Sunday, 24th November 2024

ಗಾಲ್ಫ್ ಬಗ್ಗೆ ಗೊತ್ತಿಲ್ಲದವರು ಏನಾದರೂ ಮಾತಾಡಬಲ್ಲರು !

ನೂರೆಂಟು ವಿಶ್ವ

vbhat@me.com

ಯಾರಾದರೂ ಗಾಲ್ಫ್ ಬಗ್ಗೆ ವ್ಯಂಗ್ಯವಾಡಿದರೆ, ಕುಹಕವಾಡಿದರೆ, ಲಘುವಾಗಿ ಮಾತಾಡಿದರೆ, ಒಂದಂತೂ ನಿಜ, ಅವರಿಗೆ ಗಾಲ ಗೊತ್ತಿಲ್ಲ, ಅವರೆಂದೂ ಅದನ್ನು ಆಡಿದವರಲ್ಲ, ಗಂಭೀರವಾಗಿ ನೋಡಿದವರೂ ಅಲ್ಲ. ಅವರು ಒಂದು ರೀತಿಯಲ್ಲಿ ಕುರುಡ, ಸೊಂಡಿಲನ್ನು ಮುಟ್ಟಿ, ಆನೆಯನ್ನು ಬಣ್ಣಿಸಲು ಹೊರಟವರು. ಅಂಥವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.

Golf is the closest game to the game we call life. You get bad breaks from good shots; you get good breaks from bad shots, but you have to play the ball where it lies. – Bobby Jones

ನಾನು ಗಾಲ್ಫ್ ಆಟದ ಬಗ್ಗೆ ಮೊದಲು ಕೇಳಿದ್ದು ‘ಪ್ರಜಾವಾಣಿ’ ಮತ್ತು ‘ಕನ್ನಡಪ್ರಭ’ ಸಂಪಾದಕರಾಗಿದ್ದ ದಿವಂಗತ ವೈಎನ್ಕೆ ಅವರಿಂದ. ಅವರು ಬೆಂಗಳೂರು ಗಾಲ್ಫ್ ಕ್ಲಬ್ ಸದಸ್ಯರಾಗಿದ್ದರು. ಅವರು ಅಪರೂಪಕ್ಕೆ ಗಾಲ್ಫ್ ಆಡುತ್ತಿದ್ದರು. ಆದರೆ ಅದರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು.

ಗಾಲ್ಫ್ ಆಡುವುದಕ್ಕಿಂತ, ತಿಳಿದುಕೊಳ್ಳುವುದೇ ಸುಲಭ ಎಂದು ಅವರು ತಮಾಷೆ ಮಾಡುತ್ತಿದ್ದರು. This is a game of misses. The guy who misses the best is going to win ಎಂದು ಚಟಾಕಿ ಹಾರಿಸುತ್ತಿದ್ದರು. ಕನ್ನಡದಲ್ಲಿ ಗಾಲ್ಫ್ ಬಗ್ಗೆ ಹೆಚ್ಚು ಬರೆದವರೂ ಅವರೇ. ಅವರಿಗೆ ಗಾಲ್ಫ್ ಬಗ್ಗೆ ವಿಶೇಷ ಆಸಕ್ತಿಯಿತ್ತು. ‘ಈ ಆಟವನ್ನು ಬಹಳ ಕಮ್ಮಿ ಮಂದಿ ಆಡುವು ದರಿಂದ, ಇನ್ನೂ ಕಮ್ಮಿ ಮಂದಿಗೆ ಅದರ ಬಗ್ಗೆ ತಿಳಿದಿರುವುದರಿಂದ, ನಾನು ಏನೇ ಹೇಳಿದರೂ ಗಮನವಿಟ್ಟು ಕೇಳುತ್ತಾರೆ’ ಎಂದು ಅವರು ಹೇಳುತ್ತಿದ್ದರು.

ಅದಕ್ಕಿಂತ ಹೆಚ್ಚಾಗಿ ವೈಎನ್ಕೆ ಗಾಲ್ಫ್ ಆಟದ ಪ್ರತಿಪಾದಕರಾಗಿದ್ದರು. ಯಾರಾದರೂ ಆ ಆಟದ ಬಗ್ಗೆ ಹಗುರವಾಗಿ ಮಾತಾ ಡಿದರೆ, ಸಹಿಸುತ್ತಿರಲಿಲ್ಲ. ಅದರಲ್ಲೂ ಯಾರಾದರೂ ವ್ಯಂಗ್ಯ ಮಾಡಿದರೆ, ವೈಎನ್ಕೆ ಜಗಳಕ್ಕೆ ನಿಲ್ಲುತ್ತಿದ್ದರು. ಗಾಲ ಶ್ರೀಮಂತರ ಆಟ ಅಂತಾರಲ್ಲ ಎಂದು ಕೇಳಿದರೆ, ‘ಶ್ರೀಮಂತರಿಗೆ ಬುದ್ಧಿ ಇಲ್ಲ ಅಂತ ಭಾವಿಸಿದ್ದೀರಾ? ಗಾಲ್ಫ್ ಶ್ರೀಮಂತರ ಆಟವಷ್ಟೇ ಅಲ್ಲ, ಅದು ಬುದ್ಧಿವಂತರ ಆಟ’ ಎಂದು ಅವರು ಸಮರ್ಥಿಸುತ್ತಿದ್ದರು.

