ತನ್ನಿಮಿತ್ತ
ಪಿ.ಚಂದ್ರಿಕಾ
ಸಂಧಿಕಾಲದ ಸಂಧಾನಕಾರರಾದ ಗೋಕಾಕರು ನವೋದಯದ ಆದರ್ಶಗಳನ್ನು ನವ್ಯದ ಹೊಸ ಪರಿವರ್ತನೆಯನ್ನೂ ಒಡಲಲ್ಲಿ ಇರಿಸಿಕೊಂಡ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲದ ಎಲ್ಲ ಆದರ್ಶಗಳನ್ನೂ ಮೈಗೂಡಿಸಿಕೊಂಡ ಕವಿಯಾಗಿ ಕಾಣಿಸಿಕೊಳ್ಳುತ್ತಾರೆ.
ಕನ್ನಡ ಕಾವ್ಯದ ಮುಖ್ಯ ಕಲ್ಪನೆಯಾದ ‘ದ್ಯಾವಾ ಪೃಥವಿ’ಯನ್ನು ಇಟ್ಟುಕೊಂಡು ಅವರ ಕಾವ್ಯವನ್ನು ಪ್ರವೇಶಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ‘ದ್ಯಾವಾ ಪೃಥವಿ’ ಸಂಕಲನದ ಕವಿತೆಯು ಆರಂಭವಾಗುವುದೇ ಮೋಡಗಳ ವರ್ಣನೆಯಿಂದ – ವಿಮಾನದಲ್ಲಿ ಕುಳಿತ ಹೊಸ ಅನುಭವದ ಬೆರಗಲ್ಲಿ. ವಿಮಾನದಿಂದ ಹೊರಗೆ ನೋಡುವಾಗ ಅವರ ಕಣ್ಣಿಗೆ ಬೀಳುವುದು ಮೋಡಗಳು-ಗುಂಪಾಗಿ ಒಂಟಿಯಾಗಿ -ಚದುರಿದ ಹಾಗೇ ಕಾಣುವ ಮೋಡಗಳು. ಮೋಡ ದಿಂದಲೇ ಮೇಘದೂತದ ಕಲ್ಪನೆ ಗರಿಗೆದರಿದ ಹಾಗೇ ಇಲ್ಲೂ ಪರಂಪರೆಯ ಇನ್ನೊಂದು ನೆಲೆಗೆ ಇದನ್ನು ಒಯ್ದು ಮೋಡಗಳ ಮೂಲಕವೇ ನೀರದ ಮತ್ತು ನಾರದರಿಬ್ಬರೂ ಸಂಚರಿಸುವುದನ್ನು ಹೇಳುತ್ತಾರೆ.
ಇಲ್ಲಿ ಭೂಮಿ ವಾಸ್ತವ; ಆಕಾಶ ಕಾಲ್ಪನಿಕೆ. ದ್ಯಾವಾ ದಿವದ; ಕಲ್ಪನೆಯಾದರೆ ಭೂಮಿ ಎನ್ನುವುದು ಋತದ ಪರಿಭ್ರಮಣ. ಋತವೆಂದರೆ ಕಾಲ ಮತ್ತು ಸತ್ಯ. ಎರಡೂ ಪರಿಭ್ರಮಣಕ್ಕೆ ಒಳಗಾಗುತ್ತಲೆ ನಿಕಷಕ್ಕೆ ಪಕ್ಕಾಗು ತ್ತಿರುತ್ತದೆ. ಇಲ್ಲಿ ಇನ್ನೊಂದು ಅಂಶವನ್ನು ನಾವು ಗಮನಿಸ ಬೇಕು. ಜ್ಞಾನ ವಿಜ್ಞಾನಗಳನ್ನೂ ಮೀರಿದ್ದು ಪ್ರಕೃತಿ.
ಅದನ್ನು ನೋಡುತ್ತಲೇ ಮನುಷ್ಯ ತನ್ನ ಕಲ್ಪನೆಯನ್ನು ಗರಿಗೆದರಿಸಿಕೊಂಡು ಅವಿಷ್ಕಾರಕ್ಕೆ ಇಳಿದಿದ್ದು. ಹೀಗಾಗಿ ಯಾವುದೇ ಜ್ಞಾನ ವಿಜ್ಞಾನಗಳಾಗಲೀ ಪ್ರಕೃತಿಯಿಂದಲೇ ಹುಟ್ಟಿದ್ದಾಗಿರುತ್ತದೆ.
