Wednesday, 11th December 2024

ಸುಖ ನಿದ್ದೆಯಿಂದ ನೆಮ್ಮದಿಯ ಬದುಕು

ತನ್ನಿಮಿತ್ತ

ಎಲ್.ಪಿ.ಕುಲಕರ್ಣಿ

ಮೊಬೈಲ್ ಎಂಬ ಮಾಯಾಂಗನೆ ಬಂದಾಗಿನಿಂದ ನಿದ್ರೆ ಅನ್ನೋದು ಬಹುಪಾಲು ಎಲ್ಲರ ಬಾಳಲ್ಲೂ ಗಗನ ಕುಸುಮವಾಗಿ ಬಿಟ್ಟಿದೆ. ಕೆಲವರನ್ನು ವೀಕ್ಷಿಸಿದಾಗ ರಾತ್ರಿ ಹನ್ನೆರಡು, ಒಂದು ಗಂಟೆ ಯಾದರೂ ಸಹ ಫೇಸ್ಬುಕ್, ವಾಟ್ಸಾಪ್… ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಆನ್‌ಲೈನ್ ಚಾಟ್ ಮಾಡ್ತಾನೆ ಇರ್ತಾರೆ.

ಅವರು ಯಾವಾಗ ಮಲಗ್ತಾರೋ? ಯಾವಾಗ ಏಳ್ತಾರೋ? ಆ ಭಗವಂತನೇ ಬಲ್ಲ! ಪರಿಸ್ಥಿತಿ ಹೀಗಾದರೆ ಆರೋಗ್ಯ ಹದಗೆಡುವು ದಂತೂ ಶತಸಿದ್ಧ. ನಾವು ಚಿಕ್ಕವರಿದ್ದಾಗ ರಾಮಾಯಣದಲ್ಲಿ ಬರುವ ಕುಂಭಕರ್ಣನ ಹಾಗೂ ಆತನ ಅತಿಯಾದ ನಿದ್ರೆಯ
ಬಗ್ಗೆ ಕಥಾರೂಪದಲ್ಲಿ ಕೇಳುತ್ತಿದ್ದದ್ದು ನೆನಪಿರಬಹುದು. ಅಲ್ಲದೇ ಟಿ.ವಿ.ಯಲ್ಲಿ ಧಾರಾವಾಹಿಯ ರೂಪದಲ್ಲಿ ರಾಮಾಯಣದ ಆ ಕುಂಭಕರ್ಣನ ಸನ್ನಿವೇಶವನ್ನೂ ಸಹ ನೋಡಿದ್ದೇವೆ. ಅಮೆರಿಕದ ಲೇಖಕ ವಾಷಿಂಗ್ಟನ್ ಇರ್ವಿನ್ ಬರೆದಿರುವ ‘ರಿಪ್ ವ್ಯಾನ್ ವಿಂಕಲ’ ಕಥೆಯಲ್ಲಿ ವಿಂಕಲ್ ಎಂಬ ಪತ್ನಿ ಪೀಡಕನು ಮನೆಯಲ್ಲಿನ ಹಾವಳಿಯನ್ನು ಸಹಿಸಿಕೊಳ್ಳಲಾಗದೇ ಕಾಡಿನಲ್ಲಿ ಮರದ ಕೆಳಗೆ ನಿದ್ರೆಗೆ ಜಾರುವ ಕಥೆ.

