Monday, 16th September 2024

ಬೆಂಕಿ ಬಿದ್ದಾಗ ಬಾವಿ ತೋಡುವ ಕ್ರಮ

ನಾಡಿಮಿಡಿತ

ವಸಂತ ನಾಡಿಗೇರ

ದೀಪಾವಳಿ- ನಮ್ಮ ದೇಶದ ಪ್ರಮುಖ ಹಬ್ಬ. ಬಹುತೇಕ ಹಬ್ಬಗಳಲ್ಲಿ ಧಾರ್ಮಿಕ ಆಚರಣೆ ಮುಖ್ಯವಾಗಿರುತ್ತದೆ. ಆದರೆ ದೀಪಾವಳಿ ಹಾಗಲ್ಲ. ಸಂಭ್ರಮ – ಸಡಗರ, ಖುಷಿ – ಕುಶಾಲು, ಆಮೋದ – ಪ್ರಮೋದಕ್ಕೆ ಈ ಹಬ್ಬದಲ್ಲಿ ಪ್ರಾಧಾನ್ಯ. ಹೀಗಾಗಿ ದೀಪಾವಳಿ ಎಂದರೆ ಸಿಹಿ, ಉಡುಗೊರೆ ಆಟ, ವಿನೋದಗಳೇ ಇರುತ್ತವೆ. ಆದರೆ ದೀಪಾವಳಿಯ ಸಡಗರವನ್ನು ಹೆಚ್ಚಿಸುವ
ಹಾಗೂ ಅದಕ್ಕೆ ವಿಶೇಷ ರಂಗು ಗುಂಗನ್ನು ನೀಡುವುದು ಪಟಾಕಿ. ಹೌದು ಪಟಾಕಿಯು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ. ನಾವೆಲ್ಲ ಚಿಕ್ಕವರಾಗಿದ್ದಾಗ ಪಟಾಕಿ ಹೊಡೆಯುವುದೆಂದರೆ ಎಲ್ಲಿಲ್ಲದ ಆನಂದ.

ಹಾಗೆ ನೋಡಿದರೆ ಉತ್ತರ ಕರ್ನಾಟಕ ಭಾಗದಲ್ಲಿ ಗಣೇಶ ಹಬ್ಬಕ್ಕೆ ಪಟಾಕಿ ಹಾರಿಸುವುದು ಹೆಚ್ಚು. ಉಳಿದ ಕಡೆ ದೀಪಾವಳಿ ಸಂದರ್ಭದಲ್ಲಿ ಜಾಸ್ತಿ. ನಾನು ಬೆಂಗಳೂರಿಗೆ ಬಂದ ಮೊದಲ ವರ್ಷ(ಸುಮಾರು 30 ವರ್ಷದ ಹಿಂದಿನ ಮಾತಿದು) ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಅಬ್ಬರ ನೊಡಿ ದಂಗಾಗಿ ಹೋಗಿದ್ದೆ. ಯುದ್ಧ ನಡೆಯುತ್ತಿರುವ ಹಾಗೆ, ಸರಣಿ ಸೋಟ
ಸಂಭವಿಸು ತ್ತಿದೆಯೋ ಎನ್ನುವಂತೆ ಭಾಸವಾಗುತ್ತಿತ್ತು. ಕ್ರಮೇಣ ಈ ಸಂಸ್ಕೃತಿಗೆ ಹೇಗೋ ಹೊಂದಿಕೊಳ್ಳುವಂತಾಯಿದು. ಒಂದು ರೀತಿ ಅದರ ಭಾಗವಾಗ ಬೇಕಾಯಿತು. ಇದಾಗಿ ಒಂದು ದಶಕದ ಬಳಿಕ ಪಟಾಕಿ ಹೊಡೆಯುವುದರ ಬಗ್ಗೆ ಅಲ್ಲಲ್ಲಿ ಆಕ್ಷೇಪ, ವಿರೋಧ, ಅಸಮಾಧಾನದ ಹೊಗೆಯಾಡಲಾರಂಭಿಸಿತು. ಇದಕ್ಕೆ ಅವರು ಪಟ್ಟಿ ಮಾಡಿದ ಕಾರಣವೆಂದರೆ: ಪಟಾಕಿ ಸುಡುವುದೆಂದರೆ ಹಣ ಸುಡುವುದು ಎಂದರ್ಥ.

