Saturday, 14th December 2024

ಮಲೆನಾಡಲ್ಲಿ ಮಾಡುತ್ತಿದೆ ಆಲೆಮನೆ ನೊರೆಬೆಲ್ಲದ ಗಮಲು

ಸುಪ್ತ ಸಾಗರ

rkbhadti@gmail.com

ಬಿಳಿಯ ಸಕ್ಕರೆ ಹರಳಿನ ವಯ್ಯಾರ ಆಕರ್ಷಣೀಯವಾಗಿ ಕಾಣುತ್ತಿರುವಾಗ ಡಬ್ಬಿ ಬೆಲ್ಲ ಬೇಡಿಕೆಯನ್ನೂ ಕಳಕೊಂಡಿದೆ. ಬೆಲ್ಲ ತಯಾರಿಕೆ ನೈಪುಣ್ಯ ಹಿರಿಯರಿಂದ ಯುವ ತಲೆಮಾರಿಗೆ ಹರಿದು ಬಾರದಿರುವುದಕ್ಕೆ ಕಾರಣ ಹಳ್ಳಿಗಳಲ್ಲಿ ನಿಂತು ಕೃಷಿ ಕಾಯಕಕ್ಕೆ ಮುಂದಾಗವುದರಲ್ಲಿ ಆಸಕ್ತಿ ಕಳಕೊಂಡಿರುವ ಯುವ ಸಮುದಾಯ. ಹೀಗಾಗಿ ಬೆಲ್ಲ ಮಾಡಲು ಬಲ್ಲವರೂ ಇಲ್ಲ.

ಕೊಪ್ಪರಿಗೆಯಲ್ಲಿ ಕೊತಕೊತ ಕುದಿಯುತ್ತಿದ್ದ ಬೆಲ್ಲ. ಕೆಳಗಿನಿಂದ ಮರಮರಳಿ ಬರುತ್ತಿದ್ದ ಜೊಂಡು, ಕೊಪ್ಪರಿಗೆಯ ಕೆಳಗಿನ ಒಲೆಯಲ್ಲಿ ನಿಗಿನಿಗಿಯಾಗಿ ಉರಿಯುತ್ತಿದ್ದ ಕುಂಟೆ, ಕೋಣಗಳ ಲಯಬದ್ಧ ಗಂಟೆಗೆ ಶ್ರುತಿ ಸೇರಿಸಿ ಕೂಗುತ್ತಿದ್ದ ಗೆಣೆಯ ಗಾಣಿಗ, ನಟ್ಟ ನಡುವೆ ಧಾರೆಯಾಗಿ ಬಾನಿಗೆ ಬೀಳುತ್ತಿದ್ದ ಕಬ್ಬಿನ ಹಾಲು, ಪಕ್ಕದ ಶ್ವೇತ ಹಿಮ ಪರ್ವತದಂತೆ ರಾಶಿರಾಶಿಯಾಗಿ ಬೀಳುತ್ತಿದ್ದ ಕಾಕಂಬಿ…ಸುತ್ತಲ್ಲ ಗಮ್ಮನೆ ಪಸರಿಸುತ್ತಿದ್ದ ಬೆಲ್ಲದ ಸುವಾ ಸನೆ.

ಕವ್ವನೆ ಕವಿದಿದ್ದ ನೀರವ ರಾತ್ರಿಯಲ್ಲಿ ಥರಗುಟ್ಟುವ ಚಳಿಗೆ ಮುದುಡುವ ಅವಕಾಶವನ್ನು ತಪ್ಪಿಸಿಕೊಳ್ಳಲು ಇಚ್ಛಿಸಿದ ಒಂದಷ್ಟು ಚಿಣ್ಣರು ಬೆಲ್ಲದ ತಿಳಿ ಬಾನಿಯ ಕಡೆಗೊಮ್ಮೆ, ಕಬ್ಬಿನ ಹಾಲಿನ ಕಡೆಗೊಮ್ಮೆ ಆಸೆಯ ನೋಟ ಬೀರುತ್ತ ಮತ್ತಷ್ಟು ಮುದುಡುತ್ತ ಗುಂಪಾಗಿ ನೆರೆದಿದ್ದರೆ ಅಲ್ಲಿ ಆಲೆ ಮನೆ ನಡೆಯುತ್ತಿದೆ ಎಂದು ಬೇರೆ ಹೇಳಬೇಕಾಗಿಯೇ ಇಲ್ಲ.