ಫ್ರೆಂಚ್ ಜನಪದ ಕಥೆ ಸ್ಲೀಪಿಂಗ್ ಬ್ಯೂಟಿಯಲ್ಲಿ ದುಷ್ಟ ರಾಕ್ಷಸ ಶಕ್ತಿಯ ಶಾಪಕ್ಕೆ ಗುರಿಯಾಗಿ ಸುಂದರ ತರುಣಿ ರಾಜಕುಮಾರಿ ನೂರು ವರ್ಷ ನಿದ್ರೆಯ ಮುಳುಗಿದ್ದು… ಮುಂತಾದ ಕುತೂಹಲ ಭರಿಸೋ ಕಥೆಗಳನ್ನು ಚಿಕ್ಕವರಿದ್ದಾ ಗಲೇ ಕೇಳಿದ್ದೀವಲ್ಲವೇ…! ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಲಾಲಿ ಹಾಡು, ಸುಮಧುರ ಸಂಗೀತ ಕೇಳಿದೊಡನೆ ನಿದ್ರೆಗೆ ಜಾರುವುದು ಸಾಮಾನ್ಯ. ನಿದ್ರೆಯು ವ್ಯಕ್ತಿಯನ್ನು ಆರೋಗ್ಯ ಪೂರ್ಣನನ್ನಾಗಿಸುತ್ತದೆ.

ಈಗಂತೂ 24 ಗಂಟೆಯೂ ಮೊಬೈಲಿನಲ್ಲೇ ಮುಳುಗಿರುವ ಎಷ್ಟೋ ಜನರನ್ನು ಕಾಣುತ್ತಿದ್ದೇವೆ. ಅವರಲ್ಲಿ ನಿದ್ರಾ ಅವಧಿ ಕಡಿಮೆಯಾಗಿ ಹಲವು ರೋಗಗಳಿಗೆ ತುತ್ತಾಗಿರುವುದನ್ನು ಸಹ ಗಮನಿಸುತ್ತಿದ್ದೇವೆ. ಈ ನಿದ್ರೆಯ ಮಹತ್ವ ಅರಿಯಲು World Sleep Day Committee of World Sleep Society, formerly World Association of Sleep Medicine (WASM) ಎಂಬ ಸಂಸ್ಥೆಯು ವಿಶ್ವದಾದ್ಯಂತ 2008ರಿಂದ ಪ್ರತಿ ವರ್ಷ ಮಾರ್ಚ್ ತಿಂಗಳ ಒಂದು ಶುಕ್ರವಾರವನ್ನು ವಿಶ್ವ ನಿದ್ರಾ ದಿನ (ವಲ್ಡ್ ಸ್ಲೀಪ್ ಡೆ) ವನ್ನಾಗಿ ಆಚರಿಸುತ್ತಾ ಬರುತ್ತಿದೆ. ಈ ಸಾರಿ ಮಾರ್ಚ್-19ರಂದು ವಿಶ್ವ ನಿದ್ರಾ ದಿನವನ್ನು “Regular Sleep, Healthy Future.’ ಎಂಬ ಘೋಷ ವಾಕ್ಯದಡಿ ಆಚರಿಸಲಾಗುತ್ತಿದೆ.

ಬೆಳೆಯುತ್ತಿದ್ದಂತೆ ಮಗು ಹಲವು ಸಮಸ್ಯೆಗಳಿಗೆ ಈಡಾಗಿ ಕೆಲವು ಸಮಸ್ಯೆಗಳು ಸರಿಯಾಗಿ ನಿದ್ರೆ ಮಾಡೋಕು ಬಿಡದೇ ಕಾಡಿಸುತ್ತವೆ. ಇದರಿಂದ ಮಾನಸಿಕ ಆಘಾತ, ಹೃದಯದ ಕಾಯಿಲೆಗಳು ಬಂದೊದಗುತ್ತವೆ. ಈ ನಿದ್ರೆಯ ಪ್ರಾಮುಖ್ಯತೆಯ ಬಗ್ಗೆ ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಅರಿತಿದ್ದರು. ಆಧುನಿಕ ವೈದ್ಯಶಾಸ್ತ್ರದಲ್ಲಿ ಇದನ್ನು ‘ಸೊಮ್ನಾಲಜಿ’ (ನಿದ್ರಾ ಶಾಸ) ಎಂದು ಕರೆಯಲಾಗಿದೆ.

