Sunday, 19th May 2024

ಗರೀಭಿ ಹಠಾವೋ ಮಾಡಿದ್ದು ಯಾರು ?

ವೀಕೆಂಡ್ ವಿತ್ ಮೋಹನ್

camohanbn@gmail.com

‘ಗರೀಭಿ ಹಠಾವೋ’ ಇಂದಿರಾ ಗಾಂಧಿ ೧೯೭೧ರ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಬಳಸಿಕೊಂಡ ದೊಡ್ಡ ಘೋಷವಾಕ್ಯ, ಚುನಾವಣೆ ಗೆಲ್ಲಲು ಜನರ ಮನಸಿನಲ್ಲಿ ಬಡತನ ನಿರ್ಮೂಲನೆ ಎಂಬ ಹೇಳಿಕೆಗಳನ್ನು ದೇಶಾದ್ಯಂತ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಾ ಬಂದು, ಅದೇ ಘೋಷವಾಕ್ಯದಲ್ಲಿ ಕಾಂಗ್ರೆಸ್ ದೊಡ್ಡ ಬಹುಮತದೊಂದಿಗೆ ಚುನಾವಣೆ ಗೆದ್ದಿತ್ತು.

ಒಂದೆಡೆ ಇಂದಿರಾ ಗಾಂಽ ಗರೀಭಿ ಹಠಾವೋ ಎಂದು ಹೇಳುತ್ತಿದ್ದರು. ಆದರೆ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೆಂದರೆ ಭಾರತದಲ್ಲಿ ಅಷ್ಟು ವರ್ಷಗಳ ಕಾಲ ಬಡತನ ತಾಂಡವವಾಡಲು ೨೪ ವರ್ಷಗಳ ಕಾಲ ದೇಶವನ್ನಾಳಿದ ತಮ್ಮದೇ ಪಕ್ಷ ಕಾರಣವೆಂಬುದನ್ನು ಮರೆತು ಹೋಗಿದ್ದರು. ಅದಾದ ಐದು ದಶಕಗಳ ನಂತರ, ಮತ್ತೊಮ್ಮೆ ೨೦೧೯ರಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ತನ್ನ ಅಜ್ಜಿಯ ‘ಗರೀಭಿ ಹಠಾವೋ’ ಘೋಷವಾಕ್ಯದೊಂದಿಗೆ ಚುನಾವಣೆಗೆ ಸಜ್ಜಾದರು. ತಮ್ಮ ಚುನಾವಣಾ ಪ್ರಚಾರದಲ್ಲಿ ಅದೇ ಘೋಷವಾಕ್ಯ ಗಳನ್ನಾಡುತ್ತಿದ್ದರು.

ಮತ್ತೊಂದು ಸತ್ಯವೆಂದರೆ ೧೯೭೧ ರಿಂದ ೨೦೧೯ರವರೆಗೆ ದೆಹಲಿಯಲ್ಲಿ ಕುಳಿತು ಅತೀ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿ ದವರು ಅವರದ್ದೇ ಕುಟುಂಬದವರು, ಹಾಗಾದರೆ ಬಡತನ ನಿರ್ಮೂಲನೆ ಮಾಡಲು ಅವರಿಂದ ಸಾಧ್ಯವಾಗಲಿಲ್ಲವೇ? ಇದರ ಮಧ್ಯದಲ್ಲಿ ೧೯೯೧ರಲ್ಲಿ ಭಾರತ ದಿವಾಳಿಯಾಗುವ ಹಂತಕ್ಕೆ ತಲುಪಿತ್ತು. ಲಂಡನ್ನಿನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ತಂದು ದೇಶ ನಡೆಸಬೇಕಾಯಿತು. ಹಾಗಾದರೆ ಚಿನ್ನವನ್ನು ಅಡವಿಟ್ಟು ಸಾಲ ಮಾಡಿ ದೇಶ ನಡೆಸುವ ಪರಿಸ್ಥಿತಿಗೆ ತಳ್ಳಿದ್ದು ಯಾರೆಂಬ ಪ್ರಶ್ನೆಗೂ ಉತ್ತರಿಸಬೇಕಲ್ಲ.

