ವಾಣಿಜ್ಯ ವಿಭಾಗ
ಡಾ.ಪವಿತ್ರಾ ಆರ್.ಎಚ್.
ಭಾರತದಲ್ಲಿ ಈಗ ಆಗುತ್ತಿರುವ ಹಣದುಬ್ಬರದ ಇಳಿಕೆಯು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಕುಟುಂಬ ಬಳಕೆಯನ್ನು ಜಾಸ್ತಿ ಮಾಡಿದರೆ, ಉದ್ದಿಮೆ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಾದರೆ, ಆರ್ಥಿಕ ಅಭಿವೃದ್ಧಿಯು ನಿರೀಕ್ಷೆಗಿಂತಲೂ ಹೆಚ್ಚು ವೇಗದಲ್ಲಿ ಸಾಗಲಿದೆ ಎಂದಿದೆ ಮುನ್ನೋಟ ವರದಿ.
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯು ((The Organisation for Economic Co-operation and Development*& JCÔw) 2) ೨೦೨೪-೨೫ನೇ ಸಾಲಿಗೆ ಭಾರತದ ಆರ್ಥಿಕ ಪ್ರಗತಿಯ ಮುನ್ನೋಟವನ್ನು ೪೦ ಮೂಲ ಅಂಶಗಳಷ್ಟು (basis points) ಹೆಚ್ಚಿಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿಯು (ದೇಶೀಯ ಆಂತರಿಕ ಉತ್ಪನ್ನ ಅಥವಾ ಆರ್ಥಿಕ ಅಭಿವೃದ್ಧಿ ದರ) ಶೇ.೬.೬ರಷ್ಟು ಇರಲಿದೆ ಎಂದು ಪ್ರತಿಪಾದಿಸಿದೆ. ಸಾರ್ವಜನಿಕ ಹೂಡಿಕೆಯಲ್ಲಿ ಆಗಲಿರುವ ಹೆಚ್ಚಳ ಮತ್ತು ವ್ಯವಹಾರ/ ಉದ್ದಿಮೆ ವಲಯದಲ್ಲಿನ ವಿಶ್ವಾಸ ವೃದ್ಧಿಯು ಭಾರತದ ಜಿಡಿಪಿಯ ಬೆಳವಣಿಗೆಗೆ ಕಾರಣ ವಾಗಲಿದೆ ಎಂದು ಅದು ಹೇಳಿದೆ.
ಸಾರ್ವಜನಿಕ ವಲಯದಲ್ಲಿನ ಒಟ್ಟು ಬಂಡವಾಳ ಸಂಗ್ರಹವು (gross capital formation) ದೇಶೀಯ ಬೇಡಿಕೆಯನ್ನು ಪೂರೈಸಲಿದೆ. ಆದರೆ, ಖಾಸಗಿ ಬಳಕೆಯ ಪ್ರಗತಿಯು ಮಂದಗತಿಯಲ್ಲೇ ಸಾಗಲಿದೆ. ರಫ್ತು ಉದ್ಯಮವು ಬೆಳವಣಿಗೆ ಕಾಣಲಿದ್ದು, ವಿದೇಶಿ ಹೂಡಿಕೆಯ ಬೆಂಬಲದಿಂದಾಗಿ ಮಾಹಿತಿ ತಂತ್ರಜ್ಞಾನ, ಕನ್ಸಲ್ಟಿಂಗ್ ಸೇವಾಕ್ಷೇತ್ರಗಳಲ್ಲಿ ಭಾರತವು ತನ್ನ ಜಾಗತಿಕ ಮಾರುಕಟ್ಟೆ ಪಾಲನ್ನು ಇನ್ನಷ್ಟು ಹೆಚ್ಚಿಸಲಿದೆ- ಇದು ಜಗತ್ತಿನ ೩೮ ಅತ್ಯಂತ
ದೊಡ್ಡ ಆರ್ಥಿಕ ಶಕ್ತಿ ರಾಷ್ಟ್ರಗಳ ಅಂತರ ಸರಕಾರಿ ಸಂಸ್ಥೆಯಾಗಿರುವ ‘ಒಇಸಿಡಿ’ಯು ಭಾರತದ ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಮುನ್ನೋಟ ವರದಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ.