ಬಸ್ ಹತ್ತಿ ಕಿಟಕಿಯ ಹತ್ತಿರ ಈಯರ್ ಫೋನ್ ಹಾಕಿಕೊಂಡು ಸುಮಧುರ ಹಾಡೊಂದನ್ನು ಕೇಳುತ್ತಾ ಕುಳಿತೆವೆಂದರೆ ಮುಗಿಯಿತು ಕ್ಷಣದಲ್ಲಿಯೇ ನಿದ್ರಾ ದೇವಿಯ ಮಡಿಲಲ್ಲಿ ಮಲಗಿರ್ತೇವೆ. ಕಂಡಕ್ಟರ್ ಬಂದು ಎಲ್ಲಿಗೆ ಟಿಕೆಟ್ ಕೊಡ್ಲಿ ಎಂದು ನಮ್ಮನ್ನು ಹಿಡಿದು ಕೇಳುವವರೆಗೂ ನಾವು ಈ ಜಗತ್ತಿನ ಇರುವುದಿಲ್ಲ ಅಲ್ವೆ.!. ಮುಂಜಾನೆಯಿಂದ ಹೊಲದಲ್ಲಿ ಕೆಲಸ ಮಾಡಿದ ರೈತ, ಕೂಲಿ ಕಾರ್ಮಿಕ ಮುಂತಾದ ದೈಹಿಕ ಶ್ರಮಪಡುವ ವ್ಯಕ್ತಿಗಳನ್ನೊಮ್ಮೆ ನೋಡಿ ಊಟ ಮುಗಿದು ವಾಲಲು ಸ್ವಲ್ಪ ಜಾಗ ಸಿಕ್ರೆ ಸಾಕು. ಗಾಢ ನಿದ್ರೆಗೆ ಜಾರಿಬಿಡುತ್ತಾರೆ.

ಯಾವ ವ್ಯಕ್ತಿಯ ಮನದಲ್ಲಿ ಭಯ, ಗಾಬರಿ, ದ್ವೇಷ, ಈರ್ಷೆಗಳಿರುವುದಿಲ್ಲವೋ ಆ ವ್ಯಕ್ತಿ ಆರೋಗ್ಯ ಪೂರ್ಣವಾಗಿ ನಿದ್ರಿಸುತ್ತಾನೆ.
ಪ್ರತಿಕೂಲ ಭಾವನೆಗಳಿಂದ ಮನಸ್ಸು ಕದಡಿದ ಸರೋವರದಂತಾಗಿ ಯಾವುದೋ ಯೋಚನೆಯಲ್ಲಿ ಅಶಾಂತಿಯಿಂದ ಕೂಡಿದ ವ್ಯಕ್ತಿ ಎಂತಹುದೇ ಹವಾನಿಯಂತ್ರಿತ ಕೋಣೆಯಲ್ಲಿದ್ದರೂ ನಿದ್ರೆ ಎನ್ನುವುದು ಆತನಿಗೆ ಗಗನ ಕುಸುಮವೇ ಸರಿ.!. ನಿದ್ರೆಗೆ, ಕನಸುಗಳಿಗೂ ದೇವರುಗಳು! ನಮ್ಮ ಭಾರತೀಯ ಪರಂಪರೆಯ ವಿಷ್ಣು ಪುರಾಣದಲ್ಲಿ ಶ್ರೀಮನ್ ನಾರಾಯಣನು ಕ್ಷೀರ
ಸಾಗರದಲ್ಲಿ ಶೇಷಶಾಯಿಯಾಗಿ ಹಲವು ಯುಗಗಳವರೆಗೆ ಯೋಗ ನಿದ್ರೆಯಲ್ಲಿ ಮಲಗಿರುವ ಪ್ರಸ್ತಾಪವನ್ನು ಕಾಣುತ್ತೇವೆ. ಪ್ರಾಚೀನ ಗ್ರೀಕ್ ಮತ್ತು ರೋಮನ್ನರಿಗೆ ನಿದ್ರಾ ದೇವರುಗಳಿವೆ.

