ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ೩ ಚಿತ್ರದ ಬಿಡುಗಡೆಯ ಮುನ್ನಾ ಟ್ರೈಲರ್ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರ ಇದೇ ತಿಂಗಳ
೧೪ಕ್ಕೆ ಬಿಡುಗಡೆ ಆಗ್ತಾ ಇರೋದು ಎಲ್ಲರಿಗೂ ಗೊತ್ತಿರೋ ವಿಷಯ. ಅದರಲ್ಲೂ ಈ ಚಿತ್ರ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಅನ್ನೋದನ್ನ ಒತ್ತಿ ಹೇಳಬೇಕಾಗಿಲ್ಲ. ಯಾಕಂದ್ರೆ ಚಿತ್ರದ ಹೆಸರಿಗೆ ತಕ್ಕಂತೆ ಕೋಟಿಗಟ್ಟಲೇ ಹಣ ಸುರಿದಿರುವುದರಿಂದ ನಿರ್ಮಾಪಕ ಸೂರಪ್ಪ ಬಾಬು ಇದನ್ನು ಚಿತ್ರಮಂದಿರಗಳಲ್ಲಿ
ಬಿಡುಗಡೆ ಮಾಡಿದರೆ ಮಾತ್ರ ಲಾಭ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
ಜೊತೆಗೆ ಸರ್ಕಾರ ಈಗ ಶೇಕಡಾ ೧೦೦ರಷ್ಟು ಹಾಜರಾತಿಗೆ ಅವಕಾಶ ನೀಡಿದೆ. ಈಗ ಈ ಚಿತ್ರದ ಬಿಡುಗಡೆಯ ಮುನ್ನಾ ಟ್ರೈಲರ್ ಬಿಡುಗಡೆ ಆಗಿದೆ. ಗುರುವಾರ ಸಂಜೆ ಈ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಕರು ಇದನ್ನು ನೋಡಿದ್ದಾರೆ. ಕೇವಲ ೭ ಗಂಟೆಗಳಲ್ಲಿ ೧೩ ಲಕ್ಷ ವ್ಯೂಸ್ ಕೋಟಿಗೊಬ್ಬನಿಗೆ ಸಿಕ್ಕಿದೆ. ಹೆಸರಲ್ಲಿ ಕೋಟಿ ಇಟ್ಟುಕೊಂಡವನಿಗೆ ಈ ಲಕ್ಷ ಎಲ್ಲ ಅಂಟೋದೂ ಇಲ್ಲ, ಇದೆಲ್ಲ, ಯಾವ ಲೆಕ್ಕ ಎನಿಸಿದರೂ ಆನ್ ಲೈನ್ ನಲ್ಲಿ ಈ ಟ್ರೈಲರ್ ಹವಾ ಜೋರಾಗಿಯೇ ಇದೆ. ಹಾಲಿವುಡ್ ಚಿತ್ರ ಮತ್ತು ಸೌತ್ ಇಂಡಿಯನ್ ಸಿನಿಮಾಗಳನ್ನು ಮಿಕ್ಸ್ ಮಾಡಿದಂತೆ ಕಾಣುವ ಚಿತ್ರದ ಅದ್ದೂರಿತನ ಎಲ್ಲರ ಗಮನ ಸೆಳೆಯುತ್ತಿದೆ. ಇದೇ ಕಾರಣಕ್ಕೆ ನಿರ್ಮಾಪಕ ಸೂರಪ್ಪ ಬಾಬು ಈ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿಲ್ಲ ಎಂದು ನೋಡಿದವರು ಮಾತಾಡಿ ಕೊಳ್ಳುತ್ತಿದ್ದಾರೆ.
ವಿಶೇಷ ಅಂದ್ರೆ, ಈ ಚಿತ್ರವನ್ನು ಕೇವಲ ಕನ್ನಡಿಗರು ಮಾತ್ರ ನೋಡಲು ಕಾಯುತ್ತಿಲ್ಲ ಎಂಬುದು ಯೂಟ್ಯೂಬ್ ನಲ್ಲಿರುವ ಈ ಚಿತ್ರದ ಬಗೆಗಿನ ಇತರ ವಿಡಿಯೋಗಳನ್ನು ನೋಡಿದರೆ ಗೊತ್ತಾಗುತ್ತದೆ. ಈ ಟ್ರೈಲರ್ ಬಗ್ಗೆ ವಿಡಿಯೋ ಮಾಡಿರುವ ಹಿಂದಿ ಯೂ ಟ್ಯೂಬರ್ ಒಬ್ಬ, ಟ್ರೈಲರ್ ಸೂಪರ್ ಆಗಿದೆ, ಆದರೆ ಕನ್ನಡ ಚಿತ್ರಗಳನ್ನು ಕನ್ನಡಿಗರು ಮಾತ್ರವಲ್ಲ, ನಾವೂ ನೋಡುತ್ತೇವೆ, ಟ್ರೈಲರ್ ಗೆ ಸಬ್ ಟೈಟಲ್ ಏಕೆ ಹಾಕಿಲ್ಲ? ಎಂದು ಕೇಳಿರು ವುದು ಕೋಟಿಗೊಬ್ಬ ಚಿತ್ರದ ಕ್ರೇಜ್ ಗೆ ಸಾಕ್ಷಿ.
