ಹಿಂದಿರುಗಿ ನೋಡಿದಾಗ
ಗರ್ಭೋಪನಿಷತ್ತು, ಹೆಸರೇ ಸೂಚಿಸುವ ಹಾಗೆ, ಮನುಷ್ಯನ ದೇಹದ ರಚನೆ ಮತ್ತು ಕಾರ್ಯ, ಗರ್ಭಕಟ್ಟುವಿಕೆ ಮತ್ತು ಬೆಳವಣಿಗೆ, ಪ್ರತಿ ತಿಂಗಳ ಬದಲಾವಣೆಗಳು ಹಾಗೂ ಪ್ರಸವದ ಬಗ್ಗೆ ಮಾಹಿತಿ ನೀಡುತ್ತದೆ. ಹಾಗಾಗಿ ಇದರಲ್ಲಿ ಅಧ್ಯಾತ್ಮಿಕ ವಿಚಾರಗಳಿಗಿಂತ ವಿಜ್ಞಾನವೇ ತುಸು ಹೆಚ್ಚಿದೆ ಎನ್ನಬಹುದು. ಗರ್ಭೋಪನಿಷತ್ತು ಪೂರ್ಣ ರೂಪದಲ್ಲಿ ದೊರೆತಿಲ್ಲ. ದೊರೆತಿರುವ ಹಲವು ಪಾಠಗಳು ಸ್ವಲ್ಪ ಭಿನ್ನವಾಗಿವೆ.
ಪ್ರಾಚೀನ ಭಾರತದಲ್ಲಿ ಭ್ರೂಣವಿಜ್ಞಾನಕ್ಕೆ ಸಂಬಂಧಿಸಿದ ಹಾಗೆ ಸುಶ್ರುತ, ಚರಕ, ಅಗ್ನಿವೇಶ, ವಾಗ್ಭಟ ಮುಂತಾ ದವರು ಬರೆದ ಆಯುರ್ವೇದ ಗ್ರಂಥ ಗಳಿವೆ. ಆ ಗ್ರಂಥಗಳಿಗೆ ಕಾಲಾನುಕ್ರಮೇಣ ಅನೇಕರು ಬರೆದ ಭಾಷ್ಯಗಳಿವೆ. ಆದರೆ ಈ ಎಲ್ಲ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಹಾಗೂ ಪ್ರಮುಖವಾದದ್ದು ‘ಗರ್ಭೋಪನಿಷತ್ತು’. ಭ್ರೂಣವಿಜ್ಞಾನಕ್ಕೆ ಸಂಬಂಧಿಸಿದ ಈ ಗ್ರಂಥದ ಸ್ಥೂಲ ರೂಪವನ್ನು ಗಮನಿಸೋಣ.
ವೇದಗಳಲ್ಲಿ ನಾಲ್ಕು ಭಾಗ. ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು ಮತ್ತು ಉಪನಿಷತ್ತುಗಳು. ‘ಉಪನಿಷತ್’ ಎಂದರೆ ಉಪ = ಹತ್ತಿರ + ನಿ = ಶ್ರದ್ಧೆಯಿಂದ + ಸತ್ = ಕುಳಿತು (ಕಲಿಯುವುದು) = ಉಪನಿಷತ್ತು. ಅಂದರೆ ‘ಗುರುವಿನ ಸಮೀಪದಲ್ಲಿ ಕುಳಿತ ವಿದ್ಯಾರ್ಥಿಗೆ ಗುರುಗಳು ನೀಡಿದ ರಹಸ್ಯೋಪದೇಶ’ ಎನ್ನಬಹುದು. ವೇದಗಳಲ್ಲಿ ಉಪನಿಷತ್ತುಗಳು ಅತ್ಯುತ್ಕೃಷ್ಟವಾದ ಭಾಗ. ಉಪನಿಷತ್ತುಗಳನ್ನು ಯಾವ ಒಬ್ಬ ಋಷಿಯು ರಚಿಸಲಿಲ್ಲ. ಹಲವು ಋಷಿಗಳು ಕಂಡುಕೊಂಡ ಜ್ಞಾನ ಸಂಗ್ರಹವಿದು. ಉಪನಿಷತ್ತುಗಳ ಸಂಖ್ಯೆಯು ೧೧-೨೨೩ರವರೆಗೆ ಇವೆಯಂತೆ. ಆದರೆ ಬಹಳಷ್ಟು ತಜ್ಞರ ಅನ್ವಯ ೧೧-೧೦೮ ಉಪನಿಷತ್ತುಗಳಿವೆ. ಈ ೧೦೮ ಉಪನಿಷತ್ತುಗಳ ಪಟ್ಟಿಯಲ್ಲಿ ಗರ್ಭೋಪನಿಷತ್ತು ೧೭ನೆಯ ಸ್ಥಾನದಲ್ಲಿದೆ.