ಪಟಾಕಿಯಲ್ಲಿನ ರಾಸಾಯನಿಕಗಳಿಂದ ವಾಯುಮಾಲಿನ್ಯ. ಪಟಾಕಿ ಶಬ್ದದಿಂದ ಶಬ್ದಮಾಲಿನ್ಯ ಉಂಟಾಗುತ್ತದೆ ಮಕ್ಕಳಿಗೆ, ವೃದ್ಧರಿಗೆ, ರೋಗಿಗಳಿಗೆ ಸಮಸ್ಯೆಯಾಗುತ್ತದೆ. ನಾಯಿ ಮತ್ತಿತರ ಪ್ರಾಣಿಗಳು ಬೆದರುತ್ತವೆ ಪಟಾಕಿ ಅವಘಡಗಳಿಂದ ಕಣ್ಣಿಗೆ
ಹಾನಿಯಾಗುತ್ತದೆ. ಹೀಗೆ ಜಾಗೃತಿ ಹೆಚ್ಚಾದಂತೆ ಪಟಾಕಿ ಹೊಡೆಯುವವವರ ಸಂಖ್ಯೆಯೂ ಇಳಿಮುಖ ವಾಗತೊಡಗಿದೆ.
ಹಾಗೆಯೇ ಮಾರಾಟ ಮತ್ತು ಬಳಕೆ ಮೇಲೆ ಕಾಲಕಾಲಕ್ಕೆ ನಾನಾ ಬಗೆಯ ನಿರ್ಬಂಧಗಳು, ಮಾರ್ಗಸೂಚಿಗಳು ಹೊರಬೀಳು ತ್ತಿರುತ್ತವೆ. ಈ ಬಾರಿ ಅದು ಇನ್ನೊಂದು ಮಜಲಿಗೆ ಹೋಗಿದೆ. ಈಗ ಕರೋನಾ ಸಂಕಟದ ಕಾಲ.

ಹೇಗಿದ್ದರೂ ಹಬ್ಬದ ಸಂಭ್ರಮ, ಅಬ್ಬರ ಅಷ್ಟಾಗಿ ಇರುವುದಿಲ್ಲ. ಇದರ ಮಧ್ಯೆ ಪಟಾಕಿಯ ಹೊಗೆಯಿಂದ ಕರೋನಾ ರೋಗಿಗಳಿಗೆ ಇನ್ನಷ್ಟು ಸಮಸ್ಯೆಯಾಗುತ್ತದೆ ಎಂಬ ಸುದ್ದಿ ಬಂದಿತು. ಇರಬಹುದು. ಯಾರೂ ಇದನ್ನು ಅಲ್ಲಗಳೆಯುವುದಿಲ್ಲ. ಅಥವಾ ಒರೆಗೆ ಹಚ್ಚಲು ಹೋಗುವುದಿಲ್ಲ. ಇದೇ ಕಾರಣವನ್ನು ಮುಂದೊಡ್ಡಿ ರಾಜ್ಯ ಸರಕಾರ ಈ ಬಾರಿ ಪಟಾಕಿ ಹೊಡೆಯುವ ಹಾಗಿಲ್ಲ ಎಂದಿತು. ಆದರೆ ಇದರಿಂದ ಜನರಲ್ಲಿ ಗೊಂದಲ, ಗಲಿಬಿಲಿ ಉಂಟಾಯಿತು. ವಿಷಯ ನ್ಯಾಯಾಲಯದ ಮೆಟ್ಟಿಲನ್ನೂ ಏರಿತು. ವಾಯುಮಾಲಿನ್ಯ ಹೆಚ್ಚಾಗಿರುವ ನಗರಗಳಲ್ಲಿ ಪಟಾಕಿ ಹೊಡೆಯುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ನೀಡಿತು. ಇದರ ಬೆನ್ನಲ್ಲೇ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬಹುದು ಎಂಬ ಪರಿಷ್ಕೃತ ಆದೇಶ ಹೊರ ಬಿದ್ದಿತು.

