Sunday, 15th December 2024

ಏಳಡಿ ಧುಮುಕಲು ಹಿಂಜರಿದಿದ್ದ ಜ.ರಾವತ್

Bipin Rawat

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಭಾರತೀಯ ಸೈನ್ಯವನ್ನು ಮೆಚ್ಚಲೇ ಬೇಕು. ವಿಶಾಲ ಭಾರತದ ಮೂಲೆಮೂಲೆಗಳಿಂದ, ವಿಭಿನ್ನ ಧರ್ಮ ಜಾತಿ ಮತ ಭಾಷಾಮೂಲ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಹಿನ್ನೆಲೆಗಳಿಂದ ಬಂದ ಲಕ್ಷಾಂತರ ಮಂದಿ ಒಂದೇ ಕುಟುಂಬದವರಂತೆ ಮಾರ್ಪಾಡಾಗುವ ಪ್ರಕ್ರಿಯೆಯೇ ಅನನ್ಯ.

ಒಂದು ನಡುರಾತ್ರಿ, ಗಾಡಿಗೆ ಪೆಟ್ರೋಲ್ ಹಾಕಿಸಿ ಬಂಕಿನ ಮಾಲೀಕರ ಜತೆ ಹರಟುತ್ತಿದ್ದೆ. ಕ್ಯಾಲಿಫೋರ್ನಿಯಾದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅವರು ತಮ್ಮ ಅನುಪಸ್ಥಿತಿಯಲ್ಲಿ ಬಂಕನ್ನು ಒಬ್ಬರ ಸುಪರ್ದಿಗೆ ವಹಿಸಿದ್ದರು. ನಿರ್ವಹಣೆಯಲ್ಲಿ ಲೋಪ ದೋಷವಿದ್ದುದರಿಂದ ಅಮೆರಿಕದಿಂದ ಹಿಂತಿರುಗಿ ಅವರೇ
ಅದರ ಮೇಲ್ವಿಚಾರಣೆ ವಹಿಸಿದ್ದರು. ಪ್ರಾಮಾಣಿಕವಾಗಿ ವ್ಯವಹಾರ ನಡೆಸಿದರೆ ಪೆಟ್ರೋಲ್ ವ್ಯಾಪಾರದಲ್ಲಿ ಹೆಚ್ಚು ಗಳಿಸಲಿಕ್ಕಾಗುವುದಿಲ್ಲ ಎಂದ ಅವರು ತಮ್ಮ ವರಮಾನವನ್ನು ಹೆಚ್ಚಿಸಿಕೊಳ್ಳಲು ಪಂಪಿನ ಆವರಣದ ಐಸ್ ಕ್ರೀಮ್ ಪಾರ್ಲರ್ ತೆರೆದಿದ್ದರು.

ಆದರೆ ಪೊಲೀಸರು ಅದನ್ನು ಹತ್ತು ಗಂಟೆಗೆಲ್ಲ ಮುಚ್ಚಿಸಿಬಿಡುತ್ತಿದ್ದರಿಂದ ಅಲ್ಲೂ ಏನೂ ಗಿಟ್ಟುತ್ತಿರಲಿಲ್ಲವೆಂದು ಹೇಳುವಾಗ ಅವರ ಕಣ್ಣಿನಿಂದ ಒಂದು ತೊಟ್ಟು ಹನಿ ಚಿಮ್ಮಿತ್ತು. ಕ್ರೀಡೆಯಲ್ಲಿ ತೊಡಗಿಸಿ ಕೊಂಡ ಯಾವುದೇ ವ್ಯಕ್ತಿ ಮೋಸಮಾಡಲಾರ ಎಂದ ಅವರು ಟೇಬಲ್ ಟೆನಿಸ್ ಆಡುವಾಗಿನ ತಮ್ಮ ಅನುಭವವನ್ನು ಹಂಚಿ ಕೊಂಡಿದ್ದರು. ಶ್ರೀಲಂಕಾದಮ್ಮೆ ತಮ್ಮ ಪ್ರತಿಸ್ಪರ್ಧಿಗೆ ಕೆಲವು ಪಾಯಿಂಟ್ ಗಳನ್ನು ಇವರೇ ಬಿಟ್ಟುಕೊಟ್ಟಿದ್ದನ್ನು ನೆನೆಸುತ್ತ, ತಮ್ಮ ಉದ್ದೇಶ ಅವನನ್ನು ಸೋಲಿಸುವುದಾಗಿತ್ತು ನಿಜ ,ಆದರೆ ಬಗ್ಗುಬಡಿಯುವುದಾಗಿರಲಿಲ್ಲ ಎಂದರು. ಪಾಕಿಸ್ತಾನೀ ಕ್ರಿಕೆಟಿಗರಿಗೆ ನಡವಳಿಕೆ ಕಲಿಸಲು ಕೋಚನ್ನೇ ನಾದರೂ ನೇಮಕ ಮಾಡುವುದಾದರೆ ಇವರನ್ನು ಆಯ್ದುಕೊಳ್ಳಬಹುದು.