ಗರ್ಭೋಪನಿಷತ್ತನ್ನು ‘ಪಿಪ್ಪಲಾದ’ ಎನ್ನುವ ಮಹರ್ಷಿಗಳು ರಚಿಸಿದರು. ಇವರು ಅಥರ್ವಣವೇದದ ‘ಪಿಪ್ಪಲಾದ ಶಾಖೆ’ಗೆ ಸೇರಿದವರು. ಅಥರ್ವಣ ವೇದವು ಪಾರಲೌಕಿಕಕ್ಕಿಂತ ಲೌಕಿಕವಿಚಾರಗಳಿಗೆ (ವಿವಾಹ, ಸಂಸಾರ, ಶವಸಂಸ್ಕಾರ, ಮನೆಕಟ್ಟುವುದು, ಜನಸಾಮಾ ನ್ಯರ ಬದುಕು) ಹೆಚ್ಚು ಮಹತ್ವ ವನ್ನು ನೀಡಿದೆ. ಹಾಗಾಗಿ ಗರ್ಭೋಪನಿಷತ್ತು ಇದೇ ಕಾಲದಲ್ಲಿ ರಚನೆಯಾಗಿರಬೇಕು. ಅಥರ್ವಣವೇದದ ಕಾಲಮಾನ ಕ್ರಿ.ಪೂ.೧೨೦೦-ಕ್ರಿ.ಪೂ.೯೦೦. ವೇದಕಾಲದ ನಂತರ ಉಪನಿಷತ್ತುಗಳು ರಚನೆಯಾದ ಕಾರಣ, ಗರ್ಭೋ ಪನಿಷತ್ತು ಬಹುಶಃ ಕ್ರಿ.ಪೂ.೬೦೦ ಆಸುಪಾಸಿ ನದ್ದಾಗಿರ ಬಹುದು.
ಗರ್ಭೋಪನಿಷತ್ತನ್ನು ರಚಿಸಿದ ಪಿಪ್ಪಲಾದರು ಅತ್ಯಂತ ಮುಖ್ಯ ೧೧ ಉಪನಿಷತ್ತುಗಳಲ್ಲಿ ನಾಲ್ಕನೆಯದಾದ ‘ಪ್ರಶ್ನೋಪನಿಷತ್ತನ್ನೂ’ ರಚಿಸಿದರು. ಬಹುಶಃ ಇದು ಅತ್ಯಂತ ಪ್ರಾಚೀನವಾದ ಉಪನಿಷತ್ತು. ಗರ್ಭೋಪನಿಷತ್ತನ್ನು ಅರ್ಥಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಪ್ರಶ್ನೋಪನಿಷತ್ತಿನ ಪ್ರಧಾನ ವಿಚಾರದತ್ತ ಒಂದು ಸಲ ಕಣ್ಣು ಹಾಯಿಸುವುದು ಒಳ್ಳೆಯದು. ಗುರುಗಳಾದ ಪಿಪ್ಪಲಾದರು ಹಾಗೂ ಸುಕೇಶ ಭಾರದ್ವಾಜ, ಶೈಬ್ಯ ಸತ್ಯಕಾಮ, ಸೌರ್ಯಾಯಿಣಿ ಗಾರ್ಗ್ಯ, ಕೌಶಲ್ಯಾ ಅಶ್ವಲಾಯನ, ಭಾರ್ಗವ ವೈದರ್ಭಿ ಮತ್ತು ಕಬಂಧಿನ್ ಕಾತ್ಯಾಯನ ಎಂಬ ಆರು ಜಿಜ್ಞಾಸುಗಳ (ಶಿಷ್ಯರ)
ನಡುವೆ ನಡೆಯುವ ಪ್ರಶ್ನೋತ್ತರಗಳೇ ಪ್ರಶ್ನೋಪನಿಷತ್ತು! ಆ ಆರು ಶಿಷ್ಯರು ಕೇಳಿದ ಪ್ರಶ್ನೆಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿವೆ.
೧. ಜೀವಿಯು ಎಲ್ಲಿಂದ ಹುಟ್ಟುತ್ತದೆ?
೨. ಎಷ್ಟು ದೇವತೆಗಳು (ಶಕ್ತಿಗಳು) ಜೀವಿಯನ್ನು ಕಾಪಾಡುತ್ತಾರೆ ಮತ್ತು ಪೋಷಿಸುತ್ತಾರೆ?
೩. ಜೀವವು ದೇಹದೊಳಗೆ ಎಲ್ಲಿಂದ ಬರುತ್ತದೆ? ಅದು ದೇಹದೊಳಗೆ ಎಲ್ಲಿ ಹಾಗೂ ಹೇಗೆ ಉಳಿಯುತ್ತದೆ? ಹೊರಜಗತ್ತಿನೊಡನೆ ಹೇಗೆ ಸಂಪರ್ಕವನ್ನು ಸಾಧಿಸುತ್ತದೆ? ದೇಹದಿಂದ ಹೊರಗೆ ಹೇಗೆ ಹೋಗುತ್ತದೆ? ಆತ್ಮನಿಗೂ ಈ ಜೀವಕ್ಕೂ ಏನು ಸಂಬಂಧ?
