ತಿಳಿರು ತೋರಣ
srivathsajoshi@yahoo.com
ಕೌತುಕಮಯ ಸಂಗತಿಯೊಂದನ್ನು ವಿಡಿಯೊ ಮಾಡಿ ತೇಲಿಬಿಟ್ಟಿದ್ದಾರೆ. ಅದು ವೈರಲ್ ಆಗಿದೆ. ಕರುಣಾಜನಕ ವಿಚಾರವೆಂದರೆ ಉಗಾಂಡಾ ಪ್ರಜೆಯು ನೀರಿನ ಬೋಗುಣಿಯಲ್ಲಿ ಏನು ಪಂಚದಳ ಪುಷ್ಪ ತೇಲಿಬಿಟ್ಟಿದ್ದನೋ ಅದು ಅಲ್ಲಿಗೆ ಹೋಗುವ ಸಾವಿರಾರು ಪ್ರವಾಸಿಗರಂತೆ ಈ ಕನ್ನಡಿಗ ಗಂಡಸು-ಹೆಂಗಸಿನ ಕಿವಿಮೇಲೆಯೂ ಹೂವಾ ಇಟ್ಟಂತಾಗಿದೆ! ಅವರ ವಿಡಿಯೊ ಲಕ್ಷಗಟ್ಟಲೆ ಕನ್ನಡಿಗರು ನೋಡಿ ನಂಬಿದ್ದಾರಾದರೆ ಅವರೆಲ್ಲರ ಕಿವಿಮೇಲೆ ಲಾಲ್‌ಬಾಗನ್ನೇ ಇಟ್ಟಂತಾಗಿದೆ!
ಅತಿರಂಜಿತ ಎಂಬ ವಿಶೇಷಣ ಪದವನ್ನು ನಾವು ಸಾಮಾನ್ಯವಾಗಿ ಸುಳ್ಳು ಸುದ್ದಿಗೇ ತಗಲುಹಾಕುತ್ತೇವೆ. ತಗಲು (ಅಥವಾ ತಗುಳು) ಅಂದ್ರೇನೇ ಮೋಸ, ವಂಚನೆ, ಸುಳ್ಳು ಎಂದು ಅರ್ಥವಂತೆ! ಕೆಲವೊಮ್ಮೆ ಅಲ್ಪಸ್ವಲ್ಪ ಸತ್ಯಾಂಶ ವನ್ನಿಟ್ಟುಕೊಂಡು ಅತಿರಂಜನೆ ಮಾಡುವುದೂ ಇದೆ. ಆ ಸತ್ಯಾಂಶಕ್ಕೆ ಒಂಚೂರು ವೈಜ್ಞಾನಿಕ ಆಧಾರವಿದ್ದರಂತೂ ಮತ್ತಷ್ಟು ಧೈರ್ಯದಿಂದಲೇ ರಂಜನೆಯೊದಗಿಸುವುದು ಸಾಧ್ಯವಾಗುತ್ತದೆ.
ಇತ್ತೀಚೆಗೆ ವಾಟ್ಸ್ಯಾಪ್‌ನಲ್ಲಿ ಸರ್ಕ್ಯುಲೇಟ್ ಆದ ಒಂದು ವಿಡಿಯೊ ಕ್ಲಿಪ್ ಆ ರೀತಿ ಅತಿರಂಜಿತ ಪ್ರದರ್ಶನದ್ದೊಂದು ಉದಾಹರಣೆ. ಆ ವಿಡಿಯೊ ನಿಮ್ಮ ದೇಖಾವೆಗೆ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ, ಅದರ ಸ್ಕ್ರಿಪ್ಟ್ ಹೀಗಿದೆ: ಆಫ್ರಿಕಾ ಖಂಡದ ಉಗಾಂಡಾ ದೇಶಕ್ಕೆ ಪ್ರವಾಸಿಗರಾಗಿ ಹೋದ ಕನ್ನಡಿಗರಿಬ್ಬರು ಅಲ್ಲಿಯ ಅದ್ಭುತವೊಂದನ್ನು ಪರಿಚಯಿ ಸುತ್ತಾರೆ. ಆ ಕನ್ನಡಿಗರು ಗಂಡ-ಹೆಂಡತಿಯೋ, ಒಡಹುಟ್ಟಿದವರೋ, ಅಥವಾ ಸ್ನೇಹಿತರೋ ನನಗೆ ಗೊತ್ತಿಲ್ಲ ವಾದ್ದರಿಂದ ನಾನಿಲ್ಲಿ ಅವರನ್ನು ಗಂಡಸು ಮತ್ತು ಹೆಂಗಸು ಎಂದಷ್ಟೇ ನಮೂದಿಸುತ್ತೇನೆ.
ಗಂಡಸು: ‘ನಾನು ನಿಮಗೆ ಭೂಮಿಯ ಒಂದು ಅಮೇಝಿಂಗ್ ಜಾಗಕ್ಕೆ ಕರ್ಕೊಂಡ್‌ಬಂದಿದ್ದೀನಿ. ಭೂಮಿ ಮಧ್ಯೇ ಇಕ್ವೇಟರ್ ಲೈನ್ ಹೋಗುತ್ತೆ ಗೊತ್ತಾ? ಅದು ಭೂಮೀನ ಸದರ್ನ್ ಹೆಮಿಸ್ ಫಿಯರ್ ಮತ್ತು ನಾರ್ದರ್ನ್ ಹೆಮಿಸ್‌ಫಿಯರ್ ಆಗಿ ಡಿವೈಡ್ ಮಾಡುತ್ತೆ. ಮಧ್ಯದಲ್ಲಿ ಹೋಗುವ ಆ ಲೈನ್ ಇದೇ! ಬರೀ ಹದಿಮೂರು ಕಂಟ್ರಿಗಳಲ್ಲಿ ಮಾತ್ರ ಪಾಸ್ ಆಗೋದು ಈ ಲೈನು. ಅದರಲ್ಲಿ ಉಗಾಂಡಾ ಕೂಡ ಒಂದು. ಅಲ್ಲೀಗ ನಾವಿದೀವಿ’ ಎನ್ನುತ್ತ ಅಲ್ಲಿ ಉದ್ದಕ್ಕೆ ಮಾರ್ಕ್ ಮಾಡಿರುವ ಗೆರೆಯೊಂದನ್ನು ತೋರಿಸುತ್ತಾರೆ. ಅದು ಭೂಮಧ್ಯ ರೇಖೆ. ಒಂದು ದೊಡ್ಡ ರಿಂಗ್ ಮೂಲಕ ರೇಖೆ ಹಾದುಹೋಗಿರುತ್ತದೆ. ಆಕಡೆ ಈಕಡೆ ಇಂಗ್ಲಿಷ್ ಅಕ್ಷರಗಳಲ್ಲಿ ಎಸ್ ಮತ್ತು ಎನ್ ಎಂದು ಬರೆದದ್ದಿದೆ, ಅನುಕ್ರಮವಾಗಿ ಸೌತ್ ಮತ್ತು ನಾರ್ತ್ ಎಂದು ಸೂಚಿಸುವುದಕ್ಕೆ.
