಸ್ತೃತ ಅಧ್ಯಯನ ನಡೆಯಬೇಕಿದೆ. ನಮ್ಮ ದೇಹದಲ್ಲಿ ರಾಸಾಯನಿಕ ಕ್ರಿಯೆಗಳು ನಡೆಯಲು ನೆರವಾಗುವ ಗ್ರಾಹಕಗಳು (ರೆಸೆ ಪ್ಟಾರ್ಸ್), ಅವನ್ನು ಪ್ರಚೋದಿಸಬಲ್ಲ ಬಂಧಕಗಳು (ಲಿಗ್ಯಾಂಡ್ಸ್) ಇದ್ದು, ಇವು ಕ್ರಮವಾಗಿ ಬೀಗ ಮತ್ತು ಬೀಗದ ಕೈನಂತೆ ಕೆಲಸ ಮಾಡುತ್ತವೆ. ಬೀಗದೊಳಗೆ ಬೀಗದಕೈ ಸೇರಿಕೊಳ್ಳುತ್ತಿದ್ದಂತೆ ಉದ್ದೇಶಿತ ರಾಸಾಯನಿಕ ಕ್ರಿಯೆ ಆರಂಭವಾಗುತ್ತದೆ.

೧೯೮೦ರ ದಶಕದಲ್ಲಿ ನಡೆದ ಸಂಶೋಧನೆಗಳಿಂದಾಗಿ ನಮ್ಮ ದೇಹದಲ್ಲಿ ಕೆನಾಬಿನಾಯ್ಡ್ ಗ್ರಾಹಕಗಳಿರುವ ವಿಷಯ ಮೊದಲ ಬಾರಿಗೆ ತಿಳಿಯಿತು. ಕೆನಾಬಿನಾಯ್ಡ್ ಅಂದರೆ ‘ಭಂಗಿಯಲ್ಲಿರುವ ರಾಸಾಯನಿಕಗಳನ್ನು ಬಂಧಕ ರೂಪದಲ್ಲಿ ಸ್ವೀಕರಿಸಬಲ್ಲ ಗ್ರಾಹಕಗಳು’ ಎಂದರ್ಥ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆದು, ಇವುಗಳಲ್ಲಿ ಸಿಬಿ-೧ ಮತ್ತು ೨ ಕೆನಾಬಿನಾಯ್ಡ್ ಗ್ರಾಹಕಗಳು ಮುಖ್ಯವಾದವು ಎಂದು ಗೊತ್ತಾಯಿತು. ಪ್ರಧಾನವಾಗಿ ನಮ್ಮ ಮಿದುಳಿನಲ್ಲಿರುವ ಸಿಬಿ-೧. ಶ್ವಾಸಕೋಶ, ಯಕೃತ್ತು ಮತ್ತು ಮೂತ್ರಪಿಂಡಗಳಲ್ಲೂ ಇರುತ್ತವೆ. ಸಿಬಿ-೨ ದೇಹದ ಪಾರ್ಶ್ವವಲಯದಲ್ಲಿರುತ್ತವೆ.