೪. ನಾವು ನಿದ್ರಿಸುವಾಗ ಯಾವ ಯಾವ ಶಕ್ತಿಗಳು ಎಚ್ಚರವಾಗಿರುತ್ತವೆ ಹಾಗೂ ಯಾವ ಯಾವ ಶಕ್ತಿಗಳು ನಿದ್ರಿಸುತ್ತಿರುತ್ತವೆ? ಕನಸುಗಳನ್ನು ಯಾರು ನೋಡುತ್ತಾರೆ? ಯಾರು ಸಂತೋಷವನ್ನು ಅನುಭವಿಸುತ್ತಾರೆ? ಇವುಗಳೆಲ್ಲ ಯಾರಲ್ಲಿ ಸ್ಥಾಪಿತವಾಗಿವೆ?
೫. ಒಬ್ಬನು ಸಾಯುವವರೆಗೂ ಓಂಕಾರವನ್ನು ಧ್ಯಾನಿಸುತ್ತಿದ್ದರೆ, ಅದರಿಂದ ಅವನಿಗೇನು ಲಾಭವಿದೆ?
೬. ಹದಿನಾರು ಭಾಗಗಳಿರುವ ವ್ಯಕ್ತಿಯು ಯಾರು?
(ಇದು ಆತ್ಮನ ಸ್ವರೂಪವನ್ನು ವಿವರಿಸುವ ಪ್ರಶ್ನೆ) ಇಂದಿಗೆ ಸುಮಾರು ೩೦೦೦ ವರ್ಷಗಳ ಹಿಂದೆ ಕೇಳಿದ ಸಾರ್ವಕಾಲಿಕ ಪ್ರಶ್ನೆಗಳು ಇವು. ವಾಸ್ತವದಲ್ಲಿ ಇಂದಿಗೂ ಈ ಪ್ರಶ್ನೆಗಳಿಗೆ ಎಲ್ಲರೂ ಒಪ್ಪಬಹುದಾದ ‘ಇದಮಿತ್ಥಂ’ ಎಂಬ ಉತ್ತರವು ದೊರೆತಿಲ್ಲ. ಇದೇ ವಿಚಾರವೇ ಭ್ರೂಣೋಪನಿಷತ್ತಿನಲ್ಲಿ ಮರುಕಳಿಸುತ್ತದೆ. ಗರ್ಭೋಪನಿಷತ್ತು, ಹೆಸರೇ ಸೂಚಿಸುವ ಹಾಗೆ, ಮನುಷ್ಯನ ದೇಹದ ರಚನೆ ಮತ್ತು ಕಾರ್ಯ, ಗರ್ಭಕಟ್ಟುವಿಕೆ, ೯ ತಿಂಗಳಲ್ಲಿ ಗರ್ಭದ ಬೆಳವಣಿಗೆ, ಗರ್ಭದ ಪ್ರತಿ ತಿಂಗಳ ಬದಲಾವಣೆಗಳು ಹಾಗೂ ಪ್ರಸವದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಹಾಗಾಗಿ ಗರ್ಭೋಪನಿಷತ್ತಿನಲ್ಲಿ ಅಧ್ಯಾತ್ಮಿಕ ವಿಚಾರಗಳಿಗಿಂತ ವಿಜ್ಞಾನವೇ ತುಸು ಹೆಚ್ಚಿದೆ ಎನ್ನಬಹುದು. ಗರ್ಭೋಪನಿಷತ್ತು ಪೂರ್ಣ ರೂಪದಲ್ಲಿ
ದೊರೆತಿಲ್ಲ. ದೊರೆತಿರುವ ಹಲವು ಪಾಠಗಳು ಸ್ವಲ್ಪ ಭಿನ್ನವಾಗಿವೆ. ಕಲಕತ್ತೆಯ ಪಾಠವು ಹೆಚ್ಚು ಸಹಜವಾಗಿದೆ ಎಂದು ತಜ್ಞರ ಅಭಿಮತ.
ಗರ್ಭೋಪನಿಷತ್ತಿನಲ್ಲಿ ಪ್ರಶ್ನೋತ್ತರಗಳ ಶೈಲಿಯನ್ನು ಅನುಸರಿಸಲಾಗಿದೆ. ಮೊದಲು ಒಂದು ಹೇಳಿಕೆ, ನಂತರ ಆ ಹೇಳಿಕೆಗೆ ಸಂಬಂಧಿಸಿದ ಹಾಗೆ ಪ್ರಶ್ನೆಗಳು ಮತ್ತು ಕೊನೆಯಲ್ಲಿ ಆ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರಗಳು ದೊರೆಯುತ್ತವೆ. ಒಂದು ಉದಾಹರಣೆಯನ್ನು ನೋಡಬಹುದು.