‘ನಿಮಗೆ ಗೊತ್ತಿಲ್ಲ ಎಂಬ ಕಾರಣಕ್ಕೆ ಗಾಲ್ಫ್ ಬಗ್ಗೆ ಲಘುವಾಗಿ ಮಾತಾಡಬೇಡಿ, ಚೆಸ್ ಅನ್ನು ಬೋರ್ಡ್ ಮೇಲೆ ಆಡಿದರೆ,
ಗಾಲ್ಫ್ ಅನ್ನು ಭೂಮಿ ಮೇಲೆ ಆಡ್ತಾರೆ. ಚೆಸ್ ಮೈಂಡ್ ಗೇಮ್ ಆದ್ರೆ, ಗಾಲ್ಫ್ ಮೈಂಡ್ ಅಂಡ್ ಬಾಡಿ ಗೇಮ್ ಗೊತ್ತಾ?’ ಎಂದು ಹೇಳುತ್ತಿದ್ದರು. ‘ಗಾಲ್ಫ್ ಮೈದಾನದಲ್ಲಿ ಹದಿನೆಂಟು ಹೋಲ್ (ಕುಳಿ) ಗಳಿದ್ದರೆ ನನಗೆ ಮಾತ್ರ ಹತ್ತೊಂಬತ್ತನೇ ಹೋಲ್ ಅಂದ್ರೆ ಅಲ್ಲಿನ ಬಾರ್‌ನಲ್ಲಿ ಹೆಚ್ಚು ಆಸಕ್ತಿ’ ಎಂದು ಹೇಳುತ್ತಿದ್ದ ವೈಎನ್ಕೆ, ಗಾಲ್ಫ್ ಮೈದಾನದ ಬಗ್ಗೆ ವಿವಾದವೆದ್ದಾಗಲೆಲ್ಲ, ಅದರ ಪರವಾಗಿ ದನಿಯೆತ್ತುತ್ತಿದ್ದರು.

It’s a funny thing; the more I practice Golf, the luckier I get ಎಂಬ ಮಾತು ಹೆಚ್ಚು ನಿಜವಾಗುತ್ತಿದ್ದುದು ಗಾಲ್ಫ್ ನಲ್ಲಿ ಮಾತ್ರ ಎಂದು ಅವರು ಹೇಳುತ್ತಿದ್ದ ಮಾತು ನೆನಪಾಗುತ್ತದೆ. ಎವರೆಸ್ಟ್ ಪರ್ವತದ ಮೇಲೆ ಸಣ್ಣ ಕುಳಿ ತೋಡಿ ಧ್ವಜವನ್ನು ನೆಟ್ಟರೆ, ಗಾಲ್ಫ್ ಆಟಗಾರನಾದವನು ಅಲ್ಲಿಯೂ ಹೋಗಿ ಆಡುತ್ತಾನೆ. ಗಾಲ್ಫ್ ಎನ್ನುವುದು ಆ ಥರಾ ಗೀಳು. ಅದನ್ನು
ಅನುಭವಿಸಿದವನಿಗೇ ಮಾತ್ರ ಗೊತ್ತು. ಅಮೆರಿಕದಲ್ಲಿ ಒಂದು ಮಾತಿದೆ – Golf combines two favorite
American pastimes: taking long walks and hitting things with a stick. ನೀವು ಅತಿಯಾಗಿ
ಹೆದರುವ ಎದುರಾಳಿ ಅಂದ್ರೆ ನೀವೇ ಅನ್ನೋದು ಗಾಲ್ಫ್ ಆಟದಲ್ಲಿ ಮಾತ್ರ.

ವೈಎನ್ಕೆ ಪ್ರಭಾವವೋ ಏನೋ, ನನಗೂ ಗಾಲ್ಫ್ ಬಗ್ಗೆ ವ್ಯಾಮೋಹ. ನಾನು ಇಪ್ಪತ್ತು ವರ್ಷಗಳ ಹಿಂದೆಯೇ, ಬೆಂಗಳೂರಿನ ಕುಂಬಳಗೋಡು ಸನಿಹದ ಈಗಲಟನ್ ಗಾಲ್ಫ್ ಕೋರ್ಸ್ ಸದಸ್ಯನಾಗಿದ್ದೆ. ಈಗಲ್‌ಟನ್ ಮುಖ್ಯಸ್ಥರಾಗಿದ್ದ, ಸ್ನೇಹಿತರಾದ ಅಶೋಕಕುಮಾರ ಅವರು ನಾಲ್ಕು ತಿಂಗಳು ನನಗೆ ಒಳ್ಳೆಯ ತರಬೇತುದಾರನನ್ನಿಟ್ಟು ಕೋಚಿಂಗ್ ಕೊಟ್ಟಿದ್ದರು. ನಾನು ವೃತ್ತಿಪರ ಗಾಲ್ಫ್ ಆಟಗಾರನಂತೆ, ಸಿದ್ಧನಾಗಲಾರಂಭಿಸಿದ್ದೆ.

