ಇದೇ ಅಂತರಂಗ ಸುದ್ದಿ
vbhat@me.com
ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗ ಹತ್ತು ಸಲ ಯೋಚಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ
ನಾವೇ ಕೋಲು ಕೊಟ್ಟು ಹೊಡೆಸಿಕೊಂಡಂತಾಗುತ್ತದೆ. ಸಾಮಾಜಿಕ ಜಾಲತಾಣ ಬರುವುದಕ್ಕಿಂತ ಮುನ್ನ, ಏನೇ ಹೇಳಿ ದಕ್ಕಿಸಿಕೊಳ್ಳ ಬಹುದಿತ್ತು. ಆದರೆ ಈಗ ಹಾಗಲ್ಲ. ಪ್ರತಿ ಮಾತನ್ನೂ ಸೋಸುತ್ತಾರೆ. ಗಾಳಿಸಿ ನಿವಾಳಿಸಿ ಬಿಡುತ್ತಾರೆ. ಈ ದಿನಗಳಲ್ಲಿ ಏನೇನೋ ಹೇಳಿಕೆ ಕೊಟ್ಟು ಬಚಾವ್ ಆಗಲು ಆಗುವುದಿಲ್ಲ.
ಯಾರೊಬ್ಬರಾದರೂ ಕುಟುಕದೇ ಬಿಡುವುದಿಲ್ಲ. ಪತ್ರಿಕೆಯಲ್ಲಿ ಒಂದು ಅಲ್ಪ ವಿರಾಮ, ಪೂರ್ಣವಿರಾಮ ವ್ಯತ್ಯಾಸವಾದರೆ ಅದನ್ನು ಫೇಸ್ ಬುಕ್, ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, ಹರಾಜು ಹಾಕುತ್ತಾರೆ. ಇದು ಒಳ್ಳೆಯ ಬೆಳವಣಿಗೆಯೇ. ಅದರಲ್ಲೂ ಪತ್ರಕರ್ತರು, ರಾಜಕಾರಣಿಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಹೆಜ್ಜೆ ಹೆಜ್ಜೆಗೂ ಚೆಕ್ ಪೋಸ್ಟ್!
ಮೆಟಲ್ ಡಿಟೆಕ್ಟರ್! ಇವುಗಳಿಗೆ ಮಂಕುಬೂದಿ ಎರಚುವುದು ಸಾಧ್ಯವೇ ಇಲ್ಲ. ಅದರಲ್ಲೂ ಬೇರೆಯವರ ಮೇಲೆ ಆಪಾದನೆ ಮಾಡುವಾಗ ಇನ್ನಷ್ಟು ಎಚ್ಚರದಿಂದರಿರಬೇಕು. ಗಬಕ್ಕನೆ ಹಿಡಿದುಕೊಂಡು ಬಿಡುತ್ತಾರೆ. ಅವರು ಹಾಗೆ ಎಂದು ಹೇಳಿದರೆ, ನೀನೇನು ಸಭ್ಯನಾ, ನೀನು ಹೀಗೆ ಮಾಡಿರಲಿಲ್ಲವಾ ಎಂದು ಕೇಳುತ್ತಾರೆ. ನೀವು ಒಂದು ಕಲ್ಲು ಹೊಡೆದರೆ, ನಿಮ್ಮ ಮೇಲೆ ಸಾವಿರಾರು ಕಲ್ಲುಗಳ ಸುರಿಮಳೆ! ಇಷ್ಟೂ ಸಾಲದೆಂಬಂತೆ ವಾಚಾ ಮಗೋಚರ ಬೈಗುಳ. ಆಗ ಇರುವ ಆಯ್ಕೆ ಮೂರು.
ಒಂದು, ಆ ಬೈಗುಳಗಳನ್ನೆಲ್ಲ ಮೌನವಾಗಿ ಸ್ವೀಕರಿಸಬೇಕು, ಎರಡನೆಯದು, ಆ ಬೈಗುಳಗಳಿಗೆಲ್ಲ ಉತ್ತರಿಸಬೇಕು ಮತ್ತು ಮೂರನೆ ಯದು, ಹಾಗೆ ಬೈದವರನ್ನು ಬ್ಲಾಕ್ ಮಾಡಬೇಕು. (ನಾನು ಈ ಪೈಕಿ ಮೊದಲನೇ ಆಯ್ಕೆಗೆ ಮೊರೆ ಹೋಗುತ್ತೇನೆ.) ಕೆಲ ದಿನಗಳ ಹಿಂದೆ, ದಿಲ್ಲಿಯ ಐಎಎಸ್ ಅಧಿಕಾರಿಗಳು ಸಾರ್ವಜನಿಕ ಮೈದಾನವನ್ನು ತಮ್ಮ ನಾಯಿಯೊಂದಿಗೆ ವಾಕಿಂಗ್ ಮಾಡಲು ಸ್ವಂತ ಬಳಕೆಗೆ ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಹಠಾತ್ ಅರುಣಾಚಲ ಪ್ರದೇಶ ಮತ್ತು ಲಡಾಕ್‌ಗೆ ವರ್ಗ
ಮಾಡಲಾಯಿತು.
