Sunday, 15th December 2024

ಗಾಂಧೀಮಂತ್ರಕ್ಕೆ ಗಾಯತ್ರೀಗಿಂತ ಹೆಚ್ಚು ಬೆಲೆ !

ರಾವ್ ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಭೈರಪ್ಪನವರ ಸಾಕ್ಷಿ ಕಾದಂಬರಿಯ ಕೇಂದ್ರಬಿಂದು ಪರಮೇಶ್ವರಯ್ಯ. ಲಂಪಟ ಮಂಜಪ್ಪ ತನ್ನ ಪತ್ನಿಯೊಟ್ಟಿಗೆ ಅಕ್ರಮ ಸಂಬಂಧವಿರಿಸಿಕೊಂಡಿ
ದ್ದನ್ನು, ಅವನನ್ನೇ ಮದುವೆಯಾಗಲು ಹೊರಟ ಮಗಳ ಬಳಿ ಹೇಳಲಾಗದೇ ತೊಳಲಾಡುವ ಪರಮೇಶ್ವರಯ್ಯರ ಸಂದಿಗ್ಧ ಮನಸ್ಸನ್ನು ಗರಗಸದಿಂದ ಕೊಯ್ಯುವಂಥಾದ್ದು.

ಅದೇ ಲಂಪಟ ಅಳಿಯ ಕೊಲೆಯ ಆರೋಪದಿಂದ ಬಚಾವಾಗಲು ಪ್ರಾಮಾಣಿಕ ಮಾವನನ್ನು ಸಾಕ್ಷಿ ನುಡಿ ಯಲು ಕೇಳುವುದು, ಮಾವನ ಮಗಳಿಗೆ ಮತ್ತೆ ಬಾಳು ಕೊಡುತ್ತೇನೆಂಬ ಸಮ್ಮೋಹನಾಸವನ್ನು ಪ್ರಯೋಗಿಸು ವುದು, ಇವೆಲ್ಲ ಕಥಾನಕದ ಬಿರುಸು. ಸುಳ್ಳು ನುಡಿಯದ ಪರಮೇಶ್ವರಯ್ಯ ಹೀನ ಸುಳಿಯ ಅಳಿಯನ ಪರವಾಗಿ ಸಾಕ್ಷಿ ನುಡಿಯುವುದು, ಆ ನಿರ್ಧಾರ ತೆಗೆದುಕೊಳ್ಳುವುದರ ಹಿಂದಿನ ತೊಳಲಾಟ ಇವೆಲ್ಲವೂ ಕಾದಂಬರಿ, ಕಾದಂಬರಿಕಾರನ ಮೇಲೆ ಸಾಧಿಸುವ ವಿಕ್ರಮದ ಕ್ಷಣಗಳು. ಉಪಗ್ರಹವನ್ನು ಅಂತರಿಕ್ಷದಲ್ಲಿ ಉಡಾಯಿಸಿ ತನ್ನ ಹೊಣೆಯನ್ನು ನಿರ್ವಹಿಸಿದ ರಾಕೆಟ್‌ನಂತೆ ಲೇಖಕ ಬೇರ್ಪಡುವ ಕಾಲ.

ಪರಮೇಶ್ವರಯ್ಯರ ದೈತ್ಯ ಸಂದಿಗ್ಧವನ್ನು ನಿಜಜೀವನದಲ್ಲಿ ಅನುಭವಿಸಿದವರಿಗೆ ಕಾದಂಬರಿ ಉಣಬಡಿಸುವ ರಸಾನುಭವ ಸಿಹಿ ಮೊಸರಿನ ಕೊಸರಿ ನಂತಿರುತ್ತದೆ. ದಂತಚೋರ ವೀರಪ್ಪನ್ ಕುರಿತಾದ ನನ್ನ ಇಂಗ್ಲಿಷ್ ಪುಸ್ತಕವನ್ನು ಆತ್ಮೀಯ ಗೆಳೆಯ ಲಪಟಾಯಿಸಿದಾಗ ಅವನ ಮೇಲೆ ಕ್ರಮ ತೆಗೆದು ಕೊಳ್ಳಲೋ ಬೇಡವೋ ಎಂಬ ನನ್ನದೇ ಸಂದಿಗ್ಧಕ್ಕೆ ಅಂತಹದೇ ತೀವ್ರತೆ ಇತ್ತು. ಆಗಷ್ಟೇ ಸಾಕ್ಷಿ ಓದಿದ್ದರಿಂದ ಅದು ನನ್ನನ್ನು ಅಲುಗಾಡಿಸಿತ್ತು. ಅದೇ ಕಾರಣಕ್ಕೆ ಸಾಕ್ಷಿಯನ್ನು ಇಂಗ್ಲಿಷ್‌ಗೆ ಅನುವಾದಿಸುವ ತವಕವಿತ್ತು.

