ಸಂಗತ
ವಿಜಯ್ ದರಡಾ
ಈ ಬಾರಿಯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಕೆಚ್ಚು ಅಸಾಧಾರಣವಾಗಿತ್ತು. ಹಾಗಾಗಿಯೇ ೧೪೦ ಕೋಟಿ ಭಾರತೀಯರು ಈ ಸಲ ನಮ್ಮ ತಂಡ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂದು ನಂಬಿದ್ದರು! ಹೀಗಾಗಿ ಸೋಲನ್ನು ಅರಗಿಸಿಕೊಳ್ಳುವುದು ನಿಜಕ್ಕೂ ಕಷ್ಟವಾಗುತ್ತಿದೆ. ಆದರೆ ಅದು ವಾಸ್ತವ. ಸ್ವೀಕರಿಸದೆ ಬೇರೆ ದಾರಿಯಿಲ್ಲ. ಹಾಗೆ ನೋಡಿದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಎಲ್ಲಾ ಆಟಗಾರರೂ -ರ್ಮ್‌ನಲ್ಲಿದ್ದರು. ಅದರಿಂದಾಗಿ ಒಂದಾದ ಮೇಲೊಂದು ಪಂದ್ಯ ಗೆಲ್ಲುತ್ತಲೇ ಹೋದರು.
ಆದರೆ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿಬಿಟ್ಟರು. ಅದು ಬಹುದೊಡ್ಡ ಶಾಕ್ ನೀಡಿತು! ನಿಜಕ್ಕೂ ಇದು ಚಿನ್ನದಂಥ ಅವಕಾಶವನ್ನು ಕಳೆದುಕೊಂಡ ಅತ್ಯಂತ ನೋವಿನ ಕತೆ. ಆಟದಲ್ಲಿ ಸೋಲು ಗೆಲುವು ಸಹಜ. ಗೆದ್ದ ತಂಡ ಸಂಭ್ರಮಿಸುವುದು, ಸೋತ ತಂಡ ಬೇಸರಗೊಳ್ಳುವುದು ಕೂಡ ಸಹಜವೇ. ಆದರೆ ನಾನು ಮಾತ್ರ ಯಾವತ್ತೂ ಸೋಲೆಂಬುದು ಗೆಲುವಿನ ಪ್ರಕ್ರಿಯೆಯ ಅತ್ಯಗತ್ಯ ಭಾಗ ಎಂದೇ ನಂಬಿದ್ದೇನೆ. ಸೋತವರಿಗೆ ಮಾತ್ರ ಗೆಲುವಿನ ಖುಷಿ ತಿಳಿಯಲು ಸಾಧ್ಯ. ಸೋತರೆ ಮಾತ್ರ ಗೆಲ್ಲಲೇಬೇಕೆಂಬ ಹಟ ಹುಟ್ಟಲು ಸಾಧ್ಯ. ಇವೆಲ್ಲವನ್ನೂ ಮೀರಿ ನೋಡಿದರೆ, ಸೋಲು ಮತ್ತು ಗೆಲುವಿಗಿಂತ ಆಟದ ವಿಧಾನ, ಕ್ರೀಡಾಸೂರ್ತಿ ಹಾಗೂ ಕ್ರೀಡೆಯ ಮೂಲಭೂತ ತತ್ವಗಳನ್ನು ಪಾಲಿಸುವುದು ಬಹಳ ಮುಖ್ಯವಾದುದು.