ಒಟ್ಟಿನಲ್ಲಿ ಚಿತ್ರದ ಟ್ರೈಲರ್ ನಲ್ಲಿ ನಟ ರವಿಶಂಕರ್ ಹೇಳುವಂತೆ, ಕನ್ನಡಿಗರಷ್ಟೇ ಅಲ್ಲ, ಭಾರತದಾದ್ಯಂತ ಪ್ರೇಕ್ಷಕ ನಿನ್ನ ಇನ್ನೊಂದ್ ಪರ್ಫಾಮೆನ್ಸ್ ಯಾವಾಗ್ ಬರುತ್ತೆ ಅಂತ ಕಾಯ್ತಾ ಇದ್ದೀನಿ ಎಂದು ಸುದೀಪ್ ಅವರಿಗೆ ಹೇಳುತ್ತಿರುವುದಂತೂ ಸುಳ್ಳಲ್ಲ.
ಲೂಸ್ ಟಾಕ್
ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಮತ್ತೆ ಸ್ವಚ್ಛ ಭಾರತ್ ಅಭಿಯಾನದ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದೀರಂತೆ, ಏನ್ ಕಾನ್ಸೆಪ್ಟ್ ಈ ಸಲ?
-ಉಪ್ಪು ತಿಂದವ ನೀರು ಕುಡಿಯೇಬೇಕು, ಸುಸ್ಸು ಮಾಡಿದವ ನೀರು ಹಾಕಲೇಬೇಕು.
ಓಹೋ, ಸರಿ, ಎಲ್ಲರನ್ನು ಮತ್ತೆ ಕಸ ಗುಡಿಸೋ ಕೆಲಸಕ್ಕೆ ಇಳಿಸೋ ಪ್ಲ್ಯಾನ್ ಇದೆಯಂತೆ?
-ಹೌದು, ಈಗ ಯಾರು ಬೇಕಾದರೂ ಕಸ ಗುಡಿಸಬಹುದು, ನಮ್ಮದು ಈಗ ಗುಡಿಸಲು ಮುಕ್ತ ದೇಶ.
ಈ ಅಭಿಯಾನಕ್ಕೆ ಏನಾದ್ರೂ ಸ್ಲೋಗನ್ ಇಟ್ಟಿದ್ದೀರಾ?
-ಹೌದು. ಭಾರತಕ್ಕಾಗಿ ಕಸ ಗುಡಿಸಿ, ನಿಮ್ಮ ದೇಶ ದೇವರ ಗುಡಿ ಆಗುತ್ತದೆ. ಹೆಂಗಿದೆ?
ಸೂಪರ್, ಸರಿ, ಈ ಅಭಿಮಾನದ ಉದ್ದೇಶ ಏನು?
-ಎಲ್ಲರಿಗೂ ಕಸ ಗುಡಿಸೋ ಕೆಲ್ಸ ಕೊಟ್ರೆ, ದೇಶನೂ ಕ್ಲೀನ್ ಆಗುತ್ತೆ, ನಿರುದ್ಯೋಗ
ಸಮಸ್ಯೆನೂ ನಿವಾರಣೆ ಆಗುತ್ತೆ
ಓಹೋ, ಮಾಸ್ಟರ್ ಪ್ಲ್ಯಾನ್ ನಿಮ್ಮದು, ಸರಿ, ಇದನ್ನ ಜಾರಿಗೆ ತರೋಕೆ ಚಾಲನೆ ಯಾವಾಗ ಕೊಡ್ತೀರಾ?
-ಆದಷ್ಟು ಬೇಗ ಟ್ವೀಟ್ ಮಾಡ್ತೀನಿ, ಕೊಚ್ಚೇ ದಿನ್ ಜಾನೇವಾಲೇ ಹೈ ಅಂತ.