ಭತ್ತದ ಕೊಯ್ಲೆಲ್ಲ ಮುಗಿದು, ಬಟಾನು ಬಯಲಾಗಿ ಬೆತ್ತಲೆ ಮೈ ಚೆಲ್ಲಿ ಮಲಗಿದ್ದ ಗದ್ದೆಯ ಕೊನೆಯಲ್ಲಿ, ತುಸು ಎತ್ತರದ ತಾಣದಲ್ಲಿ ಹಸಿ ಸೊಪ್ಪಿನ ತೆನಕೆಗಳ ಚಪ್ಪರದ ಕೆಳಗೆ ನಡೆಯುತ್ತಿದ್ದ ಆಲೆಮನೆಯ ಸಂಭ್ರಮಕ್ಕೆ ಸಾಟಿ ಮತ್ತೊಂದಿಲ್ಲ. ಸಂಕ್ರಾಂತಿ ಮುನ್ನವೇ ಕೋಣಗಳ ಮೈ ತೊಳೆಸಿ, ಎಣ್ಣೆಯನ್ನು ನೀವಿ ಮಿರಮಿರ ಮಿಂಚುವ ಗಳೆಯಕ್ಕೆ ಗಾಡಿ ಕಟ್ಟಿ ಪಾತ್ರ ಪಗಡಿಗಳನ್ನು ಹೇರಿ ಘಟ್ಟದ ಕೆಳಗಿಂದ ಗಾಗ ಹೊರಡುವ ಹೊತ್ತಿಗಾ ಗಲೇ ಮಲೆನಾಡ ಜಿಲ್ಲೆಗಳಲ್ಲಿ ಆಲೆ ಕಣ ಸಜಗಿ ನಿಂತಿರುತ್ತದೆ.

ಗದ್ದೆಯ ಮೇಲ್ಭಾಗ ಸಪಾಟು ನೆಲದ ಜಡ್ಡು ಕೆತ್ತಿ, ಸಗಣಿ ಗಂಜಳಗಳನ್ನು ಹಾಕಿ ಸಾರಿಸಿ ಕಣ ಸಿದ್ಧಪಡಿಸಿರುತ್ತಾರೆ. ಹೊಂಗೆ ಸೊಪ್ಪಿನ ಜೊತೆಗೆ ಸೋಗೆ (ಅಡಕೆಯ ಒಣ ಎಲೆ)ಯನ್ನು ಪೇರಿಸಿ ಕಟ್ಟುವ ಚಪ್ಪರದ ಕೆಳಗೆ ರಕ್ಕಸ ಬಾಯಿಯ ಆಲೆ ಒಲೆಗೆ ಮಣ್ಣು ಮೆತ್ತಿ ರಂಗವಲ್ಲಿ ಇಟ್ಟು ಸಿಂಗರಿಸುವ ಕಾಯಕ ಹೆಣ್ಣಾಳುಗಳದ್ದು. ತೋಟದ ತಲೆಯ ಸೊಪ್ಪಿನ ಬೆಟ್ಟದಲ್ಲಿ ಒಣಗಿ ಉರುಳಿದ
ದಿಮ್ಮಿಗಳನ್ನು ಒಲೆಯ ಗಾತ್ರಕ್ಕೆ ತಕ್ಕಂತೆ ಒಡೆದು ಆಲೆಯ ಕುಂಟೆಗಳನ್ನಾಗಿ ಮಾರ್ಪಡಿಸುವುದೇ ಇನ್ನೊಂದು ಸಾಹಸ.

ಇಷ್ಟೆಲ್ಲ ಆಗುವ ಹೊತ್ತಿಗೆ ಅಲ್ಲಲ್ಲಿ ಕದರು ಮೂಡಿ ನಿಂತಿದ್ದ ಕಬ್ಬಿನ ಗದ್ದೆಗೆ ನಿಲ್ಲಿಸಿದ್ದ ನೀರನ್ನು ಹೊರ ಕಳುಹಿಸಿ ಒಣಗಲು
ಬಿಟ್ಟು ಹತ್ತು ದಿನಗಳಾಗಿರುತ್ತದೆ. ಆಗಲೇ ಪಾಳಿಯಂತೆ ಅಲೆ ಮನೆಯ ವೇಳಾಪಟ್ಟಿ ಗ್ರಾಮದ ಮುಖಂಡರಿಂದ ಸಿದ್ಧ ಗೊಂಡಿರು ತ್ತದೆ. ಕೆರೆಯಿಂದ ದೂರದ ಹೊಲದಲ್ಲಿ ಬೆಳೆದು ನಿಂತಿದ್ದ ಕಬ್ಬಿಗೆ ಮೊದಲು ಅರೆಸಿಕೊಳ್ಳುವ ಯೋಗ. ಮೊದಲೇ
ನಾಟಿ ಯಾಗಿದ್ದ ಗದ್ದೆ, ಪುಟ್ಟ ಹಿಡುವಳಿದಾರರು ಇತ್ಯಾದಿ ಅಂಶಗಳು ಸಹ ಆದ್ಯತೆ ಪಡೆಯುವುದು ಸಹಜ.

