Saturday, 14th December 2024

ದೇವರೆಂಬುದು ವ್ಯಕ್ತಿಯಲ್ಲ, ಅದೊಂದು ತತ್ತ್ವ, ಗುಣ..

ಪ್ರಾಣೇಶ್‌ ಪ್ರಪಂಚ

ಗಂಗಾವತಿ ಪ್ರಾಣೇಶ್‌

ಹಣ, ಅಧಿಕಾರಕ್ಕಾಗಿ ನಮ್ಮ ಅನೇಕ ರಾಜಕಾರಣಿಗಳು ತಾವೇನು ಮಾಡುತ್ತಿದ್ದೇವೆ, ಏನು ಮಾತಾಡುತ್ತಿದ್ದೇವೆ ಎಂಬುದರ ಪರಿವೆ
ಇಲ್ಲದೇ ಮಾತನಾಡುತ್ತಾರೆ.

ಅಧಿಕಾರದಲ್ಲಿರುವವರನ್ನು ಒಲಿಸಿಕೊಳ್ಳಲು ಬುದ್ಧಿಜೀವಿಗಳು, ಕ್ರಾಂತಿಕಾರರು, ಪ್ರಗತಿಪರರು ಎಂದು ಹಣೆಪಟ್ಟಿ ಅಂಟಿಸಿ ಕೊಂಡಿರುವ ಬಿಕರಿಗೆ ಸಿದ್ಧವಾಗಿರುವ ಅಂಗಡಿಗಳಂಥ ಕೆಲ ಜನರು ವಸ್ತು, ವಿಷಯ, ವ್ಯಕ್ತಿಗಳ ಒಳ ಅರ್ಥಗಳನ್ನು ತಿಳಿಯದೆ
ವಿರೋಽಸಿದರೆ, ತಿರುಗೇಟು ನೀಡಿದರೆ ಜಗತ್ತು ನಮ್ಮನ್ನು ಗುರುತಿಸುತ್ತದೆ ಎಂದು ಭ್ರಮಿಸಿ ತಮ್ಮ ವ್ಯಕ್ತಿತ್ವವನ್ನು ಕುಗ್ಗಿಸಿಕೊಳ್ಳುವ ಟಿ.ವಿ.ಗಳ ಟಿ.ಆರ್.ಪಿ ಹೆಚ್ಚಿಸಲು ಮಾತುಗಳನ್ನಾಡುತ್ತಲೇ ಇರುತ್ತಾರೆ.

ಹೊರ ದೇಶದವರು ಈ ದೇಶದ ಧರ್ಮ, ಆಚರಣೆಗಳನ್ನು, ಶಾಸಗಳು ಅಭ್ಯಸಿಸುವ, ಆಚರಣೆಗೆ ತರುವ ಮಾತುಗಳನ್ನಾಡುತ್ತಿದ್ದರೆ ನಮ್ಮ ಈ ಮೂರ್ಖರು ಅವುಗಳನ್ನು ಹೀಯಾಳಿಸಿ ಮುಖಕ್ಕೆ ಮಸಿ ಬಳಿಸಿಕೊಳ್ಳುವ ಕೆಲಸ ಮಾಡುತ್ತಲೇ ಇರುವುದು ನಿಜಕ್ಕೂ ಯೋಚನೀಯ, ಶೋಚನೀಯ, ಅಮಾನವೀಯತೆ ಕೂಡ. ಜನ ನಿನ್ನನ್ನು ನೋಡಲಿ ಎಂದು ಬೆಟ್ಟ ಹತ್ತಬೇಡ, ಜನರನ್ನು ನೀನು
ನೋಡಲು ಬೆಟ್ಟ ಹತ್ತು ಎಂಬ ಮಾತು ಈ ನಿಂದಕರಿಗೆ ಅನ್ವಯಿಸುತ್ತದೆ.