ಈ ಕುರಿತು ‘ಇಂಡಿಯಾ ಟುಡೇ’ ಟಿವಿ ಕನ್ಸಲ್ಟಿಂಗ್ ಎಡಿಟರ್ ರಾಜದೀಪ ಸರದೇಸಾಯಿ ಟ್ವೀಟ್ ಮಾಡಿದ್ದರು – ‘ಐಎಎಸ್ ಅಧಿಕಾರಿ ದಂಪತಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಅವರಿಬ್ಬರನ್ನೂ ಅಮಿತ್ ಶಾ ವರ್ಗ ಮಾಡಿರುವುದು ಒಳ್ಳೆಯದೇ. ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದನೆಯದು, ಲಡಾಕ್ ಮತ್ತು ಅರುಣಾಚಲ ಪ್ರದೇಶ ಅಭಿವೃದ್ಧಿಗೆ ಉತ್ತಮ ಅಧಿಕಾರಿಗಳು ಬೇಕು. ಅಲ್ಲಿಗೆ ಉತ್ತಮರನ್ನು ಕಳಿಸಿದರೆ ಅದು ಪನಿಶ್‌ಮೆಂಟಾ? ಹಾಗೂ ಎರಡನೆಯದು, ಅವರ ಸಾಕು ನಾಯಿ ಎಲ್ಲಿಗೆ ಹೋಗಬೇಕು?’ ಅದಕ್ಕೆ ಪಲ್ಲವಿ ಎಂಬುವವರು ಪ್ರತಿಕ್ರಿಯಿಸಿದ್ದರು – ‘ಲಡಾಕ್ ಮತ್ತು ಅರುಣಾಚಲಕ್ಕೆ ವರ್ಗ ಮಾಡುವುದು ಶಿಕ್ಷೆಯಲ್ಲ, ಆದರೆ ಗಂಡ-ಹೆಂಡತಿಯನ್ನು ಎರಡು ಬೇರೆ ಬೇರೆ ಊರುಗಳಿಗೆ ವರ್ಗ ಮಾಡುವುದು ಶಿಕ್ಷೆಯೇ.
ತಮ್ಮ ಮಾತಿನಂತೆ ನಡೆದುಕೊಳ್ಳುವವರನ್ನು ಸಾಕಿ ಗೊತ್ತಿರುವ ‘ಇಂಡಿಯಾ ಟುಡೇ’ ಸಂಸ್ಥೆ ಆ ಬಡಪಾಯಿ ನಾಯಿಯನ್ನು ದತ್ತು ತೆಗೆದು ಕೊಳ್ಳಲಿ’. ಇತ್ತೀಚೆಗೆ ಪ್ರಧಾನಿ ಮೋದಿಯವರು ಮೈಸೂರಿಗೆ ಬಂದು ಹೋದರು. ಅವರು ಅತ್ತ ದಿಲ್ಲಿಗೆ ಹೋಗುತ್ತಲೇ, ಇತ್ತ ಮಾಜಿ
ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಾಲಗೆ ಹರಿಯ ಬಿಟ್ಟರು. ‘ರಾಜ್ಯಕ್ಕೆ ಎರಡು ದಿನಗಳ ಮೋದಿಯವರ ಪ್ರವಾಸದಿಂದ ಏನು ಪ್ರಯೋಜನವಾದಂತಾಯಿತು? ಅದರಿಂದ ರಾಜ್ಯ ಬೊಕ್ಕಸಕ್ಕೆ 32 ಕೋಟಿ ರುಪಾಯಿ ನಷ್ಟವಾಯಿತು. ಆ ಹಣದಲ್ಲಿ ಕೆಲವು ಹಳ್ಳಿಗಳ ನ್ನಾದರೂ ಉದ್ಧಾರ ಮಾಡಬಹುದಿತ್ತು’ ಎಂದು ಪ್ರತಿಕ್ರಿಯಿಸಿದರು.
ಇಂಥ ಹೇಳಿಕೆ ಕೊಡುವಾಗ ಕುಮಾರಸ್ವಾಮಿ ಸ್ವಲ್ಪ ಎಚ್ಚರಿಕೆವಹಿಸಬೇಕಿತ್ತು. ಗುಡ್ಡ ಅಗೆದು ಬಂಡೆಯನ್ನು ತಲೆ ಮೇಲೆ ಕೆಡವಿಕೊಳ್ಳುತ್ತಿ ದ್ದೇನೆ ಎಂದು ಅವರಿಗೆ ಗೊತ್ತಿರಬೇಕಿತ್ತು. ಆದರೂ ಇಂದಿನ ತಮ್ಮ ಧಾಟಿಯಲ್ಲಿ ಮೋದಿ ಟೀಕೆಗೆ ಮುಂದಾದರು. ಬಿಡ್ತಾರಾ ನೆಟ್ಟಿಗರು?!