ಹೆಂಗಸು: ‘ಇದೇ ಈಕ್ವೇಟರ್ ಲೈನು. ಇಲ್ಲಿ ಪಾಸಾಗ್ತಿದೆ ನೋಡಿ… (ಬಲಗಾಲನ್ನು ಎಸ್ ಅಕ್ಷರದ ಬ್ಲಾಕ್ ಮೇಲೆ ಮತ್ತು ಎಡಗಾಲನ್ನು ಎನ್ ಅಕ್ಷರದ ಬ್ಲಾಕ್ ಮೇಲೆ ಇಟ್ಟು) ಇದ್ ಬಂದು ಸದ್ರನ್ ಹೆಮಿಸ್‌ಫಿಯರ್. ಈಕಡೆ ಬಂದು ನಾರ್ದರ್ನ್ ಹೆಮಿಸ್ ಫಿಯರ್. ಸದ್ರನ್ ಹೆಮಿಸ್‌ಫಿಯರ್‌ನಲ್ಲಿ ವಾಟರ್ ಬಂದು
ಆಂಟಿಕ್ಲಾಕ್‌ವೈಸ್ ತಿರ್ಗುತ್ತೆ, ನಾರ್ದರ್ನ್ ಹೆಮಿಸ್‌ಫಿಯರ್‌ನಲ್ಲಿ ವಾಟರ್ ಬಂದು ಕ್ಲಾಕ್‌ವೈಸ್ ತಿರ್ಗುತ್ತೆ. ಮಧ್ಯದಲ್ಲಿ ಈ ಲೈನ್ ಹೋಗ್ತಿದೆಯಲ್ಲ ಇಲ್ಲಿ ವಾಟರ್ ಬಂದು ಸ್ಟ್ರಾಂಡೆಡ್ ಆಗಿ ನಿಲ್ಲುತ್ತೆ.
ಯಾವ್‌ಕಡೆನೂ ತಿರ್ಗಲ್ಲ (ಹಾಗೆ ಹೇಳುವಾಗ ಆಕೆಯ ಹಾವಭಾವ ಹಸ್ತಮುದ್ರೆಗಳು ಯಾವ ಟಿವಿ ನಿರೂಪಿಕೆಯರಿಗೂ ಕಮ್ಮಿಯಿರುವುದಿಲ್ಲ). ಇದ್ ಬಂದು ಈಕ್ವೇಟರ್ ಲೈನ್. ಉಗಾಂಡದ ಈಕ್ವೇಟರ್ ಲೈನ್ ಪಾಸ್ ಆಗೋ ಜಾಗ. ಝೀರೊ ಲ್ಯಾಟಿಟ್ಯೂಡ್ ಇದೆ ಇಲ್ಲಿ!’
ಸೂತ್ರಧಾರರಿಬ್ಬರ ಈ ಮಾತುಗಳಾದ ಮೇಲೆ ನಾಟಕದ ಮುಖ್ಯ ಪಾತ್ರಧಾರಿ ಕಾಣಿಸಿಕೊಳ್ಳುತ್ತಾನೆ. ಆತ ಉಗಾಂಡದ ಒಬ್ಬ ಪ್ರಜೆ. ಆ ಪ್ರವಾಸಿ ತಾಣದ ಗೈಡ್ ಇರಬಹುದು. ಆತ ಹರಕುಮುರುಕು ಇಂಗ್ಲಿಷ್‌ನಲ್ಲಿ ‘ಸೌತ್ ಆಫ್ ದಿ ಈಕ್ವೇಟರ್ ದ ವಾಟರ್ ಸ್ಪಿನ್ಸ್ ಇನ್ ಎ ಆಂಟಿಕ್ಲಾಕ್‌ವೈಸ್. ನಾರ್ತ್ ಆಫ್ ದಿ
ಈಕ್ವೇಟರ್ ಸ್ಪಿನ್ಸ್ ಇನ್ ಎಲ್ಲಾ ಕ್ಲಾಕ್‌ವೈಸ್ ಮೂವ್‌ಮೆಂಟ್. ದೆನ್ ಎಟ್ ದಿ ಈಕ್ವೇಟರ್ ಇಟ್ ಡಸ್ ನಾಟ್ ಸ್ಪಿನ್’ ಎನ್ನುತ್ತ ತನ್ನ ಪ್ರಯೋಗಕ್ಕೆ ಸಿದ್ಧನಾ ಗುತ್ತಾನೆ. ಅವನ ಈ ಮಾತುಗಳನ್ನು ನಮ್ಮ ಕನ್ನಡಿಗ ಗಂಡಸು ಕನ್ನಡಕ್ಕೆ ಅನುವಾದ ಮಾಡಿ ವಿವರಿಸುತ್ತಾರೆ.