ಅನುವಾದಿಸುವ ಪ್ರಸ್ತಾಪನೆಯನ್ನು ಭೈರಪ್ಪನವರ ಮುಂದಿಟ್ಟೆ. ಡಿ.ಎ. ಶಂಕರ್ ಆಗಲೇ ಆ ಕೆಲಸಕ್ಕೆ ಕೈಹಾಕಿ ದ್ದಾರೆ ಎಂದರು. ಸಂದಿಗ್ಧ ಯಾವ ಕಾರಣಕ್ಕೇ ಇರಬಹುದು, ಆದರೆ ನಾವೆಲ್ಲರೂ ಅದನ್ನು ಅನುಭವಿಸಲಿಕ್ಕೇ ಜನ್ಮ ತಾಳಿದವರು. ಅದರ ತೀವ್ರತೆಯಲ್ಲಿ ವ್ಯತ್ಯಾಸವಿರಬಹುದಷ್ಟೆ. ಹೇಳಲೇ ಬೇಕಾದ್ದನ್ನು ಎಲ್ಲ ಸಂದರ್ಭದಲ್ಲೂ ಥಟ್ ಅಂತ ಹೇಳಿಬಿಡಲಾಗುವುದಿಲ್ಲ. ಹೇಳದಿರುವುದಕ್ಕೆ ಅನೇಕ ಕಾರಣ ಗಳಿರುತ್ತವೆ. ಪ್ರಾಮಾಣಿಕತೆಯ ಅಭಾವ ವೊಂದೇ ಸದಾ ಕಾಲಕ್ಕೂ ಕಾರಣವೆಂದು ಹೇಳಲಾಗದು. ಹೇಳೇಬಿಡುವುದರ ಹಿಂದೆ ಅಥವಾ ಹೇಳುವುದಕ್ಕೆ ಸೂಕ್ತ ಸಂದರ್ಭಕ್ಕೆ/ ಸಾಮರ್ಥ್ಯಕ್ಕೆ ಕಾಯುವುದರ ಹಿಂದೆ ಲೌಕಿಕ ವ್ಯವಹಾರದ ಲಾಭ-ನಷ್ಟಗಳ ಲೆಕ್ಕಾಚಾರ ಇರುತ್ತದೆ ಎಂಬ ಬೀಸು ಹೇಳಿಕೆ ಸರಿಯಲ್ಲ.