ಈಗ ಮತ್ತೊಮ್ಮೆ ೨೦೨೪ ರ ಚುನಾವಣೆಯಲ್ಲಿಯೂ ರಾಹುಲ್ ಗಾಂಧಿ ಮತ್ತದೇ ‘ಗರೀಭಿ ಹಠಾವೋ’ ಘೋಷಣೆಯೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಹಾಗಾದರೆ ಭಾರತದಲ್ಲಿ ಬಡತನ ನಿರ್ಮೂಲನೆ ಮಾಡುವೆಡೆಗೆ ಯೋಜನೆಗಳನ್ನು ಜಾರಿಗೆ ತಂದವರು ಯಾರು? ಕೆಲವು ತಿಂಗಳುಗಳ ಹಿಂದೆ ನೀತಿ ಆಯೋಗವು ಬಹು ಆಯಾಮದ ಬಡತನದ ವರದಿಯನ್ನು ಪ್ರಕಟಿಸಿತ್ತು. ಈ ವರದಿ ಯನ್ವಯ ಕಳೆದ ೧೦ ವರ್ಷಗಳಲ್ಲಿ ಮೋದಿಯವರ ಆಡಳಿತಾವಧಿಯಲ್ಲಿ ಭಾರತದಲ್ಲಿ ಸುಮಾರು ೨೪.೮೦ ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.

ಊಟ, ವಸತಿ, ಆದಾಯ, ಮನೆ, ಆರೋಗ್ಯದ ವಿವಿಧ ಆಯಾಮದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಕರೋನಾ ಮಹಾಮಾರಿ ಜಗತ್ತಿನ ಹಲವು ದೇಶಗಳ ಜನರನ್ನು ಬಡತನ ರೇಖೆಯ ಕೆಳಗೆ ತಳ್ಳಿ ಬಿಟ್ಟಿತ್ತು, ಸತತವಾಗಿ ಎರಡು ವರ್ಷಗಳ ಕಾಲ ಅರೋಗ್ಯ ಹಾಗೂ ಆರ್ಥಿಕತೆಯ ನಡುವೆ ನಡೆದ ಸಂಘರ್ಷದಲ್ಲಿ ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ಹದೆಗಟ್ಟಿತ್ತು. ಅಮೆರಿಕ ದೇಶದಲ್ಲಿ ಹಣದುಬ್ಬರ ದರ ಹೆಚ್ಚಾಗಿದೆ, ದ್ವೀಪ ರಾಷ್ಟ್ರ ಶ್ರೀಲಂಕಾ ಅಕ್ಷರಶಃ ನಲುಗಿ ಹೋಗಿದೆ. ಅಲ್ಲಿನ ಪ್ರಜೆಗಳು ಬೀದಿಗಿಳಿದು ಆಹಾರಕ್ಕಾಗಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪಾಕಿಸ್ತಾನದ ಆರ್ಥಿಕತೆಯನ್ನು ನಿಯಂತ್ರಣ ಕ್ಕೆ ಬರುತ್ತಿಲ್ಲ, ಅಲ್ಲಿನ ಬಡ ಕುಟುಂಬಗಳು ಅನ್ನ, ನೀರಿಲ್ಲದೆ ರಸ್ತೆಗಿಳಿದು ಪ್ರತಿಭಟಿಸಿದ್ದವು.