ನಮ್ಮ ದೇಹದಲ್ಲಿ ಸಹಜ ಕೆನಾಬಿನಾಯ್ಡ್ ಗ್ರಾಹಕಗಳನ್ನು ಪ್ರಕೃತಿ ಸೃಜಿಸಿದೆ ಎಂದ ಮೇಲೆ, ಅವನ್ನು ಪ್ರಚೋದಿಸಬಲ್ಲ ಸಹಜ
ಬಂಧಕಗಳೂ ಇರಬೇಕೆಂದು ವಿಜ್ಞಾನಿಗಳು ತರ್ಕಿಸಿ, ೧೯೯೨ ರಲ್ಲಿ ‘ಆನಂದಮೈಡ್’ನ್ನು ಗುರುತಿಸಿದರು. ‘ಆನಂದ’ ಎಂಬುದು ಸಂಸ್ಕೃತ ಶಬ್ದ. ಆನಂದ ನೀಡುವ ಈ ಗ್ರಾಹಕಕ್ಕೆ ಸಂಸ್ಕೃತದ ಈ ಹೆಸರನ್ನೇ ಆಯ್ಕೆಮಾಡಿಕೊಂಡರು ರಫೆಲ್ ಮ್ಯಾಕ್ ಹೌಲಮ್, ಡಬ್ಲ್ಯು.ಎ. ಡೆವೆನ್ ಮತ್ತು ಲ್ಯೂಮಿರ್ ಹಾನಸ್. ಈ ಆನಂದಮೈಡ್ ಬಂಧಕವು ಮಿದುಳು ಹಾಗೂ ದೇಹದ ಹೊರವಲಯ ಗಳಲ್ಲಿರುವ ಕೆನಾಬಿನಾಯ್ಡ್ ಗ್ರಾಹಕ ಗಳನ್ನು ಪ್ರಚೋದಿಸಿ ಆನಂದದ ಅನುಭವ ನೀಡುತ್ತಿತ್ತು. ನಂತರದ ಸಂಶೋಧನೆಗಳಿಂದ, ದೇಹದಲ್ಲೇ ಹುಟ್ಟುವಂಥ ಆನಂದಮೈಡ್ ತರಹದ ಬಂಧಕಗಳು, ಭಂಗಿಯಲ್ಲಿರುವ ಟೆಟ್ರಾಹೈಡ್ರೋಕೆನಾಬಿನಾಲ್ (ಟಿಎಚ್‌ಸಿ) ಮುಂತಾದ ಸಸ್ಯಜನ್ಯ ಬಂಧಕಗಳು ಮತ್ತು ಪ್ರಯೋಗಾಲಯದಲ್ಲಿ ಸೃಜಿಸಿದ ಎಚ್‌ಯು-೨೧೦ನಂಥ ಸಂಯೋಜಿತ ಕೆನಾಬಿ ನಾಯ್ಡುಗಳು ಎಂಬ ೩ ರೀತಿಯ ಬಂಧಕಗಳ ಮೂಲಗಳು ಪತ್ತೆಯಾದವು.

ಪ್ರಬಲ ರಾಸಾಯನಿಕವಾದ ಟಿಎಚ್‌ಸಿ ರಕ್ತಪ್ರವಾಹದ ಮೂಲಕ ಮಿದುಳಿನ ಸೆರೆಬ್ರಲ್ ಕಾರ್ಟೆಕ್ಸ್, ಸೆರೆಬೆಲ್ಲಮ್ ಮತ್ತು ಬೇಸಲ್ ಗ್ಯಾಂಗ್ಲಿಯಗಳಲ್ಲಿರುವ ಕೆನಾಬಿನಾಯ್ಡ್ ಗ್ರಾಹಕಗಳಿಗೆ ಅಂಟಿಕೊಳ್ಳುತ್ತದೆ. ಮಿದುಳಿನ ಈ ಭಾಗಗಳು ನಮ್ಮ ಚಿಂತನಾಶಕ್ತಿ, ಸ್ಮರಣಶಕ್ತಿ, ಆನಂದಾನುಭವ, ಶರೀರದ ವಿವಿಧ ಅಂಗಗಳ ಹೊಂದಾಣಿಕೆ ಹಾಗೂ ಚಲನವಲನವನ್ನು ನಿಯಂತ್ರಿಸುತ್ತವೆ. ಟಿಎಚ್‌ಸಿ ಈ ಭಾಗಗಳನ್ನು ಪ್ರಚೋದಿಸುವುದರಿಂದ ವೈದ್ಯಕೀಯ ಚಿಕಿತ್ಸೆಯಲ್ಲಿ ಭಂಗಿಯ ಬಳಕೆಗೆ ಅನುಮತಿಸಬೇಕೆಂಬ ಕೂಗು ಹಲವು ದೇಶಗಳಲ್ಲಿ ಹೊಮ್ಮಿತು.

