Sunday, 15th December 2024

ಬಂಗಾರದ ಮನುಷ್ಯ ಸಿದ್ದಲಿಂಗಯ್ಯ

ಸ್ಮರಣೆ

ಕೆ.ಶ್ರೀನಿವಾಸರಾವ್‌

ಕನ್ನಡ ಚಿತ್ರರಂಗದ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾದ ನಿರ್ದೇಶಕರಲ್ಲಿ ಮೇರು ಸ್ಥಾನದಲ್ಲಿರುವವರಲ್ಲಿ ಒಬ್ಬರು ದಿ. ಸಿದ್ಧಲಿಂಗಯ್ಯನವರು.

ಇವರ ಚಿತ್ರಗಳಲ್ಲಿ ಹಳ್ಳಿಯಜೀವನ, ಹಳ್ಳಿಗರ ಮುಗ್ಧತೆ, ಮೂಢನಂಬಿಕೆ ವಿರೋಧಿ ಸಂದೇಶ, ಮಾನವೀಯತೆಗಳು ಹಾಸು
ಹೊಕ್ಕಾಗಿರುತ್ತಿದ್ದವು. ನವಜ್ಯೋತಿ ಸ್ಟುಡಿಯೋದಲ್ಲಿ ಲೈಟ್‌ಬಾಯ್ ಆಗಿದ್ದವರು ಬಾಲಣ್ಣನವರ ಒತ್ತಾಯದಿಂದ ನಿರ್ದೇಶಿಸಿದ ಮೊದಲ ಚಿತ್ರ ದ್ವಾರಕೀಶ್ ನಿರ್ಮಾಣದ ಮೇಯರ್ ಮುತ್ತಣ್ಣ (1969) ಅಭೂತಪೂರ್ವ ಶತದಿನ ಕಂಡಿತು.

ನಂತರದ್ದೆಲ್ಲ ಯಶೋಗಾಥೆಯೇ! ಬಾಳು ಬೆಳಗಿತು, ನಮ್ಮ ಸಂಸಾರ, ತಾಯಿ ದೇವರು, ನ್ಯಾಯವೇ ದೇವರು, ಎಲ್ಲವೂ ಶತದಿನ ಕಂಡಿದ್ದು, ಸಿದ್ದಲಿಂಗಯ್ಯನವರದು ಮುಟ್ಟಿದ್ದೆಲ್ಲ ಚಿನ್ನ ಎಂದಾಗಿತ್ತು! ಬಂಗಾರದ ಮನುಷ್ಯ (1972) ಸಿದ್ದಲಿಂಗಯ್ಯನವರ ಮುಕುಟದ ಮಾಣಿಕ್ಯ. ಟಿ.ಕೆ. ರಾಮರಾವ್ ರವರ ಕಾದಂಬರಿಯಾಧಾರಿತ ಚಿತ್ರ, ಅಭಿನಯ, ಸಂಭಾಷಣೆ, ತಾಂತ್ರಿಕವರ್ಗ, ಸಂಗೀತ, ಸಾಹಿತ್ಯ, ಗೀತೆಗಳು ಎಲ್ಲಾ ಭಾಗದಲ್ಲಿಯೂ ತನ್ನ ಉತ್ಕೃಷ್ಟತೆ ಮೆರೆದು ಬೆಂಗಳೂರಿನ ಒಂದೇ ಚಿತ್ರಮಂದಿರದಲ್ಲಿ (ಸ್ಟೇಟ್ಸ್) ಸತತ 2 ವರ್ಷ ಕಾಲ ನಡೆದು ಜಯಭೇರಿ ಬಾರಿಸಿತು. ಆದರೆ ಕೆಟ್ಟ ಕಣ್ಣುಗಳ ಶಾಪ ಡಾ.ರಾಜ್ ಮತ್ತು ಸಿದ್ದಲಿಂಗಯ್ಯ ನವರ ನಡುವೆ ವಿರಸ ತಂದಿಟ್ಟಿತ್ತು!