ಮೂವರೂ ನಿಂತುಕೊಂಡ ಜಾಗ ಭೂಮಧ್ಯರೇಖೆಯ ದಕ್ಷಿಣಾರ್ಧದಲ್ಲಿದೆ. ಉಗಾಂಡಾ ಪ್ರಜೆಯ ಪ್ರಯೋಗದ ಸಲಕರಣೆಗಳು ಸರಳವಾಗಿವೆ. ಬಾಯ್ತೆರೆದ ಶಂಕುವಿನಾಕಾರದ, ಕೆಳಗಡೆ ಚಿಕ್ಕ ತೂತಿರುವ ಒಂದು ಬೋಗುಣಿಯಂಥದ್ದನ್ನು ಸ್ಟಾಂಡ್‌ಗೆ ಅಳವಡಿಸಲಾಗಿದೆ. ಬೋಗುಣಿಯ ಒಳಮೈ ಹಳದಿ ಬಣ್ಣದ್ದಿದ್ದು ಕಪ್ಪು ಪೈಂಟ್‌ನಿಂದ ಸುರುಳಿಯಾಕಾರ ಬಿಡಿಸಿದ್ದಿದೆ. ಇಂಗ್ಲಿಷ್‌ನಲ್ಲಿ ಸದರ್ನ್ ಹೆಮಿಸ್‌ಫಿಯರ್ ಎಂದು ಬರೆದಿದೆ. ಉಗಾಂಡಾ ಪ್ರಜೆ ಒಂದು ಚಿಕ್ಕ ಬಾಲ್ದಿಯಲ್ಲಿ ನೀರು ತುಂಬಿಸಿ ಬೋಗುಣಿಗೆ ಸುರಿಯುತ್ತಾನೆ. ಆಮೇಲೆ ಬೋಗುಣಿಯ ಕೆಳತೂತನ್ನು ಎಡಗೈಯಿಂದ ತಾತ್ಕಾಲಿಕವಾಗಿ ಮುಚ್ಚಿ, ಬೋಗುಣಿಯಲ್ಲಿ ತುಂಬಿದ ನೀರು ಯಾವುದೇ ಅಲೆಗಳಿಲ್ಲದೆ ಪ್ರಶಾಂತ ಸ್ಥಿತಿಗೆ ಬರುವುದಕ್ಕಾಗಿ, ಕತ್ತಿಯಲಗಿನಂತೆ ಕಾಣುವ ಮರದ ಹಲಗೆ ತುಂಡಿನಂಥ ದೊಂದನ್ನು ನೀರಿನಲ್ಲಿ ಸ್ವಲ್ಪ ಹೊತ್ತು ಹಿಡಿದು ತೆಗೆಯುತ್ತಾನೆ.
ಹಾಗೆಯೇ ಬೋಗುಣಿಯ ಕೆಳತೂತನ್ನೂ ತೆರೆಯುತ್ತಾನೆ. ಕೆಳಗಿಟ್ಟ ಬಾಲ್ದಿಗೆ ಬೋಗುಣಿಯಿಂದ ನೀರು ಹರಿಯುತ್ತದೆ. ಅದು ಅಪ್ರದಕ್ಷಿಣವಾಗಿ ಸುಳಿ ಯಂತೆ ಕೆಳಗಿಳಿಯುತ್ತಿದೆ ಎಂದು ತೋರಿಸುವುದಕ್ಕಾಗಿ ಐದು ದಳಗಳ ಬಿಳಿ ಹೂವೊಂದನ್ನು ನೀರಿನ ಮೇಲೆ ಬೋರಲಾಗಿಡುತ್ತಾನೆ. ಹೂವು ಅಪ್ರದಕ್ಷಿಣ ವಾಗಿ ತಿರುಗುತ್ತದೆ. ನೀರು ತೂತಿನಿಂದ ಕೆಳಗಿಳಿದು ಬೋಗುಣಿ ಖಾಲಿಯಾಗುತ್ತದೆ. ಎವೆಯಿಕ್ಕದೆ ನೋಡುತ್ತಿದ್ದ ಪ್ರವಾಸಿಗರಿಂದ ವಾವ್ ಉದ್ಗಾರ, ಚಪ್ಪಾಳೆ.
ಮುಂದಿನ ದೃಶ್ಯ, ಅಲ್ಲಿಂದ ಹತ್ತಾರು ಹೆಜ್ಜೆ ನಡೆದುಕೊಂಡು ಬಂದು ಭೂಮಧ್ಯರೇಖೆಯ ಉತ್ತರ ಭಾಗದಲ್ಲಿರುವ ಜಾಗದಲ್ಲಿ. ಅದೇ ಥರದ ರಂಗಸಜ್ಜಿಕೆ. ಸ್ಟಾಂಡ್, ಬಾಲ್ದಿ, ಬೋಗುಣಿ, ಹಳದಿ ಬಣ್ಣದಲ್ಲಿ ಕಪ್ಪು ಪೇಂಟ್‌ನಿಂದ ಸುರುಳಿಯಾಕಾರ ಎಲ್ಲ ಡಿಟ್ಟೊ. ಆದರೆ ಇದರಲ್ಲಿ ಇಂಗ್ಲಿಷ್ ಅಕ್ಷರಗಳಲ್ಲಿ ನಾರ್ದರ್ನ್ ಹೆಮಿಸ್ ಫಿಯರ್ ಎಂದು ಬರೆದಿದೆ. ಉಗಾಂಡಾ ಪ್ರಜೆ ಬಾಲ್ದಿಯಿಂದ ನೀರನ್ನು ಬೋಗುಣಿಯಲ್ಲಿ ತುಂಬುತ್ತಾನೆ. ಹಲಗೆಯಂಥ
ದಪ್ಪನೆಯ ಬ್ಲೇಡ್‌ನಿಂದ ನೀರನ್ನು ಶಾಂತಸ್ಥಿತಿಗೆ ತರುತ್ತಾನೆ. ಎಡಗೈಯಿಂದ ಮುಚ್ಚಿದ್ದ ತೂತನ್ನು ತೆರೆಯುತ್ತಾನೆ. ಪಂಚದಳ ಶ್ವೇತಪುಷ್ಪವನ್ನು ನೀರಿನಲ್ಲಿಡುತ್ತಾನೆ. ಅದು ಪ್ರದಕ್ಷಿಣಾಕಾರ ತಿರುಗುತ್ತದೆ. ನೀರು ಕೆಳಗಿಳಿದು ಬೋಗುಣಿ ಖಾಲಿಯಾಗುತ್ತದೆ.