ಮನುಷ್ಯ ವಿಜ್ಞಾನವನ್ನು ಬಿಟ್ಟೂ ಇರಲಾರ; ಹಾಗೇ ಪ್ರಕೃತಿಯನ್ನೂ ಕೂಡಾ. ಇವೆರಡರ ‘ಸಮನ್ವಯ’ತೆ ಇಲ್ಲದೆ ಬದುಕು ಪೂರ್ಣವಾಗುವುದಿಲ್ಲವೆಂದು ಗೋಕಾಕರು ಬಲವಾಗಿ ನಂಬುತ್ತಾರೆ. ಅವರ ನಂಬುಗೆ ಅವರ ಸಾಹಿತ್ಯವನ್ನು ರೂಪಿಸಿರುವುದು ಮಾತ್ರವೇ ಅಲ್ಲದೇ, ಅವರ ಕಾವ್ಯದ ಮುಖ್ಯ ತಾತ್ವಿಕತೆಯೂ ಆಗಿದೆ. ನಂಬುವ ದೈವ, ನೋಡುವ ಪ್ರಕೃತಿ ಹಾಗೂ ಬುದ್ಧಿಯಿಂದ ಹುಟ್ಟುವ ವಿಜ್ಞಾನ ಮತ್ತು ಮಾನವನ ಒಳಗಿನ ಸೃಜನ ಶೀಲತೆಯ ಆತ್ಯಂತಿಕ ಸ್ವರೂಪವಾದ ಕಲೆ ನಾಲ್ಕೂ ಮುಖ್ಯವಾದವು. ಇವು ಗೋಕಾಕರಲ್ಲಿ ಬೇರೆ ಬೇರೆ ರೀತಿಯಲ್ಲಿ ವಿನ್ಯಾಸವಾಗುತ್ತಾ ಹೋಗುತ್ತದೆ.
ಕಲೆಯ ಬಗ್ಗೆ ನನಗೆ ಅಚ್ಚರಿಯಾಗುವುದೆಂದರೆ – ಇದು ಬಯಲಲ್ಲಿ ಕಟ್ಟಡ ಕಟ್ಟುವ ಕೆಲಸ. ಬಯಲಲ್ಲಿ ಕಟ್ಟಡ ಕಟ್ಟಬಹುದೇ ವಿನಃ ಬಯಲಿಗೇ ಕಟ್ಟಡ ಕಟ್ಟಲಾಗುವು ದಿಲ್ಲವಲ್ಲ! ಉಳಿದ ಬಯಲು ನಮ್ಮನ್ನು ಮತ್ತೆ ಮತ್ತೆ ಕರೆಯುತ್ತಲೇ ಇರುತ್ತದೆ. ಕಟ್ಟಡ ತನ್ನ ಕರ್ಷಣೆಯನ್ನು ಕಳಕೊಳ್ಳುತ್ತಾ ಬಯಲಿನ ಕಡೆಗೆ ವಾಲಿಬಿಡುತ್ತದೆ. ಗೋಕಾಕರಲ್ಲಿಯೂ ಈ ಪ್ರಕ್ರಿಯೆ ಢಾಳಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದಲೇ ಅವರಿಗೆ ವಿಮಾನದಲ್ಲಿ ಕುಳಿತಾಗಲೂ ‘ಆಕಾಶ’ ಮತ್ತು ‘ನೆಲ’ ಎರಡೂ ಸೆಳೆತದ ಸಂಗತಿಗಳಾಗುತ್ತವೆ.