ನಾನು ಹಲವು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದೇನಾದರೂ, ಕ್ರೀಡಾ ವರದಿಗಾರನಾಗಿ ಸೇವೆ ಸಲ್ಲಿಸಿದ್ದು ಅಲ್ಪಕಾಲವಷ್ಟೆ. ಆ ಅಲ್ಪಕಾಲದಲ್ಲಿ ಕೆಲವು ಕ್ರೀಡಾ ವರದಿಗಾರರ ನಡುವೆ ಇದ್ದ ರಣಭೀಕರ ವೈಮನಸ್ಯಗಳನ್ನು ಹತ್ತಿರದಿಂದ ನೋಡುವ ದೌರ್ಭಾಗ್ಯ ನನ್ನದಾಗಿತ್ತು. ಒಬ್ಬ ಪತ್ರಕರ್ತನ ಭಾಷಾ ಸಾಮರ್ಥ್ಯ ಅಷ್ಟಿರ ಲಿಲ್ಲ. ಅವನನ್ನು ಮುಖ್ಯವಾದ ಫುಟ್ಬಾಲ್ ಟೂರ್ನಿಯನ್ನು ಕುರಿತು ವರದಿ ಮಾಡಲು ಬೇರೊಂದೂರಿಗೆ ಕಳಿಸಲಾಗಿತ್ತು. ಆತನ ವರದಿಯನ್ನು ನಾನು ತಿದ್ದುತ್ತಿದ್ದೆ. ಹಾಗೆ ಮಾಡುವಾಗ ನನ್ನ ಜತೆ ಡೆಸ್ಕ್‌ನಲ್ಲಿದ್ದ ಏಕೈಕ ಹಿರಿಯ ಸಹೋದ್ಯೋಗಿಯೊಬ್ಬ ನನಗೆ ತಾನು ಕಂಪ್ಯೂಟರ್‌ನಲ್ಲಿ ಟೈಪಿಸಿದ್ದ ಟೆನಿಸ್ ವರದಿಯನ್ನು ತಿದ್ದಲು ಹೇಳಿದ. ನಾನು ತಿದ್ದುತ್ತಿದ್ದ ವರದಿಯಲ್ಲಿ ತಪ್ಪುಗಳು ಹೆಚ್ಚಿದ್ದು ದೂರದೂರುಗಳಿಗೆ ತಲುಪಬೇಕಾದ ಮೊದಲ ಒಂದೆರಡು ಆವೃತ್ತಿಗಳಿಗೆ ತಡವಾಗುವು ದರಿಂದ ಕಟ್ಟಕಡೆಯದಾಗಿ ಮುದ್ರಣವಾಗುವ (ಬೆಂಗಳೂರು) ನಗರದ ಆವೃತ್ತಿಗೆ ಮೊದಲು ತಾನೇ ಸರಿಪಡಿಸುವೆನೆಂದು ಹೇಳಿದ.