ಗ್ರಂಥಗಳಲ್ಲಿ ರಾಮಾಯಣ, ಮಹಾಭಾರತಗಳಲ್ಲಿ ಏನಿದೆ ಎಂದು ನೋಡಲು ಅವುಗಳನ್ನು ಓದಬೇಕಾಗಲಿ, ನೀನು ಓದಿದ್ದನ್ನು ಜನರು ತಿಳಿದುಕೊಳ್ಳಲಿ ಎಂದು ಅದನ್ನು ಟೀಕಿಸಬಾರದು. ಅದರಲ್ಲಿನ ಗುಣಗಳನ್ನು ನೀನು ಅರಿತೆಯಾದರೆ ನಿನ್ನನ್ನು ಈ ಜಗತ್ತು ಗೌರವಿಸಿ ಪೂಜಿಸಲಾರಂಭಿಸುತ್ತದೆ. ಮಹಾಭಾರತದ ಪಾತ್ರಗಳು ವ್ಯಕ್ತಿಗಳಲ್ಲ, ಗುಣಗಳು ಎಂದು ಅರಿತರೆ, ಅರಿತು ಓದಿದರೆ ಸಾಕು. ಇದು ನಮ್ಮಲ್ಲಿ ಮಾಡುವ ಬದಲಾವಣೆ ಅಮೋಘವಾದದ್ದು. ಧರ್ಮ ರಾಯ ವ್ಯಕ್ತಿಯಲ್ಲದೇ ಅದೊಂದು ಗುಣ, ಧರ್ಮ,
ಸನ್ನಡತೆ, ಸಹನೆ, ಸತ್ಯವಾಕ್ಕಿನ ಪ್ರತೀಕ ಎಂದು ತಿಳಿದರೆ ನೀನು ಗೆದ್ದೆ.

ಹಾಗೆಯೇ ಭೀಮ – ಧೈರ್ಯ, ಬಲ, ಭಕ್ತಿ, ಜ್ಞಾನ, ಸ್ಥಿತಿಗಳ ಪ್ರತೀಕ. ಅರ್ಜುನ – ಸಹನೆಯಿಂದ ಎಲ್ಲವನ್ನು ಕೇಳುವ ಪ್ರತೀಕ. ಭಗವದ್ಗೀತೆಯನ್ನು ಅವನೇ ಮೊದಲು ಕೇಳಿದ್ದಲ್ಲವೇ? ಅದಕ್ಕೆ ಅವನಿಗೆ ಜಯ, ಭಗವತತ್ತ್ವ ಕೇಳುವವನಿಗೆ ಜಯ ಕಟ್ಟಿಟ್ಟಿದ್ದು. ನಕುಲ, ಸಹದೇವ – ಶೀಲ, ವಿನಯಗಳ ಪ್ರತೀಕ. ದ್ರೌಪದಿ – ಸನಾತನ ವೇದವಿದ್ಯೆ ಪ್ರತೀಕ. ಕುರುಕ್ಷೇತ್ರ ಯುದ್ಧ ನಿತ್ಯ ನಮ್ಮ ಮನೆಯಲ್ಲಿ ನಡೆಯುವಂಥದ್ದೆ. ಅದೂ ದುರ್ಗುಣ, ಸುಗುಣಗಳ ಮಧ್ಯೆ ನಡೆಯುವಂಥದು.

ನಮ್ಮ ಈ ಶರೀರವೇ ಅರಗಿನ ಮನೆ. ಯಾವತ್ತೋ ಬೆಂಕಿಗೆ ಆಹುತಿಯಾಗೋದು. ಭೀಮ ಎಚ್ಚರದಿಂದ ಇದ್ದ ಎಂದರೆ, ದೇಹದಲ್ಲಿರೋ ಜೀವನೂ ತಪ್ಪು ನಡೆಯದಂತೆ ಎಚ್ಚರ ಇರಬೇಕು. ಭೀಮ ಎಲ್ಲರನ್ನು ಹೊತ್ತುಕೊಂಡ ಎಂದರೆ, ಧರ್ಮವನ್ನು ಶ್ರವಣ ಮಾಡಿದ, ಜ್ಞಾನವನ್ನು, ವಿನಯಶೀಲಗಳನ್ನು ಹೊತ್ತು ಸುರಂಗ ಮಾರ್ಗದಿಂದ ಎಂದರೆ ಬ್ರಹ್ಮನಾಡಿಯಿಂದ ದೇಹಬಿಟ್ಟು
ಭಗವಂತನ ಪಾದ ಸೇರಬೇಕು. ಎಷ್ಟು ಅದ್ಭುತ ವಿಚಾರ ವಲ್ಲವೇ? ಕೇವಲ ಬುದ್ಧಿಗೆ ಕೆಲಸ ಕೊಡಲು ಇದು ಜ್ಞಾನ ವಲ್ಲ.