ಜಗತ್ತೆಲ್ಲವನ್ನೂ ಸುತ್ತಿ ಬಂದರೂ ಗೋಕಾಕರಿಗೆ ನೆಲವೆಂದರೆ ಭಾರತವೇ. ಭಾರತವೆಂದರೆ ಬರಿಯ ನೆಲ ಮಾತ್ರವಲ್ಲ; ಬದುಕಿನ ಕ್ರಮ. ಶ್ರದ್ಧೆಯ ಕೇಂದ್ರ,
ಉಸಿರಿನ ತಿದಿ. ಹೀಗಾಗೇ ಸಮುದ್ರ ಗೀತೆಗಳಲ್ಲಿ ಒಂದು ಕಡೆಗೆ ಪಾಶ್ಚಾತ್ಯ ನೆಲವನ್ನು ‘ಇಂದ್ರನ ರಾಜ್ಯವಲ್ಲವಿದು ಇಂದ್ರಿಯಗಳ ರಾಜ್ಯ’ ಎಂದು ಇಂಗ್ಲೆಂಡಿನ ಸಾಮಾಜಿಕ ಜೀವನದ ಒಂದಂಶವನ್ನು ಕುರಿತು ಬರೆಯುತ್ತಾರೆ. ಅಲ್ಲಿ ಕಂಡಿದ್ದರಲ್ಲಿ ಇಲ್ಲಿಯದನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ‘ಮಾರ್ಸೆಯಲ್ಲಿನ ನಾತರ್‌ದಾಮ್’ ಎನ್ನುವ ಪದ್ಯ ದಲ್ಲಿ ಸೌಂದರ್ಯವನ್ನು ಬಣ್ಣಿಸುತ್ತಾ ‘ಇಂಥಾದ್ದೇ ಸೌಂದರ್ಯ ಮೈಸೂರಿನಲ್ಲಿ ಇದೆ’ ಎನ್ನುತ್ತಾರೆ.
ಪರಕೀಯ ಸೌಂದರ್ಯವನ್ನು ಬಣ್ಣಿಸುವಾಗಲೂ ಅವರೊಳಗೆ ಚುಟುಕು ಮುಳ್ಳಾಡಿದಂತೆ ಒಂದು ಅಸ ಹನೆ ಇದ್ದೇ ಇದೆ. ಅದನ್ನೇ ‘ಪರತಂತ್ರ ಭಾರತೀಯನ ಗಂಟಲಿಗೆ ಗಾಳವಿದೆಲ್ಲ ಸಿರಿ’ ಎನ್ನುತ್ತಾರೆ. ಇನ್ನೊಂದು ಪದ್ಯದಲ್ಲಿ ‘ನೀನು ಸುಂದರಳಹುದು ಆದರೆ ನಿನ್ನ ಸೌಂದರ್ಯವ ಗಮನಿಸಲಾರೆ ಕ್ಷಮಿಸೆನ್ನ ಆಂಗ್ಲದೇವಿ’ ಎಂದು ಬ್ರಿಟೀಷರಿಂದ ಭಾರತೀಯರಿ ಗಾದ ಶೋಷಣೆಯ ನೆನಪಿಂದ ಆ ಸೌಂದರ್ಯವನ್ನು ತಿರಸ್ಕರಿಸುತ್ತಾರೆ. ಈ ಮೂಲಕ ತಾನು ಹುಟ್ಟಿ ಬೆಳೆದ ತನ್ನೊಳಗೆ ನೆಲೆಯಾದ ನೆಲಕ್ಕೆ ಬಹುದೊಡ್ಡ ಗೌರವ ವನ್ನು ಸಲ್ಲಿಸುತ್ತಾರೆ. ತನ್ನ ಮಾತುಗಳಿಗೆ ಮಾನ್ಯತೆ ಕೊಟ್ಟ ಸ್ವಾತಂತ್ರ್ಯದ ಬಲಿದಾನವನ್ನು ಸ್ಮರಿಸುತ್ತಾರೆ.