ಭಂಗಿಯಿಂದ ಪ್ರತ್ಯೇಕಿಸಿದ ವಿವಿಧ ರಾಸಾಯನಿಕಗಳನ್ನು ಒಳಗೊಂಡ ಔಷಧಗಳು ಮಾರುಕಟ್ಟೆಗೆ ಬಂದವು. ಭಂಗಿಯ ಅಂಶವಿರುವ ಗುಳಿಗೆ, ಕ್ಯಾಪ್ಸೂಲು, ಪೆಪ್ಪರ್‌ಮಿಂಟು, ಸ್ಪ್ರೇ, ಧೂಮಪಾನ ಸಾಧನ, ತಿನಿಸು, ನಶ್ಯ ಹಾಗೂ ಚರ್ಮಕ್ಕೆ ಅಂಟಿಸುವ ಪ್ಯಾಚು ಹೀಗೆ ನಾನಾ ರೂಪ ಗಳಲ್ಲಿ ದೊರೆಯಲಾರಂಭಿಸಿದವು. ಆದರೆ ಇವುಗಳ ಅಧಿಕೃತ ಬಳಕೆಯ ಬಗ್ಗೆ ಭಾರಿ ಗೊಂದಲ, ವಿವಾದ ಶುರುವಾದವು. ಇದಕ್ಕೆ ಕಾರಣಗಳಿದ್ದವು. ಈ ಭಂಗಿ ಔಷಧಗಳಲ್ಲಿ ನಿಗದಿತ ಪ್ರಮಾಣಬದ್ಧತೆ ಇರಲಿಲ್ಲ. ಇವುಗಳ ಉಪಯುಕ್ತತೆಯ ಬಗ್ಗೆ ಗಂಭೀರ ಅಧ್ಯಯನಗಳು ನಡೆದಿರಲಿಲ್ಲ. ಈ ಔಷಧಗಳನ್ನು ಯಾವ ಡೋಸಿನಲ್ಲಿ, ಎಷ್ಟು ದಿನ ಬಳಸ ಬೇಕು ಎಂಬ ಬಗ್ಗೆ ಒಮ್ಮತವಿರಲಿಲ್ಲ. ಸೇವನಾವಧಿಯಲ್ಲಿ ಇವು ಯಾವುದೇ ಗಂಭೀರ ಪಾರ್ಶ್ವಪರಿಣಾಮ ಉಂಟುಮಾಡುವುದಿಲ್ಲ ಎಂಬ ಭರವಸೆಯಿರಲಿಲ್ಲ.

ಹಾಗಾಗಿ ವೈದ್ಯಲೋಕ ಈ ಔಷಧ ಗಳನ್ನು ಮುಕ್ತ ಮನಸ್ಸಿನಿಂದ ಬಳಸಲು ಮುಂದೆ ಬರಲಿಲ್ಲ. ಜತೆಗೆ ಕಾನೂನಿನ ತೊಡಕು ಗಳಿದ್ದವು. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿಯು (ಎಫ್ ಡಿಎ) ಭಂಗಿಯನ್ನು ನಿರ್ಬಂಧಿತ ಅನುಬಂಧ-೧ರ ಪಟ್ಟಿಯಲ್ಲಿ ಸೇರಿಸಿತ್ತು. ಈ ಪಟ್ಟಿಯಲ್ಲಿ ವೈದ್ಯಕೀಯವಾಗಿ ಉಪಯುಕ್ತವಲ್ಲದ ಆದರೆ ಸಾಕಷ್ಟು ಹಾನಿಯುಂಟುಮಾಡುವ ರಾಸಾಯನಿಕಗಳಿದ್ದವು. ಹಾಗಾಗಿ ಅಮೆರಿಕದಲ್ಲಿ ಭಂಗಿ ಬೆಳೆಯಲು, ಸಂಗ್ರಹಿಸಲು ಹಾಗೂ ಬಳಸಲು ಕಾನೂನಿನ  ಅನುಮತಿ ಯಿರಲಿಲ್ಲ (ಭಾರತದಲ್ಲೂ ಇಲ್ಲ). ಆದರೆ ಈ ಕಾನೂನು ಎಲ್ಲ ರಾಜ್ಯಗಳಿಗೆ ಅನ್ವಯಿಸುತ್ತಿರಲಿಲ್ಲ.