೨೦೨೪-೨೫ರಲ್ಲಿ ಖಾಸಗಿ ಬಳಕೆಯಲ್ಲಿ ಹೆಚ್ಚು ಉತ್ಸಾಹ ಕಂಡುಬರದು ಎಂಬ ವಿಚಾರವನ್ನು ಒಇಸಿಡಿ ತನ್ನ ವರದಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಕುಟುಂಬ ಬಳಕೆ ವೆಚ್ಚ ಸಮೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿರುವ ಸಂಗತಿಯನ್ನು ಇದು ದೃಢಪಡಿಸುತ್ತದೆ.
ಇವೇ ಶುಲ್ಕಗಳು, ಟೋಲ್ ಸಂಗ್ರಹ, ಹೊಸ ವಾಹನ, ದ್ವಿಚಕ್ರ ವಾಹನಗಳ ಮಾರಾಟ ಸೇರಿದಂತೆ ಕೆಲವು ಅಧಿಕ ಆವರ್ತನದ ಸೂಚಕಗಳು (high frequency indicators) ದೇಶದಲ್ಲಿ ಖರೀದಿ ಚಟುವಟಿಕೆಗಳು ಹೆಚ್ಚಾಗುತ್ತಿರುವುದನ್ನು ತೋರಿಸುತ್ತಿವೆ.
ಆದರೆ, ಡಿಜಿಟಲ್ ಪಾವತಿ ವ್ಯವಹಾರಗಳು, ಸಿಮೆಂಟ್ ಉತ್ಪಾದನೆ ಮತ್ತು ಮಾರಾಟದಂಥ ಇತರ ಚಟುವಟಿಕೆಗಳು ಬಹುತೇಕ ಜಡವಾಗಿವೆ ಎಂದು ಮುನ್ನೋಟ ಹೇಳಿದೆ. ಋಣಭಾರದ ಸಮಸ್ಯೆಯನ್ನು ಬಗೆಹರಿಸಲು ಹಲವು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇದಕ್ಕಾಗಿ ಆದಾಯ ಹೆಚ್ಚಿಸುವಿಕೆ, ಜನರ ವೆಚ್ಚ ಸಾಮರ್ಥ್ಯ ಸುಧಾರಣೆ ಮತ್ತು ಬಿಗಿ ಹಣಕಾಸು ನಿಯಮಗಳನ್ನು ಜಾರಿಗೊಳಿಸಬೇಕು. ಹೆಚ್ಚಿನ ಪ್ರಮಾಣದ ಸಾರ್ವಜನಿಕ ಸಾಲವು ಖಾಸಗಿ
ಬಂಡವಾಳ ಹೂಡಿಕೆಯನ್ನು ತಡೆಯುತ್ತಿದ್ದು, ಇಂಥ ಸ್ಥಿತಿಯಲ್ಲಿ ಹಣಕಾಸಿನ ಬಲವರ್ಧನೆ ಹೆಚ್ಚು ಸೂಕ್ತವಾದುದು ಎಂದೂ ಈ ಮುನ್ನೋಟ ವರದಿ ಅಭಿಪ್ರಾಯಪಟ್ಟಿದೆ.