ಗ್ರೀಕರ ನಿದ್ರಾ ದೇವರು ‘ಹಿಪ್ರೋಸ್’ ಆದರೆ ರೋಮನ್‌ರ ನಿದ್ರಾ ದೇವರ ಹೆಸರು ‘ಸೋಮ್ನಸ್’ ಜತೆಗೆ ಅವರ ವಿಗ್ರಹಗಳೂ ಇವೆ. ಭಾರತದ ಕೆಲವು ಪುರಾಣಗಳ ಕಥೆಗಳಲ್ಲಿ ನಿದ್ರೆಯ ಕುರಿತು ಕೇಳುತ್ತೇವೆ. ಹಾಗೆ ಕನಸುಗಳಿಗೂ ದೇವರನ್ನು ಗುರುತಿಸಲಾಗಿದೆ.
ರೋಮನ್ನರಿಗೆ ಕನಸುಗಳ ದೇವರು ‘ಮಾರ್ಷಿಯಸ್’ ಎಂದಾದರೆ, ಗ್ರೀಕರಿಗೆ ಹಗಲು ಕನಸಿನ ದೇವರು ‘ಫೊಂಟ ಸೋಸ್’ ಹಾಗೂ ಪೀಡೆ ಕನಸುಗಳಿಗೆ ‘ಫೋಬೆಟರ್’ ಎಂಬ ಎರಡೆರಡು ಕನಸುಗಳ ದೇವರುಗಳಿರುವುದನ್ನು ಕಾಣುತ್ತೇವೆ.

ಶಿವರಾತ್ರಿ ಸಮಯದಲ್ಲಿ ಜಾಗರಣೆ, ರಾತ್ರಿ ಶಿವ ಪೂಜೆ, ಭಜನೆ ಮುಂತಾದ ಪದ್ಧತಿಗಳು ನಮ್ಮಲ್ಲಿ ಇಂದಿಗೂ ಪ್ರಸ್ತುತ.
ನಿದ್ರಾಹೀನತೆ ಯಿಂದಾಗುವ ತೊಂದರೆಗಳು: ರಾತ್ರಿ ನಿದ್ರೆ ಪೂರ್ಣಗೊಳ್ಳಲು ಕನಿಷ್ಠ 7 ಗಂಟೆಗಳಾದರೂ ಮಲಗಬೇಕೆಂಬುದು ವೈದ್ಯರ ಸಲಹೆ. ಆದರೆ, ಹೊಸ ಅಧ್ಯಯನದ ಪ್ರಕಾರ ಕನಿಷ್ಠ 5 ತಾಸಿಗಿಂತ ಕಡಿಮೆ ನಿದ್ರೆ ಮಾಡುವವರು ಭವಿಷ್ಯದಲ್ಲಿ
ಬುದ್ಧಿಮಾಂಧ್ಯತೆಗೆ ಒಳಗಾಗುವ ಸಾಧ್ಯತೆ ದುಪ್ಪಟ್ಟಾಗಿರುತ್ತದಂತೆ.

ಬ್ರಿಗಂ ಹಾಗೂ ಬೋಸ್ಟನ್ ಮಹಿಳಾ ಆಸ್ಪತ್ರೆ ಸಂಶೋಧಕರು ಅಧ್ಯಯನದಿಂದ ಕಂಡುಕೊಂಡ ಸತ್ಯವಿದು. ದಣಿದ ದೇಹಕ್ಕೆ ಇಂತಿಷ್ಟೆ ವಿಶ್ರಾಂತಿ ಬೇಕೆಂಬುದು ನೈಸರ್ಗಿಕ ಕ್ರಿಯೆ. ದೇಹದ ಅಂಗಾಂಗಗಳ ಜತೆಗೆ ಮನಸ್ಸನ್ನೂ ಒತ್ತಡ ಮುಕ್ತವಾಗಿಸುವುದು ಮುಖ್ಯ. ಪ್ರತಿಯೊಬ್ಬರ ಕರ್ತವ್ಯ ಕೂಡ. ಹೀಗಾಗಿ ನಿತ್ಯ 7-8 ತಾಸು ನಿದ್ರೆ ಮಾಡಲೇಬೇಕು. ದೇಹದ ಯಾವುದೇ ಅಂಗಾಗ ವಾಗಲಿ, ಅದಕ್ಕೆ ವಿಶ್ರಾಂತಿ ನೀಡಲೇಬೇಕು. ಕಾರಣ ಅವುಗಳೇನು ಯಂತ್ರಗಳಲ್ಲ.