ಕೆಲ ರಾಜ್ಯಗಳು ಭಂಗಿಯ ವೈದ್ಯಕೀಯ ಬಳಕೆಗೆ ಅನುಮತಿಸಿದವು. ಈ ಹಿನ್ನೆಲೆಯಲ್ಲಿ ಅಮೆರಿಕದ ಎಫ್ ಡಿಎ ಭಂಗಿಯಲ್ಲಿರುವ ಪ್ರಧಾನ ರಾಸಾಯನಿಕ ಕೆನಾಬಿಡಿಯಾಲ್ (ಸಿಬಿಡಿ) ಹಾಗೂ ಭಂಗಿಯ ಹಾಗೆ ವರ್ತಿಸುವ ಸಂಯೋಜಿತ ಔಷಧಗಳಾದ ಡ್ರೋನಾ ಬಿನಾಲ್ ಮತ್ತು ನಾಬಿಲೋನ್ ಗಳಿಗೆ ಅನುಮತಿಸಿತು. ಯುರೋಪಿನ ಕೆಲ ದೇಶಗಳು ಭಂಗಿಯ ಹಾಗೆ ವರ್ತಿಸುವ ನಾಬಿಕ್ಸಿಮಾಲ್ ಎಂಬ ಸಂಯೋಜಿತ ಔಷಧಕ್ಕೆ ಅನುಮತಿಸಿದವು.

‘ವೈದ್ಯಕೀಯ ಭಂಗಿಯ ಅವಕಾಶ ನಿಯಂತ್ರಣ’ ಎಂಬ ಎಂಬ ಹೊಸ ಕಾನೂನು ರಚಿಸಿದ ಕೆನಡಾ, ವೈದ್ಯಕೀಯ ಬಳಕೆಗೆಂದೇ ಭಂಗಿ ಬೆಳೆಯಿತು. ಅದನ್ನು ಬಳಸಿಕೊಂಡು ಸುಮಾರು ಶೇ. ೧೨.೫ ಟಿಎಚ್‌ಸಿ ಇರುವ ‘ಕ್ಯಾನಿಮೆಡ್’ ಎಂಬ ಔಷಧವನ್ನು ಬಿಡುಗಡೆ ಮಾಡಿತು. ಈ ಹಿನ್ನೆಲೆಯಲ್ಲಿ ನೆದರ್ಲ್ಯಾಂಡ್ ಶೇ. ೧೯ ಟಿಎಚ್‌ಸಿ ಇರುವ ‘ಬೆಡ್ರೋಕ್ಯಾನ್’ ಮತ್ತು ಶೇ.೧೨ ಟಿಎಚ್‌ಸಿ ಇರುವ ‘ಬೆಡ್ರೋಬಿನಾಲ್’ ಔಷಧಗಳನ್ನು ಸಾರ್ವಜನಿಕ ಬಳಕೆಗೆ ಅನುಮತಿಸಿತು. ಇದರ ಜತೆಗೆ ‘ವೈದ್ಯಕೀಯ ಕೆನಾಬಿಸ್’ ಹಾಗೂ ‘ವೈದ್ಯಕೀಯೇತರ ಕೆನಾಬಿಸ್’ ಪದಗಳು ಬಳಕೆಗೆ ಬಂದವು.