ಅವರಿಗೆ ಅಷ್ಟೇ ಸಾಕಾಯಿತು. ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ನೋಡಿ, ಟೀಕೆಗಳ ಧಾರಾಕಾರ ಮಳೆ! ‘ನಿಮ್ಮಪ್ಪ ಪ್ರಧಾನಿ ಯಾಗಿದ್ದಾಗ ವಾರ ವಾರ ಬೆಂಗಳೂರಿಗೆ ಬರ್ತಿದ್ರಲ್ಲ, ಆಗ ಎಷ್ಟು ಖರ್ಚಾಗಿತ್ತು, ನೆನಪಿಲ್ಲವಾ? ಅದರ ಖರ್ಚನ್ನೂ ಸ್ವಲ್ಪ ಹೇಳಬಾರದೇ?’, ‘ಆಗ ನಿಮ್ಮಪ್ಪ ಕರ್ನಾಟಕಕ್ಕೆ ಬಂದು ಹೋದ ಹಣದಲ್ಲಿ ನೂರಾರು ಗ್ರಾಮಗಳನ್ನು ಉದ್ಧಾರ ಮಾಡಬಹುದಿತ್ತಲ್ಲ, ಯಾಕೆ ಮಾಡಲಿಲ್ಲ?’, ‘ಅಲ್ಲ ಕುಮಾರಸ್ವಾಮಿಯವರೇ, ನೀವು ಕಂಡ ಕಂಡಲ್ಲಿ ಗ್ರಾಮ ವಾಸ್ತವ್ಯ ಮಾಡಿದಿರಲ್ಲ, ಅದರಿಂದ ಎಷ್ಟು ಖರ್ಚಾಯ್ತು ಅಂತ ವಸಿ ಹೇಳ್ತೀರಾ? ಆ ಹಣದಲ್ಲಿ ನೀವು ಉಳಿದುಕೊಂಡ ಆ ಹಳ್ಳಿಯಾದರೂ ಕನಿಷ್ಠ ಉದ್ಧಾರವಾಗಿದ್ದರೆ ನಿಮಗೆ ಪುಣ್ಯ ಬರ್ತಾ ಇತ್ತು’… ಇನ್ನೂ ಕಠೋರವಾಗಿ, ಬಿಸಿಬಿಸಿಯಾಗಿ ನೆಟ್ಟಿಗರು ಕುಮಾರಸ್ವಾಮಿಯವರ ವಿರುದ್ಧ ಮುಗಿಬಿದ್ದರು.
ಅವರ ಖಾಸಗಿ ವಿಚಾರವನ್ನೂ ಎಳೆದು ತಂದರು. ತಿರುಗಿ ಮಾತಾಡಲು ಆಸ್ಪದ ಇಲ್ಲದಂತೆ ನಿವ್ವಾಳಿಸಿ ಹಾಕಿಬಿಟ್ಟರು. ಆ ಒಂದು ಹೇಳಿಕೆಗೆ, ಅಂದೇ ಡ್ರಾ, ಅಂದೇ ಬಹುಮಾನ! ಅ ಫುಲ್ ಪೇಮೆಂಟ್! ಈಗ ಒಂದು ಹೇಳಿಕೆ ಕೊಡುವಾಗ ಹತ್ತು ಸಲ ಯೋಚಿಸಬೇಕು. ಲಕ್ಷ ಲಕ್ಷ ಕಣ್ಣು-ಕಿವಿಗಳು ನಮ್ಮ ಮೇಲೆ ಫೋಕಸ್ ಆಗಿರುತ್ತವೆ. ಸ್ವಲ್ಪ ಅಪದ್ಧ ನುಡಿದರೂ ಪಡ್ಚಾ!
ಏನಾದರೂ ಹೇಳಿಕೆ ಕೊಟ್ಟು ಬಚಾವ್ ಆಗುವಂತಿಲ್ಲ. ಮೊದಲಾಗಿದ್ದರೆ, ಜನರಿಗೆ ಅನಿಸಿದರೂ ಹೇಳಿಕೊಳ್ಳಲು ವೇದಿಕೆಗಳಿರಲಿಲ್ಲ. ಈಗ ಹಾಗಲ್ಲ, ಪ್ರತಿಯೊಬ್ಬರಿಗೂ ಅಭಿಪ್ರಾಯಗಳಿವೆ ಮತ್ತು ಅದನ್ನು ವ್ಯಕ್ತಪಡಿಸಲು ಹತ್ತಾರು ವೇದಿಕೆಗಳಿವೆ. ಹಳ್ಳಿಯಲ್ಲಿ ಕುಳಿತ, ಅನಾಮ ಧೇಯ ವ್ಯಕ್ತಿ ಬರೆದ ಒಂದು ಅನಿಸಿಕೆ, ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆಗಿ, ಪ್ರಪಂಚವನ್ನೆ ಸುತ್ತಿ ಯಾರದೋ ತಲೆಗೆ ಬಂದು ಬಡಿಯಬಹುದು.