ವಿಶ್ರಾಂತಿ ಕೊರತೆ ಆದಲ್ಲಿ ಅವುಗಳ ಸಮತೋಲನವೇ ತಪ್ಪುತ್ತದೆ. ತಕ್ಷಣಕ್ಕೆ ಇದು ಯಾವುದೇ ಪರಿಣಾಮ ಬೀರದಿದ್ದರೂ ಮನುಷ್ಯನಿಗೆ ವಯಸ್ಸಾದಂತೆ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂಬುದು ಅಧ್ಯಯನದಿಂದ ಬೆಳಕಿಗೆ ಬಂದ ವಿಚಾರ.
ಮಕ್ಕಳಾಗಲಿ, ವಯೋವೃದ್ಧರಾಗಿರಲಿ ಎಷ್ಟೇ ಉತ್ತಮ ಆಹಾರ, ಕಸರತ್ತಿನ ಮೊರೆ ಹೋದರೂ ನಿದ್ರೆಯಿಲ್ಲದ ಈ ಯಾವುದೇ ಶಿಸ್ತು, ಚಟುವಟಿಕೆ ವ್ಯರ್ಥ ಎನ್ನುತ್ತಾರೆ ಸಂಶೋಧಕರು.

ಈಗ ನಾವು ತಂತ್ರಜ್ಞಾನಾಧಾರಿತವಾದ ಒಂದು ರೀತಿಯ ಅಭಿವೃದ್ಧಿ ಹೊಂದಿದ ಯಾಂತ್ರಿಕ ಜಗತ್ತಿನಲ್ಲಿ ಸ್ಪರ್ಧಾತ್ಮಕವಾಗಿ ಬದುಕುತ್ತಿzವೆ. ಇಂದು ಪ್ರತಿಯೊಂದು ರಂಗದಲ್ಲಿಯೂ ಸ್ಪರ್ಧೆ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಒಂದು ಕಡೆ ಅಭಿವೃದ್ಧಿ ಹೊಂದುತ್ತಿದ್ದರೂ ಮತ್ತೊಂದು ಕಡೆ ಕೆಲಸದ ಒತ್ತಡ ಇದರ ಪರಿಣವೇ ಇಂದು ನಾವು ಬಲಹೀನವಾಗೋ ಸ್ಥಿತಿಗೆ ತಲುಪಿದ್ದೇವೆ.
ಅತಿಯಾದ ಮಾನಸಿಕ ಒತ್ತಡ ಕಣ್ಣಿಗೆ ನಿದ್ರೆಬಾರದ ಹಾಗೆ ಮಾಡುತ್ತಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಶೇ.22ಕ್ಕೂ ಹೆಚ್ಚಿನ ಜನ ಈ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆಂದರೆ ಅದರ ಪರಿಣಾಮ ಎಷ್ಟಿದೆ ಎಂದು ಊಹಿಸಬಹುದು.

ಜೀವನದಲ್ಲಿ ಎದುರಿಸಬೇಕಾದ ಮಿತಿ ಮೀರಿದ ಕೆಲಸದ ಒತ್ತಡ, ಭವಿಷ್ಯತ್ತಿನ ಬಗ್ಗೆ ಅತಿಯಾದ ನಿರೀಕ್ಷೆ, ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳು. ಜತೆಗೆ ಸಮಸ್ಯೆಯನ್ನು ಕ್ಷಣದಲ್ಲಿ ಮರೆಯಲು ಮಾದಕ ದ್ರವ್ಯ ಸೇವನೆ, ಕುಡಿತ, ಧೂಮಪಾನ ಮುಂತಾದ ದುಶ್ಚಟಗಳ ದಾಸರಾಗುತ್ತಿರುವುದು ಬಹಳ ಖೇದಕರ. ಪದೇ ಪದೆ ನಿದ್ರೆ ಮಾತ್ರೆ ಸೇವಿಸುವುದು ಸೇರಿದಂತೆ ಈ ಎಲ್ಲ
ಬೆಳವಣಿಗೆಗಳು ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ನಮ್ಮ ಲೈಫ್ ಸ್ಪ್ಯಾನ್ (ಜೀವಿತಾವಧಿ) ಕಡಿಮೆಯಾಗುತ್ತಾ ಸಾಗುತ್ತಿದೆ.