೧೪೦ ಕೋಟಿ ಜನಸಂಖ್ಯೆಯ ಭಾರತದ ಆರ್ಥಿಕತೆಯ ಮೇಲೂ ಕರೋನಾ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರಿತ್ತು. ಸಮಯಕ್ಕೆ ಸರಿಯಾಗಿ ತೆಗೆದುಕೊಂಡಂತಹ ಉತ್ತಮ ನಿರ್ಧಾರಗಳು ಭಾರತದ ಆರ್ಥಿಕತೆಯನ್ನು ನಿಯಂತ್ರಿಸಲು ಸಾಧ್ಯವಾದವು. ಪ್ರಧಾನಮಂತ್ರಿಗಳು ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’ಯನ್ನು ಜಾರಿಗೆ ತಂದರು. ದಿನದಲ್ಲಿ ಮೂರು ಹೊತ್ತು ಊಟಕ್ಕೆ ಕೊರತೆಯಾಗದಂತೆ ನೋಡಿಕೊಂಡರೆ, ಬಡ ಕುಟುಂಬದ ಮೊದಲ ಆದ್ಯತೆಯನ್ನು ಈಡೇರಿಸಿದಂತಾಗುತ್ತದೆಯೆಂಬ
ಸ್ಪಷ್ಟ ಚಿತ್ರಣ ಮೋದಿಯವರ ಮುಂದಿತ್ತು.

ಪ್ರತಿ ಕುಟುಂಬಕ್ಕೆ ತಿಂಗಳಿಗೆ ೫ ಕೆ.ಜಿ. ಪಡಿತರ ನೀಡುವ ಮೂಲಕ ಬಡವರ ಹಸಿವನ್ನು ನೀಗಿಸುವಲ್ಲಿ ಮೋದಿ ಯಶಸ್ವಿಯಾದರು.
ಇದುವರೆಗೂ ದೇಶದಲ್ಲಿ ಸುಮಾರು ೮೦ ಕೋಟಿ ಬಡವರಿಗೆ ಈ ಯೋಜನೆಯಡಿ ತಿಂಗಳ ಪಡಿತರ ನೀಡಲಾಗುತ್ತಿದ್ದು, ಮುಂದಿನ ವರ್ಷಗಳಿಗೂ ಈ ಯೋಜನೆ ವಿಸ್ತರಣೆಯಾಗಿದೆ. ಭಾರತದ ಬಡತನ ನಿರ್ಮೂಲನೆ ಮಾಡುವಲ್ಲಿ ಪ್ರಧಾನಿಗಳ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ,ಇದರ ಜೊತೆಗೆ ಜಾರಿಗೆ ಬಂದಂತಹ ಜನೌಷದ ಕೇಂದ್ರಗಳು,ಅಯುಷ್ಮಾನ್ ಭಾರತ್ ಅರೋಗ್ಯ ವ್ಯವಸ್ಥೆ,ಮನೆ ನಿರ್ಮಾಣ ಯೋಜನೆ, ಹೆಣ್ಣು ಮಕ್ಕಳ ಪೋಷಣೆ ಅಭಿಯಾನಗಳು ಸತತವಾಗಿ ಬಡತನ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಯೋಜನೆಗಳನ್ನು ಘೋಷಿಸುವುದರ ಜೊತೆಗೆ ಅನುಷ್ಠಾನ ಮುಖ್ಯವಾಗಿರುತ್ತದೆ,ಬಡತನ ನಿರ್ಮೂಲನೆ ಮಾಡಲು ಘೋಷಣೆ ಯಾದಂತಹ ಯೋಜನೆಗಳ ಕೆಳಮಟ್ಟದ ಅನುಷ್ಠಾನದ ಫಲವಾಗಿ ೨೪.೮೦ ಕೋಟಿ ಜನರು ಬಡತನದಿಂದ ಹೊರಬರಲು ಸಾಧ್ಯವಾಯಿತು. ಲಾಕ್ ಡೌನ್ ತೆರವಾದ ನಂತರ ಆರ್ಥಿಕ ಪರಿಸ್ಥಿತಿ ಪುನಃ ಹಳೆಯ ಹಾದಿಗೆ ಬರಲು ಸಮಯ ತೆಗೆದುಕೊಳ್ಳು ತ್ತಿರುವ ಸಂದರ್ಭದಲ್ಲಿ ಬಡವರ ಪಡಿತರ ಯೋಜನೆಯನ್ನು ಮತ್ತಷ್ಟು ದಿನಗಳ ಕಾಲ ಮುಂದುವರೆಸಿದರು.