ಗಾಜಿನ ಮನೆಯಲ್ಲಿ ಕುಳಿತವರು ಕಲ್ಲು ಹೊಡೆಯದೇ, ಲೈಟ್ ಆರಿಸಿಕೊಂಡು ಕುಳಿತಿರಬೇಕಾದ ಕಾಲವಿದು. ಇದನ್ನು ಅರಿಯದಿದ್ದರೆ ಭಾನಗಡಿ ತಪ್ಪಿದ್ದಲ್ಲ.
ನ್ಯಾಷನಲ್ ಹೆರಾಲ್ಡ್: ಕೆಲ ನೆನಪು
ಇತ್ತೀಚಿನ ದಿನಗಳಲ್ಲಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಕೆಟ್ಟ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ನ್ಯಾಷನಲ್ ಹೆರಾಲ್ಡ್ ಹಗರಣ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಇದರಿಂದಾಗಿ ರಾಹುಲ್ ಗಾಂಧಿಯವರು ಜಾರಿ ನಿರ್ದೇಶ ನಾಲಯದ ಮುಂದೆ ಮೂರು ದಿನ ಸತತ ವಿಚಾರಣೆಗೆ ಹಾಜರಾಗಬೇಕಾಯಿತು. ಅದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ದೇಶದ ರಾಜಧಾನಿಯಲ್ಲಿ ಪ್ರತಿಭಟನೆ ಮಾಡಿದರು.
ರಾಜ್ಯ ಕಾಂಗ್ರೆಸ್ ನಾಯಕರೂ ತಮ್ಮ ನಾಯಕನ ಬೆಂಬಲಕ್ಕೆ ದಿಲ್ಲಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂದರು. ಜವಾಹರಲಾಲ್ ನೆಹರು ಆರಂಭಿಸಿದ ಈ ಪತ್ರಿಕೆಗೆ ಭವ್ಯ ಇತಿಹಾಸವಿದೆ. ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಅಂದು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದ
ಧೀಮಂತ ನಾಯಕರೆಲ್ಲ ಆ ಪತ್ರಿಕೆ ಬರೆಯುತ್ತಿದ್ದರು. ಸ್ವತಃ ನೆಹರು ಕೂಡ ನಿಯಮಿತವಾಗಿ ಬರೆಯುತ್ತಿದ್ದರು. ಆಚಾರ್ಯ ನರೇಂದ್ರ ದೇವ, ಲಾಲ್ ಬಹದೂರ್ ಶಾಸ್ತ್ರಿ, ವಲ್ಲಭಭಾಯಿ ಪಟೇಲ್, ರಫಿ ಅಹಮದ್ ಕಿದ್ವಾಯಿ, ಡಾ.ಕೈಲಾಸನಾಥ ಕಟ್ಜು, ವಿಜಯಲಕ್ಷ್ಮಿ ಪಂಡಿತ್, ಮೋಹನಲಾಲ್ ಸಕ್ಸೆನಾ, ಗೋವಿಂದ ವಲ್ಲಭ ಪಂತ ಮುಂತಾದವರು ಬರೆಯುತ್ತಿದ್ದರು.
‘ನ್ಯಾಷನಲ್ ಹೆರಾಲ್ಡ್’ ಪ್ರಸಾರ ಅಷ್ಟೇನೂ ಹೆಚ್ಚಿರಲಿಲ್ಲ. ಆದರೆ ಆ ಪತ್ರಿಕೆಗೆ ಬರೆಯುವುದು ಪ್ರತಿಷ್ಠೆಯ ಸಂಗತಿಯಾಗಿತ್ತು. ಕಾರಣ ಬುದ್ಧಿವಂತರು, ವಿಚಾರವಂತರು, ಪ್ರಭಾವಿ ಗಳು ಅದನ್ನು ಓದುತ್ತಿದ್ದರು. ಕಾಂಗ್ರೆಸ್ ನಾಯಕರು ನೆಹರು ಅವರಿಗೆ ತಿಳಿಸಬೇಕಾದ ವಿಷಯಗಳನ್ನು ಈ ಪತ್ರಿಕೆಯಲ್ಲಿ ಬರೆಯುವ ಮೂಲಕ ಅವರ ಗಮನಕ್ಕೆ ತರುತ್ತಿದ್ದರು. ನೆಹರು ಈ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದರು. ಬ್ರಿಟಿಷರೂ ಈ ಪತ್ರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಒಮ್ಮೆ ಆ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯದಿಂದ ಕೆರಳಿದ
ಬ್ರಿಟಿಷ್ ಆಡಳಿತ, ಸಂಪಾದಕರನ್ನು ಬಂಧಿಸಿತ್ತು. ನನಗೆ ಈ ಪತ್ರಿಕೆ, ಕೊಟಮರಾಜು ರಾಮರಾವ್ (ಕೆ.ರಾಮರಾವ್ ಎಂದೇ ಪ್ರಸಿದ್ಧ) ಅದರ ಸಂಪಾದಕರಾಗಿದ್ದರು ಎಂಬ ಕಾರಣದಿಂದ ಮುಖ್ಯವೆನಿಸುತ್ತದೆ. ಅವರೇ ಆ ಪತ್ರಿಕೆಯ ಸಂಸ್ಥಾಪಕ ಸಂಪಾದಕರು.