ವಿಷಯವು ರಾಜ್ಯ ಹೈಕೋರ್ಟ್ ಮುಂದೆಯೂ ವಿಚಾರಣೆಗೆ ಬಂದಿತು. ಹಸಿರು ಪಟಾಕಿ ಎಂದರೆ ಏನು ಎಂಬುದು ನಿಮಗೆ ಗೊತ್ತಿದೆಯೇ ಎಂದು ಅದು ನೇರವಾಗಿ ಕೇಳಿದಾಗ ಅಽಕಾರಿಗಳ ಬಳಿ ಸ್ಪಷ್ಟ ಉತ್ತರ ಇರಲಿಲ್ಲ. ತಡಬಡಾಯಿಸಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿತು. ಅಂದರೆ ಈಗಿನ ಲೆಕ್ಕದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಮತ್ತು ಹೊಡೆಯಬೇಕು. ಇಷ್ಟರವರೆಗೆ ಪ್ರಸ್ತಾಪಿಸಿರುವ ಎಲ್ಲವೂ ಗೊತ್ತಿರುವ ಸಂಗತಿಗಳೇ ಈಗ್ಯಾಕೆ ಪುನರಾವರ್ತನೆ ಮಾಡುತ್ತಿದ್ದೀರಿ
ಎಂದಿರಾ? ಇದಕ್ಕೆ ಕಾರಣ ಇದೆ ಮತ್ತು ಈ ವಿಷಯ ಪ್ರಸ್ತಾಪದ ಉದ್ದೇಶವೂ ಇದೇ ಆಗಿದೆ.

ಪಟಾಕಿ ಹೊಡೆಯುವುದು ಆರೋಗ್ಯಕ್ಕೆ, ಪರಿಸರಕ್ಕೆ ಒಳ್ಳೆಯದಲ್ಲ ಎಂಬುದು ನಮಗೆ ಗೊತ್ತಿಲ್ಲವೆ? ಕೆಲವರ ಸಂತೋಷಕ್ಕೆ ಹಲವರಿಗೆ ಕಿರಿಕಿ ಉಂಟುಮಾಡಬಾರದು ಎಂಬುದು ಗೊತ್ತಿಲ್ಲವೆ? ಗೊತ್ತಿದೆ. ಆದರೆ ಪಟಾಕಿ ನಿಷೇಧ, ನಿರ್ಬಂಧದ ಮಾತು ಕೇಳಿಬಂದಾಗಲೆಲ್ಲ ಮುಖ್ಯ ವಿಷಯ ಮರೆಯಾಗಿ ಬೇರೆ ಬೇರೆ ವಿಷಯಗಳು ಮುನ್ನೆಲೆಗೆ ಬರುತ್ತವೆ. ನಮ್ಮ ಸಂತಸಕ್ಕೆ, ನಮ್ಮ
ಸಂಪ್ರದಾಯಕ್ಕೆ ಅಡ್ಡಿ ಉಂಟುಮಾಡಲು ಇವರ‍್ಯಾರು ಎಂಬ ಪ್ರಶ್ನೆಗಳೇಳುತ್ತವೆ. ದೀಪಾವಳಿ ಸಂದರ್ಭದಲ್ಲಿ ಮಾತ್ರ ಪಟಾಕಿ ಹೊಡೆಯಬೇಡಿ ಎಂದರೆ ಉಳಿದ ಸಂದರ್ಭದಲ್ಲಿ ವಾಯುಮಾಲಿನ್ಯ ಆಗುವುದಿಲ್ಲ, ಆರೋಗ್ಯದ ಮೇಲೆ ಪರಿಣಾಮ ಬೀರುವು ದಿಲ್ಲವೆ ಎಂದು ಮುಂತಾಗಿ ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಯಾರೂ ಕೊಡುವುದಿಲ್ಲ.

ಹೀಗೆ ಪರ ವಿರೋಧದ ನಡುವೆ ಪ್ರತಿಬಾರಿಯ ದೀಪಾವಳಿ ಕಳೆದು ಹೋಗುತ್ತದೆ. ಈ ಬಾರಿಯ ದೀಪಾವಳಿಗೆ ಇವೆಲ್ಲವುಗಳ
ಜತೆ ಕರೋನಾ ಮತ್ತು ಹಸಿರು ಪಟಾಕಿಯ ಹೊದಿಕೆಯೂ ಸೇರಿಕೊಂಡು ಮತ್ತಷ್ಟು ಅಧ್ವಾನವಾಗಿದೆ. ಈಗಾಗಲೇ ತಿಳಿಸಿರುವಂತೆ ಹಸಿರು ಪಟಾಕಿ ಎಂದರೇನು ಎಂಬುದರ ಬಗ್ಗೆ ಸರಕಾರಕ್ಕೇ ಸ್ಪಷ್ಟ ಮಾಹಿತಿ ಇಲ್ಲ. ಇನ್ನು ಜನರಿಗೆ, ವ್ಯಾಪಾರಿಗಳಿಗೆ ಹೇಗೆ ಗೊತ್ತಾಗುತ್ತದೆ. ಇದರ ಬಗ್ಗೆ ತಿಳಿವಳಿಕೆ ನೀಡುವವವರು ಯಾರು ಎಂಬುದನ್ನು ಯೋಚಿಸುವ ಗೊಡವೆಗೆ ಯಾರೂ ಹೋಗಿಲ್ಲ. ಹಸಿರು ಪಟಾಕಿಯ ಕಲ್ಪನೆ ಕಳೆದ ವರ್ಷ ಬೆಳಕಿಗೆ ಬಂದಿತು.