ಪತ್ರಿಕೆಯಲ್ಲಿ ಫುಟ್ಬಾಲ್ ಮ್ಯಾಚಿನ ವರದಿಯಲ್ಲಿ ಜೊಂಪೆಜೊಂಪೆಯಾಗಿ ತಪ್ಪುಗಳು ಹಾಗೆಯೇ ಇದ್ದವು. ಏಕೆ ಕಾಪಿಯನ್ನು ಎಡಿಟ್ ಮಾಡಲಿಲ್ಲವೆಂದು ಕೇಳಿದೆ. ಅವನಿಗೆ ಇಂಗ್ಲಿಷ್ ಬರೋದಿಲ್ಲ ಅಂತ ಆಡಳಿತ ವರ್ಗಕ್ಕೂ ಗೊತ್ತಾಗಲಿ ಬಿಡು ಅಂದ. ಕ್ರೀಡಾ ವರದಿಗಾರ ನಾಗಬೇಕೆಂಬ ನನ್ನ ಬೃಹತ್ ಬಯಕೆ ಅಂದೇ ನೆಗೆದು ಬಿದ್ದಿತ್ತು.  ವರದಿಗಾರರ ನಡುವೆ ಇದ್ದ ದ್ವೇಷಾಸೂಯೆ ಗೆ ಕಾರಣ ಆ ಸ್ಥೆಯ ಆಡಳಿತ ವರ್ಗ ತನ್ನ ವರದಿಗಾರರನ್ನು ಕಾರ್ಯನಿಮಿತ್ತ ವಿದೇಶ ಪ್ರವಾಸಕ್ಕೆ ಕಳಿಸು ವುದಕ್ಕೆ ತೋರುತ್ತಿದ್ದ ಔದಾರ್ಯ. ಒಮ್ಮೆ, ಆ ಹಗೆತನ ಕಚೇರಿಯ ಕೈಕೈ ಮಿಲಾಯಿಸುವ ಅತಿರೇಕದ ಹಂತಕ್ಕೂ ಹೋಗಿತ್ತು. ಕಚೇರಿಯ ಕಲಹದಲ್ಲಿ ತೊಡಗಿದ ಇವರು ಹಾಗೂ (ಬಹುಶಃ ಅವಕಾಶ ಸಿಗದ ಕಾರಣಕ್ಕೆ) ಸೆಣಸದ ಇತರ ವರದಿಗಾರರಲ್ಲಿ ಬಹುತೇಕರು ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಂಡವರೇ!

ಕ್ರೀಡೆಗೂ, ಸೇನೆಗೂ ಹಲವು ಸಾಮ್ಯಗಳಿವೆ. ಅದರ ಪಟ್ಟಿ ಇಲ್ಲಿ ಬೇಡ. ಕ್ರೀಡೆಯಲ್ಲಿ, ಸೆಣಸಾಟ ಎದುರಾಳಿಯನ್ನು ಮಣಿಸುವ ಮಟ್ಟಕ್ಕೆ ನಿಲ್ಲುತ್ತದೆ, ಅವನನ್ನು ಮುಗಿಸುವ ಮಟ್ಟಕ್ಕೆ ಹೋಗುವುದಿಲ್ಲ. ಕೆಲವೊಮ್ಮೆ ಕ್ರೀಡಾ ಮನೋಭಾವ ವನ್ನು ಮರೆತ ಆಟಗಾರ ಎದುರಾಳಿಯನ್ನು ದೈಹಿಕವಾಗಿ ಘಾಸಿ ಗೊಳಿಸಲು ಹವಣಿಸುವುದುಂಟು. ಆಟದ ನಿಯಮ ಗಳು ಅದಕ್ಕೆ ಅವಕಾಶ ನೀಡುವುದಿಲ್ಲವಾದರೂ ಅಂತಹ ಮಿತಿ ಮೀರಿದ ವರ್ತನೆ ಆಗಿಂದಾಗ್ಗೆ ಕಂಡುಬರುತ್ತದೆ. ಯುದ್ಧದ
ಸೆಣಸಾಟ ಹಾಗಲ್ಲ. ರಣರಂಗದಲ್ಲಿ ಎದುರಾಳಿ ವೈರಿಯಷ್ಟೇ.