ಅದು ಹಣಕ್ಕಿಂತ ಹೆಚ್ಚಾಗಿ ನನ್ನ ಸಮಯ ಬೇಡುತ್ತಿದೆ ಎಂದು ನನಗೆ ಅನಿಸಲಾರಂಭಿಸಿತು. ಪ್ರತಿ ಭಾನುವಾರ ಅಲ್ಲಿಗೆ ಹೋಗು ತ್ತಿದ್ದೆ. ಒಮ್ಮೊಮ್ಮೆ ಇಡೀ ದಿನ ಅಲ್ಲಿಯೇ ಕಳೆಯುತ್ತಿದ್ದೆ. ಗಾಲ್ಫ್ ನನ್ನಲ್ಲಿ ಬದಲಾವಣೆ ತರುತ್ತಿದೆ ಎಂದು ನನಗೆ ಅನಿಸಲಾ ರಂಭಿಸಿತು. ಈಗಲ್‌ಟನ್ ಗಾಲ್ಫ್ ಕೋರ್ಸ್‌ನ ಗೋಡೆಯ ಮೇಲೆ ತಗುಲಿ ಹಾಕಿದ Golf is about how well you accept, respond to, and score with your misses much more so than it is a game of your
perfect shots  ಎಂಬ ಸಾಲುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದವು.

‘ನಾನು ಉತ್ತಮವಾಗಿ ಗಾಲ್ಫ್ ಆಡುತ್ತಿದ್ದೇನೆಂದು ನನಗೆ ಅನಿಸಲಾರಂಭಿಸಿದೆ, ಕಾರಣ ನಾನು ಹೊಡೆದಿದ್ದು ಕಡಿಮೆ ಪ್ರೇಕ್ಷಕರಿಗೆ ತಗುಲುತ್ತಿದೆ’ ಎಂದು ಅಮೆರಿಕದ ಅಧ್ಯಕ್ಷ ಗೆರಾಲ್ಡ್ -ರ್ಡ್ ಹೇಳಿದ ಮಾತು ನನಗೂ ಅನ್ವಯಿಸುತ್ತದೆ ಎಂದು
ಅನಿಸಲಾರಂಭಿಸಿತ್ತು. ಕಾರಣ ನಾನೂ ಅಷ್ಟರಮಟ್ಟಿಗೆ ಆ ಆಟವನ್ನು ಒಲಿಸಿಕೊಳ್ಳಲಾರಂಭಿಸಿದ್ದೆ. ‘ಸಾರ್, ಇದು ಮನಸ್ಸಿಗೆ ಬಂದ ದಿನ ಆಡುವ ಆಟವಲ್ಲ. ಪ್ರತಿ ದಿನವೂ ಆಡಬೇಕು. ಆಗಲೇ ಈ ಆಟ ಕೈ ಹಿಡಿಯುತ್ತದೆ. ನೀವು ಗಾಲ್ಫ್  ಟೂರ್ನ್‌ಮೆಂಟಿ ನಲ್ಲಿ ಭಾಗವಹಿಸದೇ ಇರಬಹುದು, ಆದರೆ ಇದು ನಿಮ್ಮ ಮನಸ್ಸು-ಸಮಯವನ್ನು ಬಯಸುತ್ತದೆ. ಇದೊಂದು ಗಂಭೀರ ಆಟ. ಅದಕ್ಕಿಂತ ಮುಖ್ಯವಾಗಿ ಇದೊಂದು ಜೀವನಶೈಲಿ. ನೀವು ಗಾಲ್ಫ್ ಆಟಗಾರರಾದರೆ ಬದುಕಿನ ಬಗ್ಗೆ ನಿಮ್ಮ ಧೋರಣೆ
ಬದಲಾಗುತ್ತದೆ.

ನಿಮಗರಿವಿಲ್ಲದಂತೆ ನಿಮ್ಮಲ್ಲಿ ಒಂದು ಶಿಸ್ತು, ನಿಯಮ, ಸಂಯಮ ಮೂಡುತ್ತದೆ. ನಮ್ಮ ಬದುಕನ್ನು ಗಾಲ್ಫ್ ಆಟದ ಮೂಲಕ ನೋಡಿದರೆ, ಈ ಆಟ ಬೇರೆಯಲ್ಲ, ಜೀವನ ಬೇರೆಯಲ್ಲ ಅನ್ನೋದು ಗೊತ್ತಾಗುತ್ತೆ.’ Golf is not a game, it’s bondage..‘ಗಾಲ್ಫ್ ಅಂದ್ರೆ ಪರಿಪೂರ್ಣತೆಗಾಗಿ ನಮ್ಮನ್ನು ಶೋಧಿಸುವುದು. ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು.