ಹೃದಯಕ್ಕೆ ಕೆಲಸ ಕೊಡಬೇಕಾದ ಸುಜ್ಞಾನ. ಪರಮಾರ್ಥ – ಪರಮ ಅರ್ಥ ಕೂಡಾ. ಪಾರಮಾರ್ಥವೂ ಹೌದು. ಇನ್ನು ಕೃಷ್ಣ ಭಗವದ್ಗೀತೆ, ಮಥುರಾ ನಗರ ಎಂದರೂ ಉರಿದು ಬೀಳುವ ಅಭಿನವ, ಜರಾಸಂಧ, ಕೀಚಕ, ದುಶ್ಯಾಸನರಿದ್ದಾರೆ. ಈ ವಿಶ್ಲೇಷಣೆ ನೋಡಿ, ಕ್ಷಮಿಸಿ ಓದಿ ‘ಅಂತರಂಗ ಬಹಿರಂಗ ಶುದ್ಧಿ ನಮ್ಮ ದೇಹವನ್ನು ಮಥುರಾ ಪಟ್ಟಣ ಮಾಡಿಕೊಳ್ಳಬೇಕು. ಜ್ಞಾನ ಮತ್ತು ಭಕ್ತಿ ಎಂದರೆ ಜ್ಞಾನ ಸ್ವರೂಪ ವಸುದೇವ. ಭಕ್ತಿಸ್ವರೂಪಿ ದೇವಕಿ. ಇವುಗಳ ಸಂಗಮ ನಮ್ಮಲ್ಲಿ ಆದಾಗ ಕೃಷ್ಣನ ಅವತಾರ ಅಥವಾ ಸ್ವರೂಪದರ್ಶನ ನಮ್ಮಲ್ಲೇ ಆಗುತ್ತದೆ. ಹಾ.. ಅಂದಹಾಗೆ, ಅದಕ್ಕಿಂತ ಮುಂಚೆ ಕಾಮ, ಕ್ರೋಧ, ಲೋಭ, ಮೋಹ,
ಮದ, ಮತ್ಸರಗಳೆಂಬ ಆರು ಮಕ್ಕಳನ್ನು ಕಂಸನೆಂಬ ಮೃತ್ಯುಗೆ ಒಪ್ಪಿಸಬೇಕು. ನೋಡಿದಿರಾ? ಎಂಥ ಅದ್ಭುತ ವಿಶ್ಲೇಷಣೆ.