ಅವನನ್ನು ಹತನಾಗಿಸುವುದು ಏಕೈಕ ಗುರಿ. ಸಾವಿನಾಟ ದಲ್ಲಿಯೂ ರೀತಿನೀತಿಗಳ ಕಟ್ಟಳೆ ವಿಧಿಸಿದ್ದು ಸನಾತನ ಧರ್ಮ. ಧರ್ಮಯುದ್ಧವೆಂಬ ಪರಿಕಲ್ಪನೆಯ ನಿಯಮಗಳು ಸಡಿಲ ಗೊಂಡದ್ದು ಮ್ಲೇಚ್ಛರ ನಿರಂತರ ದಾಳಿ ಗಳಿಂದ. ಹಾಗಿದ್ದೂ, ಇಲ್ಲಿಯ ಮಣ್ಣಿನಿಂದ ರೂಪಿತವಾದ ಮೌಲ್ಯಗಳಿನ್ನೂ ಮರೆಯಾಗಿಲ್ಲ. ಆ ಮೌಲ್ಯಗಳ ಕಿರುಪರಿಚಯ ಮಾಡಿಕೊಳ್ಳಲು ನೆರೆಮನೆಯ ಪಾಕಿಸ್ತಾನದತ್ತ ಒಮ್ಮೆ ಕಣ್ಣು ಹಾಯಿಸಿ.

ಸಂಯುಕ್ತ ರಕ್ಷಣಾ ಸೇವೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (ಮತ್ತಿತರ) ಕಾಪ್ಟರ್ ದುರಂತದ ನಂತರ ಅಲ್ಲಲ್ಲಿ ಅಪಸ್ವರಗಳು ಕೇಳಿಬಂದವು. ದೇಶ ದ್ರೋಹಿಗಳು ಸಂಭ್ರಮ ಪಟ್ಟ ಪ್ರಸಂಗಗಳು ಬೇರೆ, ಅವರನ್ನು ವಿಚಾರಿಸಿಕೊಳ್ಳಲು ಸೂಕ್ತ ಏರ್ಪಾಡಿದೆ. ಕರ್ನಾಟಕದಲ್ಲೂ, ಎಂದಿನಂತೆ, ವಿಚಾರಿಸಿಕೊಳ್ಳುವ ಶಾಸ್ತ್ರ ನಡೆಯುತ್ತಿದೆ.) ವಾಸ್ತವದಲ್ಲಿ ಆ ಅಪಸ್ವರಗಳು ಬಿಪಿನ್ ಸೇನಾ ಮುಖ್ಯಸ್ಥರಾದ ದಿನದಿಂದಲೇ ಕೇಳುತ್ತಿದ್ದವು, ಹೊರಬಂದದ್ದು ಕಡಿಮೆ. ಜ್ಯೇಷ್ಠತೆಯ ಆಧಾರದ ಮೇಲೆ ಪ್ರಾಪ್ತವಾದ ಹುದ್ದೆ ಅದಲ್ಲ.

ಅಪರೂಪದಲ್ಲಿ ಅಪರೂಪವೆಂಬಂತೆ, ಬಿಪಿನ್‌ರಿಗಿಂತಲೂ ಹೆಚ್ಚು ಸೇವಾ ಹಿರಿತನವಿದ್ದ ಇಬ್ಬರು ಅಧಿಕಾರಿಗಳನ್ನು ಕಡೆಗಣಿಸಿ ಅವರನ್ನು ಆಯ್ಕೆ ಮಾಡಲಾಯಿತು. ಕ್ರಿಕೆಟ್‌ನಲ್ಲಿ ಮುಂಬಯಿಗರ ಪ್ರಾಬಲ್ಯ ಇಂದು ನೆನ್ನೆಯದಲ್ಲ. ಅಂದು ದಿಲಿಪ್ ವೆಂಗ್‌ಸರ್ಕಾರ್‌ಗೆ ಮತ್ತು ಇತ್ತೀಚಿಗೆ ರೋಹಿತ್ ಶರ್ಮಾಗೆ ಮತ್ತಾರಿಗೂ ನೀಡದಷ್ಟು ಅವಕಾಶಗಳನ್ನು ನೀಡಲಾಯಿತು. ಅದಕ್ಕೆ ನ್ಯಾಯ ಒದಗಿಸಲು ಆ ಇಬ್ಬರೂ ಸಮಯ ತೆಗೆದುಕೊಂಡರು. ನಂತರ ಅವರು ತೋರಿದ ಸಾಮರ್ಥ್ಯ
ಅಸಾಧಾರಣ ವಾದದ್ದು. ಘರ್ವಾಲ್ ಪ್ರದೇಶದ ವರೆಂಬ ಕಾರಣಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬಿಪಿನ್‌ರ ಅತ್ಯುನ್ನತ ಬಡ್ತಿಯಲ್ಲಿ ಪಾತ್ರ ವಹಿಸಿದ್ದರು.