‘ಇತಿಹಾಸವೆನ್ನುವುದು ಕಳೆದುಹೋದದ್ದಲ್ಲ, ಆಗಿಹೋಗಿದ್ದುದರ ಪರಿಣಾಮ ಎನ್ನುವುದನ್ನು ಅವನು ಮರೆಯುವುದಿಲ್ಲ. ಭಾರತದಂತಹ ಆಧ್ಯಾತ್ಮಿಕ ಜಗತ್ತಿನಲ್ಲಿ ಸಂಬಂಧಗಳೂ ಕೂಡಾ ಪರಮಾರ್ಥವೇ. ಕಾರ್ಯಕಾರಣ ಬಂಧಗಳಲ್ಲಿ ಬೆಳೆಯುವಂಥದ್ದೇ. ಆಕಸ್ಮಿಕವಂತೂ ಅಲ್ಲವೇ ಅಲ್ಲ. ಇದರ ಸೌಂದರ್ಯದ ಎದುರು ಬೇರೆ ಯಾತರದು ಸೌಂದರ್ಯ?’ ಎನ್ನುವ ಪ್ರಶ್ನೆಯನ್ನು ಕೇಳುವುದರ ಮೂಲಕ ಭಾರತದ ಹೆಮ್ಮೆಯನ್ನು ಅರಳಿಸುತ್ತಾರೆ.
ಸಮುದ್ರ ಗೀತೆಗಳು ಮೂರು ತೀರದವು. ಒಂದು ಎರಡು ತೀರದಲ್ಲಿನ ದೇಶಗಳ ಮೌಲ್ಯಗಳ ತುಲನೆಯದವಾದರೆ; ಇನ್ನೊಂದು ತೀರ ‘ಸ್ವ’ಗೆ ಸಂಬಂಧಿಸಿದ್ದು.
ಆದ್ದರಿಂದಲೇ ಇಂದ್ರಿಯಗಳ ಆಧಿಕ್ಯದ ಊರಲ್ಲೇ ನಿಂತು, ಇಂದ್ರಲೋಕದ ಪ್ರಜೆಯಾಗುವ ಆಭೀಪ್ಸೆಯನ್ನು ವ್ಯಕ್ತಪಡಿಸುತ್ತಾರೆ. ದೈವದ ಒಳನಡೆಯಲ್ಲಿ ಅಪಾರ ವಾದ ಶ್ರದ್ಧೆಯನ್ನಿರಿಸಿದ ಅವರ ಸಾಹಿತ್ಯದಲ್ಲೂ ಅಂಥದ್ದೇ ಜಗತ್ತನ್ನು ಸೃಜಿಸುತ್ತಾರೆ. ಅವರ ಎಲ್ಲ ಕಾವ್ಯಗಳಲ್ಲೂ ಈ ಸ್ಥಿತಿಯನ್ನು ಕಾಣುತ್ತೇವೆ. ಭೌತಿಕತೆಯಲ್ಲಿ ಪರಲೌಕಿಕತೆಗೆ ಎಂಥಾ ಸ್ಥಾನವಿದೆಯೋ ಪರಲೌಕಿಕತೆಗೂ ಭೌತಿಕತೆಗೆ ಅಂಥಾದ್ದೆ ಸ್ಥಾನವಿದೆ.
ನಮ್ಮ ಪರಂಪರೆಯಲ್ಲಿ ಎರಡಕ್ಕೂ ಸಮಾನ ಸ್ಥಾನ ಇರುವುದನ್ನು ದೇಗುಲಗಳ ಮಿಥುನ ಶಿಲ್ಪವೂ ಹೇಳುತ್ತದೆ. ಅವು ಸೃಷ್ಠಿಯ ಆದಿಯ ಸಂಕೇತ ಶಕ್ತಿಗಳಾಗಿ ಗೋಚರಿಸುತ್ತವೆ. ಅವನನ್ನು ನೋಡಲು ಹೋಗುವಾಗ ‘ಇದೇನಿದು?’ ಎಂದು ಮೂಗು ಮುರಿಯುವಂತೆಯೇ ಇಲ್ಲ. ಇದೂ ಕೂಡಾ ಅವನ ಸೃಷ್ಟಿಯ ಭಾಗವೇ. ಆದರೆ ಅವನನ್ನು ನೋಡಲು ಕಾಮಾದಿಗಳನ್ನು ಹೊರಗಿಟ್ಟು ಆ ಕ್ಷಣದ ದಿವ್ಯತ್ವಕ್ಕೆ ಕಣ್ಣನ್ನು ತೆರೆದುಕೋ ಎನ್ನುವ ಸಂದೇಶವದು. ಹಾಗಾಗಿ ಎಲ್ಲದರ ನಡುವಣ ಆಧ್ಯಾತ್ಮಿಕ ದಾಹವೇ ಮುಖ್ಯವಾಗುವಂತೆ ಇದು ‘ಭಾರತ ಸಿಂಧು ರಶ್ಮಿ’ ಯಲ್ಲೂ ಕಾಣಿಸಿಕೊಳ್ಳುತ್ತದೆ.