ಪ್ರವಾಸಿಗರಿಂದ ಚಪ್ಪಾಳೆ. ‘ಹಿಂಗ್ ತಿರುಗ್ತಾ ಇದೆ ಹೂವಾ!’ ಎಂದು ಕನ್ನಡಿಗ ಗಂಡಸಿನಿಂದ ಮೆಚ್ಚುಗೆ. ‘ಏನ್ ವಿಚಿತ್ರ ಜಾಗ ಅಲ್ವಾ ಆಶಾ!?’ ಎಂದು ಆತ ಹೇಳುವುದು ಕೇಳಿಸುತ್ತದೆ. ಹೆಂಗಸಿನ ಹೆಸರು ಆಶಾ ಇರಬಹುದೆಂದುಕೊಳ್ಳುತ್ತೇವೆ (ಆ ಮಾಹಿತಿಯಿಂದ ನಮಗೆ ಆಗುವಂಥದ್ದೇನಿಲ್ಲವಾದರೂ).
ಮೂರನೆಯ ಮತ್ತು ಕೊನೆಯ ದೃಶ್ಯ, ಅಲ್ಲೇ ಪಕ್ಕ ಹತ್ತಾರು ಹೆಜ್ಜೆ ನಡೆದುಕೊಂಡು ಬಂದು ಭೂಮಧ್ಯರೇಖೆಯ ಮೇಲೆಯೇ ಇರುವ ಸ್ಥಳದಲ್ಲಿ. ರಂಗಸಜ್ಜಿಕೆ ಬಹುಮಟ್ಟಿಗೆ ಅದೇಥರ.
ಬೋಗುಣಿ ಮಾತ್ರ ಶಂಕುವಿನಾಕಾರಕ್ಕಿಂತ ಜಿಲೇಬಿ ಕರಿಯಲಿಕ್ಕೆ ಬಳಸುವ ಚಪ್ಪಟೆ ಬಾಣಲೆಯಂತೆ ಅಥವಾ ಪರಾತದಂತೆ ತೋರುತ್ತಿದೆ. ಹಳದಿ ಬಣ್ಣವಿದೆ, ಕಪ್ಪು ಪೈಂಟ್‌ನಿಂದ ಸುರುಳಿವಿನ್ಯಾಸ ಬಿಡಿಸಿಲ್ಲ, ಮರ್ಸಿಡಿಸ್ ಬೆಂಜ್ ಲೋಗೊದಂತೆ ಮೂರು ಗೆರೆ ಎಳೆದಿದೆ, ಬೋಗುಣಿಯ ಒಳಮೈಯಲ್ಲಿ.
ಉಗಾಂಡಾ ಪ್ರಜೆ ಬಾಲ್ದಿಯಿಂದ ನೀರು ತುಂಬಿಸುತ್ತಾನೆ. ಕೆಳತೂತನ್ನು ತೆರೆಯುತ್ತಾನೆ. ಪಂಚದಳ ಪುಷ್ಪ ತೇಲಿಸುತ್ತಾನೆ. ಅದು ಈಬಾರಿ ತಿರುಗುವುದಿಲ್ಲ!
ತಟಸ್ಥವಾಗಿಯೇ ಇದ್ದು ಬೋಗುಣಿಯಲ್ಲಿ ನೀರು ಮುಗಿಯುತ್ತಿದ್ದಂತೆ ಆ ತೂತಿನಿಂದ ಹೋಗಿ ಮಾಯವಾಗುತ್ತದೆ- ರಾಮಾಯಣದಲ್ಲಿ ಸೀತೆಯನ್ನು
ಭೂಮಿ ತನ್ನೊಳಗೆ ಸೆಳೆದುಕೊಂಡದ್ದು ಹೀಗೇ ಇರಬಹುದೆಂದು ಅನಿಸುವಂತೆ. ‘ಈ ಥರದ ಜಾಗಕ್ಕೆ ಬರ್ತೀವಿ ಅಂತ ಅಂದ್ಕೊಂಡಿರ್ಲಿಲ್ಲ ಗುರೂ…’ ಎಂದು ಹೆಂಗಸು ಹೇಳುವುದು ಕೇಳಿಸುತ್ತದೆ. ಗಂಡಸಿನ ಹೆಸರು ಗುರು ಇರಬಹುದೆಂಬ ಅಂದಾಜಾಗುತ್ತದೆ. ಗುರೂ, ಸಿವಾ… ಅಂತ ಕರೆದಂತೆ ಎಂದಾದರೆ ಅದು ಹೆಸರು ಇರಲಿಕ್ಕಿಲ್ಲವೆನ್ನಿ, ಮತ್ತು ಒಟ್ಟಾರೆಯಾಗಿ ಆ ಮಾಹಿತಿಯಿಂದಲೂ ನಮಗೇನೂ ಆಗಬೇಕಾದ್ದಿಲ್ಲವೆನ್ನಿ.
ಕೊನೆಯಲ್ಲಿ ‘ಇದು ಭೂಮಿಯ ವಿಚಿತ್ರ ಜಾಗ!’ ಎಂದು ಹೆಂಗಸು ಹೇಳುವುದರೊಂದಿಗೆ ಮತ್ತು ಗಂಡಸು ಆ ಉಗಾಂಡಾ ಪ್ರಜೆಗೆ ಫಿಸ್ಟ್ ಹೈ-ಫೈ (ಮುಷ್ಟಿತಾಡನ) ಕೊಡುವುದರೊಂದಿಗೆ ಭವ್ಯ ಪ್ರದರ್ಶನಕ್ಕೆ ತೆರೆ ಬೀಳುತ್ತದೆ. ಕ್ಷಮಿಸಿ. ಮೇಲಿನ ವ್ಯಾಖ್ಯಾನದಲ್ಲಿ ಲಾಲಿತ್ಯವಿರಲಿ ಎಂಬ ದೃಷ್ಟಿಯಿಂದ ಕನ್ನಡಿಗ ಗಂಡಸು-ಹೆಂಗಸಿನ ಬಗ್ಗೆ ತುಸು ಲಘು ಧಾಟಿಯಲ್ಲಿ ಬರೆದೆನೇ ವಿನಾ ನನಗವರ ಬಗ್ಗೆ ಅಗೌರವವೇನಿಲ್ಲ.