ಈ ಸವಿಸ್ತಾರ ಪೀಠಿಕೆ ಇಲ್ಲಿ ಅವಶ್ಯ. ತೊಂಬತ್ತರ ದಶಕದಲ್ಲಿ, ಮೈಸೂರು ಜಿಲ್ಲೆಯಲ್ಲಿ ದಲಿತರಿಗೂ, ನಾಯಕರಿಗೂ ಗಲಾಟೆಯಾಯ್ತು. ಇಂಟರ್ನೆಟ್
ಇತ್ತಾದರೂ, ಸಾಮಾಜಿಕ ಜಾಲತಾಣವಿನ್ನೂ ಹುಟ್ಟಿರಲಿಲ್ಲ, ಹಾಗಾಗಿ ಮಾಧ್ಯಮದಲ್ಲಿ ಬಂದಿದ್ದೇ ವೇದವಾಕ್ಯ. ಮಾಧ್ಯಮದಲ್ಲಿ ಬರುವುದೆಲ್ಲವೂ ಸತ್ಯವಲ್ಲ ಎಂದು ನನಗಾಗಲೇ ಅರಿವಾಗಿತ್ತು. ದಲಿತ ಮತ್ತು ಮುಸ್ಲಿಂ ಸಮುದಾಯವನ್ನೊಳಗೊಂಡ ಗಲಭೆ ಕುರಿತ ವರದಿಗಳಲ್ಲಿ ಉತ್ಪ್ರೇಕ್ಷೆಯಿರುತ್ತಿತ್ತು,
ಅವುಗಳಲ್ಲನೇಕವು ಏಕಪಕ್ಷೀಯವಾಗಿರುತ್ತಿದ್ದವು ಅಥವಾ ಏಕ ಪಕ್ಷೀಯತೆಯ ಸೋಂಕಿಲ್ಲವೆಂದು ತೋರಿಸಲು ವರದಿಗಾರ/ ವರದಿಗಾರ್ತಿ ಹೆಣಗುವು ದನ್ನು ವರದಿ ನೋಡಿಯೇ ತಿಳಿಯಬಹುದಾಗಿತ್ತು. ದಲಿತಪರ/ಮುಸ್ಲಿಂಪರ ಪ್ರಕಟವಾಗುತ್ತಿದ್ದ ವರದಿಗಳೆಲ್ಲವೂ ಸತ್ಯಪರವಲ್ಲವೆಂಬ ವಾಸ್ತವ ಎದ್ದು ಕಾಣುತ್ತಿತ್ತು.

ಮುಂದಿನ ಬಾರಿ, ಸ್ನೇಹಿತರೊಟ್ಟಿಗೆ ರೆಸ್ಟುರಾದಲ್ಲಿ ಕುಳಿತಾಗ ನೀವೊಂದು ವಿಚಿತ್ರವನ್ನು ಗಮನಿಸಿ. ಸಾಮಾನ್ಯವಾಗಿ, ಮೊದಲು ಯಾರು ಯಾವ ತಿಂಡಿಯನ್ನು ತರಲು ಹೇಳುತ್ತಾರೋ ಅದನ್ನೇ ಉಳಿದವರೂ ಆರ್ಡರ್ ಮಾಡುತ್ತಾರೆ. ಕುಟುಂಬದವರೊಂದಿಗೆ ಹೋದಾಗ ಈ ಸಾಧ್ಯತೆ ಇನ್ನೂ ಹೆಚ್ಚು. ಆಯ್ಕೆಯ ಸ್ವಾತಂತ್ರ್ಯಕ್ಕೆ ಯಾರೂ ಕಡಿವಾಣ ಹಾಕಿರುವುದಿಲ್ಲ, ಆದರೂ ಆ ಹಕ್ಕನ್ನು ಚಲಾಯಿಸುವವರು ಕಡಿಮೆ. ಮೊದಲು ಆರ್ಡರ್ ಮಾಡಿದವರ ಆಯ್ಕೆ ಉಳಿದವರ ಆಯ್ಕೆಯ ಮೇಲೆ ಪ್ರಭಾವ ಬೀರುತ್ತದೆ. ಅವರ ಹಕ್ಕನ್ನು ಮೊಟಕುಗೊಳಿಸುತ್ತದೆ. ಇಲ್ಲಿ ಯಾರೂ ಯಾರ ಆಯ್ಕೆಯನ್ನೂ ಸೀಮಿತ ಗೊಳಿಸುವುದಿಲ್ಲ. ಮೊದಲನೆಯವರ ಅಥವಾ ಮೊದಲಿಬ್ಬರು ಮೂರ್ವರ ಆಯ್ಕೆ ಅದಾಗದೇ ಉಳಿದವರ ನಿರ್ಧಾರವನ್ನು ತನ್ನ ಸೆಳೆತಕ್ಕೆ ಒಳಪಡಿ ಸುವುದು.