ಬಿಪಿನ್ ರಾವತ್ ತಮ್ಮ ಆಯ್ಕೆಯನ್ನು ಸಮ ರ್ಥಿಸುವ ರೀತಿಯಲ್ಲಿ ಹಲವಾರು ನಿರ್ಣಯಗಳನ್ನೂ, ಅಭೂತಪೂರ್ವ ಕ್ರಮಗಳನ್ನೂ ತೆಗೆದುಕೊಂಡದ್ದು ಸರ್ವ ವೇದ್ಯ. ಹಾಗೆಯೇ, ಅವರು ತೆಗೆದುಕೊಂಡ ಕೆಲವು ವಿವಾ ದಾಸ್ಪದ ನಿರ್ಣಯಗಳು ಹಾಗೂ ಅವಕ್ಕಿಂತ ಹೆಚ್ಚು ವಿವಾ ದಾಸ್ಪದ ಹೇಳಿಕೆಗಳು. ವಾಯುದಳದ ಮಹತ್ವವನ್ನು ಕುಗ್ಗಿಸು ವಂತೆ ಅವರು ನೀಡಿದ ಹೇಳಿಕೆ ಸಮಸ್ತ ವಾಯುದಳವನ್ನೇ ಕ್ರುದ್ಧವಾಗಿಸಿತು. ಬಿಪಿನ್ ರಾವತರಿಗೆ ಸಂಬಂಧಿಸಿದಂತೆ ಮಾಧ್ಯಮ ಬೆಳಕು
ಚೆಲ್ಲದ ಒಂದೆರಡು ಪ್ರಮುಖ ಮಾಹಿತಿಗಳಿವೆ. ಪುಣೆಯ ಖಡಕ್‌ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪದವೀಧರರಾದ (೫೩ನೇ ಬ್ಯಾಚ್‌ನ ) ಅವರು ಆರು ತಿಂಗಳು ಮೊದಲೇ ಡಿಗ್ರಿ ಪಡೆಯುವುದಿತ್ತು, ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣ, ಅವರು ಡೈವಿಂಗ್ ಟೆಸ್ಟ್‌ನಲ್ಲಿ ನಪಾಸಾದರು.

ಕಠಿಣಾತಿಕಠಿಣ ತರಬೇತಿಗೆ ಒಳಪಡುವ ಭಾವೀ ಯೋಧರು ಏಳು ಮೀಟರ್ ಎತ್ತರದ ಬೋರ್ಡ್ ನಿಂದ ಈಜುಕೊಳಕ್ಕೆ ಧುಮುಕಬೇಕು. ಆದರೆ ಅಂಜಿಕೆಯಿಂದ
ಬಿಪಿನ್ ಹಾಗೆ ಮಾಡದೆ ಸಂಜೆಯಾದರೂ ಅ ನಿಂತಿದ್ದರು ಹೊರತು ಜಂಪ್ ಮಾಡಲಿಲ್ಲ. ಇದೊಂದೇ ಹುದ್ದೆಯಾದ ಸೆಕೆಂಡ್ ಲೆಫ್ಟಿನೆಂಟ್ ರಾಂಕ್ ಸಿಗುತ್ತಿತ್ತು. ಹಾಗೆಯೇ, ಆಫೀಸರ್ ಆಗಿ ನೇಮಕ ವಾದ ಯೋಧ ಮೊದಲ ೧೫ ವರ್ಷಗಳಲ್ಲಿ ಮಂಕಿ ರೋಪ್ ಟೆಸ್ಟನ್ನೂ ಪೂರ್ಣಗೊಳಿಸಬೇಕು. ಬಿಪಿನ್ ಹಾಗೆ ಮಾಡಲಿಲ್ಲ.
ಈ ಮಾಹಿತಿಯನ್ನು ಇಲ್ಲಿ ಪ್ರಸ್ತಾಪಿಸುವ ಮೊದಲು ನಿವೃತ್ತ ವಾಯುದಳ ಅಧಿಕಾರಿಯೊಬ್ಬರೊಂದಿಗೆ ಹಂಚಿ ಕೊಂಡೆ.