ಅವರಾರೆಂದು ನನಗೆ ಗೊತ್ತೂ ಇಲ್ಲ. ಅವರ ಕನ್ನಡ ಮಾತುಗಳಲ್ಲಿ ಇಂಗ್ಲಿಷ್ ಪದಗಳ ನಡುವೆ ಅಪರೂಪಕ್ಕೆ ಒಂದೊಂದು ಕನ್ನಡ ಪದವೂ ಇರುವುದು ಮತ್ತು ‘ಅದ್ ಬಂದು ಇದ್ ಬಂದು ವಾಟರ್ ಬಂದು…’ ಶೈಲಿ ಗಮನಿಸಿದರೆ ಬೆಂಗಳೂರಿನವರೆಂದು ಕಾಣುತ್ತದೆ. ಪಾಪ, ಕೌತುಕಮಯವಾಗಿ ಕಂಡ ಸ್ವಾರಸ್ಯಕರ ಸಂಗತಿಯೊಂದನ್ನು ಎಲ್ಲರಿಗೂ ತಿಳಿಸೋಣವೆಂದು ವಿಡಿಯೊ ಮಾಡಿ ತೇಲಿಬಿಟ್ಟಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಈ ನಡೆ ಪ್ರಶಂಸನೀಯವೇ. ಆದರೆ ಕರುಣಾಜನಕ ವಿಚಾರವೆಂದರೆ ಉಗಾಂಡಾ ಪ್ರಜೆಯು ನೀರಿನ ಬೋಗುಣಿಯಲ್ಲಿ ಏನು ಪಂಚದಳ ಪುಷ್ಪ ತೇಲಿಬಿಟ್ಟಿದ್ದನೋ ಅದು ಅಲ್ಲಿಗೆ ಹೋಗುವ ಸಾವಿರಾರು ಪ್ರವಾಸಿಗರಂತೆ ಈ ಕನ್ನಡಿಗ ಗಂಡಸು-ಹೆಂಗಸಿನ ಕಿವಿಮೇಲೆಯೂ ಹೂವಾ ಇಟ್ಟಂತಾ ಗಿದೆ! ಅವರು ವಿಡಿಯೊ ಮಾಡಿ ಅದು ವೈರಲ್ ಆಗಿ ಲಕ್ಷಗಟ್ಟಲೆ ಕನ್ನಡಿಗರು ನೋಡಿ ನಂಬಿದ್ದಾರಾದರೆ ಅವರೆಲ್ಲರ ಕಿವಿಮೇಲೆ ಲಾಲ್‌ಬಾಗನ್ನೇ
ಇಟ್ಟಂತಾಗಿದೆ!
ಹಾಗಿದ್ದರೆ, ಭೂಗೋಳದ ದಕ್ಷಿಣಾರ್ಧದಲ್ಲಿ ಮತ್ತು ಉತ್ತರಾರ್ಧದಲ್ಲಿ ನೀರಿನ ಸುಳಿ ತಿರುಗುವಿಕೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವುದು ಸುಳ್ಳೇ? ಇಷ್ಟು ಸ್ಪಷ್ಟವಾಗಿ ವಿಡಿಯೊದಲ್ಲೇ ತೋರಿಸಿದ್ದಾರೆಂದ ಮೇಲೆ ಸುಳ್ಳೆಂದು ಹೇಗೆ ಹೇಳುವುದು? ಇಲ್ಲ. ಭೂಗೋಳದ ದಕ್ಷಿಣಾರ್ಧದಲ್ಲಿ ಮತ್ತು ಉತ್ತರಾರ್ಧದಲ್ಲಿ ನೀರಿನ ಸುಳಿಯ ತಿರುಗುವಿಕೆ ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿರಬಹುದು ಎಂಬುದು ಸತ್ಯ. ವಿeನಾಧಾರಿತ ಅಪ್ಪಟ ಸತ್ಯ. ಆದರೆ ಉಗಾಂಡಾ ಪ್ರಜೆಯ ಈ ಜಾದೂ ಮಾತ್ರ ಪಕ್ಕಾ ಬೋಗಸ್. ಏಕೆಂದರೆ ಸುಳಿಯ ತಿರುಗುವಿಕೆ ಭೂಗೋಳದ ದಕ್ಷಿಣಾರ್ಧದಲ್ಲಿ ಪ್ರದಕ್ಷಿಣಾಕಾರವಾಗಿಯೂ, ಉತ್ತರಾರ್ಧದಲ್ಲಿ ಅಪ್ರದಕ್ಷಿಣಾಕಾರವಾಗಿಯೂ ಇರುತ್ತದೆ.
ಉಗಾಂಡಾ ಪ್ರಜೆ ತೋರಿಸಿದ್ದಕ್ಕೆ ತದ್ವಿರುದ್ಧ. ಅಲ್ಲದೇ ಆಗತಾನೇ ತುಂಬಿಸಿದ ನೀರಿನ ಬೋಗುಣಿಯಲ್ಲಿ ಅದು ಅಷ್ಟು ಸ್ಪಷ್ಟವಾಗೆಲ್ಲ ಗೋಚರಿಸುವುದಿಲ್ಲ. ಮಾತ್ರವಲ್ಲ, ಭೂಮಧ್ಯರೇಖೆಯ ಹತ್ತು ಹೆಜ್ಜೆ ಆಕಡೆ ಈಕಡೆ ಎನ್ನುವಷ್ಟೇ ಭೌಗೋಳಿಕ ವ್ಯತ್ಯಾಸವಿರುವ ಎರಡು ಜಾಗಗಳಲ್ಲಿ ಎರಡು ಭಿನ್ನ ರೀತಿಯಲ್ಲಿ ಕಾಣಿಸುವುದಂತೂ ಸಾಧ್ಯವೇ ಇಲ್ಲ! ಮತ್ತೆ ಉಗಾಂಡಾ ಪ್ರಜೆಯ ಪ್ರಯೋಗದಲ್ಲಿ ಏನೋ ಕಣ್ಕಟ್ಟು ಇದೆಯೆಂದು ನಮಗೆ ಅನಿಸುವುದಿಲ್ಲವಲ್ಲ? ಬೋಗುಣಿಗಳ ಮೇಲೆ ಇಂಗ್ಲಿಷಲ್ಲಿ ಬರೆದದ್ದು, ಕಪ್ಪು ಪೈಂಟ್‌ನಿಂದ ಸುರುಳಿ ವಿನ್ಯಾಸ ಬಿಡಿಸಿದ್ದು ಇದೆಲ್ಲ ನೋಡುಗರನ್ನು ನಂಬುವಂತೆ ಮಾಡಲಿಕ್ಕೆ.