ಒಟ್ಟಾರೆ ಗ್ರಾಮದಲ್ಲಿ ತಿಂಗಳವರೆಗೆ ಬಿಡಾರ ಹೂಡುವ ಆಲೆಗಾಣ ಮತ್ತಲ್ಲಿಂದ ಮುಂದಿನ ಊರಿಗೆ ಹೊರಡಲು ಸಜಗುತ್ತದೆ.
ಇಂಥ ಎರಡು ಮೂರು ತಂಡಗಳು ಪ್ರತಿ ವರ್ಷ ಘಟ್ಟ ಹತ್ತುತ್ತವೆ. ಹಳೆ ಮಳೆ ಬೀಳುವವರೆಗೂ ಆಲೆ ಮನೆಯ ಸಂಭ್ರಮ ಮಲೆನಾಡ ತುಂಬೆಲ್ಲ ಒಂದಲ್ಲ ಒಂದು ಊರಲ್ಲಿ ಇದ್ದೇ ಇರುತ್ತದೆ.

ಆಲೆಮನೆ ಎಂಬುದು ಕೇವಲ ಕಬ್ಬನ್ನು ಅರೆದು, ರಸ ಹಿಂಡಿ, ಬೆಲ್ಲದ ಪಾಕ ತರಿಸಿ ಮಾರುವ ಯಾಂತ್ರಿಕ ಪ್ರಕ್ರಿಯೆಯಾಗಿದ್ದರೆ ಆ ಬಗ್ಗೆ ಬರೆಯುವ ಪ್ರಮೇಯವೇ ಇರಲಿಲ್ಲ. ಅದೊಂದು ಹಬ್ಬ, ಸಂಬಂಧಗಳ ಬೆಸೆಯುವ ಮಾಧ್ಯಮ, ಹಾಡು-ಹಸೆಯ ಪ್ರದರ್ಶನದ ವೇದಿಕೆ, ಊರವರೆಲ್ಲ ಒಟ್ಟಾಗಿ ಆಚರಿಸುವ ಸಂಸ್ಕೃತಿ, ಬೆಳೆದ ಬೆಳೆಗೆ ಸ್ಥಳೀಯವಾಗೇ ಮಾರುಕಟ್ಟೆ, ಆ ಮೂಲಕ ಯೋಗ್ಯ ಬೆಲೆಯನ್ನು ದೊರಕಿಸಿಕೊಡುವ ಮಾರ್ಗ, ಹತ್ತು ಹಲವು ಮಂದಿಗೆ ಉದ್ಯೋಗ ಸೃಷ್ಟಿಸಿಕೊಡುವ ದೇಸಿ ಉದ್ಯಮ.

ಕೇವಲ ವ್ಯಾಪಾರ, ಲಾಭದ ದೃಷ್ಟಿಯಿಂದಲೇ ಮಲೆನಾಡಿನಲ್ಲಿ ಕಬ್ಬನ್ನು ಬೆಳೆಯುವುದಿಲ್ಲ. ಎಷ್ಟೋ ಬಾರಿ ಸುಗ್ಗಿಯ ಕೊನೆಯಲ್ಲಿನ ಕೌಟುಂಬಿಕ ಸಂಭ್ರಮಕ್ಕಾಗಿಯೇ ಒಂದಷ್ಟು ಜಗದಲ್ಲಿ ಕಬ್ಬು ಬೆಳೆಯಲಾಗುತ್ತದೆ ಎಂಬುದು ಗಮನಾರ್ಹ. ಕೂಡು ಕುಟುಂಬದ ಮಲೆನಾಡಿನ ಮನೆಗಳಲ್ಲಿ ಮಕ್ಕಳು- ಮರಿಗಳಿಗೆ ಯಥೇಚ್ಛ ಕಬ್ಬಿನ ಹಾಲು ಸವಿಯಲು ಬೇಕು, ನೊರೆ ಬೆಲ್ಲ ತಿನ್ನಲು ಬೇಕು, ಬೆಳ್ಳಬೆಳಗ್ಗೆ ಆಸರಿಗೆ’ ತೆಳ್ಳೆವ್ವ- ದೋಸೆ ತಿನ್ನಲು ಆಕಳ ತುಪ್ಪದೊಂದಿಗೆ ಜೋನಿ ಬೆಲ್ಲದ ಅಗತ್ಯ ಪೂರೈಕೆಯಾಗಬೇಕು,
ಹಬ್ಬದಡುಗೆಯ ಶ್ರೀಮಂತಿಕೆ ಹೆಚ್ಚಿಸಲು ಮನೆ ಬೆಲ್ಲ’ ಇರಲೇಬೇಕು ಎಂಬುದಕ್ಕಾಗಿಯೇ ಇರುವ ಜಮೀನಿನಲ್ಲಿ ಒಂದು ಭಾಗ ಕಬ್ಬು ಬೆಳೆಯಲಾಗುತ್ತದೆ.