ದೇಶದಾದ್ಯಂತ ವಲಸೆ ಕಾರ್ಮಿಕರು ನಗರ ಪ್ರದೇಶಗಳನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಗುಳೆ ಹೋಗುತ್ತಿರುವ ಸಂದರ್ಭ ದಲ್ಲಿ ಅವರಿಗೆ ತಮ್ಮ ತವರಿನಲ್ಲಿ ಅಗತ್ಯವಿದ್ದಂತಹ ಅಕ್ಕಿ, ಬೇಳೆ, ರಾಗಿ, ಗೋಧಿಯನ್ನು ಈ ಯೋಜನೆಯ ಮೂಲಕ ತಲುಪಿಸು ವಲ್ಲಿ ಮೋದಿ ಯಶಸ್ವಿಯಾದರು, ನರೇಂದ್ರ ಮೋದಿಯವರು ಈ ಯೋಜನೆಗೆ ಯಾವ ನಾಯಕರ ಹೆಸರನ್ನು ಇಡಲಿಲ್ಲ.

’’IMF’ ಪ್ರಧಾನ ಮಂತ್ರಿಯವರ ’ಗರೀಬ್ ಕಲ್ಯಾಣ್ ಯೋಜನೆ’ಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ, ಜಗತ್ತಿನ ಹಲವು ದೇಶಗಳು
ಕರೋನಾ ಸಂದರ್ಭದಲ್ಲಿ ತನ್ನ ಪ್ರಜೆಗಳಿಗೆ ಸರಿಯಾದ ಊಟವನ್ನು ನೀಡಲಾಗದೆ ಬಡತನ ಸೂಚ್ಯಂಕದಲ್ಲಿ ಕೆಳಗಿಳಿದಿರುವ ಸಂದರ್ಭದಲ್ಲಿ ಭಾರತ ಮಾತ್ರ ಕರೋನಾ ಪೂರ್ವ ಸೂಚ್ಯಂಕವನ್ನೇ ಕಾಪಾಡಿಕೊಂಡಿರುವ ಅಂಶವನ್ನು ಬಹಿರಂಗಪಡಿಸಿದೆ. ಇದು ಕೇವಲ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯವಾಯಿತೆಂಬ ಅಂಶವನ್ನೂ ಹೇಳಿದೆ.

’’Pandemic,Poverty, and Inequality : Evidence from India’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡಿರುವ ವರದಿಯಲ್ಲಿ ೨೦೦೪-೦೫ ರಿಂದ ೨೦೨೦-೨೧ ರ ವರೆಗಿನ ಭಾರತದ ಬಡತನದ ಪ್ರಮುಖ ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಕರೋನಾ ಕಾಲ ಘಟ್ಟಕ್ಕಿಂತಲೂ ಹಿಂದೆ ಭಾರತದ ಕಡು ಬಡತನ ಸೂಚ್ಯಂಕದ ದರವು ಭಾರತದ ಜನಸಂಖ್ಯೆಯ ಶೇಕಡಾ ೦.೮೦ರಷ್ಟಿತ್ತು, ಕರೋನಾ ಮಹಾಮಾರಿಯಿಂದ ತತ್ತರಿಸಿದ ನಂತರವೂ ಸಹ ಭಾರತದ ಕಡು ಬಡತನದ ಸೂಚ್ಯಂಕ ದರವು ಅಷ್ಟೇ ಇದೆಯೆಂದು ಈ ವರದಿಯಲ್ಲಿ ಹೇಳಲಾಗಿದೆ.

ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ನೀಡುತ್ತಿರುವ ಪಡಿತರದ ಪರಿಣಾಮವಾಗಿ ಭಾರತವು ಕರೋನಾ ಸಂದರ್ಭದಲ್ಲಿಯೂ ಸಹ ಹೆಚ್ಚುವರಿ ಜನರನ್ನು ಕಡುಬಡತನಕ್ಕೆ ತಳ್ಳಲಿಲ್ಲವೆಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಮೋದಿ ಯವರು ಬಡವರಿಗಾಗಿ ಏನು ಮಾಡಿದರು, ಅವರು ಅಂಬಾನಿ, ಅದಾನಿಯ ದಳ್ಳಾಳಿಯೆಂದು ಬೊಬ್ಬೆ ಹೊಡೆಯುವ ಟೊಳ್ಳು ನಾಯಕರೆಲ್ಲರೂ ಐಎಂಎಫ್ ಮತ್ತು ನೀತಿ ಆಯೋಗ ನೀಡಿರುವ ವರದಿಯ ನಂತರ ತಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.

ಕೇವಲ ಬಾಯಿ ಮಾತಿನಲ್ಲಿ ಗರೀಭಿ ಹಠಾವೋ ಎಂದು ಹೇಳಿ ಮತಬ್ಯಾಂಕಿನ ರಾಜಕೀಯ ಮಾಡುವುದಲ್ಲ,ಬಡತನವನ್ನು ನಿರ್ಮೂಲನೆ ಮಾಡಬೇಕು ಅಥವಾ ಮತ್ತಷ್ಟು ಜನರು ಬಡತನಕ್ಕಿಳಿಯುವುದನ್ನು ತಡೆಯಬೇಕು. ಈ ಎರಡೂ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಮೋದಿಯವರು ಯಶಸ್ವಿಯಾಗಿದ್ದರೆಂಬುದು ಐಎಂಎಫ್ ಮತ್ತು ನೀತಿ ಆಯೋಗ ನೀಡಿರುವ ವರದಿಯಿಂದ ಸ್ಪಷ್ಟವಾಗಿದೆ. ಜಗತ್ತಿನ ದೊಡ್ಡಣ್ಣ ಅಮೇರಿಕಾ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯನ್ನು ಶ್ಲಾಘಿಸಿದೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆಗಿನ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಇಡೀ ಜಗತ್ತಿಗೆ ಭಾರತ ಪಡಿತರ ನೀಡಬಲ್ಲದೆಂದು ಹೇಳಿದರು. ಭಾರತದ ಬಡತನವನ್ನು ಆಡಿಕೊಂಡು ನಗುತ್ತಿದ್ದಂತಹ ಕಾಲಘಟ್ಟವೊಂದಿತ್ತು, ಆದರೆ ಇಂದು ಇಡೀ ಜಗತ್ತಿಗೆ ಅನ್ನ ನೀಡುವ ಶಕ್ತಿಯನ್ನು ಭಾರತ ಗಳಿಸಿದೆ.