ಓಂ ಪಂಚಾತ್ಮಕಂ ಪಂಚಸು ವರ್ತಮಾನಂ ಷಡಾಶ್ರಯಂ ಷಡ್ಗುಣಯೋಗಯುಕ್ತಂ| ತತ್ಸಪ್ತಧಾತು ತ್ರಿಮಲಂ ದ್ವಿಯೋನಿ ಚತುರ್ವಿಧಾಹಾರಮಯಂ ಶರೀರಂ ಭವತಿ|| ಹೇಳಿಕೆ (ಸ್ಟೇಟ್‌ಮೆಂಟ್): ‘ದೇಹವು ಪಂಚಭೂತಗಳಿಂದ ಆಗಿದೆ. ಅದು ಐದನ್ನು ಅವಲಂಬಿಸಿದೆ. ಆರು ಆಶ್ರಯಗಳಿವೆ. ಏಳು ಧಾತುಗಳಿವೆ. ಮೂರು ಮಲಗಳಿವೆ. ಎರಡು ಯೋನಿಗಳಿವೆ (ಲಿಂಗಗಳು) ಮತ್ತು ನಾಲ್ಕು ವಿಧವಾದ ಆಹಾರಗಳು ಪೋಷಿಸುತ್ತವೆ’.
ಸಂಸ್ಕೃತ ಪ್ರಶ್ನೆ: ‘ಪಂಚಾತ್ಮಕಮಿತಿ ಕಸ್ಮಾತ್’ ಕನ್ನಡ ಪ್ರಶ್ನೆ: ದೇಹವನ್ನು ಪಂಚಾತ್ಮಕ ಎಂದು ಏಕೆ ಕರೆಯುತ್ತಾರೆ?
ಸಂಸ್ಕೃತ ಉತ್ತರ: ‘ಪೃಥಿರ್ವ್ಯಾಪಸ್ತೇಜೋವಾಯುರಾಕಾಶ ಮಿತಿ’ ಕನ್ನಡ ಉತ್ತರ: ದೇಹವು ಐದು ಭೂತಗಳಿಂದ ರಚಿತವಾಗಿದೆ. ಭೂಮಿ, ನೀರು, ತೇಜಸ್ಸು, ವಾಯು ಮತ್ತು ಆಕಾಶ. ಸಂಸ್ಕೃತ ಪ್ರಶ್ನೆ: ‘ಅಸ್ಮಿನ್ ಪಂಚಾತ್ಮಕೆ ಶರೀರೇ ಕಾ ಪೃಥಿವೀ ಕಾ ಆಪಃ ಕಿಂ ತೇಜಃ ಕೋ ವಾಯುಃ ಕಿಮಾಕಾಶಂ’
ಕನ್ನಡ ಪ್ರಶ್ನೆ: ಈ ಪಂಚಭೂತಗಳಲ್ಲಿ ಭೂಮಿಯಿಂದಾದದ್ದು ಯಾವುದು, ನೀರಿನಿಂದ ಆದದ್ದು ಯಾವುದು? ತೇಜಸ್ಸಿನಿಂದ ಆದದ್ದು ಯಾವುದು, ವಾಯುವಿನಿಂದಾದದ್ದು ಯಾವುದು ಹಾಗೂ ಆಕಾಶದಿಂದ ಆದದ್ದು ಯಾವುದು? ಹೀಗೆ ಪ್ರಶ್ನೆಗಳು ಮುಂದುವರಿಯುತ್ತವೆ.
ಮನುಷ್ಯನ ದೇಹವು ಪಂಚಾತ್ಮಕವಾದದ್ದು. ಕಾರಣ, ಅದು ಐದು ಭೂತಗಳಿಂದ, ಅಂದರೆ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಐದು ಮೂಲಭೂತ ತತ್ತ್ವಗಳಿಂದ ರಚನೆಯಾಗಿದೆ. ದೇಹದಲ್ಲಿರುವ ಕಠಿಣ ಭಾಗಗಳೆಲ್ಲ ಭೂತತ್ತ್ವದಿಂದ, ದ್ರವವೆಲ್ಲ ಜಲತತ್ತ್ವದಿಂದ, ಬಿಸಿಯೆಲ್ಲ ತೇಜ ತತ್ತ್ವದಿಂದ, ಚಲನೆಯೆಲ್ಲ ವಾಯು ತತ್ತ್ವದಿಂದ ಹಾಗೂ ದೇಹದೊಳಗಿರುವ ಅವಕಾಶಗಳೆಲ್ಲ ಆಕಾಶ ತತ್ತ್ವದಿಂದಾಗಿವೆ. ಭೌತ ತತ್ತ್ವವು ದೇಹಕ್ಕೆ
ಆಧಾರವನ್ನು ನೀಡಿದರೆ, ಜಲತತ್ತ್ವವು ಆಹಾರ ಜೀರ್ಣವಾಗಲು ನೆರವಾಗುತ್ತದೆ.