ನೆಟ್ ಪಿಕ್ಸ್
ಸೈಕಾಲಜಿ ಕ್ಲಾಸ್ ನಡೀತಿತ್ತು. ಲೆಕ್ಟರರ್ ತಮ್ಮ ಹುಡುಗರನ್ನು ಬಹಳ ದಿನಗಳಿಂದ ಗಮನಿಸುತ್ತಾ ಇದ್ರು. ಹುಡುಗರು ಬರೀ ಹುಡುಗಿಯರ ಹಿಂದೆ ಸುತ್ತೋದು ನೋಡಿ ಅವರಿಗೆ ಬೇಸರ ಬಂದಿತ್ತು. ಆದರೆ ಈ ಬಾಯ್ಸ್ ಬರೀ ಬಾಯ್ ಮಾತಲ್ಲಿ ಹೇಳಿದ್ರೆ ಕೇಳಲ್ಲ ಅಂತ ಅವರಿಗೆ ಬುದ್ಧಿ ಕಲಿಸೋಕೆ, ಒಂದು ಪ್ರಯೋಗ ಮಾಡೋಣ ಅಂತ ನಿರ್ಧಾರ ಮಾಡಿದ್ರು. ಸರಿ, ಎಲ್ಲರನ್ನೂ ಕರೆದು, ಸುತ್ತಾ ನಿಲ್ಲಿಸಿಕೊಂಡು, ಒಂದು ಟೇಬಲ್ ಮೇಲೆ ಆ ಕಡೆ ಒಂದು ಗಂಡು ಇಲಿ ಮತ್ತು ಈ ಕಡೆ ಒಂದು ಹೆಣ್ಣು ಇಲಿ ಇಟ್ರು. ಆನಂತರ ಟೇಬಲ್ ನ ಇನ್ನೊಂದು ಕೊನೆಯಲ್ಲಿ, ಒಂದಷ್ಟು ಕಡ್ಲೇಬೀಜ ಇಟ್ರು.
ಗಂಡು ಇಲಿ, ಕೈ ತೆಗೆದ ತಕ್ಷಣ ಸೀದಾ ಓಡಿ ಹೋಗಿ ಕಡಲೇಕಾಯಿಗೆ ಬಾಯಿ ಹಾಕಿತು. ಒಂದ್ಸಲ ಎಲ್ಲರ ಮುಖ ನೋಡಿದ ಲೆಕ್ಚರರ್, ಈ ಬಾರಿ ಕಡಲೇಕಾಯಿ
ಬೀಜ ತೆಗೆದು ಒಂದಷ್ಟು ಹುಳ ಹುಪ್ಪಡಿ ಇಟ್ರು. ಈ ಸಲವೂ ಗಂಡು ಇಲಿ ಸೀದಾ ಹುಳ ಹುಪ್ಪಡಿಯ ಕಡೆ ನುಗ್ಗಿತು. ಎಲ್ಲಾ ಹುಡುಗರೂ ಇದನ್ನು ಗಂಭೀರವಾಗಿ
ಗಮನಿಸುತ್ತಿದ್ದರು. ನಂತರ ಲೆಕ್ಟರರ್, ಈ ಬಾರಿ ಒಂದಷ್ಟು ಮಾಂಸದ ತುಂಡುಗಳನ್ನಿಟ್ಟರು. ಈ ಬಾರಿ ಗಂಡು ಇಲಿ, ಇನ್ನಷ್ಟು ಜೋರಾಗಿ ನುಗ್ಗಿ ಮಾಂಸದ
ತುಂಡುಗಳ ಕಡೆ ಓಡಿತು. ಆಗ ಅದನ್ನೆಲ್ಲಾ ನೋಡುತ್ತಿದ್ದ ಹುಡುಗರ ಕಡೆ ತಿರುಗಿದ ಲೆಕ್ಚರರ್ ಹೇಳಿದ್ರು, ನೋಡಿ, ಜೀವನದಲ್ಲಿ ಹೆಣ್ಣಿನ ಹಿಂದೆ ಓಡೋದಕ್ಕಿಂತ ಹೊಟ್ಟೆ ತುಂಬಿಕೊಳ್ಳೋದು ಮುಖ್ಯ ಅಂತ ಅರ್ಥ ಆಯ್ತಾ? ಅಂದ್ರು. ಅದಕ್ಕೆ ಹಿಂದೆ ನಿಂತಿದ್ದ ಖೇಮು ಮೆಲ್ಲನೆ ಹೇಳಿದ, ಸರ್, ಯಾವುದಕ್ಕೂ ಆ ಹೆಣ್ಣು ಇಲಿನಾ ಬದಲಾಯಿಸಿ ನೋಡಿ, ಯಾರಿಗ್ಗೊತ್ತು, ಆ ಹೆಣ್ಣು ಇಲಿ, ಈ ಗಂಡು ಇಲಿಯ ಹೆಂಡತಿ ಇದ್ರೂ ಇರಬಹುದು.