ಅಫ್ಘಾನಿಸ್ತಾನಕ್ಕೆ ಟನ್ ಗಟ್ಟಲೆ ಗೋಧಿಯನ್ನು ದಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದ ದೇಶ ಭಾರತ.
ಜಗತ್ತಿನಾದ್ಯಂತ ಕಡುಬಡತನಕ್ಕೆ ಜಾರಿದವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೆ ಭಾರತದಲ್ಲಿ ಮಾತ್ರ ಏರಿಕೆಯಾಗಿಲ್ಲ. ಕೇಂದ್ರ ಸರಕಾರವು ಕೈಗೊಂಡಂತಹ ಉತ್ತಮ ನಿರ್ಧಾರಗಳ ಫಲವಾಗಿ ಭಾರತದಲ್ಲಿ ಬಡತನ ಏರಿಕೆಯಾಗ ಲಿಲ್ಲವೆಂದು ಐಎಂಎಫ್ ವರದಿಯಲ್ಲಿ ಹೇಳಲಾಗಿದೆ. ಈ ವರದಿಯ ಮತ್ತೊಂದು ಪ್ರಮುಖ ಅಂಶವೆಂದರೆ ಆಧಾರ್ ಜೋಡಣೆಯ ಮೂಲಕ ನೇರವಾಗಿ ಫಲಾನುಭವಿಗಳಿಗೆ ಬಡವರ ಪರ ಯೋಜನೆಗಳನ್ನು ತಲುಪಿಸುವಲ್ಲಿ ಭಾರತ ಯಶಸ್ವಿಯಾಗಿದ್ದು, ಅದರ ನೇರ ಪರಿಣಾಮವಾಗಿ ಮನೆ ಮನೆಗೆ ಸರಕಾರದ ಯೋಜನೆಗಳು ತಲುಪಿದೆಯೆಂದು ಹೇಳಲಾಗಿದೆ.

ಈ ಯೋಜನೆಯಡಿಯಲ್ಲಿ ಸುಮಾರು ೮೦ ಕೋಟಿ ಜನರಿಗೆ ಉಚಿತ ಪಡಿತರವನ್ನು ತಲುಪಿಸಲಾಗಿದೆ, ಅಂದರೆ ಭಾರತದ ಜನಸಂಖ್ಯೆಯ ಸುಮಾರು ೨/೩ ಭಾಗದಷ್ಟು ಜನರು ಈ ಯೋಜನೆಯ ನೇರ ಫಲಾನುಭವಿಗಳಾಗಿದ್ದಾರೆ. ಕರೋನಾ ಹೊಡೆತಕ್ಕೆ ಸಿಕ್ಕು ನಲುಗಿದ್ದ ದೇಶಗಳ ಪೈಕಿ ಅತ್ಯಂತ ವೇಗವಾಗಿ ಚೇತರಿಸಿಕೊಂಡಂತಹ ದೇಶ ಭಾರತ. ಸಾವು ನೋವುಗಳ ಸಂಖ್ಯೆಯನ್ನು ಕಡಿಮೆ ಮಾಡುವುದರಲ್ಲಿ ಭಾರತ ಯಶಸ್ಸು ಕಂಡಿತ್ತು, ಆರ್ಥಿಕತೆಯ ವಿವಿಧ ಯೋಜನೆಗಳನ್ನು ನೀಡಿ ಸಮಾಜದ ಎಲ್ಲ ವರ್ಗಗಳ ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಭಾರತ ಯಶಸ್ವಿಯಾಗಿದೆ, ಕೈಗಾರಿಕೋದ್ಯಮಿಗಳಿಗೆ ಉತ್ತಮ ಯೋಜನೆಗಳನ್ನು ನೀಡುವಲ್ಲಿ ಭಾರತ ಯಶಸ್ವಿಯಾಗಿದೆ, ಅರೋಗ್ಯ ಕ್ಷೇತ್ರದಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವಲ್ಲಿ ಭಾರತ ಯಶಸ್ವಿಯಾಗಿದೆ, ಭಾರತದ ಪ್ರಜೆಗಳಿಗೆ ಕರೋನಾ ಲಸಿಕೆ ಸಿಗುವುದು ಅನುಮಾನವೆಂದು ಎಲ್ಲರೂ ಹೇಳುತ್ತಿದ್ದರು, ಸಿಕ್ಕರೂ
ಸಾವಿರಾರು ರುಪಾಯಿಯ ಹಣವನ್ನು ಖರ್ಚು ಮಾಡಬೇಕೆಂದು ಹೇಳಲಾಗಿತ್ತು.