ಈ ನಿಟ್ಟಿನಲ್ಲಿ ಎರಡೂ ತಂಡಗಳು ಅಭಿನಂದನೆಗೆ ಅರ್ಹ. ನಿಮಗೆ ಸೆಮಿ-ನಲ್‌ನ ಅದೊಂದು ಕ್ಷಣ ನೆನಪಿರಬೇಕು. ವಿರಾಟ್ ಕೊಹ್ಲಿ ಹೋಗಿ ನ್ಯೂಜಿಲೆಂಡ್‌ನ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರನ್ನು ಅಪ್ಪಿಕೊಂಡಿದ್ದರು. ಕ್ರೀಡಾಸ್ಫೂರ್ತಿಯ ಬಗ್ಗೆ ಮಾತನಾಡುವಾಗ ನನಗೆ ಯಾವಾಗಲೂ ಭಾರತೀಯ ಕ್ರಿಕೆಟ್ ತಂಡವನ್ನು ಅಣಕಿಸುವ ಇಂಗ್ಲೆಂಡ್ ತಂಡದ ನೆನಪಾಗುತ್ತದೆ. ಒಂದು ಕಡೆ ನಾವೆಲ್ಲರೂ ಕ್ರಿಕೆಟ್ ಎಂಬುದು ಜಂಟಲ್‌ಮನ್ಸ್ ಗೇಮ್ ಎನ್ನುತ್ತೇವೆ. ಇನ್ನೊಂದು ಕಡೆ ಈ ರೀತಿಯ ಅಣಕ, ಟಾಂಟ್‌ಗಳು! ಆದರೆ ಭಾರತೀಯ ತಂಡ ಅದರ ಒತ್ತಡಕ್ಕೆ ಒಳಗಾಗಲಿಲ್ಲ.
ಕ್ರಿಕೆಟ್ ಆಟವನ್ನು ಕಂಡುಹಿಡಿದ ದೇಶಕ್ಕೆ ಅದು ಸರಿಯಾಗಿಯೇ ಉತ್ತರ ನೀಡಿತು: ‘ಒಂದು ಕಾಲದಲ್ಲಿ ನೀವು ನಮ್ಮನ್ನು ಆಳುತ್ತಿದ್ದಿರಿ. ಇಂದು ನಾವು ನಿಮ್ಮನ್ನು ಆಳುತ್ತಿದ್ದೇವೆ!’. ಕ್ರಿಕೆಟ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪುವುದೆಂದರೆ ಖಂಡಿತ ಸುಲಭದ ಮಾತಲ್ಲ. ಅದು ಯಾವ ತಂಡಕ್ಕಾದರೂ ಸರಿ, ಅಲ್ಲಿಯವರೆಗಿನ ಪ್ರಯಾಣಕ್ಕೆ ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಆಸ್ಟ್ರೇಲಿಯಾ ಮತ್ತು ಭಾರತ ತಂಡ ಫೈನಲ್‌ಗೆ ಬಂದಿ ದ್ದಕ್ಕೆ ಕಾರಣ ಕ್ರಿಕೆಟ್‌ನಲ್ಲಿ ಅವೆರಡೂ ತಂಡಕ್ಕಿರುವ ಅಸಾಧಾರಣ ನೈಪುಣ್ಯ. ಅದರಲ್ಲೂ ಭಾರತ ತಂಡದ ಬಗ್ಗೆ ಹೇಳಬೇಕೆಂದರೆ, ನಾವು ಫೈನಲ್‌ಗೆ ಹೋಗಿದ್ದಕ್ಕೆ ಕಾರಣ ನಮ್ಮ ತಂಡದ ಆಟಗಾರರಲ್ಲಿದ್ದ ಅಪಾರ ಪರಿಶ್ರಮ, ಶ್ರದ್ಧೆ, ಆತ್ಮವಿಶ್ವಾಸ, ಶಿಸ್ತು, ತರಬೇತಿ, ಅರ್ಪಣಾ ಮನೋಭಾವ ಹಾಗೂ ಗೆಲ್ಲಲೇಬೇಕೆಂಬ ಅಸಾಧಾರಣ ತುಡಿತ.