ತೇಜೋ ತತ್ತ್ವವು ನಮ್ಮೆಲ್ಲರ ನೋಟಕ್ಕೆ ಕಾರಣವಾಗಿದೆ. ವಾಯು ತತ್ತ್ವವು ಚಲನವಲನಕ್ಕೆ ಕಾರಣವಾಗಿದೆ ಹಾಗೂ ಆಕಾಶ ತತ್ತ್ವವು ಶರೀರದಲ್ಲಿ
ಅವಕಾಶಗಳನ್ನು ನಿರ್ವಹಿಸುತ್ತದೆ. ನಮ್ಮ ಶರೀರ ರಚನೆಯಲ್ಲಿ ಇಂದ್ರಿಯಗಳ ಪಾತ್ರ ಪ್ರಧಾನವಾದದ್ದು. ಕಣ್ಣುಗಳು ದರ್ಶನ ಶಕ್ತಿಯನ್ನು, ಕಿವಿಗಳು ಶ್ರವಣ ಶಕ್ತಿಯನ್ನು, ಮೂಗು ಘ್ರಾಣಶಕ್ತಿಯನ್ನು, ನಾಲಿಗೆ ರಸನಶಕ್ತಿಯನ್ನು ಹಾಗೂ ಚರ್ಮವು ಸ್ಪರ್ಶಸಾಮರ್ಥ್ಯವನ್ನು ಒದಗಿಸುತ್ತವೆ. ಜನನಾಂಗಗಳು ರತಿಸುಖವನ್ನು ನೀಡಿದರೆ, ವಿಸರ್ಜನಾಂಗಗಳು ತ್ಯಾಜ್ಯವನ್ನು ಹೊರಹಾಕುತ್ತವೆ.
ದೇಹವು ಮನಸ್ಸಿನ ನೆರವಿನಿಂದ ವಿಚಾರವನ್ನು ಮಾಡುತ್ತದೆ. ಬುದ್ಧಿಶಕ್ತಿಯಿಂದ ಉಚಿತಾನುಚಿತಗಳನ್ನು ವಿಮರ್ಶಿಸುತ್ತದೆ. ಯುಕ್ತವಾದುದನ್ನು ಮಾತನಾಡುತ್ತದೆ. ನಮ್ಮ ದೇಹವನ್ನು ಪೋಷಿಸುವ ಆಹಾರವು ಆರು ರುಚಿಗಳಲ್ಲಿ ದೊರೆಯುತ್ತದೆ. ಸಿಹಿ, ಖಾರ, ಹುಳಿ, ಉಪ್ಪು, ಕಹಿ ಮತ್ತು ಒಗರು. ನಮ್ಮ ದೇಹವು ಆರು ಹಂತಗಳನ್ನು ಒಳಗೊಂಡಿದೆ.
ಭ್ರೂಣ, ಜನನ, ಬೆಳವಣಿಗೆ, ಪ್ರೌಢ, ವಿಲಯನ ಮತ್ತು ಮರಣ. ಆರು ಚಕ್ರ ಗಳಿವೆ. ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣಿಪುರ ಚಕ್ರ, ಅನಾಹತ ಚಕ್ರ, ವಿಶುದ್ಧಿ ಚಕ್ರ ಮತ್ತು ಆಜ್ಞಾ ಚಕ್ರ. ಮೂಲ ಶಬ್ದ ರೂಪಗಳು ಏಳು. ಷಡ್ಜ, ಋಷಭ, ಗಾಂಧಾರ, ಪಂಚಮ, ಮಧ್ಯಮ, ದೈವತ ಮತ್ತು ನಿಷಾಧ.
ಇವುಗಳ ಜತೆಯಲ್ಲಿ ಒಪ್ಪಿತವಾಗುವ ಹಾಗೂ ಒಪ್ಪಿತವಾಗದ ಶಬ್ದಗಳು ಹಾಗೂ ಪ್ರಾರ್ಥನೆಗಳು ಸೇರಿ ಹತ್ತು ವಿಧಗಳಿವೆ (ಕೆಲವು ಪಾಠಗಳು ಏಳು ಎಂದರೆ ಕೆಲವು ಹತ್ತು ಎನ್ನುತ್ತವೆ).