ಮನುಷ್ಯ ಸಹಜವಾದ ಭಯ ಯಾರನ್ನೂ ಬಿಡಲಾರದೆಂಬ ಉದಾತ್ತತೆಯ ನೆಲೆಗಟ್ಟಿನಲ್ಲಿ ಅವರು ಅದನ್ನು ವಿಶ್ಲೇಷಿಸಿದರು. ವಾಯುಸೇನೆಯ ಬಗ್ಗೆ ಬಿಪಿನ್ ಅಹಿತಕರವಾಗಿ ಹೇಳಿದ ಮಾತಿನ ಕಾರಣದಿಂದ ಅಪ್ರಿಯವಾದ ಒಂದೇ ಮಾತನ್ನು ಆ ಅಧಿಕಾರಿ ಆಡಲಿಲ್ಲ. ಇದು ಸಮವಸ ಧರಿಸಿದವರ ಶಿಸ್ತು, ಸಂಯಮ. ಮೊನ್ನೆ ತಾನೇ ಸಮಕಾಲೀನ ಅಽಕಾರಿಗಳ ಕೂಟದಲ್ಲಿ ಎಳೆಯರಂತೆ ವರ್ತಿಸುತ್ತ ಸೇವಾವಽಯಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಿದ್ದೆವು. ‘ಆ ಮಗ ನನ್ನ ಕೆಲಸವನ್ನು ನುಂಗಿಬಿಟ್ಟ’ ಎಂಬಂತಹ ಮಾತುಗಳೂ ಹೇರಳವಾಗಿ ಬಂದುಹೋದವು. ಆದರೆ, ಅದೆಲ್ಲವೂ ಆ ಕ್ಷಣದ ಲಘು ವೈಷಮ್ಯವಷ್ಟೆ, ಎಂದ ಆ ನಿವೃತ್ತ ಅಧಿಕಾರಿ ಬಿಪಿನ್‌ರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಅದಕ್ಕೇ, ಭಾರತೀಯ ಸೈನ್ಯವನ್ನು ಮೆಚ್ಚಲೇ ಬೇಕು. ವಿಶಾಲ ಭಾರತದ ಮೂಲೆಮೂಲೆಗಳಿಂದ, ವಿಭಿನ್ನ ಧರ್ಮ ಜಾತಿ ಮತ ಭಾಷಾಮೂಲ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಹಿನ್ನೆಲೆಗಳಿಂದ ಬಂದ ಲಕ್ಷಾಂತರ ಮಂದಿ ಒಂದೇ ಕುಟುಂಬ ದವರಂತೆ ಮಾರ್ಪಾಡಾಗುವ ಪ್ರಕ್ರಿಯೆಯೇ ಅನನ್ಯ. ಬಂದೂಕಿನ ಜತೆ ಅವರು ನಿರಂತರ ಹೊರುವುದು ತ್ಯಾಗವೆಂಬ ಉದಾತ್ತತೆ. ಭಾರತೀಯ ಸೈನ್ಯದಂತಹ ವಿಭಿನ್ನ ಸಂಸ್ಕೃತಿಗಳ ಮೇಳ ವಾದ ಒಂದು ವಿರಾಟ್ ಸಂಸ್ಥೆ ಸಾಧ್ಯವಾಗಿಸುವ ಏಕತೆ, ಏಕ ರೂಪತೆ ಮತ್ತು ಸಮನ್ವಯತೆ ಒಂದು ಅಚ್ಚರಿಯೇ ಸರಿ. ಲೇಖನದಲ್ಲಿ ಉಖಿಸಿದ ಪತ್ರಕರ್ತರು ಊಹಿಸಲಾಗದ ಒಗ್ಗಟ್ಟದು. ಒಂದು ಸಂಜೆ, (ಬೆಂಗಳೂರಿನ) ದಿಣ್ಣೂರು ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಬಹುಮಹಡಿ ಕಟ್ಟಡ ಸಮುಚ್ಚಯದಲ್ಲಿ ಸೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸ್ನೇಹಿತ
ರಾಜೇಶ್ ಜತೆ ಸ್ಥಳಕ್ಕೆ ಭೇಟಿ ನೀಡಿದ್ದೆ.