ನಮಗೆ ರಾಮ – ಲಕ್ಷ್ಮಣ, ಕೃಷ್ಣ, ಹನುಮಂತ ಹಿಡಿಸಲಿಲ್ಲವೆಂದರೆ ಅವರನ್ನು ವ್ಯಕ್ತಿಗಳೆಂದಲ್ಲದೇ ತತ್ತ್ವ, ಗುಣಗಳೆಂದಾದರೂ ಒಪ್ಪಿಕೊಂಡು ಹಿಗ್ಗಬಾರದೇ? ನೀವು ಹೀಗೆ ಮಾಡಿದರೂ ಆ ಪರಮಾತ್ಮ ನಗುತ್ತಲೇ ನಿಮ್ಮನ್ನು ಉದ್ಧಟ ಮಕ್ಕಳೆಂದು ಉದ್ಧರಿಸುವ ಕರುಣಾಮಹಿ. ಇನ್ನು ಅಲ್ಲಲ್ಲಿ ತುಲಾಭಾರಗಳನ್ನು ರಾಜಕಾರಣಿಗಳಿಗೆ, ಸ್ವಾಮೀಜಿಗಳಿಗೆ ಮಾಡುವುದನ್ನು ನೋಡುತ್ತೇವೆ. ನಾನು
ಕಂಡಂತೆ, ನನಗೆ ತಿಳಿದಂತೆ ಅತೀ ಹೆಚ್ಚು ಸಾರ್ಥಕ ತುಲಾಭಾರಗಳನ್ನು ಮಾಡಿಸಿಕೊಂಡು ದಾಖಲೆಯಾದವರು ಗದುಗಿನ ವೀರೇಶ್ವರ ಪುಣ್ಯಾಶ್ರಮದ ದಿ. ಪಂಡಿತ್ ಪುಟ್ಟರಾಜ ಗವಾಯಿ ಗಳವರು.

ಅವರು ತಮ್ಮ ತುಲಾಭಾರದ ಹಣವನ್ನೆಲ್ಲ ತಮ್ಮ ಆಶ್ರಮದ ಅಂಧ ಮಕ್ಕಳ ಜೀವನೋದ್ಧಾರಕ್ಕೆ ಬಳಸಿದರು. ಅಂಧ ಮಕ್ಕಳ ನ್ನೆಲ್ಲ ಹಿಡಿದಿಡಿದು ಕರೆತಂದು ಅನ್ನ, ಆಶ್ರಯ, ಸಂಗೀತ ವಿದ್ಯೆಯನ್ನು ಕೊಟ್ಟು ಕಾಪಾಡಿದರು. ತಮ್ಮ ನಿಧನಾ ನಂತರವೂ ಕಾಪಾಡುತ್ತಲೂ ಇದ್ದಾರೆ. ಅವರ ಅನೇಕ ಪ್ರಸಿದ್ಧ ಗಾಯಕ ಶಿಷ್ಯರು ಗುರು ಪುಟ್ಟರಾಜರು ಇರದಿದ್ದರೆ ಅಂಧ ಮಕ್ಕಳೆಲ್ಲ ಬಸ್
ಸ್ಟ್ಯಾಂಡುಗಳಲ್ಲಿ ಭಿಕ್ಷೆ ಬೇಡಿಯೇ ಬದುಕಬೇಕಾಗಿತ್ತೆಂದು ಅದನ್ನು ತಪ್ಪಿಸಿ, ಅಂಧ ಮಕ್ಕಳನ್ನು ವಿಶ್ವಮಾನ್ಯರನ್ನಾಗಿ
ಮಾಡಿದ್ದಾರೆಂದು ಇಂದಿಗೂ ಸ್ಮರಿಸುತ್ತಲೇ ಇದ್ದಾರೆ. ಇದು ಸತ್ಯಸ್ಯಸತ್ಯ ಕೂಡಾ.