ಮೂರು ದೃಶ್ಯಗಳಿಗೆ ಮೂರು ಪ್ರತ್ಯೇಕ ಬೋಗುಣಿಗಳ ಬಳಕೆ ನಾವು ಗಮನಿಸಬೇಕು. ‘ಇದೇ ಪಾತ್ರೆಯನ್ನು ಅಲ್ಲಿಗೆ ಕೊಂಡುಹೋಗಿ ನೀರುತುಂಬಿಸಿ ಬಿಟ್ಟರೆ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ’ ಎಂದು ಆತ ಹೇಳುತ್ತಾನಾದರೂ ಮಾಡಿತೋರಿಸುವುದಿಲ್ಲ. ಬೋಗುಣಿಯಲ್ಲಿ ನೀರು ತುಂಬಿ ಆದಮೇಲೆ ‘ಈಗ
ನೀರನ್ನು ತಟಸ್ಥ ಸ್ಥಿತಿಗೆ ತರುತ್ತೇನೆ’ ಎಂದು ಒಂದು ಮರದ ಬ್ಲೇಡನ್ನು ನೀರಿನಲ್ಲದ್ದಿ ತೆಗೆಯುತ್ತಾನೆ ನೋಡಿ, ಅಲ್ಲಿ ಟ್ರಿಕ್ ಮಾಡುತ್ತಾನೆ. ಮರದ ಬ್ಲೇಡನ್ನು ತೆಗೆಯುವಾಗ ಬೋಗುಣಿಯಲ್ಲಿರುವ ನೀರಿಗೆ ನಿರ್ದಿಷ್ಟ ದಿಕ್ಕಿನಲ್ಲಿ ಪುಷ್ ಕೊಟ್ಟು ತೆಗೆಯುತ್ತಾನೆ!
ದಕ್ಷಿಣಾರ್ಧದಲ್ಲಿಟ್ಟ ಬೋಗುಣಿಯಲ್ಲಿ ಆ ಪುಷ್ ಎಡಗಡೆಗೂ, ಉತ್ತರಾರ್ಧದಲ್ಲಿಟ್ಟ ಬೋಗುಣಿಯಲ್ಲಿ ಆ ಪುಷ್ ಬಲಗಡೆಗೂ ಇರುವಂತೆ ನೋಡಿ ಕೊಳ್ಳುತ್ತಾನೆ. ಕೊನೆಯದಾಗಿ ಪಂಚದಳ ಪುಷ್ಪವನ್ನು ನೀರಿನಲ್ಲಿ ತೇಲಿಬಿಡುವಾಗಲೂ ಅಷ್ಟೇ. ಬುಗುರಿಯಂತೆ ಟ್ವಿಸ್ಟ್ ಕೊಟ್ಟೇ ಬಿಡುತ್ತಾನೆ, ದಕ್ಷಿಣಾ ರ್ಧದಲ್ಲಿ ಅಪ್ರದಕ್ಷಿಣವಾಗಿ ಮತ್ತು ಉತ್ತರಾರ್ಧದಲ್ಲಿ ಪ್ರದಕ್ಷಿಣಾಕಾರದಲ್ಲಿ. ಭೂಮಧ್ಯರೇಖೆಯ ಮೇಲಿಟ್ಟ ಬೋಗುಣಿಯ ನೀರಲ್ಲಿ ಹೂವನ್ನಿಡುವಾಗ ಟ್ವಿಸ್ಟ್ ಇಲ್ಲದಂತೆ ನೋಡಿಕೊಳ್ಳುತ್ತಾನೆ. ಆ ಬೋಗುಣಿಯ ಕೆಳತೂತು ಉಳಿದೆರಡು ಬೋಗುಣಿಗಳದಕ್ಕೆ ಹೋಲಿಸಿದರೆ ದೊಡ್ಡದು. ನೀರು ಸುರುಳಿ ಸುತ್ತದೆ ಕೆಳಗಿಳಿಯಲಿಕ್ಕೆ, ಹೂವನ್ನೂ ಹಾಗೆಯೇ ಸೆಳೆದುಕೊಳ್ಳಲಿಕ್ಕೆ ಅನುಕೂಲಕರ. ಈ ಸೂಕ್ಷ್ಮಗಳನ್ನು ಗಮನಿಸದಿದ್ದರೆ ‘ವಾವ್ ಅಮೇಝಿಂಗ್ ಪ್ಲೇಸ್!
ಎಂಥ ವಿಚಿತ್ರ ಜಾಗಕ್ಕೆ ಬಂದಿದ್ದೀವಿ!’ ಎಂದು ನಾವೆಲ್ಲ ‘ಮಂಗ್ಯಾ’ ಆಗುತ್ತೇವೆ. ಗೈಡ್‌ಗಳು ಅದರ ಫಾಯಿದಾ ಪಡೆಯುತ್ತಾರೆ, ಪೀಕಬಲ್ಲವರು ನಾಲ್ಕು ಕಾಸು ಗಳಿಸುತ್ತಾರೆ, ಅಷ್ಟೇ. ವಿಜ್ಞಾನ ಏನೆನ್ನುತ್ತದೆ? ಭೂಮಿಯು ಸೂರ್ಯನ ಸುತ್ತ ಮಾತ್ರವಲ್ಲದೆ ತನ್ನದೇ ಅಕ್ಷದಲ್ಲೂ ತಿರುಗುತ್ತದೆ ಎಂದು ನಮಗೆ
ಗೊತ್ತಿದೆ. ತನ್ನದೇ ಅಕ್ಷದಲ್ಲಿ ಭೂಮಿಯ ತಿರುಗುವಿಕೆಯಿಂದ ಭೂಗೋಳದ ಸುತ್ತ ಗಾಳಿ, ನೀರು ಅಥವಾ ಯಾವುದೇ ವಸ್ತುವಿನ ಚಲನೆಯು ‘ಕೊರಿಯೊ ಲಿಸ್ ಫೋರ್ಸ್’ಗೆ ಒಳಗಾಗುತ್ತದೆ. ೧೮ನೆಯ ಶತಮಾನದಲ್ಲಿ ಬಾಳಿದ್ದ ಫ್ರೆಂಚ್ ವಿeನಿ ಗಸ್ಪಾರ್ಡ್ ಗಸ್ತಾವ್ ದೆ ಕೊರಿಯೊಲಿಸ್‌ನ ಹೆಸರನ್ನೇ ಇಡಲಾಗಿದೆ ಈ ಸೆಳೆತಕ್ಕೆ.