ಆರೋಗ್ಯ ಇಲಾಖೆಯು ಸರಕಾರದ ನಾನಾ ಸಂಸ್ಥೆಗಳ ಜತೆಗೂಡಿ, ಸಂಶೋಧನೆ ನಡೆಸಿ ಈ ಹಸಿರು ಪಟಾಕಿಗಳನ್ನು ಅಭಿವೃದ್ಧಿ ಪಡಿಸಿದೆ. ಹಸಿರು ಪಟಾಕಿ ಎಂದರೆ ಮೂಲಭೂತವಾಗಿ ಕಡಿಮೆ ಪರಿಸರ ಮಾಲಿನ್ಯ ಉಂಟುಮಾಡುವಂಥವು. ಪಟಾಕಿಗಳಲ್ಲಿ ಸೀಸ, ಬೇರಿಯಂ, ಸ್ಟ್ರಾನ್ಷಿಯಂ, ತಾಮ್ರ, ಕ್ಯಾಲ್ಷಿಯಂ ಮೊದಲಾದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವು ಮುಖ್ಯವಾಗಿ ಪಟಾಕಿಗಳಿಗೆ ಬೇರೆ ಬೇರೆ ಬಣ್ಣದ ಬೆಳಕು ಹೊರಹೊಮ್ಮಿಸಲು ನೆರವಾಗುತ್ತವೆ. ಆದರೆ ಅದರಿಂದ ಹೊರಸೂಸುವ ವಿಷಾನಿಲಗಳು ಅಪಾಯಕಾರಿ. ಹಸಿರು ಪಟಾಕಿಗಳಲ್ಲಿ ಈ ರಾಸಾಯನಿಕಗಳು ಇರುವುದಿಲ್ಲ.ಅಥವಾ ಅವುಗಳ ಪ್ರಮಾಣದ ಮೇಲೆ ಮಿತಿ ಹೇರಲಾಗಿದೆ.

ಈಗಿನ ವರದಿಗಳ ಪ್ರಕಾರ ಫ್ಲವರ್‌ಪಾಟ್ ಮೊದಲಾದ ಬೆಳಕು ಹೊರಸೂಸುವ ಪಟಾಕಿಗಳಿಗೆ ಅನುಮತಿ ಇದ್ದು ಹೆಚ್ಚು
ಸದ್ದು ಮಾಡುವ ಪಟಾಕಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅನೇಕ ಸಂಗತಿಗಳನ್ನು ಯಾರೂ ಗಂಭಿರವಾಗಿ ಪರಿಗಣಿಸಿಲ್ಲದಿರುವುದು. ಮುಖ್ಯವಾಗಿ ಹಸಿರು ಪಟಾಕಿ ಎಂದು ಜನರಿಗೆ ಗೊತ್ತಾಗುವುದು ಹೇಗೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ನೋಟಿಫಿಕೇಶನ್‌ನಲ್ಲಿ ಇರಬಹುದು. ಆದರೆ ಜನಸಾಮಾನ್ಯರಿಗೆ ಹೇಗೆ ಅರ್ಥವಾಗುವುದು? ಇದು ಕಳೆದ ವರ್ಷವೇ ಬಿಡುಗಡೆಯಾಗಿದ್ದರೂ ಈಗ ಅದರ ಬಗ್ಗೆ ಆದೇಶ ಹೊರಡಿಸುವುದು ಸರ್ವಥಾ ಸಮರ್ಥನೀಯವಲ್ಲ. ಈ ಅಸ್ಪಷ್ಟತೆಯ ಉಪಯೋಗ ಅನ್ನಿ ಅಥವಾ ದುರುಪಯೋಗವೆನ್ನಿ, ಮಾಮೂಲಿ ಪಟಾಕಿಗಳೂ ಬಿಕರಿಯಾಗುವ ಎಲ್ಲ ಸಾಧ್ಯತೆಗಳಿವೆ.