ಈ ದೃಷ್ಟಿಯಿಂದ ಮಲೆನಾಡಿನಲ್ಲಿ ಕಬ್ಬು ವಾಣಿಜ್ಯ ಬೆಳೆ, ಆಹಾರ ಬೆಳೆ ಎಂಬುದಕ್ಕಿಂತ ಇವೆಲ್ಲವನ್ನೂ ಮೀರಿದ ಕೌಟುಂಬಿಕ ಬೆಳೆ’. ಹತ್ತು ದಿನಕ್ಕೆ ಮುಂಚಿತವಾಗಿಯೇ ಆಲೆ ಮನೆಯ ಸಿದ್ಧತೆ ಆರಂಭವಾಗುತ್ತದೆ. ಈಗೆಲ್ಲ ಮೊಬೈಲ್ ಫೋನಿನ ಜಮಾನ ವಾಗಿದ್ದ ರಿಂದ ಎಲ್ಲವೂ ಹತ್ತು ಪೈಸೆಯ ದೂರವಾಣಿ ಕರೆಯ, ಒಂದು ವಾಟ್ಸ್ಯಾಪ್ ಮೆಸೇಜ್‌ನ ಮುಗಿದು ಹೋಗುತ್ತದೆ. ಆದರೆ
ಮೊದಲೆಲ್ಲ ಹಾಗಿರಲಿಲ್ಲ. ಇದ್ದರೂ ಆಲೆಮನೆಯ ಕರೆಯಾಣವೇ ಹೆಣ್ಣು ಮಕ್ಕಳ ಮನೆಯಲ್ಲಿ ಪುಟ್ಟದೊಂದು ಹಬ್ಬ.

ಮದುವೆಯಾಗಿ ಹೋದ ಮನೆಯ ಹೆಣ್ಣುಮಕ್ಕಳನ್ನು ಆಲೆಮನೆಗೆ ಆಹ್ವಾನಿಸಲು ತವರಿನಿಂದ ಅಣ್ಣನೋ, ಚಿಕ್ಕಪ್ಪನೋ, ಅಪ್ಪ-ಅಜ್ಜನೋ ಯಾರಾದರೊಬ್ಬರು ಹೋಗಿಯೇ ಹೋಗುತ್ತಿದ್ದರು. ಆಲೆಮನೆ ಕರೆಯ ಒಂದು ನೆಪವಷ್ಟೇ. ಈ ಕಾರಣಕ್ಕೆ ಎರಡು ಕುಟುಂಬಗಳ ಸಂಬಂಧ ಬೆಸೆಯುತ್ತಿತ್ತು. ತವರಿಗೆ ಬಂದು ಹೋಗಲು ಹೆಣ್ಣುಮಕ್ಕಳಿಗೆ ಇನ್ನೊಂದು ಕಾರಣವೂ ಸಿಕ್ಕಂತಾಗುತ್ತದೆ.
ಹಾಗೆ ಕರೆಯಾಣಕ್ಕೆ ಬರುವ ತವರಿನ ಕಡೆಯವರಿಗೆ ಹಬ್ಬದಡುಗೆ ಬಡಿಸಿ ಕಳುಹಿಸುವ ಆತ್ಮೀಯತೆ ಊಟ ಕ್ಕಿಂತಲೂ ಹೆಚ್ಚು ಸಿಹಿ.