‘ನ್ಯಾಷನಲ್ ಹೆರಾಲ್ಡ್’ ಸೇರುವ ಮುನ್ನ ಅವರು ಸುಮಾರು ಇಪ್ಪತ್ತಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಅವರು ಸದಾ ತಮ್ಮ ಕಿಸೆಯಲ್ಲಿ ರಾಜೀನಾಮೆ ಪತ್ರವನ್ನು ಇಟ್ಟುಕೊಂಡಿರುತ್ತಾರೆ ಎಂಬ ಮಾತಿತ್ತು. ತಮ್ಮ ಆತ್ಮಗೌರವಕ್ಕೆ ತುಸು ಧಕ್ಕೆಯಾದರೂ ಅವರು ರಾಜೀನಾಮೆ ಪತ್ರವನ್ನಿಟ್ಟು ಬಂದುಬಿಡುತ್ತಿದ್ದರು. ಅವರು ಸಂಪಾದಕರಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದರು.
ಸಂಪಾದಕರಾಗಿದ್ದಾಗಲೇ ಮೊದಲ ರಾಜ್ಯ ಸಭೆಯ ಸದಸ್ಯರೂ ಆಗಿದ್ದರು. ಅವರು ಅತಿ ಹೆಚ್ಚು ಕಾಲ ಕೆಲಸ ಮಾಡಿದ್ದು ‘ನ್ಯಾಷನಲ್ ಹೆರಾಲ್ಡ’ನ. ಅವರು ನೆಹರುಗೆ ಆತ್ಮೀಯರಾಗಿದ್ದರು. ನೆಹರು ಅವರ ಒತ್ತಾಯದ ಮೇರೆಗೆ ರಾಜ್ಯಸಭಾ ಸದಸ್ಯರಾಗಲು ಒಪ್ಪಿದ್ದರು. ದಿಲ್ಲಿಯಿಂದ ಲಖನೌಗೆ ಪ್ರಯಾಣ ಮಾಡುತ್ತಿದ್ದಾಗ, ರೈಲಿನಿಂದ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಪ್ರಾಣ ಬಿಟ್ಟರು.
ನೆಹರು ನಿಧನದ ನಂತರ, ‘ನ್ಯಾಷನಲ್ ಹೆರಾಲ್ಡ್’ ಇಂದಿರಾ ಗಾಂಧಿ ಅವರ ಕರಪತ್ರವಾಯಿತು. ಸರಕಾರದ ವಿರುದ್ಧ ಟೀಕೆಯನ್ನು ಅವರು ಸಹಿಸುತ್ತಿರಲಿಲ್ಲ. ಆಗಲೇ ಆ ಪತ್ರಿಕೆಯ ಪತಣ ಆರಂಭವಾಯಿತು. ರಾವ್ ನಂತರ ಕೆಲವು ತಿಂಗಳ ಕಾಲ ಖುಷವಂತ ಸಿಂಗ್ ಆ ಪತ್ರಿಕೆಯ ಸಂಪಾದಕರಾಗಿದ್ದರು. ಆ ಅವಧಿಯಲ್ಲಿ ಅವರು ಸಂಬಳ ಪಡೆಯುತ್ತಿರಲಿಲ್ಲ. ಪ್ರಧಾನಿ ಇಂದಿರಾ ಗಾಂಧಿಯವರನ್ನು ಸುಲಭ ವಾಗಿ ಭೇಟಿ ಮಾಡಬಹುದು ಎಂಬ ಕಾರಣಕ್ಕೆ ನಾನು ಉಚಿತವಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೆ ಎಂದು ಅವರೇ Truth, Love and a Little Malice ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
1946 ರಿಂದ 1950 ರವರೆಗೆ ಆ ಪತ್ರಿಕೆ ಚೆನ್ನಾಗಿ ನಡೆಯುತ್ತಿತ್ತು. ಆಗ ನೆಹರು ಅಳಿಯ ಫಿರೋಜ್ ಗಾಂಧಿ ವ್ಯವಸ್ಥಾಪಕ ನಿರ್ದೇಶಕರಾ ಗಿದ್ದರು. ಅವರ ನಂತರ ಪತ್ರಿಕೆಯ ಆಡಳಿತದಲ್ಲಿ ಶಿಸ್ತಿರಲಿಲ್ಲ. ಆದರೂ ನೆಹರು ಅವರ ಹೆಸರು ಮತ್ತು ನಂತರ ಅವರ ಇಂದಿರಾ ಕೃಪೆ ಯಿಂದಾಗಿ ಪತ್ರಿಕೆ ಹೇಗೋ ನಡೆದುಕೊಂಡು ಬಂದಿತು. ರಾವ್ ನಿಧನದ ಬಳಿಕ, ಪತ್ರಿಕೆ ಸಂಪಾದಕೀಯವಾಗಿಯೂ ಸೊರಗಿತು. ನಾಲ್ಕೈದು ತಿಂಗಳಾದರೂ ನೌಕರರಿಗೆ ಸಂಬಳ ಕೊಡುತ್ತಿರಲಿಲ್ಲ.