ಹಾಗೆ ನೋಡಿದರೆ ಬದುಕಿನ ಯಾವುದೇ ರಂಗದಲ್ಲಿ, ಅದು ಕ್ರೀಡೆಯಿರಲಿ, ಉದ್ಯೋಗವಿರಲಿ, ಉದ್ದಿಮೆಯಿರಲಿ, ತಾಂತ್ರಿಕ ನೈಪುಣ್ಯವಿರಲಿ ಅಥವಾ
ರಾಜಕೀಯವಿರಲಿ, ಪ್ರತಿಯೊಂದು ಕ್ಷೇತ್ರದಲ್ಲೂ ಗೆಲ್ಲಬೇಕೆಂದರೆ ಈ ಎಲ್ಲ ಗುಣಗಳು ನಮ್ಮಲ್ಲಿರಬೇಕು. ಹಿಮಾಲಯ ಪರ್ವತದ ತುದಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಬೇಕೆಂದರೆ ಅಥವಾ ಸಮುದ್ರದ ಆಳಕ್ಕೆ ಹೋಗಿ ಅಲ್ಲಿನ ವೈವಿಧ್ಯಮಯ ಜೀವಜಗತ್ತನ್ನು ನೋಡಬೇಕೆಂದರೆ ಆಗಲೂ ನಿಮ್ಮಲ್ಲೊಂದು ಸಾಧನೆಯ ಮನೋಭಾವ ಹಾಗೂ ಅದಕ್ಕೊಬ್ಬರು ಗುರು ಬೇಕು. ಮೇಲಿನ ಯಾವುದೇ ಒಂದು ಗುಣ ನಿಮ್ಮಲ್ಲಿ ಇಲ್ಲದಿದ್ದರೂ ಯಾವುದೇ ಗುರಿ ಸಾಧಿಸುವುದು ಕಷ್ಟವಾಗುತ್ತದೆ.
ನೀವು ಏಷ್ಯಾಡ್ ಅಥವಾ ಒಲಿಂಪಿಕ್ಸ್‌ನಲ್ಲಿ ನೋಡಿರುತ್ತೀರಿ- ಅತ್ಯಂತ ಸಣ್ಣ ದೇಶಗಳು ಕೂಡ ಪದಕಗಳ ಪಟ್ಟಿಯಲ್ಲಿ ಬಹಳ ಮೇಲಿರುತ್ತವೆ. ಅದಕ್ಕೆ ಕಾರಣ ಆ ದೇಶದ ಆಟಗಾರರಲ್ಲಿರುವ ಬದ್ಧತೆ ಮತ್ತು ಕ್ರೀಡೆಯ ಬಗ್ಗೆ ಅವರು ಹೊಂದಿರುವ ಸಮರ್ಪಣಾ ಮನೋಭಾವ. ಈ ದೇಶದಲ್ಲಿ ಕ್ರಿಕೆಟ್ ಹೇಗೆ ಒಂದು ಧರ್ಮವಾಗಿ ರೂಪುಗೊಂಡಿತು ಎಂಬುದನ್ನು ನಾನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ. ಸಚಿನ್ ತೆಂಡೂಲ್ಕರ್ ಹೇಗೆ ಕ್ರಿಕೆಟ್‌ನ ದೇವರಾಗಿ ಹೊರಹೊಮ್ಮಿದರು ಎಂಬುದನ್ನು ನೋಡಿದ್ದೇನೆ.