ಇದನ್ನು ವರದಿಗಾರಿಕೆಯ ನಿತ್ಯದ ವ್ಯವಹಾರಕ್ಕೆ ವಿಸ್ತರಿಸಿ ನೋಡಿದ್ದೇನೆ. ದಲಿತ-ಮುಸ್ಲಿಂ ಕುರಿತ ವರದಿಗಳಲ್ಲಿ ಮಾಧ್ಯಮ ವಸ್ತುನಿಷ್ಠತೆ  ಕಳೆದು ಕೊಳ್ಳುವುದಕ್ಕೆ ಕಾರಣ ವಾತಾವರಣದಲ್ಲಿನ ದಲಿತಪರ/ಮುಸ್ಲಿಂಪರ ದಟ್ಟತೆ. ಗಾಂಧಿವಾದದ ಪ್ರಭಾವವೂ ಒಂದು. ಗಾಂಧಿ ಪತ್ರಕರ್ತರಾಗಿದ್ದನ್ನು
ಮರೆಯುವಂತಿಲ್ಲ. ಅವರು ಸೃಷ್ಟಿಸಿದ ಮಾಧ್ಯಮ ಟೆಂಪ್ಲೇಟ್ ಗಾಢವಾಗಿ ತಳವೂರಿದೆ. ದನದ ಮಾಂಸ ತಿನ್ನುತ್ತೇನೆ, ಏನೀಗ? ಎಂದು ಹೇಳುತ್ತಲೇ ಗಾಂಧಿವಾದವನ್ನು ಬಾಯ್ತುಂಬ ಹೊಗಳುವ ಸಿದ್ಧರಾಮಯ್ಯರಂತೆ ಸತ್ಯನಿಷ್ಠೆಯ ಪರಿವೆಯೇ ಇಲ್ಲದ ಮಾಧ್ಯಮಸಂಸ್ಥೆ ಅಥವಾ ಪತ್ರಕರ್ತನೂ
ಸಂದರ್ಭಕ್ಕೆ ತಕ್ಕಂತೆ ಸುದ್ದಿಯ ಸ್ವಕಲ್ಪಿತ ಅಪ್ಪಟತೆಗೆ ಗಾಂಧಿ ಎಂಬ ಸಾಣೆಕಲ್ಲನ್ನು ಬಳಸುವುದು. ಹದಗೆಟ್ಟ ಈ ಪರಿಸರದಲ್ಲಿ ಗಾಂಧಿಮಂತ್ರ ಗಾಯತ್ರೀ ಮಂತ್ರಕ್ಕಿಂತ ಫಲದಾಯಕ.

ಕರ್ನಾಟಕದ ಸಂದರ್ಭದಲ್ಲಿ, ಅನಿವಾರ್ಯವಾಗಿ ಪತ್ರಕರ್ತ ಲಂಕೇಶರನ್ನು ಮತ್ತೆ ಮತ್ತೆ ಉದ್ಧರಿಸಬೇಕು. ಗಾಂಧಿಯ ಮಾಧ್ಯಮ ಟೆಂಪ್ಲೇಟನ್ನು ದೀರ್ಘಾವಧಿ ಗುತ್ತಿಗೆಗೆ ಹಿಡಿದ ಪತ್ರಕರ್ತರಲ್ಲಿ ಅವರು ಅಗ್ರರು. ಗಾಂಧಿ ಅನುಸರಿಸಿದ ಜಾಹೀರಾತು-ಮುಕ್ತ ಪತ್ರಿಕೆಯ ಪರಿಕಲ್ಪನೆಯನ್ನು ತನ್ನದ
ನ್ನಾಗಿಸುವ ಜತೆಗೆ ದಲಿತಪರ/ಮುಸ್ಲಿಂಪರ ಧೋರಣೆಯನ್ನು ಗಾಂಧಿಯನ್ನು ನಾಚಿಸುವಂತೆ ಅನುಸರಿಸಿದರು. ಆ ಜಾಣ ವಾಣಿಜ್ಯ ನೀತಿಯ ಜತೆಗೆ ನ್ಯೂನತೆಗಳನ್ನು ಮುಚ್ಚಲು ಶ್ವೇತವಸವಿದ್ದೇ ಇತ್ತು.