ಸಿಬ್ಬಂದಿ ಮುಷ್ಕರ ಹೂಡಿದಾಗ, ಯಾರೋ ಅನಾಮಧೇಯ ವ್ಯಕ್ತಿಗಳು ಹಣ ತಂದು ಕೊಟ್ಟು ಹೋಗುತ್ತಿದ್ದರು. ಅದರಿಂದ ಎರಡು-
ಮೂರು ತಿಂಗಳು ಹೇಗೋ ಪತ್ರಿಕೆ ಸಾಗುತ್ತಿತ್ತು. ನಂತರ ಪುನಃ ಮುಷ್ಕರ. ಆಗ ಯಾರೋ ಬಂದು ಸೂಟ್ ಕೇಸ್ ಕೊಟ್ಟು ಹೋಗುತ್ತಿದ್ದರು. ಈ ವಿಷಯವನ್ನು ಖುಷವಂತ್ ಸಿಂಗ್ ಬರೆದಿದ್ದಾರೆ.
ನೆಹರು ನಂತರ ಇಂದಿರಾ ಅವರಾಗಲಿ ಅಥವಾ ಕಾಂಗ್ರೆಸ್ಸಿನ ಇತರ ನಾಯಕರಾಗಲಿ ಆ ಪತ್ರಿಕೆಯನ್ನು ಅಭಿವೃದ್ಧಿಪಡಿಸಲು ಆಸ್ಥೆ ವಹಿಸಲೇ ಇಲ್ಲ. ಹೀಗಾಗಿ ಅದೊಂದು ವೃತ್ತಿಪರ ಪತ್ರಿಕೆ ಎಂದು ಅನಿಸಲೇ ಇಲ್ಲ. ಕಾಂಗ್ರೆಸ್ ನಾಯಕರೇ ಆ ಪತ್ರಿಕೆಯ ಬಗ್ಗೆ ಕೀಳು ಅಭಿರುಚಿಯಿಂದ ಮಾತಾಡುತ್ತಿದ್ದರು. ದುರ್ದೈವವೆಂದರೆ, ಪತ್ರಿಕೆಗೆ ಹಣಕಾಸಿನ ಸಮಸ್ಯೆ ಇರಲಿಲ್ಲ. ಆದರೆ ವೃತ್ತಿ ಪರತೆಯೂ ಇರಲಿಲ್ಲ. ಅದೇ ಆ ಪತ್ರಿಕೆಗೆ ಮುಳುವಾಯಿತು.
ಇಲ್ಲದಿದ್ದರೆ ‘ನ್ಯಾಷನಲ್ ಹೆರಾಲ್ಡ್’, ಫ್ರಾನ್ಸಿನ ‘ಲೇ ಮೊಂಡ್’ ಅಥವಾ ರಷ್ಯಾದ ‘ಪ್ರಾವ್ದ’ ಪತ್ರಿಕೆಯಂತಾಗಬಹುದಿತ್ತು. ಈಗ ಅದೇ ಪತ್ರಿಕೆ ಕಾಂಗ್ರೆಸ್ ನಾಯಕರಿಗೆ ಉರುಳಾಗಿದೆ.
ಕೋಳಿ ರಸ್ತೆ ದಾಟಿದರೆ ಪ್ರತಿಕ್ರಿಯೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇನಾದರೂ ‘ಇಂದು ನಾನು ಬೆಂಗಳೂರಿನ ಮೈಸೂರು ಬ್ಯಾಂಕ್ ಬಳಿ ಕೋಳಿಯೊಂದು ರಸ್ತೆ ದಾಟುವುದನ್ನು ನೋಡಿದೆ’ ಎಂದು ಹೇಳಿದರೆ ಯಾರರೆಲ್ಲ ಹೇಗೆ ಪ್ರತಿಕ್ರಿಯಿಸಬಹುದು?
? ಡಿಕೆಶಿ : ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ, ಇದು ಸುಳ್ಳು. ಮುಖ್ಯಮಂತ್ರಿ ಹೇಳುತ್ತಿರುವ ಕಟ್ಟು ಕತೆಯಿದು.
? ಸಿದ್ದರಾಮಯ್ಯ : ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ. ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಬೊಮ್ಮಾಯಿ ಹೀಗೆ ಹೇಳುತ್ತಿದ್ದಾರೆ.