ಲೈನ್ ಮ್ಯಾನ್
ಆರ್ ಸಿಬಿಯಲ್ಲಿ ಕೊಹ್ಲಿ ಅಜರುದ್ದೀನ್ ಗೆ ಯಾಕೆ ಅವಕಾಶ ಕೊಡ್ತಾ ಇಲ್ಲ?
-ಈಗಾಗ್ಲೇ, ಕ್ರಿಶ್ಚಿಯನ್, ಸಿರಾಜ್, ಶಾಬಾಜ್ ಟೀಮಲ್ಲಿದ್ದಾರೆ. ಅಜರ್ ನೂ ತಗೊಂಡ್ರೆ ಹಿಂದೂ ವಿರೋಧಿ ಆಗಿಬಿಡ್ತೀನಿ ಅಂತ ಭರತನಿಗೆ ಚಾನ್ಸ್ ಕೊಟ್ಟ.
ಪ್ರೀಮಿಯರ್ ಶೋಗೆ ಫ್ರೀಯಾಗಿ ಹೋದ್ರೂ ಪಾಕಿಂಗ್ ದುಡ್ಡು ಕೊಡಲೇಬೇಕು
-ಪ್ರೊಡ್ಯೂಸರ್ ನಮ್ಮವನಾದರೇನು, ಪಾಕಿಂಗ್ ನೋನು ನಮ್ಮವನೇ?
ಪರಿಮಳ ಲಾಡ್ಜ್ ಚಿತ್ರದಲ್ಲಿ ಸತೀಶ್ ನೀನಾಸಂ ಅಭಿನಯಿಸೋದಿಲ್ವಂತೆ
-ಪರಿಮಳ ಲಾಡ್ಜ್ ಚೆಕ್ ಔಟ್ ಮಾಡಿದ ಸತೀಶ್ ನೀನಾಸಂ
ನಾನು ಸೋತಾಗ ಜನ ನಗ್ತಾರೆ. ಅದು ಜಗದ ನಿಯಮ. ಆದರೆ ಇತ್ತೀಚೆಗೆ ಯಾರೂ ನನ್ನನ್ನ ನೋಡಿ ನಗ್ತಾ ಇಲ್ಲ, ಅಂದ್ರೆ ನಾನು ಗೆಲ್ತಾ ಇದ್ದೀನಿ ಅಂತ
ಅರ್ಥನಾ?
-ಅಲ್ಲ, ದಿನಾ ಸೋಲೋರಿಗೆ, ನಗೋರ್ಯಾರು ಅಂತ ಜನ ಸುಮ್ಮನಾಗಿದ್ದಾರೆ ಅಂತ ಅರ್ಥ.
ಗಾಂಧಿನಗರ ಸ್ಟೈಲಲ್ಲಿ. ಇತ್ತೀಚೆಗೆ ಆರ್ ಸಿ ಬಿ ಪಾಲಿಗೆ ಆಪದ್ಭಾಂದವ ಆಗಿರೋ ಮ್ಯಾಕ್ಸ್ ವೆಲ್ ಮಾತು
-ಆಪದ್ಭಾಂದವ ಅನ್ನೋ ಟೈಟಲ್ ಇಷ್ಟ್ ದಿನ ಎಬಿಡಿ ಹತ್ರ ಇತ್ರು. ನಾನು ಕೇಳ್ದೆ.
ತುಂಬಾ ಖುಷಿಯಿಂದ ಕೊಟ್ರು-ಮ್ಯಾಕ್ಸ್ ವೆಲ್
ಸಿನಿಮಾ ಪ್ರೇಮಿಗಳ ಪಾಲಿಗೆ ಶನಿವಾರಕ್ಕೆ ಮುಂಚೆ ಬರೋ ಶುಕ್ರವಾರ
-ಸಿನಿವಾರ
ಛೋಟಾ ಭೀಮ್ ದೊಡ್ಡವನಾದ ಮೇಲೆ ಏನಾಗ್ತಾನೆ?
-ಹೈ ಬೀಮ್
ಗಳಗಳನೆ ಅತ್ತುಬಿಡುವಂಥ ಕಷ್ಟ ಬಂದರೆ ಅದು
-ಕ್ರೈಸಿಸ್
ಪರಭಾಷೆಯ ಚಿತ್ರವನ್ನು ನೇರ ರಿಮೇಕ್ ಮಾಡಿದ್ರೆ- ಭಟ್ಟಿ ಇಳಿಸುವಿಕೆ
ಕದ್ದು ರಿಮೇಕ್ ಮಾಡಿದ್ರೆ- ಬಿಟ್ಟಿ ಇಳಿಸುವಿಕೆ