ವಿಶ್ವ ಮೈತ್ರಿಯ ಬ್ರಹ್ಮ ಚೈತನ್ಯ ಮಾನವೀಯ ನೆಲೆಯಲ್ಲಿ ನಿಲ್ಲುವ ಬಹುದೊಡ್ಡ ಆಶಯ ಇಲ್ಲಿ ಕಾಣುತ್ತದೆ. ಚರಿತ್ರೆ ಎನ್ನುವುದು ಮಾನವ ವಿಕಾಸದ ಚರಿತ್ರೆಯೇ ಹೊರತು, ಮಾಹಿತಿಯ ಚರಿತ್ರೆ ಖಂಡಿತಾ ಅಲ್ಲ. ನೆಲದ ಮಿತಿಯನ್ನು ಮೀರಿ ಆಕಾಶದ ಅಳತೆಯ ಮುಟ್ಟಲಾಗದ ನಡುವಣ ಸ್ಥಿತಿಯಲ್ಲಿ ನಿಲ್ಲುವ ಮನುಷ್ಯನ ವಿಕಾಸದ ಕಥನ ಇದಾಗಿದೆ. ಆದ್ದರಿಂದ ಮನುಷ್ಯರದ್ದು ವಿಶ್ವಾಮಿತ್ರ ಪ್ರಜ್ಞೆ, ಒಟ್ಟಾರೆಯಾಗಿ ನೆಲಮುಗಿಲಿನ ಕಡೆಗೆ ಅವನಿಗಿರುವ ವಿಚಿತ್ರ ಆಕರ್ಷಣೆಯ ಮನುಷ್ಯನ
ಪ್ರeಯ ಸ್ಥಿತಿಯನ್ನು ಇಲ್ಲಿ ಚಿಂತನೆಗೆ ಹಚ್ಚುತ್ತಾರೆ.
ನಾನೊಬ್ಬ ‘ಸಂಕೀರ್ಣತೆಯ ಉಪಾಸಕ’ ಎನ್ನುವುದರ ಮೂಲಕ ಗೋಕಾಕರು ನವೋದಯದ ಸರಳತೆಯನ್ನು ಒಡೆಯುತ್ತಾರೆ. ‘ಕಟ್ಟದಿರು ಶರಧಿಗೆ ಷಟ್ಪದಿಯ ದೀಕ್ಷೆಯನು’ ಎನ್ನುವುದರ ಮೂಲಕ ಮುಕ್ತಛಂದಕ್ಕೆ ತೆರೆದುಕೊಳ್ಳುತ್ತಾರೆ. ನವ್ಯತೆಯನ್ನು ನೆಲದ ಕಟ್ಟಿಗೆ ಒಗ್ಗಿಸಿ ಅನಾಥ ಪ್ರಜ್ಜೆಗೆ ಪಕ್ಕಾಗದೆ ತಮ್ಮತನವನ್ನು ಮೆರೆಯುತ್ತಾರೆ. ಆಕಾಶದಲ್ಲಿ ಪಯಣಿಸುವಾಗ ಮಾನವನೇ ಇಲ್ಲದ ಪ್ರಶಾಂತ ಧ್ಯಾನಸ್ಥ ಭೂಮಿ ಅವರ ಕಣ್ಣಿಗೆ ಬೀಳುತ್ತದೆ. ಗೋಕಾಕರು ಅದನ್ನು ಮಾನವ ಹುಟ್ಟಿನ ಮೊದಲಿನ ಭೂಮಿಯಾಗಿ ನೋಡುತ್ತಾರೆ. ಇಂಥಾ ಭೂಮಿಗೆ ಮನುಷ್ಯನ ಆಗಮನವಾದ ನಂತರ ರಕ್ತ ಸಿಕ್ತ ಚರಿತ್ರೆಯ ಪುಟವೊಂದು ತೆರೆಯಿತು ಎನ್ನುತ್ತಾರೆ.