ಭೂಗೋಳದ ಉತ್ತರಾರ್ಧದಲ್ಲಿ ಈ ಸೆಳೆತವು ಆಗಲೇ ಚಲನೆಯುಳ್ಳ ವಸ್ತುಗಳನ್ನು ಮತ್ತಷ್ಟು ಬಲಭಾಗಕ್ಕೂ, ದಕ್ಷಿಣಾರ್ಧ ದಲ್ಲಿ ಮತ್ತಷ್ಟು ಎಡಭಾಗಕ್ಕೂ ಚಲಿಸುವಂತೆ ಮಾಡುತ್ತದೆ. ಹಾಗಾಗಿಯೇ ಭೂಗೋಳದ ಉತ್ತರಾರ್ಧದಲ್ಲಿ ಗಾಳಿಯ ಬೀಸುವಿಕೆ ಅಪ್ರದಕ್ಷಿಣಾಕಾರ ಮತ್ತು ದಕ್ಷಿಣಾರ್ಧದಲ್ಲಿ ಪ್ರದಕ್ಷಿಣಾಕಾರ ಇರುತ್ತದೆ. ಆದ್ದರಿಂದಲೇ ಭೂಗೋಳದ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವ ‘ಹರಿಕೇನ್’ಗಳ ಚಲನೆ ಅಪ್ರದಕ್ಷಿಣಾಕಾರ; ದಕ್ಷಿಣಾರ್ಧ ದಲ್ಲಿ ಕಾಣಿಸಿಕೊಳ್ಳುವ ‘ಸೈಕ್ಲೋನ್’ಗಳ ಚಲನೆ ಪ್ರದಕ್ಷಿಣಾಕಾರ. ಚಂಡಮಾರುತ ಅಂತಲ್ಲ, ಸಾಮಾನ್ಯ ಗಾಳಿ ಬೀಸುವಿಕೆ ಸಹ ಉತ್ತರಾರ್ಧದಲ್ಲಿ ಪಶ್ಚಿಮದಿಂದ ಪೂರ್ವಕ್ಕೂ, ದಕ್ಷಿಣಾರ್ಧದಲ್ಲಿ ಪೂರ್ವದಿಂದ ಪಶ್ಚಿಮಕ್ಕೂ ಇರುತ್ತದೆ.
ಎರಡು ನಗರಗಳ ನಡುವೆ ವಿಮಾನಯಾನಕ್ಕೆ ಬೇಕಾಗುವ ಸಮಯದಿಂದ ನಮಗಿದು ಗೊತ್ತಾಗುತ್ತದೆ. ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ಸ್ಯಾನ್‌ಫ್ರಾನ್ಸಿಸ್ಕೊದಿಂದ ಪೂರ್ವಕರಾವಳಿಯಲ್ಲಿರುವ ನ್ಯೂಯಾರ್ಕ್‌ಗೆ ಪಯಣಿಸಲು ವಿಮಾನಕ್ಕೆ ಆರು ತಾಸು ಸಾಕು. ಗಾಳಿಯ ಚಲನೆಯೂ ಪಶ್ಚಿಮದಿಂದ ಪೂರ್ವಕ್ಕೇ ಇರುವುದರಿಂದ ವಿಮಾನಕ್ಕೆ ಅನುಕೂಲ. ನ್ಯೂಯಾರ್ಕ್‌ನಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ಹೋಗಲಿಕ್ಕೆ ಏಳು ತಾಸು ಬೇಕು, ಗಾಳಿಯ ಚಲನೆಗೆ ವಿರುದ್ಧ ದಿಕ್ಕಿನಲ್ಲಿ ಹಾರಬೇಕಿರುವುದರಿಂದ.
ವೈeನಿಕ ಸತ್ಯವಿರುವ ಈ ಥಿಯರಿಯನ್ನೇ ಕೆಲವರು ಅತಿರಂಜನೆಗೆ ಬಳಸುತ್ತಾರೆ. ಟಾಯ್ಲೆಟ್ ಕಮೋಡ್‌ನಲ್ಲಿ ಫ್ಲಷ್ ಮಾಡಿದಾಗ, ಬಾತ್‌ಟಬ್‌ನಿಂದ ನೀರು ಹೊರಬಿಡುವಾಗ, ಭೂಗೋಳದ ಉತ್ತರಾರ್ಧ ದಕ್ಷಿಣಾರ್ಧಗಳಲ್ಲಿ ನೀರಿನ ಚಲನೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತದೆ ಅಂತೆಲ್ಲ ಮಾತನಾಡುತ್ತಾರೆ.
ಉಗಾಂಡದಲ್ಲಿ ಪ್ರವಾಸಿಗರ ಕಿವಿಮೇಲೆ ಹೂವಿಡುವುದಂತೂ ಈ ಥಿಯರಿಯ ಅಪ್ರಾಯೋಗಿಕ ರೀತಿಯ ಪರಮಾವಧಿ. ಕೊರಿಯೊಲಿಸ್ ಫೋರ್ಸ್ ಚಂಡಮಾರುತ ಅಥವಾ ವಿಮಾನಚಲನೆ ಮುಂತಾಗಿ ದೊಡ್ಡ ಬಾಬತ್ತುಗಳಿಗೆ ಲಗಾವಾಗುತ್ತದೆಯೇ ಹೊರತು ಕಿಚನ್‌ಸಿಂಕ್, ಟಾಯ್ಲೆಟ್‌ಕಮೋಡ್, ಬಾತ್‌ಟಬ್‌ನಲ್ಲಿ ನೀರಿನ ಸುಳಿಗೆಲ್ಲಅದು ಏನೇನೂ ಸಾಕಾಗುವುದಿಲ್ಲ.