ನಿದ್ರಾ ಸ್ಥಿತಿಯ ಕೆಲವು ಕುತೂಹಲಗಳು: ಗಾಢ ನಿದ್ರೆಗೆ ಜಾರುವ ಮುಂಚಿನ ಹಂತವನ್ನು “Rapid eye movement sleep’ (ರ‍್ಯಾಪಿಡ್ ಐ ವ್ಮೆಂಟ್) ಎನ್ನುತ್ತಾರೆ. ಈ ಹಂತದಲ್ಲಿ ಕಣ್ಣು ಮುಚ್ಚಿಕೊಂಡರೂ ಕಣ್ಣಿನ ಗುಡ್ಡೆಗಳು ಚಲಿಸುತ್ತಿರುತ್ತವೆ.
ಇದೇ ಸಮಯದಲ್ಲಿ ಕನಸುಗಳು ಬೀಳುತ್ತವೆ. ನಿದ್ರೆಯನ್ನು ಸ್ವ ಇಚ್ಛೆಯಿಂದ ಉದ್ದೇಶಪೂರ್ವಕವಾಗಿ ಮುಂದೂಡುವ ತಾಕತ್ತು ಕೇವಲ ಮನುಷ್ಯನಿಗೆ ಮಾತ್ರ ಇದೆ. ಆದರೆ ಉಳಿದ ಪ್ರಾಣಿಗಳಿಗಿಲ್ಲ.

ನಿದ್ರಾ ಹೀನತೆಯನ್ನು ಅನುಭವಿಸುತ್ತಿರುವವರ ಶರೀರದಲ್ಲಿ ಹಸಿವು ನಿಯಂತ್ರಿಸುವ ‘ಲೆಪ್ಟೀನ್’ ಹಾರ್ಮೋನಿನ ಪ್ರಮಾಣ ಕಡಿಮೆಯಾಗಿರುತ್ತದೆ. ಇದರ ಪರಿಣಾಮವೇ ಅಂತವರು ಅಗತ್ಯಕ್ಕಿಂತ ಹೆಚ್ಚು ತಿಂದು ಬೊಜ್ಜು ಮೈಯವರಾಗಿರುತ್ತಾರೆ. ಕೆಲವರು ನಿದ್ರೆಗೆ ಜಾರಿದರೆ ಸಾಕು ಭಯಾನಕ ಕನಸುಗಳು ಬೀಳುತ್ತವೆ. ಇದರಿಂದ ಹೆದರಿ ಅವರು ನಿದ್ರೆ ಮಾಡುವುದಕ್ಕೂ ಹಿಂದೇಟು ಹಾಕುತ್ತಾರೆ. ನಿದ್ರೆ ಯೆಂದರೆ ಭಯಪಡುವ ಈ ಸ್ಥಿತಿಗೆ ‘ಸೋಮ್ನಿಫೋಬಿಯಾ’ ಎಂಬುದಾಗಿ ಕರೆಯಲಾಗುತ್ತದೆ.