ನಮ್ಮ ಶರೀರವು ಏಳು ಬಣ್ಣಗಳಿಂದಾಗಿದೆ. ಬಿಳಿ, ಕೆಂಪು, ಕಪ್ಪು, ಬೂದು, ಹಳದಿ, ಕಂದು ಮತ್ತು ಪೇಲವ ವರ್ಣ. ನಮ್ಮ ಶರೀರದಲ್ಲಿ ಏಳುಧಾತುಗಳಿವೆ. ಆರು ರಸಗಳಿವೆ. ಆಹಾರದಿಂದ ರಕ್ತವು, ರಕ್ತದಿಂದ ಮಾಂಸವು, ಮಾಂಸದಿಂದ ಮೇದಸ್ಸು, ಮೇದಸ್ಸಿನಿಂದ ಮೂಳೆಯು, ಮೂಳೆಯಿಂದ ಮಜ್ಜೆಯು,
ಮಜ್ಜೆಯಿಂದ ಶುಕ್ಲ ಶೋಣಿತಗಳು ರೂಪುಗೊಳ್ಳುತವೆ. ಶುಕ್ಲ (ವೀರ್ಯ) ಮತ್ತು ಶೋಣಿತಗಳ (ಮಾಸಿಕ ರಕ್ತ) ಮಿಲನದಿಂದ ಗರ್ಭವು ಕಟ್ಟುತ್ತದೆ. ಮಲ, ಮೂತ್ರ ಮತ್ತು ಬೆವರುಗಳೆಂಬ ಮೂರು ತ್ಯಾಜ್ಯ ಮಲಗಳಿವೆ.
ಗಂಡು-ಹೆಣ್ಣು ಎಂಬ ಎರಡು ಲಿಂಗಗಳಿವೆ. ತಾಯಿ ಹಾಗೂ ಭ್ರೂಣದ ಹೃದಯ ಮಿಡಿತಗಳು, ಮಗುವಿನ ಬೆಳವಣಿಗೆಯನ್ನು ನಿರ್ವಹಿಸುತ್ತವೆ. ಹೃದಯದಲ್ಲಿ ಅಂತರಾಗ್ನಿಯಿದೆ. ಅಗ್ನಿಸ್ಥಾನದಲ್ಲಿ ಪಿತ್ತವಿದೆ. ಪಿತ್ತಸ್ಥಾನದಲ್ಲಿ ವಾಯುವಿದೆ. ವಾಯುವಿನ ಸ್ಥಾನವು ಹೃದಯದಲ್ಲಿದೆ. ಇವೆಲ್ಲವೂ ಪ್ರಾಕೃತಿಕ ನಿಯಮಗಳಿಗೆ (ಪ್ರಜಾಪತಿ) ಅನುಗುಣವಾಗಿ ಬೆಳೆಯುತ್ತವೆ. ಗರ್ಭಾಶಯದಲ್ಲಿ ಗರ್ಭಧಾರಣೆಯಾಗುತ್ತದೆ. ಗರ್ಭವು ಒಂಬತ್ತು ತಿಂಗಳ ಅವಽಯಲ್ಲಿ ಬೆಳೆಯುತ್ತದೆ. ಒಂದು ನಿರ್ದಿಷ್ಟ ದಿನದಂದು ಗಂಡು ಹೆಣ್ಣುಗಳ ಸಮಾಗಮವಾಗುತ್ತದೆ. ಆಗ ಪುರುಷನ ವೀರ್ಯವು ಹಾಗೂ ಸೀಯ ಶೋಣಿತವು ಬೆರೆಯುತ್ತವೆ.
ಮೊದಲ ದಿನದಂದು ಈ ಅರೆಘನ ರೂಪವನ್ನು ತಳೆಯುತ್ತದೆ. ಏಳು ದಿನಗಳಾದ ಮೇಲೆ ಒಂದು ಗುಳ್ಳೆಯ ರೂಪವನ್ನು, ೧೫ ದಿನಗಳಾದ ಮೇಲೆ ಒಂದು ಮುದ್ದೆಯ ಸ್ವರೂಪವನ್ನು, ಒಂದು ತಿಂಗಳ ಅವಧಿಯಲ್ಲಿ ಘನರೂಪವನ್ನು ಧರಿಸುತ್ತದೆ. ಎರಡು ತಿಂಗಳು ಪೂರ್ಣಗೊಳ್ಳುವುದರಲ್ಲಿ ತಲೆಯು
ರೂಪುಗೊಳ್ಳುತ್ತದೆ. ಮೂರನೆಯ ತಿಂಗಳಿನಲ್ಲಿ ಪಾದಗಳು, ನಾಲ್ಕನೆಯ ತಿಂಗಳಿನಲ್ಲಿ ಹೊಟ್ಟೆ ಮತ್ತು ಸೊಂಟ, ಐದನೆಯ ತಿಂಗಳಿನಲ್ಲಿ ಬೆನ್ನುಮೂಳೆಯು, ಆರನೆಯ ತಿಂಗಳಿನಲ್ಲಿ ಕಣ್ಣು, ಕಿವಿ, ಮೂಗು ರೂಪುಗೊಳ್ಳುತ್ತವೆ.