ಅವುಗಳಲ್ಲಿ ನೀರಿನ ಚಲನೆ ಆಯಾ ವಸ್ತುಗಳ ಆಕಾರ, ರಚನೆ, ಮತ್ತು ನೀರು ತುಂಬಿಕೊಂಡು ಇದ್ದಾಗ ಅದಾಗಲೇ ಇರುವ ಆರಂಭಿಕ ಚಲನೆ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಅವಲಂಬಿಸಿರುತ್ತದೆ. ಹಾಗೆ ನೋಡಿದರೆ ಭೂಮಧ್ಯರೇಖೆಯ ಆಸುಪಾಸಿನಲ್ಲಿ ಕೊರಿಯೊಲಿಸ್ ಫೋರ್ಸ್ ಇಲ್ಲವೇಇಲ್ಲ ಎನ್ನುವಷ್ಟು ದುರ್ಬಲ. ಭೂಮಧ್ಯರೇಖೆಯಿಂದ ಸಾವಿರಾರು ಮೈಲು ದೂರದಲ್ಲಿ ಉತ್ತರದಲ್ಲೂ ದಕ್ಷಿಣದಲ್ಲೂ ಅದು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವುದು ಗೊತ್ತಾಗುತ್ತದೆ. ಅಂಥ ಪ್ರದೇಶಗಳಲ್ಲಿ, ಲ್ಯಾಬೊರೇಟರಿ ಕಂಡಿಷನ್‌ನಲ್ಲಿ, ಆರೇಳು ಅಡಿ ವ್ಯಾಸದ ನೀರಿನ ತೊಟ್ಟಿಯಲ್ಲಿ ನೀರು ತುಂಬಿಸಿ, ಕನಿಷ್ಠ ೨೪ ಗಂಟೆ ಆ ನೀರಿಗೆ ತಾಟಸ್ಥ್ಯ ಇರುವಂತೆ ನೋಡಿಕೊಂಡು, ಆಮೇಲೆ ತೊಟ್ಟಿಯ ಕೊಳಾಯಿ ತೆರೆದರೆ- ಭೂಗೋಳದ ಉತ್ತರಾರ್ಧದಲ್ಲಾದರೆ ನೀರು ಅಪ್ರದಕ್ಷಿಣ ಸುಳಿಯಾಗಿ, ದಕ್ಷಿಣಾರ್ಧದಲ್ಲಾದರೆ ಪ್ರದಕ್ಷಿಣ ಸುಳಿಯಾಗಿ ತೊಟ್ಟಿಯಿಂದ ಖಾಲಿಯಾಗುವುದು ಹೌದು.
ಉಗಾಂಡಾ ಪ್ರಜೆಯಂತೆ ಆಗಷ್ಟೇ ಬಾಲ್ದಿಯಿಂದ ಬೋಗುಣಿಯಲ್ಲಿ ನೀರು ತುಂಬಿಸಿ, ಮರದ ಬ್ಲೇಡನ್ನಿಟ್ಟು ಅಬ್ರಕದಬ್ರ ಜಪಿಸಿ ಅರೆಕ್ಷಣದಲ್ಲಿ
ಎತ್ತಿದರೆ ಕೊರಿಯೊಲಿಸ್ ಫೋರ್ಸ್‌ನಿಂದ ಏನೂ ಮಾಡಲಾಗದು. ನೀರಿನ ಸುಳಿಯ ದಿಕ್ಕು ನಿರ್ಧಾರವಾಗುವುದು ಸಂಪೂರ್ಣವಾಗಿ ಉಗಾಂಡಾ ಪ್ರಜೆಯ
ಡೈರೆಕ್ಷನ್‌ನಿಂದಲೇ. ಅಂದಹಾಗೆ, ವೈರಲ್ ಆದ ಆ ವಿಡಿಯೊದಲ್ಲಿ ಆ ಕನ್ನಡಿತಿಯು ಬಲಗಾಲನ್ನು ಭೂಮಧ್ಯರೇಖೆಯ ದಕ್ಷಿಣಕ್ಕೂ ಎಡಗಾಲನ್ನು ಭೂಮಧ್ಯರೇಖೆಯ ಉತ್ತರಕ್ಕೂ ಇಟ್ಟು ನಿಂತದ್ದನ್ನು ನೋಡಿದಾಗ ನನಗೆ ನೆನಪಾದದ್ದು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಅರಿಜೋನಾ, ಯೂಟಾಹ್, ಕೊಲರಾಡೊ, ಮತ್ತು ನ್ಯೂಮೆಕ್ಸಿಕೋ ಸಂಸ್ಥಾನಗಳ ಗಡಿಗಳು + ಚಿಹ್ನೆಯಂತೆ ಒಂದು ಬಿಂದುವಿನಲ್ಲಿ ಸಂಧಿಸುವ ಸ್ಥಳದಲ್ಲಿ ನಾವು ನಾಲ್ಕು ಕಾಲಿನ ಪ್ರಾಣಿಗಳಂತೆ ಕೈಗಳನ್ನೂ ನೆಲಕ್ಕೂರಿದರೆ, ಕಾಲುಗಳೆರಡು ಎರಡು ರಾಜ್ಯಗಳಲ್ಲಿ ಕೈಗಳೆರಡು ಇನ್ನೆರಡು ರಾಜ್ಯಗಳಲ್ಲಿ ಇರುವುದು
ಸಾಧ್ಯವಾಗುತ್ತದೆ ಎಂಬ ಸ್ವಾರಸ್ಯಕರ ಸಂಗತಿ. ಇದೊಂದು ಚಿಕ್ಕ ಉದಾಹರಣೆ ಅಷ್ಟೇ. ಇಂಥ ಸೋಜಿಗಗಳು ಜಗದ ತುಂಬೆಲ್ಲ ಇವೆ ಮತ್ತು ನಮ್ಮ ವಸುಂಧರೆಯನ್ನು ಸುಂದರಿಯಾಗಿಸಿವೆ.
Read E-Paper click here