ನಾಡಿನ ಸಾಕ್ಷಿಪ್ರಜ್ಞೆಯಾದ ಲಂಕೇಶರೇ ದಲಿತಪರ/ ಮುಸ್ಲಿಂಪರ ನಿಲುವು ತಳೆದ ಮೇಲೆ (ಕನ್ನಡ) ಪತ್ರಿಕೆಗಳು ಮತ್ತು ಅಲ್ಲಿ ಸೇವೆ ಸಲ್ಲಿಸಿದ ಬಹುತೇಕ ಪಾಮರ ವರದಿಗಾರರು ವಿಭಿನ್ನವಾಗಿ ಚಿಂತಿಸುವ ಶಕ್ತಿಯನ್ನು ಒತ್ತೆಗಿಟ್ಟಿ ಬಿಟ್ಟಿದ್ದರು. ಅವರು ಆರ್ಡರ್ ಮಾಡಿದ ವಿಸ್ಕಿಯೇ ನಮಗೂ ಆಯಿತೆಂದು ಆಯ್ಕೆಯ ಸ್ವಾತಂತ್ರ್ಯವನ್ನು ನಿರಾಕರಿಸಿದ್ದರು!

ಅದೇ ಕಾಲಘಟ್ಟದ ದಲಿತ ಸಂಘರ್ಷ ಸಮಿತಿಯೂ ಉಚ್ಛ್ರಾಯದಲ್ಲಿತ್ತು. ಕನ್ನಡ ಮಾಧ್ಯಮ ದಲಿತ ಪರವಶವಾಗಿದ್ದಕ್ಕೆ ಸಮಿತಿಯ ಪ್ರಾಬಲ್ಯವೂ ಕಾರಣ. ಆ ದನಿಗಳ ಅಬ್ಬರದಲ್ಲಿ ಸತ್ಯಪರತೆ ನೇಪಥ್ಯಕ್ಕೆ ಸರಿದಿತ್ತು. ವರ್ತಮಾನದ ವಿದ್ಯಮಾನಗಳ ಪರಿ ಭಿನ್ನವೇನಲ್ಲ. ಅದೇ ಟೆಂಪ್ಲೇಟ್ ಈಗಲೂ ಚಲಾವಣೆಯಲ್ಲಿದೆ. ಇಸಂಮುಕ್ತ ಧೋರಣೆ ಸಾಹಿತಿಗೆಷ್ಟು ಮುಖ್ಯವೋ, ವರದಿಗಾರನಿಗೂ ಅಷ್ಟೇ ಮುಖ್ಯ. ವಾಸ್ತವವೇ ಬೇರೆಯಾಗಿರುವುದರಿಂದ
ಮಾಧ್ಯಮ ಅವನತಿಯತ್ತ ಸಾಗಿದೆ. ಸಾಮಾಜಿಕ ಜಾಲತಾಣಗಳ ಪೈಪೋಟಿ ಇರುವುದರಿಂದ ಮುಖ್ಯವಾಹಿನಿ ಮಾಧ್ಯಮ ದಿನನಿತ್ಯ ಬೆತ್ತಲಾಗುತ್ತಿದೆ.
ಯಾವುದೇ ಒಂದು ವರದಿ-ಯೋಗ್ಯವಾದ ಘಟನೆ ಸಂಭವಿಸಿದಾಗ, ಸಾಮಾನ್ಯವಾಗಿ ಅದಕ್ಕೆ ಪ್ರತ್ಯಕ್ಷದರ್ಶಿಗಳು ಇದ್ದೇ ಇರುತ್ತಾರೆ.