ಇದು ಒಂಥರ ಧ್ಯಾನದಲ್ಲಿ ಮತ್ತು ಏಕಾಗ್ರತೆಯಲ್ಲಿ ಮಗ್ನವಾದಂತೆ. ನೀವು ನಿಮ್ಮ ಕೈ ಮತ್ತು ಮೆದುಳಿನ ಮಧ್ಯೆ
ಸಂತುಲನವನ್ನು ಸಾಧಿಸಿದಂತೆ’ ಎಂದು ಕ್ಯಾಂಡಿ ಕೆಂಚೇಗೌಡ ಒಂದು ದಿನ ನನಗೆ ಒಂದು ದಿನ ಬೌದ್ಧಿಕ್ ಕೊಟ್ಟಿದ್ದ.
ಆತ ಹೇಳಿದ್ದರಲ್ಲಿ ತಪ್ಪಿರಲಿಲ್ಲ. ನನಗೆ ಆಗ ಗಾಲ ಪ್ರೇಮಿಯೊಬ್ಬ ಹೇಳಿದ, Golf is a science, the study of a
lifetime, in which you can exhaust yourself but never your subject  ಎಂಬ ಮಾತು ಪದೇ ಪದೆ ನೆನಪಾಗುತ್ತಿತ್ತು. ಆದರೆ, ನನ್ನ ಕಾರ್ಯಬಾಹುಳ್ಯ ಹೆಚ್ಚಿದ್ದರಿಂದ ನನಗೆ ಅಷ್ಟು ಸಮಯ ಹೊಂದಿಸುವುದೂ ಕಷ್ಟವಾಗಲಾ ರಂಭಿಸಿತು.

ವಾರದಲ್ಲಿ ಒಂದು ಭಾನುವಾರ, ಅದೂ ನಾಲ್ಕೈದು ಗಂಟೆ ಗಾಲ ಮೈದಾನದಲ್ಲಿ ಮತ್ತು ಅಲ್ಲಿಗೆ ಹೋಗುವುದಕ್ಕೆ-ಬರುವುದಕ್ಕೆ ವ್ಯಯಿಸುವುದು ಹೊರೆಯಾಗಲಾರಂಭಿಸಿತು. ಹೀಗಾಗಿ ಈಗಲ್‌ಟನ್ ಗಾಲ್ಫ್ ಕೋರ್ಸ್‌ಗೆ ಹೋಗುವುದನ್ನು ನಿಲ್ಲಿಸಿದೆ. ಅದರಿಂದ ಸಮಯ ಉಳಿಸಿರಬಹುದು. ಆದರೆ ಗಾಲ ಕಲಿಸಿ ಕೊಡುವ ಜೀವನಪಾಠದಿಂದಂತೂ ನಾನು ವಂಚಿತನಾದೆ ಎಂದು
ಈಗಲೂ ಬಲವಾಗಿ ಅನಿಸುತ್ತಿದೆ.

ಭಾರತದಲ್ಲಿ ಕ್ರಿಕೆಟ್ ಆಟ ಯಶಸ್ವಿಯಾಗಲು ಮುಖ್ಯ ಕಾರಣ ಅದನ್ನು ಎಲ್ಲಿ ಬೇಕಾದರೂ ಆಡಬಹುದೆಂದು. ಮನೆ ಜಗುಲಿ, ಅಂಗಳದಲ್ಲೂ ಕ್ರಿಕೆಟ್ ಆಡಬಹುದು. ಕ್ರಿಕೆಟ್ ಆಡಲು ಹನ್ನೊಂದು ಮಂದಿ ಬೇಕೆಂದಿಲ್ಲ. ಇಬ್ಬರಿದ್ದರೂ ಸಾಕು. ಒಣಗಿದ ತೆಂಗಿನ ಗರಿ, ಅಡಕೆ, ಮೂರು ಗೂಟ (ಎರಡಿದ್ದರೂ ಆದೀತು) ಇದ್ದರೆ ಸಾಕು. ಭಾರತದಲ್ಲಿ ಕ್ರಿಕೆಟ್ ಆಡದವರು ಇರಲಿಕ್ಕಿಲ್ಲ, ಹಾಗೆ ಅದನ್ನು ಆಡದ ಜಾಗವಿದ್ದಿರಲಿಕ್ಕಿಲ್ಲ. ಪ್ರತಿ ಬೀದಿ, ರಸ್ತೆ, ಕೂಡು ರಸ್ತೆ, ಗಲ್ಲಿ, ಚಾಳ, ಜಗುಲಿ, ವಠಾರ… ಎಲ್ಲವೂ ಕ್ರಿಕೆಟ್ ಪಿಚ್ಚು ಗಳೇ.