ಇದಕ್ಕೆಲ್ಲ ಒಂದು ದೊಡ್ಡ ಪರಂಪರೆಯೇ ಇದೆ. ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ ಮಹಾರಾಜ ರಣಜಿತ್ ಸಿಂಗ್‌ರಿಂದ ಸಿ.ಕೆ.ನಾಯ್ಡು ಅವರಿಗೆ, ಮುಷ್ತಾಕ್ ಅಲಿಯಿಂದ ಸುನಿಲ್ ಗವಾಸ್ಕರ್‌ಗೆ, ಸೌರವ್ ಗಂಗೂಲಿಯಿಂದ ಮಹೇಂದ್ರ ಸಿಂಗ್ ಧೋನಿಗೆ… ಹೀಗೆ ರಾಜದಂಡ ಹಸ್ತಾಂತರವಾಗುತ್ತಾ ಬಂದಿದೆ. ಇನ್ನೂ ಸಾಕಷ್ಟು ಜನರ ಹೆಸರು ಹೇಳಬಹುದು. ನಾನೇನು ಹೇಳಲು ಹೊರಟಿದ್ದೇನೆ ಅಂದರೆ, ನಮ್ಮಲ್ಲಿ ಪ್ರತಿಭಾವಂತ ಆಟಗಾರರ ಕೊರತೆ ಯಾವತ್ತೂ ಕಾಣಿಸಲೇ ಇಲ್ಲ. ಆದರೆ ಸಂಪನ್ಮೂಲದ ಕೊರತೆ ಇತ್ತು, ಈಗಲೂ ಕೆಲವು ಕಡೆ ಇದೆ. ಆದರೂ ಕಾಶ್ಮೀರಿ ಕಣಿವೆಯಿಂದ ಹಿಡಿದು ದೇಶದ ಬೇರೆ ಬೇರೆ ಭಾಗಗಳಲ್ಲಿ ಸಣ್ಣಪುಟ್ಟ ಹಳ್ಳಿಗಳ ಮಕ್ಕಳು ಕೂಡ ಸರಿಯಾದ ಸಲಕರಣೆಗಳು ಅಥವಾ ಸಂಪನ್ಮೂಲಗಳಿಲ್ಲದಿದ್ದರೂ ಬಹಳ ಇಷ್ಟಪಟ್ಟು ಕ್ರಿಕೆಟ್ ಆಡುವುದನ್ನು ನೋಡಿದ್ದೇನೆ.
ಕ್ರಿಕೆಟ್‌ನ ಪ್ರೀತಿ ಹಾಗೂ ಹುಚ್ಚು ಈ ದೇಶದ ಉದ್ದಗಲಕ್ಕೂ ಸಮಾನವಾಗಿ ಹರಡಿಕೊಂಡಿದೆ. ಹಾಗಿರುವಾಗ ದೇಶದ ಎಲ್ಲೆಡೆ ಶಾಲೆಯಿಂದ ಹಿಡಿದು ಕಾಲೇಜಿನವರೆಗೆ ನಮ್ಮ ಮಕ್ಕಳಿಗೆ ಫೀಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್ ಹಾಗೂ ಕೀಪಿಂಗ್‌ಗೆ ಸರಿಯಾದ ಕೋಚ್‌ಗಳು ದೊರೆತುಬಿಟ್ಟರೆ ಈ ಕ್ರೀಡೆಯಲ್ಲಿ ನಾವು ಯಾವ ಹಂತಕ್ಕೇರಬಹುದು ಎಂಬುದನ್ನು ಊಹಿಸಿ! ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಬಳಿ ಬರೋಬ್ಬರಿ ೨.೨೫ ಬಿಲಿಯನ್ ಡಾಲರ್ ಆಸ್ತಿಯಿದೆ. ಅದು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ. ಸರಕಾರ ಮತ್ತು ಬಿಸಿಸಿಐ ಮನಸ್ಸು ಮಾಡಿದರೆ ಪ್ರತಿ ಹಳ್ಳಿಗೂ ಕ್ರಿಕೆಟ್‌ನ ಮೂಲಸೌಕರ್ಯ ಹಾಗೂ ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಬಹುದು.