? ಕುಮಾರಸ್ವಾಮಿ : ಬ್ರದರ್, ಮನುಷ್ಯರೇ ಅಲ್ಲಿ ರಸ್ತೆ ದಾಟಲು ಆಗೊಲ್ಲ, ಇನ್ನು ಕೋಳಿ ದಾಟುತ್ತಾ?
? ನಳಿನ್ ಕುಮಾರ ಕಟೀಲ್: ಇದು ನಮ್ಮ ಪಕ್ಷದ ಸರಕಾರದ ಸಾಧನೆ. ನಾವು ಜನರಿಗೆ ಕೊಟ್ಟ ಸುಂದರ ಬೆಂಗಳೂರು ವಚನವನ್ನು ಈಡೇರಿಸಿದ್ದೇವೆ.
? ಸಿಎಂ ಇಬ್ರಾಹಿಂ : ಕೋಳಿ ರಸ್ತೆ ದಾಟುತ್ತೆ ಅಂದ್ರೆ ನಂಬಬೇಕಾ? ಅಷ್ಟರೊಳಗೆ ಜನ ಬಿಡ್ತಾರಾ? ಚಿಕನ್ ಮಾಡಿ ತಿಂದ್ಬಿಡ್ತಾರೆ!
? ದೇವೇಗೌಡ: ಇದೇನು ಮಹಾ? ನಾನು ಮುಖ್ಯಮಂತ್ರಿಯಾಗಿದ್ದಾಗ, ಇರುವೆಗಳೂ ಅಲ್ಲಿ ರಸ್ತೆ ದಾಟುತ್ತಿದ್ದವು, ಗೊತ್ತೇನ್ರೀ?
? ವಕೀಲ ಜಗದೀಶ: ನಿಮಗೆ ತೋಳಿನಲ್ಲಿ ತಾಕತ್ತಿದ್ದರೆ… ತಾಕತ್ತಿದ್ದರೆ….ಮೊದಲು ನೀವು ರಸ್ತೆ ದಾಟಿ ತೋರಿಸ್ರೊ ನನ್ ಮಕ್ಳ.. ಬುರ್ಡೆ ಬಿಡ್ತೀರೇನ್ರೋ?!
? ಟಿ.ಎನ್.ಸೀತಾರಾಮ್: ಹೌದಾ..? ಛೇ ! ಕೋಳಿ ರಸ್ತೆ ದಾಟೋದನ್ನು ಮೂರು ಎಪಿಸೋಡುಗಳಲ್ಲಿ ತೋರಿಸಬಹುದಿತ್ತಲ್ಲ!
? ಯಡಿಯೂರಪ್ಪ: ಮುಂದಿನ ಅವಧಿಗೆ ಬಿಜೆಪಿ ಸರಕಾರವನ್ನು ಆರಿಸಿ ತಂದರೆ ಕೋಳಿಯನ್ನಲ್ಲ, ಹುಲಿ ಕೂಡ ರಸ್ತೆ ದಾಟುವಂತೆ ಮಾಡುತ್ತೇವೆ.
? ರೇವಣ್ಣ: ನಮಗೆ ಅಽಕಾರ ಕೊಟ್ಟು ನೋಡಿ, ಮೈಸೂರು ಬ್ಯಾಂಕ್ ರಸ್ತೆಯಲ್ಲಿ ಆ ಕಡೆಯಿಂದ, ಈ ಕಡೆಗೆ ಲಿಂಬೆಹಣ್ಣನ್ನು ಪಾಸ್ ಮಾಡ್ತೇವೆ.
? ರಮೇಶಕುಮಾರ: ಈ ದರಿದ್ರ ಸರಕಾರ ಅಧಿಕಾರದಲ್ಲಿದ್ದರೆ, ಕೋಳಿ, ಕೋತಿಗಳಷ್ಟೇ ರಸ್ತೆ ದಾಟಲು ಸಾಧ್ಯ.
? ದೇವನೂರು ಮಹಾದೇವ : ನಾನಾಗಿದ್ದರೆ ‘ಮೈಸೂರು ಬ್ಯಾಂಕ್ ರಸ್ತೆ : ಆಳ ಮತ್ತು ಅಗಲ’ ಎಂಬ ಪುಸ್ತಕ ಬರೀತಿದ್ದೆ
? ರವಿಕಾಂತೇಗೌಡ: ಇದು ಬೆಂಗಳೂರು ಟ್ರಾಫಿಕ್ ಪೊಲೀಸರ ಕಾರ್ಯಕ್ಷಮತೆಗೊಂದು ನಿದರ್ಶನ. ಕೋಳಿಯೂ ಸರಾಗವಾಗಿ ರಸ್ತೆ ದಾಟುವಂತಾಗಿದೆ.