ನಮ್ಮ ದೇಶದಲ್ಲಿ ಬಹುತೇಕ ಎಲ್ಲರೂ ಕ್ರಿಕೆಟ್ ಆಡಿಯೇ ದೊಡ್ಡವರಾದವರು. ಯುರೋಪ್ ಮತ್ತು ಅಮೆರಿಕದಲ್ಲಿ ಫುಟ್ಬಾಲ್ ಹೇಗೋ, ನಮ್ಮ ದೇಶದಲ್ಲಿ ಕ್ರಿಕೆಟ್. ಆದರೆ ಗಾಲ್ಫ್ ಹಾಗಲ್ಲ. ಅದಕ್ಕೆ ನೂರಾರು ಎಕರೆ ವಿಶಾಲ ಹಸುರು ಹುಲ್ಲು ಹಾಸಿನ ಮೈದಾನ ಬೇಕು. ಆ ಹಾಸನ್ನು ನಿತ್ಯವೂ ತಲೆಗೂದಲಿಗಿಂತ ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು, ವಾಗಾತಿ ಮಾಡಬೇಕು. ನೀರುಣಿಸಬೇಕು. ಹುಳು-ಕೀಟ ಬಾಧೆಯಿಂದ ಹುಲ್ಲನ್ನು ರಕ್ಷಿಸಬೇಕು. ಕಳೆ ಕೀಳಬೇಕು, ಕೀಟನಾಶಕ ಸಿಂಪಡಿಸಬೇಕು.

ಅದು ಸಣ್ಣ ಸಣ್ಣ ಮಾತಲ್ಲ. ಚಿಕ್ಕ ಮಕ್ಕಳನ್ನು ಸಲಹುವಂತೆ, ಬೆಳೆಸುವಂತೆ ಗಾಲ್ಫ್ ಮೈದಾನವನ್ನು ನೋಡಿಕೊಳ್ಳಬೇಕು.
ಹಾಗೆಂದು ಈ ಆಟವನ್ನು ಎಲ್ಲರೂ ಆಡುವುದಿಲ್ಲ. ಕೆಲವೇ ಕೆಲವು ಮಂದಿ ಆಡಬಹುದು. ಬೆಂಗಳೂರಿನಂಥ ನಗರದಲ್ಲಿ
ಐದು ಗಾಲ್ಫ್ ಮೈದಾನಗಳಿವೆ. ಈ ಆಟವನ್ನು ಹೆಚ್ಚೆಂದರೆ, ಹತ್ತು ಸಾವಿರ ಮಂದಿ ಆಡಬಹುದು. ಬೆಂಗಳೂರು ಗಾಲ್ಫ್
ಕ್ಲಬ್ ವಿಧಾನಸೌಧದಿಂದ ಅರ್ಧ ಕಿಮೀ ದೂರದಲ್ಲಿದೆ.

ಅರವತ್ತು ಎಕರೆ ವಿಶಾಲ ಪ್ರದೇಶದಲ್ಲಿದೆ. ಹದಿನೆಂಟು ಹೋಲ್‌ಗಳಿರುವ ಈ ಮೈದಾನದಲ್ಲಿ ಪ್ರತಿ ನಿತ್ಯ ಹೆಚ್ಚೆಂದರೆ
ನೂರು-ಇನ್ನೂರು ಮಂದಿ ಆಡಬಹುದು. ಅವರಿಗಾಗಿ ನಗರದ ಮಧ್ಯಭಾಗದಲ್ಲಿ, ಅದೂ ರಾಜಭವನ, ಶಾಸಕರ ಭವನದ ಮಗ್ಗುಲಿಗೆ ಅಷ್ಟೊಂದು ವಿಶಾಲ ಭೂಮಿಯಲ್ಲಿ ಗಾಲ್ಫ್ ಕೋರ್ಸ್ ಸುಮಾರು 154 ವರ್ಷಗಳ ಹಿಂದೆಯೇ ತಲೆಯೆತ್ತಿದೆ ಅಂದ್ರೆ ಈ ಆಟದ ಪ್ರಭಾವ ಎಂಥದ್ದಿರಬಹುದೆಂದು ಅರಿಯಬಹುದು.

ಅದರಲ್ಲೂ ಬೆಂಗಳೂರು ಗಾಲ್ಫ್ ಕ್ಲಬ್ ಅನ್ನು ಬೇರೆಡೆ ವರ್ಗಾಯಿಸಿ, ಆ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಕೂಗು ಆಗಾಗ ಕೇಳಿಬರುವುದುಂಟು. ಅಷ್ಟೇ ಅಲ್ಲ, ಆ ಮೈದಾನವನ್ನು ಹಸುರಾಗಿಡಲು, ಬೇಸಿಗೆಯಲ್ಲಿ ಜನರಿಗೆ ಕುಡಿಯಲು ನೀರಿಲ್ಲದಿದ್ದರೂ, ಗಾಲ ಕೋರ್ಸ್‌ಗೆ ನೀರು ಬಳಸುವುದು ಎಷ್ಟು ಸರಿ ಎಂದು ವಿವಾದ ಎಬ್ಬಿಸುವುದು ಹೊಸತೇನಲ್ಲ. ಜತೆಗೆ ಕೀಟನಾಶಕ ಸಿಂಪಡಿಸುವುದರಿಂದ, ಅಂತರ್ಜಲ ಕಲುಷಿತವಾಗುತ್ತದೆ ಎಂದು ಪರಿಸರವಾದಿಗಳು ಹುಯಿಲೆಬ್ಬಿಸುವುದುಂಟು. ಆದರೆ ಇವೆಲ್ಲ ಮಾಧ್ಯಮಗಳಲ್ಲಿ ಕೆಲವು ವಾರ ಮಾತ್ರ.