ಏಳನೆಯ ತಿಂಗಳಿನಲ್ಲಿ ಜೀವಾತ್ಮನು ಶರೀರವನ್ನು ಪ್ರವೇಶಿಸುತ್ತಾನೆ. ಎಂಟನೆಯ ತಿಂಗಳಿನಲ್ಲಿ ದೇಹದ ಎಲ್ಲ ಭಾಗಗಳು ಪೂರ್ಣವಾಗಿ ಬೆಳೆದಿರುತ್ತವೆ.
ತಂದೆಯ ವೀರ್ಯವು ಪ್ರಬಲವಾಗಿದ್ದರೆ ಗಂಡು ಮಗುವು, ತಾಯಿಯ ಶೋಣಿತವು ಪ್ರಬಲವಾಗಿದ್ದರೆ ಹೆಣ್ಣು ಮಗುವು ಹಾಗೂ ಎರಡೂ ಪ್ರಬಲವಾಗಿದ್ದರೆ ನಪುಂಸಕ ಮಗುವು ಹುಟ್ಟುತ್ತದೆ. ಗರ್ಭಧಾರಣೆಯ ಕ್ಷಣದಲ್ಲಿ ಗಂಡು ಮತ್ತು ಹೆಣ್ಣು ಪ್ರಸನ್ನಚಿತ್ತರಾಗಿರಬೇಕು. ಮನಸ್ಸು ವಿಕ್ಷಿಪ್ತವಾಗಿದ್ದರೆ ಅದರ ಪರಿಣಾಮವು ಭ್ರೂಣದ ಮೇಲಾಗುತ್ತದೆ. ಅಂಧತ್ವ, ಅಂಗವೈಕಲ್ಯ, ಗೂನುಬೆನ್ನು, ಬೆಳವಣಿಗೆಯ ಕೊರತೆ ಮುಂತಾದ ವಿರೂಪಗಳು ತಲೆದೋರ ಬಹುದು.
ಶುಕ್ರಶೋಣಿತಗಳು ವಿಭಜನೆಯಾದಾಗ ಒಂದೇ ಲಿಂಗದ ಅವಳಿಗಳು, ಶುಕ್ರ ಮಾತ್ರ ವಿಭಜನೆಯಾದರೆ ಭಿನ್ನಲಿಂಗದ ಅವಳಿಗಳು ಹುಟ್ಟುತ್ತವೆ. ಗರ್ಭಕ್ಕೆ ಎಂಟು ತಿಂಗಳಾದಾಗ ಅದಕ್ಕೆ ಪೂರ್ವಜನ್ಮದ ಸ್ಮರಣೆ ಬರುತ್ತದೆ. ಸರಿ-ತಪ್ಪುಗಳ ಪರಿಜ್ಞಾನವು ಬರುತ್ತದೆ. ಆ ಶಿಶುವು ಯೋಚಿಸುತ್ತದೆ. ನಾನು
ಸಾವಿರಾರು ಗರ್ಭಗಳಲ್ಲಿ ಪವಡಿಸಿದ್ದೇನೆ. ಸಾವಿರಾರು ಸ್ತನ್ಯಪಾನ ಮಾಡಿದ್ದೇನೆ. ಹುಟ್ಟು-ಸಾವುಗಳ ಚಕ್ರದಲ್ಲಿ ಸಿಲುಕಿದ್ದೇನೆ. ಪರಿಹಾರವಿಲ್ಲದ ನೋವಿಗೆ
ತುತ್ತಾಗಿದ್ದೇನೆ. ನನ್ನ ಪಾಪ-ಪುಣ್ಯಗಳನ್ನು ನಾನೊಬ್ಬನೇ ಅನುಭವಿಸಿದ್ದೇನೆ. ನನ್ನ ದೇಹವು ಅನುಭವಿಸಿದ ಸುಖಗಳೆಲ್ಲ ಈಗ ಮಾಯವಾಗಿ ಹೋಗಿವೆ. ಓಂಕಾರವನ್ನು ಜಪಿಸುತ್ತಾ ಪ್ರಾರ್ಥಿಸುತ್ತೇನೆ. ನಾನು ಈ ಗರ್ಭದಿಂದ ಹೊರಬಂದ ಕೂಡಲೆ ಸಾಂಖ್ಯ-ಯೋಗವನ್ನು ಕಲಿಯುತ್ತೇನೆ.