ತಜ್ಞ ವೈದ್ಯರು/ಆಸ್ಪತ್ರೆಯ ಉಸ್ತುವಾರಿಯಲ್ಲಿ ರೋಗಿಯ ರೋಗನಿದಾನವು ನಿಖರವಾಗಿದ್ದು, ಆತನ ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ಮೆಡಿಕಲ್ ಕೆನಾಬಿಸ್ ಗುಣಪಡಿಸುವ ಸಾಧ್ಯತೆಯಿದ್ದು, ಭಂಗಿಯ ಜತೆ ಇತರ ಪ್ರಮಾಣಬದ್ಧ ಔಷಧಿಯ ಹಾಗೂ ಔಷಧಿಯೇತರ ಚಿಕಿತ್ಸೆಗಳನ್ನು ನಿಗದಿತ ಅವಧಿವರೆಗೆ ನೀಡುವುದನ್ನು ಮೆಡಿಕಲ್ ಕೆನಾಬಿಸ್ ಎಂದು ಪರಿಗಣಿಸಿದರು. ಹಾಗಾಗಿ ಅಮೆರಿಕದ ೩೮ ರಾಜ್ಯಗಳು, ಕೆನಡ ಮತ್ತು ನೆದರ್ಲ್ಯಾಂಡ್‌ಗಳನ್ನು ಬಿಟ್ಟು ಉಳಿದೆಲ್ಲಾ ಕಡೆ ವೈದ್ಯಕೀಯ ಕೆನಾಬಿಸ್‌ಗೂ ವೈದ್ಯಕೀಯೇತರ ಕೆನಾಬಿಸ್‌ಗೂ ಅಂಥ ವ್ಯತ್ಯಾಸವೇನೂ ಇರಲಿಲ್ಲ.

ಡ್ರೋನಾಬಿನಾಲ್, ಏಡ್ಸ್ ರೋಗಿಗಳಲ್ಲಿ ಕಂಡುಬರುವ ವಾಕರಿಕೆಯನ್ನು ನಿಲ್ಲಿಸಿತು, ಅವರ ಹಸಿವನ್ನು ಹೆಚ್ಚಿಸಿತು, ಒಳ್ಳೆಯ ನಿದ್ರೆ ನೀಡಿತು. ದಿನೇ ದಿನೆ ಸಣ್ಣಗಾಗುವ ಏಡ್ಸ್ ರೋಗಿಗಳು ಸ್ವಲ್ಪಮಟ್ಟಿಗೆ ಮೈಕೈ ತುಂಬಿಕೊಳ್ಳಲು ಸಾಧ್ಯವಾಯಿತು. ಕ್ಯಾನ್ಸರ್ ಚಿಕಿತ್ಸೆ ಯಲ್ಲಿ ಕೀಮೋಥೆರಪಿ ತೆಗೆದುಕೊಳ್ಳುವ ರೋಗಿಗಳ ಬಹುದೊಡ್ದ ಸಮಸ್ಯೆಯೆಂದರೆ ವಾಕರಿಕೆ ಮತ್ತು ವಾಂತಿ. ಡ್ರೋನಾ ಬಿನಾಲ್ ಇವೆರಡನ್ನು ಸಮರ್ಪಕವಾಗಿ ನಿಯಂತ್ರಿಸಿತು.

ಮಲ್ಟಿಪಲ್ ಸ್ಕ್ಲೀರೋಸಿಸ್‌ನಿಂದ ನರಳುವವರ ಉಗ್ರ ನರಬೇನೆಯನ್ನು ಶಮನಗೊಳಿಸಿತು. ಸ್ನಾಯು ಸೆಡೆತವನ್ನು ಸಡಿಲ ಗೊಳಿಸಿತು (ಈ ಗುಣವನ್ನು ಓ’ಶಾಘ್ನೆಸಿ ಕಂಡು ಕೊಂಡಿದ್ದ), ಮೂತ್ರಾಶಯದ ಅತಿಚಟುವಟಿಕೆಯನ್ನು ನಿಯಂತ್ರಿಸಿ ಮೂತ್ರ ವಿಸರ್ಜನೆಯನ್ನು ಸರಾಗವಾಗಿಸಿತು. ಟೌರೆಟ್ ಸಿಂಡ್ರೋಮ್‌ನಲ್ಲಿ ಕಾಣುವ ಅನಿಯಂತ್ರಿತ ದೈಹಿಕ ಚಲನೆಗಳ ನಿಯಂತ್ರಣಕ್ಕೆ ನೆರವಾಯಿತು. ವೈದ್ಯಕೀಯ ಭಂಗಿಯು ನೂರಕ್ಕೆ ನೂರರಷ್ಟು ಸುರಕ್ಷಿತ ವಲ್ಲ. ಇವೂ ಅನೇಕ ಪಾರ್ಶ್ವ ಪರಿಣಾಮಗಳನ್ನು ಹೊಂದಿವೆ.