ಇಷ್ಟಾದರೂ ಗಾಲ್ಫ್ ಕ್ಲಬ್ ನಿರಾತಂಕವಾಗಿ ಕಾರ್ಯನಿರ್ವಹಿಸುತ್ತಿದೆ. ಅಂದರೆ ಬೆಂಗಳೂರು ನಗರದಲ್ಲಿ ಶೇ. 0.5ರಷ್ಟು ಜನ ಗಾಲ ಆಡುವವರಿರರಬಹುದು. ಆದರೂ ಅದಕ್ಕಾಗಿ ಅಷ್ಟು ವಿಶಾಲ ಪ್ರಮಾಣದ ಭೂಮಿ ಬೇಕು. ಈ ಕಾರಣಕ್ಕಾಗಿ ಇದನ್ನು ಶ್ರೀಮಂತರ ಆಟ ಎಂದು ಮೂಗು ಮುರಿಯುವುದುಂಟು. ಗಾಲ್ಫ್ ಕ್ಲಬ್ ಸದಸ್ಯರಾದವರೆಲ್ಲ ನಿತ್ಯ ಅಥವಾ ಅಪರೂಪಕ್ಕೆ ಸಹ ಆಡುವವರಲ್ಲ.

ಎಲ್ಲರಿಗೂ ಆಟದ ನಿಯಮ ಗೊತ್ತಿದೆ ಎಂದಿಲ್ಲ. ಗಾಲ್ಫ್ ಕ್ಲಬ್ ಸದಸ್ಯರಾಗುವುದು ಒಂದು ಪ್ರತಿಷ್ಠೆಯ ಸಂಕೇತವೂ ಹೌದು.
ಇನ್ನು ಗಾಲ್ಫ್ ಆಡುವ ಕ್ಲಬ್ಸ್ (ಬ್ಯಾಟ್) ಒಳಗೊಂಡ ಕಿಟ್‌ಗೆ ಲಕ್ಷಾಂತರ ರುಪಾಯಿ ಬೆಲೆ. ಇನ್ನು ಗಾಲ್ಫ್ ಶೂ, ಟೀ-ಶರ್ಟ್,
ಪ್ಯಾಂಟ್, ಕ್ಯಾಪ್ ಕೂಡ ಸೋವಿಯೇನಲ್ಲ. ನಾಳೆಯಿಂದಲೇ ಗಾಲ್ಫ್ ಆಡಬೇಕೆಂದರೆ, ಕರಾರುವಾಕ್ಕಾಗಿ ಸಿದ್ಧವಾಗಲು
ಒಂದೂವರೆ, ಎರಡು ಲಕ್ಷ ರುಪಾಯಿ ಬೇಕು. ಜತೆಗೆ ಪ್ರತಿ ಸಲ ಆಡುವಾಗ, ಕಿಟ್ ಅನ್ನು ಹೊತ್ತೊಯ್ಯಲು ಒಬ್ಬ ಸಹಾಯಕ ಬೇಕು. ಆತನನ್ನು ಕ್ಯಾಡಿ (Caddie) ಅಂತಾರೆ.

ಈತ ಪರ್ವತಾರೋಹಿಗಳಿಗೆ ಶೆರ್ಪಾ ಇದ್ದ ಹಾಗೆ. ಗಾಲ್ಫ್ ಆಟಗಾರಿಗೆ ನೈತಿಕ ಸ್ಥೈರ್ಯ, ಸಲಹೆಗಳನ್ನೂ ನೀಡುವ
ಕ್ಯಾಡಿಗೆ ಪ್ರತಿ ಸಲ ಮೂರು-ನಾಲ್ಕು ಸಾವಿರ ಟಿಪ್ಸ್ ಕೊಡಬೇಕು. ಕೆಲವರು ಒಂದೆರಡು ತಾಸಿಗೆ ಹತ್ತು ಸಾವಿರ ರುಪಾಯಿ ತನಕ ಟಿಪ್ಸ್ ಪಡೆಯುತ್ತಾರೆ. ಇಷ್ಟೆಲ್ಲ ಬಡಿವಾರ ಮಾಡಿಕೊಂಡು ಯಾರು ತಾನೇ ಆಡುತ್ತಾರೆ? ಹೀಗಾಗಿ ಇದನ್ನು ಆಡುವವರ ಸಂಖ್ಯೆ ಬಹಳ ಕಮ್ಮಿ. ಇಷ್ಟೆಲ್ಲ ಬಡಿವಾರ ಮಾಡಿಕೊಂಡೂ ಆಡುತ್ತಾರಲ್ಲ, ಅವರಲ್ಲಿ ಈ ಆಟದ ಬಗ್ಗೆ ಅದೆಂಥ ಮೋಹವಿರ ಬಹುದು, ಅವರಲ್ಲಿ ಅದೆಂಥ ಪ್ರೇರಣೆ ಇರಬಹುದು.