ಆಗ ತಾನೇ ಮೂರನೇ ಮಹಡಿಯ ತಾರಸಿಯಾಗಿತ್ತು. ಕ್ಯೂರಿಂಗ್ ಆಗುತ್ತಿತ್ತು. ಒಂದು ಸೂರಿನಿಂದ ಪಕ್ಕದ ಸೂರಿಗೆ ಹಾದು ಹೋಗಲು ಸೇತುವೆ ನಿರ್ಮಿಸ ಲಾಗಿತ್ತು. ಎರಡಡಿ ಅಗಲ, ಆರಡಿ ಉದ್ದದ ತಗಡಿನ ಹಲಗೆಗಳನ್ನು ಎರಡು ಗಳಗಳ ನಡುವೆ ಕೂಡಿಸಿ ನಾರಿನ ಹಗ್ಗದಿಂದ ಬಿಗಿದು ಭದ್ರ ಮಾಡಿದ ಸೇತುವೆ. ಇಕ್ಕೆಲಗಳಲ್ಲಿ ಹಿಡಿಕೆಯಿಲ್ಲ. ಸುರಕ್ಷತೆಯೂ ಇಲ್ಲ. ರಾಜೇಶ್‌ಗೆ ಅಂತರಿಕ್ಷದ ಆ ಸೇತುವೆಯ ಮೇಲೆ ನಡೆದು ಅಭ್ಯಾಸ ವಾಗಿತ್ತು. ಒಂದಿಷ್ಟೂ ಅಂಜಿಕೆಯಿಲ್ಲ. ನಾನಂತೂ ಬಡಪೆಟ್ಟಿಗೂ ಅದನ್ನು ಬಳಸಲಾಗಲಿಲ್ಲ.

ಕೊನೆಗೊಮ್ಮೆ ರಾಜೇಶ್‌ಗೆ ಹೇಳಿದೆ: ನಾನು ಈ ಸೇತುವೆಯನ್ನು ಹಾದುಹೋದರೆ ಐಎಎಸ್ ಪರೀಕ್ಷೆಯನ್ನೂ ಪಾಸ್ ಮಾಡುವೆ. ಹಲವು ಪ್ರಯತ್ನಗಳ ನಂತರವೂ ಸೇತುವೆ ದಾಟಲೇ ಇಲ್ಲ. ನಾನು ಐಎಎಸ್ ಬರೆಯದಿದ್ದುದಕ್ಕೆ ನನಗೆ ಖೇದವಾಗಲೀ, ಬೇಸರವಾಗಲೀ ಇಲ್ಲ. ಸೈನ್ಯ ಸೇರಲಿಕ್ಕೆ ಬರೆದ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡಿಯೂ ಸಂದರ್ಶನಕ್ಕೆ ಹೋಗದಿದ್ದುದಕ್ಕೆ ಕೊರಗಿದೆ. ಜನರಲ್ ಬಿಪಿನ್ ರಾವತರೇ, ನಾವೆಲ್ಲರೂ ಸಾಮಾನ್ಯರೇ.

ಆದರೆ ಸೇನೆ ನಮ್ಮನ್ನು ಅಸಾಧಾರಣರನ್ನಾಗಿಸುತ್ತದೆ. ಇಲ್ಲದಿದ್ದರೆ, ಅಂದು ಏಳಡಿಯಿಂದ ನೀರಿಗೆ ಧುಮುಕಲು ಹಿಂಜರಿದ ತಾವು ಅಷ್ಟು ಎತ್ತರ ಏರುತ್ತಿರಲಿಲ್ಲ. . Good Bye, the High Altitutde Warfare Expert !