ನಮ್ಮ ದೇಶದಲ್ಲಿ ಐತಿಹಾಸಿಕ ಮಹತ್ವ ಪಡೆದ ಇನ್ನೊಂದು ಕ್ರೀಡೆಯಿದೆ. ಅದು ಮಲ್ಲಕಂಬ. ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಹನುಮಾನ್ ಅಖಾಡ ಎಂಬ ಸಂಸ್ಥೆಯಿದೆ. ಅದು ಮಲ್ಲಕಂಬದಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ. ನಾನು ಆ ಸಂಸ್ಥೆಗೆ ಈಗ ಅಧ್ಯಕ್ಷ. ಹಿಂದೆ ಕಾಣೆ ಸಾಹೇಬರು ಅಧ್ಯಕ್ಷರಾಗಿದ್ದಾಗ ಅವರು ಯವತ್ಮಾಲ್ ತಂಡವನ್ನು ಒಲಿಂಪಿಕ್ಸ್‌ಗೆ ಕರೆದುಕೊಂಡು ಹೋಗಿದ್ದರು. ಅದರಲ್ಲಿನ ಕುಸ್ತಿಪಟುಗಳ ನೈಪುಣ್ಯವನ್ನು ನೋಡಿ ಅಡಾಲ್ ಹಿಟ್ಲರ್ ಕೂಡ ಬೆರಗಾಗಿದ್ದರು. ಅವರು ಮುಕ್ತ ಕಂಠದಿಂದ ಕುಸ್ತಿಪಟುಗಳನ್ನು ಶ್ಲಾಘನೆ ಕೂಡ ಮಾಡಿದ್ದರು. ಅದರಂತೆ ನಮ್ಮ ದೇಶ ಎತ್ತರದ ಸ್ಥಾನಕ್ಕೇರಬಹುದಾದ ಇನ್ನೂ ಸಾಕಷ್ಟು ಕ್ರೀಡೆಗಳಿವೆ. ನನ್ನ ಪ್ರಕಾರ ಭಾರತದಲ್ಲಿ ಕ್ರೀಡಾಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕು ಅಂದರೆ
ಕಾರ್ಪೊರೇಟ್ ಕಂಪನಿಗಳು ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು.
ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ಉದ್ದಿಮೆಗಳು ಕ್ರೀಡಾಕ್ಷೇತ್ರಕ್ಕೆ ಸಣ್ಣ ಪ್ರಮಾಣದಲ್ಲಿ ಕೊಡುಗೆ ನೀಡಿದರೂ ಸಾಕು, ನಮ್ಮ ದೇಶದ ಕ್ರೀಡಾಕ್ಷೇತ್ರ ಎಷ್ಟೋ ಎತ್ತರಕ್ಕೆ ಬೆಳೆಯುತ್ತದೆ. ಅದು ಸಾಧ್ಯವಾಗಬೇಕು ಅಂದರೆ ಕ್ರೀಡೆಗೆ ಕಾರ್ಪೊರೇಟ್ ಕಂಪನಿಗಳು ನೀಡುವ ಹಣಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಆಗ ಅವು ಖುಷಿಯಿಂದ ಮುಂದೆ ಬರುತ್ತವೆ. ಎಲ್ಲಾ ಶಾಲೆಯಲ್ಲೂ ಮಕ್ಕಳಲ್ಲಿ ನಿರ್ದಿಷ್ಟ ಕ್ರೀಡೆಯ ಬಗ್ಗೆ ಇರಬಹುದಾದ ಪ್ರೀತಿ, ಸಾಮರ್ಥ್ಯ ಹಾಗೂ
ಆಸಕ್ತಿಯನ್ನು ಗುರುತಿಸುವ ವ್ಯವಸ್ಥೆಯಿರಬೇಕು. ಅದಕ್ಕೆ ತಕ್ಕಂತೆ ಮಕ್ಕಳಿಗೆ ಕೋಚಿಂಗ್ ಕೊಡಿಸುವ ವ್ಯವಸ್ಥೆ ಮಾಡಬೇಕು. ನಮ್ಮ ದೇಶದಲ್ಲಿ ಸಾಕಷ್ಟು ರಾಜಕಾರಣಿಗಳು ಕ್ರೀಡಾ ಸಂಸ್ಥೆಗಳನ್ನು ಬಲಪಡಿಸಲು ಅವುಗಳ ಜತೆಗೆ ಕೆಲಸ ಮಾಡಿದ್ದಾರೆ.