ಅತ್ಯಂತ ಅವಶ್ಯಕವಾಗಿರುವ ಹಣಕಾಸಿನ ಬಲವರ್ಧನೆಯು ಸಾರ್ವಜನಿಕ ಬಂಡವಾಳ ಹೂಡಿಕೆಯ ಮೇಲೆ ಅವಲಂಬಿತವಾಗಿರಲಿದೆ. ಹೆಚ್ಚು ಸದೃಢವಾದ ಖಾಸಗಿ ಹೂಡಿಕೆಯಿಂದ ಮಾತ್ರ ಇದನ್ನು ಭಾಗಶಃ ಸರಿಪಡಿಸಬಹುದು. ಆದರೆ ಖಾಸಗಿ ಹೂಡಿಕೆ ಹೆಚ್ಚಾಗಬೇಕಾದರೆ ವ್ಯಾಪಾರ ವಿಶ್ವಾಸ ವೃದ್ಧಿಯಾಗಬೇಕು. ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗದಿರುವುದು, ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದು ಮತ್ತು
ಕಷ್ಟಕರವಾದ ಆರ್ಥಿಕ ಪರಿಸ್ಥಿತಿಗಳಿಂದಾಗಿ ಕುಟುಂಬ ಬಳಕೆ ವೆಚ್ಚವು (ನಿರ್ದಿಷ್ಟವಾಗಿ, ಗ್ರಾಹಕರ ವಿವೇಚನೆಗೆ ಒಳಪಟ್ಟ ಬೇಡಿಕೆ) ಹೆಚ್ಚಾಗುವ ನಿರೀಕ್ಷೆ ಇಲ್ಲ ಎಂದು ಆರ್ಥಿಕ ಮುನ್ನೋಟ ವರದಿ ವಿವರಿಸಿದೆ.
ಸಾಮಾನ್ಯ ಮುಂಗಾರು ಅವಧಿ ಮತ್ತು ನಿಯಂತ್ರಣಕ್ಕೆ ಬರುತ್ತಿರುವ ಹಣದುಬ್ಬರದ ನಿರೀಕ್ಷೆಗಳನ್ನು ಬುಡಮೇಲು ಮಾಡುವ ಇತರೆ ಯಾವುದೇ ಬೆಳವಣಿಗೆಗಳು ನಡೆದಿದ್ದರೆ, ೨೦೨೪ರ ಅಂತ್ಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರಗಳನ್ನು ಮೊದಲ ಬಾರಿಗೆ ಕಡಿತ ಮಾಡಲು
ಮುಂದಾಗಬಹುದು. ಹಣಕಾಸಿನ ಸ್ಥಿತಿಗತಿ ಇದೇ ರೀತಿ ಮುಂದುವರಿದದ್ದೇ ಆದರೆ, ೨೦೨೬ರ ಮಾರ್ಚ್ ವೇಳೆಗೆ ಆರ್‌ಬಿಐ ಒಟ್ಟಾರೆ ೧೨೫ ಮೂಲ ಅಂಶಗಳವರೆಗೆ ರೆಪೋ ದರವನ್ನು ಕಡಿತ ಮಾಡಬಹುದು ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಅಂದಾಜಿಸಿದೆ.
ಸಂಸ್ಥೆಯು ತನ್ನ ವರದಿಯಲ್ಲಿ ಭಾರತದ ನಿರೀಕ್ಷಿತ ಆರ್ಥಿಕ ಅಭಿವೃದ್ಧಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಸಂಗತಿಗಳನ್ನೂ ಉಲ್ಲೇಖಿಸಿದೆ. ಅದರ ಪ್ರಕಾರ, ದೇಶದಲ್ಲಿ ಸರಕುಗಳ ಪೂರೈಕೆ ವ್ಯವಸ್ಥೆಗೆ ಅಡ್ಡಿ ಉಂಟುಮಾಡಬಹುದಾದ ಭೌಗೋಳಿಕ ರಾಜಕೀಯ ಕ್ಷೋಭೆಗಳು, ಪ್ರತಿಕೂಲ ಹವಾಮಾ ನದ ಕಾರಣದಿಂದ ಆಹಾರ ಹಣದುಬ್ಬರದಲ್ಲಿ ಆಗುವ ಹೆಚ್ಚಳ, ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿನ ವ್ಯತ್ಯಾಸಗಳಿಂದಾಗಿ ಭಾರತದ ಮೇಲೆ ಆಗುವ ಋಣಾತ್ಮಕ ಪ್ರಭಾವಗಳು, ಭಾರತದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಯನ್ನು ತಲೆಕೆಳಗು ಮಾಡಬಹುದು ಎಂದು ಮುನ್ನೋಟ ಎಚ್ಚರಿಸಿದೆ.