ಇಂತಹ ತುಲಾಭಾರದ ಅರ್ಥ ವಿಶ್ಲೇಷಣೆ ಹೇಗಿದೆಯೆಂದರೆ ‘ತುಲಾಭಾರದಲ್ಲಿ ವ್ಯಕ್ತಿಯನ್ನು ಭೌತಿಕ ಪದಾರ್ಥಗಳಾದ ಧನ, ಧಾನ್ಯ, ಬಂಗಾರಗಳಿಂದ ತೂಗುತ್ತೇವೆ. ಅಂದರೆ, ಈ ತೂಗುವಿಕೆಯಲ್ಲಿ ಈ ಭೌತಿಕ ಪದಾರ್ಥಗಳು ಕೆಳಗಿಳಿದು ವ್ಯಕ್ತಿ ಮೇಲೆರು ತ್ತಾನೆ. ಅಂದರೆ, ಭೋಗ ಸಾಮಗ್ರಿಗಳು ಕೆಳಗೆ, ವ್ಯಕ್ತಿ ಮೇಲೆ ಬರಬೇಕು. ಇವುಗಳ ಸಂಪಾದನೆಗೆ ಆತ ಕೆಳಮಟ್ಟಕ್ಕೆ ಇಳಿಯಬಾರದು
ಅಂತಲೇ ಇದರ ಮತಿತಾರ್ಥ. ಆತ ಮೇಲೆ ಮೇಲಕ್ಕೇರಿ ಔನ್ನತ್ತ ಸಾಧಿಸಿ, ಮತ್ತೆ ಕೆಳಗಿಳಿದು ಬಂದು ಈ ವಸ್ತುಗಳ್ನು ದಾನ ಮಾಡಬೇಕು. ಯಾವ ಗುರುವೂ, ಯಾವ ಶಾಸ್ತ್ರವೂ ಎಂದೂ ದೇವರನ್ನು ತೋರಲಾರವು.

ತನ್ನದೇ ಪರಿಶುದ್ಧಗೊಂಡ, ಪರಿಪೂರ್ಣಗೊಂಡ ಒಳದೃಷ್ಟಿಯಿಂದ ಪ್ರತಿಯೊಬ್ಬನೂ ಭಗವಂತನನ್ನು ತನ್ನ ಅಂತರಾತ್ಮವನ್ನಾಗಿ
ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಜ್ಞಾನಕ್ಕೆ ಇರುವ ಮೂಲ ಒಂದೇ ಒಂದು, ಅದು ನಮ್ಮ ಪ್ರತ್ಯಕ್ಷ ಅನುಭವ. ಈ ಮಾತನ್ನು ಯೋಗವಾಶಿಷ್ಟ ಹೇಳುತ್ತದೆ. ಜ್ಞಾನ ಹೇಳುವವನು ಯಾರೋ ಇರಬಹುದು. ಆದರೆ ಆತನೇ ಜ್ಞಾನ ಅಲ್ಲ. ಸಾರನ್ನು ಸೌಟಿನಿಂದ ಹಾಕುತ್ತೇವೆ ಅಲ್ಲವೇ? ಹಾಗೆಂದು ಸೌಟೇ ಸಾರು ಅಲ್ಲ. ಅದು ಸಾರನ್ನೂ ಮಾಡಿಲ್ಲ. ತಮ್ಮ ಬಳಿ ಬಂದ ವ್ಯಕ್ತಿಯೊಬ್ಬನಿಗೆ ಶ್ರೀ ರಮಣ ಮಹರ್ಷಿಗಳು ಅವನು ನನಗೆ ಮುಕ್ತಿ, ಮೋಕ್ಷ ಕೊಡಿ ಎಂದು ಬಂದಾಗ, ಇದು ಕಷ್ಟಪಟ್ಟು ಸಾಧಿಸುವಂಥದಲ್ಲ, ಯಾರೋ ಮತ್ತೊಬ್ಬರಿಗೆ ಕೊಡುವಂಥದ್ದಲ್ಲ, ಅದಕ್ಕಾಗಿ ನೀನು ಇಷ್ಟು ದೂರ ಹುಡುಕಿ ಬರಬೇಕಾದುದೂ ಇಲ್ಲ, ನೀನೇ
ಹುಡುಕಿಕೊಳ್ಳಬೇಕು.