ಯೋಚಿಸುವ ವಿಷಯವೇ. ಗಾಲ್ಫ್ ಚೆಂಡನ್ನು ಐದು-ಹತ್ತು ನಿಮಿಷ ದಿಟ್ಟಿಸುತ್ತ, ಕುಂಡೆ ಕುಣಿಸುತ್ತ ನಿಂತು, ಬಾಲನ್ನು ಹೊಡೆದ
ಬಳಿಕ, ಆ ಬಾಲನ್ನು ಅರಸಿಕೊಂಡು ಮುನ್ನೂರು-ನಾನೂರು ಮೀಟರ್ ನಡೆದು, ನಂತರ ಇನ್ನೊಂದೆರಡು ಸಲ ಬಾಲನ್ನು
ಹೊಡೆದು, ಮತ್ತೆ ನಡೆದು, ಕೊನೆಯಲ್ಲಿ ಒಂದು ಕುಳಿಯಲ್ಲಿ ಚೆಂಡನ್ನು ಬೀಳಿಸಲು ಅಷ್ಟೆಲ್ಲ ಕಸರತ್ತು ಮಾಡಬೇಕಾ, ಅದಕ್ಕಾಗಿ ಇಷ್ಟೆಲ್ಲ ಖರ್ಚು ಮಾಡಬೇಕಾ, ಆ ಆಟದಲ್ಲಿ ಅದ್ಯಾವ ಆಸಕ್ತಿ, ಕುತೂಹಲವಿದ್ದೀತು, ಅಷ್ಟಕ್ಕೇ ಜನ ಗೀಳು ಹಿಡಿಸಿಕೊಂಡು ಈ ಆಟ ಆಡಬೇಕಾ, ಈ ಆಟದಲ್ಲಿ ಅದ್ಯಾವ ರೋಚಕತೆಯಿದ್ದೀತು… ಹೀಗೆಲ್ಲ ಗಾಲ ಬಗ್ಗೆ ಕೀಳಾಗಿ, ವ್ಯಂಗ್ಯವಾಗಿ ಮಾತಾಡುವ ವರೇನೂ ಕಮ್ಮಿಯಿಲ್ಲ.

ಇವೆಲ್ಲ ಗಾಲ್ಫ್ ಆಡದವರ ಪ್ರಲಾಪಗಳು. ‘ಹಾಗಿದ್ದರೆ ಯಾರು ಬೇಡ ಅಂತಾರೆ, ನೀವು ಚಿಣ್ಣಿ – ದಾಂಡು ಆಡಬಹುದಲ್ಲ’ ಎಂದು
ಗಾಲ್ಫ್ ಪ್ರಿಯರು ಹೇಳುವುದುಂಟು. ಈ ಎಲ್ಲ ಟೀಕೆ-ಅಪಸ್ವರಗಳೆಲ್ಲ ಇದ್ದಿದ್ದೇ. ಇಂಥವರಿಗೆ ಅಮೆರಿಕದ ಖ್ಯಾತ ಕಾಮಿಡಿಯನ್ ಗ್ರೂಚೊ ಮಾರ್ಕ್ಸ್ ಹೇಳಿದ I am not feeling really well, I need a doctor immediately. Take me to the nearest golf course ಮಾತನ್ನು ಹೇಳಬೇಕು.

ಯಾರಾದರೂ ಗಾಲ್ಫ್ ಬಗ್ಗೆ ವ್ಯಂಗ್ಯವಾಡಿದರೆ, ಕುಹಕವಾಡಿದರೆ, ಲಘುವಾಗಿ ಮಾತಾಡಿದರೆ, ಒಂದಂತೂ ನಿಜ, ಅವರಿಗೆ ಗಾಲ್ಫ್ ಗೊತ್ತಿಲ್ಲ, ಅವರೆಂದೂ ಅದನ್ನು ಆಡಿದವರಲ್ಲ, ಗಂಭೀರವಾಗಿ ನೋಡಿದವರೂ ಅಲ್ಲ. ಅವರು ಒಂದು ರೀತಿಯಲ್ಲಿ ಕುರುಡ, ಸೊಂಡಿಲನ್ನು ಮುಟ್ಟಿ, ಆನೆಯನ್ನು ಬಣ್ಣಿಸಲು ಹೊರಟವರು. ಅಂಥವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.
ಕಾರಣ ಅವರಿಗೆ ಆ ಆಟದ ಬಗ್ಗೆ ಏನೇನೂ ಗೊತ್ತಿಲ್ಲ.