ಅದೇ ರೀತಿಯಲ್ಲಿ, ಭಾರತದಲ್ಲಿ ಈಗ ಆಗುತ್ತಿರುವ ಹಣದುಬ್ಬರದ ಇಳಿಕೆಯು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಕುಟುಂಬ ಬಳಕೆಯನ್ನು
ಜಾಸ್ತಿ ಮಾಡಿದರೆ, ಉದ್ದಿಮೆ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಾದರೆ, ಆರ್ಥಿಕ ಅಭಿವೃದ್ಧಿಯು ನಿರೀಕ್ಷೆಗಿಂತಲೂ ಹೆಚ್ಚು ವೇಗದಲ್ಲಿ ಸಾಗಲಿದೆ ಎಂದೂ ಮುನ್ನೋಟ ವರದಿ ಹೇಳಿದೆ.
ಜಾಗತಿಕ ಮುನ್ನೋಟ: ಜಾಗತಿಕ ಮಟ್ಟದಲ್ಲಿ ಜಿಡಿಪಿ ಬೆಳವಣಿಗೆಯ ದರವು ೨೦೨೪ರಲ್ಲಿ ಕಳೆದ ವರ್ಷ ಇದ್ದಂತೆ ಶೇ.೩.೧ರಷ್ಟು ಇರಲಿದೆ ಎಂದು ಒಇಸಿಡಿ ಅಂದಾಜಿಸಿದೆ. ಆದರೆ, ಜನರ ಆದಾಯ ವೃದ್ಧಿ ಮತ್ತು ಕಡಿಮೆ ಬಡ್ಡಿದರ ನೀತಿಯ ಬೆಂಬಲದೊಂದಿಗೆ ೨೦೨೫ರಲ್ಲಿ ಜಿಡಿಪಿ ದರ ಶೇ.೩.೨ಕ್ಕೆ ಏರಲಿದೆ ಎಂದು ಅದು ಭವಿಷ್ಯ ನುಡಿದಿದೆ.
ಜಾಗತಿಕವಾಗಿ ಆರ್ಥಿಕ ಬೆಳವಣಿಗೆಯು ದೇಶದಿಂದ ದೇಶಕ್ಕೆ ಭಿನ್ನವಾಗಿರಲಿದೆ. ಯುರೋಪ್‌ನಲ್ಲಿ ಮತ್ತು ಕಡಿಮೆ ಆದಾಯದ ಬಹುತೇಕ ರಾಷ್ಟ್ರಗಳಲ್ಲಿ ಆರ್ಥಿಕ ಪ್ರಗತಿ ನಿಧಾನವಾಗಿದ್ದರೆ, ಅಮೆರಿಕದಲ್ಲಿ ಮತ್ತು ದೊಡ್ಡ ಮಾರುಕಟ್ಟೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಹಲವು ರಾಷ್ಟ್ರಗಳಲ್ಲಿ ಹಣಕಾಸಿನ ಬೆಳವಣಿಗೆ ಹೆಚ್ಚು ಸದೃಢವಾಗಿರಲಿದೆ. ಇದು ಜಗತ್ತಿನ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಸರಿದೂಗಿಸಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯು ಪ್ರತಿಪಾದಿಸಿದೆ.
(ಲೇಖಕಿ ಅರ್ಥಶಾಸದ ಸಹ ಪ್ರಾಧ್ಯಾಪಕಿ)