ಬಂಗಾರದ ಮನುಷ್ಯನ ಬೆಳ್ಳಿ ಹಬ್ಬದಂದು ಅವರು ರಾಜ್‌ರ ಅಭಿಮಾನಿಗಳೆದುರು ಒಳ್ಳೆಯ ಕಥಾವಸ್ತು, ನಿರ್ದೇಶನವಿದ್ದರೆ ಯಾವ ನಟ ಮಾಡಿದರೂ ಚಿತ್ರ ಓಡುತ್ತೆ ಎಂದು ಮಾತಿನ ನಡುವೆ ಆಡಿದ ವಾಕ್ಯಗಳು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿ ರಾಜ್‌ರಿಲ್ಲದೇ ಚಿತ್ರ ಯಶಸ್ವಿ ಮಾಡಿ ತೋರಿಸಿ ಎಂಬ ಸವಾಲೆಸೆತಕ್ಕೂ ನಾಂದಿ ಹಾಡಿತು. ಇದಕ್ಕೆ ಪೂರಕವಾಗಿ ನಂತರದ ಇವರ ಒಡನಾಟದ ಕೊನೆಯ ಚಿತ್ರ (ದೂರದ ಬೆಟ್ಟ) ಹೆಚ್ಚಿನ ಯಶಸ್ಸು ಕಾಣಲಿಲ್ಲ. ಛಲ ಹೊತ್ತ ಸಿದ್ದಲಿಂಗಯ್ಯನವರು ತಮ್ಮ ಕರ್ತೃತ್ವ
ಶಕ್ತಿಯನ್ನೆಲ್ಲ ಧಾರೆ ಎರೆದು ಭೂತಯ್ಯನ ಮಗ ಅಯ್ಯು ನಿರ್ದೇಶಿಸಿದರು. ಮತ್ತೊಮ್ಮೆ ಹಳ್ಳಿಯ ಸೊಗಡು, ಲೋಕೇಶ್‌ರ ಪ್ರತಿಭಾ ಅನಾವರಣ, ವಿಷ್ಣು, ಎಂ.ಪಿ.ಶಂಕರ್ ಮತ್ತಿತರರ ಅಭಿನಯ, ಸಂಗೀತದಿಂದ ಚಿತ್ರ ಹಲವು ಕೇಂದ್ರಗಳಲ್ಲಿ ಶತದಿನ ಕಂಡು ದಾಖಲೆ ಸ್ಥಾಪಿಸಿತು.

ಈ ಚಿತ್ರದ ಒಂದು ದೃಶ್ಯದಲ್ಲಿ ಅಯ್ಯುವಿನ ಮನೆ ದರೋಡೆ ಪ್ರಸಂಗ. ಲೋಕನಾಥ್‌ರವರು ಉಪ್ಪಿನಕಾಯಿ ಕದ್ದು ತಿನ್ನುವ ದೃಶ್ಯ ಸರಿಬಾರದೇ ಹತ್ತನೇ ಟೇಕ್‌ಗೆ ಓ.ಕೆ. ಮಾಡಿದರಂತೆ, ಅಷ್ಟರಲ್ಲಿ 9 ಟೇಕ್ ಅಭಿನಯಿಸಿದ ಲೋಕನಾಥ್‌ರಿಗೆ ಕಾರ ಕಣ್ಣಲ್ಲಿ ಧಾರಾ ಕಾರ ಅಶ್ರು ತರಿಸಿತ್ತಂತೆ. ನಂತರ ಸಿದ್ದಲಿಂಗಯ್ಯನವರು ನಿರ್ದೇಶಿಸಿದ 14 ಚಿತ್ರಗಳಲ್ಲಿ ಶೇಕಡಾ 50 ಫಲವಾದುದು ದುರ್ವಿಧಿ.

ಕೊನೆ ಕೊನೆಗೆ ವ್ಯಸನಕ್ಕೀಡಾಗಿ ಬಹು ಅಂಗಾಂಗ ವೈಫಲ್ಯದಿಂದ ತಮ್ಮ 78ನೇ ವಯಸ್ಸಿನಲ್ಲಿ 2015ರಲ್ಲಿ ವಿಧಿವಶರಾದರು. 1970-80ರ ದಶಕದಲ್ಲಿ ತಮ್ಮ ಹೆಸರಿನಿಂದಲೇ ಚಿತ್ರ ಮಂದಿರಕ್ಕೆ ಸೆಳೆಯುತ್ತಿದ್ದ.