ಅನೇಕರು ಬೇರೆ ಬೇರೆ ಕ್ರೀಡಾ ಮಂಡಳಿಗಳಿಗೆ ಅಧ್ಯಕ್ಷರಾಗಿದ್ದಾರೆ. ಆದರೆ ಕ್ರೀಡಾ ಸಂಸ್ಥೆಗಳನ್ನು ತಮ್ಮ ಜಹಗೀರನ್ನಾಗಿ ಮಾಡಿಕೊಂಡು ಖಾಸಗಿ ಸ್ವತ್ತಿನಂತೆ ಆಳುತ್ತಿರುವ ರಾಜಕಾರಣಿಗಳೂ ಇದ್ದಾರೆ. ಅದು ಏನಾದರೂ ಆಗಲಿ, ಒಂದು ವಿಷಯದಲ್ಲಿ ಮಾತ್ರ ನಮಗೆ ಬಹಳ ಸ್ಪಷ್ಟತೆ ಇರಬೇಕು. ಅದೇನು ಗೊತ್ತಾ? ಒಬ್ಬ ಯೋಗ್ಯ ಕ್ರೀಡಾಪಟುವನ್ನು ಆಯ್ಕೆ ಮಾಡುವ ಮತ್ತು ರೂಪಿಸುವ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯವನ್ನು ಬೆರೆಸಬಾರದು. ಅವನನ್ನು ಉನ್ನತ ಹಂತಕ್ಕೆ ಕೊಂಡೊಯ್ಯಲು ಎಷ್ಟು ಬೇಕೋ ಅಷ್ಟು ಹಣ ಖರ್ಚು ಮಾಡಬೇಕು. ಪಿ.ಟಿ.ಉಷಾ ಶೂ ಇಲ್ಲದೆ ಓಡಿದ್ದು ನಿಮಗೆ ನೆನಪಿದೆಯಾ? ಬಾಕ್ಸಿಂಗ್ ಗ್ಲೌಸ್ ಖರೀದಿಸುವುದಕ್ಕೂ ಹಣವಿಲ್ಲದೆ ಮೇರಿ ಕೋಮ್ ಒದ್ದಾಡಿದ್ದು ಗೊತ್ತಿದೆಯಾ? ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅಂಜಲಿ ಭಾಗವತ್ ಪರದಾಡಿದ್ದು ತಿಳಿದಿದೆಯಾ? ಇನ್ನು ಮುಂದೆ ಯಾವ ಆಟಗಾರರಿಗೂ ಪಿ.ಟಿ.ಉಷಾ, ಮೇರಿ ಕೋಮ್, ಅಂಜಲಿ
ಭಾಗವತ್‌ಗೆ ಬಂದ ಕಷ್ಟ ಬರಬಾರದು.