? ಕನ್ನಡ ಚಾನೆಲ್ ಬ್ರೇಕಿಂಗ್ ನ್ಯೂಸ್: ಮೈಸೂರು ಬ್ಯಾಂಕ್ ಬಳಿ ರಸ್ತೆ ದಾಟಿದ ಕೋಳಿ; ಮಟಮಟ ಮಧ್ಯಾಹ್ನ ಜನಜಂಗುಳಿಯ ಮಧ್ಯೆ ರಸ್ತೆ ದಾಟಿದ ಕೋಳಿ; ನಿಬ್ಬೆರಗಾದ ಜನ; ಹಣ ಡೆಪಾಸಿಟ್ ಮಾಡಲು ಹೊರಟ ಕೋಳಿ; ಇದು ಪ್ರಳಯದ ಮುನ್ಸೂಚನೆಯಾ?
ಭಾರತೀಯ ಹೊಸ ರೈಲುಗಳು ನಾನು ಇದನ್ನು ಎಲ್ಲೋ ಓದಿದ್ದು. ಯಾವ ಯಾವ ರೈಲುಗಳು ಹೇಗೆ ಸಾಗುತ್ತವೆ ನೋಡೋಣ.
ರಾಜನಾಥ ಸಿಂಗ್ ಎಕ್ಸ್ ಪ್ರೆಸ್: ಓಡುತ್ತದೆ, ಆದರೆ ಸದ್ದು ಮಾಡುವುದಿಲ್ಲ.
ಅಡ್ವಾಣಿ ಎಕ್ಸ್ ಪ್ರೆಸ್: ದೇಶಾದ್ಯಂತ ಸಂಚರಿಸಿ ಈಗ ಶೆಡ್ ನಲ್ಲಿ ನಿಂತಿದೆ.
ರಾಹುಲ್ ಗಾಂಧಿ ಎಕ್ಸ್ ಪ್ರೆಸ್: ಒಂದು ವಾರ ಓಡಾಡಿದರೆ, ಹದಿನೈದು ದಿನ ವಿರಾಮ.
ಮಮತಾ ಬ್ಯಾನರ್ಜಿ ಎಕ್ಸ್ ಪ್ರೆಸ್: ಓಡುವುದಕ್ಕಿಂತ ಕೂಗುವುದೇ ಜಾಸ್ತಿ.
ಧೋನಿ ಎಕ್ಸ್ ಪ್ರೆಸ್: ಶೇ.ತೊಂಬತ್ತರಷ್ಟು ಪ್ರಯಾಣ ಗಂಟೆಗೆ ಇಪ್ಪತ್ತು ಕಿಮೀ ವೇಗದಲ್ಲಿ. ಉಳಿದಿದ್ದು ಗಂಟೆಗೆ ಮುನ್ನೂರು ಕಿಮೀ ವೇಗದಲ್ಲಿ.
ಸಲ್ಮಾನ್ ಖಾನ್ ಎಕ್ಸ್ ಪ್ರೆಸ್: ಫುಟ್ ಪಾತ್ ಮೇಲೆ ಕೂಡ ಓಡುತ್ತದೆ.
ಕೇಜ್ರಿವಾಲ ಎಕ್ಸ್ ಪ್ರೆಸ್: ಹೊರಡುವುದು ಗ್ಯಾರಂಟಿ, ಆದರೆ ಗುರಿ ಮುಟ್ಟುವ ಖಾತರಿ ಇಲ್ಲ.
ಮನಮೋಹನ ಎಕ್ಸ್ ಪ್ರೆಸ್: ಚಾಲಕನ ಪರವಾಗಿ ಬೇರೆಯವರು ಓಡಿಸಬೇಕು. ಎಲ್ಲೂ ಸದ್ದು ಮಾಡಲ್ಲ.
ಮೋದಿ ಎಕ್ಸ್ ಪ್ರೆಸ್: ಕೊನೆ ನಿಲ್ದಾಣ ಮುಟ್ಟುವವರೆಗೂ ಎಲ್ಲೂ ನಿಲ್ಲುವುದಿಲ್ಲ.
ಅಮಿತಾಬ್ ಎಕ್ಸ್ ಪ್ರೆಸ್: ಹಳೆ ಉಗಿಬಂಡಿ, ಆದರೂ ಕರಾರುವಾಕ್ಕಾಗಿ ಓಡುತ್ತದೆ.
ಯಡಿಯೂರಪ್ಪ ಎಕ್ಸ್ ಪ್ರೆಸ್: ಬೋಗಿಗಳು ಇಲ್ಲದಿದ್ದರೂ, ಓಡುತ್ತಲೇ ಇರುತ್ತದೆ.
ದೇವೇಗೌಡ ಎಕ್ಸ್ ಪ್ರೆಸ್: ಹಳೇ ‘ಹವಾ’ ಮೇಲೆಯೇ, ಇಂದಿಗೂ ಚಲಿಸುತ್ತಿದೆ.
ರಜನಿಕಾಂತ್ ಎಕ್ಸ್ ಪ್ರೆಸ್: ರೈಲು ನಿಂತಿರುತ್ತದೆ, ನಿಲ್ದಾಣಗಳೇ ಚಲಿಸುತ್ತವೆ.