ಆ ಘಟನೆ ತತ್ವಜ್ಞಾನದ ಚರ್ಚೆಯನ್ನು ಹುಟ್ಟುಹಾಕುವಷ್ಟು ಗಂಭೀರವಾಗಿರಬೇಕಿಲ್ಲ. ಆ ಎಲ್ಲ ಘಟನೆಗಳೂ ಪತ್ರಕರ್ತನ ಎದುರಿಗೇ ಘಟಿಸುತ್ತವೆಂದಲ್ಲ. (ಒಂದು ಘಟನೆ ಒಬ್ಬ ಪತ್ರಕರ್ತ ಅಥವಾ ಹಲವು ಪತ್ರಕರ್ತರ ಸಮ್ಮುಖದ ನಡೆದರೂ ಅದರ ನಿಖರವಾದ ವರದಿ ಯಾವಾಗಲೂ ಸಾಧ್ಯವಾಗುವುದಿಲ್ಲ. ಅದಕ್ಕೆ ಗ್ರಹಿಕೆಯ ಅಭಾವವಿರಬಹುದು, ವ್ಯಕ್ತಿತ್ವದ ದೋಷವಿರಬಹುದು, ಹಲವು ವರದಿಗಾರರಲ್ಲಿನ ಜ್ಞಾನದ ಅಥವಾ ಭಾಷಾ ಸಾಮರ್ಥ್ಯದ ಕೊರತೆ ಯಿರಬಹುದು.) ಅತಿ ಸಾಧಾರಣವೆನಿಸುವ ಅಪಘಾತದ ಸುದ್ದಿಯನ್ನೂ ವರದಿಮಾಡುವಾಗ ಅದರ ವಿವರಗಳನ್ನು ಕಲೆ ಹಾಕುವಾಗ ಪ್ರತ್ಯಕ್ಷದರ್ಶಿ ಗಳನ್ನೇ ಅವಲಂಬಿಸಬೇಕಿರುತ್ತದೆ.

ಪ್ರತ್ಯಕ್ಷದರ್ಶಿಗಳು ವರದಿಗಾರನಿಗೆ ಅಥವಾ ವರದಿಗಾರರೆಲ್ಲರಿಗೆ ಸಿಗುತ್ತಾರೆಂಬ ಖಾತರಿ ಇಲ್ಲ. ಈ ಕೆಲವು ಕಾರಣಗಳಿಗೆ (ಇವಿಷ್ಟೇ ಕಾರಣಗಳಲ್ಲ), ವರದಿ ಮೂಲದ ನಿಖರತೆಯನ್ನು ಕಳೆದುಕೊಳ್ಳುತ್ತದೆ. ಪ್ರತ್ಯಕ್ಷದರ್ಶಿಗಳು ತಪ್ಪು ವರದಿಗಳನ್ನು ಓದಿದಾಗ ವರದಿಮಾಡಿದ ಪತ್ರಕರ್ತರ ಬಗ್ಗೆಯೂ, ಅದನ್ನು ವರದಿ ಮಾಡಿದ ಮಾಧ್ಯಮ ಸಂಸ್ಥೆಯ ಬಗ್ಗೆಯೂ ನಂಬಿಕೆ ಕಳೆದುಕೊಳ್ಳುತ್ತಾರೆ. ಗಮನವಿರಲಿ, ತಪ್ಪು ವರದಿಯೇ ಬೇರೆ, ಸುಳ್ಳು ವರದಿಯೇ ಬೇರೆ. ಸುಳ್ಳು ವರದಿಯ ಉತ್ಪಾದನೆ ಬೆಂಗಳೂರು ನಗರದ ದೈನಂದಿನ ತ್ಯಾಜ್ಯಕ್ಕಿಂತ ಹೆಚ್ಚು.