ಆದರೆ ಭಾರತದ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಉಚಿತ ಲಸಿಕೆ ನೀಡುವ ಮೂಲಕ ಜಗತ್ತಿಗೆ ಮಾದರಿಯಾಯಿತು. ‘ಕೊವ್ಯಾಕ್ಸಿನ್’ ಹಾಗೂ ‘ಕೋವಿಶೀಲ್ಡ್’ ಲಸಿಕೆಯನ್ನು ಭಾರತದಲ್ಲಿಯೇ ಉತ್ಪಾದಿಸಿ ವಿಶ್ವ ಗುರುವಾಯಿತು. ಬಡತನದ ವಿಷಯ ದಲ್ಲಿ ಇಡೀ ಜಗತ್ತೇ ಕರೋನಾ ಪರಿಣಾಮವಾಗಿ ಸೂಚ್ಯಂಕದ ಕೆಳಗಿಳಿದರೆ ಭಾರತ ಮಾತ್ರ ಕರೋನಾ ಹಿಂದಿನ ಪ್ರಮಾಣವನ್ನೇ ಉಳಿಸಿಕೊಳ್ಳುವ ಮೂಲಕ ಜಗತ್ತಿನ ದೊಡ್ಡ ದೊಡ್ಡ ದೇಶಗಳಿಗೆ ಮಾದರಿಯಾಗಿದೆ. ಬಡವರ ಪರವಾದ ಪಕ್ಷವೆಂದು ಹೇಳುವ ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಸಾಲದ ಕೂಪಕ್ಕೆ ತಳ್ಳಿಯಾಯಿತು, ಬಡವರಿಗೆ ಹೆಂಡ ಕುಡಿಸಲು ಹೋಗಿ ಬಹುಕೋಟಿ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ, ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ರಾಜ್ಯವನ್ನು ಅತ್ಯಧಿಕ ಸಾಲಕ್ಕೆ ತಳ್ಳಿಯಾಯಿತು, ಪಂಜಾಬ್ ಈಗಾಗಲೇ ಸಾಲದ ಕೂಪದಲ್ಲಿತ್ತು ಅರವಿಂದ್ ಕೇಜ್ರಿವಾಲ್ ಆಡಳಿತ ಶುರುವಾದ ನಂತರ ಮತ್ತಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ, ಇತ್ತ ಕರ್ನಾಟಕದ ಸಾಲ ಹೆಚ್ಚಾಗಿದೆ.

೧೯೭೧ ರಿಂದಲೂ ಕಾಂಗ್ರೆಸ್ ಕೇವಲ ಬಾಯಿಮಾತಿಗೆ ಗರೀಭಿ ಹಠಾವೋ ಎಂದು ಹೇಳುತ್ತಿದೆ, ಆದರೆ ಬಡತನ ನಿರ್ಮೂಲನೆ ಮಾಡುವ ಅಥವಾ ಕಡಿಮೆ ಮಾಡುವ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿಲ್ಲ.ಆದರೆ ನರೇಂದ್ರ ಮೋದಿಯವರು ವಿವಿಧ ಆಯಾಮಗಳಲ್ಲಿ ಬಡತನ ನಿರ್ಮೂಲನೆ ಮಾಡಲು ರೂಪಿಸಿದ ಹಲವು ಯೋಜನೆಗಳು ಕಳೆದ ಹತ್ತು ವರ್ಷಗಳಲ್ಲಿ ಯಶಸ್ವಿಯಾಗಿ ತಳಮಟ್ಟದಲ್ಲಿ ಅನುಷ್ಠಾನಗೊಂಡಿದ್ದರ ಪರಿಣಾಮ ಬಡತನದಲ್ಲಿ ಇಳಿಕೆಯಾಗಿದೆ, ಐಎಂಎಫ್ ಮತ್ತು ನೀತಿ ಆಯೋಗದ ವರದಿಯಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖವಾಗಿದೆ.

Leave a Reply

Your email address will not be published. Required fields are marked *

error: Content is protected !!