ಗ್ರಾಹಕರು ಅಜ್ಞಾನದಿಂದಲೋ, ಅಸಡ್ಡೆಯಿಂದಲೋ ಸಾಂಪ್ರದಾಯಿಕ ಶೈಲಿಯ ಪಟಾಕಿಗಳನ್ನು ತರುತ್ತಾರೆ. ಅವುಗಳನ್ನೇ ಹಾರಿಸುತ್ತಾರೆ. ಆಗ ಯಾವ ಪುರುಷಾರ್ಥ ಸಾಧನೆ ಆದಂತಾಯಿತು. ಕಾನೂನಿಗೆ, ಆದೇಶಗಳಿಗೆ ಏನು ಗೌರವ ಸಿಕ್ಕಂತಾಯಿತು? ಹೋಗಲಿ. ಹಸಿರು ಪಟಾಕಿಯನ್ನೇ ಮಾರಾಟ ಮಾಡುವುದನ್ನು ಖಚಿತ ಪಡಿಸಿಕೊಳ್ಳುವ ಸೂಕ್ತ ವ್ಯವಸ್ಥೆ ಎಲ್ಲಿದೆ ? ಅಲ್ಲಿಗೆ
ಕಾಟಾಚರಕ್ಕೆ ಈ ಆದೇಶ ಜಾರಿಗೊಳಿಸಲಾಗಿದೆ ಎಂಬುದು ಸ್ಪಷ್ಟ .

ಭಾರತದಲ್ಲಿ ವಾರ್ಷಿಕ ಪಟಾಕಿ ವಹಿವಾಟು ಅಂದಾಜು 120 ಕೋಟಿ ರು. ಎನ್ನಲಾಗಿದೆ. ಪಟಾಕಿ ಜಾಗೃತಿ ಇತ್ಯಾದಿ ಕಾರಣದಿಂದ ಕಳೆದ ಕೆಲವು ವರ್ಷ ಗಳಲ್ಲಿ ಮಾರಾಟ ಇಳಿಮುಖ ಆಗಿರುವುದೂ ನಿಜ. ಈ ವರ್ಷ ಬೇರೆ ಬೇರೆ ಸಮಸ್ಯೆಗಳಿಂದಾಗಿ ಪರಿಸ್ಥಿತಿ
ಮತ್ತಷ್ಟು ಬಿಗಡಾಯಿಸಿದೆ. ಈ ಬಾರಿ ಮಳೆಗಾಲ ಅನಿರೀಕ್ಷಿತವಾಗಿ ವಿಸ್ತರಣೆ ಆಗಿದ್ದರಿಂದ ಪಟಾಕಿಗಳ ಪೂರೈಕೆ ಮತ್ತು ದಾಸ್ತಾನು ಸಮಸ್ಯೆ ಯಾಗಿದೆ. ಅದೂ ಇಲ್ಲದೆ ಕರೋನಾ ಸಾಂಕ್ರಾಮಿಕವು ಸಮಸ್ಯೆ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಪಟಾಕಿ ಯಿಂದ ಕರೋನಾ ರೋಗಿಗಳಿಗೆ ಹೆಚ್ಚು ತೊಂದರೆ ಯಾಗುತ್ತದೆ ಎಂಬ ವರದಿಗಳು ಜನರಲ್ಲಿ ಆತಂಕ ಮೂಡಿಸಿದೆ. ಇದನ್ನೇ ಕಾರಣ ವಾಗಿರಿಸಿ ಒಂದಷ್ಟು ರಾಜ್ಯಗಳು ಪಟಾಕಿ ಹೊಡೆಯುವುದನ್ನೇ ನಿಷೇಧ ಮಾಡಿರುವುದೂ ಉಂಟು. ಇದರ ಜತೆಗೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕೆಂಬ ಆದೇಶದ ಬರೆ ಬೇರೆ ಬಿದ್ದಿದೆ. ಇವೆಲ್ಲ ಸೇರಿ ಸಮಸ್ಯೆ ಮತ್ತಷ್ಟು ಗೋಜಲಾಗಿದೆ.