ಸುಳ್ಳು ವರದಿಗೆ ಕಾರಣಗಳು: ಪ್ರಲೋಭನೆ, ಪ್ರತಿಷ್ಠೆ, ಸ್ವಾರ್ಥ, ವೈಯಕ್ತಿಕ ಹಿತಾಸಕ್ತಿ, ಸಾಮಾಜಿಕ ಕಳಕಳಿಯ ಅಭಾವ, ರಾಜಕೀಯ ನಿಲುವು, ಜಾತಿ-ಮತ-ತತ್ವ(!)ಗಳ ವ್ಯಾಮೋಹ, ಭಯ, ಪೂರ್ವಗ್ರಹ, ಇತ್ಯಾದಿ. ಸಾಮಾಜಿಕ ಜಾಲತಾಣ ವಿಸ್ತಾರಗೊಂಡಂತೆ ಮುಖ್ಯವಾಹಿನಿ ಮಾಧ್ಯಮದ ತಪ್ಪುಗಳು/ಸುಳ್ಳುಗಳು ಹೆಚ್ಚು ಹೆಚ್ಚು ಬಹಿರಂಗವಾಗುತ್ತಿವೆ. ಆದರೆ, ಸುಳ್ಳುಗಳ ಪ್ರಮಾಣವೇನು ಕಡಿಮೆಯಾದಂತಿಲ್ಲ. ಲಂಕೇಶ್ ಗರಡಿಯಲ್ಲಿ ಪಳಗಿದ ದ್ವಾರಕಾ ನಾಥ್ ಎಂಬುವರು ಮೊನ್ನೆ ನಡೆದ ಅಂಬೇಡ್ಕರ್ ಜಯಂತಿಯ ಸಮಾರಂಭದಲ್ಲಿ ಮಾತನಾಡುತ್ತ, ಭಾರತ ರತ್ನ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಒಂದೇ ಒಂದು ಡ್ಯಾಮ್ (ಅಣೆ)ಗೆ ಯೋಜನೆ ರೂಪಿಸಿದ ಮನುಷ್ಯನನ್ನು ತಲೆಮೇಲೆ ಹೊತ್ತು ಮೆರೆಸುತ್ತಿದ್ದಾರಂತೆ. ದಲಿತಪರತೆ ಸತ್ಯಪರತೆಯ ಮೇಲೆ ಸಾರ್ವಭೌಮತ್ವ ಸಾರುವುದಕ್ಕೆ ಇದು ತಾಜಾ ಉದಾಹರಣೆ. ಇಂಥವರನ್ನು ಜಾಗ್ರತ ದಲಿತರು ತಿರಸ್ಕರಿಸಬೇಕು. ಏಕೆಂದರೆ ಇಂತಹ ಸುಳ್ಳುಗಳ ಬಿತ್ತ
ರಣೆಯಿಂದ ಅನುಭವಿಸುವುದು ದಲಿತ ಸಮುದಾಯವೇ. ವಿಪರ್ಯಾಸವೆಂದರೆ, ದ್ವಾರಕಾನಾಥರು ಸರ್ ಎಂ.ವಿ. ಕುರಿತು ಮಾತನಾಡಿದ್ದು ನ್ಯಾಯಾ ಲಯದ ಆವರಣದ. ಪರಮೇಶ್ವರಯ್ಯ ಸುಳ್ಳು ಸಾಕ್ಷ್ಯ ನುಡಿಯುವ ಮುನ್ನ ಅನುಭವಿಸಿದ ತೀವ್ರ ತೊಳಲಾಟವನ್ನು ಭಾಷಣಕ್ಕೆ ಮುನ್ನ ಅಥವಾ ಭಾಷಣ ಮಾಡುವಾಗ ಅವರೂ ಅನುಭವಿಸಿದರೇ ಎಂದು ತಿಳಿದುಕೊಳ್ಳುವ ತೀವ್ರ ಕುತೂಹಲ ನಾಡಿನ ಜನತೆಗಿದೆ.

ಸಮಾಜದಲ್ಲಿ ಏಕತೆ ಸಾಮರಸ್ಯ ಮೂಡುವುದಕ್ಕೆ ಅಡಿಪಾಯ ಭದ್ರವಾಗಬೇಕು. ದಲಿತರು ಸಮಾಜದ ಮುಖ್ಯಸ್ತರಕ್ಕೆ ಬರಲು ಅವರನ್ನು ಪ್ರತಿನಿಧಿಸು ವವರ ಅಥವಾ ಪ್ರತಿನಿಧಿಸುವೆವೆಂದು ಭಾವಿಸುವವರ ಕಮಂಗಿ ಹೇಳಿಕೆಗಳು ಅಡ್ಡಬರುತ್ತವೆ. ಜೊಳ್ಳು ಮಾತನಾಡುವವರಿಂದ ಸುಭದ್ರ ಸಮಾಜ ಕಟ್ಟಲಾಗದು. ಅಂಥದ್ದೇ ಜೊಳ್ಳುಮಾತನ್ನು, ಜೊಳ್ಳುಮಾತಿಗೇ ಹೆಸರಾದ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ತಾವು ಮಣ್ಣಾಗುವ ಮುನ್ನ ದಲಿತ ನನ್ನು ಮುಖ್ಯಮಂತ್ರಿ ಮಾಡುತ್ತಾರಂತೆ. ಮಂಡ್ಯದ ಅವರ ಬುಡ ಭದ್ರವಾಗಿಲ್ಲ. ಮಂಡ್ಯದ ಬೆಣ್ಣೆಯೇ ಸಿಗದಿರುವ ವ್ಯಕ್ತಿಗೆ ದಲಿತರ ಮೂಗಿಗೆ ಸವರಲು ತುಪ್ಪ ಸಿಕ್ಕಿದ್ದಾದರೂ ಹೇಗೆ?