ಹೀಗೆ ಹುಟ್ಟಿದ ಮನುಷ್ಯ ಭೂಮಿಯ ಮೇಲೆ ಆಚಾರ – ಅನಾಚಾರಗಳನ್ನು ಮಾಡುತ್ತಲೇ ಬಂದ. ಈಗ ಯಂತ್ರ ನಾಗರಿಕತೆಯೂ ಅದರಲ್ಲಿ ಒಂದು ಎನ್ನುತ್ತಾರೆ. ಅದರ ಅತಿಯ ಬಗ್ಗೆಯೂ ಅವರಿಗೆ ಬೇಸರವಿದೆ.
ಪೆಟ್ರೋಲಿನದೇ ಪ್ರಸಾದ ತೀರ್ಥ
ಕಲ್ಲಿದ್ದಲಿ ಲೋಭಾನ
ಮಿಂಚಿನ ಪಂಚಾರತಿ: ಅಣುವಾಯುಧ!
ಗ್ರಾಮಾ-ನಿನ ಗಾನ (ಜೀವಂತಿಕೆ ಇಲ್ಲದ ಸ್ಥಿತಿ)
ವೈಜ್ಞಾನಿಕ ಸೂತ್ರಗಳೇ ಮಂತ್ರ
ವ್ಯಾಪಕವಿದು ತಂತ್ರ
ಇಂದಿನ ಕಲಿಯುಗಕೆ ಈ ಕಲಿಯೇ (ಕಲಿಕೆಯೂ
ಆಗುವುದು) ಗುರುವು
ಶುದ್ಧ ತಿರುವು ಮುರುವು! (ಶುದ್ಧತೆಯೂ ತಿರುವು
ಮುರುವು)
ಇದು ವ್ಯಂಗ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ವ್ಯಂಗ್ಯವು ನಮ್ಮ ಒಳಗನ್ನು ಅಲ್ಲಾಡಿಸುವ ವ್ಯಂಗ್ಯವಲ್ಲ. ಬದಲಾವಣೆಯ ವೇಗಕ್ಕೆ ಸಹಜವಾ ಗಿಯೇ ಹುಟ್ಟಿಕೊಳ್ಳುವ ಕೃತಕತೆಯ ಬಗ್ಗೆ ಅವರು ನೋವಲ್ಲಿ ಮಾತಾಡುತ್ತಾರೆ. ಸಮಕಾಲೀನವಾದ ಸಂಗತಿಗಳ ಜತೆ ನಡೆಸಿದ ಮಾತಾಗಿ ಇದು ಕಾಣುತ್ತದೆ. ಮಾನವ ಹುಟ್ಟಿನಂದಿನಿಂದ ಈ ಭೂಮಿಗೆ ಕೆಡುಕು ಮಾತ್ರ ಆಗಿಲ್ಲ -ಮಂಗಳವೂ ಆಗಿದೆ. ಆವತಾರಿ ವ್ಯಕ್ತಿಗಳ ಹುಟ್ಟು ಒಂದು ಭವ್ಯ ಹಾಗೂ ಮಾನನೀಯವಾದ ಚರಿತ್ರೆ ಯನ್ನು ನಿರ್ಮಿಸಿದೆ. ಅಂಥಾ ಚರಿತ್ರೆಯ ಒಂದು ಭಾಗವಾಗಿ ನಾವೆಲ್ಲಾ ಇದ್ದೇವೆ ಎನ್ನುವುದು ಅವರ ನಿಶ್ಚಿತವಾದ ನಿಲುವು.