ವಿಷ್ಣು-ಮಹೇಶ್ವರರಿಗೆ ಶರಣುಹೋಗುತ್ತೇನೆ. ಪರಬ್ರಹ್ಮನನ್ನು ಆರಾಧಿಸಿ ಈ ಚಕ್ರದಿಂದ ಬಿಡುಗಡೆಯನ್ನು ಪಡೆಯುತ್ತೇನೆ- ಹೀಗೆಲ್ಲ ಯೋಚಿಸುವ
ಶಿಶುವು ಜನನಾವಧಿಯಲ್ಲಿ ಮಾಯೆಯ ಪ್ರಭಾವಕ್ಕೆ ಸಿಕ್ಕಿ ಎಲ್ಲವನ್ನೂ ಮರೆತುಹೋಗುತ್ತದೆ! ನಮ್ಮ ಶರೀರದಲ್ಲಿ ಮೂರು ರೀತಿಯ ಅಗ್ನಿಗಳಿವೆ. ಜ್ಞಾನಾ ಗ್ನಿ, ದರ್ಶನಾಗ್ನಿ ಮತ್ತು ಕೋಷ್ಠಾಗ್ನಿ. ಕೋಷ್ಠಾಗ್ನಿ ಎನ್ನುವುದು ನಮ್ಮ ಜಠರಾಗ್ನಿ. ನಾವು ಸೇವಿಸುವ ಎಲ್ಲ ಆಹಾರವನ್ನು ಈ ಅಗ್ನಿಯು ಜೀರ್ಣಿಸಿ, ಶಕ್ತಿಯನ್ನು ಒದಗಿಸುತ್ತದೆ. ದರ್ಶನಾಗ್ನಿ, ಹೆಸರೇ ಸೂಚಿಸುವ ಹಾಗೆ ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನು ನೋಡಿ ತಿಳಿಯಲು ನೆರವಾಗುವ ಶಕ್ತಿ. ಜ್ಞಾನಾ ಗ್ನಿ ಎನ್ನುವುದು ನಮ್ಮ ಇಂದ್ರಿಯ, ಮನಸ್ಸು ಮತ್ತು ಬುದ್ಧಿಯು ಕೆಲಸಮಾಡಲು ಅಗತ್ಯವಾದ ಶಕ್ತಿಯನ್ನು ಕೊಡುತ್ತದೆ.
ಗರ್ಭೋಪನಿಷತ್ತು ಮನುಷ್ಯನ ಶರೀರ ಮತ್ತು ನಡವಳಿಕೆಯನ್ನು ಒಂದು ಯಜ್ಞಕ್ಕೆ ಹೋಲಿಸುತ್ತದೆ. ಯಜ್ಞದ ಮೂಲಕ ಆತ್ಮನು ಪರಮಾತ್ಮನನ್ನು
ಸೇರಬೇಕೆನ್ನುವ ಘನ ಉದ್ದೇಶವನ್ನು ಸಾರುತ್ತದೆ. ಗರ್ಭೋಪನಿಷತ್ತಿನ ಮುಂದಿನ ಭಾಗವು ದೊರೆತಿಲ್ಲ. ಇದ್ದಕ್ಕಿದ್ದ ಹಾಗೆ ವಯಸ್ಕ ಶರೀರದ ರಚನೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ತಲೆಯಲ್ಲಿ ನಾಲ್ಕು ಮೂಳೆಗಳಿವೆ. ಅವುಗಳಲ್ಲಿ ೧೬ ಪೊಳ್ಳುಗಳಿವೆ. ಶರೀರದಲ್ಲಿ ೧೦೭ ಕೀಲುಗಳಿವೆ. ೧೮೦ ಹೊಲಿಗೆ ಗಳಿವೆ. ೯೦೦ ರಕ್ತನಾಳಗಳಿವೆ. ೭೦೦ ನಾಡಿಗಳಿವೆ. ೫೦೦ ಸ್ನಾಯುಗಳಿವೆ.
೩೬೦ ಮೂಳೆಗಳಿವೆ. ೪೫ ದಶಲಕ್ಷ ಕೂದಲಿವೆ. ಹೃದಯವು ೩೮೪ ಗ್ರಾಂ, ನಾಲಿಗೆಯು ೫೭೬ ಗ್ರಾಂ, ಪಿತ್ತ ೭೨೮ ಗ್ರಾಂ, ವೀರ್ಯ ೧೮೨ ಗ್ರಾಂ, ಕೊಬ್ಬು ೧೪೫೬ ಗ್ರಾಂ ತೂಗುತ್ತವೆ. ಮಲಮೂತ್ರಗಳ ಪ್ರಮಾಣವು ಸೇವಿಸಿದ ಆಹಾರ ಮತ್ತು ಪಾನೀಯಗಳ ಪ್ರಮಾಣವನ್ನು ಅನುಸರಿಸುತ್ತದೆ. ಈ ಮೋಕ್ಷಶಾಸ ವನ್ನು ಪಿಪ್ಪಲಾದ ಮಹರ್ಷಿಗಳು ಹೇಳಿದ್ದಾರೆ ಎನ್ನುವುದರೊಂದಿಗೆ ಗರ್ಭೋಪನಿಷತ್ತು ಮುಗಿಯುತ್ತದೆ.