ಮನೆ ಮಕ್ಕಳನ್ನಷ್ಟೇ ಆಲೆಮನೆಗೆ ಕರೆಯವುದಲ್ಲ. ಊರಿನ ಎಲ್ಲ ಮನೆಗಳವರಿಗೆ, ಆತ್ಮೀಯರಿಗೆ, ಬಂಧು ಮಿತ್ರರಿಗೂ ಆಲೆಮನೆ ಆಹ್ವಾನ ಹೋಗುತ್ತದೆ. ಸಾಮಾನ್ಯವಾಗಿ ಬೆಳಗಿನ ಜವ ನಾಲ್ಕಕ್ಕೆಲ್ಲ ‘ಆಲೆ ಗಳೆಯ’ವನ್ನು ಕಟ್ಟಲಾಗುತ್ತದೆ. ಬಿಸಿಲು ಏರುವ ಮುನ್ನ
ಕೋಣಗಳನ್ನು ವಿಶ್ರಾಂತಿಗೆ ಬಿಡಲಾಗುತ್ತದೆ. ಗಾಣಿಗನೂ ಕುಚ್ಚಲಕ್ಕಿ ಗಂಜಿಯನ್ನು ಕೆನೆ ಮೊಸರು, ಮಾವಿನಮಿಡಿಯೊಂದಿಗೆ ಉಂಡು ಮಲಗಿ ಗಡದ್ದಾಗೊಂದು ನಿದ್ದೆ ತೆಗೆಯುತ್ತಾನೆ.

ಮತ್ತೆ ಮಧ್ಯಾಹ್ನದ ಮೇಲೆ ಮೂರಕ್ಕೆ ಕೋಣಗಳನ್ನು ಹತ್ತಿರದ ಕೆರೆಗೆ ಒಯ್ದು ಮೀಯಿಸಿಕೊಂಡು, ಮೈಗೆ ಹರಳೆಣ್ಣೆ ಹಚ್ಚಿ ನೀವಿ ಮಿರಮಿರನೆ ಮಿಂಚುತ್ತಿರುವಾಗಲೇ ಹೊಡೆದುಕೊಂಡು ಬಂದು ಗಾಣಕ್ಕೆ ಕಟ್ಟುತ್ತಾನೆ. ಅಲ್ಲಿಂದ ಬಳಿಕ ಮಧ್ಯ ರಾತ್ರಿ ಒಂದು, ಒಂದೂವರೆಯ ವರೆಗೂ ಕೋಣಗಳದ್ದು ನಿರಂತರ ದುಡಿಮೆ. ನಿಜವಾದ ಆಲೆಮನೆಗೆ ರಂಗೇರುವುದೇ ಸಂಜೆಯ ಹೊತ್ತಿಗೆ. ಶಾಲೆಯಿಂದ ಬರುವ ಚಿಣ್ಣರು ಕೈಯಂದು ಕ್ಯಾನ್ ಅನ್ನೋ, ಕೊಡವನ್ನೋ ಹಿಡಿದುಕೊಂಡು ಕಬ್ಬಿನ ಹಾಲು ಹಿಡಿದುಕೊಳ್ಳಲು ಸಾಲುಗಟ್ಟುತ್ತಾರೆ. ನೊರೆ ಬೆಲ್ಲಕ್ಕೊಂದು ಪುಟ್ಟ ಕ್ಯಾರಿಯರ್.

ಮಕ್ಕಳಷ್ಟೇ ಅಲ್ಲ, ಸುತ್ತಮುತ್ತಲಿನ ಯಾರೇ ಬಂದರೂ ಹಾಲು, ನೊರೆ ಬೆಲ್ಲ ಸವಿಯಲು ಮಾಲೀಕನ ಚೌಕಾಶಿ ಇಲ್ಲ. ಗಾಣದವ ಮಾತ್ರ ಅಲಿಖಿತ ಕಾನೂನೊಂದನ್ನು ಜರಿಗೊಳಿಸಿರುತ್ತಾನೆ. ಗಾಣದಿಂದ ಎಷ್ಟು ಪ್ರಮಾಣದ ಹಾಲನ್ನು ಹಿಡಿದುಕೊಳ್ಳಲಾಗು ತ್ತದೋ ಅಷ್ಟೇ ಪ್ರಮಾಣದ ನೀರನ್ನು ತಂದು ಕೆಳಗಿನ ಬಾನಿಗೆ ಹಾಕಲೇಬೇಕು. ಇಲ್ಲದಿದ್ದರೆ ಎಷ್ಟು ಪ್ರಮಾಣದ ಕಬ್ಬು ಅರೆಯ ಲಾಯಿತು ಎಂಬ ಲೆಕ್ಕಾಚಾರ ವ್ಯತ್ಯಾಸವಾಗುತ್ತದೆ. ಎಷ್ಟು ಬಾನಿ ಹಾಲು ಆಯಿತು ಎಂಬುದರ ಮೇಲೆ ಅವನಿಗೆ ಸಂಭಾವನೆ ನಿಗದಿಯಾಗುವು ದರಿಂದ ಆತ ಈ ನಿಯಮ ಜರಿಗೊಳಿಸಿರುತ್ತಾನೆ.