ಅಂಥದೊಂದು ಅನುಭವ ನಿನಗಾದರೆ, ನಿನಗೆ ಆಶ್ಚರ್ಯ ಆಗುತ್ತದೆ. ಇದು ಎಂದಾದರೂ ಆಗಬಹುದಿತ್ತು ಎಂದು ಹೇಳಿದರಂತೆ.
ಮೊನ್ನೆ ಯಾರೋ ಆಂಜನೇಯ ಗುಲಾಮಗಿರಿಯ ಸಂಕೇತ ಎಂದರಂತೆ ಎಂದು ಓದಿದೆ. ಆದರ್ಶ, ಗುಣ, ತತ್ತ್ವಗಳನ್ನೇ ಅರಿಯದ ಇಂಥ ಜನರನ್ನು ನಾವು ವಿರೋಧಿಸಬಾರದು, ನಿಂದಿಸಲೂ ಬಾರದು. ಅವರೊಂದಿಗೆ ಚರ್ಚೆಗಂತೂ ಇಳಿಯಲೇಬಾರದು. ಅವರ ಬಗ್ಗೆ ಮರುಕಪಡಬೇಕು. ಅವರು ಬೆಳೆದ ಪರಿಸರದ ಬಗ್ಗೆ ಕನಿಕರಪಡಬೇಕು.

ಕರ್ಷತಿ ಯೋಗಿನಾಂ ಮನಾಂಸಿ ಇತಿ ಕೃಷ್ಣಃ |

ಯಾರು ಯೋಗಿಗಳ ಚಿತ್ತವನ್ನು ಆಕರ್ಷಿಸುತ್ತಾನೋ ಅವನು ಕೃಷ್ಣ ಅಂದರೆ, ಧರ್ಮ, ದೇವರು, ಪುರಾಣಗಳನ್ನು  ಬೈಯ್ಯು ವವರು ಯೋಗಿಗಳಾಗಿರಲು ಸಾಧ್ಯವೇ ಇಲ್ಲವೆಂದಾಯಿತು ಅಲ್ಲವೇ? ಅಂಥವರನ್ನು ರೋಗಿ ಗಳೆಂದು ಕನಿಕರಪಡಬೇಕು ಅಷ್ಟೆ. ಜನರು ಪುಣ್ಯದ ಫಲವನ್ನು ಇಚ್ಚಿಸುತ್ತಾರೆ. ಆದರೆ ಪುಣ್ಯ ಕರ್ಮವನ್ನು ಮಾಡುವುದಿಲ್ಲ. ಪಾಪದ ಫಲವನ್ನು ಇಚ್ಚಿಸುವುದಿಲ್ಲ,
ಆದರೂ ಪಾಪ ಕರ್ಮಗಳನ್ನೇ ಮಾಡುತ್ತಾರೆ. ಜ್ಞಾನಿಗಳನ್ನು ಗುರುಶಾಸನ ಮಾಡುತ್ತಾರೆ.

ದುಷ್ಟರನ್ನು ರಾಜನು ಶಿಕ್ಷಿಸದೇ ಬಿಡುವುದಿಲ್ಲ. ಗುಟ್ಟಾಗಿ ಪಾಪ ಮಾಡಿದವರನ್ನು ಯಮನು ನೋಡಿಕೊಳ್ಳುತ್ತಾನೆ. ಆದಕಾರಣ ತಾನು ಮಾಡಿದ ಪಾಪಗಳನ್ನು ಮುಚ್ಚಿಟ್ಟರೆ ಮಾತ್ರ ಪಾಪವನ್ನೇ ಉಂಟುಮಾಡುತ್ತದೆ. ಇದಕ್ಕೆ ಪ್ರಾಯಶ್ಚಿತವೆಂದರೆ ಅವರವರ ಅಂತರಂಗದಲ್ಲಿ ಉಂಟಾಗತಕ್ಕ ಗ್ಲಾನಿಯೇ ನಿಜವಾದ ಪ್ರಾಯಶ್ಚಿತ. ಈ ಗ್ಲಾನಿಯಿಂದ ಚಿತ್ತಶುದ್ಧಿ ತಾನಾಗಿಯೇ ಉಂಟಾಗುವುದು. ಆಗಾಗ ಪ್ರಾಯಶ್ಚಿತ ಮಾಡಿಕೊಳ್ಳುವುದು ಮತ್ತೂ ಪಾಪಗಳನ್ನು ಮಾಡುವುದು ಆನೆಯ ಸ್ನಾನದಂತೆ ಉಪಯೋಗವಿಲ್ಲದಂತೆ ಆಗುವುದು.