ರಾತ್ರಿ ಪಾಳಿ, ಹೀಗೆ ಶಿ- ರೂಪದಲ್ಲಿ ಕೆಲಸ ನಿರ್ವಹಿಸುವವರಲ್ಲಿ ನಿದ್ರಾಹೀನತೆ ಹೆಚ್ಚು. ನಿದ್ರಾ ಹೀನತೆಯನ್ನು ಗೆಲ್ಲುವುದು ಹೇಗೆ?
ನಾವು ದಿನ ವಿಡೀ ಆರೋಗ್ಯದಿಂದ, ಚೈತನ್ಯದಿಂದಿರ ಬೇಕೆಂದರೆ ನಿದ್ರೆ ಅತೀ ಮುಖ್ಯ. ಹಾಗಾದರೆ ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಸೂಕ್ತ. ಉಂಡು ನೂರಡಿ ಇಟ್ಟು, ಕೆಂಡದಿಂ ಕೈ ಕಾಸಿ, ಗಂಡು ಭುಜ ಮೇಲ್ಮಾಡಿ ಮಲಗಿದವ ವೈದ್ಯರ ಗಂಡ ಸರ್ವಜ್ಞ ಎಂಬ ಸರ್ವಜ್ಞನ ವಚನದಂತೆ ರಾತ್ರಿ ಸರಿಯಾದ ಸಮಯಕ್ಕೆ ಮಿತವಾಗಿ ಊಟ ಮಾಡಿ, ಕೆಲವು ನಿಮಿಷ ವಾಕ್ ಮಾಡಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ನಿಮಗೆ ರಜೆ ಇರುವ ದಿನವನ್ನೇ ಮೊದಲು ಮಾಡಿಕೊಂಡು ದಿನಂಪ್ರತಿ ನಿಗದಿತ ಸಮಯಕ್ಕೆ ಮಲಗಿ ಪ್ರಾತಃಕಾಲ ನಿಗದಿತ ಸಮಯಕ್ಕೇ ಎದ್ದೇಳಿ. ಪ್ರಾತಃ ಕಾಲದಲ್ಲಿ ಹಿತವಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಆದರೆ ರಾತ್ರಿ ಯಾವ ಕಾರಣಕ್ಕೂ
ವ್ಯಾಯಾಮ ಮಾಡಬೇಡಿ. ಕೆಫಿನ್ ಹೊಂದಿರುವ ಪಾನೀಯಗಳನ್ನು ಆದಷ್ಟು ತ್ಯಜಿಸುವುದು ಸೂಕ್ತ. ಮಲಗುವ ಕೋಣೆಯಲ್ಲಿ ಆದಷ್ಟು ಮಂದ ಬೆಳಕಿರಲಿ. ಇದರಿಂದ ನಿದ್ರೆಗೆ ಭಂಗವಾಗುವುದಿಲ್ಲ. ಪ್ರಖರ ಬೆಳಕಿದ್ದರೆ ಗಾಢ ನಿದ್ರೆಗೆ ತೊಂದರೆಯಾಗುತ್ತದೆ.
ಧೂಮಪಾನ, ಮಧ್ಯಪಾನ ಮುಂತಾದ ಚಟಗಳನ್ನು ತ್ಯಜಿಸುವುದು ಸೂಕ್ತ.

ಕೆಲವರಿಗೆ ಈ ಚಟಗಳಿದ್ದರೆ ಮಾತ್ರ ನಿದ್ರೆ ಬರುತ್ತದೆ. ಅಂತವರು ಆದಷ್ಟು ಈ ಚಟಾದಿಗಳನ್ನು ಕ್ರಮೇಣ ಕಡಿಮೆ ಮಾಡುವುದು
ಒಳ್ಳೆಯದು. ಮಲಗುವ ಸಮಯದಲ್ಲಿ ಟಿ.ವಿ. ನೋಡುವುದನ್ನು, ಮೊಬೈಲ್ ವೀಕ್ಷಿಸುವುದನ್ನು ನಿಲ್ಲಿಸಬೇಕು. ಇದರಿಂದ ಮನಸ್ಸು ಉದ್ರೇಕ, ತಳಮಳ, ಚಂಚಲತೆಯಿಂದ ಕೂಡಿ ನಿದ್ರೆ ಮಾಯವಾಗುತ್ತದೆ.