ಒಮ್ಮೊಮ್ಮೆ ಆಲೆಮನೆಯಲ್ಲಿ ನಡೆಯುವ ಕಬ್ಬಿನ ಹಾಲು ಕುಡಿಯುವ ಸ್ಪರ್ಧೆಗೆ ಪ್ರತ್ಯೇಕವಾದೊಂದು ರಂಗು. ಹತ್ತಾರು ಯುವಕರು ಎದುರಿಗೆ ಕಾರ ಹಚ್ಚಿದ ಮಂಡಕ್ಕಿ(ಕಳ್ಳೆಪುರಿ), ಮಿಡಿಮಾವಿನ ಉಪ್ಪಿನಕಾಯಿ ಇಟ್ಟುಕೊಂಡು ಚೊಂಬಿಗಟ್ಟಲೆ ಹಾಲನ್ನು ಕುಡಿಯುತ್ತಾರೆ. ಹೆಚ್ಚಿಗೆ ಹಾಲು ಕುಡಿದು ದಕ್ಕಿಸಿಕೊಂಡವ ಗಂಡುಮಗ. ಜೊತೆಜೊತೆಗೇ ಹಾಡು, ಯಕ್ಷಗಾನ ಪದಗಳೂ ಸೇರಿ ಸುತ್ತಮುತ್ತಲ ವಾತಾವರಣಕ್ಕೆ ಸಾಂಸ್ಕೃತಿಕ ಕಳೆ. ಇಷ್ಟು ಹಾಲು ಕುಡಿದ ಬಳಿಕ, ಹಸಿರು ಎಲೆಯನ್ನು ತಂದು ಅದಕ್ಕೆ
ನೊರೆ ನೊರೆಯಾದ ಬಿಸಿ ಬೆಲ್ಲವನ್ನು ಕಾಕಿ, ಕಬ್ಬಿನ ಸಿಪ್ಪೆಯನ್ನೇ ಚಮಚವಾಗಿಸಿಕೊಂಡು ಚೂರುಚೂರೇ ನೆಕ್ಕುತ್ತಾ ಬೆಳಗಿನ ಝಾವದವರೆಗೂ ಸಮಾನ ಮನಸ್ಕರೊಂದಿಗೆ ಆಲೆ ಒಲೆಯ ಸುತ್ತ ಚಳಿ ಕಾಯಿಸುತ್ತಾ ಹರಟೆ, ಪಟ್ಟಾಂಗ ಕೊಚ್ಚುವುದರ ಮಜವೇ ಬೇರೆ.

ಇನ್ನು ಒಂದೊಂದು ಸುತ್ತಿನ ಅರೆಯುವಿಕೆ ಮುಗಿದ ಬಳಿಕವೂ ತುಂಬಿದ ಹಾಲನ್ನು ಎತ್ತಿಗೆ ಕೊಪ್ಪರಿಗೆಗೆ ಸುರಿಯುವುದು ಒಂದು ಸಾಹಸ. ಹಾಗೆಯೇ ಕೊತಕೊತನೆ ಕುದಿದು ಬೆಲ್ಲವಾದ ಬಳಿಕ ಅದನ್ನು ಒಲೆಯಿಂದ ಇಳಿಸಿ, ತಿಳಿಯಬಾನಿಗೆ ಸುರಿಯವುದು ಸಹ ಅಷ್ಟೇ ಕಷ್ಟದಾಯಕ. ಬೆಂಕಿಯ ಕೆನ್ನಾಲಗೆ, ಕೆಂಡದ ಕಾವು, ಕುದಿಯುವ ಬೆಲ್ಲದ ಬಿಸಿ ಆವಿಗಳ ನಡುವೆ ಸ್ವಲ್ಪವೂ ತುಳುಕದಂತೆ
ಕೊಪ್ಪರಿಗೆಯನ್ನು ಇಳಿಸಲು ಸಾಕಷ್ಟು ಜಗೃತೆ ಮತ್ತು ನೈಪುಣ್ಯ ಬೇಕು. ನುರಿತ ನಾಲ್ಕಾರು ಮಂದಿ ಕೊಪ್ಪರಿಗೆ ಕಿವಿಗೆ ಒನಕೆಯ ಮಾದರಿಯ ಎರಡು ಬೊಂಬುಗಳನ್ನು ಜೋಡಿಸಿ, ಎಚ್ಚರಿಕೆಯಿಂದ ಇಳಿಸಿ ಸುರಿಯುತ್ತಾರೆ.