ವೈದ್ಯರು ಸೂಚಿಸಿದ ಅವಧಿಗಿಂತ ಹೆಚ್ಚು ಕಾಲ ಸೇವಿಸಿದರೆ, ಇವು ಚಟವನ್ನು ಉಂಟುಮಾಡುತ್ತವೆ. ಆ ಚಟ ಹಠಾತ್ತನೆ ತೀವ್ರ ಸ್ವರೂಪದಲ್ಲಿ ಕಂಡುಬರಬಹುದು. ಅನಿಯಂತ್ರಿತ ಸುಸ್ತು, ತಲೆಸುತ್ತು, ವಿಪರೀತ ಹಸಿವು, ಹೃದಯ ಮಿಡಿತ ಏರುಪೇರು, ಕುಗ್ಗಿದ ನೆನಪು, ಶರೀರ ಹೊಂದಾಣಿಕೆಯಲ್ಲಿ ವೈಪರೀತ್ಯ, ಯೋಗ್ಯ ತೀರ್ಮಾನ ತೆಗೆದುಕೊಳ್ಳಲಾಗದ ಸ್ಥಿತಿ, ಭ್ರಮೆ ಇತ್ಯಾದಿ ಕಂಡು ಬರಬಹುದು. ವೈದ್ಯಕೀಯ ಪ್ರಮಾಣದಲ್ಲಿ ಭಂಗಿಯ ಉತ್ಪನ್ನಗಳನ್ನು ಸೇವಿಸುವಾಗ ಕಂಡುಬರುವ ಪಾರ್ಶ್ವ ಪರಿಣಾಮಗಳು, ಸೇವನೆ ನಿಲ್ಲಿಸಿದ ಕೂಡಲೇ ತಗ್ಗುತ್ತವೆ ಹಾಗೂ ಪೂರ್ಣ ನಿಲ್ಲುತ್ತವೆ. ಆದರೆ ಅನಿಯಂತ್ರಿತವಾಗಿ ಸೇದುವವರಲ್ಲಿ ದಿನೇ ದಿನೆ ಉಗ್ರವಾಗುತ್ತಾ ಹೋಗಿ ವ್ಯಸನಕ್ಕೆ ಅವಕಾಶ ಮಾಡಿಕೊಡುತ್ತದೆ.

ಅಪಸ್ಮಾರ, ನಿದ್ರಾಹೀನತೆ, ಆತಂಕ/ಖಿನ್ನತೆ ಹೆಚ್ಚುತ್ತವೆ. ಶ್ವಾಸಕೋಶ ಉರಿಯೂತ ಬೇರೂರಬಹುದು. ಶೀಜ಼ೋಫ್ರೀನಿಯ ಉಂಟಾ ಗಬಹುದು. ಹೃದಯಘಾತ, ಲಕ್ವ, ಪಾರ್ಕಿನ್ಸನ್, ಆಲ್ಜೈಮರ್ ಕಾಯಿಲೆ ಮುಂತಾದವು ಬರಬಹುದು. ಹಾಗಾಗಿ ವೈದಕೀಯ ವಲಯದಲ್ಲಿ ವೈದ್ಯಕೀಯ ಭಂಗಿಯ ಬಳಕೆಯ ಬಗ್ಗೆ ಇಂದಿಗೂ ವಾದ-ವಿವಾದಗಳಿವೆ.