ಹಾಗಾಗೇ ಅವರ ಕವಿತೆಗಳಲ್ಲಿ ಮತ್ತು ಮಹಾಕಾವ್ಯದಲ್ಲಿ ಕೂಡಾ ಎರಡು ಸಂಗತಿಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಒಂದು ‘ನಚಿಕೇತ ಪ್ರe’ ನಚಿಕೇತ ತನ್ನ ತಂದೆಯನ್ನೇ ಪ್ರಶ್ನಿಸಿದ ಹಾಗೇ ಪ್ರಶ್ನಿಸುವುದರ ಮೂಲಕ ಇನ್ನೊಂದು ಮಹತ್ತರ ಉತ್ತರದ ಕಡೆಗೆ ಹೋಗುತ್ತಾನೆ. ‘ವಿಶ್ವಾಮಿತ್ರ ಪ್ರಜ್ಞೆ’. ಪ್ರಶ್ನಿಸುವುದರ ಮೂಲಕ ಅವರು ಇನ್ನೊಂದು ಜಗತ್ತನ್ನು ಇಲ್ಲಿ ಸೃಷ್ಠಿ ಮಾಡುತ್ತಾರೆ. ಶುದ್ಧ ಮಾನವೀಯ ಅಂತಃಕರಣದ ಸಂಭವಯ ಜಗತ್ತು ಅದು. ಅದೇ ವಿಶ್ವಾಮಿತ್ರ ಪ್ರಜ್ಜೆ. ಇದು ಒಟ್ಟಾರೆಯಾಗಿ ಸಾಧಿತವಾಗಿರುವುದು ‘ಭಾರತ ಸಿಂಧು ರಶ್ಮಿ’ಯಲ್ಲಿ.
‘ಸಮುದ್ರ ಗೀತೆಗಳು ಸಂಕಲನದಲ್ಲಿನ ಒಂದು ಪದ್ಯದಲ್ಲಿ ಗೋಕಾಕರು ಮಿಂಚಿನ ಬಗ್ಗೆ ಮಾತಾಡುತ್ತಾರೆ. ಮಿಂಚು ಹುಟ್ಟುವುದು ಭೂಮಿಯಿಂದಲೇ, ಅದು ಮರಳುವುದೂ ಭೂಮಿಗೇ. ಆಕಾಶ ಮಿಂಚಿದಷ್ಟೂ ಭೂಮಿ ಫಲವತ್ತಾಗುತ್ತದೆ. ಅವರ ‘ದ್ಯಾವಾ ಪೃಥವಿ’ ಕಲ್ಪನೆ ಮಿಂಚಿನ ಸಂಲಗ್ನದಲ್ಲೇ ಇದೆ. ಮಿಂಚಿನ ಪರಿಣಾಮ ಇರುವುದು ಭೂಮಿಯಲ್ಲೇ. ಇದನ್ನೇ ‘ವಿಶ್ವಾಮಿತ್ರ ಪ್ರe’ ಎನ್ನಬಹುದ? ಇದು ಅವರ ಲೋಕದರ್ಶನವೂ ಹೌದು. ಕಾವ್ಯ ಮೀಮಾಂಸೆಯೂ ಹೌದು. ಹೀಗಾಗೇ ಪಾಶ್ಚಾತ್ಯ ಸಂಗತಿಗಳನ್ನು ತನ್ನ ಕಾವ್ಯಲೋಕಕ್ಕೆ ತೆಗೆದುಕೊಂಡೂ ಅದನ್ನ ಅರಗಿಸಿಕೊಳ್ಳುವ ಮತ್ತು ಇಲ್ಲಿನ ಆವರಣಕ್ಕೆ ಹೊಂದಿಸುವ ಪ್ರಯತ್ನದಲ್ಲಿ ತೊಡಗಿಕೊಳ್ಳುತ್ತಾರೆ ಗೋಕಾಕರು. ಇದು ಕಾವ್ಯ ಜಂಗಮಕ್ಕೆ ಧಾತುವಾಗುತ್ತದೆ. ನಮಗೆ ಅನ್ಯರಾಗದ ಕವಿಯಾಗಿ ಗೋಕಾಕರು ಕಾಣುತ್ತಾರೆ.