ಸ್ಪಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಮೊದಲೇ ಬಿಸಿಬೆಲ್ಲ ಜತೆಗೆ ಪಾಕದ ಅಂಟು. ಎಷ್ಟೋ ವೇಳೆ, ಬಿಸಿಬೆಲ್ಲ ಬಿದ್ದು
ಅಸು ನೀಗಿದ, ಆಲೆಯ ಒಳೆಗೇ ಮಗುಚಿ ಪ್ರಾಣ ಕಳಕೊಂಡ ಉದಾಹರಣೆಗಳೂ ಇವೆ. ಆಲೆಯ ಕೊಪ್ಪರಿಗೆಯಲ್ಲಿ ಹದವಾಗಿ ಎಲ್ಲವನ್ನು ಪಾಕಕ್ಕೆ ತರಿಸುವುದೂ ಒಂದು ಕಲೆ. ಎಲ್ಲರಿಗೂ ಬೆಲ್ಲದ ಹದಪಾಕ ತೆಗೆಯಲು ಬರುವುದಿಲ್ಲ. ಸ್ಪಲ ಕುದಿಯುವುದು
ಕಡಿಮೆಯಾದರೆ ಬೆಲ್ಲ ತಾಳಿಕೆ ಬರದೇ ಬೇಗನೇ ಕೊಳೆತು ಹುಳ ಆಗುತ್ತದೆ. ತುಸುವೇ ಕೊಪ್ಪರಿಗೆ ಇಳಿಸುವುದು ತಡವಾದರೂ ಪಾಕ ಏರಿ ಹೋಗಿ ಬೆಲ್ಲ ಕಪ್ಪಾಗುತ್ತದೆ.

ಹದವಾಗಿ ನೊರೆಯುಕ್ಕಿ ಬಂದು ಇಳಿಸಿದ ಬೆಲ್ಲ ಪಕ್ಕಾ ಕೇಸರಿ ಬಾತ್‌ನಂತಿರುತ್ತದೆ. ಅದನ್ನು ಬಿಸ್ಕಿಟ್ ಡಬ್ಬಿ, ಇಲ್ಲವೇ ವಿಶೇಷವಾಗಿ ಕುಂಬಾರರು ತಯಾರಿಸಿಕೊಟ್ಟ ಮಣ್ಣಿನ ಕೊಡಕ್ಕೆ ಸುರಿದು ಬಾಯಿಯನ್ನು ಸಗಣಿ ಮಣ್ಣಿನ ಮಿಶ್ರಣದಲ್ಲಿ ಭದ್ರಗೊಳಿಸಿ ಸ್ಥಳದ ಮಾರಲಾಗುತ್ತದೆ. ಒಮದು ಕೊಡವೆಂದರೆ ಕನಿಷ್ಢ ಐದು ಕೇಜಿ. ಉತ್ತಮ ಗುಣಮಟ್ಟದ ಬೆಲ್ಲದ ಇಂಥ ಕೊಡಕ್ಕೆ ಒಂದೂವರೆ, ಎರಡು ಸಾವಿರ ರೂ,ಗಳವರೆಗೂ ಬೆಲೆ ನಿಗದಿಯಾಗುತ್ತದೆ.

ಮೊದಲಿಂದಲೂ ಗುಣಮಟ್ಟವನ್ನು ಕಾಪಾಡಿಕೊಂಡು ಬರುವ ಮನೆಯವರ ಬೆಲ್ಲಕ್ಕೆ ಬೇಡಿಕೆ ಹೆಚ್ಚು. ಮಳೆಗಾಲದಲ್ಲಿ ಮುಂಗಡ ಹಣಕೊಟ್ಟು ಬೆಲ್ಲವನ್ನು ಕಾಯ್ದಿರಿಸಲಾಗುತ್ತದೆ. ಬೆಳೆದ ಬೆಲೆ ಕೈಗೂಡುವುದಿಲ್ಲ, ಕೈಗೆ ಸಿಕ್ಕರೂ ಬೆಲೆ ಸಿಗುವುದಿಲ್ಲ ಎಂಬಿತ್ಯಾದಿ ನೂರಾರು ಸಂಕಷ್ಟದ ನಡುವೆಯೂ ಸ್ವಾವಲಂಬಿ ಮಾರುಕಟ್ಟೆಯ ಪರಿಕಲ್ಪನೆಯೊಂದಿಗೆ ಸಾಮೂಹಿಕ ಸಹಕಾರಿ ಮನೋಭಾವ ದಲ್ಲಿ ಕೌಟುಂಬಿಕ ಹಬ್ಬದ ವಾತಾವರಣದಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ನಡೆಯುವ ಆಲೆಮನೆ ನಿಜಕ್ಕೂ ಮಾದರಿಯಾಗಿ
ನಿಲ್ಲುತ್ತವೆ. ಆಧುನಿಕ ಸಕ್ಕರೆ ಕಾರ್ಖಾನೆಗಳ ಅಬ್ಬರ, ಮಾಲೀಕಶಾಹಿಗಳ ದರ್ಪ, ನೂರೆಂಟು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನಲುಗುತ್ತಿರುವ ಕಬ್ಬು ಬೆಳೆಗಾರನಿಂದ ಇಂದು ಆಲೆ ಮನೆಗಳು ದೂರಾಗಿವೆ.