ಏದುಸಿರು ಬಿಟ್ಟುಕೊಂಡು ಒಂದು ೩೦ ಸೀಟು ಸಿಕ್ಕರೆ, ನಾನು ಹಾಗೆ ಹೇಳಿದ್ದಕ್ಕೆ ಯಾರು ಸಾಕ್ಷಿ ಇದ್ದಾರೆ ಅಂತ ಕೇಳುವ ವ್ಯಕ್ತಿಯನ್ನು ನಂಬುವಷ್ಟು ಅಮಾಯಕರಲ್ಲ ನಮ್ಮ ದಲಿತರು. ಅವರನ್ನು ಇಂಥ ತೋಳಗಳ ಬಾಯಿಂದ ರಕ್ಷಿಸಿ ನಿಜವಾಗಿ ಮೇಲೆತ್ತಬೇಕಾದ್ದು ಎಲ್ಲ ಜಾತಿಮತಸ್ಥರ ಕರ್ತವ್ಯ ಮತ್ತು
ಜವಾಬ್ದಾರಿ. ರಾಮನಾಥ್ ಕೋವಿಂದ್‌ರಂಥ ಸಭ್ಯರನ್ನು ರಾಷ್ಟ್ರಪತಿ ಸ್ಥಾನದಲ್ಲಿ ಸ್ಥಾಪಿಸಿದ ಭಾರತೀಯ ಜನತಾ ಪಕ್ಷವೇ ತಾನು ಅಧಿಕಾರಕ್ಕೆ ಬಂದರೆ ಕರ್ನಾಟಕದ ಮುಂದಿನ  ಮುಖ್ಯಮಂತ್ರಿ ದಲಿತ ಜನಾಂಗದವರೆಂದು ಘೋಷಿಸಲಿ.

ಅದು ಕೇವಲ ಘೋಷಣೆಯಾಗದಿರಲಿ. ದಲಿತರ ಮತಗಳನ್ನು ಸೆಳೆಯುವ ಸೀಮಿತ ಉದ್ದೇಶದಿಂದ ಅಂತಹ ಭರವಸೆ ಹೊರಬೀಳದಿರಲಿ. ದಲಿತ ಸಮುದಾಯದ ಪ್ರಾಮಾಣಿಕ ಏಳಿಗೆಯಾಗಲಿ. ದಲಿತ ಮುಖ್ಯಮಂತ್ರಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇತರೆ ಎಲ್ಲ ಸಮುದಾಯದವರಿಗೂ ಬರಲಿ.
ಅಂತಹ ಏರ್ಪಾಡನ್ನು ಮಾಡುವಲ್ಲಿ ಮಾಧ್ಯಮದ ಪಾತ್ರ ಹಿರಿದು. ಆ ಕಾರಣಕ್ಕಾಗಿಯಾದರೂ ಅದು ಸತ್ಯಪರತೆಯತ್ತ ಮುಖಮಾಡಬೇಕು. ಸತ್ಯಪರತೆ, ದಲಿತಪರತೆ ಒಂದೇ ಆಗಿಬಿಟ್ಟರಂತೂ ನಮ್ಮದು ಸುಖೀರಾಜ್ಯವಾಗಲು ಎರಡೇ ಗೇಣು. ಅದಕ್ಕೆ ನಾನೂ ಸಾಕ್ಷಿಯಾಗಲಿಚ್ಛಿಸುತ್ತೇನೆ.