ಜನರು ಪಟಾಕಿಯಿಂದ ದೂರ ಉಳಿಯುವಂತೆ ಮಾಡಿದೆ. ಇದೆಲ್ಲ ಸರಿ. ಆದರೆ ಪಟಾಕಿ ಮಾರಾಟಗಾರರ ಗತಿಯೇನು ಎಂಬು ದನ್ನು ಯಾರಾದರೂ ಯೋಚಿಸಿದ್ದಾರೆಯೆ? ಮೊದಲಿನಿಂದಲೂ ಅವರು ಎಲ್ಲರ ಕಣ್ಣಲ್ಲಿ ಖಳನಾಯಕರ ಥರ ಆಗಿದ್ದಾರೆ. ದೊಡ್ಡ ದೊಡ್ಡ ವ್ಯಾಪಾರಿಗಳು ಈಗಾಗಲೇ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿರುತ್ತಾರೆ. ಆದರೆ ಈಗ ಹಸಿರು ಪಟಾಕಿ ಮಾತ್ರ ಎಂದರೆ ಅವರು ತಂದಿಟ್ಟುಕೊಂಡಿರುವ ಇತರ ಪಟಾಕಿಗಳನ್ನೇನು ಮಾಡಬೇಕು ? ಆದೇಶ ಪಾಲನೆ ಮಾಡಿದರೆ ನಷ್ಟ. ಇಲ್ಲದಿದ್ದರೆ ಆದೇಶ
ಉಲ್ಲಂಸಿ ಅವುಗಳನ್ನೇ ಗ್ರಾಹಕರಿಗೆ ದಾಟಿಸಬೇಕು.

ಇದೇ ಹಸಿರು ಪಟಾಕಿ ಎಂದು ಹೇಳಿದರೆ ಜನರಿಗೆ ಏನು ಗೊತ್ತಾಗುತ್ತದೆ ಹೇಳಿ. ಇನ್ನು ಸಣ್ಣ ಪುಟ್ಟ ವ್ಯಾಪಾರಿಗಳೂ ಹಬ್ಬದ ಸೀಸನ್‌ನಲ್ಲಿ ಪಟಾಕಿ ವ್ಯಾಪಾರ ಮಾಡಿ ಒಂದಷ್ಟು ಕಾಸು ಮಾಡಿಕೊಳ್ಳುತಾರೆ. ಆದರೆ ಈ ಬಾರಿ ಅದಕ್ಕೂ ಕಲ್ಲು ಬೀಳಿವ ಸಂಭವ ವಿದೆ. ಮೊದಲೇ ಕರೋನಾದಿಂದ ವ್ಯಾಪಾರ ವಹಿವಾಟು ಇಲ್ಲದೆ ಎಲ್ಲರೂ ಕಂಗೆಟ್ಟಿದ್ದಾರೆ. ದೀಪಾವಳಿ ಸಮಯದಲ್ಲಿ ಅವರಿಗೆ ಒಂದಷ್ಟು ಹಣ ಗಳಿಸುವ ಅವಕಾಶವಿತ್ತು. ಆದರೆ ಹತ್ತು ಹಲವು ನಿರ್ಬಂಧ ಗಳಿಂದಾಗಿ ಅದೂ ಸಮಸ್ಯೆಯಾಗಿದೆ.

ಆದರೆ ಯಾರಿಗೆ ಹೇಳೋಣ ನಮ್ ಪ್ರಾಬ್ಲಮ್ ಎಂಬ ಅವರ ಪ್ರಶ್ನೆಗೆ ಉತ್ತರ ಸಿಗುವುದು ದುಸ್ತರ. ಹಾಗೆಂದು ಸರಕಾರದ ಈ ಕಣ್ಣಾಮುಚ್ಚಾಲೆ ಪಟಾಕಿಗೆ ಮಾತ್ರ ಸೀಮಿತವಾದುದಲ್ಲ. ಇನ್ನಿತರ ಹಲವಾರು ಸಂದರ್ಭಗಳಲ್ಲೂ ಗೊಂದಲ, ಗಡಿಬಿಡಿ ಆಗಿದೆ.
ಇದು ಮೊದಲೂ ಅಲ್ಲ, ಕೊನೆಯೂ ಆಗಲಿಕ್ಕಿಲ್ಲ. ಪ್ರತಿ ಗಣೇಶ ಹಬ್ಬದ ಸಂದರ್ಭದಲ್ಲೂ ಇದೇ ರೀತಿಯ ಎಡವಟ್ಟು ಗಳನ್ನು ನಾವು ನೋಡುತ್ತ ಬಂದಿದ್ದೇವೆ. ಗಣೇಶ ವಿಗ್ರಹ ಗಳಿಗೆ ಸಬಂಧಿಸಿದ ಸಮಸ್ಯೆ ಅದು.

ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ವಿಗ್ರಹಗಳನ್ನು ಮಾರುವಂತಿಲ್ಲ ಎಂಬ ವಿಷಯ ಪ್ರತಿವರ್ಷ ಮುನ್ನೆಲೆಗೆ ಬರುತ್ತದೆ. ಆದರೆ ಆ ಆದೇಶ ಎಷ್ಟರ ಮಟ್ಟಿಗೆ ಪಾಲನೆ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಈ ಬಾರಿಯಂತೂ
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ, ಗಣೇಶ ವಿಸರ್ಜನೆ ಇತ್ಯಾದಿ ವಿಚಾರವಾಗಿ ದಿನಕ್ಕೊಂದು ಆದೇಶಗಳು ಹೊರಬೀಳುತ್ತಿದ್ದವು.
ಅದೇ ರೀತಿ ದೇವಾಲಯ ಮತ್ತಿತರ ಧಾರ್ಮಿಕ ಸ್ಥಳಗಳ ಪುನರಾರಂಭದ ವಿಷಯದಲ್ಲೂ ಹೊಯ್ದಾಟವೋ ಹೊಯ್ದಾಟ. ಪೂಜೆ ನಡೆಯಬಹದು, ಆದರೆ ಭಕ್ತರಿಗೆ ಅವಕಾಶವಿಲ್ಲ ಎಂದರು. ಆನ್‌ಲೈನ್ ಸೇವೆ ಎಂದರು.

ಕೊನೆಗೆ ಭಕ್ತರು ಬರಬಹುದು, ಆದರೆ ಪ್ರಸಾದ ವಿತರಣೆ ಇಲ್ಲ ಎಂಬ ಆದೇಶ. ಮದುವೆ ಮತ್ತಿತರ ಸಮಾರಂಭಗಳ ಕುರಿತಾದ
ಆದೇಶಗಳೂ ನೆಟ್ಟಗಾಗಿರಲಿಲ್ಲ. ಎಷ್ಟು ಜನರು ಬರಬೇಕು ಎಂಬುದರಿಂದ ಹಿಡಿದು ಎಲ್ಲವೂ ಗೋಜಲು. ಒಂದು ಹಂತದಲ್ಲಂತೂ ಎಷ್ಟು ಜನ ಊಟ ಮಾಡಿದರು ಎಂಬುದರ ಲೆಕ್ಕ ಕೊಡಿ ಎಂಬ ಆದೇಶವೂ ಹೊರಬಿದ್ದಿತು.

ಕರೋನಾ ಕಾಲದಲ್ಲಿ ಜಾರಿಗೆ ತರಲಾದ ನಿಯಮಗಳಲ್ಲಂತೂ ಗೊಂದಲವೋ ಗೊಂದಲ. ಲಾಕ್‌ಡೌನ್ ಕುರಿತಂತೆ ದಿನಕ್ಕೊಂದು ಆದೇಶಗಳು ಹೊರಬೀಳುತ್ತಿದ್ದವು. ಅದೂ ಕೇಂದ್ರದಿಂದ ಒಂದು ಆದೇಶ ಹಾಗೂ ರಾಜ್ಯ ಸರಕಾರದಿಂದ ಬೇರೆಯದೇ ಆದೇಶ. ಮಾಸ್ಕ್ ಧರಿಸುವ ವಿಚಾರದಲ್ಲೂ ಈಗಲೂ ಗೊಂದಲ ನಿವಾರಣೆ ಆಗಿಲ್ಲ. ಯಾರು ಮಾಸ್ಕ್ ಧರಿಸಬೇಕು, ಯಾರಿಗೆ ವಿನಾಯಿತಿ ಇದೆ, ದಂಡ ಎಷ್ಟು – ಹೀಗೆ ಎಲ್ಲವೂ ಅಯೋಮಯ. ಇನ್ನು ಕರೋನಾದಿಂದ ತೊಂದರೆ ಗೊಳಗಾದ ಕೆಲವು ವರ್ಗಗಳ
(ಉದಾಹರಣೆ, ಆಟೊ, ಕ್ಯಾಬ್ ಡ್ರೈವರ್‌ಗಳು, ಕಲಾವಿದರು ಇತ್ಯಾದಿ) ಜನರಿಗೆ ಪರಿಹಾರ ನೀಡುವ ಪ್ರಕಟಣೆ ಹೊರಬಿತ್ತು.

ಆದರೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಕುರಿತು ಸ್ಪಷ್ಟತೆ ಇರಲಿಲ್ಲ. ಇಂಥ ಕೆಲವರಿಗೆ ಇವತ್ತಿಗೂ ಬಹುಶಃ ಪರಿಹಾರ ಸಿಕ್ಕಿಲ್ಲ. ಶಿಕ್ಷಣ ಇಲಾಖೆಯದು ಎಲ್ಲಕಿಂತ ದೊಡ್ಡ ಸಮಸ್ಯೆ. ಎಸ್ಸೆಸೆಲ್ಸಿ ಪರೀಕ್ಷೆ ಮಾಡಬೇಕೆ ಬೇಡವೆ ಎಂಬ ಬಗ್ಗೆ ದೊಡ್ಡ ಚರ್ಚೆಯೇ ಆಯಿತು. ಕೊನೆಗೂ ಪರೀಕ್ಷೆ ನಡೆಯಿತು. ಅದೇ ರೀತಿ ಶಾಲೆ ಕಾಲೇಜು ಆರಂಭದ ಬಗ್ಗೆ ಇನ್ನೂ ಯಾರಿಗೂ ಸ್ಪಷ್ಟತೆ ಇಲ್ಲ. ಆನ್‌ಲೈನ್, ಆ- ಲೈನ್ ಎನ್ನುತ್ತಲೇ ದಿನಕಳೆಯುತ್ತಿದೆ. ವಿದ್ಯಾಗಮ ಎಂಬ ಕಾರ‍್ಯಕ್ರಮ ಆರಂಭವಾಯಿತಾದರೂ ಅದರ
ಬಗ್ಗೆ ದೊಡ್ಡ ಹಂಗಾಮವೇ ನಡೆದು ಅದು ನಿಂತು ಹೋಯಿತು. ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ವರ್ಷ ಕಳೆದಿರುವುದರಿಂದ ಪಾಠಗಳ ಕಡಿತ ಹೇಗೆ ಎಂಬುದೂ ನನೆಗುದಿಗೆ ಬಿದ್ದಿದೆ. ಸರಕಾರಕ್ಕೆ, ಅಧಿಕಾರಿಗಳಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕೊನೆಗೆ
ಪೋಷಕರಿಗೆ-ಹೀಗೆ ಯಾರಿಗೂ ಯಾವುದು ಏನು ಎಂದು ಸ್ಪಷ್ಟವಾಗಿ ಗೊತ್ತಿಲ್ಲ.

ಇದೆಲ್ಲಕ್ಕೂ ಮುಖ್ಯ ಕಾರಣ ಸರಕಾರದ ಉದಾಸೀನ ಮನೋಭಾವವಲ್ಲದೆ ಬೇರೇನೂ ಅಲ್ಲ. ಸರಕಾರದ ಗೊಂದಲ ಹಾಗೂ ನಿಧಾನ ಪ್ರವೃತ್ತಿಯಿಂದ ಜನರಿಗೆ ಸಮಸ್ಯೆ, ತೊಂದರೆ ಆಗುತ್ತದೆ. ಹಾಗೆಂದು ಇದು ಪರಿಹಾರ ಮಾಡಲಾಗದಂಥ ಸಮಸ್ಯೆಯೇನೂ
ಅಲ್ಲ. ಆದರೆ ಒಂದು ಯೋಜನೆ, ಯೋಚನೆ, ಸಿದ್ಧತೆ ಬದ್ಧತೆ ಇರಬೇಕು ಅಷ್ಟೆ.

ನಾಡಿಶಾಸ್ತ್ರ
ಮಾಡಿಮಾಡಿ ಕೆಟ್ಟರೋ ಮನವಿಲ್ಲದೆ
ಎಂಬಂತಿದೆ ನಮ್ಮ ಸರಕಾರದ ಇರಾದೆ
ಯೋಜನೆ, ಯೋಚನೆ, ಆಲೋಚನೆ
ಇದ್ದರೆ ಬಗೆಹರಿವುದು ಸಮಸ್ಯೆ ಥಟ್ಟನೆ

Leave a Reply

Your email address will not be published. Required fields are marked *