ರಸನೆಯ ಧಾತುಗಳನ್ನು ಒಳಗೊಂಡ ದೇಹ ಬಿಡುಗಡೆಯಾಗಬೇಕಿರುವುದು ಕೆಡಕಿನಿಂದ. ‘ಕೆಡಕಿ ನಿಂದ ಬಿಡುಗಡೆ’ ಎಂದರೆ ಅದು ‘ಅವತರಣ’ ಎನ್ನುವುದನ್ನು ಗಾಢವಾಗಿ ನಂಬುವ ಗೋಕಾಕರು ಎಲ್ಲ ಬೇಕು ಬಣ್ಣ ಬೇಕು ಕಣ್ಣದೊಂದೆ ಸಾಲದು ಬರಿಗಣ್ಣಾಗಿರುವ ಪ್ರಾಣ ಕೃತಿಯನೆಂದು ಬಲ್ಲದು? ಎನ್ನುತ್ತಾ ಶೂನ್ಯವು ಎಲ್ಲವನ್ನೂ ತುಂಬಿಕೊಂಡು ಪೂರ್ಣವಾಗುವ ಪರಿಯ ಬಗ್ಗೆ ಚಿಂತನೆ ನಡೆಸುತ್ತಾರೆ. ಹೀಗೆ ‘ಪ್ರಕೃತಿ’ ಮತ್ತು ‘ಪರ’ದ ಚಿಂತನೆಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಇಡುತ್ತಾ ಹೋಗುತ್ತಾರೆ.
ಕನ್ನಡ ಸಾಹಿತ್ಯದಲ್ಲಿ ‘ದ್ಯಾವಾ ಪೃಥವಿ’ಯ ಕಲ್ಪನೆ ಬೇಂದ್ರೆಯವರಲ್ಲಿ ಕಾಣುತ್ತದೆ. ಧಾರವಾಡದ ಅಟ್ಟದ ಮೇಲಿನ ಕಾವ್ಯ ಚರ್ಚೆಗಳು ವಿನಾಯಕರ ಕಾವ್ಯ
ಚಿಂತನೆಯನ್ನು ಮತ್ತಷ್ಟು ಪೃಥಕ್ಕರಿಸಿದ್ದು ಸತ್ಯ. ಬೇಂದ್ರೆಯವರಲ್ಲಿ ‘ನರ ನಾರಿ’ ಕಲ್ಪನೆಯ ಜತೆ ಬೆರೆತ ‘ದ್ಯಾವಾ ಪೃಥವಿ’ ವಿನಾಯಕರಲ್ಲಿ ಭೂಮಿ ಆಕಾಶ,
ಭಾರತ ಪೌರಾತ್ಯ, ಸನಾತನ ಆಧುನಿಕ ಹೀಗೆ ಹಂತ ಹಂತಗಳಲ್ಲಿ ಬೆಳೆಯುತ್ತದೆ. ಇದೇ ಮುಂದೆ ಅಡಿಗರ ಭೂಮಿಗೀತಕ್ಕೂ, ಕೆ. ಎಸ್.ನ. ಅವರ ‘ಇಡದಿರು ನನ್ನ
ನಿನ್ನ ಸಿಂಹಾಸನದ ಮೇಲೆ’, ‘ಕುಂಕುಮ ಭೂಮಿ’ಗೂ, ಲಂಕೇಶರ ‘ಅವ್ವ’ ಪದ್ಯಕ್ಕೂ ಕಾರಣ ಆಯಿತು. ಇದು ಇನ್ನೊಂದೇ ಮಗ್ಗಲಿನ ಚರ್ಚೆ. ಇದು ಒಂದು
ಪರಂಪರೆ. ವಿನಾಯಕರಲ್ಲಿ ‘ದ್ಯಾವಾ ಪೃಥವಿ’ ಕಲ್ಪನಾ ಲೋಕದ ಬೌದ್ಧಿಕ ನಡೆಯಾಗಿ ಕಾಣಿಸಿಕೊಂಡಿದೆ.
ಗೋಕಾಕರ ಕಾವ್ಯ ಶ್ರೇಷ್ಠತೆಯ ಪ್ರಶ್ನೆಯನ್ನು ನಾನು ಇಡಲು ಹೋಗುವುದೇ ಇಲ್ಲ. ಅವರ ಕಾವ್ಯ ಕನ್ನಡ ಮನಸ್ಸುಗಳು ಬಹುಕಾಲ ಮನಸ್ಸಿನಲ್ಲುಳಿವ ಮಾತು ಗಳಾಗಿರುವುದನ್ನು ಮಾತ್ರ ನೆನೆಯುತ್ತೇನೆ.