ಅವರೇನಾದರೂ ಖ್ಯಾತ ಇಂಗ್ಲಿಷ್ ಲೇಖಕ ಪಿ.ಜಿ.ವುಡ್ ಹೌಸ್ ಹೇಳಿದ To find a man’s true character, play golf with him ಎಂಬ ಮಾತನ್ನು ಕೇಳಿದ್ದಿದ್ದರೆ, ಗಾಲ್ಫ್ ಬಗ್ಗೆ ಲಘುವಾಗಿ ಮಾತಾಡುವುದಿಲ್ಲ. ಜಗತ್ತಿನ ಶ್ರೀಮಂತರೆಲ್ಲ ಗಾಲ್ಫ್ ಆಡುತ್ತಾರೆ, ಏಕೆ ಎಂಬ ಪ್ರಶ್ನೆಗೆ, ಪ್ರಸಿದ್ಧ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಹೇಳಿದ ‘ಜಗತ್ತಿನಲ್ಲಿ ಮತ್ತು ಜೀವನದಲ್ಲಿ ನಾನೇ ನಾದರೂ ಅದ್ಭುತ ವ್ಯಕ್ತಿಗಳನ್ನು ಭೇಟಿ ಮಾಡಿದ್ದರೆ, ಅದು ಗಾಲ ಮೈದಾನದಲ್ಲಿ’ ಎಂಬ ಮಾತಲ್ಲಿ ಉತ್ತರವಿದೆ.

ಗಾಲ್ಫ್ ಮೈದಾನದಲ್ಲಿ ಯಂಕ-ನಾಣಿಗಳ್ಯಾರೂ ಬರುವುದಿಲ್ಲ. ಅಲ್ಲಿ ಬರುವವರೆಲ್ಲರೂ ಪ್ರಮುಖರು. ಒಂದಿಂದು ಕಾರಣದಿಂದ ಗಣ್ಯರೇ. ಅಲ್ಲದೇ ಅದು ನೆಟ್ ವರ್ಕಿಂಗ್‌ಗೆ ಅತ್ಯುತ್ತಮ ಸ್ಥಳ. ಗಾಲ್ಫ್ ಆಟ ಅದಕ್ಕೆ ಪೂರಕವಾದ ಮನಃಸ್ಥಿತಿ ಮತ್ತು ದೇಹಸ್ಥಿತಿ ಯನ್ನು ರೂಪಿಸುತ್ತದೆ. ಹೀಗಾಗಿ ಅದು ಕೆಲವು ಜನರ ಆಟವಾಗಿಯೇ ಉಳಿದುಕೊಂಡಿದೆ. ಹೀಗಾಗಿ ಉಳಿದವರಿಗೆ ಅದರಲ್ಲಿ ಆಸಕ್ತಿಯಿಲ್ಲ. ಅಂಥವರು ಗಾಲ್ಫ್ ಟೀಕಾಕಾರರಾಗಿ ಪರಿವರ್ತಿತರಾಗುತ್ತಾರೆ. ಹೀಗಾಗಿ ಗಾಲ್ಫ್ ಪರವಾಗಿರುವವರಿ ಗಿಂತ, ವಿರುದ್ಧವಾಗಿ ಇರುವವರೇ ಹೆಚ್ಚು. ನನ್ನ ಈ ಬರಹ ಅಥವಾ ಅಭಿಪ್ರಾಯವನ್ನು ಇಷ್ಟಪಡುವವರಿಗಿಂತ ಟೀಕಿಸುವವರೇ ಹೆಚ್ಚು ಎಂಬುದು ನನಗೆ ಗೊತ್ತಿದೆ.

ನನ್ನೆಲ್ಲ ಕೆಲಸಗಳನ್ನು ಬದಿಗಿಟ್ಟು, ಬೆಂಗಳೂರಿನಿಂದ ಸುಮಾರು ಎರಡೂವರೆ ತಾಸು ದೂರದಲ್ಲಿರುವ ಕೋಲಾರದ ಬಂಗಾರಪೇಟೆ ಸನಿಹವಿರುವ ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯಲ್ಲಿ, ಎಷ್ಟೋ ವರ್ಷಗಳ ನಂತರ, ಗಾಲ್ಫ್ ಕ್ಲಬ್ಸ್ ಹಿಡಿದಾಗ, ಇವೆಲ್ಲ ನೆನಪಾದವು. Golf is like a love affair. If you don’t take it seriously, it’s no fun; if you do take it seriously, it breaks your heart. ಅದನ್ನು ಹೇಗೆ ಸ್ವೀಕರಿಸಬೇಕು ಎಂಬುದು  ನಿಮಗೆ ಬಿಟ್ಟಿದ್ದು. ಒಂದು ಮಾತು ನಿಜ – ಗಾಲ್ಫ್ ಬಗ್ಗೆ ಏನೂಗೊತ್ತಿಲ್ಲದೇ ಮಾತಾಡುವವರು, ಯಾವುದರ ಬಗ್ಗೆ ಬೇಕಾದರೂ ಮಾತಾಡಬಲ್ಲರು!