ನಾವಿವತ್ತು ಮೊಹಮ್ಮದ್ ಶಮಿಯನ್ನು ಬಾಯ್ತುಂಬಾ ಹೊಗಳುತ್ತಿದ್ದೇವೆ. ಆದರೆ ಒಳ್ಳೆಯ ಕೋಚ್ ಹುಡುಕಿಕೊಂಡು ಶಮಿ ಊರಿಂದೂರಿಗೆ ಅಲೆದಾ ಡಿದ್ದು ಹೆಚ್ಚಿನವರಿಗೆ ಗೊತ್ತಿಲ್ಲ. ಮುಂದೆ ಬರುವ ಯಾವ ಆಟಗಾರನಿಗೂ ಹೀಗೆ ಪರದಾಡುವ ಗತಿ ಬರಬಾರದು. ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮ್ಮ ಮಕ್ಕಳಿಗೆ ಆಟದ ಮೈದಾನಗಳನ್ನು ಒದಗಿಸಬೇಕು. ಇಂದು ಎಷ್ಟೋ ಶಾಲೆಗಳಲ್ಲಿ ಅಥವಾ ಎಷ್ಟೋ ಹಳ್ಳಿಗಳಲ್ಲಿ ಮಕ್ಕಳಿಗೆ ಆಟವಾಡಲು ಮೈದಾ
ನವೇ ಇರುವುದಿಲ್ಲ. ಆಟವಾಡಲು ಜಾಗವಿಲ್ಲದೆ ಮಕ್ಕಳಲ್ಲಿರುವ ಪ್ರತಿಭೆ ಅರಳಲು ಸಾಧ್ಯವೇ? ಮಕ್ಕಳು ಯಾವಾಗಲೂ ಖುಷಿಯಿಂದ ಆಟವಾಡಬೇಕು. ಹೀಗಾಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುವಾಗಲೇ ಅಲ್ಲಿ ಆಟದ ಮೈದಾನಕ್ಕೆ ಜಾಗವಿರುವುದನ್ನು ಸರಕಾರ ಖಾತ್ರಿಪಡಿಸಿಕೊಳ್ಳಬೇಕು.
ಆಟದ ಮೈದಾನಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಳ್ಳುವುದನ್ನು ತಡೆಯಲು ಅದನ್ನು ಗಂಭೀರ ಅಪರಾಧವಾಗಿ ಪರಿಗಣಿಸಬೇಕು. ಓದಿನ ಒತ್ತಡದ ಮಧ್ಯೆ ತಮ್ಮ ಮಕ್ಕಳು ಪ್ರತಿದಿನ ಒಂದಷ್ಟು ಹೊತ್ತು ಕಡ್ಡಾಯವಾಗಿ ಮೈದಾನದಲ್ಲಿ ಆಟವಾಡುವುದನ್ನು ಪ್ರತಿಯೊಬ್ಬ ಪೋಷಕರೂ ಖಾತ್ರಿ
ಪಡಿಸಿಕೊಳ್ಳಬೇಕು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಪರಿಸ್ಥಿತಿಯನ್ನು ಖಂಡಿತ ಸುಧಾರಣೆ ಮಾಡಲು ಸಾಧ್ಯವಿದೆ. ನಮ್ಮ ದೇಶದಲ್ಲಿ ವೈವಿಧ್ಯ ಮಯ ಕ್ರೀಡೆಯಿದೆ, ಸಾಕಷ್ಟು ಪ್ರತಿಭೆಯಿದೆ, ಬೇಕಾದಷ್ಟು ಆಸಕ್ತಿಯಿದೆ, ಅದಕ್ಕೆ ತಕ್ಕಂತೆ ಸಂಪನ್ಮೂಲವಿದೆ ಹಾಗೂ ಹೇರಳ ಅವಕಾಶಗಳೂ ಇವೆ. ಆದರೆ ಇವೆಲ್ಲವುಗಳ ನಡುವೆ ಸಂಪರ್ಕದ ಕೊಂಡಿ ಎಲ್ಲೋ ಕಳಚಿಹೋಗಿದೆ. ಅದನ್ನು ಜೋಡಿಸುವ ಕೆಲಸ ಮಾಡಿದರೆ ನಮ್ಮ ಯುವಕರು ಕ್ರೀಡೆಯಲ್ಲಿ ಅತ್ಯದ್ಭುತ ಸಾಧನೆಗಳನ್ನು ಮಾಡಿ ದೇಶಕ್ಕೆ ಹೆಮ್ಮೆ ತರುತ್ತಾರೆ. ಅದರಲ್ಲಿ ಅನುಮಾನವೇ ಬೇಡ.
(ಲೇಖಕರು ಹಿರಿಯ ಪತ್ರಕರ್ತರು ಹಾಗೂ
ರಾಜ್ಯಸಭಾ ಮಾಜಿ ಸದಸ್ಯರು)