ಆರೋಗ್ಯಕಾರಿ ಬೆಲ್ಲದ ಬಳಕೆ ಪ್ರತಿಷ್ಠೆಗೆ ಅಡ್ಡಿಯಾಗಿದೆ. ಬಿಳಿಯ ಸಕ್ಕರೆ ಹರಳಿನ ವಯ್ಯಾರ ಆಕರ್ಷಣೀಯವಾಗಿ ಕಾಣುತ್ತಿರು ವಾಗ ಡಬ್ಬಿ ಬೆಲ್ಲ ಬೇಡಿಕೆಯನ್ನೂ ಕಳಕೊಂಡಿದೆ. ಬೆಲ್ಲ ತಯಾರಿಕೆ ನೈಪುಣ್ಯ ಹಿರಿಯರಿಂದ ಯುವ ತಲೆಮಾರಿಗೆ ಹರಿದು
ಬಾರದಿರುವುದಕ್ಕೆ ಕಾರಣ ಹಳ್ಳಿಗಳಲ್ಲಿ ನಿಂತು ಕೃಷಿ ಕಾಯಕಕ್ಕೆ ಮುಂದಾಗವುದರಲ್ಲಿ ಆಸಕ್ತಿ ಕಳಕೊಂಡಿರುವ ಯುವ ಸಮುದಾಯ. ಹೀಗಾಗಿ ಬೆಲ್ಲ ಮಾಡಲು ಬಲ್ಲವರೂ ಇಲ್ಲ. ಕೋಣಗಳೂ ಈಗೀಗ ಅಷ್ಟಾಗಿ ಗಟ್ಟದ ಮೇಲೆ ಹತ್ತಿ ಬರುತ್ತಿಲ್ಲ. ಆಲೆ ಕೋಣಗಳ ಆರೈಕೆಯೆಂದರೆ ತೀರಾ ವೆಚ್ಚದಾಯಕವೆನಿಸಿ, ಅದಕ್ಕೆ ಸೂಕ್ತ ಆದಾಯ ಕಾಣದೇ ಗಾಣಿಗರೂ ಬೇರೆ ಬೇರೆ ವೃತ್ತಿ ಅರಸಿ ಹೊರಟು ಬಿಟ್ಟಿzರೆ.

ಆಲೆ ಮನೆಯ ಜತೆಜತೆಗೇ ಸಂಬಂಧಗಳಲ್ಲಿನ ಗಾಢತೆಯೂ ಮೊದಲಿನ ಆರ್ದತೆ ಕಳಕೊಳ್ಳುತ್ತಿವೆ. ಇಂದಿಗೂ ಮಲೆನಾಡಿನಲ್ಲಿ ಅಂದು ಇಂದು ಹಳ್ಳಿಗಳಲ್ಲಿ ತೀರಾ ಅಪರೂಪಕ್ಕೆಂಬಂತೆ ನಡೆಯುತ್ತಿರುವ ಆಲೆಮನೆಗಳು ಮುಂದಿನ ತಲೆಮಾರಿಗೆ ನೆನಪು ಮಾತ್ರ. ಯಾಂತ್ರಿಕತೆ ನಗರವನ್ನಷ್ಟೇ ಅಲ್ಲ, ಹಳ್ಳಿಗಳನ್ನು, ಅಲ್ಲಿನ ಪ್ರೀತಿ- ವಿಶ್ವಾಸದ ಬದುಕನ್ನೂ ನುಂಗಿ ಹಾಕಿದೆ. ನನ್ನಂಥವನ ಮನದ ಮೂಸೆಯಲ್ಲಿ ನೆನಪಾಗಿ ಯಷ್ಟೇ ಆಲೆಮನೆಯ ಗಮಲು ಉಳಿದುಕೊಂಡಿದೆ.